8 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ʼಸ್ಯಾಂಡ್ಪೇಪರ್ ಗೇಟ್ʼ ವಿವಾದ: ಖ್ವಾಜಾ ಆರೋಪಕ್ಕೆ ಪ್ಯಾಟ್ ಕಮಿನ್ಸ್ ತಿರುಗೇಟು
'ಸಂಪೂರ್ಣ ಅಸಂಬದ್ಧ' ಎಂದು ಆರೋಪ ತಳ್ಳಿಹಾಕಿದ ಆಸ್ಟ್ರೇಲಿಯಾ ನಾಯಕ

Photo Credit : x@patcummins30
ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ 2018ರ 'ಸ್ಯಾಂಡ್ಪೇಪರ್ ಗೇಟ್' ಪ್ರಕರಣ ಎಂಟು ವರ್ಷಗಳ ಬಳಿಕ ಮತ್ತೆ ಚರ್ಚೆಗೆ ಬಂದಿದೆ. ಅಂದು ಚೆಂಡು ವಿರೂಪಗೊಳಿಸುವ ಕೃತ್ಯದ ಬಗ್ಗೆ ತಂಡದ ಎಲ್ಲರಿಗೂ ತಿಳಿದಿತ್ತು ಎಂದು ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಮಾಡಿರುವ ಆರೋಪ ಹಳೆಯ ವಿವಾದಕ್ಕೆ ಹೊಸ ತಿರುವು ನೀಡಿದೆ. ಆದರೆ, ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ನ. 13ರಂದು ಸಿಡ್ನಿಯಲ್ಲಿ 68 ನಿಮಿಷಗಳ ಪತ್ರಿಕಾಗೋಷ್ಠಿ ನಡೆಸಿದ ಕಮಿನ್ಸ್, ಖ್ವಾಜಾ ಅವರ ಹೇಳಿಕೆಗಳನ್ನು 'ಸಂಪೂರ್ಣ ಮತ್ತು ಶುದ್ಧ ಅಸಂಬದ್ಧ' (Complete and utter nonsense) ಎಂದು ಹೇಳಿದ್ದಾರೆ. ಒಂದೇ ಡ್ರೆಸ್ಸಿಂಗ್ ರೂಮ್ ನಲ್ಲಿ ಆಡಿದ್ದ ಆಪ್ತ ಸ್ನೇಹಿತರ ನಡುವೆಯೇ ಈಗ ಭಿನ್ನಾಭಿಪ್ರಾಯ ತೀವ್ರಗೊಂಡಿದೆ.
►2018ರ ವಿವಾದದ ಹಿನ್ನೆಲೆ
2018ರ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಹಳದಿ ಬಣ್ಣದ ಸ್ಯಾಂಡ್ಪೇಪರ್ ತುಂಡಿನಿಂದ ಚೆಂಡನ್ನು ಉಜ್ಜುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಪ್ರಕರಣದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ಗೆ ತಲಾ 12 ತಿಂಗಳು ಹಾಗೂ ಬ್ಯಾನ್ ಕ್ರಾಫ್ಟ್ ಗೆ ಒಂಭತ್ತು ತಿಂಗಳ ನಿಷೇಧ ವಿಧಿಸಲಾಗಿತ್ತು. ಕೋಚ್ ಡ್ಯಾರೆನ್ ಲೆಹ್ಮನ್ ರಾಜೀನಾಮೆ ನೀಡಿದ್ದರು.
ಈ ಮೂವರನ್ನು ಹೊರತುಪಡಿಸಿ ಬೇರೆ ಆಟಗಾರರಿಗೆ ಪ್ರಕರಣದ ಬಗ್ಗೆ ತಿಳಿದಿರಲಿಲ್ಲ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ ತನಿಖೆಯ ತೀರ್ಮಾನವಾಗಿತ್ತು. ಬೌಲರ್ ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್ವುಡ್ ಮತ್ತು ನಾಥನ್ ಲಿಯಾನ್ ಕೂಡ ತಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಜಂಟಿ ಹೇಳಿಕೆ ನೀಡಿದ್ದರು.
►ಪೋರ್ಟ್ ಎಲಿಝಬೆತ್ ನಲ್ಲೇ ಪ್ರಯೋಗ ಆರಂಭವಾಗಿತ್ತು!
88 ಟೆಸ್ಟ್ ಪಂದ್ಯಗಳನ್ನಾಡಿ ಇದೇ ವರ್ಷದ ಜನವರಿಯಲ್ಲಿ ನಿವೃತ್ತರಾದ ಉಸ್ಮಾನ್ ಖ್ವಾಜಾ, ನ. 10ರಂದು ಬಿಡುಗಡೆಯಾದ ತಮ್ಮ ಆತ್ಮಕಥೆ 'SABR: Finding My Way in Cricket and Life'ನಲ್ಲಿ ಪ್ರಕರಣದ ಕುರಿತು ಹೊಸ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಪುಸ್ತಕ ಬಿಡುಗಡೆಗೆ ಮೂರು ದಿನ ಮುನ್ನ 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್'ಗೆ ನೀಡಿದ ಸಂದರ್ಶನದಲ್ಲಿ, "ಅದು ಕೇವಲ ಬ್ಯಾಟರ್ ಗಳು, ಬೌಲರ್ ಗಳು ಅಥವಾ ಸಿಬ್ಬಂದಿಗೆ ಮಾತ್ರ ತಿಳಿದಿದ್ದ ವಿಚಾರವಾಗಿರಲಿಲ್ಲ. ನಮ್ಮೆಲ್ಲರಿಗೂ ತಿಳಿದಿತ್ತು" (It was all of us) ಎಂದು ಹೇಳಿದ್ದರು.
ಖ್ವಾಜಾ ಅವರ ಪ್ರಕಾರ, ಸ್ಯಾಂಡ್ಪೇಪರ್ ಬಳಕೆಯ ಪ್ರಯೋಗ ಕೇಪ್ಟೌನ್ ನಲ್ಲಿ ಆರಂಭವಾಗಿರಲಿಲ್ಲ. ಪೋರ್ಟ್ ಎಲಿಝಬೆತ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲೇ ಈ ಪ್ರಯೋಗ ನಡೆದಿತ್ತು. ದಕ್ಷಿಣ ಆಫ್ರಿಕಾದ ಬೌಲರ್ ಗಳು 25 ಓವರ್ ಗಳಿಗಿಂತ ಕಡಿಮೆ ಅವಧಿಯಲ್ಲಿ ರಿವರ್ಸ್ ಸ್ವಿಂಗ್ ಪಡೆಯುತ್ತಿದ್ದರೆ, ಆಸ್ಟ್ರೇಲಿಯಾ ಬೌಲರ್ ಗಳಿಗೆ ಅದಕ್ಕಾಗಿ 40ರಿಂದ 50 ಓವರ್ ಗಳು ಬೇಕಾಗುತ್ತಿತ್ತು. ಈ ವ್ಯತ್ಯಾಸದ ಬಗ್ಗೆ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದ ತಮಾಷೆಯ ಚರ್ಚೆಯ ವೇಳೆ ಆಟಗಾರನೊಬ್ಬ ಸ್ಯಾಂಡ್ಪೇಪರ್ ಬಳಸಿ ಪ್ರಯೋಗಿಸಿದ್ದ ಎಂದು ಅವರು ತಿಳಿಸಿದ್ದಾರೆ.
ಈ ಪ್ರಯೋಗದಿಂದ ಪ್ರಯೋಜನವಿದೆ ಎಂಬುದು ತಿಳಿದಾಗ ಸ್ಟೀವ್ ಸ್ಮಿತ್, "ನನಗೆ ಇದರ ಬಗ್ಗೆ ಏನೂ ಗೊತ್ತಾಗಬಾರದು" ಎಂದು ಹೇಳಿ ದೂರ ಉಳಿದಿದ್ದರು. ಡೇವಿಡ್ ವಾರ್ನರ್ ಹಿಂದೇಟು ಹಾಕಿದಾಗ ಹೊಸ ಆಟಗಾರನಾಗಿದ್ದ ಬ್ಯಾನ್ ಕ್ರಾಫ್ಟ್ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರು ಎಂಬುದು ಖ್ವಾಜಾ ಅವರ ಮತ್ತೊಂದು ಆರೋಪ.
ಪೋರ್ಟ್ ಎಲಿಝಬೆತ್ ಟೆಸ್ಟ್ ನ ಎರಡನೇ ದಿನ ದಕ್ಷಿಣ ಆಫ್ರಿಕಾ ತಂಡ 155 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಸ್ಥಿತಿಯಿಂದ 183 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆಗ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖ್ವಾಜಾ ಚೆಂಡಿನ ಒಂದು ಭಾಗವನ್ನು ಸ್ಯಾಂಡ್ಪೇಪರ್ನಿಂದ ಒರಟಾಗಿಸಿರುವುದನ್ನು ಗಮನಿಸಿದ್ದರು ಎನ್ನಲಾಗಿದೆ.
ಕೇಪ್ಟೌನ್ ಟೆಸ್ಟ್ಗೆ ಮುನ್ನ ಬ್ಯಾನ್ ಕ್ರಾಫ್ಟ್ ಗೆ, "ಇದು ಶೀಲ್ಡ್ ಕ್ರಿಕೆಟ್ ಅಲ್ಲ, ಇಲ್ಲಿ ಸುತ್ತಲೂ ಕ್ಯಾಮೆರಾಗಳಿವೆ, ಹುಷಾರಾಗಿರು" ಎಂದು ಎಚ್ಚರಿಸಿದ್ದಾಗಿ ಖ್ವಾಜಾ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕೋಚಿಂಗ್ ಸಿಬ್ಬಂದಿಯೊಬ್ಬರು ಚೆಂಡನ್ನು ಇನ್ನಷ್ಟು ಉಜ್ಜುವಂತೆ ಬ್ಯಾನ್ ಕ್ರಾಫ್ಟ್ ಗೆ ಸೂಚಿಸಿದ್ದನ್ನು ತಾನು ನೋಡಿದ್ದಾಗಿ ಆರೋಪಿಸಿದ್ದಾರೆ. ಇಡೀ ಪಂದ್ಯದಲ್ಲಿ ಬ್ಯಾನ್ ಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದರೂ ತನಿಖಾ ತಂಡ ತನ್ನ ವಿಚಾರಣೆ ನಡೆಸಿರಲಿಲ್ಲ ಎಂದೂ ದೂರಿದ್ದಾರೆ.
ಇದರೊಂದಿಗೆ, ಸ್ಟೀವ್ ಸ್ಮಿತ್ ನಂತರ ತಮ್ಮನ್ನು ಹಂಗಾಮಿ ನಾಯಕನನ್ನಾಗಿ ನೇಮಿಸದಿರಲು ತಾವು 'ಬ್ರೌನ್ ಆಸ್ಟ್ರೇಲಿಯನ್' ಆಗಿರುವುದೇ ಕಾರಣ ಎಂಬ ವರ್ಣಭೇದದ ಆರೋಪವನ್ನೂ ಮಾಡಿದ್ದಾರೆ.
►ವಾರ್ನರ್ ಬೆಂಬಲ; ಲೆಹ್ಮನ್ ವ್ಯಂಗ್ಯ
ಖ್ವಾಜಾ ಅವರ ಆರೋಪಗಳಿಗೆ ಡೇವಿಡ್ ವಾರ್ನರ್ ಬೆಂಬಲ ಸೂಚಿಸಿದ್ದಾರೆ. ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ ಮಾತನಾಡಿದ ಅವರು, ಖ್ವಾಜಾ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.
ಆದರೆ, ಅಂದಿನ ಕೋಚ್ ಡ್ಯಾರೆನ್ ಲೆಹ್ಮನ್, "ಪುಸ್ತಕಗಳು ಮಾರಾಟವಾಗಲೆಂದೇ ಇರುತ್ತವೆ" ಎಂದು ವ್ಯಂಗ್ಯವಾಡಿದ್ದಾರೆ. ಮಿಚೆಲ್ ಸ್ಟಾರ್ಕ್ ಕೂಡ ಖ್ವಾಜಾ ಅವರ ಪುಸ್ತಕವನ್ನು ಓದುವುದಿಲ್ಲ ಎಂದು ಹೇಳಿದ್ದಾರೆ.
► 'ಬೌಲರ್ ಗಳು ಯಾವುದೇ ಯೋಜನೆ ರೂಪಿಸಿರಲಿಲ್ಲ'
ಖ್ವಾಜಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಮಿನ್ಸ್, ಅಂದಿನ ತಂಡದ ವಾತಾವರಣದಲ್ಲಿ ಗೆಲುವಿಗಾಗಿ ಯಾವುದೇ ಹಂತಕ್ಕೂ ಹೋಗುವ ಮನಸ್ಥಿತಿ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
"ಅಂದು ನನಗೆ 24 ವರ್ಷ ವಯಸ್ಸಾಗಿತ್ತು. ಅದು ನನ್ನ 13ನೇ ಟೆಸ್ಟ್ ಪಂದ್ಯವಾಗಿತ್ತು. ತಂಡದಲ್ಲಿ 'ಯಾವುದೇ ಬೆಲೆ ತೆತ್ತಾದರೂ ಗೆಲ್ಲಬೇಕು' ಎಂಬ ಕೆಟ್ಟ ಮನಸ್ಥಿತಿ ಇತ್ತು. ತಂಡ ಗುಂಪುಗಳಾಗಿ ಒಡೆದಿತ್ತು ಎಂಬುದೂ ನಿಜ. ಆದರೆ ಬೌಲರ್ ಗಳು ಸೇರಿಕೊಂಡು ಯಾವುದೇ ಮಾಸ್ಟರ್ ಪ್ಲಾನ್ ರೂಪಿಸಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಕಿಟ್ಬ್ಯಾಗ್ನಲ್ಲಿ ಸ್ಯಾಂಡ್ಪೇಪರ್ ಮತ್ತು ಸ್ಟ್ಯಾನ್ಲಿ ಚಾಕು ಇಟ್ಟುಕೊಳ್ಳುವುದು ನೆಟ್ಸ್ ಅಭ್ಯಾಸಕ್ಕೆ ಸಾಮಾನ್ಯ ಸಂಗತಿ ಎಂದು ಕಮಿನ್ಸ್ ಹೇಳಿದ್ದಾರೆ. ಬ್ಯಾನ್ ಕ್ರಾಫ್ಟ್ ಗೆ ಖ್ವಾಜಾ ಎಚ್ಚರಿಕೆ ನೀಡಿದ್ದರೆ ಸಾಲದು, ಆ ಸಂದರ್ಭದಲ್ಲೇ ಅವರನ್ನು ತಡೆಯಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
"ಸ್ನೇಹಿತರು ಪರಸ್ಪರರ ಜೀವನ ಮತ್ತು ಗೌರವದ ವಿಚಾರದಲ್ಲಿ ಇಷ್ಟು ಬೇಜವಾಬ್ದಾರಿಯಿಂದ ವರ್ತಿಸುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಖ್ವಾಜಾ ಮಾಡಿರುವ ವರ್ಣಭೇದದ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಕೇಳಿರುವ ಕಮಿನ್ಸ್, ಮಾನನಷ್ಟ ಮೊಕದ್ದಮೆ ಹೂಡುವಂತೆ ಸಲಹೆ ಬಂದಿದ್ದರೂ ಎಂಟು ವರ್ಷಗಳ ಹಿಂದಿನ ಪ್ರಕರಣವನ್ನು ಮತ್ತೆ ಮುಂದುವರಿಸಲು ಆಸಕ್ತಿಯಿಲ್ಲ ಎಂದಿದ್ದಾರೆ.
ಈ ನಡುವೆ, ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಟಾಡ್ ಗ್ರೀನ್ಬರ್ಗ್ ತನಿಖೆಯನ್ನು ಮತ್ತೆ ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಪೋರ್ಟ್ ಎಲಿಝಬೆತ್ ನಲ್ಲಿ ಮೊದಲ ಬಾರಿಗೆ ಸ್ಯಾಂಡ್ಪೇಪರ್ ಪ್ರಯೋಗಿಸಿದ ಆಟಗಾರ ಯಾರು ಮತ್ತು ಬ್ಯಾನ್ ಕ್ರಾಫ್ಟ್ ಗೆ ಚೆಂಡನ್ನು ಉಜ್ಜುವಂತೆ ಸೂಚಿಸಿದ ಕೋಚಿಂಗ್ ಸಿಬ್ಬಂದಿಯ ಸದಸ್ಯ ಯಾರು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದ ಚರ್ಚೆಗಳ ಬಗ್ಗೆ ತಿಳಿದಿರುವುದು ಮತ್ತು ಚೆಂಡು ವಿರೂಪಗೊಳಿಸುವ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ಎರಡೂ ಒಂದೇ ಅಲ್ಲ ಎಂಬುದು ಖ್ವಾಜಾ ಮತ್ತು ಕಮಿನ್ಸ್ ನಡುವಿನ ಭಿನ್ನಾಭಿಪ್ರಾಯದ ಕೇಂದ್ರಬಿಂದುವಾಗಿದೆ. ಎಂಟು ವರ್ಷಗಳ ಹಿಂದಿನ ಪ್ರಕರಣದ ಬಗ್ಗೆ ಹೊಸ ಆರೋಪಗಳು ಹೊರಬಿದ್ದಿರುವುದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿ ಈ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗಿದೆ.






