‘‘ಎಸ್ಐಆರ್ ಎಂಬುದು ನಾಝಿ-ಫ್ಯಾಶಿಸ್ಟ್ ಯೋಜನೆ’’: ಎಂ.ಜಿ. ದೇವಸಹಾಯಂ

‘ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ(ಎಸ್ಐಆರ್) ಕೇವಲ ಮತದಾರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯಲ್ಲ; ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಮತ್ತು ಹಿಂಬಾಗಿಲಿನಿಂದ ಎನ್ಆರ್ಸಿಯನ್ನು ಜಾರಿಗೆ ತರುವ ಉದ್ದೇಶದ ‘ನಾಝಿ-ಫ್ಯಾಶಿಸ್ಟ್ ಯೋಜನೆ’ಯಾಗಿದೆ ಮತ್ತು ಫ್ಯಾಶಿಸ್ಟ್ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ರಾಜಕೀಯ ನಾಯಕರಿಂದ ಇದು ಪ್ರೇರಿತವಾಗಿದೆ’ ಎಂದು ಎಸ್ಐಆರ್ ಕುರಿತು ಅಧ್ಯಯನ ನಡೆಸಿರುವ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ ಅಭಿಪ್ರಾಯಪಟ್ಟಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ‘ಕಾನ್ಸ್ಟಿಟ್ಯೂಷನ್ ಕಂಡಕ್ಟ್ ಗ್ರೂಪ್’ನ ಸದಸ್ಯರಾಗಿರುವ ಎಂ.ಜಿ. ದೇವಸಹಾಯಂ ಅವರು ಚುನಾವಣಾ ಪ್ರಕ್ರಿಯೆ ಮತ್ತು ಅಗತ್ಯವಿರುವ ಚುನಾವಣಾ ಸುಧಾರಣೆಗಳ ಕುರಿತು ದೀರ್ಘ ಅನುಭವ ಹೊಂದಿದ್ದಾರೆ. 2024ರ ಚುನಾವಣೆಯಲ್ಲಿ ನಡೆದ ಮತಗಳ ಅಕ್ರಮ ಮತ್ತು ಮತ ಕಳವು ಕುರಿತ ವಿಚಾರಗಳನ್ನು ಬಹಿರಂಗಪಡಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಎಸ್ಐಆರ್ ನಡೆದಿರುವ ಹಲವು ರಾಜ್ಯಗಳು ಸೇರಿದಂತೆ, ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಕುರಿತು ‘ವಾರ್ತಾಭಾರತಿ’ಯ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿನ ಎಸ್ಐಆರ್ ಪ್ರಕ್ರಿಯೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಡಿಲೀಟ್ ಮಾಡಲು ಕಾರಣವೇನು? ಸಮಸ್ಯೆ ಪ್ರಕ್ರಿಯೆಯಲ್ಲಿದೆಯೇ ಅಥವಾ ಎಸ್ಐಆರ್ನ ಹಿಂದಿನ ಪರಿಕಲ್ಪನೆಯಲ್ಲಿದೆಯೇ?
ದೇವಸಹಾಯಂ: ಎಸ್ಐಆರ್ ಎಂಬುದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ವಂಚನೆಯಾಗಿದೆ. ವಾಸ್ತವವಾಗಿ, ಇದನ್ನು ರೂಪಿಸಿರುವ ರೀತಿಯೇ ಪ್ರಾಮಾಣಿಕವಾದ ಪ್ರಕ್ರಿಯೆಯಲ್ಲ. ಚುನಾವಣಾ ಆಯೋಗವು ನಿಯಮಗಳು, ನಿಯಂತ್ರಣಗಳು ಮತ್ತು ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ಯಾವುದೇ ಸಮರ್ಪಕ ಎಸ್ಐಆರ್ ಅನ್ನು ರೂಪಿಸಿಲ್ಲ. ಆರ್ಟಿಐ ಮೂಲಕ ಬಹಿರಂಗವಾದ ಮಾಹಿತಿಯ ಪ್ರಕಾರ ಎಸ್ಐಆರ್ ಅನ್ನು ಭಾರತೀಯ ಚುನಾವಣಾ ಆಯೋಗವೇ ನಿರ್ಧರಿಸಿಲ್ಲ.
ಅದು ಬಹಿರಂಗವಾಗಿಯೇ ತಾನು ಇದನ್ನು ನಿರ್ಧರಿಸಿಲ್ಲ ಎಂದು ಹೇಳಿದೆ. ಹಾಗಾದರೆ, ಬಹುಶಃ ಗೃಹ ಸಚಿವರಂತಹ ರಾಜಕೀಯ ನಾಯಕರು ಇದನ್ನು ನಿರ್ಧರಿಸಿ, ಭಾರತೀಯ ಚುನಾವಣಾ ಆಯೋಗದ ಮೇಲೆ ಹೇರಲಾಗಿದೆ. ಅಲ್ಲಿರುವ ಮುಖ್ಯ ಚುನಾವಣಾ ಆಯುಕ್ತರು ರಾಜಕೀಯ ಒತ್ತಡಕ್ಕೆ ಸುಲಭವಾಗಿ ಒಳಗಾಗುವವರು ಮತ್ತು ಉಳಿದ ಇಬ್ಬರು ಚುನಾವಣಾ ಆಯುಕ್ತರು ಕೇವಲ ಹೆಸರಿಗೆ ಇದ್ದಾರೆ ಎಂಬುದು ನನ್ನ ಅಭಿಪ್ರಾಯ.
‘ಎನ್ಆರ್ಸಿ’ ರಾಷ್ಟ್ರೀಯ ಪೌರತ್ವ ನೋಂದಣಿ ತರಲು ಅವರು ಬಯಸಿದ್ದರು. ಅದರ ವಿರುದ್ಧ ತೀವ್ರ ಪ್ರತಿಭಟನೆ ನಡೆದಿದ್ದರಿಂದ ಅದನ್ನು ಹಿಂಪಡೆಯಬೇಕಾಯಿತು. ಎಸ್ಐಆರ್ ನಡೆಸುವುದರ ಹಿಂದೆ ಎರಡು ಉದ್ದೇಶಗಳಿವೆ. ಒಂದು, ಚುನಾವಣಾ ಆಯೋಗದ ಮೂಲಕ ಹಿಂಬಾಗಿಲಿನಿಂದ ಎನ್ಆರ್ಸಿಯನ್ನು ಜಾರಿಗೆ ತರುವುದು. ಎರಡನೆಯದು, ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವುದು. ಸಂಘಟಿತರಲ್ಲದವರು, ಅಲ್ಪಸಂಖ್ಯಾತರು ಮತ್ತು ದಾಖಲೆಗಳನ್ನು ಹೊಂದಿರದವರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ. ಹಿಂಬಾಗಿಲಿನಿಂದ ಎನ್ಆರ್ಸಿಯನ್ನು ಜಾರಿಗೆ ತರುವುದು ಇದರ ಉದ್ದೇಶವಾಗಿದೆ.
ಹಾಗಾದರೆ ಯಾವುದೇ ನಿಯಮಗಳನ್ನು ರೂಪಿಸದೆ ಈ ಪ್ರಕ್ರಿಯೆ ಆರಂಭಿಸಿದ್ದಾರೆಯೇ?
ದೇವಸಹಾಯಂ: ಹೌದು. ಅದರಿಂದ ಈಗ ಎಲ್ಲೆಡೆ ಸಂಪೂರ್ಣ ಗೊಂದಲ ಉಂಟಾಗಿದೆ. ಎಲ್ಲೆಡೆ ಮತದಾರರನ್ನು ಸೇರಿಸುವುದಕ್ಕಿಂತ ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಯೇ ನಡೆಯುತ್ತಿದೆ. ಜನರಿಗಾಗಿ ರೂಪಿಸಿರುವ ಯಾವುದೇ ಯೋಜನೆಯನ್ನು ಜಾರಿಗೆ ತರುವಾಗ ಅದು ಕಾರ್ಯಗತಗೊಳಿಸಲು ಸಾಧ್ಯವಾಗುವಂತಿರಬೇಕು, ಪ್ರಾಯೋಗಿಕವಾಗಿರಬೇಕು. 2002ರಲ್ಲಿ ನೀವು ಅಲ್ಲಿದ್ದಿರಾ, ನಿಮ್ಮ ತಂದೆ-ತಾಯಿ ಇದ್ದರಾ ಎಂಬುದನ್ನು ಲಿಂಕ್ ಮಾಡಿ ಸಂಬಂಧವನ್ನು ಸ್ಥಾಪಿಸಬೇಕು ಎನ್ನುತ್ತಾರೆ. ಅದು 23 ವರ್ಷಗಳ ಹಿಂದಿನ ವಿಚಾರ. ಅದನ್ನು ಪ್ರಾಯೋಗಿಕವಾಗಿ ಹೇಗೆ ಮಾಡುವುದು?
ಉದಾಹರಣೆಗೆ, ನನಗೆ ಈಗ 85 ವರ್ಷ. ನಾಲ್ಕು ವರ್ಷಗಳ ಹಿಂದೆ ನಾನು ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದೇನೆ. ತಮಿಳುನಾಡಿನಲ್ಲಿ ಈಗ ಇಲ್ಲದ ಕಾರಣ ಅಲ್ಲಿನ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕಿದ್ದಾರೆ. ಆದರೆ ಇಲ್ಲಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು 2002ರಲ್ಲಿ ಎಲ್ಲಿದ್ದೆ ಎಂಬುದನ್ನು ಹೇಗೆ ಸಾಬೀತುಪಡಿಸಲಿ? 2002ರಲ್ಲಿ ನಾನು ಚೆನ್ನೈನಲ್ಲಿದ್ದೆ. ನನ್ನ ತಂದೆ-ತಾಯಿ ಈಗ ಬದುಕಿಲ್ಲ. ಅವರು 2003ಕ್ಕಿಂತ ಹಿಂದೆಯೇ ನಿಧನರಾಗಿದ್ದಾರೆ. ಹೀಗಾಗಿ ಈ ಮ್ಯಾಪಿಂಗ್ ಒಂದು ಸಂಶಯಾಸ್ಪದ ಪ್ರಕ್ರಿಯೆ.
ಸಂವಿಧಾನವು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಪ್ರತಿಪಾದಿಸುತ್ತದೆ. ಅದು ಎಲ್ಲರನ್ನು ಒಳಗೊಂಡ ಪ್ರಕ್ರಿಯೆಯಾಗಿರಬೇಕು. ಮತದಾನದ ಹಕ್ಕಿಗೆ ಅರ್ಹರಾಗಿರುವ ಎಲ್ಲ ನಾಗರಿಕರೂ ಮತದಾರರ ಪಟ್ಟಿಯಲ್ಲಿ ಇರಬೇಕು. ಮತದಾನದ ಹಕ್ಕು ಮೂಲಭೂತ ಹಕ್ಕು, ಮಾನವ ಹಕ್ಕು ಕೂಡ ಹೌದು. ಯಾರಾದರೂ ನಾಗರಿಕರಲ್ಲ ಎಂಬುದರ ಬಗ್ಗೆ ಗಂಭೀರವಾದ ಅನುಮಾನವಿದ್ದರೆ ಮತ್ತು ಅವರು ಜನ್ಮತಃ ಅಥವಾ ಬೇರೆ ಯಾವುದೇ ರೀತಿಯಲ್ಲಿ ಭಾರತದ ನಾಗರಿಕರಲ್ಲ ಎಂಬುದನ್ನು ಯಾರಾದರೂ ಸಾಬೀತುಪಡಿಸಿದರೆ ಮಾತ್ರ ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಡಬಹುದು. ನಾನು ಭಾರತದ ನಾಗರಿಕ. ನಾನು ಸುಮಾರು 85 ವರ್ಷಗಳ ಹಿಂದೆ ಇಲ್ಲಿ ಜನಿಸಿದ್ದೇನೆ. ಇಲ್ಲಿ ವಾಸಿಸುತ್ತಿದ್ದೇನೆ. ಹಾಗಿದ್ದರೆ ನಾನು ಏಕೆ ಸಾಬೀತುಪಡಿಸಬೇಕು? ಯಾವುದನ್ನು ತೋರಿಸಿ ಸಾಬೀತುಪಡಿಸಬೇಕು? ನಾನು ವಿದ್ಯಾವಂತ ವ್ಯಕ್ತಿಯಾಗಿರುವುದರಿಂದ ಕೆಲವು ಪ್ರಮಾಣಪತ್ರಗಳು ನನ್ನ ಬಳಿ ಇರಬಹುದು. ಆದರೆ ಲಕ್ಷಾಂತರ, ಕೋಟ್ಯಂತರ ಜನರ ಬಳಿ ಯಾವುದೇ ಪ್ರಮಾಣಪತ್ರಗಳಿಲ್ಲ. ಶಾಲಾ ಪ್ರಮಾಣಪತ್ರ ಇಲ್ಲ, ಪದವಿ ಪ್ರಮಾಣಪತ್ರ ಇಲ್ಲ, ಇತರ ದಾಖಲೆಗಳೂ ಇಲ್ಲ. ಇದು ಒಂದು ಕೊಳೆತ ಫ್ಯಾಶಿಸ್ಟ್-ನಾಝಿ ಯೋಜನೆ.
ಮತ್ತೊಂದು ಸಮಸ್ಯೆ ಎಂದರೆ, ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಧಿಕಾರಶಾಹಿಯ ಪ್ರಕ್ರಿಯೆಯನ್ನಾಗಿ ಮಾಡಲಾಗಿದೆ. ಬಿಎಲ್ಒಗಳು ಸರಕಾರದ ಕೆಳಹಂತದ ಸಿಬ್ಬಂದಿ. ಅವರ ಕೈಯಲ್ಲಿ ಇಡೀ ಪ್ರಕ್ರಿಯೆಯನ್ನು ನೀಡಿದ್ದಾರೆ.
ಮೇಲಿನ ಅಧಿಕಾರಿಗಳ ಪಾತ್ರ ಕೇವಲ ಹೆಸರಿಗೆ ಸೀಮಿತವಾಗಿದೆ. ಇಂತಹ ದೊಡ್ಡ ಪ್ರಮಾಣದ ಪ್ರಕ್ರಿಯೆಗೆ ಪರಿಶೀಲನೆ ಮತ್ತು ಆಡಿಟ್ ಇರಬೇಕಲ್ಲವೇ? ಸಾಮಾನ್ಯವಾದ ಸಣ್ಣ ಕೆಲಸಗಳಿಗೂ ಪರಿಶೀಲನೆ ಮತ್ತು ಆಡಿಟ್ ಇರುತ್ತದೆ. ಹೀಗಿರುವಾಗ ಇಷ್ಟು ದೊಡ್ಡ ಪ್ರಕ್ರಿಯೆಗೆ ಸಾಮಾಜಿಕ ಲೆಕ್ಕಪರಿಶೋಧನೆ (Social Audit) ಇರಬೇಕು ಎಂದು ನಾವು ಆರಂಭದಲ್ಲೇ ಸಲಹೆ ನೀಡಿದ್ದೆವು.
ಗ್ರಾಮ ಪಂಚಾಯತ್ಗಳಲ್ಲಿ, ನಗರಗಳ ವಾರ್ಡ್ ಮಟ್ಟದಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ ನಡೆಯುತ್ತದೆ. ಜನರು ಸ್ವತಃ ಸೇರಬೇಕು. ಕರಡು ಮತದಾರರ ಪಟ್ಟಿಯನ್ನು ಅವರ ಮುಂದೆ ಇಡಬೇಕು. ಯಾರು ಇದ್ದಾರೆ, ಯಾರು ಇಲ್ಲ ಎಂಬುದು ಅವರಿಗೆ ಗೊತ್ತಿರುತ್ತದೆ. ಒಂದು ಗ್ರಾಮದಲ್ಲಿ ಯಾರು ವಾಸಿಸುತ್ತಿದ್ದಾರೆ, ಯಾರು ನಾಗರಿಕರು, ಯಾರು ಅಲ್ಲ? ಎಂಬುದನ್ನು ತಿಳಿದುಕೊಳ್ಳಲು ಅತ್ಯುತ್ತಮವಾಗಿ ಸಾಧ್ಯವಾಗುವವರು ಯಾರು? ಅದು ಅಲ್ಲಿನ ಜನರು. ಹೀಗಾಗಿ ಗ್ರಾಮಸಭೆ ಕರೆಯಬೇಕು. ಕರಡು ಮತದಾರರ ಪಟ್ಟಿಯನ್ನು ಓದಿ, ‘ಇದು ನಾವು ಸಿದ್ಧಪಡಿಸಿರುವ ಪಟ್ಟಿ. ಸರಿಯಾಗಿದೆಯೇ?’ ಎಂದು ಜನರನ್ನು ಕೇಳಬೇಕು.
ಅವರು, ‘ಇವರು ಇಲ್ಲಿ ವಾಸಿಸುತ್ತಿಲ್ಲ, ಬೇರೆಡೆಗೆ ಹೋಗಿದ್ದಾರೆ’ ಎಂದು ಹೇಳಬಹುದು. ಆಗ ಅವರನ್ನು ತೆಗೆದುಹಾಕಬಹುದು. ಅದೇ ವೇಳೆ, ‘ಇವರು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ, ಆದರೆ ಅವರ ಹೆಸರು ಪಟ್ಟಿಯಲ್ಲಿ ಇಲ್ಲ’ ಎಂದು ಹೇಳಬಹುದು. ಆಗ ಅವರನ್ನು ಸೇರಿಸಬಹುದು. ನಂತರ ಪಂಚಾಯತ್ ಮುಕ್ತ ಸಭೆಯಲ್ಲಿ ಅದಕ್ಕೆ ಸಹಿ ಹಾಕಬೇಕು. ಅದನ್ನು ಅನುಮೋದಿಸಿದ ನಂತರ ಅದು ಅಂತಿಮ ಪಟ್ಟಿಯಾಗಬೇಕು.
ಆದರೆ ಈ ಬಿಎಲ್ಒಗಳು ಎಲ್ಲಿಗೆ ಹೋಗುತ್ತಾರೆ? ಅವರು ಅಪಾರ್ಟ್ಮೆಂಟ್ಗಳಿಗೆ ಬರುತ್ತಾರೆಯೇ? ಉದಾಹರಣೆಗೆ, ಅವರು ಇನ್ನೂ ನನ್ನ ಅಪಾರ್ಟ್ಮೆಂಟ್ಗೆ ಬಂದಿಲ್ಲ. ನನ್ನ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಸುಮಾರು 90 ಮನೆಗಳಿವೆ. ಬಿಎಲ್ಒ ಮ್ಯಾನೇಜರ್ ಬಳಿ ಬಂದು ಸ್ವಲ್ಪಹೊತ್ತು ಕುಳಿತುಕೊಂಡು ಹೋಗಿದ್ದಾರೆ ಎಂದು ನನಗೆ ತಿಳಿಸಲಾಯಿತು. ಆದರೆ ನನಗೆ ಗಣತಿ ನಮೂನೆ ಬಂದಿಲ್ಲ. ಇದೀಗ ಅವರು ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರಬಹುದು ಅಥವಾ ನನ್ನನ್ನು ಸೇರಿಸದೇ ಇರಬಹುದು. ದೇಶಾದ್ಯಂತ ಈಗಾಗಲೇ 5-6 ಕೋಟಿಗೂ ಹೆಚ್ಚು ಜನರನ್ನು ತೆಗೆದುಹಾಕಲಾಗಿದೆ. ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಜನರು ಕರಡು ಪಟ್ಟಿಯಿಂದ ಹೊರಗುಳಿಯುತ್ತಾರೆಂದು ನಾನು ಭಾವಿಸುತ್ತೇನೆ.
ಈಗ ಪ್ರಶ್ನೆ ಏನೆಂದರೆ, ಇದನ್ನು ನಾವು ಯಾವ ರೀತಿಯ ಪ್ರಕ್ರಿಯೆ ಎಂದು ಕರೆಯಬೇಕು? ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇದಕ್ಕೆ ಅನುಮೋದನೆ ನೀಡಿದೆ ಎಂದು ಭಾವಿಸುತ್ತೇನೆ. ಈ ಕೊಳೆತ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ, ಸಂಪೂರ್ಣವಾಗಿ ತಿರಸ್ಕರಿಸಬೇಕು. ಇದರ ಬಗ್ಗೆ ನಾನು ಇನ್ನಷ್ಟು ಚರ್ಚಿಸಲು ಕೂಡ ಬಯಸುವುದಿಲ್ಲ.
ಈ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರ ಮತ್ತು ಜನರಿಗೆ ನೀವು ಏನು ಹೇಳಲು ಬಯಸುತ್ತೀರಿ?
ದೇವಸಹಾಯಂ: ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ನೋಡಿದ ನಂತರ, ಇದು ಕರ್ನಾಟಕಕ್ಕೂ ಬರಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದುದರಿಂದ ನಾವು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದೆವು. ನಾನು ನಾಗರಿಕ ಸಮಾಜದ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದೆ. ಅವರಿಗೆ ಸಾಮಾಜಿಕ ಲೆಕ್ಕಪರಿಶೋಧನೆಗೆ ಒತ್ತಾಯಿಸಿ ಎಂದು ಹೇಳಿದ್ದೆ. ಕರ್ನಾಟಕವು ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಲು ಸೂಕ್ತವಾದ ರಾಜ್ಯ. ಏಕೆಂದರೆ ಕರ್ನಾಟಕಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಉತ್ತಮ ಪರಂಪರೆ ಇದೆ.
ಮತ್ತೊಂದೆಡೆ, ಕರ್ನಾಟಕದಲ್ಲಿ ರಾಜ್ಯ ಚುನಾವಣಾ ಆಯೋಗವೂ ಇದೆ. ಚುನಾವಣಾ ಆಯೋಗದಂತೆ ಅದು ಕೂಡ ಸಮರ್ಪಕ ಮತ್ತು ಪ್ರಾಮಾಣಿಕ ಮತದಾರರ ಪಟ್ಟಿಯನ್ನು ರೂಪಿಸುವಲ್ಲಿ ಪಾತ್ರ ವಹಿಸಬಹುದು. ಹೀಗಾಗಿ ರಾಜ್ಯ ಚುನಾವಣಾ ಆಯೋಗದ ಮೂಲಕ ಪ್ರಕ್ರಿಯೆ ಆರಂಭಿಸಿ, ಪಂಚಾಯತ್ಗಳು ಮತ್ತು ವಾರ್ಡ್ ಸಮಿತಿಗಳನ್ನು ಒಳಗೊಳ್ಳಬೇಕು. ಅವುಗಳ ಮೂಲಕ ಸಮರ್ಪಕ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು. ಆ ಮೂಲಕ ಜನರಿಗೆ ತೃಪ್ತಿಯಾಗಬೇಕು. ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ನನ್ನ ಮತ ಇದೆ ಎಂಬ ವಿಶ್ವಾಸ ಜನರಿಗೆ ಬರಬೇಕು. ಯಾರನ್ನಾದರೂ ತೆಗೆದುಹಾಕಿದ್ದರೆ, ಅದು ನಿಜವಾದ ಮತ್ತು ಸಮರ್ಥನೀಯ ಕಾರಣದಿಂದ ಆಗಿದೆ ಎಂಬುದು ಖಚಿತವಾಗಬೇಕು.
ಈ ಕುರಿತು ನಾವು ರಾಜಕೀಯ ನಾಯಕರೊಂದಿಗೆ ಸರಣಿ ಚರ್ಚೆಗಳನ್ನು ನಡೆಸಿದ್ದೇವೆ. ಏಕೆಂದರೆ ರಾಜಕೀಯ ಪಕ್ಷಗಳು ಇದರಲ್ಲಿ ಭಾಗಿಯಾಗಬೇಕಿತ್ತು. ಹಿಂದೆ ಉಪಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿದ್ದೆವು. ಅವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಅವರೆಲ್ಲರೂ, ‘ಹೌದು, ಒಳ್ಳೆಯ ಸಲಹೆ, ನಾವು ಮಾಡುತ್ತೇವೆ’ ಎಂದು ಹೇಳಿದ್ದರು. ಕೆಲವು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿಯೂ ಇದನ್ನು ನಡೆಸಲಾಗಿತ್ತು. ಒಂದು ಟಿಪ್ಪಣಿಯನ್ನೂ ಸಿದ್ಧಪಡಿಸಲಾಗಿತ್ತು. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ‘ಹೈಕಮಾಂಡ್ನಿಂದ ಅನುಮತಿ ಪಡೆಯಬೇಕು’ ಎಂದು ಹೇಳಿದರು.
ರಾಜ್ಯ ಸರಕಾರಗಳಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿದ್ದರೆ, ಅವರು ಬಹುಶಃ ಇದನ್ನು ಮಾಡುತ್ತಿದ್ದರು. ಅವರು ನಿರ್ಣಯ ಅಂಗೀಕರಿಸುತ್ತಿದ್ದರು. ಸಾಮಾಜಿಕ ಲೆಕ್ಕಪರಿಶೋಧನೆ ಕಡ್ಡಾಯವಾಗುವಂತೆ ತಿದ್ದುಪಡಿಯನ್ನೂ ಮಾಡಬಹುದಿತ್ತು. ಆದರೆ ಅದನ್ನು ಹೈಕಮಾಂಡ್ ಹಾಳು ಮಾಡಿತು ಎಂಬುದು ನನ್ನ ಮಾಹಿತಿಯಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತಿದೆ. ಅವರು ಕೂಡ ಆರೆಸ್ಸೆಸ್ ಅಂಶಗಳೊಂದಿಗೆ ಕೈಜೋಡಿಸಿದ್ದಾರೆ. ಈ ವಿಚಾರದಲ್ಲಿ ಅವರು ಯಾವುದೇ ಬಲವಾದ ಪ್ರತಿರೋಧವನ್ನು ವ್ಯಕ್ತಪಡಿಸಿಲ್ಲ. ಬಾಯಿ ಮಾತಿನ ಪ್ರತಿರೋಧ, ಕೃತಿಯಲ್ಲಿ ನಿರ್ಲಿಪ್ತತೆ. ಇದು ಅವರ ಧೋರಣೆ ಆಗಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿಯೂ ಲಕ್ಷಾಂತರ, ಕೋಟ್ಯಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಇದು ಪ್ರಜಾಪ್ರಭುತ್ವವಲ್ಲ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ. ಇದೇ ವಾಸ್ತವ. ನಾಗರಿಕ ಸಮಾಜ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸಿದೆ. ಆದರೆ ರಾಜಕೀಯ ಪಕ್ಷಗಳು ಜನರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಕೈಬಿಟ್ಟಿವೆ. ಏನೇ ಇದ್ದರೂ ನಾಗರಿಕ ಸಂಘಟನೆಗಳು ಜನರ ಕೈ ಬಿಡಬಾರದು. ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹಾಕುವುದನ್ನೂ ನಿಲ್ಲಿಸಬಾರದು. ಇಂದಲ್ಲ ನಾಳೆ ಇದೆಲ್ಲಾ ಬಯಲಾಗುತ್ತದೆ.






