ಶಾಲೆ ಶುಲ್ಕ ತಡವಾದರೆ ಶೇ.3ರಷ್ಟು ಬಡ್ಡಿ ವಸೂಲಿ: ಆರೋಪ
► ಪೋಷಕರ ಕೊರಳಿಗೆ ಉರುಳಾದ ‘ಖಾಸಗಿ ಶಾಲಾ ಶುಲ್ಕ’

ಸಾಂದರ್ಭಿಕ ಚಿತ್ರ (Credit: Meta AI)
ಬೆಂಗಳೂರು, ಫೆ.19: ರಾಜ್ಯದಲ್ಲಿ ಮಾರಕವಾಗಿ ವ್ಯಾಪಿಸಿಕೊಂಡಿದ್ದ ಮೈಕ್ರೋ ಫೈನಾನ್ಸ್ಗಳ ‘ಬಡ್ಡಿ’ ಕ್ರೂರತೆಗೆ ಜನರು ಬೇಸತ್ತು ಜೀವ ಕಳೆದುಕೊಂಡಿದ್ದಾರೆ. ಈ ನಡುವೆ ಪೋಷಕರು ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂಬ ಸದುದ್ದೇಶದಿಂದ ಸಾವಿರಾರು ರೂ. ಶುಲ್ಕ ನೀಡಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ ಸರಿಯಾಗಿ ಶುಲ್ಕವನ್ನು ನೀಡಲಾಗದ ವಿದ್ಯಾರ್ಥಿ ಪೋಷಕರಿಗೆ ವರ್ಷಕ್ಕೆ ಶೇ.3ರಷ್ಟು ಬಡ್ಡಿ ದಂಡ ವಿಧಿಸಿ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕುತ್ತಿರುವುದರಿಂದ ವಿದ್ಯಾರ್ಥಿಗಳು ತರಗತಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೋಷಕರ ಆರೋಪವಾಗಿದೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ಪ್ರತಿಷ್ಠಿತ ಕೆಲವೊಂದು ಖಾಸಗಿ ಹೈಸ್ಕೂಲ್ನ ಆಡಳಿತ ಮಂಡಳಿ ಪೋಷಕರಿಂದ ತಿಂಗಳಿಗೆ ಶೇ.3ರಷ್ಟು ಬಡ್ಡಿ ಸಹಿತ ಫೀಸ್ ವಸೂಲಿ ದಂಧೆಗೆ ಮುಂದಾಗಿರುವುದಲ್ಲದೇ ಪೋಷಕರಿಗೆ ನಿತ್ಯ ಕಿರುಕುಳ ನೀಡುತ್ತಿರುವ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸೆಸೆಲ್ಸಿ ವಿದ್ಯಾರ್ಥಿಗಳು ಕಂಗಾಲು: ಶಾಲೆ ಆಡಳಿತ ಮಂಡಳಿ ನೀಡಿರುವ ಬಡ್ಡಿ ಸಹಿತ ಫೀಸ್ ಸರಿಯಾಗಿ ಕಟ್ಟದಿದ್ದರೆ ವಿದ್ಯಾರ್ಥಿಗಳ ಪರೀಕ್ಷೆ ಹಾಲ್ ಟಿಕೆಟ್ ನೀಡಲಾಗದೇ ಸತಾಯಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಹಾಕಿ ಹಾಜರಾತಿಯಲ್ಲಿ ಕಡಿತಗೊಳಿಸಲಾಗುತ್ತಿದೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲಾಗದೇ ಭವಿಷ್ಯದ ಮೇಳೆ ಪರಿಣಾಮ ಬೀರಲಿದೆ ಎನ್ನುವುದು ಪೋಷಕರ ನೋವಾಗಿದೆ.
ಕಂತುಗಳಲ್ಲಿ ಶುಲ್ಕ: ಶಾಲಾ ಶುಲ್ಕವನ್ನು ಐದು ಕಂತುಗಳಲ್ಲಿ ಶುಲ್ಕ ಪಾವತಿಸಬೇಕು. ಅದರಲ್ಲಿ ಎರಡು ಕಂತುಗಳನ್ನು ಶಾಲೆ ಆರಂಭಕ್ಕೆ ಮೊದಲೇ ಅಂದರೆ ಮಾರ್ಚ್ನಲ್ಲೇ ಶಾಲಾ ಆಡಳಿತ ಮಂಡಳಿ ಪಡೆದುಕೊಂಡಿದ್ದಾರೆ. ನಂತರ ಹಂತ ಹಂತವಾಗಿ ಜನವರಿಯಲ್ಲಿ ಉಳಿದ ಮೂರು ಕಂತುಗಳನ್ನು ಪಾವತಿ ಮಾಡಬೇಕು. ಇದು ತಡವಾದರೆ ತಿಂಗಳಿಗೆ ಶೇ.3ರಂತೆ ಬಡ್ಡಿ ವಿಧಿಸಲಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಇ-ಮೇಲ್ ಮೂಲಕ ಸಂದೇಶ ಕಳಿಸಿದ್ದಾರೆ ಎಂದು ಪೋಷಕರು ಹೇಳುತ್ತಾರೆ.
ವಾರ್ಷಿಕದಲ್ಲಿ ವ್ಯಾನ್ ಶುಲ್ಕ ಹೊರತಾಗಿ ಓರ್ವ ವಿದ್ಯಾರ್ಥಿಗೆ 1.25 ಲಕ್ಷ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇದರಲ್ಲಿ 50 ಸಾವಿರ ರೂ. 2024ರ ಮಾರ್ಚ್ನಲ್ಲೇ ಪಾವತಿಸಲಾಗಿತ್ತು. ಉಳಿದ ಮೂರು ಕಂತುಗಳಲ್ಲಿ 75 ಸಾವಿರ ರೂ. ಪಾವತಿಸಬೇಕಾಗಿತ್ತು. ಅದನ್ನು ಒಟ್ಟಿಗೆ ಪಾವತಿಸಲಾಗಿದೆ. ಆದರೆ ಇದಕ್ಕೆ ಒಪ್ಪದ ಆಡಳಿತ ಮಂಡಳಿ ತಿಂಗಳಿಗೆ ಶೇ.3ರಷ್ಟು ಬಡ್ಡಿ ವಿಧಿಸಿ ಸುಮಾರು 10 ಸಾವಿರ ರೂ. ನಷ್ಟು ಬಡ್ಡಿ ಮೊತ್ತವನ್ನು ಶುಲ್ಕದೊಂದಿಗೆ ವಿಧಿಸಲು ಶಾಲಾ ಆಡಳಿತ ಮಂಡಳಿ ಒತ್ತಾಯಿಸುತ್ತಿದೆ. ಈ ರೀತಿ ಬಡ್ಡಿ ವಿಧಿಸಲು ಅವಕಾಶವಿದೆಯಾ ಎಂದು ಎಸೆಸೆಲ್ಸಿ ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಯ ‘ಬಡ್ಡಿ ಕಾಟ’: ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಪೋಷಕರಿಗೆ ಶಾಲಾ ಶುಲ್ಕಕ್ಕಿಂತ ಬಡ್ಡಿ ಶುಲ್ಕವೇ ತಲೆನೋವಾಗಿ ಬಿಟ್ಟಿದೆ. ಪ್ರತಿಮಾಸಕ್ಕೆ ಶೇ.3ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಉದಾಹರಣೆಗೆ, 25,450 ರೂ. ಶುಲ್ಕಕ್ಕೆ 5,344 ರೂ. ಬಡ್ಡಿ, ಇನ್ನೂ ಕೆಲವು ಪೋಷಕರಿಗೆ ಪ್ರತಿ ತಿಂಗಳಿಗೆ 3,054 ರೂ. ಮತ್ತು 763 ರೂ. ಬಡ್ಡಿ ವಿಧಿಸ
ಲಾಗಿದೆ. ಚಾಮರಾಜಪೇಟೆಯ ಖಾಸಗಿ ಶಾಲೆಯೊಂದರಲ್ಲಿ ದಿನಕ್ಕೆ 100 ರೂ. ನಂತೆ ದಂಡ ವಿಧಿಸಲಾಗುತ್ತಿದೆ. ಅಲ್ಲದೇ ಶಾಲಾ ಶುಲ್ಕ ಕಟ್ಟಲು ಸಾಧ್ಯವಿಲ್ಲದ ಇಬ್ಬರು ವಿದ್ಯಾರ್ಥಿಗಳು ಎರಡು ತಿಂಗಳಿಂದ ಮನೆಯಲ್ಲೇ ಇದ್ದಾರೆ ಎಂದು ಪೋಷಕರೊಬ್ಬರು ಹೇಳುತ್ತಾರೆ.ವಿದ್ಯಾರ್ಥಿಗಳಿಗೆ ಪಾಠನೇ ಇಲ್ಲ: ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲೆಗಳ ಡಿಜಿಟಲ್ಕರಣಗೊಂಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಗಳ ಹೋಂ ವರ್ಕ್ಗಳಿಗೆ ವಾಟ್ಸ್ಆ್ಯಪ್ನಲ್ಲೇ ಕಳುಹಿಸಲಾಗುತ್ತಿತ್ತು. ಆದರೆ ಶಾಲಾ ಶುಲ್ಕ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ಮೆಸೇಜ್ ಹೋಗದಂತೆ ಶಾಲಾ ಆಡಳಿತ ಮಂಡಳಿ ಬ್ಲಾಕ್ ಮಾಡಲಾಗಿದೆ ಎನ್ನುತ್ತಾರೆ ವಿದ್ಯಾರ್ಥಿ ಪೋಷಕರು.
‘ಸರಕಾರದಿಂದ ಕಾನೂನು ಕ್ರಮ ಅಗತ್ಯ’
ಬಡ್ಡಿ ವಸೂಲಿ ಮಾಡುತ್ತಿರುವ ಬಹಳಷ್ಟು ಖಾಸಗಿ ಶಾಲೆಗಳಿವೆ. ಪ್ರತಿಷ್ಠಿತ ಶಾಲೆಗಳು ಇದನ್ನು ಉದ್ಯಮವನ್ನಾಗಿಸಿಕೊಂಡಿದೆ. ಇದರ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಬಡ್ಡಿ ದಂಧೆ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಶಾಲೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
-ಬಿ.ಎನ್.ಯೋಗಾನಂದ, ಸಂಚಾಲಕ, ಖಾಸಗಿ ಶಾಲಾ ಪೋಷಕರ ಸಂಘ