‘ಎಕ್ಸ್’ ಅಲ್ಗಾರಿದಂ ಬಳಕೆದಾರರ ನಂಬಿಕೆಗೆ ವಿರುದ್ಧವಾದ ವಿಷಯವನ್ನೂ ತೋರಿಸಬಹುದು: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ
‘ಎಕ್ಸ್’ ಸಾಮಾಜಿಕ ಜಾಲತಾಣದ ಶಿಫಾರಸು ವ್ಯವಸ್ಥೆಯಿಂದ ಪ್ರಚಾರಗೊಳ್ಳುವ ವಿಷಯವು ಬಳಕೆದಾರರು ನಂಬುವ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೊಸ ಅಧ್ಯಯನವೊಂದು ಕಂಡುಹಿಡಿದಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ವೈಯಕ್ತಿಕ ಆಸಕ್ತಿಗಳ ಆಧಾರದ ಮೇಲೆ ವಿಷಯವನ್ನು ವೈಯಕ್ತೀಕರಿಸುವುದಾಗಿ ಹೇಳಿಕೊಂಡರೂ, ಅಲ್ಗಾರಿದಂಗಳು ಬಳಕೆದಾರರ ವೈಯಕ್ತಿಕ ನಂಬಿಕೆಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾದ ಪೋಸ್ಟ್ ಗಳನ್ನು ಪ್ರಚಾರ ಮಾಡುತ್ತಿರಬಹುದು. ‘ಎಕ್ಸ್’ ಸಾಮಾಜಿಕ ಜಾಲತಾಣದ ಶಿಫಾರಸು ವ್ಯವಸ್ಥೆಯಿಂದ ಪ್ರಚಾರಗೊಳ್ಳುವ ವಿಷಯವು ಬಳಕೆದಾರರು ನಂಬುವ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
‘ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ (PNAS) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಾಮಾಜಿಕ ಮಾಧ್ಯಮ ಅಲ್ಗಾರಿದಂಗಳು ಬಳಕೆದಾರರ ಆದ್ಯತೆಗಳನ್ನು ಪ್ರತಿಬಿಂಬಿಸುವ ಪೋಸ್ಟ್ ಗಳಿಗಿಂತ ಗಮನ ಸೆಳೆಯುವ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ವಿಷಯಕ್ಕೆ ಆದ್ಯತೆ ನೀಡಬಹುದು.
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧಕ ಜಿವ್ ಎಪ್ಸ್ಟೀನ್, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಮೈಕೆಲ್ ಎಸ್. ಬರ್ನ್ಸ್ಟೈನ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನವು ಸಾಮಾಜಿಕ ಮಾಧ್ಯಮ ಅಲ್ಗಾರಿದಂಗಳು ಬಳಕೆದಾರರ ಅನುಭವಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಪರಿಶೀಲಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಹಿಂದೆ ಟ್ವಿಟರ್ ಎಂದು ಪ್ರಸಿದ್ಧವಾಗಿದ್ದ, ಈಗಿನ ‘ಎಕ್ಸ್’ ಸಾಮಾಜಿಕ ಜಾಲತಾಣವನ್ನು ಸಕ್ರಿಯವಾಗಿ ಬಳಸುವ 715 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಭಾಗವಹಿಸಿದವರಿಗೆ ಎರಡು ವಿಭಿನ್ನ ಫೀಡ್ ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟ್ ಗಳನ್ನು ಸಂಗ್ರಹಿಸುವ ಕಸ್ಟಮೈಸ್ ಮಾಡಿದ ಬ್ರೌಸರ್ ವಿಸ್ತರಣೆಯನ್ನು ಸ್ಥಾಪಿಸಲಾಯಿತು. ಈ ಮೂಲಕ ಬಳಕೆದಾರರು ಅನುಸರಿಸಲು ಆಯ್ಕೆ ಮಾಡಿಕೊಂಡ ಖಾತೆಗಳ ಪೋಸ್ಟ್ ಗಳನ್ನು ಪ್ರದರ್ಶಿಸುವ ‘ಫಾಲೋಯಿಂಗ್’ ಫೀಡ್ ಮತ್ತು ವಿಷಯವನ್ನು ಶಿಫಾರಸು ಮಾಡಲು ಅಲ್ಗಾರಿದಂ ಅವಲಂಬಿಸಿರುವ ‘ಫಾರ್ ಯು’ ಫೀಡ್ಗಳನ್ನು ಸಂಶೋಧಕರು ಗಮನಿಸಿದರು.
ನಂತರ ಸಂಶೋಧಕರು ಪೋಸ್ಟ್ಗಳನ್ನು ವಿಶ್ಲೇಷಿಸಲು ಮತ್ತು ಅವು ಪ್ರತಿಬಿಂಬಿಸುವ ಮೌಲ್ಯಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (AI) ಮಾದರಿಯನ್ನು ಬಳಸಿದರು. ಈ ಸಂಶೋಧನೆಗಳನ್ನು ಭಾಗವಹಿಸಿದವರು ವರದಿ ಮಾಡಿದ ವೈಯಕ್ತಿಕ ಮೌಲ್ಯಗಳೊಂದಿಗೆ ಹೋಲಿಸಿದರು. ವಿಶ್ಲೇಷಣೆಯು ಎರಡು ಫೀಡ್ ಗಳ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಬಹಿರಂಗಪಡಿಸಿದೆ.
ಬಳಕೆದಾರರ ‘ಫಾಲೋಯಿಂಗ್’ ಫೀಡ್ ನಲ್ಲಿ ಕಾಣಿಸಿಕೊಳ್ಳುವ ಪೋಸ್ಟ್ ಗಳು ಸಾಮಾನ್ಯವಾಗಿ ಅವರ ವೈಯಕ್ತಿಕ ನಂಬಿಕೆಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಇದಕ್ಕೆ ವಿರುದ್ಧವಾಗಿ, ಅಲ್ಗಾರಿದಂ ಚಾಲಿತ ‘ಫಾರ್ ಯು’ ಫೀಡ್ ಆ ಮೌಲ್ಯಗಳಿಗೆ ಹೊಂದಿಕೆಯಾಗದ ವಿಷಯವನ್ನು ಪ್ರಚಾರ ಮಾಡುವ ಪ್ರವೃತ್ತಿಯನ್ನು ತೋರಿಸಿದೆ.
ಬಳಕೆದಾರರು ಹೇಳಿರುವ ಮೌಲ್ಯಗಳು ಮತ್ತು ಅಲ್ಗಾರಿದಂ ಶಿಫಾರಸು ಮಾಡಿದ ವಿಷಯದಲ್ಲಿ ಪ್ರತಿನಿಧಿಸುವ ಮೌಲ್ಯಗಳ ನಡುವೆ ಒಟ್ಟಾರೆ ಯಾವುದೇ ಸಂಬಂಧ ಇಲ್ಲದಿರುವುದನ್ನು ಸಂಶೋಧಕರು ಕಂಡುಕೊಂಡರು. ಅಲ್ಗಾರಿದಂ ಆರ್ಡರ್, ಸಂಪ್ರದಾಯ, ನಿಯಮ ಪಾಲನೆ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಪೋಸ್ಟ್ಗಳಿಗೆ ಆದ್ಯತೆ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ನಡುವೆ ಇತರರ ಆರೈಕೆ, ವಿಶ್ವಾಸಾರ್ಹತೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳು ತುಲನಾತ್ಮಕವಾಗಿ ಕಡಿಮೆ ಗಮನ ಸೆಳೆದಿವೆ.
ರಾಜಕೀಯ ನಂಬಿಕೆಗಳು ಈ ಮಾದರಿಗಳ ಮೇಲೆ ಪ್ರಭಾವ ಬೀರುತ್ತವೆಯೇ ಎಂಬುದನ್ನು ಸಂಶೋಧಕರು ಮತ್ತಷ್ಟು ಪರಿಶೀಲಿಸಿದರು. ರಾಜಕೀಯ ಒಲವಿನ ಎರಡೂ ಬಣಗಳ ಬಳಕೆದಾರರು ತಮ್ಮ ಹೇಳಲಾದ ಮೌಲ್ಯಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗದ ವಿಷಯಗಳಿಗೆ ಒಡ್ಡಿಕೊಂಡಿದ್ದಾರೆ ಎಂದು ಅವರು ಕಂಡುಕೊಂಡರು. ಆದರೆ ಡೆಮಾಕ್ರಟಿಕ್ ಬಳಕೆದಾರರಲ್ಲಿ ಈ ಹೊಂದಾಣಿಕೆಯ ವ್ಯತ್ಯಾಸ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ.
ಇಂತಹ ಹೊಂದಾಣಿಕೆಯ ವ್ಯತ್ಯಾಸಕ್ಕೆ ಬಳಕೆದಾರರ ತೊಡಗಿಸಿಕೊಳ್ಳುವಿಕೆಯ ವಿಧಾನವೂ ಕಾರಣವಾಗಿರಬಹುದು. ಇದನ್ನು ತಿಳಿಯಲು ಸಂಶೋಧಕರು 24 ಗಂಟೆಗಳ ಅವಧಿಯಲ್ಲಿ ಬಳಕೆದಾರರ ಚಟುವಟಿಕೆಯನ್ನು ವಿಶ್ಲೇಷಿಸಿದರು. ಇದರಲ್ಲಿ ಲೈಕ್ ಗಳು, ರಿಪೋಸ್ಟ್ ಗಳು ಮತ್ತು ಪ್ರತ್ಯುತ್ತರಗಳು ಸೇರಿದ್ದವು. ಲೈಕ್ ಗಳು ಮತ್ತು ರಿಪೋಸ್ಟ್ ಗಳು ಸಾಮಾನ್ಯವಾಗಿ ಬಳಕೆದಾರರ ವೈಯಕ್ತಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಸಂಶೋಧನೆ ತೋರಿಸಿದೆ. ಆದರೆ ಬಳಕೆದಾರರು ತಮ್ಮ ನಂಬಿಕೆಗಳಿಗೆ ಹೊಂದಿಕೆಯಾಗದ ಪೋಸ್ಟ್ಗಳಿಗೂ ಪ್ರತಿಕ್ರಿಯಿಸುತ್ತಾರೆ. ಅಂತಹ ಪೋಸ್ಟ್ ಗಳಿಗೆ ಸವಾಲೊಡ್ಡಲು, ಟೀಕಿಸಲು ಅಥವಾ ವಿರುದ್ಧವಾಗಿ ವಾದಿಸಲು ಪ್ರತ್ಯುತ್ತರಗಳನ್ನು ಬಳಸುತ್ತಾರೆ.
ಹೀಗಾಗಿ, ಸಾಮಾಜಿಕ ಮಾಧ್ಯಮ ಅಲ್ಗಾರಿದಂಗಳು ತೊಡಗಿಸಿಕೊಳ್ಳುವಿಕೆಯನ್ನು ಆಸಕ್ತಿಯ ಸಂಕೇತವೆಂದು ಪರಿಗಣಿಸಬಹುದು. ಪರಿಣಾಮವಾಗಿ, ಬಳಕೆದಾರರು ತಮಗೆ ಇಷ್ಟವಿಲ್ಲದ ಪೋಸ್ಟ್ಗಳಿಗೆ ಪದೇಪದೆ ಪ್ರತ್ಯುತ್ತರಿಸಿದಾಗ, ವೇದಿಕೆಗಳು ಆ ಸಂವಹನಗಳನ್ನು ಆ ವಿಷಯವು ಅವರಿಗೆ ಪ್ರಸ್ತುತವಾಗಿದೆ ಎಂಬುದಕ್ಕೆ ಪುರಾವೆಯಾಗಿ ಅರ್ಥೈಸಿಕೊಳ್ಳಬಹುದು. ಇದರಿಂದ ಭವಿಷ್ಯದಲ್ಲಿ ಅದೇ ರೀತಿಯ ಪೋಸ್ಟ್ ಗಳನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ. ಹೀಗೆ ಬಳಕೆದಾರರು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಪರಿಣಾಮವಾಗಿ, ಅವರನ್ನು ನಿರಾಶೆಗೊಳಿಸುವ ಅಥವಾ ಅಸಮಾಧಾನಗೊಳಿಸುವ ಹೆಚ್ಚಿನ ವಿಷಯಗಳನ್ನು ನೋಡುವಂತಾಗಬಹುದು. ಮುಖ್ಯವಾಗಿ ಡೆಮಾಕ್ರಟಿಕ್ ಬಳಕೆದಾರರಲ್ಲಿ ಈ ಮಾದರಿ ವಿಶೇಷವಾಗಿ ಗಮನಾರ್ಹವಾಗಿತ್ತು.
ಶಿಫಾರಸು ವ್ಯವಸ್ಥೆಗಳು ಮುಖ್ಯವಾಗಿ ಬಳಕೆದಾರರ ಆಸಕ್ತಿ ಮತ್ತು ಆದ್ಯತೆಗಳಿಂದ ಕಲಿಯುತ್ತವೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ವ್ಯವಸ್ಥೆಗಳು ನಕಾರಾತ್ಮಕ ತೊಡಗಿಸಿಕೊಳ್ಳುವಿಕೆಗೂ ಪ್ರತಿಕ್ರಿಯಿಸಬಹುದು ಎಂದು ಅಧ್ಯಯನ ಸೂಚಿಸಿದೆ.
ಜಾಗತಿಕವಾಗಿ ಜನಪ್ರಿಯವಾಗಿರುವ ವಿಷಯವು ರಿಪಬ್ಲಿಕನ್ ಮೌಲ್ಯಗಳೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಕೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೀಗಾಗಿ, ಬಲಪಂಥೀಯ ಬಳಕೆದಾರರು ಮುಖಾಮುಖಿ ವಾದ-ವಿವಾದಗಳಲ್ಲಿ ತೊಡಗಿಸಿಕೊಳ್ಳದೆಯೇ ತಮ್ಮ ನಂಬಿಕೆಗಳಿಗೆ ಹೊಂದಿಕೆಯಾಗುವ ವಿಷಯವನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಮುಖ್ಯವಾಗಿ, ಈ ಅಧ್ಯಯನವು ವೀಕ್ಷಣಾ ದತ್ತಾಂಶವನ್ನು ಅವಲಂಬಿಸಿರುವುದರಿಂದ, ವೇದಿಕೆಯ ಅಲ್ಗಾರಿದಂ ಅನ್ನು ಪ್ರಾಯೋಗಿಕವಾಗಿ ಬದಲಿಸದೆ ಸಂಶೋಧನಾ ತಂಡವು ಬಳಕೆದಾರರ ನಡವಳಿಕೆಯನ್ನು ವಿಶ್ಲೇಷಿಸಿದೆ. ಬಳಕೆದಾರರ ಮೌಲ್ಯಗಳು ಮತ್ತು ಅವರು ನೋಡುವ ವಿಷಯದ ನಡುವಿನ ಹೊಂದಾಣಿಕೆಯ ವ್ಯತ್ಯಾಸಕ್ಕೆ ಇದೇ ಪ್ರಾಥಮಿಕ ಕಾರಣವೇ ಎಂಬುದನ್ನು ಸಂಶೋಧನೆಯಿಂದ ನಿರ್ಧರಿಸಲು ಸಾಧ್ಯವಾಗಿಲ್ಲ.






