ರಾಜ್ಯದ ಶಾಲೆಗಳಲ್ಲಿ ದುರ್ಬಲ ವರ್ಗಗಳ ದಾಖಲಾತಿ ದರ ಹೆಚ್ಚಿಸುವಲ್ಲಿ ವಿಫಲ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು, ಜೂ.7: ರಾಜ್ಯದ ಶಾಲೆಗಳಲ್ಲಿ ಕಡಿಮೆ ಆದಾಯದ ವರ್ಗಗಳು, ಪರಿಶಿಷ್ಟ ಜಾತಿ ಪಂಗಡಗಳು, ಪರಿಶಿಷ್ಟ ಜಾತಿಯ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳು ಮತ್ತು ಮುಸ್ಲಿಮ ಸಮುದಾಯದ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಇದೆ. ಎಸ್ಸಿ, ಎಸ್ಟಿ ಮತ್ತು ಮುಸ್ಲಿಮ್ ಸಮುದಾಯಗಳ ಹೆಣ್ಣು ಮಕ್ಕಳು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಿಂದುಳಿದಿದ್ದಾರೆ.
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಹಾಸ್ಟೆಲ್ ವಿದ್ಯಾರ್ಥಿ ವೇತನ ನೀಡುತ್ತಿದ್ದರೂ ಕಡಿಮೆ ಆದಾಯದ ಗುಂಪುಗಳಿಗೆ (ವಿಭಿನ್ನ ಆದಾಯ ಮಿತಿಯೊಂದಿಗೆ) ಮತ್ತು ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮುಸ್ಲಿಮರ ದಾಖಲಾತಿ ದರವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಹಾಗೂ ಉನ್ನತ ಜಾತಿಗಳು ಮತ್ತಿತರರ ನಡುವಣ ಅಂತರವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಬಯಲು ಮಾಡಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗವು ವಿಸ್ತರಣೆ- ಸಮತೆ-ಗುಣಮಟ್ಟ- ಆಡಳಿತ-ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಸಂಬಂಧಿಸಿದಂತೆ ನೀಡಿರುವ ವರದಿಯು ಸಾಮಾಜಿಕ ಮತ್ತು ಶೈಕ್ಷಣಿಕ ಆಯಾಮದಲ್ಲಿ ಶಿಕ್ಷಣದ ಗುಣಮಟ್ಟ,, ಶಾಲಾ ದಾಖಲಾತಿ, ಡ್ರಾಪ್ ಔಟ್ ಸಮಸ್ಯೆಯನ್ನು ಚರ್ಚಿಸಿದೆ.
ಈಗಾಗಲೇ ಈ ವರದಿಯನ್ನು ಆಯೋಗವು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿನ ಶಿಫಾರಸುಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ವರದಿಯ ಎಲ್ಲಾ ಸಂಪುಟಗಳನ್ನು ಸಚಿವರಿಗೆ ನೀಡಿತ್ತು. ಆಯೋಗವು ನೀಡಿರುವ ವರದಿಯ ಎಲ್ಲಾ ಸಂಪುಟಗಳು ‘the-file.in’ಗೆ ಲಭ್ಯವಾಗಿವೆ.
► ಸರಕಾರಿ ಕಟ್ಟಡದಲ್ಲಿವೆ ಶೇ.64ರಷ್ಟು ಶಾಲೆಗಳು :
ಕರ್ನಾಟಕದಲ್ಲಿ ಶೇ. 64ರಷ್ಟು ಶಾಲೆಗಳು ಮಾತ್ರ ಸರಕಾರಿ ಕಟ್ಟಡಗಳಲ್ಲಿವೆ. ಶೇ.29ರಷ್ಟು ಶಾಲೆಗಳು ಖಾಸಗಿ ಕಟ್ಟಡಗಳಲ್ಲಿವೆ. ನಗರ ಪ್ರದೇಶಗಳಲ್ಲಿ ಶೇ. 55ಕ್ಕಿಂತ ಹೆಚ್ಚು ಶಾಲೆಗಳು ಖಾಸಗಿ ಕಟ್ಟಡಗಳಲ್ಲಿವೆ. ಅವುಗಳಲ್ಲಿ ಹಲವು ಬಾಡಿಗೆ ವಸತಿಗಳಲ್ಲಿವೆ. ನಗರ ಪ್ರದೇಶಗಳಲ್ಲಿನ ಕೆಲವು ಮಾಧ್ಯಮಿಕ ಶಾಲೆಗಳು ಶೇ.21ರಷ್ಟು ಬಾಡಿಗೆ ಕಟ್ಟಡಗಳಲ್ಲಿವೆ.
► ಶೇ.30ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯ :
ಕೇವಲ ಶೇ.50ರಷ್ಟು ಶಾಲೆಗಳಲ್ಲಿ ಮಾತ್ರ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ಕೊಠಡಿಗಳಿವೆ. ಕೇವಲ ಶೇ.13ರಷ್ಟು ಶಾಲೆಗಳಲ್ಲಿ ಮಾತ್ರ ಗ್ರಂಥಪಾಲಕರಿದ್ದಾರೆ. ಸುಮಾರು ಶೇ.72ರಷ್ಟು ಶಾಲೆಗಳು ದಿನಪತ್ರಿಕೆಗಳನ್ನಿಡುತ್ತಿವೆ. ಶೇ.34 ಶಾಲೆಗಳಲ್ಲಿ ಮಳೆ ಕೊಯ್ಲು ಸೌಲಭ್ಯವಿದೆ. ಶೇ.33ರಷ್ಟು ಶಾಲೆಗಳಲ್ಲಿ ಹಿತ್ತಲು ಕೈ ತೋಟಗಳಿವೆ. ಕೇವಲ ಶೇ.30ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ. ಶೇ. 56ಷ್ಟು ಕಂಪ್ಯೂಟರ್ಗಳಿವೆ. ಶೇ.70ಕ್ಕಿಂತ ಅನುದಾನ ರಹಿತ ಶಾಲೆಗಳು
ಇಂಟರ್ನೆಟ್ ಸೌಲಭ್ಯವನ್ನು ಹೊಂದಿವೆ. ಆದರೆ ಕೇವಲ ಶೇ. 40ರಷ್ಟು ರಾಜ್ಯ ಸರಕಾರಿ ಶಾಲೆಗಳು ಮಾತ್ರ ಈ ಸೌಲಭ್ಯ ಹೊಂದಿವೆ. ಕಿರಿಯ ಪ್ರಾಥಮಿಕ ಹಂತದಲ್ಲಿ ಖಾಸಗಿ ಶಾಲೆಗಳಲ್ಲಿ ಇಂಟರ್ನೆಟ್ ಲಭ್ಯತೆ ಇದೆ. ಆದರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಟರ್ನೆಟ್ ಸೌಲಭ್ಯ ಇರುವುದು ಕೇವಲ ಶೇ.5ರಷ್ಟು ಮಾತ್ರ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯಗಳ ಕೊರತೆ ಇದೆ. ಸರಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯದ ಲಭ್ಯತೆಯೂ ಇಲ್ಲ. ಶೇ.6ರಷ್ಟು ಶಾಲೆಗಳಲ್ಲಿ ಐಸಿಟಿ ಲ್ಯಾಬ್ ನಗರದ ಶಾಲೆಗಳು
ಇಂಟರ್ನೆಟ್ , ಡೆಸ್ಕ್ ಟಾಪ್, ಪ್ರಿಂಟರ್, ಲ್ಯಾಪ್ಟಾಪ್ ಮತ್ತು ಪ್ರೊಜೆಕ್ಟರ್ನಂತಹ ಡಿಜಿಟಲ್ ಮೂಲಸೌಕರ್ಯಗಳನ್ನು ಹೊಂದಿವೆ. ಕೆಲವು ಶಾಲೆಗಳು ಡಿಜಿಟಲ್ ಬೋರ್ಡ್ ಮತ್ತು ಐಸಿಟಿ ಲ್ಯಾಬ್ ಹೊಂದಿವೆ. ಆದರೆ ಕೇವಲ ಶೇ. 6ರಷ್ಟು ಶಾಲೆಗಳು ಮಾತ್ರ ಐಸಿಟಿ ಲ್ಯಾಬ್ ಹೊಂದಿವೆ. ಈ ಸೌಲಭ್ಯವು ಗ್ರಾಮೀಣ ಪ್ರದೇಶಗಳಲ್ಲಿ ಶೇ. 4ರಷ್ಟಿದ್ದರೇ ಶೇ. 10ರಷ್ಟು ನಗರ ಪ್ರದೇಶಗಳಲ್ಲಿ ಈ ಸೌಲಭ್ಯವಿದೆ. ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆ ಉಳಿದ ಜಿಲ್ಲೆಗಳಿಗಿಂತ ಉತ್ತಮವಾಗಿವೆ ಎಂದು ವರದಿಯಲ್ಲಿ ವಿವರಿಸಿದೆ.
► ಉತ್ತರ ಕರ್ನಾಟಕದಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ:
ಯಾದಗಿರಿಯಂತಹ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಬ್ಬರು ವಯಸ್ಕರಲ್ಲಿ ಒಬ್ಬರು ಅನಕ್ಷರಸ್ಥರಿದ್ದಾರೆ. ನೆರೆಹೊರೆಯಲ್ಲಿ ಶಾಲೆಗಳ ಲಭ್ಯತೆ, ದಾಖಲಾತಿಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ವಿವಿಧ ಹಂತಗಳಲ್ಲಿ ಶಾಲೆಗಳನ್ನು ಬಿಡುವ ಅಂಕಿ ಅಂಶಗಳು ಹಾಗೂ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಸಾರ್ವಜನಿಕ ಪರೀಕ್ಷೆಯಲ್ಲಿ ಯಶಸ್ಸಿನ ಪ್ರಮಾಣವು ಈ ಪ್ರದೇಶಗಳಲ್ಲಿ ಕಡಿಮೆಯಾಗಿದೆ.
► ಕಲಬುರಗಿಯಲ್ಲಿ ಶಾಲೆ ಬಿಡುವ ದರ ಹೆಚ್ಚು:
ಉದಾಹರಣೆಗೆ ಕಲಬುರಗಿ ಪ್ರದೇಶವು ಅತೀ ಹೆಚ್ಚು ಶಾಲೆ ಬಿಡುವ ದರಗಳನ್ನು ಹೊಂದಿರುವ ಬ್ಲಾಕ್ಗಳ ಸಾಂದ್ರತೆಯನ್ನು ಹೊಂದಿದೆ. ವಿಶೇಷವಾಗಿ ಯಾದಗಿರಿ ಮತ್ತು ಬೀದರ್ ನಂತಹ ಜಿಲ್ಲೆಗಳಲ್ಲಿ ಇದು ಹೆಚ್ಚಾಗಿದೆ. ಹೀಗಾಗಿ ಶಾಲಾ ದಾಖಲಾತಿ ಮತ್ತು ಕಲಿಕಾ ಫಲಿತಾಂಶಗಳ ಅಂಕಿ ಅಂಶಗಳಿಂದ ತಿಳಿದು ಬರುವಂತೆ ಈ ಅಸಮಾನತೆಗಳನ್ನು ನಿವಾರಿಸಲು ತೆಗೆದುಕೊಂಡ ಕ್ರಮಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ದಾಖಲಾತಿ ಪ್ರಮಾಣವು ಪ್ರಾಥಮಿಕ ಹಂತದಲ್ಲಿ ಕಾಣುವ ಶೇ.103ರಿಂದ ಮಾಧ್ಯಮಿಕ ಮಟ್ಟದಲ್ಲಿ ಶೇ.90ಕ್ಕೆ ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಶೇ.62.70ಕ್ಕೆ ಇಳಿದಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.
► ಡ್ರಾಪ್ ಔಟ್ ಸಮಸ್ಯೆ ಗಂಭೀರ ಸಮಸ್ಯೆ :
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳು ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ಹೆಚ್ಚಿನ ಡ್ರಾಪ್ ಔಟ್ ದರದಿಂದ ಬಳಲುತ್ತಿದೆ. ಇದು ಅವರಲ್ಲಿ ಕಡಿಮೆ ದಾಖಲಾತಿಗೆ ಕಾರಣವಾಗಿದೆ. 2017-18ರ ಎನ್ಎಸ್ಎಸ್ ಸಮೀಕ್ಷೆಯ ದತ್ತಾಂಶ ಮತ್ತು ರಾಜ್ಯದ ದತ್ತಾಂಶ ಹೆಚ್ಚಿನ
ಶಾಲೆ ತೊರೆಯುವಿಕೆಯನ್ನು ಸೂಚಿಸುತ್ತವೆ.ಆರ್ಥಿಕ ಮತ್ತು ಸಾಮಾಜಿಕವಾಗಿ ಸೌಲಭ್ಯವಂಚಿತ ಎಸ್ಸಿ, ಎಸ್ಟಿ ಮತ್ತು ಮುಸ್ಲಿಮರಲ್ಲಿ ಇದು ಕಂಡು ಬರುತ್ತಿದೆ. ಎಡಿಬಿ ವರದಿ ಪ್ರಕಾರ ಮಾಧ್ಯಮಿಕ ಹಂತಗಳಲ್ಲಿ (9-10) ಡ್ರಾಪ್ ಔಟ್ ಶೇ. 22.1ರಷ್ಟು ಆಗಿದೆ.
► ವಿದ್ಯಾರ್ಥಿಗಳಿಗೆ ತಲುಪದ ವಿದ್ಯಾರ್ಥಿ ವೇತನ :
2017-18ರಲ್ಲೇ ಕಡಿಮೆ ಅದಾಯದ ವರ್ಗಗಳ ಸುಮಾರು ಶೇ. 56ರಿಂದ ಶೇ. 62ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ. ಅದೇ ರೀತಿ ಎಸ್ಟಿ ಸಮುದಾಯದ ಸುಮಾರು ಶೇ.30ರಷ್ಟು ವಿದ್ಯಾರ್ಥಿಗಳು ಮತ್ತು ಎಸ್ಸಿಯ ಶೇ.57ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವಿಲ್ಲದೇ ಉಳಿದಿದ್ದಾರೆ.
► ಶೈಕ್ಷಣಿಕ ಸಾಧನೆಯಲ್ಲಿ ಹಿಂದುಳಿದ ಪರಿಶಿಷ್ಟ ಪಂಗಡಗಳು :
ಶೈಕ್ಷಣಿಕ ಸಾಧನೆಯಲ್ಲಿ ಪರಿಶಿಷ್ಟ ಪಂಗಡಗಳು ಹಿಂದುಳಿದಿವೆ. ಆದ್ದರಿಂದ ಸರಕಾರವು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಸಾಧನೆ ಬಗ್ಗೆ ಗಮನ ಹರಿಸಲು ಶಿಫಾರಸು ಮಾಡಲು ಸಮಿತಿ ರಚಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ. ಹಿರಿಯ ಮಾಧ್ಯಮಿಕ ಹಂತದಲ್ಲಿ ಎಸ್ಟಿ ಹೆಣ್ಣು ಮಕ್ಕಳ ದಾಖಲಾತಿ ದರವು ಶೇ.50.7 ಇದೆ. ಎಸ್ಸಿ ಹೆಣ್ಣು ಮಕ್ಕಳ ಪ್ರಮಾಣವು ಶೇ.72.7 ಮತ್ತು ಮುಸ್ಲಿಮ್ ಹೆಣ್ಣು ಮಕ್ಕಳ ಪ್ರಮಾಣವು ಶೇ. 65.4ರಷ್ಟು ಇದೆ.
ಶಾಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಾಗ ಎಸ್ಸಿ ವಿದ್ಯಾರ್ಥಿಗಳು ಜಾತಿ ತಾರತಮ್ಯವನ್ನು ಎದುರಿಸುತ್ತಾರೆ. ಇದು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಡ್ರಾಪ್ ಔಟ್ ಪ್ರಮಾಣ ಕುರಿತಾದ ಎನ್ಎಸ್ಎಸ್ ಸಮೀಕ್ಷೆಯಲ್ಲಿ ಎಸ್ಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಶಾಲೆ ಬಿಡಲು ಮತ್ತು ಶಾಲೆಗಳಲ್ಲಿ ದಾಖಲಾಗದಿರಲು ಶಿಕ್ಷಣದಲ್ಲಿ ಆಸಕ್ತಿ ಇಲ್ಲದಿರುವುದು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಿದೆ.
ಸರಕಾರಿ ಶಾಲೆಗಳಲ್ಲಿ ಬೋಧನೆ ಗುಣಮಟ್ಟ ಕಡಿಮೆ ಮನೆ ಪಾಠಕ್ಕೆ ಆಶ್ರಯ :
ಸರಕಾರಿ ಸಂಸ್ಥೆಯಲ್ಲಿ ಬೋಧನೆಯ ಗುಣಮಟ್ಟ ಕಡಿಮೆ ಇದೆ. ಶಾಲೆಗಳಲ್ಲಿನ ಬೋಧನೆಯ ಜೊತೆಜೊತೆಗೆ ವಿದ್ಯಾರ್ಥಿಗಳು ಖಾಸಗಿ ಮನೆಪಾಠವನ್ನು ಆಶ್ರಯಿಸುತ್ತಾರೆ. 2018-19ರಲ್ಲಿ ರಾಜ್ಯ ಮಟ್ಟದಲ್ಲಿ ಸುಮಾರು ಶೇ.57ರಷ್ಟು ವಿದ್ಯಾರ್ಥಿಗಳು ಶಾಲಾ ಕಲಿಕೆಯ ಜೊತೆಗೆ ಮನೆಪಾಠಕ್ಕಾಗಿ ಹಣ ವ್ಯಯಿಸಿದ್ದಾರೆ. ಅದೇ ರೀತಿ ಎಸ್ಟಿ ಶೇ. 54, ಎಸ್ಸಿ ಶೇ.45.52ರಷ್ಟು ವಿದ್ಯಾರ್ಥಿಗಳು ಮನೆಪಾಠಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಒಬಿಸಿಯಲ್ಲಿ ಶೇ.58ರಷ್ಟಿದೆ. ಮೇಲ್ಜಾತಿಯ ವಿದ್ಯಾರ್ಥಿಗಳ (ಶೇ.73) ಪ್ರಮಾಣ ಕಡಿಮೆ ಇದೆ. ಮುಸ್ಲಿಮರಲ್ಲಿ ಅಂತಹ ವಿದ್ಯಾರ್ಥಿಗಳ ಶೇಕಡವಾರು ಪ್ರಮಾಣ ಕಡಿಮೆ ಇದೆ.
ಮುಸ್ಲಿಮ್ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆ :
ಕಡಿಮೆ ಆದಾಯದ ವರ್ಗಗಳು, ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಯ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳು ಮತ್ತು ಮುಸ್ಲಿಮ್ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಇತರ ವಿದ್ಯಾರ್ಥಿನಿಯರಿಗೆ ಹೋಲಿಸಿದರೇ ಕಡಿಮೆ ಇದೆ. ಆದ್ದರಿಂದ ಎಸ್ಸಿ, ಎಸ್ಟಿ ,ಮುಸ್ಲಿಮ್ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆ ಕಡಿಮೆ ಇರುವುದನ್ನು ರಾಜ್ಯ ಸರಕಾರವು ಗಮನಿಸಬೇಕು ಎಂದು ಆಯೋಗವು ಸಲಹೆ ನೀಡಿದೆ.






