16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ; ಆಸ್ಟ್ರೇಲಿಯಾ ಈ ಕಾನೂನು ಜಾರಿಗೆ ತಂದಿದ್ದು ಯಾಕೆ? ಹೇಗೆ?

PC | AI
16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸೋಷಿಯಲ್ ಮೀಡಿಯಾ ಬಳಸುವುದನ್ನು ನಿಷೇಧಿಸಿದ ನಂತರ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸೇರಿದ ಸುಮಾರು 4.7 ಮಿಲಿಯನ್ ಖಾತೆಗಳಿಗೆ ಪ್ರವೇಶವನ್ನು ರದ್ದುಗೊಳಿಸಿವೆ. ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಮಾಡುವ ಈ ಕಾನೂನು ಆಸ್ಟ್ರೇಲಿಯಾದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿತ್ತು. ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ, ಫೇಸ್ಬುಕ್, ಇನ್ಸ್ಟಾಗ್ರಾಮ್, ಕಿಕ್, ರೆಡ್ಡಿಟ್, ಸ್ನ್ಯಾಪ್ಚಾಟ್, ಥ್ರೆಡ್ಸ್, ಟಿಕ್ಟಾಕ್, ಎಕ್ಸ್, ಯೂಟ್ಯೂಬ್ ಮತ್ತು ಟ್ವಿಚ್ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಸ್ಟ್ರೇಲಿಯಾದ ಮಕ್ಕಳ ಖಾತೆಗಳನ್ನು ತೆಗೆದುಹಾಕಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 49.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳವರೆಗೆ ($33.2 ಮಿಲಿಯನ್) ದಂಡವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ನಂತಹ ಸಂದೇಶ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
16 ವರ್ಷದೊಳಗಿನವರಿಗೆ ಆಸ್ಟ್ರೇಲಿಯಾ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ್ದೇಕೆ?
ಆಸ್ಟ್ರೇಲಿಯಾದ ಸಾಮಾಜಿಕ ಮಾಧ್ಯಮ ನಿಷೇಧವು ಡಿಸೆಂಬರ್ 10, 2025 ರಂದು ಜಾರಿಗೆ ಬಂತು. ಐಡಿ ದಾಖಲೆಗಳು, ಮುಖ ಸ್ಕ್ಯಾನ್ ಮಾಡಿ ವಯಸ್ಸು ಅಂದಾಜು ಮಾಡುವ ತಂತ್ರಜ್ಞಾನ ಅಥವಾ ಖಾತೆ ರಚನೆ ದಿನಾಂಕಗಳಂತಹ ಅಸ್ತಿತ್ವದಲ್ಲಿರುವ ಖಾತೆ ಡೇಟಾವನ್ನು ವಿಶ್ಲೇಷಿಸುವ ಮೂಲಕ ಪ್ಲಾಟ್ಫಾರ್ಮ್ಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸುತ್ತವೆ. ಇದು 16 ವರ್ಷದೊಳಗಿನ ಎಲ್ಲಾ ಬಳಕೆದಾರರು ಟಿಕ್ಟಾಕ್, ಸ್ನ್ಯಾಪ್ಚಾಟ್, ಯೂಟ್ಯೂಬ್, ರೆಡ್ಡಿಟ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಕಿಕ್, ಟ್ವಿಚ್, ಥ್ರೆಡ್ಸ್ ಮತ್ತು ಎಕ್ಸ್ ಸೇರಿದಂತೆ ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಖಾತೆಗಳನ್ನು ಹೊಂದುವುದನ್ನು ನಿರ್ಬಂಧಿಸಿತು.
ವರ್ಷಗಳಿಂದಲೂ ಸ್ವಯಂಪ್ರೇರಿತ ಸುರಕ್ಷತಾ ಬದ್ಧತೆಗಳ ಹೊರತಾಗಿಯೂ, ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಆಸ್ಟ್ರೇಲಿಯಾ ಸರಕಾರ ಹೇಳಿದೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಆತಂಕ, ಖಿನ್ನತೆ, ನಿದ್ರಾಹೀನತೆಗೆ ಸಾಮಾಜಿಕ ಮಾಧ್ಯಮದ ಭಾರೀ ಬಳಕೆ ಕಾರಣವಾಗಿದೆ ಎಂದು ಇಲ್ಲಿನ ಶಾಸಕರು ಹೇಳಿದ್ದಾರೆ.
16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಜಾರಿಗೆ ಬಂದ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಇದು ಕುಟುಂಬಗಳಿಗೆ "ಹೆಮ್ಮೆಯ ದಿನ". ನೀತಿ ನಿರೂಪಕರು ಸಾಂಪ್ರದಾಯಿಕ ಸುರಕ್ಷತಾ ಕ್ರಮಗಳನ್ನು ಮೀರಿದ ಆನ್ಲೈನ್ ಹಾನಿಗಳನ್ನು ತಡೆಯಬಹುದು ಎಂಬುದಕ್ಕೆ ಈ ಕಾನೂನು ಸಾಕ್ಷಿ.ಇದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದು ನಮ್ಮ ರಾಷ್ಟ್ರ ಎದುರಿಸಿದ ಅತಿದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಲೇ ಇರುವ ಸುಧಾರಣೆಯಾಗಿದೆ ಎಂದಿದ್ದಾರೆ.
4.7 ಮಿಲಿಯನ್ ಖಾತೆ ರದ್ದು
ಸುಮಾರು 2.5 ಮಿಲಿಯನ್ ಆಸ್ಟ್ರೇಲಿಯನ್ನರು 8 ರಿಂದ 15 ವರ್ಷದೊಳಗಿನವರು. ಅಂದಾಜಿನ ಪ್ರಕಾರ 8 ರಿಂದ 12 ವರ್ಷ ವಯಸ್ಸಿನವರಲ್ಲಿ 84% ಜನರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾರೆ. 10 ಪ್ಲಾಟ್ಫಾರ್ಮ್ಗಳಲ್ಲಿ ಎಷ್ಟು ಖಾತೆಗಳನ್ನು ರದ್ದು ಮಾಡಲಾಗಿದೆ ಎಂಬುದು ತಿಳಿದಿಲ್ಲ. ಆದರೆ 4.7 ಮಿಲಿಯನ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ನಮ್ಮ ಮಕ್ಕಳನ್ನು ಪ್ರವೇಶಿಸುವುದನ್ನು ನಾವು ತಡೆಯುತ್ತಿದ್ದೇವೆ ಎಂದು ದೇಶದ ಇ-ಸೇಫ್ಟಿ ಆಯುಕ್ತೆ ಜೂಲಿ ಇನ್ಮನ್ ಗ್ರಾಂಟ್ ಹೇಳಿದ್ದಾರೆ.
ನಿಷೇಧಕ್ಕೊಳಗಾದ 10 ದೊಡ್ಡ ಕಂಪೆನಿಗಳು ಖಾತೆ ರದ್ದು ಮಾಡಿದ ಅಂಕಿಅಂಶಗಳನ್ನು ನಿಯಮಿತವಾಗಿ ಆಸ್ಟ್ರೇಲಿಯಾದ ನಿಯಂತ್ರಕಕ್ಕೆ ವರದಿ ಮಾಡಿವೆ. ಸಾಮಾಜಿಕ ಮಾಧ್ಯಮ ಕಂಪೆನಿಗಳು ನಿಷೇಧವನ್ನು ಜಾರಿಗೊಳಿಸುವುದರಿಂದ ಮಕ್ಕಳು ಹೊಸ ಖಾತೆಗಳನ್ನು ರಚಿಸುವುದನ್ನು ತಡೆಯಲಾಗುತ್ತದೆ. ಮೆಟಾ 5,50,000 ಖಾತೆಗಳನ್ನು ತೆಗೆದುಹಾಕಿದೆ. ಆದಾಗ್ಯೂ ಆಸ್ಟ್ರೇಲಿಯಾದ ಅಧಿಕಾರಿಗಳು ಯಾವ ಸೋಷಿಯಲ್ ಮೀಡಿಯಾ ಎಷ್ಟು ಖಾತೆ ರದ್ದು ಮಾಡಿದೆ ಎಂಬ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ.
ಆದರೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಗಳನ್ನು ಹೊಂದಿರುವ ಮೆಟಾ, ನಿಷೇಧ ಜಾರಿಗೆ ಬಂದ ಮರುದಿನದ ವೇಳೆಗೆ 16 ವರ್ಷದೊಳಗಿನ ಬಳಕೆದಾರರಿಗೆ ಸೇರಿದ ಸುಮಾರು 5,50,000 ಖಾತೆಗಳನ್ನು ತೆಗೆದುಹಾಕಿದೆ ಎಂದು ಹೇಳಿದೆ. ಅಂಕಿಅಂಶಗಳನ್ನು ಬಹಿರಂಗಪಡಿಸುವ ಬ್ಲಾಗ್ ಪೋಸ್ಟ್ನಲ್ಲಿ, ಮೆಟಾ ನಿಷೇಧವನ್ನು ಟೀಕಿಸಿದ್ದು ನಿಷೇಧ ಅನ್ವಯಿಸದ ಸಣ್ಣ ವೇದಿಕೆಗಳು ಸುರಕ್ಷತೆಗೆ ಆದ್ಯತೆ ನೀಡದಿರಬಹುದು ಎಂದು ಹೇಳಿದೆ.
ಕಾನೂನು ಅನುಷ್ಠಾನ ಸುಗಮ
ಆಸ್ಟ್ರೇಲಿಯಾದಲ್ಲಿ 16 ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸುವ ಕಾನೂನು ಅನುಷ್ಠಾನ ಸುಗಮವಾಗಿತ್ತು. ಸಾರ್ವಜನಿಕ ಶಿಕ್ಷಣ ಅಭಿಯಾನಗಳು ಮತ್ತು ಮಕ್ಕಳ ವಯಸ್ಸನ್ನು ಪರಿಶೀಲಿಸುವ ತಂತ್ರಜ್ಞಾನಗಳು ಹೊಸ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಹಾಯ ಮಾಡಿದೆ. ಇ-ಸೇಫ್ಟಿಯ ನಿಯಂತ್ರಕ ಮಾರ್ಗದರ್ಶನ ಮತ್ತು ವೇದಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಈಗಾಗಲೇ ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಕೆಲವು ಅಪ್ರಾಪ್ತ ವಯಸ್ಸಿನ ಮಕ್ಕಳು ವಿವಿಧ ಮಾರ್ಗಗಳನ್ನು ಬಳಸಿ ಸೋಷಿಯಲ್ ಮೀಡಿಯಾಕ್ಕೆ ಪ್ರವೇಶಿಸುವ ಸಾಧ್ಯತೆ ಕೂಡಾ ಇದೆ. ನಾವು ಈ ರೀತಿಯ ಪ್ರವೃತ್ತಿಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ ಇ-ಸೇಫ್ಟಿ ಆಯುಕ್ತೆ.
ವಿಶ್ವದ ಕೆಲವು ದೊಡ್ಡ ತಂತ್ರಜ್ಞಾನ ಕಂಪೆನಿಗಳ ವಿರೋಧದ ಹೊರತಾಗಿಯೂ ಸರಕಾರ ಈ ಐತಿಹಾಸಿಕ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂಬುದನ್ನು ಈ ಮೈಲಿಗಲ್ಲು ತೋರಿಸುತ್ತದೆ ಎಂದು ಹೇಳಿದ್ದಾರೆ ಸಂವಹನ ಸಚಿವೆ ಅನಿಕಾ ವೆಲ್ಸ್. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಪ್ರತಿಯೊಬ್ಬರನ್ನು ನಾವು ಕಡೆಗಣಿಸಿದ್ದೇವೆ. ಈಗ ಆಸ್ಟ್ರೇಲಿಯಾದ ಪೋಷಕರು ತಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಮರಳಿ ಪಡೆಯಬಹುದು ಎಂಬ ವಿಶ್ವಾಸ ಹೊಂದಬಹುದು ಎಂದಿದ್ದಾರೆ.
ಟೀಕೆ ಮತ್ತು ನಿರಂತರ ಸವಾಲುಗಳು
ಕಾನೂನನ್ನು ಪೋಷಕರು ಮತ್ತು ಮಕ್ಕಳ ಸುರಕ್ಷತೆಗಾಗಿ ಹೋರಾಟ ಮಾಡುವವರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಆದರೆ ಆನ್ಲೈನ್ ಗೌಪ್ಯತೆ ಗುಂಪುಗಳು ಮತ್ತು ಕೆಲವು ಯುವ ಸಂಘಟನೆಗಳು ಟೀಕಿಸಿವೆ. ಆನ್ಲೈನ್ ಸ್ಥಳಗಳು ದುರ್ಬಲ ಮಕ್ಕಳಿಗೆ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಂಬಲವನ್ನು ಒದಗಿಸಬಹುದು ಎಂದು ಇವರು ವಾದಿಸುತ್ತಾರೆ. ಪೋಷಕರು ಅಥವಾ ಹಿರಿಯ ಸಹೋದರರ ಸಹಾಯದಿಂದ ಕೆಲವು ಹದಿಹರೆಯದವರು ವಯಸ್ಸಿನ ಪರಿಶೀಲನಾ ಮಾರ್ಗಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೂಡಾ ವರದಿಯಾಗಿದೆ. ನಿಷೇಧ ಜಾರಿಗೆ ಬಂದಾಗ ಪರ್ಯಾಯ ಅಪ್ಲಿಕೇಶನ್ಗಳ ಡೌನ್ಲೋಡ್ಗಳಲ್ಲಿ ತಾತ್ಕಾಲಿಕ ಏರಿಕೆ ಕಂಡುಬಂದಿದೆ ಎಂದು ಜೂಲಿ ಇನ್ಮನ್ ಗ್ರಾಂಟ್ ಸಮ್ಮತಿಸಿದ್ದು, ಬಳಕೆಯಲ್ಲಿ ಯಾವುದೇ ನಿರಂತರ ಹೆಚ್ಚಳವಿಲ್ಲ ಎಂದಿದ್ದಾರೆ.
ಮಾರ್ಚ್ನಲ್ಲಿ ಇ-ಸೇಫ್ಟಿ ಆಫೀಸ್ ವಿಶ್ವದ ಪ್ರಮುಖ AI ಕಂಪ್ಯಾನಿಯನ್ ಮತ್ತು ಚಾಟ್ಬಾಟ್ ನಿರ್ಬಂಧಗಳನ್ನು ಪರಿಚಯಿಸಲು ಯೋಜಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಆಸ್ಟ್ರೇಲಿಯಾ ಮಾರ್ಗ ಅನುಸರಿಸಿದ ದೇಶಗಳು
ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತು ಆಸ್ಟ್ರೇಲಿಯಾದಲ್ಲಿ ಈ ಕಾನೂನು ತೀವ್ರ ಚರ್ಚೆಯನ್ನು ಹುಟ್ಟುಹಾಕುವುದರ ಜತೆಗೆ ಇದೇ ರೀತಿಯ ನಿರ್ಬಂಧಗಳ ಬಗ್ಗೆ ಇತರ ದೇಶಗಳೂ ಆಸಕ್ತಿ ತೋರಿಸಿವೆ.
ಉದಾಹರಣೆಗೆ, ಡೆನ್ಮಾರ್ಕ್ ಕಳೆದ ನವೆಂಬರ್ನಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಯೋಜನೆಯನ್ನು ಘೋಷಿಸಿತು. 16 ವರ್ಷದೊಳಗಿನ ಮಕ್ಕಳು 2026 ರಿಂದ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸೈನ್ ಅಪ್ ಮಾಡುವುದನ್ನು ನಿರ್ಬಂಧಿಸುವ ಯೋಜನೆಯನ್ನು ಮಲೇಷ್ಯಾ ಘೋಷಿಸಿತ್ತು. ಡಿಸೆಂಬರ್ನಲ್ಲಿ, ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರ ಆಸ್ಟ್ರೇಲಿಯಾದ ಚೌಕಟ್ಟಿಗೆ ಹೋಲುವ ಕಾನೂನನ್ನು ತರುವ ಸಾಧ್ಯತೆಯನ್ನು ಅನ್ವೇಷಿಸಬಹುದು ಎಂದು ಹೇಳಿತ್ತು.







