ಉಪ್ಪು ಅಯೋಡೈಸೇಷನ್ನಿಂದ ಭಾರತದ ಮಕ್ಕಳಲ್ಲಿ ಗಾಯಿಟರ್ ಇಳಿಕೆ, ಆದರೆ ಹೆಚ್ಚುತ್ತಿದೆ ಥೈರಾಯ್ಡ್ ಆಟೋಇಮ್ಯೂನಿಟಿ: Lancet ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | Photo Credit : magnific
ಭಾರತದಲ್ಲಿ ಸಾರ್ವತ್ರಿಕ ಉಪ್ಪು ಅಯೋಡೈಸೇಷನ್ (Universal Salt Iodisation -USI)) ಕಾರ್ಯಕ್ರಮ ಜಾರಿಗೆ ಬಂದ ನಾಲ್ಕು ದಶಕಗಳ ಬಳಿಕ, ಶಾಲಾ ಮಕ್ಕಳಲ್ಲಿ ಗಾಯಿಟರ್ (ಗಳಗಂಡ ರೋಗ) ಪ್ರಕರಣಗಳು ತೀವ್ರವಾಗಿ ಇಳಿಕೆಯಾಗಿವೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ಥೈರಾಯ್ಡ್ ಗ್ರಂಥಿಯ ಮೇಲೆ ರೋಗನಿರೋಧಕ ಶಕ್ತಿಯು ತಪ್ಪಾಗಿ ದಾಳಿ ಮಾಡುವ 'ಥೈರಾಯ್ಡ್ ಆಟೋಇಮ್ಯೂನಿಟಿ' ಸಮಸ್ಯೆ ಗಮನಾರ್ಹವಾಗಿ ಹೆಚ್ಚಿರುವುದನ್ನು ಈ ಅಧ್ಯಯನವು ದಾಖಲಿಸಿದೆ.
'ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ - ಸೌತ್ ಈಸ್ಟ್ ಏಷ್ಯಾ' ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಈ ಅಧ್ಯಯನಕ್ಕಾಗಿ, 2024ರ ಜನವರಿಯಿಂದ 2025ರ ಡಿಸೆಂಬರ್ವರೆಗೆ ಭಾರತದ ಎಂಟು ಪ್ರದೇಶಗಳಲ್ಲಿ 10 ರಿಂದ 18 ವರ್ಷ ವಯಸ್ಸಿನ 8,903 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಯಿತು. ಗಾಯಿಟರ್ ಪ್ರಮಾಣವು 2003ರಲ್ಲಿ ಶೇಕಡಾ 23.5ರಷ್ಟಿತ್ತು, 2012ಕ್ಕೆ ಶೇಕಡಾ 17.6ಕ್ಕೆ ಕುಸಿದಿತ್ತು ಮತ್ತು ಈಗ ನಡೆಸಲಾದ ಇತ್ತೀಚಿನ ಸಮೀಕ್ಷೆಯಲ್ಲಿ ಇದು ಶೇಕಡಾ 10.3ಕ್ಕೆ ಇಳಿದಿದೆ ಎಂದು ಈ ಅಧ್ಯಯನ ಹೇಳಿದೆ.
ಗಾಯಿಟರ್ ಎನ್ನುವುದು ಕುತ್ತಿಗೆಯಲ್ಲಿರುವ ಚಿಟ್ಟೆಯಾಕಾರದ 'ಥೈರಾಯ್ಡ್' ಗ್ರಂಥಿಯ ಗಾತ್ರ ಹೆಚ್ಚಾಗುವ ಸ್ಥಿತಿಯಾಗಿದೆ. ಈ ಗ್ರಂಥಿಯು ದೇಹದ ಬೆಳವಣಿಗೆ, ಮೆದುಳಿನ ವಿಕಾಸ ಮತ್ತು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ.
ಈ ಹಾರ್ಮೋನುಗಳನ್ನು ತಯಾರಿಸಲು ಥೈರಾಯ್ಡ್ ಗ್ರಂಥಿಗೆ ಅಯೋಡಿನ್ ಅತ್ಯಾವಶ್ಯಕ ಪೋಷಕಾಂಶವಾಗಿದೆ. ದೇಹಕ್ಕೆ ಅಗತ್ಯವಿರುವಷ್ಟು ಅಯೋಡಿನ್ ಸಿಗದಿದ್ದಾಗ, ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಥೈರಾಯ್ಡ್ ಗ್ರಂಥಿಯು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಅದು ಕ್ರಮೇಣ ದೊಡ್ಡದಾಗಿ ಗಾಯಿಟರ್ ಉಂಟಾಗುತ್ತದೆ. ತೀವ್ರವಾದ ಅಯೋಡಿನ್ ಕೊರತೆಯು, ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ದೈನಂದಿನ ಆಹಾರದ ಮೂಲಕವೇ ಜನರಿಗೆ ಈ ಪೋಷಕಾಂಶ ದೊರೆಯುವಂತೆ ಮಾಡಲು, ಉಪ್ಪಿಗೆ ನಿರ್ದಿಷ್ಟ ಪ್ರಮಾಣದ ಅಯೋಡಿನ್ ಸೇರಿಸುವ 'ಸಾರ್ವತ್ರಿಕ ಉಪ್ಪು ಅಯೋಡೈಸೇಷನ್ ' ಯೋಜನೆಗೆ 1980ರ ದಶಕದಲ್ಲಿ ಭಾರತದಲ್ಲಿ ಈ ಹಿನ್ನೆಲೆಯಲ್ಲಿಯೇ ಚಾಲನೆ ನೀಡಲಾಯಿತು. 1984ರಲ್ಲಿ ಭಾರತದಲ್ಲಿ ಮಾರಾಟವಾಗುವ ಎಲ್ಲ ಉಪ್ಪನ್ನು ಅಯೋಡೈಸ್ ಮಾಡುವ ಪ್ರಮುಖ ನೀತಿ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. 1986ರಿಂದ ಹಂತ ಹಂತವಾಗಿ ಈ ಯೋಜನೆ ಆರಂಭವಾಯಿತು. ಅಯೋಡಿನ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಹೆಚ್ಚು ವ್ಯಾಪಕವಾಗಿ ತಡೆಯಲು, 1992ರಲ್ಲಿ ಇದನ್ನು ವಿಸ್ತರಿಸಿ 'ರಾಷ್ಟ್ರೀಯ ಅಯೋಡಿನ್ ಕೊರತೆ ನಿಯಂತ್ರಣ ಕಾರ್ಯಕ್ರಮ' ಎಂದು ಮರುನಾಮಕರಣ ಮಾಡಲಾಯಿತು.
ಭಾರತವು ಈಗ ವಾರ್ಷಿಕವಾಗಿ ಸುಮಾರು 65 ಲಕ್ಷ ಮೆಟ್ರಿಕ್ ಟನ್ ಅಯೋಡೈಸ್ಡ್ ಉಪ್ಪನ್ನು ಉತ್ಪಾದಿಸುತ್ತಿದ್ದು, ಇದು ದೇಶದ ಅಗತ್ಯವನ್ನು ಪೂರೈಸಲು ಸಾಕಷ್ಟಿದೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ, ಅಯೋಡೈಸ್ಡ್ ಅಲ್ಲದ ಸಾಮಾನ್ಯ ಉಪ್ಪನ್ನು ನೇರ ಮಾನವ ಬಳಕೆಗೆ ಅನುಮತಿ ನೀಡಲಾಗಿಲ್ಲ.
ಈ ಅಧ್ಯಯನದ ಲೇಖಕರ ಪ್ರಕಾರ, ಒಂದು ದಶಕಕ್ಕೂ ಅಧಿಕ ಅವಧಿಯಲ್ಲಿ ಭಾರತೀಯ ಶಾಲಾ ಮಕ್ಕಳಲ್ಲಿ ಅಯೋಡಿನ್ ಪೋಷಣೆ ಮತ್ತು ಥೈರಾಯ್ಡ್ ಆರೋಗ್ಯದ ಕುರಿತು ನಡೆದಿರುವ ಮೊದಲ ರಾಷ್ಟ್ರವ್ಯಾಪಿ ಸಮೀಕ್ಷೆ ಇದಾಗಿದೆ.
ಹೊಸದಿಲ್ಲಿಯ ಸೊಸೈಟಿ ಆಫ್ ಎಂಡೋಕ್ರೈನ್ ಹೆಲ್ತ್ ಕೇರ್ ಫಾರ್ ಎಲ್ಡರ್ಲೀ, ಅಡೋಲಸೆಂಟ್ ಆ್ಯಂಡ್ ಚಿಲ್ಡ್ರನ್ (SEHEAC) ಸಂಸ್ಥಾಪಕ ಮತ್ತು ಅಧ್ಯಕ್ಷ ಹಾಗೂ ಈ ಅಧ್ಯಯನದ ಲೇಖಕರಾದ ಡಾ. ರಾಮನ್ ಕುಮಾರ್ ಮಾರ್ವಾ ಅವರು, ಭಾರತದಲ್ಲಿ ಉಪ್ಪು ಅಯೋಡೈಸೇಷನ್ ಪರಿಣಾಮದ ಕುರಿತು ದಶಕಗಳಿಂದ ಅಧ್ಯಯನ ನಡೆಸಿದ್ದಾರೆ. ಗಾಯಿಟರ್ನ ಹರಡುವಿಕೆ ಮತ್ತು ಗಾತ್ರ ಎರಡರಲ್ಲೂ ಕಂಡುಬಂದಿರುವ ಇಳಿಕೆಯು ಹಿಂದಿನ ಸಮೀಕ್ಷೆಗಳಿಗಿಂತ ಸ್ಪಷ್ಟ ಬದಲಾವಣೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
"ಮೊದಲ ದಶಕದಲ್ಲಿ ನಾವು ಸುಮಾರು ಶೇಕಡಾ 8 ರಿಂದ 10 ರಷ್ಟು ಗ್ರೇಡ್ 2 ಗಾಯಿಟರ್ ಮತ್ತು ಶೇಕಡಾ 90 ರಷ್ಟು ಗ್ರೇಡ್ 1 ಗಾಯಿಟರ್ ಅನ್ನು ದಾಖಲಿಸಿದ್ದೆವು. ಆದರೆ ಈಗ ನಾಲ್ಕನೇ ದಶಕದಲ್ಲಿ, ನಮಗೆ ಗ್ರೇಡ್ 2 ಗಾಯಿಟರ್ ಕಾಣಸಿಗುವುದೇ ಅಪರೂಪವಾಗಿದೆ." ಎಂದು ಮಾರ್ವಾ ಹೇಳಿದ್ದಾರೆ.
ಗ್ರೇಡ್ 2 ಗಾಯಿಟರ್ ಎಂದರೆ ಕುತ್ತಿಗೆಯನ್ನು ನೋಡಿದ ತಕ್ಷಣವೇ ಎದ್ದು ಕಾಣುವ ಥೈರಾಯ್ಡ್ ಗ್ರಂಥಿಯ ದೊಡ್ಡ ಗಾತ್ರ. ಆದರೆ ಗ್ರೇಡ್ 1 ಅನ್ನು ಸಾಮಾನ್ಯವಾಗಿ ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಮಾತ್ರ ಪತ್ತೆಹಚ್ಚಲಾಗುತ್ತದೆ.
"ಹಿಂದೆ ಕುತ್ತಿಗೆಯಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿದ್ದ ಆ ದೊಡ್ಡ ಗ್ರಂಥಿಗಳು ಈಗ ಸಂಪೂರ್ಣವಾಗಿ ಮಾಯವಾಗಿವೆ" ಎಂದು ಮಾರ್ವಾ ಹೇಳಿದರು.
ಅಧ್ಯಯನ ನಡೆಸಿದ ಎಂಟು ಕೇಂದ್ರಗಳ ನಡುವೆ ಗಾಯಿಟರ್ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸವಿತ್ತು. ಪುಣೆಯಲ್ಲಿ ಶೇಕಡಾ 7.3 ರಷ್ಟಿದ್ದರೆ, ಪುದುಚೇರಿಯಲ್ಲಿ ಶೇಕಡಾ 12.8 ರಷ್ಟಿತ್ತು. ಇದು ಪ್ರಾದೇಶಿಕ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತದೆ.
ಉಪ್ಪು ಅಯೋಡೈಸೇಷನ್ ಪರಿಸ್ಥಿತಿಯನ್ನು ಹೇಗೆ ಬದಲಾಯಿಸಿತು?
ಭಾರತದಲ್ಲಿ ಅಯೋಡಿನ್ ಕೊರತೆಯನ್ನು ನೀಗಿಸುವ ಪ್ರಯತ್ನಗಳು 1960ರ ದಶಕದಲ್ಲೇ, ಗಾಯಿಟರ್ ಸಮಸ್ಯೆ ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಆರಂಭವಾದವು. ಕೊರತೆ ಇರುವ ಪ್ರದೇಶಗಳಲ್ಲಿ ಅಯೋಡಿನ್ ಪೂರೈಕೆಯು ಗಾಯಿಟರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲುದು ಎಂಬುದನ್ನು ಆರಂಭಿಕ ಕೆಲಸಗಳು ತೋರಿಸಿಕೊಟ್ಟಿದ್ದವು ಎಂದು ಮಾರ್ವಾ ಹೇಳಿದ್ದಾರೆ.
ಅಯೋಡಿನ್ ಕೊರತೆ ಮತ್ತು ಗಾಯಿಟರ್ ಸಮಸ್ಯೆಯು ಕೇವಲ ಉಪ-ಹಿಮಾಲಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ದೇಶಾದ್ಯಂತ ಇದೆ ಎಂದು ಸಂಶೋಧಕರು ಕಂಡುಕೊಂಡ ನಂತರ, ಸರ್ಕಾರವು 1986ರಲ್ಲಿ ಸಾರ್ವತ್ರಿಕ ಉಪ್ಪು ಅಯೋಡೈಸೇಷನ್ ಕಾರ್ಯಕ್ರಮವನ್ನು ಜಾರಿಗೆ ತಂದಿತು.
ಜನರು ದೈನಂದಿನ ಆಹಾರ ಪದಾರ್ಥವಾದ ಉಪ್ಪಿನ ಮೂಲಕವೇ ಸಾಕಷ್ಟು ಅಯೋಡಿನ್ ಸೇವಿಸುವುದನ್ನು ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಶತಮಾನದ ತಿರುವಿನಲ್ಲಿ ದೇಶದ ಸುಮಾರು 23 ನಗರಗಳ ಒಟ್ಟು 40,000 ಶಾಲಾ ಮಕ್ಕಳನ್ನು ಒಳಗೊಂಡು ತಾವೇ ನಡೆಸಿದ ಮೊದಲ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ, ಸುಮಾರು ಶೇಕಡಾ 23 ರಷ್ಟು ಮಕ್ಕಳಲ್ಲಿ ಗಾಯಿಟರ್ ಇರುವುದು ಕಂಡುಬಂದಿತ್ತು ಎಂದಿದ್ದಾರೆ ಮಾರ್ವಾ. ಅಲ್ಲದೆ, ಮಕ್ಕಳ ಮೂತ್ರದಲ್ಲಿ ಅಯೋಡಿನ್ ಮಟ್ಟವು ಅತ್ಯಂತ ಹೆಚ್ಚಿರುವುದನ್ನು ಸಂಶೋಧಕರು ಪತ್ತೆಹಚ್ಚಿದರು. ಇದು ಕೆಲವು ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಅಯೋಡಿನ್ ಸೇವಿಸುತ್ತಿದ್ದಾರೆ ಎಂಬುದನ್ನು ಸೂಚಿಸಿತ್ತು.
ಪ್ಯಾಕಿಂಗ್ ಸರಿಯಿಲ್ಲದೇ ಇರುವುದು, ಸಾಗಣೆಯ ಸಮಯದಲ್ಲಿ ಬಿಸಿಲು ಹಾಗೂ ತೇವಾಂಶಕ್ಕೆ ಒಡ್ಡಿಕೊಳ್ಳುವುದು, ಅಂಗಡಿಗಳಲ್ಲಿ ತೆರೆದ ರೀತಿಯಲ್ಲಿ ಸಂಗ್ರಹಿಸುವುದು ಮತ್ತು ಅಡುಗೆ ಮಾಡುವಾಗ ಉಂಟಾಗುವ ನಷ್ಟವನ್ನು ಸರಿಪಡಿಸಲು ಉತ್ಪಾದಕರು ಉದ್ದೇಶಪೂರ್ವಕವಾಗಿ ಉಪ್ಪಿಗೆ ಹೆಚ್ಚು ಅಯೋಡಿನ್ ಸೇರಿಸುತ್ತಿದ್ದರು ಎಂಬುದು ಇದಕ್ಕೆ ಒಂದು ಕಾರಣವಾಗಿತ್ತು ಎಂದು ಅವರು ಹೇಳಿದರು.
"ಸಾಮಾನ್ಯ ದೈನಂದಿನ ಅವಶ್ಯಕತೆಯು 100 ಮೈಕ್ರೋಗ್ರಾಮ್ಗಳಾಗಿವೆ. ಆದ್ದರಿಂದ ಉಂಟಾಗುವ ನಷ್ಟವನ್ನು ಭರ್ತಿ ಮಾಡಲು ನಾವು 30 ಪಿಪಿಎಂ ಅಂದರೆ 300 ಮೈಕ್ರೋಗ್ರಾಮ್ ಅಯೋಡಿನ್ ಅನ್ನು ಸೇರಿಸುತ್ತಿದ್ದೆವು" ಎಂದು ಮಾರ್ವಾ ವಿವರಿಸಿದ್ದಾರೆ.
ಜನಸಂಖ್ಯೆಯ ಮಟ್ಟದಲ್ಲಿ ಅಯೋಡಿನ್ ಸೇವನೆಯು ಈಗ ಸಮರ್ಪಕವಾಗಿದೆ ಎಂದು ಇತ್ತೀಚಿನ ಸಮೀಕ್ಷೆಯು ಸೂಚಿಸುತ್ತದೆ. ಮೂತ್ರದಲ್ಲಿ ಅಯೋಡಿನ್ ಸಾಂದ್ರತೆಯ ಮಧ್ಯಮ ಪ್ರಮಾಣವು ಪ್ರತಿ ಲೀಟರ್ಗೆ 133.2 ಮೈಕ್ರೋಗ್ರಾಮ್ಗಳಷ್ಟಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಸಾಕಷ್ಟು ಅಯೋಡಿನ್ ಸೇವನೆಯ ಮಿತಿಯಲ್ಲಿದೆ.ಅದೇ ವೇಳೆ ಶೇಕಡಾ 90 ಕ್ಕಿಂತ ಹೆಚ್ಚು ಕುಟುಂಬಗಳು ಅಯೋಡೈಸ್ಡ್ ಉಪ್ಪನ್ನು ಬಳಸುತ್ತಿರುವುದಾಗಿ ತಿಳಿಸಿವೆ ಮತ್ತು ಶೇಕಡಾ 89 ರಷ್ಟು ಉಪ್ಪಿನ ಮಾದರಿಗಳು ಅಗತ್ಯವಿರುವ ಪ್ರತಿ ಮಿಲಿಯನ್ಗೆ 15 ಭಾಗಗಳ (ಪಿಪಿಎಂ) ಮಿತಿಗಿಂತ ಹೆಚ್ಚಿನ ಅಯೋಡಿನ್ ಅನ್ನು ಹೊಂದಿವೆ.
ಉಪ್ಪು ಉತ್ಪಾದಕರ ಉತ್ತಮ ನಿಯಂತ್ರಣ ಮತ್ತು ಸುಧಾರಿತ ಪೂರೈಕೆ ಸರಪಳಿಯು ಅಯೋಡಿನ್ ಮಟ್ಟವನ್ನು ನಿರೀಕ್ಷಿತ ಮಿತಿಗೆ ತರಲು ಸಹಾಯ ಮಾಡಿರಬಹುದು.ನಾವು ಈ ಬಾರಿ ಮೌಲ್ಯಮಾಪನ ಮಾಡಿದಾಗ, ಉಪ್ಪಿನಲ್ಲಿರುವ ಅಯೋಡಿನ್ ಸೇವನೆಯು ಈಗ ಸಾಮಾನ್ಯ ಮಿತಿಯಲ್ಲಿದೆ ಎಂದಿದ್ದಾರೆ ಅವರು.
►ಗಾಯಿಟರ್ ಇಳಿಕೆಯಾದರೂ ಹೆಚ್ಚಿದ ಆಟೋಇಮ್ಯೂನಿಟಿ
ಏತನ್ಮಧ್ಯೆ ಈ ಅಧ್ಯಯನವು ಮತ್ತೊಂದು ಪ್ರವೃತ್ತಿಯನ್ನು ಪತ್ತೆ ಮಾಡಿದೆ.
ಥೈರಾಯ್ಡ್-ಉತ್ತೇಜಕ ಹಾರ್ಮೋನು ಹೆಚ್ಚಾಗಿದ್ದು ಆದರೆ ಯಾವುದೇ ಅಥವಾ ಕೆಲವೇ ರೋಗಲಕ್ಷಣಗಳನ್ನು ಹೊಂದಿರುವ ಸಬ್ಕ್ಲಿನಿಕಲ್ ಹೈಪೋಥೈರಾಯ್ಡಿಸಮ್ ಸಮಸ್ಯೆಯು ಶೇಕಡಾ 13 ರಷ್ಟು ಮಕ್ಕಳಲ್ಲಿ ಕಂಡುಬಂದಿದೆ. ಥೈರಾಯ್ಡ್ ಆಟೋಇಮ್ಯೂನಿಟಿಯನ್ನು ಸೂಚಿಸುವ ಆ್ಯಂಟಿ-ಥೈರಾಯ್ಡ್ ಪೆರಾಕ್ಸಿಡೇಸ್ (anti-TPO) ಆ್ಯಂಟಿಬಾಡಿಗಳು ಶೇಕಡಾ 10.4 ರಷ್ಟು ಮಕ್ಕಳಲ್ಲಿ ಇರುವುದು ಪತ್ತೆಯಾಗಿದೆ.
ವಿಶ್ಲೇಷಣೆಯ ಪ್ರಕಾರ, ಹುಡುಗಿಯರಿಗೆ ಹೋಲಿಸಿದರೆ ಹುಡುಗರಲ್ಲಿ ಟಿಪಿಒ ಆ್ಯಂಟಿಬಾಡಿಗಳು ಧನಾತ್ಮಕವಾಗಿರುವ ಸಾಧ್ಯತೆ ಸುಮಾರು ಎರಡು ಪಟ್ಟು ಹೆಚ್ಚಿದೆ. ಗಾಯಿಟರ್ ಇರುವ ಮಕ್ಕಳಲ್ಲಿಯೂ ಟಿಪಿಒ ಧನಾತ್ಮಕವಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಿತ್ತು.
ರೋಗನಿರೋಧಕ ಶಕ್ತಿಯು ದೇಹದ ಸ್ವಂತ ಅಂಗಾಂಶಗಳ ವಿರುದ್ಧವೇ ಪ್ರತಿಕ್ರಿಯಿಸಲು ಆರಂಭಿಸಿದಾಗ ಆಟೋಇಮ್ಯೂನಿಟಿ ಉಂಟಾಗುತ್ತದೆ. ಥೈರಾಯ್ಡ್ ಆಟೋಇಮ್ಯೂನಿಟಿಯಲ್ಲಿ, ಆ್ಯಂಟಿಬಾಡಿಗಳು ಥೈರಾಯ್ಡ್ಗೆ ಸಂಬಂಧಿಸಿದ ಪ್ರೋಟೀನ್ಗಳು ಅಥವಾ ಕಿಣ್ವಗಳನ್ನು ಗುರಿಯಾಗಿಸಬಹುದು.
ಅಧಿಕ ಅಯೋಡಿನ್ ಒಡ್ಡಿಕೊಳ್ಳುವಿಕೆಯು ಇದರಲ್ಲಿ ಒಳಗೊಂಡಿರುವ ಒಂದು ಸಂಭವನೀಯ ಕಾರಣವಾಗಿದೆ ಎಂದು ಮಾರ್ವಾ ತಿಳಿಸಿದರು. ಥೈರಾಯ್ಡ್ ಜೀವಕೋಶಗಳು ಹಾನಿಗೊಳಗಾದಾಗ, ಥೈರಾಯ್ಗ್ಲುಬ್ಯುಲಿನ್ ಮತ್ತು ಥೈರಾಯ್ಡ್ ಪೆರಾಕ್ಸಿಡೇಸ್ನಂತಹ ಥೈರಾಯ್ಡ್ ಪ್ರೋಟೀನ್ಗಳು ರೋಗನಿರೋಧಕ ಶಕ್ತಿಗೆ ತೆರೆದುಕೊಳ್ಳಬಹುದು, ಇದು ಸಂಭಾವ್ಯವಾಗಿ ಆ್ಯಂಟಿಬಾಡಿಗಳ ರಚನೆಗೆ ಕಾರಣವಾಗಬಹುದು.
"ಅಧಿಕ ಅಯೋಡಿನ್ ಸಬ್ಕ್ಲಿನಿಕಲ್ ಹೈಪೋಥೈರಾಯ್ಡಿಸಮ್ ಮತ್ತು ಹೆಚ್ಚಿದ ಆಟೋಇಮ್ಯೂನಿಟಿಗೆ ಕಾರಣವಾಗಬಹುದು" ಎಂದು ಅವರು ಹೇಳಿದರು.
ಹಾಗಿದ್ದರೂ, ಭಾರತದಲ್ಲಿ ಆಟೋಇಮ್ಯೂನಿಟಿ ಹೆಚ್ಚಾಗಲು ಅಧಿಕ ಅಯೋಡಿನ್ ಕಾರಣ ಎಂಬುದನ್ನು ಈ ಅಧ್ಯಯನವು ಖಚಿತಪಡಿಸುವುದಿಲ್ಲ.
"ಇದು ಕೇವಲ ಅಯೋಡಿನ್ನಿಂದ ಮಾತ್ರ ಸಂಭವಿಸುತ್ತಿದೆಯೇ ಅಥವಾ ಬೇರೆ ಅಂಶಗಳೂ ಇವೆಯೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೀಟನಾಶಕಗಳು ಮತ್ತು ಇತರ ಪರಿಸರ ಮಾಲಿನ್ಯಕಾರಕಗಳು ಥೈರಾಯ್ಡ್ ಕಾರ್ಯದ ವೈಫಲ್ಯ ಹಾಗೂ ಆಟೋಇಮ್ಯೂನಿಟಿಗೆ ಕಾರಣವಾಗುವ ಸಂಭಾವ್ಯ ಅಂಶಗಳಾಗಿರಬಹುದು ಎಂದು ಅವರು ಹೇಳಿದ್ದಾರೆ.
ಈ ಅಧ್ಯಯನದ ವಿನ್ಯಾಸವು ಕಾರಣ ಮತ್ತು ಪರಿಣಾಮವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಥೈರಾಯ್ಡ್ ಆಟೋಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಮುಂದೆ ಶಾಶ್ವತ ಥೈರಾಯ್ಡ್ ಕಾಯಿಲೆ ಬರುವುದೇ ಎಂಬುದನ್ನು ನಿರ್ಧರಿಸಲು ದೀರ್ಘಕಾಲೀನ ಅಧ್ಯಯನಗಳನ್ನು ನಡೆಸುವಂತೆ ಅವರು ಕೋರಿದ್ದಾರೆ.
ಥೈರಾಯ್ಡ್ ಆ್ಯಂಟಿಬಾಡಿಗಳ ಈ ಹೆಚ್ಚಳವು ಈ ಮಕ್ಕಳ ದೀರ್ಘಕಾಲೀನ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಇದು ಇನ್ನೂ ಬಹಳ ಮುಂಚಿತವಾಗಿದೆ ಎಂದು ಮಾರ್ವಾ ಹೇಳಿದರು.
ಭಾರತವು ಉಪ್ಪು ಅಯೋಡೈಸೇಷನ್ನಿಂದ ಹಿಂದೆ ಸರಿಯಬೇಕು ಎಂದು ಈ ಸಂಶೋಧನೆಯು ಸೂಚಿಸುವುದಿಲ್ಲ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ಅಯೋಡಿನ್ ಕೊರತೆಯ ಗಂಭೀರ ಪರಿಣಾಮಗಳನ್ನು ಈ ಕಾರ್ಯಕ್ರಮವು ತಡೆಗಟ್ಟಿದೆ.ನೀವು ಈ ಕಾರ್ಯಕ್ರಮವನ್ನು ನಿಲ್ಲಿಸಿದರೆ, ಕ್ರೆಟಿನಿಸಮ್ ಮತ್ತು ಕಡಿಮೆ ಐಕ್ಯೂ ಮಟ್ಟದ ಅದೇ ಸಮಸ್ಯೆಗಳು ನಿಮಗೆ ಮತ್ತೆ ಎದುರಾಗುತ್ತವೆ" ಎಂದು ಅವರು ಎಚ್ಚರಿಸಿದರು.
ಉತ್ಪಾದಕರು ಮತ್ತು ಕುಟುಂಬಗಳ ನಡುವೆ ಅಯೋಡಿನ್ ಮಟ್ಟವು ಬದಲಾಗಬಹುದು ಎಂಬ ಕಾರಣಕ್ಕೆ ನಿರಂತರ ಮೇಲ್ವಿಚಾರಣೆಯ ಮಹತ್ವವನ್ನೂ ಅವರು ಒತ್ತಿಹೇಳಿದರು. ವಿಶೇಷವಾಗಿ ಶಾಖ, ತೇವಾಂಶ ಅಥವಾ ತೆರೆದ ಗಾಳಿಗೆ ಒಡ್ಡಿಕೊಂಡಾಗ ಉಪ್ಪಿನಲ್ಲಿರುವ ಅಯೋಡಿನ್ ನಷ್ಟವಾಗಬಹುದು. ಇದರಿಂದಾಗಿ ಉತ್ಪಾದನೆಯ ಸಮಯದಲ್ಲಿ ಸೇರಿಸುವ ಅಯೋಡಿನ್ ಪ್ರಮಾಣ ಹಾಗೂ ಉಪ್ಪನ್ನು ಸಾಗಿಸುವ ಮತ್ತು ಸಂಗ್ರಹಿಸುವ ವಿಧಾನವು ಬಹಳ ಮುಖ್ಯವಾಗುತ್ತದೆ.
ಉತ್ತಮ ಪ್ಯಾಕಿಂಗ್ ಮತ್ತು ಪೂರೈಕೆ ಸರಪಳಿಯು ಈ ಕೆಲವು ನಷ್ಟಗಳನ್ನು ಕಡಿಮೆ ಮಾಡಿದೆ, ಆದರೆ ಉತ್ಪಾದಕರು ಹಾಗೂ ಕುಟುಂಬಗಳ ನಡುವೆ ಅಯೋಡಿನ್ ಮಟ್ಟವು ಇನ್ನೂ ವ್ಯತ್ಯಾಸಗೊಳ್ಳಬಹುದಾದ್ದರಿಂದ ಮೇಲ್ವಿಚಾರಣೆ ಅಗತ್ಯವಾಗಿ ಮುಂದುವರಿಯಬೇಕು ಎಂದು ಮಾರ್ವಾ ಹೇಳಿದರು.
ಸಾರ್ವತ್ರಿಕ ಉಪ್ಪು ಅಯೋಡೈಸೇಷನ್ ಉಪಕ್ರಮವು ಗುಣಮಟ್ಟ ನಿಯಂತ್ರಣ ಕ್ರಮಗಳೊಂದಿಗೆ ಮುಂದುವರಿಯಬೇಕು ಮತ್ತು ಅಯೋಡೈಸೇಷನ್ ಮಟ್ಟವನ್ನು ಅಳೆಯಲು ಹಾಗೂ ಥೈರಾಯ್ಡ್ ಆಟೋಇಮ್ಯೂನಿಟಿಯ ಹೆಚ್ಚುತ್ತಿರುವ ಪ್ರಮಾಣವನ್ನು ಟ್ರ್ಯಾಕ್ ಮಾಡಲು ಕಾಲಕಾಲಕ್ಕೆ ರಾಷ್ಟ್ರವ್ಯಾಪಿ ಸಮೀಕ್ಷೆಗಳನ್ನು ನಡೆಸಬೇಕು ಎಂದು ಸಂಶೋಧಕರು ಒತ್ತಾಯಿಸಿದ್ದಾರೆ.
ಕೃಪೆ: theprint.in






