ಆ ಶೆಹ್ಲಾ ದೇಶದ್ರೋಹಿ, ಈ ಶೆಹ್ಲಾ ದೇಶಭಕ್ತೆ!
►ಮೋದಿ ಭಟ್ಟಂಗಿ ಶೆಹ್ಲಾ ವಿರುದ್ಧದ ಕೇಸು ಫಿನಿಷ್ ! ► ವಿದ್ಯಾರ್ಥಿ ನಾಯಕಿಯ ದಿಢೀರ್ ಹೃದಯ ಪರಿವರ್ತನೆ

ಶೆಹ್ಲಾ ರಶೀದ್ 2017. ವಿದ್ಯಾರ್ಥಿ ನಾಯಕಿ, ಪ್ರಜಾಪ್ರಭುತ್ವದ ಆಶಯಗಳಿಗಾಗಿ ಹೋರಾಡುವ ಆಕ್ಟಿವಿಸ್ಟ್, ಕೋಮುವಾದಿ ರಾಜಕೀಯವನ್ನು ಖಂಡತುಂಡವಾಗಿ ವಿರೋಧಿಸುವ ಸೆಕ್ಯುಲರ್ ಹೋರಾಟಗಾರ್ತಿ, ಬಿಜೆಪಿ, ಆರೆಸ್ಸೆಸ್ ಹಾಗು ಮೋದೀಜಿ ಆಡಳಿತದ ಖಟ್ಟರ್ ವಿರೋಧಿ, ಬಿಜೆಪಿ ಸರಕಾರದ ನೀತಿಗಳ ಕಟು ಟೀಕಾಕಾರ್ತಿ , ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ವಿರೋಧಿಸಿದ ಕಾಶ್ಮೀರಿ ಯುವತಿ.
ಶೆಹ್ಲಾ ರಶೀದ್ 2023, ಪ್ರಧಾನಿ ಮೋದಿಜಿಯ ಖಟ್ಟರ್ ಭಕ್ತೆ, ಮೋದಿಜಿಯ ನೀತಿಗಳ ಬಗ್ಗೆ ಸ್ವತಃ ಮೋದಿಜಿಗೇ ಮುಜುಗರ ಆಗುವಷ್ಟು ಗುಣಗಾನ ಮಾಡುವ ಅಭಿಮಾನಿ, ಮೋದೀಜಿ ಆಡಳಿತದಲ್ಲಿ ಭಾರತ ಅದೆಷ್ಟು ಸುಂದರವಾಗಿದೆ ಎಂದು ವಿವರಿಸುವ ಪುಸ್ತಕದ ಲೇಖಕಿ, ಜಾತ್ಯತೀತ ಹೋರಾಟಗಾರರನ್ನು ಲೇವಡಿ ಮಾಡುವ ವಾಗ್ಮಿ, ವಿಶ್ಲೇಷಕಿ, ಕಾಶ್ಮೀರ ಉದ್ದಾರ ಆಗಿದ್ದೇ ಮೋದೀಜಿ ಅದರ ರಾಜ್ಯ ಸ್ಥಾನಮಾನ ಕಿತ್ತುಕೊಂಡು ಅಲ್ಲಿನ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಎಂದು ವಾದಿಸುವ ಆರೆಸ್ಸೆಸ್ , ಬಿಜೆಪಿ ಪಾಲಿನ ಮಾದರಿ ಕಾಶ್ಮೀರಿ ದೇಶಭಕ್ತೆ.
ಆ ಶೆಹ್ಲಾ, ಈ ಶೆಹ್ಲಾ ಇಬ್ಬರೂ ಒಂದೇ. ಆದರೂ ಈ ಇಬ್ಬರೂ ಒಂದೇ ಅಲ್ಲ. ಆ ಶೆಹ್ಲಾ ವ್ಯವಸ್ಥೆಯ ವಿರುದ್ಧ ಆಕ್ರೋಶದಿಂದ ಕುದಿಯುತ್ತಿದ್ದರೆ, ಈ ಶೆಹ್ಲಾ ಅದೇ ವ್ಯವಸ್ಥೆಯ ಭಾಗ. ಆ ಶೆಹ್ಲಾ ಅಂದ್ರೆ ಅನ್ಯಾಯದ ವಿರುದ್ಧದ ಧ್ವನಿ, ಈ ಶೆಹ್ಲಾ ಆ ಅನ್ಯಾಯವನ್ನೇ ನ್ಯಾಯ ಎಂದು ವಿಶ್ಲೇಷಿಸುವ ಜಾಣೆ. ಆ ಶೆಹ್ಲಾ ಬೀದಿಯಲ್ಲಿ ನಿಂತು ಹೋರಾಡುವ ಹೋರಾಟಗಾರ್ತಿ, ಈ ಶೆಹ್ಲಾ ದಿಲ್ಲಿಯಲ್ಲಿ ಆಡಳಿತದ ಮೊಗಸಾಲೆಯಲ್ಲಿ ಕಾಣಿಸುವ ಕಾಶ್ಮೀರಿ ಸುಂದರಿ.
ಈಗ ಈ ಶೆಹ್ಲಾ ರಶೀದ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ 2019ರಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಹ್ಲಾ ರಶೀದ್ ಅವರ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಲು ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಫೆಬ್ರವರಿ 27 ರ ಗುರುವಾರ ಸ್ವೀಕರಿಸಿದೆ.
ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶದ್ರೋಹ), 153ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು), 504 (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಶೆಹ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಸೆಪ್ಟೆಂಬರ್ 2019ರಲ್ಲಿ, ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಶೆಹ್ಲ ರಶೀದ್ ವಿರುದ್ಧ ದೇಶದ್ರೋಹ ಮತ್ತು ಇತರ ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನಿಡಿದ್ದ 370ನೇ ವಿಧಿಯನ್ನು ಆಗಸ್ಟ್ 18, 2019ರಂದು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಕಣಿವೆಯಲ್ಲಿ ಮಕ್ಕಳು ಮತ್ತು ಯುವಕರ ಮೇಲೆ ಸಶಸ್ತ್ರ ಪಡೆಗಳು ದೌರ್ಜನ್ಯವೆಸಗಿವೆ ಎಂದು ಶೆಹ್ಲಾ ರಶೀದ್ ಆರೋಪಿಸಿದ್ದರು.
ಇನ್ನೊಂದೆಡೆ, 2015ರ ಪಾಟಿದಾರ್ ಮೀಸಲಾತಿ ಆಂದೋಲನದ ನೇತೃತ್ವ ವಹಿಸಿದ್ದ ಹಾಲಿ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಮತ್ತು ಇತರ ನಾಲ್ವರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಲು ಅಹಮದಾಬಾದ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಗುಜರಾತ್ ಸರ್ಕಾರಕ್ಕೆ ಅನುಮತಿ ನೀಡಿದೆ.
ಈ ಹಾರ್ದಿಕ್ ಪಟೇಲ್ ಪಾಟೀದಾರ್ ಸಮುದಾಯದ ಮೀಸಲಾತಿ ಆಂದೋಲನದ ಮೂಲಕ ಜನಪ್ರಿಯತೆ ಗಳಿಸಿ , ಅಲ್ಲಿಂದ ಕಾಂಗ್ರೆಸ್ ಗೆ ಹೋಗಿ ಬಳಿಕ ಬಿಜೆಪಿ ಸೇರಿ ಶಾಸಕರಾದವರು. ಈ ಬೆಳವಣಿಗೆಗಳ ಬಳಿಕ " ನೀವಿರುವ ಜಾಗ ಬದಲಾಯಿಸಿದರೆ, ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಹೇಳಿದ್ದಾರೆ.
“ಶೆಹ್ಲಾ ರಶೀದ್ ವಿರುದ್ಧದ 2019ರ ದೇಶದ್ರೋಹ ಪ್ರಕರಣವನ್ನು ದೆಹಲಿ ಪೊಲೀಸರು ಹಿಂತೆಗೆದುಕೊಂಡಿದ್ದಾರೆ; ಹಾರ್ದಿಕ್ ಪಟೇಲ್ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಲು ಗುಜರಾತ್ ಸರ್ಕಾರಕ್ಕೆ ಅಹಮದಾಬಾದ್ ನ್ಯಾಯಾಲಯ ಅನುಮತಿ ನೀಡಿದೆ. ಉಮರ್ ಖಾಲಿದ್‌ನಂತೆ ಬಾಗಲು ನಿರಾಕರಿಸಿದವರು ಇನ್ನೂ 5 ವರ್ಷಗಳಿಂದ ಜಾಮೀನು ಸಹ ಇಲ್ಲದೆ ಜೈಲಿನಲ್ಲಿದ್ದಾರೆ. ಕಾನೂನು ತನ್ನದೇ ಆದ ಹಾದಿ ಹಿಡಿಯುತ್ತಿದೆಯೇ ಅಥವಾ ಇದು ‘ವಾಷಿಂಗ್ ಮೆಷಿನ್’ ಪಾತ್ರವನ್ನು ನಿರ್ವಹಿಸುತ್ತಿರುವ ರಾಜಕೀಯವೇ? ಸಂದೇಶವು ಸ್ಪಷ್ಟವಾಗಿದೆ: ನೀವಿರುವ ಜಾಗ ಬದಲಾಯಿಸಿ ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಹೇಳಿದ್ದಾರೆ.
ಒಂದು ಕಡೆ ಮುಹಮ್ಮದ್ ಝುಬೇರ್ ರಂತಹ ಪತ್ರಕರ್ತರ ಮೇಲೆ ಇದ್ದಿದ್ದನ್ನು ಇದ್ದ ಹಾಗೆ ವರದಿ ಮಾಡಿದ್ದಕ್ಕೆ ಕೇಸುಗಳು ಬೀಳುತ್ತಿವೆ. ಉಮರ್ ಖಾಲಿದ್ ರಂತಹ ವಿದ್ಯಾರ್ಥಿ ನಾಯಕರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಜಾಮೀನು ವಿಚಾರಣೆಗೆ ಕೋರ್ಟ್ ನಲ್ಲಿ ದಿನಾಂಕ ಸಿಗೋದೇ ದುಸ್ತರವಾಗಿದೆ. ಸಿದ್ದೀಕ್ ಕಪ್ಪನ್ ರಂತಹ ಪತ್ರಕರ್ತರು ವರದಿ ಮಾಡಲು ಹೋಗಿದ್ದಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ.
ಇನ್ನೊಂದೆಡೆ ದಿಢೀರನೇ ಹೃದಯ ಪರಿವರ್ತನೆಯಾಗಿ ತಾನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ನಾಯಕ ಹಾಗು ಸರಕಾರವನ್ನೇ ಅವರಿಗೇ ಮುಜುಗರವಾಗುವಷ್ಟು ಪ್ರಶಂಸಿಸಲು ಪ್ರಾರಂಭಿಸಿದ ಯುವತಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತವೆ. ಈ ಹಿಂದೆ ದೇಶದ್ರೋಹ ಕೇಸು ಎದುರಿಸುತ್ತಿದ್ದ ಆಕೆಯೇ ಪ್ರಧಾನಿಯ ಪ್ರಮಾಣ ವಚನ ಸಮಾರಂಭದಲ್ಲಿ ಅತಿಥಿ ಆಗ್ತಾರೆ. ಆಕೆ ಪ್ರಧಾನಿಯ, ಬಿಜೆಪಿಯ, ಸಂಘ ಪರಿವಾರದ ಎಲ್ಲ ನಡೆಗಳನ್ನು ಇನ್ನಿಲ್ಲದಂತೆ ಹೊಗಳಲು ಪ್ರಾರಂಭಿಸುತ್ತಾರೆ. ಈಗ ಆಗ್ತಾ ಇರೋದೇ ಸರಿ, ನಾವೇ ಸರಿ ಇರಲಿಲ್ಲ, ನಾವೇ ಬದಲಾಗಬೇಕು ಎಂದು ಪುಸ್ತಕ ಬರೀತಾರೆ. ಅವರ ಮೇಲಿರುವ ಅತ್ಯಂತ ಕಠಿಣ ಕಾಯ್ದೆಗಳ ಕೇಸು ಹೂವಿನಂತೆ ಸರಿದು ಹೋಗುತ್ತದೆ.
ಇದೆಲ್ಲವೂ ಬರೀ ಕಾಕತಾಳೀಯವೇ ?







