ʼಪ್ರವಾದಿ ವಲಸೆʼ ಮರು ಸೃಷ್ಟಿಸಲಿದೆ ಸೌದಿ !

ಪ್ರವಾದಿ ಮುಹಮ್ಮದರ ಐತಿಹಾಸಿಕ ಮದೀನಾ ವಲಸೆಯ ಚಿತ್ರಣವನ್ನು ಜಗತ್ತಿನ ಮುಂದೆ ಮತ್ತೆ ತೋರಿಸಲು ಸೌದಿ ಅರೇಬಿಯಾ ಆಡಳಿತ ಸಜ್ಜಾಗಿದೆ.
ಮಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮುಹಮ್ಮದ್ ಅವರು ಸಂಚರಿಸಿದ ಅದೇ ಮರುಭೂಮಿಯ ದಾರಿಯಲ್ಲಿ ಆವತ್ತಿನ ಪ್ರಯಾಣದ ಸಂದರ್ಭ ಇದ್ದ ಪ್ರತಿಯೊಂದು ದೃಶ್ಯಗಳನ್ನೂ ಅದೇ ರೀತಿಯಲ್ಲಿ ಮರು ಸೃಷ್ಟಿ ಮಾಡಲಾಗುತ್ತದೆ ಎಂದು ಸೌದಿ ಆಡಳಿತ ಮಾಹಿತಿ ನೀಡಿದೆ.
ಈ ಮಹತ್ವದ ಯೋಜನೆಯನ್ನು ಮದೀನದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದ್ದು, ಈ ವರ್ಷ ನವೆಂಬರ್ ನಲ್ಲಿ ಪ್ರವಾದಿಯ ಹಿಜ್ರಾದ ಮರುಸೃಷ್ಟಿ ಯೋಜನೆ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಾಗಲಿದೆ.
ಪ್ರವಾದಿಯಾದ ಹದಿಮೂರನೇ ವರ್ಷ ರಬೀಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಿದ್ದರು. ಮಕ್ಕಾದಲ್ಲಿ ವಿರೋಧಿಗಳ ಕಿರುಕುಳ ಸಹಿಸಲಾರದೆ ಪ್ರವಾದಿಯವರು ಮದೀನಾಕ್ಕೆ ಹಿಜ್ರಾ ಅಂದರೆ ಪಲಾಯನ ಮಾಡಿದ್ದರು.
ತಮ್ಮನ್ನು ಹಿಂಬಾಲಿಸಿಕೊಂಡು ಬಂದ ವಿರೋಧಿಗಳಿಂದ ಪಾರಾಗಲು ಪ್ರವಾದಿಯವರು ತಮ್ಮ ಸಹಚರ ಅಬೂಬಕರ್ ಸಿದ್ದೀಕ್ ರೊಂದಿಗೆ ಅಡಗಿ ಕುಳಿತ ಸೌರ್ ಗುಹೆಯಿಂದ ಆರಂಭಿಸಿ 470 ಕಿಮೀ ದೂರದ ಮದೀನದಲ್ಲಿರುವ ಪ್ರವಾದಿಯವರ ಮಸೀದಿ ಮಸ್ಜಿದುನ್ನಬವಿವರೆಗಿನ ಪ್ರಯಾಣದ ಪ್ರತಿಯೊಂದು ಹಂತದ ದಾರಿ ಹಾಗು ಅದರಲ್ಲಿನ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಗುತ್ತದೆ.
ಮಕ್ಕಾದಿಂದ ಮದೀನಾಕ್ಕೆ ಪ್ರವಾದಿಯವರು ಸಂಚರಿಸಿದ ರಸ್ತೆಯಲ್ಲೇ ಪ್ರಯಾಣದ ಸಂಪೂರ್ಣ ಅನುಭವ ಪಡೆಯಲು ಯಾತ್ರೆ ಕೈಗೊಳ್ಳುವವವರಿಗೆ ಒಂಟೆಯ ಮೇಲೆ , ಕುದುರೆಯ ಮೇಲೆ ಅಥವಾ ವಿಶೇಷ ವಾಹನದಲ್ಲೋ , ನಡೆಯುತ್ತಲೋ ಹೋಗುವ ಅವಕಾಶ ಇರಲಿದೆ.
'ಅಲಾ ಖುತಾಹ್' ಅಂದ್ರೆ 'ಪ್ರವಾದಿ ಹೆಜ್ಜೆಗುರುತುಗಳ ಮೇಲೆ' ಎಂಬ ಹೆಸರಿನ ಈ ಮಹತ್ವದ ಯೋಜನೆಯನ್ನು ಮದೀನಾದ ಉಹ್ದ್ ಪರ್ವತದ ಸಮೀಪ ನಡೆದಂತಹ ಕಾರ್ಯಕ್ರಮವೊಂದರಲ್ಲಿ ಮದೀನಾದ ಅಮೀರ್ ಬಿನ್ ಸಲ್ಮಾನ್ ಬಿನ್ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಘೋಷಿಸಿದ್ದಾರೆ.41 ಚಾರಿತ್ರಿಕ ಲ್ಯಾಂಡ್ ಮಾರ್ಕ್ ಗಳು , ಪ್ರತಿ ಐದು ಕಿಮೀ ಕ್ರಮಿಸಿದಂತೆ ಸಿಗುವ 62 ವಿಶ್ರಾಂತಿ ಕೋಣೆಗಳು, ರಾತ್ರಿ ತಂಗಲು ಸಹಾಯವಾಗುವಂತೆ ಎಂಟು ಅತ್ಯಾಧುನಿಕ ಶಿಬಿರಗಳು, ಮೆಡಿಕಲ್ ಕೇರ್ ಸೆಂಟರ್ ಗಳು , 80 ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಈ ಯೋಜನೆಯಲ್ಲಿವೆ.
ಈ ವರ್ಷ ನವೆಂಬರ್ ನಲ್ಲಿ ಈ ಯೋಜನೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಪ್ರಯಾಣಕ್ಕೆ ಬುಕ್ಕಿಂಗ್ ಕೂಡಾ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ.