ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬಹುದು: ಟೆಲಿಗ್ರಾಮ್ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಹೇಳಿದ್ದೇನು?

ದೆಹಲಿ ಹೈಕೋರ್ಟ್ | Photo Credit : PTI
ಟೆಲಿಗ್ರಾಮ್ (Telegram) ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿರುವ ದಿಲ್ಲಿ ಹೈಕೋರ್ಟ್, ಮಾಹಿತಿ ತಂತ್ರಜ್ಞಾನ ಕಾಯ್ದೆ–2000 (IT Act) ರ ಸೆಕ್ಷನ್ 69A ಅಡಿಯಲ್ಲಿ ಇಡೀ ಅಪ್ಲಿಕೇಶನ್ ಅಥವಾ ಪ್ಲಾಟ್ಫಾರ್ಮ್ಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಶುಕ್ರವಾರ ತೀರ್ಪು ನೀಡಿದೆ.
ದೇಶದ ಭದ್ರತೆ, ಸಾರ್ವಭೌಮತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅದಕ್ಕೆ ಸಂಬಂಧಿಸಿದ ವಿಷಯಗಳ ಹಿತದೃಷ್ಟಿಯಿಂದ, ನಿಗದಿತ ನಿಯಮಾವಳಿಗಳನ್ನು ಅನುಸರಿಸಿ ಹಾಗೂ ಲಿಖಿತ ಕಾರಣಗಳೊಂದಿಗೆ ಯಾವುದೇ ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಪ್ರವೇಶಿಸದಂತೆ ತಡೆಯುವ ಪ್ರಕ್ರಿಯೆಯನ್ನು ಈ ಕಾನೂನು ನಿಬಂಧನೆ ಒಳಗೊಂಡಿದೆ.
ಇಂತಹ ನಿರ್ಬಂಧದ ಆದೇಶಗಳನ್ನು ಪಾಲಿಸಲು ವಿಫಲವಾಗುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ಎದುರಿಸಬೇಕಾಗಬಹುದು.
ಐಟಿ ಕಾಯ್ದೆಯ ಸೆಕ್ಷನ್ 2(1)(v) ನಲ್ಲಿ ಒಳಗೊಂಡಿರುವ "ಮಾಹಿತಿ" (Information) ಎಂಬ ಪದದ ವ್ಯಾಪ್ತಿಯಿಂದ ಯಾವುದೇ ಅಪ್ಲಿಕೇಶನ್ ಅಥವಾ ಪ್ಲಾಟ್ಫಾರ್ಮ್ ಅನ್ನು ಹೊರಗಿಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿ ತೇಜಸ್ ಕಾರಿಯಾ ಹೇಳಿದ್ದಾರೆ.
ಈ ವ್ಯಾಖ್ಯಾನದ ವಿಸ್ತಾರವು "ಮಾಹಿತಿ" ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಗ್ರಹಿಸಬೇಕೆಂಬುದನ್ನು ಸೂಚಿಸುತ್ತದೆ. ಕೇವಲ ವೈಯಕ್ತಿಕ ಬಳಕೆದಾರರ ಖಾತೆಗಳು, ಚಾನೆಲ್ಗಳು, ಚಿತ್ರಗಳು, ಪೋಸ್ಟ್ಗಳು, ಫೈಲ್ಗಳು ಅಥವಾ ಸಂದೇಶಗಳಿಗೆ ಮಾತ್ರ ಈ ಪದವನ್ನು ಸೀಮಿತಗೊಳಿಸುವ ಸಂಕುಚಿತ ಅರ್ಥ ನೀಡಿದರೆ, ಅದು ಸೆಕ್ಷನ್ 69A ರ ವ್ಯಾಪ್ತಿಯನ್ನು ಅನಗತ್ಯವಾಗಿ ಕುಗ್ಗಿಸುತ್ತದೆ ಹಾಗೂ ಈ ಕಾನೂನು ನಿಯಮವನ್ನು ನಿಷ್ಪ್ರಯೋಜಕಗೊಳಿಸಬಹುದು. ಆದ್ದರಿಂದ, "ಮಾಹಿತಿ" ಎಂಬ ಪದಕ್ಕೆ ವಿಶಾಲವಾದ ಮತ್ತು ತಾಂತ್ರಿಕವಾಗಿ ತಟಸ್ಥವಾದ ಅರ್ಥ ನೀಡುವುದು ಶಾಸಕಾಂಗದ ಉದ್ದೇಶವಾಗಿದೆ ಎಂದು ಕಂಡುಬರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು "ಕಂಪ್ಯೂಟರ್ ರಿಸೋರ್ಸ್" ಎಂಬ ವ್ಯಾಖ್ಯಾನವನ್ನು ಸಹ ಉಲ್ಲೇಖಿಸಿದೆ. ಸಾಫ್ಟ್ವೇರ್ ಆಧಾರಿತ ಮೂಲಸೌಕರ್ಯದಲ್ಲಿ ಸೃಷ್ಟಿಯಾಗುವ, ರವಾನೆಯಾಗುವ, ಸ್ವೀಕರಿಸಲಾಗುವ, ಸಂಗ್ರಹಿಸಲಾಗುವ ಅಥವಾ ಹೋಸ್ಟ್ ಮಾಡಲಾಗುವ ಮಾಹಿತಿಯು ಐಟಿ ಕಾಯ್ದೆಯ ಸೆಕ್ಷನ್ 69A ರ ವ್ಯಾಪ್ತಿಗೆ ಬರುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದೆ.
"ಯಾವುದೇ ಅಪ್ಲಿಕೇಶನ್ ಅಥವಾ ಪ್ಲಾಟ್ಫಾರ್ಮ್ ಎಲೆಕ್ಟ್ರಾನಿಕ್, ಮ್ಯಾಗ್ನೆಟಿಕ್ ಅಥವಾ ಆಪ್ಟಿಕಲ್ ಪ್ರೇರಣೆಗಳ ಮೂಲಕ ಲಾಜಿಕಲ್, ಅರ್ಥ್ಮೆಟಿಕ್ ಮತ್ತು ಮೆಮೊರಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ನೆಟ್ವರ್ಕ್ಗೆ ಸಂಪರ್ಕ ಹೊಂದಿದ ಇನ್ಪುಟ್, ಔಟ್ಪುಟ್, ಪ್ರೊಸೆಸಿಂಗ್, ಸ್ಟೋರೇಜ್, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಸಂವಹನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ಟೆಲಿಗ್ರಾಮ್ಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲು ಆದೇಶ ಹೊರಡಿಸಲು ಮೊದಲ ಪ್ರತಿವಾದಿಗೆ (ಕೇಂದ್ರ ಸರ್ಕಾರಕ್ಕೆ) ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಅಧಿಕಾರವಿದೆ ಎಂದು ಈ ನ್ಯಾಯಾಲಯ ಅಭಿಪ್ರಾಯಪಡುತ್ತದೆ" ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಐಟಿ ಕಾಯ್ದೆಯ ಸೆಕ್ಷನ್ 69A ಕೇವಲ "ಮಾಹಿತಿ"ಯನ್ನು ನಿರ್ಬಂಧಿಸಲು ಮಾತ್ರ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಅಧಿಕಾರ ನೀಡುತ್ತದೆ. ಈ ಅಧಿಕಾರವನ್ನು ಇಡೀ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವ ವ್ಯಾಪಕ ಅಧಿಕಾರವಾಗಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಟೆಲಿಗ್ರಾಮ್ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ಅವಲೋಕನಗಳು ಮಹತ್ವ ಪಡೆದಿವೆ.
ಆದರೆ, "ಮಾಹಿತಿ" ಎಂಬ ವ್ಯಾಖ್ಯಾನವು ಇಂತಹ ಮಧ್ಯವರ್ತಿಗಳು ಅಥವಾ ಪ್ಲಾಟ್ಫಾರ್ಮ್ಗಳನ್ನೂ ಒಳಗೊಂಡಿರುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು.
ತನ್ನ ವಿವರವಾದ ತೀರ್ಪಿನಲ್ಲಿ ನ್ಯಾಯಾಲಯವು, NEET-UG 2026 ಪರೀಕ್ಷೆಗೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಟೆಲಿಗ್ರಾಮ್ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿರುವುದು ಹಾಗೂ ಅದರ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ಜೂನ್ 30 ರವರೆಗೆ ನಿಷ್ಕ್ರಿಯಗೊಳಿಸಿರುವುದು ಸೂಕ್ತ ಕ್ರಮಗಳಾಗಿವೆ ಎಂದು ತೀರ್ಪು ನೀಡಿದೆ.
ಟೆಲಿಗ್ರಾಮ್ ನ ವಿನ್ಯಾಸವು ಚಾನೆಲ್ ಗಳು, ಗ್ರೂಪ್ ಗಳು, ಬಾಟ್ ಗಳು, ಕ್ಲೌಡ್ ಆಧಾರಿತ ಸ್ಟೋರೇಜ್ ಹಾಗೂ ಯೂಸರ್ನೇಮ್ ಆಧಾರಿತ ಅನಾಮಧೇಯತೆಯ ಮೂಲಕ ಅತ್ಯಂತ ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ವಿಷಯವನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಕಾನೂನುಬಾಹಿರ ವಿಷಯಗಳು ವೇಗವಾಗಿ ಹರಡಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿರ್ದಿಷ್ಟ ಚಾನೆಲ್ ಗಳು ಅಥವಾ ಬಾಟ್ಗಳನ್ನು ಮಾತ್ರ ತೆಗೆದುಹಾಕುವುದು ನಿಷ್ಪ್ರಯೋಜಕವಾಗಿದೆ. ಏಕೆಂದರೆ, ಅವುಗಳನ್ನು ನಿರ್ವಹಿಸುವವರು ಸುಲಭವಾಗಿ ಮತ್ತೊಂದು ನಕಲಿ ಚಾನೆಲ್ ಗಳನ್ನು ಸೃಷ್ಟಿಸಿ ಚಂದಾದಾರರನ್ನು ಅಲ್ಲಿಗೆ ವರ್ಗಾಯಿಸಬಲ್ಲರು ಎಂದು ನ್ಯಾಯಾಲಯ ಪತ್ತೆಹಚ್ಚಿದೆ.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಂಡು, ಪರೀಕ್ಷೆಗೆ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಸುಳ್ಳು ಸಂದೇಶಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ.
"ಆದ್ದರಿಂದ, ಟೆಲಿಗ್ರಾಮ್ ಪ್ಲಾಟ್ಫಾರ್ಮ್ ನ ವಿಶಿಷ್ಟ ಸ್ವರೂಪ ಮತ್ತು ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡರೆ, ನಿರ್ದಿಷ್ಟ ಬಾಟ್ ಗಳು ಮತ್ತು ಚಾನೆಲ್ ಗಳನ್ನು ತೆಗೆದುಹಾಕುವಂತಹ ಸೀಮಿತ ಕ್ರಮಗಳು ಪರಿಣಾಮಕಾರಿಯಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೆಕ್ಷನ್ 69A ಅಡಿಯಲ್ಲಿ ಆದೇಶ ಹೊರಡಿಸಿ, ಭಾರತದಲ್ಲಿ ಜೂನ್ 22 ರವರೆಗೆ ಟೆಲಿಗ್ರಾಮ್ ಪ್ಲಾಟ್ಫಾರ್ಮ್ಗೆ ಪ್ರವೇಶವನ್ನು ನಿರ್ಬಂಧಿಸಿತ್ತು. ಹಾಗೆಯೇ, ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳ ಎಡಿಟಿಂಗ್ ವೈಶಿಷ್ಟ್ಯವನ್ನು ಜೂನ್ 30 ರವರೆಗೆ ನಿಷ್ಕ್ರಿಯಗೊಳಿಸುವಂತೆ ಪ್ಲಾಟ್ಫಾರ್ಮ್ಗೆ ನಿರ್ದೇಶನ ನೀಡಿತ್ತು.
ಇತರ ಸಾಮಾಜಿಕ ಮಾಧ್ಯಮಗಳು ಯಾವುದೇ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸುತ್ತಿರುವಾಗ, ಸರ್ಕಾರವು ತನ್ನನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ಇದು ಭಾರತದ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ರ ಉಲ್ಲಂಘನೆಯಾಗಿದೆ ಎಂದು ವಾದಿಸಿ ಟೆಲಿಗ್ರಾಮ್ ಈ ಆದೇಶವನ್ನು ಪ್ರಶ್ನಿಸಿತ್ತು.
ಮೇ ತಿಂಗಳಿನಿಂದ ತಾವು ಸರ್ಕಾರಿ ಸಂಸ್ಥೆಗಳೊಂದಿಗೆ ಹಲವು ಸಭೆಗಳನ್ನು ನಡೆಸಿರುವುದಾಗಿ ಹಾಗೂ ಕಾನೂನು ಉಲ್ಲಂಘನೆಗಳನ್ನು ತಡೆಯಲು ಕೈಗೊಂಡ ಮುಂಜಾಗ್ರತಾ ಮತ್ತು ತದನಂತರದ ನಿಯಂತ್ರಣ ಕ್ರಮಗಳನ್ನು ಒಳಗೊಂಡ ವಿವರವಾದ ವರದಿಗಳನ್ನು ಸಲ್ಲಿಸಿರುವುದಾಗಿ ಕಂಪನಿ ತಿಳಿಸಿದೆ.
ಜೂನ್ 9ರಂದು ಅಧಿಕಾರಿಗಳಿಂದ ನಿರ್ದಿಷ್ಟ ಯುಆರ್ಎಲ್ಗಳನ್ನು ಪಡೆದ ಕೇವಲ ಒಂದು ಗಂಟೆಯೊಳಗೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಿರುವುದಾಗಿ ಟೆಲಿಗ್ರಾಮ್ ಹೇಳಿದೆ. ನೀಟ್ ಪರೀಕ್ಷೆಗೆ ಸಂಬಂಧಿಸಿದ ಕಾನೂನುಬಾಹಿರ ವಿಷಯಗಳನ್ನು ಹೊಂದಿದ್ದ 900ಕ್ಕೂ ಹೆಚ್ಚು ಲಿಂಕ್ ಗಳನ್ನು ತಾವು ತೆಗೆದುಹಾಕಿರುವುದಾಗಿ ಹಾಗೂ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲವನ್ನು ಬಳಸಿ ನಿಯಂತ್ರಣ ಪ್ರಕ್ರಿಯೆಯನ್ನು ಕೈಗೊಂಡಿರುವುದಾಗಿಯೂ ಕಂಪೆನಿ ವಾದಿಸಿದೆ.






