Uttar Pradesh | ಪೊಲೀಸರ ಗುಂಡಿನ ದಾಳಿಗೆ ಒಳಗಾದವರಲ್ಲಿ ಶೇ. 93ರಷ್ಟು ಮುಸ್ಲಿಮರು: CSOH - AP ವಿಶ್ಲೇಷಣೆಯಲ್ಲಿ ಬಹಿರಂಗ
‘ಗೋ ಕಳ್ಳಸಾಗಣೆ’ ಹೆಸರಿನಲ್ಲಿ ಕಾಲಿಗೆ ಗುಂಡು; ದುಡಿಯಲಾಗದೆ ಸಾಲದ ಸುಳಿಗೆ ಸಿಲುಕಿದ ಕುಟುಂಬಗಳು

Photo: Maktoob Media
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ‘ಗೋ ಕಳ್ಳಸಾಗಣೆ’ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ಗುಂಡಿನ ದಾಳಿಗೆ ಒಳಗಾಗಿ ಗಾಯಗೊಂಡವರಲ್ಲಿ ಶೇ. 93ರಷ್ಟು ಮಂದಿ ಮುಸ್ಲಿಮರು ಎಂದು ವರದಿಯಾಗಿದೆ. 2020ರಿಂದ ನಡೆದ ಘಟನೆಗಳ ಕುರಿತು ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್ (CSOH) ಮತ್ತು ಅಸೋಸಿಯೇಟೆಡ್ ಪ್ರೆಸ್ (AP) ನಡೆಸಿದ ಜಂಟಿ ವಿಶ್ಲೇಷಣೆಯಲ್ಲಿ ಈ ಅಂಶ ಬಹಿರಂಗವಾಗಿದೆ.
772 ಸಂತ್ರಸ್ತರನ್ನು ಒಳಗೊಂಡ 645 ಪ್ರಕರಣಗಳನ್ನು ವಿಶ್ಲೇಷಣೆ ದಾಖಲಿಸಿದೆ. ಸಂತ್ರಸ್ತರ ಹೆಸರುಗಳು ಅಥವಾ ಇತರ ಗುರುತಿನ ಮಾಹಿತಿ ಲಭ್ಯವಿರುವ 627 ಪ್ರಕರಣಗಳನ್ನು ಆಧರಿಸಿ ಅವರ ಧರ್ಮದ ಕುರಿತು ವಿಶ್ಲೇಷಿಸಲಾಗಿದೆ. ಪೊಲೀಸರು ಸಾರ್ವಜನಿಕವಾಗಿ ವರದಿ ಮಾಡಿದ ಘಟನೆಗಳನ್ನು ಮಾತ್ರ ಈ ಅಂಕಿಅಂಶಗಳು ಒಳಗೊಂಡಿವೆ. ಹೀಗಾಗಿ, ಇಂತಹ ಗುಂಡಿನ ದಾಳಿಗಳ ನೈಜ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ, ಗುಂಡಿನ ದಾಳಿಗಳಲ್ಲಿ ಸಂತ್ರಸ್ತರ ಮೊಣಕಾಲಿನ ಕೆಳಭಾಗಕ್ಕೆ ಹೆಚ್ಚಾಗಿ ಗುಂಡು ತಗುಲಿರುವುದು. ಶಂಕಿತರನ್ನು ಕೊಲ್ಲುವ ಬದಲು ಕಾಲುಗಳಿಗೆ ಗುಂಡು ಹಾರಿಸುವ ಈ ಪದ್ಧತಿಯು ಪೊಲೀಸರ ಬಲಪ್ರಯೋಗದ ಕಾನೂನುಬದ್ಧತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದಿತ್ಯನಾಥ್ ಆಡಳಿತದಲ್ಲಿ ಸಾವಿರಾರು ಮಂದಿ ಗಾಯ
2017ರ ಮಾರ್ಚ್ನಲ್ಲಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಪೊಲೀಸ್ ಎನ್ಕೌಂಟರ್ಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆಗಳು ಹೊರಬಿದ್ದಿವೆ.
ಉತ್ತರ ಪ್ರದೇಶ ಪೊಲೀಸರ ಮಾಹಿತಿಯ ಪ್ರಕಾರ, ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ದಿನದಿಂದ 2026ರ ಅಕ್ಟೋಬರ್ 13ರವರೆಗೆ ನಡೆದ ಪೊಲೀಸ್ ಎನ್ಕೌಂಟರ್ಗಳಲ್ಲಿ 12,890 ಶಂಕಿತರು ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ 110 ಮುಸ್ಲಿಮರು ಸೇರಿದಂತೆ ಒಟ್ಟು 316 ಶಂಕಿತರು ಮೃತಪಟ್ಟಿದ್ದಾರೆ ಎಂದು AP ವರದಿ ತಿಳಿಸಿದೆ.
ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಸರಿಸುಮಾರು ಐದನೇ ಒಂದು ಭಾಗದಷ್ಟಿದೆ.
ಕಾನೂನುಬದ್ಧ ಸಾಗಣೆಯನ್ನೂ ಕಳ್ಳಸಾಗಣೆ ಎಂದು ಬಿಂಬಿಸಿದ ಆರೋಪ
ಗೋ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಶಂಕಿತರು ಹಲವು ಗುಂಡಿನ ದಾಳಿ ಪ್ರಕರಣಗಳಲ್ಲಿ ಸಂತ್ರಸ್ತರಾಗಿದ್ದಾರೆ. ಈ ಪ್ರಕರಣಗಳು ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಬೇರೂರಿರುವ ಗೋ ಸಂರಕ್ಷಣಾ ಕಾನೂನುಗಳೊಂದಿಗೆ ನಿಕಟ ಸಂಬಂಧ ಹೊಂದಿವೆ.
'Maktoob Media' ಇಂತಹ ಹಲವು ಪ್ರಕರಣಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ ಅನೇಕವು ನಿಜವಾದ ಕಳ್ಳಸಾಗಣೆಗೆ ಸಂಬಂಧಿಸಿದ್ದಲ್ಲ ಎಂದು ವರದಿ ಮಾಡಿದೆ. ವೈಯಕ್ತಿಕ ಬಳಕೆಗಾಗಿ ಅಥವಾ ಮಾರಾಟಕ್ಕಾಗಿ ಹಸುಗಳು ಮತ್ತು ಇತರ ಪ್ರಾಣಿಗಳನ್ನು ಕಾನೂನುಬದ್ಧವಾಗಿ ಸಾಗಿಸುತ್ತಿದ್ದ ಪ್ರಕರಣಗಳೂ ಇವುಗಳಲ್ಲಿ ಸೇರಿವೆ. ಇಂತಹ ಸಾಗಣೆಯನ್ನು ‘ಕಳ್ಳಸಾಗಣೆ’ ಎಂದು ಬಿಂಬಿಸುವುದು ಹಿಂದುತ್ವದ ನಿರೂಪಣೆಯ ಭಾಗವಾಗಿದೆ ಎಂದು 'Maktoob Media' ವಿಶ್ಲೇಷಿಸಿದೆ.
ಪೊಲೀಸರು ಈ ಗುಂಡಿನ ದಾಳಿಗಳನ್ನು ಎನ್ಕೌಂಟರ್ ಗಳ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೈಗೊಂಡ ಕ್ರಮಗಳೆಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮಾನವ ಹಕ್ಕುಗಳ ಕಾರ್ಯಕರ್ತರು, ವಿರೋಧ ಪಕ್ಷಗಳ ನಾಯಕರು ಮತ್ತು ಕೆಲವು ನ್ಯಾಯಾಧೀಶರು, ಗಾಯಗಳ ಪುನರಾವರ್ತಿತ ಮಾದರಿಯು ಕಾನೂನುಬದ್ಧ ಬಲಪ್ರಯೋಗಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
‘ಆಪರೇಷನ್ ಲಂಗ್ಡಾ’ ಹೆಸರಿನಲ್ಲಿ ಕಾಲಿಗೆ ಗುಂಡು
ಉತ್ತರ ಪ್ರದೇಶದಲ್ಲಿ ‘ಆಪರೇಷನ್ ಲಂಗ್ಡಾ’ ಅಥವಾ ‘ಆಪರೇಷನ್ ಲೇಮ್’ ಎಂದು ಕರೆಯಲಾಗುವ ಈ ಪದ್ಧತಿಯಲ್ಲಿ ಶಂಕಿತರ ಕಾಲುಗಳಿಗೆ ಗುಂಡು ಹಾರಿಸಲಾಗುತ್ತದೆ. ಗೋ ಕಳ್ಳಸಾಗಣೆ ಆರೋಪಿಗಳಷ್ಟೇ ಅಲ್ಲದೆ ಕಳ್ಳತನ ಮತ್ತು ಅತ್ಯಾಚಾರ ಸೇರಿದಂತೆ ಇತರ ಅಪರಾಧಗಳ ಆರೋಪ ಎದುರಿಸುತ್ತಿರುವವರ ವಿರುದ್ಧವೂ ಪೊಲೀಸರು ಈ ತಂತ್ರ ಬಳಸಿದ್ದಾರೆ ಎಂದು AP ವರದಿ ಮಾಡಿದೆ.
ಮಾನವ ಹಕ್ಕುಗಳ ವಕೀಲೆ ಮಂಗಳ ವರ್ಮಾ ಅವರ ಪ್ರಕಾರ, ಈ ಪದ್ಧತಿ ವಾಡಿಕೆಯಾಗಿದೆ. ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯದ ವಿಚಾರಣೆಗೆ ಅವಕಾಶ ನೀಡುವ ಬದಲು ಪೊಲೀಸರು ಶಂಕಿತರನ್ನು ಗಾಯಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆರೋಪಿಗಳು ತಪ್ಪಿತಸ್ಥರೇ ಎಂಬುದನ್ನು ನಿರ್ಧರಿಸುವ ಹೊಣೆ ನ್ಯಾಯ ವ್ಯವಸ್ಥೆಯದ್ದಾಗಿರಬೇಕು ಎಂದು ಅವರು ಹೇಳಿದ್ದಾರೆ.
‘ಕಾಲಿಗೆ ಗುಂಡು ಹಾರಿಸುವುದು ಯಾವುದೇ ಕಾರಣಕ್ಕೂ ಅನುಮತಿಸಲಾಗದು’
ಪೊಲೀಸರ ಗುಂಡಿನ ದಾಳಿಗಳ ಕುರಿತು ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿರುವ ಕಳವಳಗಳನ್ನೂ ತನಿಖೆ ಉಲ್ಲೇಖಿಸಿದೆ. ಈ ವರ್ಷದ ಆರಂಭದಲ್ಲಿ ನೀಡಿದ ತೀರ್ಪಿನಲ್ಲಿ, ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸುವುದು ವಾಡಿಕೆಯ ಕ್ರಮವಾಗಿ ಪರಿಣಮಿಸಿದೆ ಎಂದು ನ್ಯಾಯಾಲಯ ಗಮನಿಸಿತ್ತು. ಕಾನೂನಿನ ನಿಯಮದ ಅಡಿಯಲ್ಲಿ ಇಂತಹ ನಡವಳಿಕೆಯನ್ನು ‘ಯಾವುದೇ ಕಾರಣಕ್ಕೂ ಅನುಮತಿಸಲಾಗುವುದಿಲ್ಲ’ “wholly impermissible” ಎಂದು ಹೇಳಿತ್ತು.
ಹಿರಿಯ ಅಧಿಕಾರಿಗಳ ಗಮನ ಸೆಳೆಯಲು ಅಥವಾ ಸಾರ್ವಜನಿಕರ ಸಹಾನುಭೂತಿ ಗಳಿಸಲು ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಾಲಯ ಎಚ್ಚರಿಸಿತ್ತು. ಜೂನ್ ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ರಾಜ್ಯದಲ್ಲಿ ‘ಸಾಂಸ್ಥಿಕ ಶಿಕ್ಷೆಯಿಲ್ಲದ ಸಂಸ್ಕೃತಿ’ ಇದೆ ಎಂಬ ಆರೋಪದ ಕುರಿತು ಮತ್ತೊಬ್ಬ ನ್ಯಾಯಾಧೀಶರು ‘ಆಳವಾದ ಸಾಂವಿಧಾನಿಕ ಕಳವಳ’ ವ್ಯಕ್ತಪಡಿಸಿದ್ದರು.
‘ಪೊಲೀಸ್ ವ್ಯವಸ್ಥೆ ಬಹುಸಂಖ್ಯಾತ ರಾಜಕೀಯದೊಂದಿಗೆ ಬೆಸೆದಿದೆ’
CSOHನ ಕಾರ್ಯನಿರ್ವಾಹಕ ನಿರ್ದೇಶಕ ರಕೀಬ್ ನಾಯಕ್ ಅವರು, ರಾಜ್ಯದ ಸಂಸ್ಥೆಗಳು, ವಿಶೇಷವಾಗಿ ಕಾನೂನು ಜಾರಿ ಸಂಸ್ಥೆಗಳು, ಮುಸ್ಲಿಮರನ್ನು ಹಿಂಸಿಸಲು ಹೆಚ್ಚಾಗಿ ಬಳಕೆಯಾಗುತ್ತಿವೆ ಎಂಬುದನ್ನು ಸಂಶೋಧನೆಗಳು ಸೂಚಿಸುತ್ತವೆ ಎಂದು ಹೇಳಿದ್ದಾರೆ.
“ಇದು ಕಿರುಕುಳ ನೀಡುವ ಅಧಿಕಾರಶಾಹಿ ವ್ಯವಸ್ಥೆಯಾಗಿ ವಿಕಸನಗೊಂಡಂತೆ ಕಾಣುತ್ತಿದೆ. ಪೊಲೀಸ್ ವ್ಯವಸ್ಥೆಯು ಬಹುಸಂಖ್ಯಾತ ರಾಜಕೀಯದೊಂದಿಗೆ ಬೆಸೆದುಕೊಂಡಿರುವಂತಿದೆ” ಎಂದು ನಾಯಕ್ ಹೇಳಿದ್ದಾರೆ.
ಆದರೆ, ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಅಮಿತಾಭ್ ಯಶ್ ಅವರು ಈ ಪದ್ಧತಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಅಧಿಕಾರಿಗಳಿಗೆ ಆತ್ಮರಕ್ಷಣೆಗಾಗಿ ಮಾತ್ರ ಬಲಪ್ರಯೋಗ ಮಾಡುವಂತೆ ಸೂಚಿಸಲಾಗಿದೆ. ಪೊಲೀಸ್ ಎನ್ಕೌಂಟರ್ಗಳನ್ನು ವೃತ್ತಿಜೀವನದ ಪ್ರಗತಿಯೊಂದಿಗೆ ಜೋಡಿಸುವ ಯಾವುದೇ ನೀತಿ ಇಲ್ಲ ಎಂದು ಅವರು APಗೆ ತಿಳಿಸಿದ್ದಾರೆ.
ಗೋಸಂಬಂಧಿತ ಪ್ರಕರಣಗಳಲ್ಲಿ ಗಾಯಗೊಂಡ ಶಂಕಿತರಲ್ಲಿ ಮುಸ್ಲಿಮರ ಪ್ರಮಾಣ ಹೆಚ್ಚಿರುವುದಕ್ಕೆ ಜಾನುವಾರು ವ್ಯಾಪಾರದಲ್ಲಿ ಅವರ ಭಾಗವಹಿಸುವಿಕೆಯೇ ಕಾರಣ ಎಂದು ಅಮಿತಾಭ್ ಯಶ್ ಹೇಳಿದ್ದಾರೆ.
ಅಪರಾಧದ ವಿರುದ್ಧ ತಮ್ಮ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಉತ್ತರ ಪ್ರದೇಶ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಈ ವಿಧಾನದಿಂದ ಅಪರಾಧಿಗಳಲ್ಲಿ ಭಯ ಹೆಚ್ಚಿದ್ದು, ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಬಲಗೊಂಡಿದೆ ಎಂದು ಹೇಳಿದ್ದಾರೆ.
ಗಾಯಗೊಂಡವರಷ್ಟೇ ಅಲ್ಲ, ಕುಟುಂಬಗಳೂ ಸಂಕಷ್ಟದಲ್ಲಿ
ಪೊಲೀಸರ ಗುಂಡಿನ ದಾಳಿಗೆ ಒಳಗಾದ ಆರು ಮುಸ್ಲಿಂ ಪುರುಷರ ಕುಟುಂಬಗಳೊಂದಿಗೆ AP ಮಾತನಾಡಿದೆ. ಗುಂಡಿನ ದಾಳಿಯಿಂದ ಉಂಟಾದ ಗಾಯಗಳಿಂದಾಗಿ ತಮ್ಮ ಸಂಬಂಧಿಕರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದರಿಂದ ಕುಟುಂಬಗಳು ಸಾಲದ ಸುಳಿಗೆ ಸಿಲುಕಿದ್ದು, ಜೀವನ ನಿರ್ವಹಣೆಗಾಗಿ ಇತರರ ನೆರವನ್ನು ಅವಲಂಬಿಸಬೇಕಾಗಿದೆ ಎಂದು ಹೇಳಿದ್ದಾರೆ.
ಗುಂಡಿನ ದಾಳಿಯ ಪರಿಣಾಮ ಗಾಯಗೊಂಡ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಕುಟುಂಬಗಳೂ ಆರ್ಥಿಕವಾಗಿ ದುರ್ಬಲವಾಗಿದ್ದು, ಮತ್ತೆ ಪೊಲೀಸರ ಕ್ರಮಕ್ಕೆ ಒಳಗಾಗುವ ಭೀತಿಯಲ್ಲಿ ಬದುಕುತ್ತಿವೆ ಎಂದು ತನಿಖೆ ಗಮನಸೆಳೆದಿದೆ.
ಪೊಲೀಸರ ಈ ಪದ್ಧತಿಯ ಕುರಿತು ಟೀಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ CSOH ಮತ್ತು AP ನಡೆಸಿದ ವಿಶ್ಲೇಷಣೆಯ ವಿವರಗಳು ಬಹಿರಂಗಗೊಂಡಿವೆ.
ಸೌಜನ್ಯ: maktoobmedia.com






