900 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ಬಾಸ್ಗೆ ಶಾಕ್; ಸ್ವತಃ ಕೆಲಸ ಕಳೆದುಕೊಂಡ ಸಿಇಒ ವಿಶಾಲ್ ಗರ್ಗ್

ಸಿಇಒ ವಿಶಾಲ್ ಗರ್ಗ್ | Photo Credit : NDTV
ಅಮೆರಿಕದಲ್ಲಿ ಝೂಮ್ ಕರೆಯ ಮೂಲಕ ಸುಮಾರು 900 ಉದ್ಯೋಗಿಗಳನ್ನು ವಜಾಗೊಳಿಸಿ ಕುಖ್ಯಾತಿ ಗಳಿಸಿದ್ದ ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್ ಈಗ ತಮ್ಮ ಸಿಇಒ ಸ್ಥಾನವನ್ನೇ ಕಳೆದುಕೊಂಡಿದ್ದಾರೆ.
2021ರಲ್ಲಿ ಝೂಮ್ ಕರೆಯಲ್ಲಿ ಸುಮಾರು 900 ಉದ್ಯೋಗಿಗಳನ್ನು ವಜಾಗೊಳಿಸಿ ಕುಖ್ಯಾತಿ ಗಳಿಸಿದ್ದ ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್ ಈಗ ತಮ್ಮ ಸ್ವಂತ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಆಗಸ್ಟ್ 3ರಂದು ಬೆಟರ್ ಹೋಮ್ & ಫೈನಾನ್ಸ್ನ ಸಿಇಒ ಹುದ್ದೆಯಿಂದ ಗರ್ಗ್ ಅವರನ್ನು ತೆಗೆದುಹಾಕಲಾಗಿದೆ. ಹೆಡ್ಜ್ ಫಂಡ್ ಮ್ಯಾನೇಜರ್ ಡೇನಿಯಲ್ ಲೂಯಿಸ್ ಕಂಪೆನಿಯ ಆಡಳಿತ ಮಂಡಳಿಗೆ ಸೇರಿದ ಕೆಲವೇ ದಿನಗಳಲ್ಲಿ ಸಿಇಒ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಆದರೆ, ತಮ್ಮನ್ನು ತೆಗೆದುಹಾಕಿರುವ ಸಮಯದ ಬಗ್ಗೆ ವಿಶಾಲ್ ಆಕ್ರೋಶಗೊಂಡಿದ್ದಾರೆ. ತಮಗೆ ವಿಶ್ವಾಸದ್ರೋಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಲೂಯಿಸ್ ತಮ್ಮನ್ನು ಸಂಪರ್ಕಿಸಿ, ವೆಚ್ಚ ಕಡಿಮೆ ಮಾಡುವುದು ಮತ್ತು ಕಂಪನಿಯ ಹಣಕಾಸು ಸುಧಾರಿಸುವ ಬಗ್ಗೆ ಸಲಹೆಗಳನ್ನು ಕೇಳಿದ್ದರು. ಮಂಡಳಿಯಲ್ಲಿ ಅವರಿಗೆ ಸ್ಥಾನ ನೀಡುವಷ್ಟು ನಂಬಿಕೆ ಬೆಳೆಸಿಕೊಂಡಿದ್ದರು. ಆದರೆ, ಇದೀಗ ಲೂಯಿಸ್ ಕಂಪೆನಿಯ ಇತರ ನಿರ್ದೇಶಕರನ್ನು ಸಂಪರ್ಕಿಸಿ ವಿಶ್ವಾಸ ಗಳಿಸಿ, ಅಂತಿಮವಾಗಿ ತಮ್ಮನ್ನೇ ಸಿಇಒ ಸ್ಥಾನದಿಂದ ತೆಗೆದುಹಾಕಿಸಿದ್ದಾರೆ ಎಂದು ವಿಶಾಲ್ ಆರೋಪಿಸಿದ್ದಾರೆ.
“ಲೂಯಿಸ್ ನನಗೆ ಮೋಸ ಮಾಡಿದ್ದಾರೆ. ಕಂಪೆನಿಯ ಕಾರ್ಯಯೋಜನೆ ಇಷ್ಟವಾಗಿದೆ ಎಂದು ನನಗೆ ಹೇಳಿದ್ದರು. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ಪ್ರಶಂಸಿಸಿದ್ದರು. ಅದನ್ನೇ ಬಳಸಿಕೊಂಡು ಮಂಡಳಿಗೆ ಸೇರಿದರು ಮತ್ತು ನಮ್ಮ ವಿಶ್ವಾಸವನ್ನು ಗಳಿಸಿದರು” ಎಂದು ವಿಶಾಲ್ ಹೇಳಿದ್ದಾರೆ.
ಕಂಪೆನಿಯಲ್ಲಿ ಕೆಲವು ಪ್ರಕ್ಷುಬ್ಧ ಅವಧಿಯ ನಂತರ ವಿಶಾಲ್ ನಿರ್ಗಮನವಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಡಮಾನ ಮರುಹಣಕಾಸು (mortgage refinancing) ಹೆಚ್ಚುತ್ತಿದ್ದಾಗ ಮತ್ತು ಬಡ್ಡಿದರಗಳು ಶೇ 3ಕ್ಕಿಂತ ಕಡಿಮೆಯಾಗಿದ್ದಾಗ ಕಂಪೆನಿಯು ಭಾರಿ ಮೌಲ್ಯಮಾಪನವನ್ನು (ಹೂಡಿಕೆದಾರರಿಂದ ಸಕಾರಾತ್ಮಕ ಅಭಿಪ್ರಾಯ) ಪಡೆದಿತ್ತು. ಒಂದು ಕಾಲದಲ್ಲಿ ಬೆಟರ್ ಕಂಪೆನಿ 8 ಶತಕೋಟಿ ಡಾಲರ್ ಮೌಲ್ಯಮಾಪನ ಹೊಂದಿತ್ತು. ಆದರೆ, ಈ ಆದಾಯ ಉಳಿಯಲಿಲ್ಲ. ಅಡಮಾನ ದರಗಳು ಶೇ 7ಕ್ಕೇರಿದಾಗ ಮರುಹಣಕಾಸು ಚಟುವಟಿಕೆ ಕುಸಿಯಿತು ಮತ್ತು ಬೆಟರ್ ನ ವ್ಯವಹಾರ ನಷ್ಟಕ್ಕೊಳಗಾಯಿತು. ಅದರ ವಾರ್ಷಿಕ ಮಾರಾಟವು 2021ರಲ್ಲಿ ಸುಮಾರು 1.5 ಶತಕೋಟಿ ಡಾಲರ್ನಿಂದ 2023ರಲ್ಲಿ ಕೇವಲ 70 ದಶಲಕ್ಷ ಡಾಲರ್ಗೆ ಕುಸಿದಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 300 ದಶಲಕ್ಷ ಡಾಲರ್ಗೆ ಕುಸಿದಿದೆ.
ವಿಶಾಲ್ ಅವರ ಅಧಿಕಾರಾವಧಿಯಲ್ಲಿ ಕಂಪನಿ ಅನೇಕ ವಿವಾದಗಳನ್ನು ಎದುರಿಸಿತ್ತು. 2021ರ ಝೂಮ್ ವಜಾಗೊಳಿಸುವಿಕೆ ಕಂಪೆನಿಗೆ ದೊಡ್ಡ ಮುಜುಗರ ತಂದಿತ್ತು. ಆ ಸಂದರ್ಭದಲ್ಲಿ ವಿಶಾಲ್ ಗರ್ಗ್ ಅವರನ್ನು ಗೈರುಹಾಜರಿ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ನಂತರ ಬೆಟರ್ ಕಂಪನಿ ವಿಸ್ಲ್ಬ್ಲೋವರ್ ಮೊಕದ್ದಮೆ, ಅಮೆರಿಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ನಿಂದ ತನಿಖೆ, 2023ರ SPAC ವಿಲೀನ ಮೊದಲಾದ ಸಂಕಷ್ಟಗಳನ್ನು ಎದುರಿಸಿದ ಮೇಲೆ ಷೇರುಗಳು ಶೇ 93ರಷ್ಟು ಕುಸಿದವು.
ಈ ಹಿನ್ನಡೆಗಳ ನಂತರವೂ ತಾವು ಬೆಟರ್ ಅನ್ನು ಉತ್ತಮ ಸ್ಥಿತಿಯತ್ತ ತಿರುಗಿಸುತ್ತಿರುವುದಾಗಿ ವಿಶಾಲ್ ಗರ್ಗ್ ಅಭಿಪ್ರಾಯಪಡುತ್ತಾರೆ. ಅಡಮಾನ ಪ್ರಕ್ರಿಯೆ ವೇಗಗೊಳಿಸಲು ಕಂಪೆನಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಪ್ರಾರಂಭಿಸಿತು. ಹಿಂದೆ ಡಝನ್ಗಟ್ಟಲೆ ಉದ್ಯೋಗಿಗಳನ್ನು ಅನೇಕ ದಿನಗಳವರೆಗೆ ತೆಗೆದುಕೊಳ್ಳಬಹುದಾದ ಕೆಲಸವನ್ನು ಬದಲಿಸಿತು. ಬೆಟರ್ ನಿಯೋ ಹೋಮ್ ಲೋನ್ಸ್ ಜೊತೆಗೆ ಸಹಯೋಗವನ್ನೂ ಮಾಡಿಕೊಂಡಿತ್ತು. ನಂತರ ಉತ್ಪಾದಕತೆ ದ್ವಿಗುಣಗೊಂಡಿತ್ತು. ಸಾಲದ ಮೂಲ ವೆಚ್ಚವನ್ನು ಶೇ 50ರಷ್ಟು ಕಡಿಮೆ ಮಾಡಿದೆ ಎಂದು ವಿಶಾಲ್ ಹೇಳುತ್ತಿದ್ದಾರೆ.
ಆದರೆ, ಲೂಯಿಸ್ ಮತ್ತು ಆಡಳಿತ ಮಂಡಳಿಯ ಮಟ್ಟಿಗೆ ಪರಿಸ್ಥಿತಿ ಭಿನ್ನವಾಗಿದೆ. ಜುಲೈ 27ರಂದು ಲೂಯಿಸ್ ಬೆಟರ್ನ ಆಡಳಿತ ಮಂಡಳಿ ಸೇರಿದ್ದರು. ಒಂದು ವಾರದ ನಂತರ ವಿಶಾಲ್ ಅವರನ್ನು ಸಿಇಒ ಸ್ಥಾನದಿಂದ ತೆಗೆದುಹಾಕಲಾಯಿತು. ಲೂಯಿಸ್ ಸಿಇಒ ಆದರು.
ಇದೀಗ ತಮ್ಮ ಹುದ್ದೆಯನ್ನು ಮರಳಿ ಪಡೆಯಲು ವಿಶಾಲ್ ಕಾನೂನು ಹೋರಾಟದ ಹಾದಿ ಹಿಡಿದಿದ್ದಾರೆ. ಅವರು ಕ್ವಿನಿನ್ ಎಮಾನ್ಯುವೆಲ್ ಸಂಸ್ಥೆಯ ಪಾಲುದಾರ ಮತ್ತು ಹೈ-ಪ್ರೊಫೈಲ್ ವಕೀಲ ಅಲೆಕ್ಸ್ ಸ್ಪೈರೊ ಅವರನ್ನು ತಮ್ಮ ಪರವಾಗಿ ನೇಮಿಸಿಕೊಂಡಿದ್ದಾರೆ. ಕಂಪೆನಿಗೆ ಪತ್ರ ಬರೆದು ಮತ್ತೆ ತಮ್ಮನ್ನು ಸಿಇಒ ಆಗಿ ನೇಮಿಸುವಂತೆ ಒತ್ತಾಯಿಸಿದ್ದಾರೆ. “ಕಂಪನಿಯನ್ನು ಅನೇಕ ವರ್ಷಗಳಿಂದ ಮುನ್ನಡೆಸಿರುವ ಅನುಭವವಿದೆ. ಮಂಡಳಿ ನನ್ನನ್ನು ತೆಗೆದುಹಾಕುವ ಮೂಲಕ ತಪ್ಪು ನಿರ್ಧಾರ ಕೈಗೊಂಡಿದೆ” ಎಂದು ವಿಶಾಲ್ ಹೇಳುತ್ತಿದ್ದಾರೆ.






