ದಿಂಬಿನ ಮೇಲೆ ಕೂದಲು; ಋತುಮಾನದ ಕೂದಲುದುರುವಿಕೆ ಅಥವಾ ರೋಗವೆಂದು ಗುರುತಿಸುವುದು ಹೇಗೆ?

ಸಾಂದರ್ಭಿಕ ಚಿತ್ರ | Photo Credit : magnific.com
ಯಾವ ಸಂದರ್ಭದಲ್ಲಿ ಕೂದಲುದುರುವಿಕೆ ಸಾಮಾನ್ಯವಲ್ಲ ಮತ್ತು ವೈದ್ಯರನ್ನು ಸಂಪರ್ಕಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನಿರ್ದಿಷ್ಟ ಋತುಗಳಲ್ಲಿ ನಮ್ಮ ದಿಂಬು ಮತ್ತು ಬಾಚಣಿಗೆಯಿಂದ ತೊಡಗಿ, ಸ್ನಾನದ ಮನೆಯ ನೀರು ಹೋಗುವ ಜಾಗದವರೆಗೆ ಕೂದಲುಗಳು ಉದುರುವುದನ್ನು ಗಮನಿಸಬಹುದು. ಕಾಲೋಚಿತವಾಗಿ ಕೂದಲುದುರುವಿಕೆ ಹೆಚ್ಚಾಗಬಹುದು. ಆದರೆ, ಎಲ್ಲಾ ಸಮಯದಲ್ಲೂ ಕೂದಲು ಉದುರುತ್ತಿದ್ದರೆ ಚಿಂತಿಸಬೇಕೇ?
23 ವರ್ಷಗಳ ಶಸ್ತ್ರಚಿಕಿತ್ಸೆಯ ಅನುಭವ ಹೊಂದಿರುವ ಕ್ರೌನ್-ದಿ ಹೇರ್ ಟ್ರಾನ್ಸ್ಪ್ಲಾಂಟ್ ಎಕ್ಸ್ಪರ್ಟ್ಸ್ನ ಸಂಸ್ಥಾಪಕ ಮತ್ತು ಸೆಲೆಬ್ರಿಟಿ ಹೇರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ಮಾಯಾಂಕ್ ಸಿಂಗ್ ಅವರ ಪ್ರಕಾರ, ಚಳಿಗಾಲದಲ್ಲಿ ಇಂತಹ ಸಮಸ್ಯೆ ಹೊಂದಿದವರು ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಾರೆ. ಅವರ ಪ್ರಕಾರ, ಆರೋಗ್ಯ ಸಮಸ್ಯೆ ಇದೆಯೇ ಎನ್ನುವುದನ್ನು ಉದುರುವ ಕೂದಲಿನ ಪ್ರಮಾಣದ ಮೇಲೆ ಹೇಳಲಾಗದು. ಆದರೆ ಉದುರುವ ವಿಧಾನದ ಮೇಲೆ ಹೇಳಬಹುದು.
ಕಾಲೋಚಿತ ಕೂದಲು ಉದುರುವಿಕೆ ಸಾಮಾನ್ಯವೆ?
ಋತುಮಾನಕ್ಕೆ ಅನುಗುಣವಾಗಿ ಕೂದಲುದುರುವಿಕೆ ಹೆಚ್ಚಾಗಬಹುದು. ಕೂದಲಿನ ಕಿರುಚೀಲಗಳು (follicles) ಜೀವನದುದ್ದಕ್ಕೂ ಬೆಳವಣಿಗೆ ಮತ್ತು ವಿಶ್ರಾಂತಿಯ ಹಂತಗಳ ಮೂಲಕ ಸಾಗುತ್ತವೆ. ಹಗಲಿನ ಅವಧಿಯ ಬದಲಾವಣೆ ಸೇರಿದಂತೆ ವಿವಿಧ ಅಂಶಗಳು ಕೂದಲಿನ ಬೆಳವಣಿಗೆ ಮತ್ತು ಉದುರುವಿಕೆಯ ಚಕ್ರದ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಕೂದಲುಗಳು ಒಂದೇ ಸಮಯದಲ್ಲಿ ವಿಶ್ರಾಂತಿಯ ಹಂತಕ್ಕೆ (telogen phase) ಪ್ರವೇಶಿಸುವುದರಿಂದ ನಂತರ ಹೆಚ್ಚು ಕೂದಲು ಉದುರಬಹುದು.
ಆದರೆ, ಋತುಮಾನಿಕ ಕೂದಲುದುರುವಿಕೆಯ ನಿಖರ ಕಾರಣ ಮತ್ತು ಅದರ ಪ್ರಮಾಣ ಎಲ್ಲರಲ್ಲೂ ಒಂದೇ ಆಗಿರುವುದಿಲ್ಲ. ಆದ್ದರಿಂದ, ಇದನ್ನು ಯಾವಾಗಲೂ ವೈದ್ಯಕೀಯ ಸಮಸ್ಯೆ ಎಂದು ಪರಿಗಣಿಸಬೇಕಾಗಿಲ್ಲ.
ಆರೋಗ್ಯ ಸಮಸ್ಯೆ ಎಂದು ತಿಳಿಯುವುದು ಹೇಗೆ?
ವೈದ್ಯರ ಪ್ರಕಾರ, 'ಟೆಲೋಜೆನ್ ಎಫ್ಲುವಿಯಮ್' ಎಂಬ ಸ್ಥಿತಿಯಲ್ಲಿಯೂ ಕೂದಲು ಉದುರುತ್ತದೆ. ಕಾಲೋಚಿತ ಕೂದಲುದುರುವಿಕೆಗೂ 'ಟೆಲೋಜೆನ್ ಎಫ್ಲುವಿಯಮ್'ಗೂ ಮುಖ್ಯ ವ್ಯತ್ಯಾಸವೆಂದರೆ ಸಮಯ ಮತ್ತು ತೀವ್ರತೆ. ಋತುಮಾನಿಕ ಉದುರುವಿಕೆ ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ 'ಟೆಲೋಜೆನ್ ಎಫ್ಲುವಿಯಮ್' ಒಂದು ವೈದ್ಯಕೀಯ ಸ್ಥಿತಿ. ಸಾಮಾನ್ಯವಾಗಿ ಒತ್ತಡ, ಅನಾರೋಗ್ಯ ಅಥವಾ ಹಠಾತ್ ದೈಹಿಕ ಆಘಾತದಿಂದ ಉಂಟಾಗುವ ಕೂದಲುದುರುವಿಕೆ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಹಲವು ತಿಂಗಳುಗಳ ಕಾಲ ಮುಂದುವರಿಯಬಹುದು.
ಸಾಮಾನ್ಯವಾಗಿ 'ಟೆಲೋಜೆನ್ ಎಫ್ಲುವಿಯಮ್' ಸಾಮಾನ್ಯ ಉದುರುವಿಕೆಗಿಂತ ಭಾರವಾದ ಮತ್ತು ಹೆಚ್ಚು ಆತಂಕಕಾರಿ. ಸ್ನಾನ ಮಾಡುವಾಗ, ದಿಂಬಿನ ಮೇಲೆ ಹೆಚ್ಚುವರಿ ಎಳೆಗಳನ್ನು ಬಿಡುವುದರ ಜೊತೆಗೆ, ನೆತ್ತಿಯ ಮೇಲಿನ ವಿಭಜನೆ ಹೆಚ್ಚು ಗೋಚರವಾಗಬಹುದು.
ಕೂದಲುದುರುವಿಕೆ ಬಗ್ಗೆ ಯಾವಾಗ ಆತಂಕ ಪಡಬೇಕು?
ಕೂದಲು ಉದುರುವಿಕೆ ಮೂರು ತಿಂಗಳು ಮೀರಿ ಮುಂದುವರಿದರೆ
ಕೂದಲು ನಿರ್ದಿಷ್ಟ ಭಾಗದಲ್ಲಿ ಮಾತ್ರ ಉದುರುತ್ತಿದ್ದರೆ
ತಲೆಯ ಚರ್ಮ ಹೆಚ್ಚು ಎದ್ದು ಕಾಣುತ್ತಿದ್ದರೆ
ಕೂದಲಿನ ಸಾಂದ್ರತೆಯಲ್ಲಿ ಗಮನಾರ್ಹ ಇಳಿಕೆ ಕಂಡರೆ
ಕೂದಲು ಅತಿಯಾಗಿ ಉದುರುತ್ತಿದ್ದರೆ
ಅನಾರೋಗ್ಯ, ತೀವ್ರ ಜ್ವರ, ಕಠಿಣ ಡಯಟ್, ಹೆರಿಗೆ, ಹೊಸ ಔಷಧಿ ಸೇವನೆ ಅಥವಾ ತೀವ್ರ ಒತ್ತಡದ ನಂತರ ಕೂದಲು ಉದುರಲು ಪ್ರಾರಂಭಿಸಿದರೆ
ಮೇಲಿನ ಸೂಚನೆಗಳು ತಾತ್ಕಾಲಿಕ ಋತುಮಾನಿಕ ಉದುರುವಿಕೆ ಮತ್ತು ಪತ್ತೆಯಾಗದ ಯಾವುದೋ ಆರೋಗ್ಯ ಸಮಸ್ಯೆಯಿಂದಾಗಿ ಉಂಟಾಗುವ ಕೂದಲುದುರುವಿಕೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲಗಳಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ವೃತ್ತಿಪರ ಸಲಹೆಗಳಿಗೆ ಪರ್ಯಾಯವಲ್ಲ. ಕೂದಲಿಗೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.






