ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಎಚ್ಚರಿಕೆ: ಪ್ಯಾಕ್ ಮಾಡಿದ ಆಹಾರ ಲೇಬಲ್ಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲೇನಿದೆ?
ಇನ್ನು ಮುಂದೆ ಯಾವ ರೀತಿಯ ಎಚ್ಚರಿಕೆ ಲೇಬಲ್ಗಳು ಇರಲಿವೆ?; ಇಲ್ಲಿದೆ ವಿವರ...

ಸಾಂದರ್ಭಿಕ ಚಿತ್ರ(AI)
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಅಂಶ ಹೆಚ್ಚಾಗಿದೆಯೇ ಎಂಬುದನ್ನು ತಿಳಿಸುವ ಪೌಷ್ಟಿಕಾಂಶದ ಲೇಬಲ್ಗಳನ್ನು (FoPNL) ಕಡ್ಡಾಯಗೊಳಿಸಲು ಸುಪ್ರೀಂ ಕೋರ್ಟ್ ಗುರುವಾರ (ನವೆಂಬರ್ 26) ಆದೇಶಿಸಿದೆ.
ಪ್ಯಾಕ್ ಮಾಡಿದ ಆಹಾರಗಳ ಒಟ್ಟಾರೆ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಹಿಂದೆ 'ಸ್ಟಾರ್-ರೇಟಿಂಗ್' ವ್ಯವಸ್ಥೆಯನ್ನು ಪ್ರಸ್ತಾಪಿಸಿತ್ತು. ಆದರೆ, ಸುಪ್ರೀಂ ಕೋರ್ಟ್ನ ಈ ತೀರ್ಪು ಅದಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು, ಆಹಾರದಲ್ಲಿರುವ ಪ್ರತಿಯೊಂದು ಅಪಾಯಕಾರಿ ಅಂಶಕ್ಕೂ ಪ್ರತ್ಯೇಕ ಎಚ್ಚರಿಕೆಯ ಲೇಬಲ್ಗಳನ್ನು ಹಾಕುವಂತೆ ಕಡ್ಡಾಯಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಆಹಾರ ನಿಯಂತ್ರಕ ಸಂಸ್ಥೆಗೆ ಮಹತ್ವದ ನಿರ್ದೇಶನ ನೀಡಿದೆ. ಈ ಹಿಂದಿನ ಸಹಮತದಂತೆಯೇ, ಕೇವಲ 'ಹೆಚ್ಚುವರಿಯಾಗಿ ಸೇರಿಸಿದ ಸಕ್ಕರೆ' (added sugar) ಮತ್ತು 'ಸೇರಿಸಿದ ಕೊಬ್ಬು' (added fat) ಬದಲಿಗೆ, 'ಒಟ್ಟು ಸಕ್ಕರೆ' (total sugars), 'ಸ್ಯಾಚುರೇಟೆಡ್ ಕೊಬ್ಬು' (saturated fat) ಮತ್ತು 'ಉಪ್ಪು' ಈ ಮೂರನ್ನೂ ಅಪಾಯಕಾರಿ ಅಂಶಗಳೆಂದು ಪರಿಗಣಿಸಿ ಲೇಬಲ್ ಹಾಕಬೇಕು ಎಂದು ಕೋರ್ಟ್ ಸೂಚಿಸಿದೆ.
ಪ್ರತಿಯೊಂದು ಪೌಷ್ಟಿಕಾಂಶದ ಎಚ್ಚರಿಕೆಯನ್ನೂ ಪ್ರತ್ಯೇಕ ಷಟ್ಕೋನ (hexagon) ಆಕಾರದ ಚಿಹ್ನೆಯಲ್ಲಿ ಮುದ್ರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರಲ್ಲಿ ನಿಗದಿತ ಚಿತ್ರದ ಜೊತೆಗೆ ಅನ್ವಯವಾಗುವಂತೆ 'ಅಧಿಕ ಕೊಬ್ಬು' (high fat), 'ಅಧಿಕ ಸಕ್ಕರೆ' (high sugar) ಅಥವಾ 'ಅಧಿಕ ಉಪ್ಪು' (high salt) ಎಂಬ ಪದಗಳು ಸ್ಪಷ್ಟವಾಗಿ ಇರಬೇಕು. ಅಲ್ಲದೆ, ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಈ ಪೋಷಕಾಂಶಗಳ ಮಿತಿಯನ್ನು ಮರುಪರಿಶೀಲಿಸಿ, ಹೊಸದಾಗಿ ನಿಗದಿಪಡಿಸುವಂತೆ FSSAIಗೆ ನಿರ್ದೇಶನ ನೀಡಿದೆ.
"ಸಾಂಕ್ರಾಮಿಕವಲ್ಲದ ರೋಗಗಳ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಅಧಿಕ ಕೊಬ್ಬು, ಸಕ್ಕರೆ, ಉಪ್ಪು ಇರುವ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ (UPFs) ಸೇವನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವಂತಹ ಇಂತಹ ಎಚ್ಚರಿಕೆ ಲೇಬಲ್ಗಳು ಜನರ ಮೂಲಭೂತ ಮತ್ತು ಶಾಸನಬದ್ಧ ಹಕ್ಕುಗಳನ್ನು ರಕ್ಷಿಸಲು ಅಗತ್ಯವಾದ ಕ್ರಮವಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಕುರಿತು 'ದಿ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿದ 'ನ್ಯೂಟ್ರಿಷನ್ ಅಡ್ವೊಕಸಿ ಇನ್ ಪಬ್ಲಿಕ್ ಇಂಟರೆಸ್ಟ್' (NAPi - India) ಸಂಚಾಲಕ ಡಾ. ಅರುಣ್ ಗುಪ್ತಾ, "ಇಂದು ಸಾರ್ವಜನಿಕ ಆರೋಗ್ಯಕ್ಕೆ ಗೆಲುವು ಸಿಕ್ಕಿದೆ. ಸಾರ್ವಜನಿಕ ಆರೋಗ್ಯವು ಚೌಕಾಸಿಯ ವಸ್ತುವಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನೆನಪಿಸಿದೆ. ವರ್ಷಗಳಿಂದ ಆಹಾರ ನಿಯಂತ್ರಕ ಸಂಸ್ಥೆಯು ಒಮ್ಮತವಿಲ್ಲ ಎಂಬ ಕಾರಣ ನೀಡಿ ಸುಮ್ಮನಿತ್ತು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಒಮ್ಮತವೇ ಅಂತಿಮವಲ್ಲ ಎಂದು ಕೋರ್ಟ್ ಈಗ ಸ್ಪಷ್ಟಪಡಿಸಿದೆ. ಉದ್ಯಮಗಳ ಆಕ್ಷೇಪಣೆಗಳಿಗೆ ಮಣಿದು ನಿಯಮಗಳನ್ನು ವಿಳಂಬ ಮಾಡಬಾರದು, ಬದಲಾಗಿ ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೀರ್ಪಿನಲ್ಲಿ ಎಫ್ಎಸ್ಎಸ್ಎಐಗೆ ಸ್ಪಷ್ಟವಾಗಿ ಸೂಚಿಸಲಾಗಿದೆ" ಎಂದರು.
"ಈಗಿನ ನಿಜವಾದ ಹೋರಾಟ ಇರುವುದು ಪೋಷಕಾಂಶಗಳ ಮಿತಿ ನಿಗದಿಪಡಿಸುವುದರಲ್ಲಿ. ಚಿಲಿ, ಮೆಕ್ಸಿಕೋದಂತಹ ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುತ್ತಿರುವ ವೈಜ್ಞಾನಿಕ ಆಧಾರಿತ ಮಿತಿಗಳನ್ನೇ ಎಫ್ಎಸ್ಎಸ್ಎಐ ಕೂಡ ಆಯ್ಕೆ ಮಾಡಿಕೊಳ್ಳಬೇಕು. ಅತ್ಯುತ್ತಮ ಮಿತಿಗಳನ್ನು ನಿಗದಿಪಡಿಸಲು ನಾವು ಎಫ್ಎಸ್ಎಸ್ಎಐ ಜೊತೆ ನಿರಂತರವಾಗಿ ಕೆಲಸ ಮಾಡುತ್ತೇವೆ" ಎಂದು ಅವರು ಹೇಳಿದರು.
ಪ್ಯಾಕ್ ಮಾಡಿದ ಆಹಾರಗಳ ಮೇಲೆ ಇನ್ನು ಮುಂದೆ ಯಾವ ರೀತಿಯ ಎಚ್ಚರಿಕೆ ಲೇಬಲ್ಗಳು ಇರಲಿವೆ?
ಪೌಷ್ಟಿಕಾಂಶದ ಲೇಬಲ್ಗಳ ಮೂಲ ಉದ್ದೇಶಕ್ಕೆ ಯಾವುದೇ ಧಕ್ಕೆಯಾಗದಂತೆ ಜಾರಿಗೆ ತರಲು ಸುಪ್ರೀಂ ಕೋರ್ಟ್ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಚಿತ್ರ ಸಹಿತ ಎಚ್ಚರಿಕೆ: ಪ್ರತಿಯೊಂದು ಷಟ್ಕೋನ (hexagonal) ಆಕಾರದ ಎಚ್ಚರಿಕೆ ಲೇಬಲ್ನಲ್ಲಿ 'ಅಧಿಕ ಕೊಬ್ಬು' (High Fat), 'ಅಧಿಕ ಸಕ್ಕರೆ' (High Sugar) ಅಥವಾ 'ಅಧಿಕ ಉಪ್ಪು' (High Salt) ಎಂಬ ಬರಹದ ಜೊತೆಗೆ ಅದಕ್ಕೆ ಸಂಬಂಧಿಸಿದ ಚಿತ್ರವೂ ಇರುವಂತೆ ನೋಡಿಕೊಳ್ಳಲು FSSAIಗೆ ಕೋರ್ಟ್ ಸೂಚಿಸಿದೆ. ಕೇವಲ ಬರಹದಲ್ಲಿದ್ದರೆ ಎಲ್ಲಾ ವಯಸ್ಸಿನವರಿಗೆ, ವಿವಿಧ ಶೈಕ್ಷಣಿಕ ಹಿನ್ನೆಲೆಯುಳ್ಳವರಿಗೆ ಮತ್ತು ಓದಲು ಬಾರದವರಿಗೆ ಅರ್ಥವಾಗುವುದಿಲ್ಲ ಎಂದು ಅರ್ಜಿದಾರರಾದ ' 3S and Our Health society' ಮತ್ತು ಹಲವು ತಜ್ಞರು ವಾದಿಸಿದ್ದರು.
ಪ್ರತ್ಯೇಕ ಷಟ್ಕೋನಗಳು: ಪ್ರತಿಯೊಂದು ಪೋಷಕಾಂಶಕ್ಕೂ ಪ್ರತ್ಯೇಕ ಷಟ್ಕೋನ ಚಿಹ್ನೆಯನ್ನು ಬಳಸಬೇಕು ಎಂದು ಕೋರ್ಟ್ ಹೇಳಿದೆ. ಅಂದರೆ, ಒಂದು ಆಹಾರ ಪದಾರ್ಥದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಲ್ಲಿ ಯಾವುದಾದರೂ ಒಂದು, ಎರಡು ಅಥವಾ ಮೂರೂ ಅಂಶಗಳು ಹೆಚ್ಚಾಗಿದ್ದರೆ, ಅದಕ್ಕೆ ತಕ್ಕಂತೆ ಪ್ಯಾಕೆಟ್ ಮೇಲೆ ಒಂದು, ಎರಡು ಅಥವಾ ಮೂರು ಷಟ್ಕೋನಗಳು ಇರುತ್ತವೆ. ಒಂದಕ್ಕಿಂತ ಹೆಚ್ಚು ಅಪಾಯಕಾರಿ ಅಂಶಗಳಿದ್ದರೆ ಒಂದೇ ಷಟ್ಕೋನದಲ್ಲಿ ಎಲ್ಲಾ ಎಚ್ಚರಿಕೆಗಳನ್ನು ಹಾಕುವ ಪ್ರಸ್ತಾಪವನ್ನು ಎಫ್ಎಸ್ಎಸ್ಎಐ ಈ ಹಿಂದೆ ಮುಂದಿಟ್ಟಿತ್ತು.
ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು: ಎಚ್ಚರಿಕೆ ಲೇಬಲ್ ಹಾಕಲು ಪೋಷಕಾಂಶಗಳ ಮಿತಿಯನ್ನು ನಿಗದಿಪಡಿಸುವಾಗ, ಈ ಹಿಂದೆ ಪ್ರಸ್ತಾಪಿಸಿದ್ದ 'ಹೆಚ್ಚುವರಿಯಾಗಿ ಸೇರಿಸಿದ ಸಕ್ಕರೆ' (added sugars) ಮತ್ತು 'ಸೇರಿಸಿದ ಕೊಬ್ಬು' (added fat) ಬದಲಿಗೆ, ಆಹಾರದಲ್ಲಿರುವ 'ಒಟ್ಟು ಸಕ್ಕರೆ' ಮತ್ತು 'ಸ್ಯಾಚುರೇಟೆಡ್ ಕೊಬ್ಬಿನ' ಪ್ರಮಾಣವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸೇರಿಸಿದ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಕಂಡುಹಿಡಿಯುವುದು ಕಷ್ಟ ಮಾತ್ರವಲ್ಲ, ಈ ನಿಯಮ ದುರುಪಯೋಗವಾಗುವ ಸಾಧ್ಯತೆಯೂ ಇದೆ ಎಂದು ಆರೋಗ್ಯ ಕಾರ್ಯಕರ್ತರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಉದಾಹರಣೆಗೆ, ತಯಾರಕರು ಸಿಹಿಗಾಗಿ ಹಣ್ಣಿನ ರಸದ ಸಾರ ಅಥವಾ ಹಣ್ಣಿನ ತಿರುಳನ್ನು ಬಳಸಬಹುದು. ಇದು ನೈಸರ್ಗಿಕ ಸಕ್ಕರೆ ಎಂಬ ಕಾರಣಕ್ಕೆ ಎಚ್ಚರಿಕೆ ಲೇಬಲ್ನಿಂದ ತಪ್ಪಿಸಿಕೊಳ್ಳಬಹುದು, ಆದರೆ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ.
ಸೂಕ್ತ ಮಿತಿ ನಿಗದಿ: ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಎಚ್ಚರಿಕೆ ಲೇಬಲ್ಗಳ ಮಿತಿಯನ್ನು ಮರುನಿಗದಿಪಡಿಸಲು ಎಫ್ಎಸ್ಎಸ್ಎಐಗೆ ಕೋರ್ಟ್ ಸೂಚಿಸಿದೆ. ಈ ಮಿತಿಯು ತೀರಾ ಕಡಿಮೆಯೂ ಇರಬಾರದು ಅಥವಾ ತೀರಾ ಹೆಚ್ಚೂ ಇರಬಾರದು. "ಮಿತಿಯನ್ನು ತೀರಾ ಕಡಿಮೆ ನಿಗದಿಪಡಿಸಿದರೆ ಬಹುತೇಕ ಎಲ್ಲಾ ಪ್ಯಾಕ್ ಮಾಡಿದ ಆಹಾರಗಳ ಮೇಲೂ ಎಚ್ಚರಿಕೆ ಲೇಬಲ್ ಬರುತ್ತದೆ. ಇದರಿಂದ ಗ್ರಾಹಕರಿಗೆ ಲೇಬಲ್ ಬಗ್ಗೆ ನಿರ್ಲಕ್ಷ್ಯ ಮೂಡಬಹುದು. ಮತ್ತೊಂದೆಡೆ, ಮಿತಿಯನ್ನು ತೀರಾ ಹೆಚ್ಚು ನಿಗದಿಪಡಿಸಿದರೆ ಬಹುತೇಕ ಉತ್ಪನ್ನಗಳು ಲೇಬಲ್ನಿಂದ ತಪ್ಪಿಸಿಕೊಳ್ಳುತ್ತವೆ. ಆಗ ಗ್ರಾಹಕರು ತಮಗರಿವಿಲ್ಲದೆಯೇ ಹಾನಿಕಾರಕ ಪ್ರಮಾಣದ ಕೊಬ್ಬು, ಸಕ್ಕರೆ ಮತ್ತು ಉಪ್ಪನ್ನು ಸೇವಿಸುವಂತಾಗುತ್ತದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಲೇಬಲ್ ಗಾತ್ರ: ಷಟ್ಕೋನದ ಒಳಗಿನ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತಹ ಗಾತ್ರದಲ್ಲಿರಬೇಕು. ಜೊತೆಗೆ, ಪ್ಯಾಕೆಟ್ನ ಮುಂಭಾಗದ ವಿಸ್ತೀರ್ಣಕ್ಕೆ ಅನುಗುಣವಾಗಿ ಷಟ್ಕೋನದ ಗಾತ್ರ ಇರಬೇಕು. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ, ಪ್ಯಾಕೆಟ್ನ ಮುಂಭಾಗದ ಕನಿಷ್ಠ ಶೇ. 4 ಅಥವಾ ಶೇ. 5 ರಷ್ಟು ಜಾಗವನ್ನು ಈ ಷಟ್ಕೋನಗಳು ಆವರಿಸಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಪಾನೀಯಗಳಿಗೆ ವರ್ಗೀಕರಣದ ಲೇಬಲ್ ಬೇಡ: ಕಾರ್ಬೊನೇಟೆಡ್ ನೀರು, ಕಾರ್ಬೋನೇಟೆಡ್ ಅಲ್ಲದ್ದು, ರೆಡಿ ಟು ಸರ್ವ್ ಫುಡ್, ಸಿಂಥೆಟಿಕ್ ಸಿರಪ್ ಮುಂತಾದ ಪಾನೀಯಗಳ ವರ್ಗವನ್ನು ಗುರುತಿಸಲು ಇದೇ ರೀತಿಯ ಷಟ್ಕೋನ ಬಳಸಲು ಎಫ್ಎಸ್ಎಸ್ಎಐ ಪ್ರಸ್ತಾಪಿಸಿತ್ತು. ಆದರೆ, ಹೆಚ್ಚಿನ ಸಕ್ಕರೆ ಅಂಶವಿಲ್ಲದ ಪಾನೀಯಗಳ ಮೇಲೆ, ಅಧಿಕ ಸಕ್ಕರೆ ಇರುವ ಪಾನೀಯಗಳಿಗೆ ಹಾಕುವ ಎಚ್ಚರಿಕೆ ಲೇಬಲ್ಗಳನ್ನೇ ಹೋಲುವ ಅಥವಾ ಗೊಂದಲ ಮೂಡಿಸುವಂತಹ ಯಾವುದೇ ವರ್ಗೀಕರಣದ ಲೇಬಲ್ಗಳನ್ನು ಹಾಕಬಾರದು ಎಂದು ಕೋರ್ಟ್ ತೀರ್ಪು ನೀಡಿದೆ.
ವಿನಾಯಿತಿ ಪಡೆದ ಆಹಾರಗಳ ಪಟ್ಟಿ: ಎಚ್ಚರಿಕೆ ಲೇಬಲ್ನಿಂದ ವಿನಾಯಿತಿ ಪಡೆಯುವ ಘನ ಮತ್ತು ದ್ರವ ಆಹಾರ ಪದಾರ್ಥಗಳ ಸಂಪೂರ್ಣ ಪಟ್ಟಿಯನ್ನು ಸ್ಪಷ್ಟ ಕಾರಣಗಳೊಂದಿಗೆ ಸಿದ್ಧಪಡಿಸಲು ಎಫ್ಎಸ್ಎಸ್ಎಐಗೆ ಕೋರ್ಟ್ ಸೂಚಿಸಿದೆ. ಸಾಮಾನ್ಯವಾಗಿ ಸಕ್ಕರೆ, ಉಪ್ಪು ಅಥವಾ ಎಣ್ಣೆಯಂತಹ ಒಂದೇ ಪದಾರ್ಥವಿರುವ ಪ್ಯಾಕೆಟ್ಗಳು ಇದರಿಂದ ವಿನಾಯಿತಿ ಪಡೆಯುತ್ತವೆ.
ಸಂರಕ್ಷಕಗಳು ಮತ್ತು ಕೃತಕ ಪದಾರ್ಥಗಳು: ಎಚ್ಚರಿಕೆ ಲೇಬಲ್ಗಳಿಂದ ತಪ್ಪಿಸಿಕೊಳ್ಳಲು ಉದ್ಯಮಗಳು ಆಹಾರದಲ್ಲಿ ಬೇರೆ ರೀತಿಯ ಸಂರಕ್ಷಕಗಳು ಅಥವಾ ಕೃತಕ ಪದಾರ್ಥಗಳನ್ನು ಬಳಸಿ ಈ ನಿಯಮದ ಉದ್ದೇಶವನ್ನೇ ವಿಫಲಗೊಳಿಸಲು ಪ್ರಯತ್ನಿಸಿದರೆ, ಅಂತಹ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಎಫ್ಎಸ್ಎಸ್ಎಐಗೆ ನಿರ್ದೇಶನ ನೀಡಲಾಗಿದೆ.
ಕಾಲಮಿತಿ: ಈ ನಿಯಮಗಳನ್ನು ಜಾರಿಗೆ ತರಲು ತನಗೆ ಕನಿಷ್ಠ ನಾಲ್ಕು ತಿಂಗಳ ಕಾಲಾವಕಾಶ ಬೇಕು ಎಂದು ಎಫ್ಎಸ್ಎಸ್ಎಐ ಹೇಳಿದ್ದು, ಇದೇ ಗಡುವಿಗೆ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ.
"ಪರಿವರ್ತನೆಯ ಅವಧಿಗೆ ಸಂಬಂಧಿಸಿದಂತೆ, ಅದರ ದುರುಪಯೋಗವನ್ನು ತಡೆಯಲು ಮತ್ತು ಆಹಾರ ಉದ್ಯಮಿಗಳು ನಿಯಮಗಳನ್ನು ಪಾಲಿಸಲು ಸರಿಯಾದ ಹಾದಿಯಲ್ಲಿದ್ದಾರೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ಎಫ್ಎಸ್ಎಸ್ಎಐ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಕೋರ್ಟ್ ಹೇಳಿದೆ. ನಿಯಮ ಜಾರಿಗೆ ಬರುವ ಮೊದಲೇ ಎಚ್ಚರಿಕೆ ಲೇಬಲ್ಗಳಿಲ್ಲದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿಸಲು ಆಹಾರ ಉದ್ಯಮಿಗಳು ಈ ಅವಧಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ಎಫ್ಎಸ್ಎಸ್ಎಐ ಪ್ರಸ್ತಾಪಕ್ಕಿಂತ ಸುಪ್ರೀಂ ಕೋರ್ಟ್ ಆದೇಶ ಹೇಗೆ ಭಿನ್ನವಾಗಿದೆ?
FSSAI ತನ್ನ 2022ರ ಕರಡು ಅಧಿಸೂಚನೆಯಲ್ಲಿ, ಎಲೆಕ್ಟ್ರಿಕಲ್ ಉಪಕರಣಗಳಿಗೆ ನೀಡುವಂತಹ 'ಸ್ಟಾರ್-ರೇಟಿಂಗ್' ವ್ಯವಸ್ಥೆಯನ್ನು ಆರಂಭದಲ್ಲಿ ಪ್ರಸ್ತಾಪಿಸಿತ್ತು. ಒಂದು ಅಧ್ಯಯನದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಸಮರ್ಥಿಸಿಕೊಂಡಿತ್ತು. ಆದರೆ ಆರೋಗ್ಯ ಕಾರ್ಯಕರ್ತರು ಮತ್ತು ತಜ್ಞರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಇಂತಹ ರೇಟಿಂಗ್ ವ್ಯವಸ್ಥೆಯಿಂದಾಗಿ, ಕೇವಲ 0.5 ಸ್ಟಾರ್ ಪಡೆದ ಅತ್ಯಂತ ಅನಾರೋಗ್ಯಕರ ಆಹಾರವನ್ನೂ ಜನರು "ಉತ್ತಮ" ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಯಿದೆ ಎಂದು ಅವರು ವಾದಿಸಿದ್ದರು.
ಆಹಾರ ಉದ್ಯಮಿಗಳು ಸೇರಿದಂತೆ ಹಲವು ಪಾಲುದಾರರೊಂದಿಗೆ ಪ್ರಾಧಿಕಾರವು ಹಲವು ಸುತ್ತಿನ ಸಮಾಲೋಚನೆಗಳನ್ನು ನಡೆಸಿತ್ತು. ಗ್ರಾಹಕರು, ಗ್ರಾಹಕ ಸಂಘಟನೆಗಳು, ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಎಚ್ಚರಿಕೆ ಲೇಬಲ್ಗಳನ್ನು ಬೆಂಬಲಿಸಿದರೆ, ಆಹಾರ ಉದ್ಯಮಿಗಳು ಇದು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ, ಲೇಬಲ್ ಅಳವಡಿಕೆಯನ್ನು ಐಚ್ಛಿಕವಾಗಿ ಇಡಬೇಕು ಎಂದು ವಾದಿಸಿದ್ದರು. ಪಾಶ್ಚಾತ್ಯ ಆಹಾರಗಳ ಬದಲಿಗೆ ಸಾಂಪ್ರದಾಯಿಕ ಆಹಾರಗಳನ್ನು ಉತ್ತೇಜಿಸುವ ನೀತಿಗಳನ್ನು ತರಬೇಕು ಮತ್ತು 100 ಮಿಲಿ/100 ಗ್ರಾಂ ಬದಲಿಗೆ ಒಂದು ಬಾರಿಗೆ ಸೇವಿಸುವ ಪ್ರಮಾಣವನ್ನು ಆಧರಿಸಿ ಸ್ಟಾರ್ ರೇಟಿಂಗ್ ನೀಡಬೇಕು ಎಂದು ಉದ್ಯಮಿಗಳು ಕೇಳಿಕೊಂಡಿದ್ದರು.
2025ರಲ್ಲಿ ಆಹಾರ ನಿಯಂತ್ರಕ ಸಂಸ್ಥೆಯು ಹೊಸ ತಂತ್ರವೊಂದನ್ನು ಪ್ರಸ್ತಾಪಿಸಿತ್ತು. ಇದರ ಪ್ರಕಾರ, ದೈನಂದಿನ ಆಹಾರದಲ್ಲಿ ಶಿಫಾರಸು ಮಾಡಲಾದ ಪೋಷಕಾಂಶಗಳ ಶೇಕಡಾವಾರು ಪ್ರಮಾಣವನ್ನು ಪ್ಯಾಕೆಟ್ ಮೇಲೆ ತೋರಿಸುವ ಯೋಜನೆ ಇತ್ತು. ಇದು ಈಗಾಗಲೇ ಪ್ಯಾಕೆಟ್ ಹಿಂಭಾಗದಲ್ಲಿರುವ ಮಾಹಿತಿಯನ್ನು ಬೇರೆ ರೀತಿಯಲ್ಲಿ ತೋರಿಸಿದಂತೆ ಅಷ್ಟೇ. ಇದರಿಂದ ಸಂಕೀರ್ಣ ಲೆಕ್ಕಾಚಾರಗಳಿಲ್ಲದೆ ಒಂದು ಉತ್ಪನ್ನ ಹಾನಿಕಾರಕವೇ ಎಂಬುದು ಗ್ರಾಹಕರಿಗೆ ತಕ್ಷಣಕ್ಕೆ ತಿಳಿಯುವುದಿಲ್ಲ ಎಂದು ಕಾರ್ಯಕರ್ತರು ಮತ್ತು ತಜ್ಞರು ವಾದಿಸಿದ್ದರು.
ಕೊನೆಗೆ ನ್ಯಾಯಾಲಯದಲ್ಲಿ ಎಚ್ಚರಿಕೆ ಲೇಬಲ್ಗಳಿಗೆ ಒಪ್ಪಿಕೊಂಡ ಎಫ್ಎಸ್ಎಸ್ಎಐ, ಪ್ಯಾಕೆಟ್ನಲ್ಲಿ ಕೆಲವು ಪೋಷಕಾಂಶಗಳು ಹೆಚ್ಚಾಗಿವೆ ಎಂಬ ಬರಹವಿರುವ ಒಂದೇ ಕೆಂಪು ಷಟ್ಕೋನವನ್ನು ಪ್ರಸ್ತಾಪಿಸಿತ್ತು. ಇದನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ಅದು ಯೋಜಿಸಿತ್ತು. ಮೊದಲ ಹಂತದಲ್ಲಿ, ಮೂರು ಅಪಾಯಕಾರಿ ಅಂಶಗಳಲ್ಲಿ ಯಾವುದಾದರೂ ಎರಡು ಅಂಶಗಳು ಹೆಚ್ಚಿರುವ ಆಹಾರಗಳಿಗೆ ಮಾತ್ರ ಎಚ್ಚರಿಕೆ ಲೇಬಲ್ ಹಾಕುವುದು ಮತ್ತು ಪಾನೀಯಗಳಿಗೆ ಪ್ರತ್ಯೇಕ ಎಚ್ಚರಿಕೆ ನೀಡುವ ಪ್ರಸ್ತಾಪವಿತ್ತು. ಎರಡನೇ ಹಂತದಲ್ಲಿ, ಕೇವಲ ಒಂದು ಪೋಷಕಾಂಶ ಹೆಚ್ಚಿರುವ ಆಹಾರಗಳಿಗೂ ಈ ನಿಯಮವನ್ನು ವಿಸ್ತರಿಸುವ ಯೋಜನೆ ಇತ್ತು.
ನಿಯಂತ್ರಕ ಸಂಸ್ಥೆಯ ಪ್ರಸ್ತಾಪದಲ್ಲಿ ಚಿತ್ರ ಸಹಿತ ಎಚ್ಚರಿಕೆಗಳಿರಲಿಲ್ಲ, ಪ್ರತಿಯೊಂದು ಪೋಷಕಾಂಶಕ್ಕೂ ಪ್ರತ್ಯೇಕ ಷಟ್ಕೋನಗಳಿರಲಿಲ್ಲ ಹಾಗೂ ಒಟ್ಟು ಸಕ್ಕರೆ ಮತ್ತು ಕೊಬ್ಬಿನ ಆಧಾರದ ಮೇಲೆ ಮಿತಿ ನಿಗದಿಪಡಿಸುವ ಅಂಶವೂ ಇರಲಿಲ್ಲ. ಅಲ್ಲದೆ, ಲೇಬಲ್ ಗಾತ್ರವು ಕಣ್ಣಿಗೆ ಸ್ಪಷ್ಟವಾಗಿ ಕಾಣದಷ್ಟು ಚಿಕ್ಕದಾಗಿರಬಹುದು ಎಂಬ ಆತಂಕವೂ ಇತ್ತು.
ಇದರ ಜೊತೆಗೆ, ತನ್ನ ಈ ಯೋಜನೆಯನ್ನು ಜಾರಿಗೆ ತರಲು ಎಫ್ಎಸ್ಎಸ್ಎಐ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನೀಡಿರಲಿಲ್ಲ.
ಪ್ಯಾಕ್ ಮಾಡಿದ ಆಹಾರಗಳ ಮೇಲೆ ಎಚ್ಚರಿಕೆ ಲೇಬಲ್ಗಳು ಭಾರತಕ್ಕೆ ಏಕೆ ಅಗತ್ಯ?
ಗ್ರಾಹಕರನ್ನು ಆರೋಗ್ಯಕರ ಪ್ಯಾಕ್ ಮಾಡಿದ ಆಹಾರಗಳತ್ತ ಸೆಳೆಯುವ ಮಾರ್ಗವಾಗಿ ಜಾಗತಿಕ ಮಟ್ಟದಲ್ಲಿ ಪೌಷ್ಟಿಕಾಂಶದ ಲೇಬಲ್ಗಳು ಹೊರಹೊಮ್ಮಿವೆ. ಈಗಾಗಲೇ ಕನಿಷ್ಠ 44 ದೇಶಗಳು ಇಂತಹ ಕ್ರಮಗಳನ್ನು ಜಾರಿಗೆ ತಂದಿವೆ.
ಮಕ್ಕಳು ಮತ್ತು ಯುವಜನರಲ್ಲೂ ಹೆಚ್ಚುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನ ಸಮಸ್ಯೆಯು ಭಾರತಕ್ಕೆ ದೊಡ್ಡ ಆತಂಕದ ವಿಷಯವಾಗಿದೆ. ಅಧಿಕ ಕೊಬ್ಬು, ಸಕ್ಕರೆ, ಉಪ್ಪು ಇರುವ ಆಹಾರಗಳು ಮತ್ತು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಸೇವನೆಯು ಈ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ, ಸಾಂಕ್ರಾಮಿಕವಲ್ಲದ ರೋಗಗಳಿಂದ ಪ್ರತಿ ವರ್ಷ ಸುಮಾರು 60 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ, ಇದು ಒಟ್ಟು ಸಾವುಗಳ ಸುಮಾರು ಶೇ. 63 ರಷ್ಟಿದೆ. 2030ರ ವೇಳೆಗೆ ಈ ಪ್ರಮಾಣ ಶೇ. 75ಕ್ಕೆ ಏರಿಕೆಯಾಗುವ ಅಂದಾಜಿದೆ.
ಪ್ರಮುಖ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 10.1 ಕೋಟಿ, ಪ್ರಿ ಡಯಾಬಿಟಿಸ್ ಹಂತದಲ್ಲಿರುವವರು 13.6 ಕೋಟಿ, ಅಧಿಕ ರಕ್ತದೊತ್ತಡ ಇರುವವರು 31.5 ಕೋಟಿ ಹಾಗೂ ಬೊಜ್ಜಿನ ಸಮಸ್ಯೆ ಇರುವವರ ಸಂಖ್ಯೆ 25.4 ಕೋಟಿಯಷ್ಟಿದೆ.
ಇದರ ಜೊತೆಗೆ, 2011 ಮತ್ತು 2021ರ ನಡುವೆ ಭಾರತದಲ್ಲಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರ ವಲಯದ ಚಿಲ್ಲರೆ ಮಾರಾಟದ ಮೌಲ್ಯವು ಶೇ. 13.37 ರಷ್ಟು ಬೆಳವಣಿಗೆ ಕಂಡಿದೆ. ಹೀಗಾಗಿ ಇವುಗಳ ಸೇವನೆಯನ್ನು ನಿಯಂತ್ರಿಸಲು ಕಠಿಣ ನೀತಿಗಳ ಅಗತ್ಯವಿದೆ.
ಈ ಎಚ್ಚರಿಕೆ ಲೇಬಲ್ಗಳು ಗ್ರಾಹಕರ ನಡವಳಿಕೆಯನ್ನು ಬದಲಾಯಿಸುತ್ತವೆಯೇ?
ಗ್ರಾಹಕರನ್ನು ಆರೋಗ್ಯಕರ ಆಹಾರದತ್ತ ಕೊಂಡೊಯ್ಯಲು ಜಗತ್ತಿನ ಕನಿಷ್ಠ 44 ದೇಶಗಳು ಮುಂಭಾಗದ ಲೇಬಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಸಾಮಾನ್ಯವಾಗಿ ಎರಡು ರೀತಿಯ ಲೇಬಲ್ಗಳನ್ನು ಬಳಸಲಾಗುತ್ತದೆ:
ವಿವರಣಾತ್ಮಕ ಲೇಬಲ್ : ಇದು ಆಹಾರದ ಎಲ್ಲಾ ಪೌಷ್ಟಿಕಾಂಶದ ಮಾಹಿತಿಯನ್ನು ಬಳಸಿಕೊಂಡು, ಒಂದೇ ನೋಟದಲ್ಲಿ ಅರ್ಥವಾಗುವಂತಹ ಅಂಕ ಅಥವಾ ಸ್ಟಾರ್ಗಳನ್ನು ನೀಡುತ್ತದೆ.
ವಿವರಣಾರಹಿತ ಲೇಬಲ್ : ಇದು ಯಾವುದೇ ವಿವರಣೆಯಿಲ್ಲದೆ ಕೇವಲ ಪೌಷ್ಟಿಕಾಂಶದ ಮಾಹಿತಿಯನ್ನು ಮಾತ್ರ ತೋರಿಸುತ್ತದೆ. ಸುಲಭವಾಗಿ ಮತ್ತು ತಕ್ಷಣವೇ ಅರ್ಥವಾಗುವ ವಿವರಣಾತ್ಮಕ ಲೇಬಲ್ಗಳು ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ನಂಬುತ್ತಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಂತಹ ದೇಶಗಳು 'ಹೆಲ್ತ್ ಸ್ಟಾರ್ ರೇಟಿಂಗ್' ಬಳಸುತ್ತವೆ. ನೆದರ್ಲ್ಯಾಂಡ್ಸ್, ಜೆಕ್ ರಿಪಬ್ಲಿಕ್ ಮತ್ತು ಸಿಂಗಾಪುರದಂತಹ ದೇಶಗಳು ಆರೋಗ್ಯಕರ ಆಯ್ಕೆಯನ್ನು ಸೂಚಿಸುವ ಚಿಹ್ನೆಗಳನ್ನು ಬಳಸುತ್ತವೆ. ಬ್ರಿಟನ್ 'ಟ್ರಾಫಿಕ್ ಲೈಟ್' ಮಾದರಿಯನ್ನು ಅನುಸರಿಸುತ್ತಿದ್ದು, ಅಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣದ ಜೊತೆಗೆ ಕೆಂಪು, ಹಳದಿ ಅಥವಾ ಹಸಿರು ಬಣ್ಣದ ಸಂಕೇತಗಳನ್ನು ನೀಡಲಾಗುತ್ತದೆ. ಚಿಲಿಯಂತಹ ದೇಶಗಳು ಅನಾರೋಗ್ಯಕರ ಉತ್ಪನ್ನಗಳನ್ನು ಖರೀದಿಸದಂತೆ ತಡೆಯಲು ಕಪ್ಪು ಬಣ್ಣದ 'ಸ್ಟಾಪ್' ಚಿಹ್ನೆಯನ್ನು ಬಳಸುತ್ತವೆ.
ಚಿಲಿ, ಪೆರು, ಇಸ್ರೇಲ್, ಮೆಕ್ಸಿಕೋ, ಉರುಗ್ವೆ, ಬ್ರೆಜಿಲ್, ಅರ್ಜೆಂಟೀನಾ, ಕೊಲಂಬಿಯಾ, ವೆನೆಜುವೆಲಾ ಮತ್ತು ಕೆನಡಾ ಸೇರಿದಂತೆ ಕನಿಷ್ಠ 10 ದೇಶಗಳು ನಮ್ಮ ದೇಶದ ಆರೋಗ್ಯ ಕಾರ್ಯಕರ್ತರು ಒತ್ತಾಯಿಸುತ್ತಿರುವಂತಹ ಎಚ್ಚರಿಕೆ ಲೇಬಲ್ಗಳನ್ನು ಬಳಸುತ್ತಿವೆ. 'ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ', 'ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್' ಮತ್ತು 'ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್' ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿದ ವರದಿಯ ಪ್ರಕಾರ, ಇಂತಹ ಎಚ್ಚರಿಕೆ ಲೇಬಲ್ಗಳನ್ನು ಜಾರಿಗೆ ತಂದ ಹಲವು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಜನರ ಆಹಾರ ಸೇವನೆಯ ಪದ್ಧತಿಯಲ್ಲಿ ಬದಲಾವಣೆ ಕಂಡುಬಂದಿದೆ. ಉದಾಹರಣೆಗೆ, ಚಿಲಿ ದೇಶದಲ್ಲಿ ಸಕ್ಕರೆ ಅಂಶವಿರುವ ಪಾನೀಯಗಳ ಸೇವನೆಯಲ್ಲಿ ಶೇ. 24 ರಷ್ಟು ಇಳಿಕೆಯಾಗಿದೆ.
ಕೃಪೆ: indianexpress.com






