ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್ ; 'ಬಾಲಿವುಡ್ ಬಾದ್ ಶಾ'ಗೆ ಮಂಗಳೂರಿನ ಜೊತೆಗಿದೆ ಹಳೇ ನಂಟು !

ಶಾರುಖ್ ಖಾನ್ | Photo Credit: NDTV
ಮಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಜೂ. 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಮೊದಲೇ ನೋಂದಣಿ ಮಾಡಿಕೊಂಡಿರುವ ಅತಿಥಿಗಳು ಭಾಗವಹಿಸಲಿದ್ದಾರೆ.
ಬಾಲಿವುಡ್ ಗೂ ಕರಾವಳಿಗೂ ನಂಟು
ಬಾಲಿವುಡ್ ಮತ್ತು ಕರ್ನಾಟಕದ ಕರಾವಳಿ ಪ್ರದೇಶಕ್ಕೂ ವಿಶೇಷ ನಂಟಿದೆ. ಬಾಲಿವುಡ್ ನ ಅನೇಕ ಪ್ರಸಿದ್ಧ ತಾರೆಯರು ಕರಾವಳಿ ಮೂಲದವರಾಗಿದ್ದಾರೆ. ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿ ಸೇರಿದಂತೆ ಹಲವರು ಕರಾವಳಿಯೊಂದಿಗೆ ಸಂಬಂಧ ಹೊಂದಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೇರಿದ ಅನೇಕರು ಬಾಲಿವುಡ್ ನಲ್ಲಿ ಹೆಸರು ಮಾಡುತ್ತಿರುವ ಸಂದರ್ಭದಲ್ಲಿ, ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಒಮ್ಮೆ ತಾವು “ಮಂಗಳೂರಿನ ಮಗ” ಎಂದು ಹೇಳಿಕೊಂಡಿದ್ದು ಗಮನಾರ್ಹ.
ತಮ್ಮ ತಾಯಿ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲರು ಎಂದು ಹೇಳಿದ್ದ ಅವರು, ಮಂಗಳೂರಿಗೂ ತಮಗೂ ಇರುವ ಭಾವನಾತ್ಮಕ ನಂಟಿನ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ.
ಶಾರುಖ್ ಬೆಳೆದಿರುವುದು ಮಂಗಳೂರಿನಲ್ಲಿ!
“ನನಗೂ ಕರ್ನಾಟಕಕ್ಕೂ ನಂಟಿದೆ. ನಾನು ಮಂಗಳೂರಿನಲ್ಲಿ ಬೆಳೆದವನು. ಮಂಗಳೂರಿನಲ್ಲಿ ನನ್ನನ್ನು ನನ್ನ ಅಜ್ಜಿ ದತ್ತು ತೆಗೆದುಕೊಂಡಿದ್ದರು. ನನ್ನ ಅಜ್ಜಿಗೆ ಗಂಡುಮಕ್ಕಳಿರಲಿಲ್ಲ. ಹಾಗಾಗಿ ಅವರು ತಮ್ಮ ಮಗಳಿಂದ ಮೊಮ್ಮಗನಾದ ನನ್ನನ್ನು ದತ್ತು ಪಡೆದಿದ್ದರು” ಎಂದು ಶಾರುಖ್ ಖಾನ್ ಈ ಹಿಂದೆ ಹೇಳಿಕೊಂಡಿದ್ದರು.
“ಐದು ವರ್ಷದ ತನಕ ಈ ಹುಡುಗ ನನ್ನವನು” ಎಂದು ಶಾರುಖ್ ಅವರ ತಾಯಿಯ ತಾಯಿ ಹೇಳುತ್ತಾ ಅವರನ್ನು ತಮ್ಮ ಬಳಿಯೇ ಸಾಕಿದ್ದರು. ಬಾಲ್ಯದ ಮೊದಲ ಐದು ವರ್ಷಗಳನ್ನು ಮಂಗಳೂರಿನಲ್ಲೇ ಕಳೆದಿದ್ದ ಶಾರುಖ್, ತಮ್ಮ ಬಾಲ್ಯದ ಬಹುತೇಕ ಫೋಟೊಗಳೂ ಮಂಗಳೂರಿನಲ್ಲಿಯೇ ತೆಗೆದವು ಎಂದು ಹೇಳಿಕೊಂಡಿದ್ದಾರೆ.
“ಐದು ವರ್ಷದ ತನಕ ಅಜ್ಜಿ ನನ್ನನ್ನು ತಮ್ಮ ಮಗನಂತೆ ನೋಡಿಕೊಂಡರು. ಆದ್ದರಿಂದ ನನ್ನ ಬಾಲ್ಯದ ಎಲ್ಲ ಫೋಟೊಗಳೂ ಮಂಗಳೂರಿನಲ್ಲಿಯೇ ತೆಗೆದಿದ್ದು” ಎಂದು ಅವರು ವಿವರಿಸಿದ್ದರು.
ಬಾಲ್ಯದಲ್ಲಿ ಮಂಗಳೂರಿಗೆ ಬರಲು ಕಾರಣವೇನು?
ಶಾರುಖ್ ಅವರ ಅಜ್ಜಿ ಮಂಗಳೂರಿನಲ್ಲಿ ನೆಲೆಸಿದ್ದರ ಹಿಂದೆ ಕುಟುಂಬದ ಹಿನ್ನೆಲೆಯೂ ಇದೆ. ಅವರ ತಾಯಿಯ ತಂದೆ ಇಫ್ತಿಕಾರ್ ಅಹ್ಮದ್ ಅವರು 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಕಾರಣದಿಂದ ಕುಟುಂಬ ಮಂಗಳೂರಿನಲ್ಲಿ ವಾಸವಾಗಿತ್ತು.
1965ರ ನವೆಂಬರ್ 2ರಂದು ದಿಲ್ಲಿಯಲ್ಲಿ ಜನಿಸಿದ ಶಾರುಖ್ ಅವರನ್ನು ಬಳಿಕ ಅವರ ತಾಯಿ ಮಂಗಳೂರಿಗೆ ಕರೆತಂದಿದ್ದರು. ಆಗ ಅಜ್ಜಿ ತಮ್ಮ ಬಳಿ ಇಟ್ಟುಕೊಂಡು ಸಾಕಿದ್ದು, ಬಾಲ್ಯದ ಮೊದಲ ಐದು ವರ್ಷಗಳನ್ನು ಅವರು ಮಂಗಳೂರಿನಲ್ಲಿಯೇ ಕಳೆದಿದ್ದರು.
ತಮ್ಮ ಬಾಲ್ಯದ ಚಿತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಾಗಲೂ, ಆ ಚಿತ್ರಗಳು ಮಂಗಳೂರಿನಲ್ಲಿ ತೆಗೆದವು ಎಂದು ಶಾರುಖ್ ಸ್ವತಃ ಸ್ಪಷ್ಟಪಡಿಸಿದ್ದರು. “ನನ್ನ ಅಜ್ಜ ಮಂಗಳೂರು ಬಂದರಿನಲ್ಲಿ ಇಂಆಬ್ಜಿನಿಯರ್ ಆಗಿದ್ದ ಕಾರಣ ನಾನು ಬಾಲ್ಯದ ಕೆಲವು ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದೇನೆ” ಎಂದು ಅವರು ಹೇಳಿದ್ದರು.
ಬೆಂಗಳೂರಿಗೂ ಶಾರುಖ್ ಗೂ ಇರುವ ಸಂಬಂಧವೇನು?
ಮಂಗಳೂರಿನೊಂದಿಗೆ ಮಾತ್ರವಲ್ಲ, ಬೆಂಗಳೂರಿನೊಂದಿಗೂ ಶಾರುಖ್ ಖಾನ್ ಅವರಿಗೆ ವಿಶೇಷ ನಂಟಿದೆ. ಬೆಂಗಳೂರಿಗೆ ಭೇಟಿ ನೀಡಿರುವುದಾಗಾ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಅವರು, ನಂದಿದುರ್ಗ ರಸ್ತೆ, ಜಯಮಹಲ್ ಎಕ್ಸ್ಟೆನ್ಷನ್ ಹಾಗೂ ಪ್ಯಾಲೇಸ್ ರಸ್ತೆ ಪ್ರದೇಶಗಳು ತಮ್ಮ ನೆನಪಿನ ಭಾಗವಾಗಿವೆ ಎಂದು ಹೇಳಿದ್ದರು.
ಕನ್ನಡ ಏಕೆ ಕಲಿಯಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ಬಾಲ್ಯದಲ್ಲಿಯೇ ತಾಯಿ ನನ್ನನ್ನು ದಿಲ್ಲಿಗೆ ಕರೆದುಕೊಂಡು ಹೋದರು. ಹೀಗಾಗಿ ಕನ್ನಡ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಾಯಿ ಕನ್ನಡವನ್ನು ತುಂಬಾ ಚೆನ್ನಾಗಿ ಮಾತನಾಡುತ್ತಾರೆ” ಎಂದು ತಿಳಿಸಿದ್ದರು.
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಬಾಲಿವುಡ್ನಲ್ಲಿ ಅವಕಾಶ ಪಡೆಯುವ ಕನಸಿನೊಂದಿಗೆ ಮುಂಬೈಗೆ ಕಳುಹಿಸಿದ್ದ ತಮ್ಮ ಮೊದಲ ಫೋಟೊವನ್ನು ಬೆಂಗಳೂರಿನಲ್ಲಿಯೇ ತೆಗೆಸಿದ್ದೆ ಎಂದು ಶಾರುಖ್ ಈ ಹಿಂದೆ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ನೆನಪಿಸಿಕೊಂಡಿದ್ದರು.






