Special Summary Revision | ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ಏನಿದೆ? SSR ಮತ್ತು SIR ನಡುವಿನ ವ್ಯತ್ಯಾಸವೇನು?
► ದಾಮಿನಿ ನಾಥ್ – indianexpress. com ವರದಿ

(Photo Credit : PTI)
ಕಳೆದ ವರ್ಷ ಆರಂಭಿಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಚುನಾವಣಾ ಆಯೋಗವು (EC) ಗುರುವಾರ (ಅಕ್ಟೋಬರ್ 15) ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ವೇಳಾಪಟ್ಟಿಯನ್ನು ಪ್ರಕಟಿಸಿದೆ. 2027ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳು ಸೇರಿದಂತೆ ಒಟ್ಟು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ವೇಳಾಪಟ್ಟಿ ಅನ್ವಯವಾಗಲಿದೆ.
ಮತದಾರರ ಪಟ್ಟಿಯ ವಾರ್ಷಿಕ ನವೀಕರಣ ಪ್ರಕ್ರಿಯೆಯಾಗಿರುವ SSR ಅನ್ನು ಆಯೋಗವು 2026ರಲ್ಲಿ ನಡೆಸಿರಲಿಲ್ಲ. SSR ಪ್ರಕ್ರಿಯೆ ಎಂದರೇನು, ಆಯೋಗದ ಪ್ರಕಟಣೆಯಲ್ಲಿ ಏನಿದೆ ಮತ್ತು SSR ಹಾಗೂ SIR ನಡುವಿನ ವ್ಯತ್ಯಾಸಗಳೇನು ಎಂಬುದರ ವಿವರ ಇಲ್ಲಿದೆ.
ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಸಂವಿಧಾನದ 324ನೇ ವಿಧಿಯು ಚುನಾವಣಾ ಆಯೋಗಕ್ಕೆ ನೀಡಿದೆ. ಈ ಪಟ್ಟಿಗಳನ್ನು ಸಿದ್ಧಪಡಿಸುವ ಮತ್ತು ಪರಿಷ್ಕರಿಸುವ ವಿಧಾನವನ್ನು 1950ರ ಜನಪ್ರತಿನಿಧಿ ಕಾಯ್ದೆ ಹಾಗೂ ಅದಕ್ಕೆ ಸಂಬಂಧಿಸಿದ 1960ರ ಮತದಾರರ ನೋಂದಣಿ ನಿಯಮಗಳಲ್ಲಿ ನಿಗದಿಪಡಿಸಲಾಗಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಕಾರ್ಯಕ್ಕೆ ಚುನಾವಣಾ ನೋಂದಣಾಧಿಕಾರಿ (ERO) ಶಾಸನಬದ್ಧ ಅಧಿಕಾರಿಯಾಗಿರುತ್ತಾರೆ. 1950ರ ಕಾಯ್ದೆಯ ಸೆಕ್ಷನ್ 21(2)ರ ಪ್ರಕಾರ, ಲೋಕಸಭೆ ಅಥವಾ ರಾಜ್ಯ ವಿಧಾನಸಭೆಯ ಪ್ರತಿ ಸಾರ್ವತ್ರಿಕ ಚುನಾವಣೆಗೆ ಮೊದಲು ಮತ್ತು ಚುನಾವಣಾ ಆಯೋಗವು ನಿರ್ದೇಶಿಸಿದರೆ, ನಿಗದಿತ ಅರ್ಹತಾ ದಿನಾಂಕವನ್ನು ಆಧರಿಸಿ ಯಾವುದೇ ವರ್ಷದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗುತ್ತದೆ.
ಇದರ ಆಧಾರದ ಮೇಲೆ, ಆಯೋಗವು ಪ್ರತಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮೊದಲು ಹಾಗೂ ಪ್ರತಿವರ್ಷ ಜನವರಿ 1 ಅನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ SSR ಪ್ರಕ್ರಿಯೆ ನಡೆಸಿಕೊಂಡು ಬರುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಪಟ್ಟಿಗೆ ಹೊಸ ಅರ್ಹ ಮತದಾರರ ಹೆಸರುಗಳನ್ನು ಸೇರಿಸಲಾಗುತ್ತದೆ. ನಿಧನರಾದವರು ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ. ಅಂದರೆ, ಜನವರಿ 1ಕ್ಕೆ 18 ವರ್ಷ ತುಂಬುವವರು SSR ಪ್ರಕ್ರಿಯೆಯಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಹರಾಗುತ್ತಾರೆ.
ಅಸ್ತಿತ್ವದಲ್ಲಿರುವ ಎಲ್ಲ ಮತದಾರರು ತಮ್ಮ ಅರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಾದ ಮತ್ತು ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವ SIR ಪ್ರಕ್ರಿಯೆ ನಡೆಸುವುದಾಗಿ 2025ರ ಜೂನ್ 24ರಂದು ಪ್ರಕಟಿಸಿದ ಬಳಿಕ, ಚುನಾವಣಾ ಆಯೋಗವು 2026ರ SSR ಪ್ರಕ್ರಿಯೆಯನ್ನು ನಡೆಸಿರಲಿಲ್ಲ.
ಚುನಾವಣಾ ಆಯೋಗದ ಈಗಿನ SSR ಪ್ರಕಟಣೆಯಲ್ಲಿ ಏನಿದೆ?
ಗುರುವಾರ ಆಯೋಗವು 2025 ಮತ್ತು 2026ರಲ್ಲಿ SIR ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಗೂ SIR ನಡೆಸದಿರಲು ನಿರ್ಧರಿಸಿದ್ದ ಅಸ್ಸಾಂನಲ್ಲಿ 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ SSR ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವೇಳಾಪಟ್ಟಿಯ ಪ್ರಕಾರ, ಮತಗಟ್ಟೆಗಳ ಪುನಾರಚನೆ ಪ್ರಕ್ರಿಯೆ ನವೆಂಬರ್ 2ರೊಳಗೆ ಪೂರ್ಣಗೊಳ್ಳಲಿದೆ. ಕರಡು ಮತದಾರರ ಪಟ್ಟಿಯನ್ನು ನವೆಂಬರ್ 12ರಂದು ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 12ರಿಂದ ಡಿಸೆಂಬರ್ 11ರವರೆಗೆ ಕಾಲಾವಕಾಶ ನೀಡಲಾಗಿದೆ. ಡಿಸೆಂಬರ್ 28ರೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 4ರಂದು ಪ್ರಕಟಿಸಲಾಗುತ್ತದೆ.
SSR ನಡೆಯಲಿರುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳಂ, ಲಕ್ಷದ್ವೀಪ, ಮಧ್ಯಪ್ರದೇಶ, ಮಣಿಪುರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ. SIR ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ಉಳಿದ ರಾಜ್ಯಗಳಿಗೆ ನಂತರದ ದಿನಾಂಕದಲ್ಲಿ ವೇಳಾಪಟ್ಟಿ ಪ್ರಕಟಿಸುವುದಾಗಿ ಆಯೋಗ ತಿಳಿಸಿದೆ.
18 ವರ್ಷ ತುಂಬಿದವರು ಅಥವಾ ತಮ್ಮ ಹೆಸರನ್ನು ಬೇರೆಡೆಗೆ ವರ್ಗಾಯಿಸಲು ಬಯಸುವವರು ಪರಿಷ್ಕರಣೆ ಅವಧಿಯಲ್ಲಿ ಫಾರ್ಮ್ 6 (ಹೊಸ ಮತದಾರರ ನೋಂದಣಿಗೆ) ಅಥವಾ ಫಾರ್ಮ್ 8 (ಸ್ಥಳಾಂತರ ಅಥವಾ ತಿದ್ದುಪಡಿಗೆ) ಭರ್ತಿ ಮಾಡಬಹುದು.
SSR ಮತ್ತು SIR ನಡುವಿನ ವ್ಯತ್ಯಾಸವೇನು?
20 ವರ್ಷಗಳ ವಿರಾಮದ ಬಳಿಕ 2025ರಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಸಲು ನಿರ್ಧರಿಸಿದಾಗ, ಆಯೋಗವು ಪ್ರತಿವರ್ಷ ನಡೆಸುತ್ತಿದ್ದ SSR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. SIRಗಾಗಿ ಆಯೋಗ ಅಳವಡಿಸಿಕೊಂಡ ವಿಧಾನವು ಹಿಂದಿನ ತೀವ್ರ ಪರಿಷ್ಕರಣೆಗಳಿಗಿಂತ ಭಿನ್ನವಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಮತದಾರರು ಪೌರತ್ವ ಸೇರಿದಂತೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಪರಿಣಾಮವಾಗಿ, ವಿವಿಧ ರಾಜ್ಯಗಳಲ್ಲಿ SIRನ ಕರಡು ಹಂತಗಳಲ್ಲಿ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿತ್ತು.
SIR ಪ್ರಕ್ರಿಯೆಯಲ್ಲಿ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಲು ಪ್ರತಿಯೊಬ್ಬ ಮತದಾರರೂ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವುದು ಕಡ್ಡಾಯವಾಗಿತ್ತು. ಆದರೆ, SSR ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಮತದಾರರ ಹೆಸರುಗಳು ಸ್ವಯಂಚಾಲಿತವಾಗಿ ಕರಡು ಪಟ್ಟಿಗೆ ಸೇರ್ಪಡೆಗೊಳ್ಳುತ್ತವೆ. ನಿಧನರಾದ ಅಥವಾ ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಚುನಾವಣಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಅವರು ನೋಟಿಸ್ ನೀಡುವುದು ಮತ್ತು ವಿಚಾರಣೆ ನಡೆಸುವುದು ಸೇರಿದಂತೆ ಶಾಸನಬದ್ಧ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
ಕರಡು ಪಟ್ಟಿ ಪ್ರಕಟಗೊಂಡ ಬಳಿಕ, ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವಂತೆ ಕೋರಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮತದಾರರಿಗೆ ಒಂದು ತಿಂಗಳ ಕಾಲಾವಕಾಶವಿರುತ್ತದೆ.
SIR ಪ್ರಕ್ರಿಯೆಯಲ್ಲಿ ಕರಡು ಪಟ್ಟಿ ಪ್ರಕಟವಾದ ಬಳಿಕ, ಆಯೋಗದ ಸಾಫ್ಟ್ವೇರ್ ಮೂಲಕ ದಾಖಲೆಗಳಲ್ಲಿ ‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಕಂಡುಬಂದ ಮತದಾರರಿಗೆ ಕೇಂದ್ರ ಮಟ್ಟದಲ್ಲಿ ನೋಟಿಸ್ಗಳನ್ನು ಕಳುಹಿಸಲಾಗಿತ್ತು. ಅಂತಹ ಮತದಾರರು ಅಂತಿಮ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟುಹೋಗದಂತೆ ತಡೆಯಲು ಹೆಚ್ಚುವರಿ ದಾಖಲೆಗಳನ್ನು ಒದಗಿಸುವುದು ಮತ್ತು ವಿಚಾರಣೆಗೆ ಹಾಜರಾಗುವುದು ಅಗತ್ಯವಾಗಿತ್ತು. SSR ಪ್ರಕ್ರಿಯೆಯಲ್ಲಿ ಇಂತಹ ಕ್ರಮ ಇರುವುದಿಲ್ಲ.
ಸೌಜನ್ಯ: indianexpress.com






