AC, ತಂಪು ಪಾನೀಯದಿಂದ ಗಂಟಲು ನೋವು? ವೈದ್ಯರು ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : magnific.com
ತಂಪು ಪಾನೀಯಗಳು ಮತ್ತು ಹವಾನಿಯಂತ್ರಣವು ನೇರವಾಗಿ ಸೋಂಕುಗಳಿಗೆ ಕಾರಣವಾಗುವುದಿಲ್ಲ. ವೈರಸ್ ಗಳು ಮತ್ತು ಬ್ಯಾಕ್ಟೀರಿಯಗಳು ಸಾಮಾನ್ಯವಾಗಿ ಗಂಟಲಿನ ಸೋಂಕುಗಳಿಗೆ ಕಾರಣವಾಗುತ್ತವೆ.
ತಂಪು ಪಾನೀಯ ಕುಡಿಯುವುದರಿಂದ ಅಥವಾ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತುಕೊಳ್ಳುವುದರಿಂದ ಗಂಟಲು ನೋವು ಬರುತ್ತದೆ ಎಂದು ಅನೇಕ ಮಂದಿ ನಂಬುತ್ತಾರೆ. ಇದು ನಿಜವೆ?
ಮುಂಬೈನ ವೋಕ್ಹಾರ್ಡ್ ಹಾಸ್ಪಿಟಲ್ಸ್ ನ ವೈದ್ಯರಾದ ಡಾ. ಹನಿ ಸಾವ್ಲಾ ಅವರು ಇದನ್ನು ಸಾಮಾನ್ಯ ಆರೋಗ್ಯ ಕಾಳಜಿ ಎಂದು ಅಭಿಪ್ರಾಯಪಟ್ಟರು. ಆದರೆ ತಂಪು ಪಾನೀಯಗಳು ಮತ್ತು ಹವಾನಿಯಂತ್ರಣವು ನೇರವಾಗಿ ಸೋಂಕುಗಳಿಗೆ ಕಾರಣವಾಗುವುದಿಲ್ಲ. ವೈರಸ್ಗಳು ಮತ್ತು ಬ್ಯಾಕ್ಟೀರಿಯಗಳು ಸಾಮಾನ್ಯವಾಗಿ ಗಂಟಲಿನ ಸೋಂಕುಗಳಿಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಹಾಗಿದ್ದರೂ, ಶೀತ ತಾಪಮಾನ ಮತ್ತು ಶುಷ್ಕ ಗಾಳಿಯು ಗಂಟಲನ್ನು ಕಿರಿಕಿರಿಗೆ ಒಳಪಡಿಸುವ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು. “ಸಾಮಾನ್ಯವಾಗಿ ಗಂಟಲು ತೆಳುವಾದ ಲೋಳೆಯ ಪದರದಿಂದ ರಕ್ಷಣೆ ಹೊಂದಿರುತ್ತದೆ. ಆ ಲೋಳೆ ಧೂಳು, ಅಲರ್ಜಿನ್ಗಳು ಮತ್ತು ಸೂಕ್ಷ್ಮ ಜೀವಿಗಳನ್ನು ಹಿಡಿದಿಟ್ಟುಕೊಂಡು ಗಂಟಲನ್ನು ರಕ್ಷಿಸುತ್ತದೆ. ಹವಾ ನಿಯಂತ್ರಣದಲ್ಲಿ ದೀರ್ಘಕಾಲ ಕಳೆಯುವುದು, ವಿಶೇಷವಾಗಿ ಗಾಳಿ ತುಂಬಾ ಒಣಗಿದ್ದರೆ, ಈ ರಕ್ಷಣಾತ್ಮಕ ಪದರವನ್ನು ದುರ್ಬಲಗೊಳಿಸಬಹುದು. ಇದು ಶುಷ್ಕತೆ, ಕಿರಿಕಿರಿ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು” ಎಂದು ಡಾ ಸಾವ್ಲಾ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನ ಗ್ಲೆನೆಗಲ್ಸ್ ಆಸ್ಪತ್ರೆಯ ವೈದ್ಯರಾದ ಡಾ ಮಂಜೂಷಾ ಅಗರ್ವಾಲ್ ಹೇಳುವ ಪ್ರಕಾರ, ಹವಾನಿಯಂತ್ರಣಗಳ ಒಳಾಂಗಣ ಆರ್ದ್ರತೆಯನ್ನು ಕಡಿಮೆ ಮಾಡಬಹುದು. ಇದರಿಂದಾಗಿ ಗಾಳಿಯು ಒಣಗುತ್ತದೆ ಎಂದು ಗಮನಿಸಿದರು. “ದೀರ್ಘಕಾಲದವರೆಗೆ ಒಣ ಗಾಳಿಯನ್ನು ಉಸಿರಾಡುವುದರಿಂದ ಗಂಟಲು ಮತ್ತು ಮೂಗಿನ ಮಾರ್ಗಗಳು ಒಣಗಬಹುದು, ಕಿರಿಕಿರಿ ಉಂಟಾಗಬಹುದು ಮತ್ತು ಕೆಲವು ಜನರು ಸೋಂಕುಗಳಿಗೆ ಹೆಚ್ಚು ಗುರಿಯಾಗಬಹುದು. ಸರಿಯಾಗಿ ನಿರ್ವಹಿಸದ ಹವಾ ನಿಯಂತ್ರಣಗಳು ಧೂಳು, ಅಲರ್ಜಿನ್ ಮತ್ತು ಗಂಟಲಿನ ಕಿರಿಕಿರಿ ಅಥವಾ ಅಲರ್ಜಿಯ ಲಕ್ಷಣಗಳನ್ನು ಉಂಟು ಮಾಡುವ ಇತರ ಕಣಗಳನ್ನು ಸಹ ಹರಡಬಹುದು. ಆದ್ದರಿಂದ ಚೆನ್ನಾಗಿ ಹೈಡ್ರೇಶನ್ ಆಗುವುದು ಸರಿಯಾದ ಒಳಾಂಗಣ ಆರ್ದತೆಯನ್ನು ಕಾಪಾಡಿಕೊಳ್ಳುವುದು ಮತ್ತು ಹವಾನಿಯಂತ್ರಣ ವ್ಯವಸ್ಥೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.”
ವೈದ್ಯರ ಪ್ರಕಾರ ತುಂಬಾ ತಣ್ಣನೆಯ ಪಾನೀಯಗಳನ್ನು ಕುಡಿಯುವುದರಿಂದ ಕೆಲವು ಜನರಲ್ಲಿ ತಾತ್ಕಾಲಿಕ ಸಂವೇದನೆ ಉಂಟಾಗುತ್ತದೆ. “ಅಲರ್ಜಿಗಳು, ಸೈನಸ್ ಸಮಸ್ಯೆಗಳು ಮತ್ತು ಆ್ಯಸಿಡ್ ರಿಫ್ಲಕ್ಸ್, ಅಥವಾ ನಿರಂತರ ವೈರಲ್ ಸೋಂಕು ಇರುವವರು ತಣ್ಣನೆ ಆಹಾರ ಅಥವಾ ಪಾನೀಯಗಳನ್ನು ಸೇವಿಸಿದಲ್ಲಿ ಲಕ್ಷಣಗಳು ಇನ್ನಷ್ಟು ಹದಗೆಡಬಹುದು.”
►ಕೆಲವರಲ್ಲಿ ಹೆಚ್ಚು ಪ್ರಭಾವ ಬೀರಲು ಕಾರಣವೇನು?
ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ಪರಿಣಾಮ ಬೀರಬಹುದು. “ಕೆಲವರು ಯಾವುದೇ ಸಮಸ್ಯೆಗಳಿಲ್ಲದೆ ಪ್ರತಿದಿನ ಐಸ್ಡ್ ಪಾನೀಯಗಳನ್ನು ಆನಂದಿಸಬಹುದು. ಆದರೆ ಇತರರು ಕನಿಷ್ಠ ಸೇವನೆಯಿಂದಲೂ ಗಂಟಲಿನಲ್ಲಿ ಅಸ್ವಸ್ಥತೆ ಅನುಭವಿಸಬಹುದು. ಇದು ಹೆಚ್ಚಾಗಿ ಅಲರ್ಜಿಕ್ ರಿನಿಟಿಸ್, ದೀರ್ಘಕಾಲದ ಸೈನುಟಿಸ್, ಆ್ಯಸಿಡ್ ರಿಫ್ಲಕ್ಸ್ ಅಥವಾ ಉಸಿರಾಟದ ಸೋಂಕು ಇರುವವರಲ್ಲಿ ಹೆಚ್ಚು ವೇಗವಾಗಿ ಅಸ್ವಸ್ಥತೆಯ ಪರಿಣಾಮ ಬೀರುತ್ತದೆ.”
ಹೈಡ್ರೇಶನ್ ಮತ್ತೊಂದು ಪ್ರಮುಖ ಅಂಶವಾಗಿದೆ. ಅನೇಕ ಮಂದಿ ಹವಾನಿಯಂತ್ರಿತ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ. ಆದರೆ ಸಾಕಷ್ಟು ನೀರು ಕುಡಿಯುವುದಿಲ್ಲ. ಅವರಿಗೆ ಒಣ ಗಂಟಲು ಕಿರಿಕಿರಿ, ಒರಟಾದ ಅನುಭವ ಅಥವಾ ನೋಯುತ್ತಿರುವ ಅನುಭವವಾಗುವ ಸಾಧ್ಯತೆ ಹೆಚ್ಚು!
ಪರಿಹಾರವೇನು?
ವೈದ್ಯರ ಪ್ರಕಾರ, ಚೆನ್ನಾಗಿ ನೀರು ಕುಡಿಯುವುದು, ತೀವ್ರ ತಾಪಮಾನದ ಬದಲಾವಣೆಗಳನ್ನು ತಪ್ಪಿಸುವುದು ಮತ್ತು ತುಂಬಾ ತಂಪಾದ ವಾತಾವರಣದಲ್ಲಿರುವಾಗ ಆಗಾಗ್ಗೆ ಹೊರಗೆ ಹೋಗುವುದು ಮಾಡಬೇಕಾಗುತ್ತದೆ. ದೀರ್ಘಕಾಲ ಹವಾನಿಯಂತ್ರಣದಲ್ಲಿದ್ದರೆ, ತಾಪಮಾನವನ್ನು ಹೆಚ್ಚು ತಂಪಾಗಿ ಇಡಬಾರದು.
ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇರುವ ಗಂಟಲು ನೋವು ಬಹುತೇಕ ಜ್ವರದ ಜೊತೆಗೆ ಬರುತ್ತದೆ. ನುಂಗಲು ತೊಂದರೆಯಾಗುತ್ತದೆ ಮತ್ತು ಗ್ರಂಥಿಗಳು ಊದಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲಗಳಿಂದ ಬರೆಯಲಾಗಿದೆ. ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೃತ್ತಿಪರ ಸಲಹೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.






