ಜೇಡ ತನ್ನ ಮರಿಗಳಿಗೆ ಹಾಲು ಕುಡಿಸುತ್ತದೆ ಎನ್ನುವುದು ನಿಮಗೆ ಗೊತ್ತೆ?

ಸಾಂದರ್ಭಿಕ ಚಿತ್ರ | Photo Credit : freepik
ಒಂದು ಪ್ರಬೇಧದ ಜೇಡ ಟಾಕ್ಸಿಯಸ್ ಮ್ಯಾಗ್ನಸ್ ಮಕ್ಕಳನ್ನು ಪೋಷಿಸುವ ಶೈಲಿ ಕುತೂಹಲಕಾರಿಯಾಗಿದೆ.
ಹಾಲಿನ ಬಗ್ಗೆ ಯೋಚಿಸಿದಾಗ ಬಹುಶಃ ಮನಸ್ಸಿಗೆ ಬರುವ ಕೊನೆಯ ಜೀವಿ ಜೇಡ. ವಿಶೇಷವಾಗಿ ಜೇಡಗಳು ಹುಟ್ಟಿದ ಸ್ವಲ್ಪ ಸಮಯದ ನಂತರ ತಮ್ಮ ಶಿಶುಗಳನ್ನು ತ್ಯಜಿಸುವುದಕ್ಕೆ ಕುಖ್ಯಾತವಾಗಿವೆ. ಆದರೆ ಒಂದು ಸಣ್ಣ ಪ್ರಭೇದವು ಆ ಕಲ್ಪನೆಯನ್ನು ಸಂಪೂರ್ಣವಾಗಿ ಮರಳಿ ಬರೆದಿದೆ.
ಹೆಚ್ಚಿನ ಜೇಡಗಳು ಸರಳ ಮಾದರಿಯನ್ನು ಅನುಸರಿಸುತ್ತವೆ. ಮೊಟ್ಟೆಗಳನ್ನು ಇಡುವುದು, ಅವುಗಳನ್ನು ಅಲ್ಪಕಾಲ ಕಾಪಾಡಿ ತಮ್ಮ ಪಾಡಿಗೆ ತಾವು ಮುಂದುವರಿಯುತ್ತವೆ. ಆದರೆ ಈ ಒಂದು ಪ್ರಬೇಧದ ಜೇಡ ಟಾಕ್ಸಿಯಸ್ ಮ್ಯಾಗ್ನಸ್ ಮಕ್ಕಳನ್ನು ಪೋಷಿಸುವ ಶೈಲಿ ಕುತೂಹಲಕಾರಿಯಾಗಿದೆ.
ಟಾಕ್ಸಿಯಸ್ ಮ್ಯಾಗ್ನಸ್ ತನ್ನ ಮರಿಗಳನ್ನು ಸ್ವಯಂ ಪೋಷಣೆ ಮಾಡಿಕೊಳ್ಳಲು ಬಿಡುವುದಿಲ್ಲ. ಬದಲಾಗಿ ತಾಯಿ ಜೇಡವು ಪೋಷಕಾಂಶಗಳಿಂದ ಕೂಡಿದ ಹಾಲಿನಂತಹ ದ್ರವವನ್ನು ಉತ್ಪಾದಿಸುತ್ತದೆ. ಅದನ್ನು ನೇರವಾಗಿ ತನ್ನ ಜೇಡದ ಮರಿಗಳಿಗೆ ನೀಡುತ್ತದೆ. ಮೊದಲ ಕೆಲ ದಿನಗಳವರೆಗೆ ಇದು ಅವುಗಳ ಮುಖ್ಯ ಪೋಷಣೆಯ ಮೂಲವಾಗುತ್ತದೆ. ಈ ದ್ರವವು ಸಸ್ತನಿಗಳ ಹಾಲಿನಂತೆಯೇ ಪ್ರೊಟೀನ್, ಕೊಬ್ಬು ಮತ್ತು ಸಕ್ಕರೆಗಳನ್ನು ಹೊಂದಿರುತ್ತದೆ ಎಂದು ಸಂಶೋದಕರು ಕಂಡುಕೊಂಡಿದ್ದಾರೆ. ಇದು ಜೇಡದ ಸಂತಾನೋತ್ಪತ್ತಿ ವ್ಯವಸ್ಥೆಯಿಂದ ಉತ್ಪತ್ತಿಯಾಗುತ್ತದೆ ಮತ್ತು ಮರಿಗಳಿ ತಾಯಿಗೆ ಸಮೀಪದಲ್ಲಿದ್ದು ಅವುಗಳನ್ನು ಸಕ್ರಿಯವಾಗಿ ಸೇವಿಸುತ್ತವೆ.
ಇನ್ನೂ ಅಸಾಮಾನ್ಯ ಸಂಗತಿಯೆಂದರೆ ಈ ಆರೈಕೆ ಬೇಗನೇ ಕೊನೆಗೊಳ್ಳುವುದಿಲ್ಲ. ಜೇಡ ಮರಿಗಳು ತಾಯಿ ಸುತ್ತಲೂ ಇರುತ್ತವೆ. ಅವು ಬೆಳೆದಂತೆ ಪೋಷಣೆ ಮತ್ತು ರಕ್ಷಣೆಗಾಗಿ ಕನಿಷ್ಠ 38-40 ದಿನಗಳವರೆಗೆ ತಾಯಿಯ ಬಳಿಗೆ ಮರಳುತ್ತವೆ. ವಾಸ್ತವದಲ್ಲಿ, ಹೆಣ್ಣು ಮರಿಗಳು ಲೈಂಗಿಕ ಪ್ರಬುದ್ಧತೆಯವರೆಗೂ ಹಾಲುಣಿಸಲು ಮರಳುವುದನ್ನು ಮುಂದುವರಿಸುತ್ತವೆ. ಈ ರೀತಿಯ ವಿಸ್ತೃತ ಪೋಷಕರ ಆರೈಕೆ ಜೇಡಗಳಲ್ಲಿ ಅತ್ಯಂತ ಅಪರೂಪ.
ಬದುಕುಳಿಯುವ ದೃಷ್ಟಿಕೋನದಿಂದ ಈ ತಂತ್ರವು ಅರ್ಥಪೂರ್ಣವಾಗಿದೆ. ಕಡಿಮೆ ಸಂತತಿಗಳಿಗೆ ಹೆಚ್ಚಿನ ಶಕ್ತಿಯನ್ನು ಹೂಡಿಕೆ ಮಾಡುವ ಮೂಲಕ, ತಾಯಿ ಅನಿರೀಕ್ಷಿತ ಪರಿಸರದಲ್ಲಿ ಅವುಗಳ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಬದುಕುಳಿಯುವಿಕೆಯನ್ನು ಅದೃಷ್ಟಕ್ಕೆ ಬಿಡುವ ಬದಲು ಅವಳು ತನ್ನ ಮರಿಗಳಿಗೆ ಬಲವಾದ ಆರಂಭ ನೀಡುತ್ತಾಳೆ.
ಈ ನಡವಳಿಕೆಯ ಆವಿಷ್ಕಾರವು ಪ್ರಾಣಿ ಸಾಮ್ರಾಜ್ಯದಲ್ಲಿ “ಹಾಲು” ಬಗ್ಗೆ ವಿಜ್ಞಾನಿಗಳು ಹೇಗೆ ಯೋಚಿಸುತ್ತಾರೆ ಎಂಬ ಕಲ್ಪನೆಯನ್ನು ಬದಲಿಸಿದೆ. ಈ ದ್ರವವು ಸಸ್ತನಿ ಹಾಲಿಗೆ ಹೋಲುವಂತಿಲ್ಲವಾದರೂ, ಇದು ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಪೋಷಕರಿಂದ ಸಂತತಿಗೆ ನೇರ ಪೋಷಣೆ ನೀಡುತ್ತದೆ. ಕುತೂಹಲಕರವೆಂದರೆ ಈ ಜೇಡದ ಹಾಲು ಹಸುವಿನ ಹಾಲಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಿನ ಪ್ರೊಟೀನ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ ಕೊಬ್ಬು ಮತ್ತು ಸಕ್ಕರೆಗಳನ್ನು ಹೊಂದಿರುತ್ತದೆ.
ಕೃಪೆ: indianexpress.com






