ಮಹಾರಾಷ್ಟ್ರದಲ್ಲಿ SIR: ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಶೇ. 30 ರಷ್ಟು ಮತದಾರರ ಹೆಸರು ಡಿಲೀಟ್; ವರದಿ

ಸಾಂದರ್ಭಿಕ ಚಿತ್ರ (PTI)
ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (SIR) ಭಾಗವಾಗಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ, ಶೇಕಡಾ 20 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ 38 ವಿಧಾನಸಭೆ ಕ್ಷೇತ್ರಗಳ ಸುಮಾರು ಶೇಕಡಾ 30 ರಷ್ಟು ಮತದಾರರನ್ನು ಹೊರಗಿಡಲಾಗಿದೆ ಎಂದು indianexpress.com ವರದಿ ಮಾಡಿದೆ.
ಈ 38 ಕ್ಷೇತ್ರಗಳಲ್ಲಿ 37 ಲಕ್ಷಕ್ಕೂ ಹೆಚ್ಚು ಮತದಾರರ (ಹಿಂದಿನ ಒಟ್ಟು ಮತದಾರರ ಶೇ. 29.7) ಸಮೀಕ್ಷೆ ನಮೂನೆಗಳನ್ನು "ಸಂಗ್ರಹಿಸಲು ಸಾಧ್ಯವಾಗದವು" ಎಂದು ಗುರುತಿಸಲಾಗಿದೆ. ರಾಜ್ಯಮಟ್ಟದಲ್ಲಿ ಈ ಸರಾಸರಿ ಶೇಕಡಾ 21.1 ರಷ್ಟಿದ್ದು, ಇದು ಎರಡು ಕೋಟಿಗೂ ಹೆಚ್ಚು ಜನರನ್ನು ಒಳಗೊಂಡಿದೆ.
ಪರಿಶಿಷ್ಟ ಜಾತಿಗೆ ಮೀಸಲಾದ 29 ಕ್ಷೇತ್ರಗಳಲ್ಲಿ ಸರಾಸರಿ ಶೇಕಡಾ 19.6 ರಷ್ಟು ಮತದಾರರನ್ನು ಹೊರಗಿಡಲಾಗಿದೆ. ಹಾಗೆಯೇ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ 25 ಕ್ಷೇತ್ರಗಳಲ್ಲಿ ಈ ಹೊರಗಿಡುವಿಕೆಯ ಸರಾಸರಿ ಶೇಕಡಾ 13.2 ರಷ್ಟಿದೆ ಎಂದು ವರದಿ ತಿಳಿಸಿದೆ.
ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದವರನ್ನು ಕಾಯಂ ಆಗಿ ಸ್ಥಳಾಂತರಗೊಂಡವರು, ಮೃತರಾದವರು, ಗೈರುಹಾಜರಾದವರು, ನಕಲಿ ನಮೂದುಗಳು ಅಥವಾ ನಮೂನೆಯನ್ನು ಭರ್ತಿ ಮಾಡಲು ನಿರಾಕರಿಸಿದವರನ್ನು ಒಳಗೊಂಡ "ಇತರ" ವರ್ಗದಲ್ಲಿ ಸೇರಿಸಲಾಗಿದೆ.
ಹೆಸರು ಡಿಲೀಟ್ ಮಾಡಿದ ಮಾದರಿ:
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, ಪುಣೆ ಜಿಲ್ಲೆಯಲ್ಲಿ ಅತ್ಯಧಿಕ 28.6 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ನಂತರದ ಸ್ಥಾನಗಳಲ್ಲಿ ಥಾಣೆ (28.5 ಲಕ್ಷ) ಮತ್ತು ಮುಂಬೈ ಉಪನಗರ (26.5 ಲಕ್ಷ) ಇವೆ.
ಮುಂಬೈ ಮಹಾನಗರ ಪ್ರದೇಶದ ಭಿವಂಡಿ ಈಸ್ಟ್ನಲ್ಲಿ ಶೇಕಡಾ 49.1 ರಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಭಿವಂಡಿ ವೆಸ್ಟ್ನಲ್ಲಿ ಶೇ. 44.7 ಹಾಗೂ ಕಲ್ವಾ-ಮುಂಬ್ರಾದಲ್ಲಿ ಶೇ. 42.9 ರಷ್ಟು ಹೆಸರು ಡಿಲೀಟ್ ಆಗಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಶೇಕಡಾ 27.6 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಚಾಂದಿವಲಿ ಪ್ರದೇಶದಲ್ಲಿ, ಶೇ. 41.4 ರಷ್ಟು ಮತದಾರರನ್ನು "ಸಂಗ್ರಹಿಸಲು ಸಾಧ್ಯವಾಗದವರು" ಎಂದು ಗುರುತಿಸಲಾಗಿದೆ. ಮುಂಬೈನ ಸಿಯಾನ್-ಕೋಲಿವಾಡ ಹಾಗೂ ಪುಣೆಯ ಕಂಟೋನ್ಮೆಂಟ್ ಪ್ರದೇಶದಲ್ಲೂ ಈ ಪ್ರಮಾಣ ಶೇ. 40 ಕ್ಕಿಂತ ಹೆಚ್ಚಾಗಿದೆ.
ಆದರೆ ಕರಡು ಮತದಾರರ ಪಟ್ಟಿಯಿಂದ ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಹೆಚ್ಚಿನ ಪ್ರಮಾಣದಲ್ಲಿ ಹೊರಗಿಡಲಾಗಿದೆಯೇ ಎಂಬುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ತಿಳಿದುಬರುವುದಿಲ್ಲ.
38 ಕ್ಷೇತ್ರಗಳ ಪೈಕಿ ಅತಿ ಹೆಚ್ಚು (ಶೇ. 78.4) ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಾಲೆಗಾಂವ್ ಸೆಂಟ್ರಲ್ನಲ್ಲಿ ಶೇ. 23.4 ರಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಮುಂಬೈನ ಮಾಂಖುರ್ದ್ ಶಿವಾಜಿ ನಗರದಲ್ಲಿ ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇ. 53 ರಷ್ಟಿದ್ದು, ಇಲ್ಲಿ ಶೇ. 42.3 ರಷ್ಟು ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಶೇಕಡಾ 51 ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಭಿವಂಡಿ ಈಸ್ಟ್ನಲ್ಲಿ ಶೇ. 49.1 ರಷ್ಟು ಹೆಸರು ಡಿಲೀಟ್ ಆಗಿದೆ.
ಹಲವು ಕ್ಷೇತ್ರಗಳಲ್ಲಿ ಈ ಡಿಲೀಷನ್ ಪ್ರಮಾಣ ತೀರ ಕಡಿಮೆಯಿದೆ. ಶೇಕಡಾ 20.4 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಲ್ಕಾಪುರದಲ್ಲಿ ಶೇ. 7.6 ರಷ್ಟು ಹೆಸರು ಡಿಲೀಟ್ ಆಗಿದೆ. ರಾವೇರ್, ಲಾತೂರ್ ಸಿಟಿ ಮತ್ತು ಬಾಳಾಪುರಗಳಲ್ಲಿ ಈ ಪ್ರಮಾಣ ಶೇ. 10 ರಿಂದ 11.7 ರಷ್ಟಿದೆ
38 ಶಾಸನಸಭಾ ಕ್ಷೇತ್ರಗಳ ಸರಾಸರಿಗಿಂತ ಹೆಚ್ಚಿನ ಹೊರಗಿಡುವಿಕೆ ಪ್ರಮಾಣವನ್ನು ದಾಖಲಿಸಿದ 53 ಕ್ಷೇತ್ರಗಳಿದ್ದವು. ಇವುಗಳಲ್ಲಿ ಕೊಲಾಬಾ (ಶೇ. 46.9), ಖಡಕ್ವಾಸ್ಲಾ (ಶೇ. 46.5), ಕೊಥ್ರುಡ್ (ಶೇ. 46.1) ಮತ್ತು ಕಲ್ಯಾಣ್ ರೂರಲ್ (ಶೇ. 46) ಸೇರಿವೆ.
ಎಸ್ಐಆರ್ ಮೂರನೇ ಹಂತದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಾರಾಷ್ಟ್ರವೂ ಒಂದಾಗಿದೆ.
2025 ರಲ್ಲಿ ಈ ಪ್ರಕ್ರಿಯೆಯ ಮೊದಲ ಹಂತವು ಬಿಹಾರದಲ್ಲಿ ನಡೆದಿತ್ತು. 2025 ರ ಕೊನೆಯಲ್ಲಿ ಮತ್ತು 2026 ರ ದ್ವಿತೀಯಾರ್ಧದಲ್ಲಿ ನಡೆದ ಎರಡನೇ ಹಂತದಲ್ಲಿ ಇದನ್ನು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಯಿತು.
ಈ ಪರಿಷ್ಕರಣೆಯು ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡಬಹುದು ಮತ್ತು ಚುನಾವಣಾ ಫಲಿತಾಂಶಗಳ ಮೇಲೆಯೂ ಪ್ರಭಾವ ಬೀರಬಹುದು ಎಂಬ ಕಳವಳಗಳು ಆರಂಭದಿಂದಲೂ ವ್ಯಕ್ತವಾಗಿವೆ ಎಂದು 'ಸ್ಕ್ರಾಲ್ ಡಾಟ್ ಇನ್' ವರದಿ ಮಾಡಿದೆ.
ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಪರಿಷ್ಕರಣೆಯ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಆದರೆ ಈ ಪ್ರಕ್ರಿಯೆಯು ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಮತ್ತು ಎಸ್ಐಆರ್ 2026 ಹೊರಗಿಡುವಿಕೆ (ಮುಸ್ಲಿಂ % ಆಧಾರದ ಮೇಲೆ ವಿಂಗಡಿಸಲಾಗಿದೆ)
ಚುನಾವಣಾ ಕ್ಷೇತ್ರ ಮುಸ್ಲಿಂ ಜನಸಂಖ್ಯೆ SIR ಹೊರಗಿಡುವಿಕೆ ಪ್ರಮಾಣ
ಭೀವಂಡಿ ಪೂರ್ವ 51.00% 49.10%
ಭೀವಂಡಿ ಪಶ್ಚಿಮ 49.50% 44.72%
ಮುುಂಬ್ರಾ ಕಲ್ವಾ 43.70% 42.91%
ಮಾಂಖುರ್ದ್ ಶಿವಾಜಿ ನಗರ 53.00% 42.31%
ಚಾಂದಿವಲಿ 27.60% 41.44%
ಸಿಯಾನ್ ಕೋಲಿವಾಡ 21.10% 40.73%
ಪುಣೆ ಕ್ಯಾಂಟೋನ್ಮೆಂಟ್ 20.70% 40.36%
ಮಲಾಡ್ ವೆಸ್ಟ್ 27.70% 38.57%
ಮುಂಬಾದೇವಿ 50.90% 38.52%
ವರ್ಸೋವಾ 33.50% 38.46%
ನಾಗಪುರ ಸೆಂಟ್ರಲ್ 22.10% 38.01%
ವಾಂದ್ರೆ ವೆಸ್ಟ್ 25.30% 37.92%
ಕುರ್ಲಾ 30.70% 36.37%
ಅಂಧೇರಿ ವೆಸ್ಟ್ 27.10% 36.37%
ಅಣುಶಕ್ತಿ ನಗರ 28.80% 36.14%
ಬೈಕುಲ್ಲಾ 41.50% 34.88%
ಕಲೀನಾ 24.40% 34.80%
ಧಾರಾವಿ 33.40% 34.55%
ವಾಂದ್ರೆ ಈಸ್ಟ್ 33.10% 34.44%
ಸೋಲಾಪುರ ಸೆಂಟ್ರಲ್ 24.80% 32.59%
ಔರಂಗಾಬಾದ್ ಸೆಂಟ್ರಲ್ 38.50% 31.34%
ಅಕೋಲ ವೆಸ್ಟ್ 41.60% 28.46%
ಧುಳೆ 21.70% 27.88%
ಜಲ್ನಾ 20.00% 27.70%
ಔರಂಗಾಬಾದ್ ವೆಸ್ಟ್ 37.50% 26.62%
ನಾಂದೇಡ್ ನಾರ್ತ್ 23.50% 26.50%
ಮಾಲೆಗಾಂವ್ ಸೆಂಟ್ರಲ್ 78.40% 23.46%
ನಾಂದೇಡ್ ಸೌತ್ 23.50% 21.06%
ಅಮರಾವತಿ 46.50% 20.19%
ಬೀಡ್ 20.00% 19.50%
ಪಾರ್ಭಣಿ 25.20% 18.29%
ವಾಶಿಮ್ 20.50% 16.46%
ಅಕೋಟ್ 26.20% 13.51%
ಕಾರಂಜಾ 20.80% 13.13%
ಲಾತೂರ್ ಸಿಟಿ 20.40% 11.91%
ಬಾಳಾಪುರ 23.80% 11.71%
ರಾವೇರ್ 20.60% 9.91%
ಮಲ್ಕಾಪುರ 20.40% 7.68%
ಒಟ್ಟು — 29.77%






