ಸಾಮಾಜಿಕ ಜಾಲತಾಣಗಳ ಜಾಹೀರಾತುಗಳು ವಂಚನೆಯ ಜಾಲವಾಗಿರಬಹುದು ಜೋಕೆ!

ಸಾಂದರ್ಭಿಕ ಚಿತ್ರ | Photo Credit : magnific
ಡಿಜಿಟಲ್ ಜಾಹೀರಾತು ಗಮನಿಸಿ ಕ್ಲಿಕ್ ಮಾಡಿದಲ್ಲಿ ದೊಡ್ಡ ಹಣಕಾಸು ನಷ್ಟ ಸಂಭವಿಸಬಹುದು. ಜಾಗೃತಿ, ಪರಿಶೀಲನೆ ಮತ್ತು ಜಾಗರೂಕತೆಯುಂದ ಇರುವುದರಿಂದ ಸಾಮಾಜಿಕ ಜಾಲತಾಣಗಳ ಹಗರಣಗಳಿಂದ ತಪ್ಪಿಸಿಕೊಳ್ಳಬಹುದು.
ನಕಲಿ ಹೂಡಿಕೆ ಯೋಜನೆಗಳಿಂದ ಆರಂಭಿಸಿ ಶಾಪಿಂಗ್ ರಿಯಾಯಿತಿಗಳವರೆಗೆ ಮೋಸಗಾರರು ನಂಬಿಕೆ ಬಳಸಿಕೊಳ್ಳಲು ತುರ್ತು ಸ್ಥಿತಿ ಸೃಷ್ಟಿಸಲು ಮತ್ತು ಬಳಕೆದಾರರನ್ನು ದುಬಾರಿ ಬಲೆಗಳಿಗೆ ಸೆಳೆಯಲು ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸುತ್ತಿದ್ದಾರೆ. ಮುಂಬೈ ಮೂಲದ 49 ವರ್ಷದ ಐಟಿ ವೃತ್ತಿಪರರೊಬ್ಬರು ಉತ್ತಮ ಷೇರುಮಾರುಕಟ್ಟೆ ಲಾಭದ ಆಶಯದಲ್ಲಿ ಆನ್ಲೈನ್ ಜಾಹೀರಾತೊಂದಕ್ಕೆ ಪ್ರತಿಕ್ರಿಯಿಸಿದ ನಂತರ ಸೈಬರ್ ವಂಚನೆ ಜಾಲಕ್ಕೆ 1.16 ಕೋಟಿ ರೂ.ಗಳನ್ನು ಕಳೆದುಕೊಂಡರು! 2024ರಲ್ಲಿ ನಡೆದ ಇಂತಹ ಹಗರಣ ಹೊಸದೇನಲ್ಲ.
ಇತ್ತೀಚೆಗಿನ ಉದಾಹರಣೆಗಳಲ್ಲಿ ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ವಂಚನೆಗೆ ಬಾಗಿಲಾಗಿ ಬಳಸಲಾಗುತ್ತಿದೆ. ಮುಂಬೈ ಮೂಲದ ನರ್ಸ್ ಒಬ್ಬರು 299 ರೂ. ಉಡುಗೆಗಾಗಿ ಸರಳ ಫೇಸ್ಬುಕ್ ಒಪ್ಪಂದದಂತೆ ಕಾಣುವ ಜಾಹೀರಾತು ಕ್ಲಿಕ್ ಮಾಡಿದ ನಂತರ 1 ಲಕ್ಷ ರೂ. ಕಳೆದುಕೊಂಡರು. ಸಾಮಾನ್ಯ ಆನ್ಲೈನ್ ಶಾಪಿಂಗ್ ಖರೀದಿಯಾಗಿ ಪ್ರಾರಂಭವಾಗಿರುವುದು ನಂತರ ಪುನರಾವರ್ತಿತ ಪಾವತಿ ಬೇಡಿಕೆಗಳು, ನಕಲಿ ವಿತರಣಾ ಶುಲ್ಕಗಳು ಮತ್ತು ಮರುಪಾವತಿಯ ಸುಳ್ಳು ಭರವಸೆಗಳನ್ನು ಒಳಗೊಂಡ ಎಚ್ಚರಿಕೆಯಿಂದ ಆಯೋಜಿಸಲಾದ ಹಗರಣವಾಗಿ ಬದಲಾಗಿದೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಮಹಿಳೆ ಇದೇ ಎಪ್ರಿಲ್ನಲ್ಲಿ ಫೇಸ್ಬುಕ್ ಜಾಹೀರಾತು ಒಂದನ್ನು ನೋಡಿದರು. 299 ರೂ.ಗಳಲ್ಲಿ ಸ್ಟೈಲಿಶ್ ಉಡುಗೆಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆಕರ್ಷಿತರಾಗಿ ಕ್ಲಿಕ್ ಮಾಡಿದರು. ಆ ಒಂದು ಕ್ಲಿಕ್ ನಂತರ ಎಲ್ಲವೂ ಬದಲಾಯಿತು. ಆರಂಭದಲ್ಲಿ ವಹಿವಾಟು ಸಾಮಾನ್ಯದಂತೆಯೇ ಇತ್ತು. ಆಕೆ ಉಡುಗೆ ಆಯ್ಕೆ ಮಾಡಿಕೊಂಡು ಪಾವತಿಯನ್ನು ಮಾಡಿದರು. ಆದರೆ ಶೀಘ್ರದಲ್ಲಿಯೇ ಕ್ಲಿಕ್ ಹಗರಣವಾಗಿ ಬದಲಾಯಿತು.
ವಂಚಕರು ವಾಟ್ಸ್ಆ್ಯಪ್ ಸಂಖ್ಯೆಯ ಮೂಲಕ ಕಾರ್ಯನಿರ್ವಹಿಸುವ ಮಾರಾಟಗಾರರಂತೆ ನಟಿಸುತ್ತಾ ವಿವಿಧ ಕಾನೂನುಬದ್ಧ ನೆಪಗಳ ಅಡಿಯಲ್ಲಿ ಹೆಚ್ಚುವರಿ ಪಾವತಿಗೆ ಒತ್ತಾಯಿಸಲು ಪ್ರಾರಂಭಿಸಿದರು. ಸಾಗಣೆ ಶುಲ್ಕ, ಜಿಪಿಎಸ್ ಶುಲ್ಕ, ಟ್ರ್ಯಾಕಿಂಗ್ ವೆಚ್ಚ, ವಿಳಾಸ ದೃಢೀಕರಣ ಮತ್ತು ಪರಿಶೀಲನಾ ಶುಲ್ಕಗಳು. ಪ್ರತಿ ಪಾವತಿಯ ಸಂದರ್ಭ “ಹೆಚ್ಚುವರಿ ಹಣ ಮರುಪಾವತಿಸಲಾಗುತ್ತದೆ ಮತ್ತು ಆದೇಶ ಶೀಘ್ರದಲ್ಲೇ ಬರುತ್ತದೆ” ಎನ್ನುವ ಭರವಸೆ ಜೊತೆಗೆ ಬಂದಿತ್ತು.
ಹೀಗೆ ವಂಚಿಸುವುದು ಅತಿ ದೊಡ್ಡ ಮಾನಸಿಕ ವಿನ್ಯಾಸವಾಗಿದೆ. ಅರ್ಧದಲ್ಲಿ ಹಿಂಜರಿಯುವುದು ಎಂದರೆ ಈಗಾಗಲೇ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುವುದಾಗಿತ್ತು. 299 ರೂ. ಆನ್ಲೈನ್ ಖರೀದಿಯಿಂದ ಆರಂಭವಾಗಿದ್ದು ಸುಮಾರು 1 ಲಕ್ಷ ರೂ. ನಷ್ಟಕ್ಕೆ ಕಾರಣವಾಯಿತು. ಭರವಸೆ ನೀಡಿದ ಉಡುಗೆ ಬರಲೇ ಇಲ್ಲ. ವಂಚನೆಯ ಅರಿವಾಗುವ ಸಮಯಕ್ಕೆ ವಂಚಕರು ಕಣ್ಮರೆಯಾಗಿದ್ದರು.
ಈ ವಂಚನೆಯಲ್ಲಿ ಫೇಸ್ಬುಕ್ ಜಾಹೀರಾತನ್ನು ಗಾಳವಾಗಿ ಬಳಸಲಾಗಿತ್ತು. ನಂತರ ವಾಟ್ಸ್ಆ್ಯಪ್ ಸಂವಹನದ ಮೂಲಕ ವಿಶ್ವಾಸ ತುಂಬಲು ಪ್ರಯತ್ನಿಸಲಾಗಿತ್ತು. ನಕಲಿ ಡೆಲಿವರಿ ಏಜೆಂಟ್ ಮೂಲಕ ಪದೇಪದೆ ಪಾವತಿಗೆ ಒತ್ತಾಯಿಸಲಾಗಿತ್ತು. ನಂತರ ಅವರು ಸೈಬರ್ ಕ್ರೈಮ್ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ.
ಈ ಪ್ರಕರಣಗಳು ಸಾಮಾಜಿಕ ಮಾಧ್ಯಮ ವಂಚನೆಗಳು ತಾಂತ್ರಿಕ ಹ್ಯಾಕಿಂಗ್ ಬದಲಾಗಿ ನಂಬಿಕೆ, ತುರ್ತು ಮತ್ತು ಕುಶಲತೆಯ ಮೇಲೆ ಹೇಗೆ ಅವಲಂಬಿಸಿದೆ ಎನ್ನುವುದು ಖಚಿತವಾಗುತ್ತದೆ. ಕಡಿಮೆ ವೆಚ್ಚದ ಉತ್ಪನ್ನ, ವೃತ್ತಿಪರವಾಗಿ ಕಾಣುವ ಜಾಹೀರಾತು ಮತ್ತು ಪುನರಾವರ್ತಿತ ಭರವಸೆ ವಂಚನೆಗೆ ಬೀಳಿಸಲು ಸಾಕಾಗುತ್ತದೆ. ಮೆಟಾ ಕಳೆದ ವರ್ಷವೊಂದರಲ್ಲಿಯೇ 159 ದಶಲಕ್ಷ ವಂಚನೆ ಜಾಹೀರಾತುಗಳನ್ನು ತನ್ನ ವೇದಿಕೆಯಿಂದ ತೆಗೆದು ಹಾಕಿದೆ.
ಡಿಜಿಟಲ್ ಜಾಹೀರಾತು ಗಮನಿಸಿ ಕ್ಲಿಕ್ ಮಾಡಿದಲ್ಲಿ ದೊಡ್ಡ ಹಣಕಾಸು ನಷ್ಟ ಸಂಭವಿಸಬಹುದು. ಜಾಗೃತಿ, ಪರಿಶೀಲನೆ ಮತ್ತು ಜಾಗರೂಕತೆಯುಂದ ಇರುವುದರಿಂದ ಸಾಮಾಜಿಕ ಜಾಲತಾಣಗಳ ಹಗರಣಗಳಿಂದ ತಪ್ಪಿಸಿಕೊಳ್ಳಬಹುದು.
ಜಗತ್ತು ಪ್ರಗತಿಯಾಗುತ್ತಿದ್ದಂತೆ ಡಿಜಿಟಲ್ ಪರಿಸರವೂ ಪ್ರಗತಿಯಾಗುತ್ತಿದೆ. ಹೊಸ ಅವಕಾಶಗಳು ಮತ್ತು ಹೊಸ ಅಪಾಯಗಳನ್ನು ತರುತ್ತಿದೆ. ವಂಚಕರು ಇನ್ನೂ ಹೆಚ್ಚು ಅತ್ಯಾಧುನಿಕ ವಿಧಾನಗಳನ್ನು ಬಳಸಿ ದುರ್ಬಲರನ್ನು ದೋಚುತ್ತಿದ್ದಾರೆ.
ಇಂತಹ ಹಗರಣಗಳಿಂದ ರಕ್ಷಣೆ ಹೇಗೆ?
📌 ದೊಡ್ಡ ರಿಯಾಯಿತಿ, ಮಾಂತ್ರಿಕ ಶಮನದ ಔಷಧಿ ಅಥವಾ ಲಾಭದ ಗ್ಯಾರಂಟಿ ಕೊಟ್ಟಲ್ಲಿ ಯಾವಾಗಲೂ ಎಚ್ಚರವಹಿಸಬೇಕು.
📌 ಮೂಲವನ್ನು ಪರಿಶೀಲಿಸಿ: ನೇರವಾಗಿ ಜಾಹೀರಾತಿನ ಮೇಲೆ ಕ್ಲಿಕ್ ಮಾಡುವ ಬದಲಾಗಿ ಅಧಿಕೃತ ವೆಬ್ತಾಣಕ್ಕೆ ಭೇಟಿನೀಡಿ. ಬ್ರಾಂಡ್ನಲ್ಲಿ ಪರಿಶೀಲಿಸಿದ ಖಾತೆಗಳು, ಅಧಿಕೃತ ಬ್ರಾಂಡಿಂಗ್ ಮತ್ತು ವಿಶ್ವಾಸಾರ್ಹ ಸಂಪರ್ಕ ವಿವರಗಳಿವೆಯೇ ಎಂದು ಪರೀಕ್ಷಿಸಿ.
📌 ವೆಬ್ತಾಣಗಳನ್ನು ಜಾಗರೂಕವಾಗಿ ಪರೀಕ್ಷಿಸಿ: ಯಾವಾಗಲೂ ಯುಆರ್ಎಲ್ ಅನ್ನು ಸ್ಪೆಲ್ಲಿಂಗ್ ತಪ್ಪು ಅಥವಾ ಅನುಮಾನಾಸ್ಪದ ಹೆಸರುಗಳಿಗೆ ಹುಡುಕಿ. ವೆಬ್ತಾಣ HTTPS ಭದ್ರತೆ ಬಳಸುತ್ತದೆ ಎನ್ನುವುದನ್ನು ಖಚಿತಪಡಿಸಿ. ಹೊರಗಿನ ಮೂಲಗಳಿಂದ ವಿಶ್ಲೇಷಣೆಯನ್ನು ಹುಡುಕಿ.
📌 ಉದ್ಯೋಗಗಳಿಗೆ ಪಾವತಿ ಮಾಡಬೇಡಿ: ಕಾನೂನುಬದ್ಧ ಉದ್ಯೋಗದಾತರು ಸಂದರ್ಶನ, ನೋಂದಣಿ ಅಥವಾ ನೇಮಕಾತಿಗೆ ಅಭ್ಯರ್ಥಿಗಳ ಶುಲ್ಕವನ್ನು ಪಾವತಿಸಲು ಕೇಳುವುದಿಲ್ಲ.
📌 ಸೂಕ್ಷ್ಮ ಮಾಹಿತಿ ಹಂಚಿಕೊಳ್ಳಬೇಡಿ: ಜಾಹೀರಾತು, ಚಾಟ್ ಅಪ್ಲಿಕೇಶನ್ ಅಥವಾ ಅಪರಿಚಿತ ವೆಬ್ಸೈಟ್ಗಳ ಮೂಲಕ ಒಟಿಪಿ, ಬ್ಯಾಂಕ್ ವಿವರ, ಪಾಸ್ವರ್ಡ್ ಅಥವಾ ಕಾರ್ಡ್ ಮಾಹಿತಿ ಹಂಚಿಕೊಳ್ಳಬೇಡಿ.
📌 ಸುಭದ್ರ ಪಾವತಿ ವಿಧಾನ ಅನುಸರಿಸಿ: ನೇರ ವರ್ಗಾವಣೆ ಬದಲಿಗೆ ಖರೀದಿದಾರರಿಗೆ ರಕ್ಷಣೆ ಒದಗಿಸುವ ವಿಶ್ವಾಸಾರ್ಹ ವೇದಿಕೆಗಳನ್ನು ಆರಿಸಿ.
📌 ಅನುಮಾನಾಸ್ಪದ ಜಾಹೀರಾತು ಬಗ್ಗೆ ವರದಿ ಮಾಡಿ: ಬಹುತೇಕ ಸಾಮಾಜಿಕ ಮಾಧ್ಯಮಗಳಲ್ಲಿ ಅನುಮಾನಾಸ್ಪದ ವೇದಿಕೆಯನ್ನು ವರದಿ ಮಾಡಬಹುದಾಗಿದೆ. ಹಗರಣದ ಜಾಹೀರಾತು ಕುರಿತು ವರದಿ ಮಾಡುವುದು ಇತರರನ್ನು ಸಂತ್ರಸ್ತರಾಗುವುದರಿಂದ ತಪ್ಪಿಸಬಹುದು.
ವಂಚನೆಗೆ ಒಳಗಾದಲ್ಲಿ ಏನು ಮಾಡಬೇಕು?
📌 ತಕ್ಷಣವೇ ನಿಮ್ಮ ಬ್ಯಾಂಕ್ಗೆ ಸಂಪರ್ಕಿಸಿ ಮತ್ತು ವಂಚನೆ ಕುರಿತು ಮಾಹಿತಿ ನೀಡಿ.
📌 https://cybercrime.gov.in/ಅಥವಾ 1930ಗೆ ದೂರು ನೀಡಿ.
📌 ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ.






