ವ್ಯಂಗ್ಯಕ್ಕೆ ಕಡಿವಾಣ: ಮೋದಿ ವಿರೋಧಿ ಪ್ರತಿಭಟನೆಗಳು ಹೆಚ್ಚುತ್ತಿದ್ದಂತೆ ಸೆನ್ಸಾರ್ ಶಿಪ್ ಎದುರಿಸುತ್ತಿರುವ ಭಾರತೀಯ ಕಲಾವಿದರು
ದೀಪಾಲಿ ಸಕ್ಸೇನಾ - Aljazeera. com ವರದಿ

Photo Credit : Al Jazeera
ಪಶ್ಚಿಮ ಬಂಗಾಳದಲ್ಲಿ ತಮ್ಮ, ತಂದೆ ಹಾಗೂ ಸಹೋದರಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಬ್ರಿಜೇಶ್ ಝಾ ಕಳೆದ ವಾರ ಇನ್ ಸ್ಟಾಗ್ರಾಮ್ ನಲ್ಲಿ ವಿಡಂಬನಾತ್ಮಕ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು.
ಸೆಪ್ಟೆಂಬರ್ 29ರಂದು ಪೋಸ್ಟ್ ಮಾಡಲಾಗಿದ್ದ ಈ ವಿಡಿಯೊದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ಬಿಜೆಪಿಯ ಸೂಚನೆಯಂತೆ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಲಕ್ಷಾಂತರ ಮತದಾರರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವಿಡಿಯೊ 17 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿತ್ತು.
ಎರಡು ದಿನಗಳ ಬಳಿಕ, ಇನ್ಸ್ಟಾಗ್ರಾಮ್ ನ ಮಾಲೀಕತ್ವ ಹೊಂದಿರುವ ಅಮೆರಿಕ ಮೂಲದ ಮೆಟಾ ಕಂಪೆನಿಯು ಹೆಚ್ಚಿನ ವಿವರಣೆ ನೀಡದೆ, ಸ್ಥಳೀಯ ಕಾನೂನುಗಳನ್ನು ಉಲ್ಲೇಖಿಸಿ ವಿಡಿಯೊವನ್ನು ತೆಗೆದುಹಾಕಿತು.
ಅಲ್ ಜಝೀರಾ ಜತೆ ಮಾತನಾಡಿದ ಮುಂಬೈ ಮೂಲದ ಕಲಾವಿದ ಝಾ, "ಅಂದು ನನಗೆ ತುಂಬಾ ಅಸಹಾಯಕತೆ ಎನಿಸಿತು. ಈ ದೇಶದಲ್ಲಿ ನನಗೆ ಇರುವುದು ಒಂದೇ ಒಂದು ಹಕ್ಕು. ಅದೇ ಮತದಾನ ಮಾಡುವುದು. ಅದನ್ನೇ ನೀವು ಕಸಿದುಕೊಂಡರೆ, ನನ್ನ ಬಳಿ ಏನೂ ಉಳಿಯುವುದಿಲ್ಲ. ಹಾಗಾಗಿ, ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಒಬ್ಬ ಕಲಾವಿದನಾಗಿ ನಾನು ಕೇವಲ ಕಲೆ ಮಾಡಬಲ್ಲೆ ಅಥವಾ ಪ್ರತಿಭಟಿಸಬಲ್ಲೆ" ಎಂದು ಹೇಳಿದ್ದಾರೆ.
ಕಳೆದ ತಿಂಗಳು 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆ ನಡೆಸಿದ ತನಿಖೆಯಲ್ಲಿ, ಚುನಾವಣಾ ಆಯೋಗದ ಮೂವರು ಸದಸ್ಯರಲ್ಲಿ ಇಬ್ಬರು ದೇಶಾದ್ಯಂತ ಆಯೋಗ ನಡೆಸುತ್ತಿರುವ ವಿವಾದಾತ್ಮಕ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಮೋದಿ ಸರಕಾರವು ಈ ಬೆಳವಣಿಗೆಯಿಂದ "ಭಯಭೀತಗೊಂಡಿದೆ". ಹೀಗಾಗಿಯೇ ತಮ್ಮ ವಿಡಂಬನಾತ್ಮಕ ಹಾಡನ್ನು ತೆಗೆದುಹಾಕಲಾಗಿದೆ ಎಂದು ಝಾ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯನ್ನು ಕಳೆದ ವರ್ಷ ಜೂನ್ನಲ್ಲಿ ಪ್ರಾರಂಭಿಸಲಾಯಿತು. ಮೃತರು, ನಕಲಿ ಅಥವಾ ಸಂಶಯಾಸ್ಪದ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವುದು ಇದರ ಉದ್ದೇಶವಾಗಿತ್ತು. ಇಲ್ಲಿಯವರೆಗೆ, ಈ ಪ್ರಕ್ರಿಯೆಯು ಭಾರತದ ಒಟ್ಟು ಮತದಾರರ ಸುಮಾರು ಶೇ 14ರಷ್ಟಿರುವ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಕೈಬಿಟ್ಟಿದೆ. ಇವರಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿದ್ದು, ಅವರು ಸಾಮಾನ್ಯವಾಗಿ ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಪಕ್ಷಕ್ಕೆ ಮತ ಹಾಕುವುದಿಲ್ಲ.
'ಇಂಡಿಯನ್ ಎಕ್ಸ್ಪ್ರೆಸ್' ನಡೆಸಿದ ತನಿಖೆಯ ಪ್ರಕಾರ, ಜ್ಞಾನೇಶ್ ಕುಮಾರ್ ಅವರ ಸಹೋದ್ಯೋಗಿಗಳಾದ ಇಬ್ಬರೂ ಚುನಾವಣಾ ಆಯುಕ್ತರು, ಮುಖ್ಯ ಆಯುಕ್ತರು ತೆಗೆದುಕೊಂಡ SIR ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕನಿಷ್ಠ 14 ಬಾರಿ ಅಧಿಕೃತವಾಗಿ ವಿರೋಧಿಸಿದ್ದರು.
ಮೋದಿ ಸರಕಾರದ ನೇಮಕಾತಿಯಾಗಿರುವ ಜ್ಞಾನೇಶ್ ಕುಮಾರ್ ಅವರು ಬಿಜೆಪಿಯ ಸೂಚನೆಯಂತೆ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ರಾಜಕಾರಣಿಗಳು ಮತ್ತು ಟೀಕಾಕಾರರು ಆರೋಪಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆದಿವೆ.
ಮಂಗಳವಾರ ಹೊಸದಿಲ್ಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕಾಂಗ್ರೆಸ್ ಪಕ್ಷದ ಇತರ ನಾಯಕರು ಚುನಾವಣಾ ಆಯೋಗದ ಕಚೇರಿಗೆ ಕಾಲ್ನಡಿಗೆಯಲ್ಲಿ ತೆರಳಲು ಯತ್ನಿಸಿದಾಗ ಪೊಲೀಸರು ಅವರನ್ನು ಅಲ್ಪಾವಧಿಗೆ ವಶಕ್ಕೆ ಪಡೆದರು.
"ಮತ ಕಳ್ಳತನದ ಮೂಲಕ ನರೇಂದ್ರ ಮೋದಿ ಅವರು ದೇಶವನ್ನು ಕಬಳಿಸಿದ್ದಾರೆ. ನಮ್ಮ ದೇಶಕ್ಕೆ ಮಾಡಲಾಗಿರುವ ಈ ದ್ರೋಹವನ್ನು ದೇಶದ್ರೋಹ ಎನ್ನಲಾಗುತ್ತದೆ. ಯಾರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ವಿರೋಧ ಪಕ್ಷಗಳು "ಸರಕಾರವನ್ನು ಬದಲಾಯಿಸಲು ವ್ಯವಸ್ಥಿತ ಪ್ರಯತ್ನ ನಡೆಸುತ್ತಿವೆ" ಎಂದು ಬಿಜೆಪಿ ಆರೋಪಿಸಿದೆ.
"ಅವರು ಉದ್ದೇಶಪೂರ್ವಕವಾಗಿ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ" ಎಂದು ಬಿಜೆಪಿ ವಕ್ತಾರರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಪ್ರತಿಭಟನಾಕಾರರು ಮತ್ತು ಅವರ ರಾಜಕೀಯ ಮಿತ್ರಪಕ್ಷಗಳು ಬುಧವಾರ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಕ್ಟೋಬರ್ 2ರಿಂದ ಮುಂಬೈ ಮತ್ತು ಹೊಸದಿಲ್ಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ನಡೆಸಿದ ಸರಣಿ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಈ ಪ್ರದರ್ಶನಗಳು ನಡೆದವು. ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 10ರಂದು ಹೊಸದಿಲ್ಲಿಯಲ್ಲಿ ಮತ್ತೊಂದು ಪ್ರತಿಭಟನೆ ನಡೆಸಲು CJP ಯೋಜಿಸಿದೆ.
*ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿ
ಈ ಪ್ರತಿಭಟನೆಗಳಲ್ಲಿ ಹೈಲೈಟ್ ಆಗಿರುವ ಮುಖ್ಯ ಅಂಶವೆಂದರೆ, ಹಾಸ್ಯ, ಕಲೆ ಮತ್ತು ಸಂಗೀತದ ಮೂಲಕ ವಿನೂತನವಾಗಿ ಪ್ರತಿಭಟಿಸುವ ಧ್ವನಿ. ಇದರ ಹೆಚ್ಚಿನ ಭಾಗವು ಬೀದಿಗಳಲ್ಲಿನ ಪ್ರತಿಭಟನೆಗಳ ಜೊತೆಗೆ ಆನ್ಲೈನ್ನಲ್ಲೂ ಕಾಣಿಸಿಕೊಳ್ಳುತ್ತಿದೆ.
ಆದರೆ, ಇಂತಹ ಮೀಮ್ ಗಳು ಮತ್ತು ಹಾಸ್ಯಗಳ ವಿರುದ್ಧದ ದಮನಕಾರಿ ಕ್ರಮಗಳೂ ಏಕಕಾಲದಲ್ಲಿ ನಡೆಯುತ್ತಿವೆ.
'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯ ಪ್ರಕಾರ, ಈ ವರ್ಷದ ಮಾರ್ಚ್ ಮತ್ತು ಜುಲೈ ನಡುವೆ ಸರಕಾರವು ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ಗೆ ಸುಮಾರು 1,95,000 ಕಂಟೆಂಟ್ ಬ್ಲಾಕಿಂಗ್ ಆದೇಶಗಳನ್ನು ನೀಡಿದೆ. ಅಂದರೆ, ಸರಾಸರಿ ಪ್ರತಿ 68 ಸೆಕೆಂಡ್ಗಳಿಗೆ ಒಂದು ಬ್ಲಾಕಿಂಗ್ ಆದೇಶ ನೀಡಲಾಗಿದೆ.
ಪತ್ರಿಕೆಯ ವರದಿಯನ್ನು ತಳ್ಳಿಹಾಕಿರುವ ಸರಕಾರ, "ಭಾರತದಲ್ಲಿ 60 ಕೋಟಿ ಬಳಕೆದಾರರಿದ್ದು, ಪ್ರತಿ 68 ಸೆಕೆಂಡ್ಗಳಿಗೆ 78,703 ಪೋಸ್ಟ್ಗಳು ಹಂಚಿಕೆಯಾಗುತ್ತವೆ. ಹೀಗಿರುವಾಗ, ಸರಾಸರಿ ಒಂದು ಪೋಸ್ಟ್ ಕಾನೂನುಬಾಹಿರವಾಗಿರಬಹುದು ಎಂದು ನಿರೀಕ್ಷಿಸುವುದು ಸಹಜ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿಯಲ್ಲಿ ಮೋದಿ ಸರಕಾರವು ಆನ್ಲೈನ್ ಕಂಟೆಂಟ್ ಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದ ಬಳಿಕ ಈ ಕಠಿಣ ಕ್ರಮ ಜಾರಿಗೆ ಬಂದಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರಿ ಪ್ರಾಧಿಕಾರ ಅಥವಾ ನ್ಯಾಯಾಲಯವು "ಕಾನೂನುಬಾಹಿರ" ಎಂದು ಘೋಷಿಸಿದ ವಿಷಯವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಆದೇಶ ಪಡೆದ ಮೂರು ಗಂಟೆಗಳ ಒಳಗೆ ತೆಗೆದುಹಾಕಬೇಕು. ಹಿಂದೆ ಈ ಅವಧಿ 36 ಗಂಟೆಗಳಾಗಿತ್ತು.
ಕಂಟೆಂಟ್ ತೆಗೆದುಹಾಕಲಾದವರಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಕೂಡ ಸೇರಿದ್ದಾರೆ.
ಆಚಾರ್ಯ ಅವರ ಹಲವಾರು ವ್ಯಂಗ್ಯಚಿತ್ರಗಳನ್ನು ತೆಗೆದುಹಾಕಲಾಗಿದೆ. ಅವುಗಳಲ್ಲಿ ಮೂರು ವರ್ಷಗಳಷ್ಟು ಹಳೆಯದಾದ ವ್ಯಂಗ್ಯಚಿತ್ರಗಳೂ ಸೇರಿವೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರ ರಾತ್ರಿಯವರೆಗೆ ಭಾರತದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಲಾಗಿತ್ತು ಎಂದು ಅವರು ಅಲ್ ಜಝೀರಾ ಸುದ್ದಿ ಸಂಸ್ಥೆಗೆ ತಿಳಿಸಿದರು.
"ಇತಿಹಾಸದ ವಿವಿಧ ಹಂತಗಳಲ್ಲಿ, ಜನರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಮತ್ತು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ವ್ಯಂಗ್ಯಚಿತ್ರಗಳನ್ನು ಸಾಧನವಾಗಿ ಬಳಸಿದ್ದಾರೆ. ಸಾಮಾಜಿಕ ಮಾಧ್ಯಮದ ಹೆಚ್ಚುತ್ತಿರುವ ಬಳಕೆಯೊಂದಿಗೆ, ಈಗ ವ್ಯಂಗ್ಯಚಿತ್ರಗಳು ವಿವಿಧ ರೂಪಗಳಲ್ಲಿ, ಕೆಲವೊಮ್ಮೆ ಮೀಮ್ಗಳು ಮತ್ತು ರೀಲ್ಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಜೆನ್ ಝೀ ಮೇಲೆ ನನಗೆ ಬಹಳಷ್ಟು ನಂಬಿಕೆಯಿದೆ. ಅವರು ನಿರ್ಭೀತರು, ಸೃಜನಶೀಲರು ಮತ್ತು ದೇಶದ ಬಗ್ಗೆ ಕಾಳಜಿ ಹೊಂದಿದ್ದಾರೆ. ನಮ್ಮ ರಾಜಕಾರಣಿಗಳು ಅವರಿಂದ ಬಹಳಷ್ಟನ್ನು ಕಲಿಯಬಹುದು" ಎಂದು ಸತೀಶ್ ಆಚಾರ್ಯ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ CJP ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಝಾ ಕೂಡ ಇದನ್ನು ಒಪ್ಪುತ್ತಾರೆ. "ಅಧಿಕಾರವು ಎಷ್ಟು ಕ್ರೂರವಾಗುತ್ತದೋ, ಪ್ರತಿಭಟನೆಯು ಅಷ್ಟೇ ಮೃದುವಾಗಿ, ಹಾಸ್ಯಮಯವಾಗಿ ಮತ್ತು ಕಲಾತ್ಮಕವಾಗಿ ಬದಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಆದರೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮರುಸ್ಥಾಪಿಸಲು ಅರ್ಜಿ ಸಲ್ಲಿಸಲು ಝಾ ನಿರಾಕರಿಸಿದ್ದಾರೆ.
"ಅವರು ಈ ಸಂದರ್ಶನವನ್ನು ನೋಡುತ್ತಾರೆ ಮತ್ತು ಬಹುಶಃ ನನ್ನನ್ನು ಯಾವುದಾದರೂ ಬಂಧನ ಕೇಂದ್ರದಲ್ಲಿ ಇರಿಸಬಹುದು ಎಂದು ನನಗೆ ಅನಿಸುತ್ತದೆ. ಮುಂದೆ ಏನಾಗುತ್ತದೆ ಎಂದು ನಾನು ನೋಡಲು ಬಯಸುತ್ತೇನೆ. ನಾನು ನನ್ನ ಹೆಸರನ್ನು ಮತ್ತೆ ನೋಂದಾಯಿಸುವುದಿಲ್ಲ" ಎಂದು ಅವರು ಹೇಳಿದರು.
ಆನ್ ಲೈನ್ ಕಂಟೆಂಟ್ ಮೇಲಿನ ದಮನಕಾರಿ ಕ್ರಮವನ್ನು ನಿಲ್ಲಿಸುವಂತೆ ಮೋದಿ ಅವರನ್ನು ಒತ್ತಾಯಿಸುತ್ತಾ ಅವರು ವ್ಯಂಗ್ಯಭರಿತ ಸಂದೇಶವೊಂದನ್ನು ನೀಡಿದ್ದಾರೆ.
"ದಯವಿಟ್ಟು ನನ್ನ ಮತದಾನದ ಹಕ್ಕನ್ನು ನನಗೆ ವಾಪಸ್ ನೀಡಿ. ನೀವು 56 ಇಂಚಿನ ಎದೆಯುಳ್ಳ ಮಹಾನ್ ನಾಯಕ. ನೀವು ಕೇವಲ ಒಂದು ವಿಡಿಯೊಗೆ ಭಯಪಡಬಾರದು" ಎಂದು ಮೋದಿಯವರ ನುಡಿಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಸೌಜನ್ಯ: Aljazeera.com






