ಆಡಳಿತ ಲೋಪಗಳ ಆಗರವಾದ ರಾಜ್ಯದ ವಿಶ್ವವಿದ್ಯಾನಿಲಯಗಳು
► ಅಂಕಪಟ್ಟಿ, ಪ್ರಮಾಣಪತ್ರ, ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆ ನಿರ್ವಹಣೆಯಲ್ಲಿ ನ್ಯೂನತೆ ►ರಾಜ್ಯ ಲೆಕ್ಕ ಪರಿಶೋಧನೆ, ಲೆಕ್ಕಪತ್ರ ಇಲಾಖೆಯಿಂದ ಬಹಿರಂಗ

ಸಾಂದರ್ಭಿಕ ಚಿತ್ರ
ಬೆಂಗಳೂರು : ಅಂಕಪಟ್ಟಿ, ಪ್ರಮಾಣ ಪತ್ರ, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ದಾಸ್ತಾನು ಮತ್ತು ವಿತರಣೆ ದಾಖಲೆಯ ಅಸಮರ್ಪಕ ನಿರ್ವಹಣೆ ಸೇರಿದಂತೆ ಆಡಳಿತಾತ್ಮಕವಾಗಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಕಂಡು ಬಂದಿರುವ ಲೋಪಗಳನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿದೆ.
ಅಲ್ಲದೇ 2025ರ ಮಾರ್ಚ್ ಅಂತ್ಯಕ್ಕೆ 14,874 ಕೋಟಿ ರೂ. ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಿದೆ. ಅದೇ ರೀತಿ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ಸೂಚಿಸಿದ್ದ ವಸೂಲಾತಿ ಕಂಡಿಕೆಗಳಲ್ಲಿನ 1,947.89 ಕೋಟಿ ರೂ. ಬಾಕಿ ಇರುವುದನ್ನು ಬಹಿರಂಗಗೊಳಿಸಿದೆ.
2024-25ನೇ ಸಾಲಿಗೆ ಸಂಬಂಧಿಸಿದಂತೆ ಇಲಾಖೆಯು ಸಿದ್ಧಪಡಿಸಿರುವ ವಾರ್ಷಿಕ ಆಡಳಿತ ವರದಿಯಲ್ಲಿ ವಿಶ್ವವಿದ್ಯಾನಿಲಯಗಳ ದುರಾಡಳಿತವನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ವಿಶ್ವವಿದ್ಯಾನಿಲಯಗಳಲ್ಲಿನ ಲೋಪಗಳ ಪಟ್ಟಿ: ವಿಶ್ವವಿದ್ಯಾನಿಲಯಗಳು ಪ್ರತಿ ತಿಂಗಳು ಮಾಡುತ್ತಿರುವ ವೆಚ್ಚ ಮತ್ತು ವೆಚ್ಚಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕ್ರಮಬದ್ಧವಾಗಿ ಇಟ್ಟಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಆಗುತ್ತಿರುವ ಸ್ವೀಕೃತಿ, ಪಾವತಿ, ಬ್ಯಾಂಕ್ ಬ್ಯಾಲೆನ್ಸ್ ಶೀಟ್ಗಳನ್ನು ನಿರ್ವಹಿಸುತ್ತಿಲ್ಲ. ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಟೆಂಡರ್ ಪ್ರಕ್ರಿಯೆ ನಡೆಸದೆಯೇ ಮಾನವ ಸಂಪನ್ಮೂಲ ಸೇವೆ ಮತ್ತು ಸರಕು ಸೇವೆಗಳನ್ನು ಮುಂದುವರಿಸಿವೆ ಎಂದು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಲೋಪಗಳನ್ನು ಪಟ್ಟಿ ಮಾಡಿದೆ.
ಅಂಕಪಟ್ಟಿ, ಪ್ರಮಾಣ ಪತ್ರಗಳು, ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳು ವಿಶ್ವವಿದ್ಯಾನಿಲಯಗಳ ಪ್ರಮುಖ ದಾಖಲೆಗಳಾಗಿವೆ. ಆದರೆ ಇವುಗಳ ದಾಸ್ತಾನು ಹಾಗೂ ವಿತರಣೆ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸುತ್ತಿಲ್ಲ. ಸಂಶೋಧನೆ ಕಾರ್ಯಗಳಿಗೆ ನೀಡಿರುವ ಅನುದಾನಗಳನ್ನು ಸಕಾಲದಲ್ಲಿ ಬಳಕೆ ಮಾಡುತ್ತಿಲ್ಲ. ನಿಗದಿತ ಅವಧಿಯಲ್ಲಿ ಸಂಶೋಧನೆ ಕಾರ್ಯಗಳೂ ಪೂರ್ಣಗೊಳಿಸುತ್ತಿಲ್ಲ. ಕಾಮಗಾರಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮಗಳನ್ನು ಪಾಲಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಸಂಹಿತೆ, ಲೆಕ್ಕ ಸಂಹಿತೆಯಲ್ಲಿನ ನಿಯಮಗಳನ್ನೂ ಅನುಸರಿಸುತ್ತಿಲ್ಲ ಎಂದು ಲೋಪಗಳನ್ನು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಯಲು ಮಾಡಿದೆ.
ವಿಶ್ವವಿದ್ಯಾನಿಲಯಗಳು ಬೋಧಕ, ಬೋಧಕೇತರ ಸಿಬ್ಬಂದಿಗೆ ಯುಜಿಸಿ, ಸರಕಾರಿ ಆದೇಶ ಮೀರಿ ಗೌರವ ಧನ ನೀಡುತ್ತಿವೆ. ಶಾಸನಬದ್ಧ ಕಟಾವಣೆಗಳಾದ ಆದಾಯ ತೆರಿಗೆ, ಮಾರಾಟ ತೆರಿಗೆ, ರಾಜಧನ, ಕಾರ್ಮಿಕ ಕಲ್ಯಾಣ ತೆರಿಗೆ, ಇಪಿಎಫ್, ಇಎಸ್ಐ, ಇಎಸ್ಐ ಕಡ್ಡಾಯವಾಗಿ ಕಟಾಯಿಸಬೇಕು. ಆದರೆ ಈ ಯಾವುದೇ ತೆರಿಗೆಗಳನ್ನು ಕ್ರಮಬದ್ಧವಾಗಿ ಕಟಾಯಿಸುತ್ತಿಲ್ಲ. ಅಲ್ಲದೇ ಕಟಾಯಿಸಿರುವ ಮೊತ್ತವನ್ನೂ ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸುತ್ತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಕಿ ಪ್ರವೇಶಾತಿ ಶುಲ್ಕ, ಹಾಸ್ಟೆಲ್ ಶುಲ್ಕ, ಪರೀಕ್ಷಾ ಶುಲ್ಕವನ್ನು ಸರ್ಕಾರದಿಂದ ಮರುಭರಣ ಮಾಡಿಕೊಳ್ಳುತ್ತಿಲ್ಲ. ಸ್ವೀಕೃತಿಗೆ ಸಂಬಂಧಿಸಿದಂತೆ ಡಿಸಿಬಿ ನಿರ್ವಹಿಸುತ್ತಿಲ್ಲ. ನಗದು ಪುಸ್ತಕ, ಬ್ಯಾಂಕ್ ಪುಸ್ತಕಗಳ ನಡುವೆ ಲೆಕ್ಕವನ್ನು ಸಮನ್ವಯ ಮಾಡುತ್ತಿಲ್ಲ. ಅದೇ ರೀತಿ ವಿಶ್ವವಿದ್ಯಾನಿಲಯಗಳು ಕಾಮಗಾರಿ, ಸರಬರಾಜು ಮೌಲ್ಯಗಳನ್ನು ಕೃತಕವಾಗಿ ವಿಭಜಿಸಿ ಸಂಗ್ರಹಣೆ ಮಾಡುತ್ತಿವೆ. ಹಿಂದೆ ಟೆಂಡರ್ ಕರೆದು ನಿಗದಿಪಡಿಸಿದ ದರಗಳ ಆಧಾರದಲ್ಲೇ ಕಾರ್ಯಾದೇಶ ಮುಂದುವರಿಸುವ ಮೂಲಕ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ 1999 ಮತ್ತು ನಿಯಮ ಉಲ್ಲಂಘನೆ ಮಾಡುತ್ತಿರುವುದನ್ನು ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಗಮನಿಸಿದೆ.
ಪ್ರಶ್ನೆ ಪತ್ರಿಕೆಗಳ ಮುದ್ರಣದಲ್ಲಿಯೂ ಕೆಟಿಪಿಪಿ ನಿಯಮ ಉಲ್ಲಂಘಿಸಿ ನೇರವಾಗಿ ಮುದ್ರಣ ಮಾಡಿಸುತ್ತಿವೆ. ಹೊರಗುತ್ತಿಗೆ ಏಜೆನ್ಸಿಯವಿರಗೆ ಸಂದಾಯಿಸಿರುವ ಮೊತ್ತಕ್ಕೆ ನೌಕರರ ಹಾಜರಾತಿ ಪ್ರತಿ ದೃಢೀಕರಿಸಿಲ್ಲ. ಪಿಎಫ್ ಮತ್ತು ಇಎಸ್ಐ ಬಾಬ್ತು ಕಟ್ಟಿದ ದಾಖಲೆಗಳನ್ನೂ ಸಹ ಹಾಜರುಪಡಿಸಿಲ್ಲ. ಅನವಶ್ಯಕ ಸಂದರ್ಭಗಳಲ್ಲಿ ಕೂಡ ಸಂಕ್ಷಿಪ್ತ ಸಾದಿಲ್ವಾರು ಬಿಲ್ಗಳ ಮೂಲಕ ಹಣವನ್ನು ಡ್ರಾ ಮಾಡಿರುವ ಹಲವು ಪ್ರಕರಣಗಳನ್ನು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿರುವುದು ವಾರ್ಷಿಕ ಆಡಳಿತ ವರದಿಯಿಂದ ತಿಳಿದು ಬಂದಿದೆ.
ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸರಕಾರದಿಂದ ಮಂಜೂರಾತಿ ಪಡೆಯುತ್ತಿಲ್ಲ. ಅಧಿಕಾರ ವ್ಯಾಪ್ತಿ ಮೀರಿ 10 ಕೋಟಿ ಮೀರಿದ ಮೊತ್ತಕ್ಕೂ ವಿಶ್ವವಿದ್ಯಾನಿಲಯಗಳು ತಮ್ಮ ಹಂತದಲ್ಲೇ ಮಂಜೂರು ಮಾಡುತ್ತಿವೆ. ಯೋಜನೆ ನಿರ್ವಹಣೆ, ಮೌಲ್ಯಮಾಪನ ಮಂಡಳಿಗಳು ಯುಜಿಸಿ ನಿಗದಿಪಡಿಸಿರುವ ನಿಗದಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿವೆ. ಪಿಂಚಣಿ ನಿಧಿ ಅನುದಾನವನ್ನು ನಿಯಮಬಾಹಿರವಾಗಿ ಇತರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿವೆ. ಅಲ್ಲದೆ ವಿಶ್ವವಿದ್ಯಾನಿಲಯದ ಹೆಚ್ಚುವರಿ ನಿಧಿಯನ್ನು ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವಾಗ ಸರಕಾರದ ಹೂಡಿಕೆ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ವಾರ್ಷಿಕ ಆಡಳಿತ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಯುಜಿಸಿ ಮತ್ತು ಇತರ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಅನುದಾನಿತ ಸಂಸ್ಥೆಗಳಿಂದ ಮಂಜೂರಾದ ಸಂಶೋಧನಾ ಯೋಜನೆ, ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತಿಲ್ಲ. ತಾತ್ಕಾಲಿಕ ಸೇವಾವಧಿಯನ್ನು ಪಿಂಚಣಿ ಸೌಲಭ್ಯಕ್ಕಾಗಿ ಅರ್ಹತಾದಾಯಕ ಸೇವೆಯೆಂದು ಪರಿಗಣಿಸುತ್ತಿವೆ. ಯುಯುಸಿಎಂಎಸ್ ತಂತ್ರಾಂಶವಿದ್ದರೂ ಸಹ ಖಾಸಗಿ ಸಂಸ್ಥೆಗಳ ತಂತ್ರಾಂಶವನ್ನು ಬಳಸುತ್ತಿರುವ ಹಲವು ಪ್ರಕರಣಗಳನ್ನು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿದೆ.
ಅದೇ ರೀತಿ ವಿಶ್ವವಿದ್ಯಾನಿಲಯಗಳೂ ಬಾಡಿಗೆ ಮಳಿಗೆಗಳ ಬಾಕಿ ವಸೂಲು ಮಾಡುತ್ತಿಲ್ಲ. ಪಿಂಚಣಿ ನಿಗದಿಪಡಿಸುವಲ್ಲಿಯೂ ಸಹ ಲೋಪಗಳನ್ನು ಎಸಗುತ್ತಿವೆ. ಉಪಕರಣಗಳ ಅವಶ್ಯಕತೆ ಇಲ್ಲದಿದ್ದರೂ ಸಹ ಖರೀದಿಸುತ್ತಿವೆ ಎಂದು ವಿವರಿಸಿದೆ.
14,874 ಕೋಟಿ ರೂ. ಮೊತ್ತಕ್ಕೆ ಆಕ್ಷೇಪ: ರಾಜ್ಯದಲ್ಲಿರುವ 35 ವಿಶ್ವವಿದ್ಯಾನಿಲಯಗಳ ಲೆಕ್ಕ ಪರಿಶೋಧನೆ ನಡೆಸಿದ್ದ ಲೆಕ್ಕಪತ್ರ ಇಲಾಖೆಯು 2025ರ ಮಾರ್ಚ್ ಅಂತ್ಯಕ್ಕೆ ಒಟ್ಟು 14,874 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿರಿಸಿವೆ. ಈ ಮೊತ್ತವು ಒಟ್ಟು 27,919 ಕಂಡಿಕೆಗಳಲ್ಲಿವೆ. 2023-24ರ ಅಂತ್ಯಕ್ಕೆ ಈ ವಿಶ್ವವಿದ್ಯಾನಿಲಯಗಳಲ್ಲಿ 27,074 ಆಕ್ಷೇಪಣೆ ಕಂಡಿಕೆಗಳಿದ್ದವು. ಈ ಕಂಡಿಕೆಗಳು 12,477 ಕೋಟಿ ರೂ. ಮೊತ್ತವನ್ನು ಒಳಗೊಂಡಿದ್ದವು. 16,909 ವಸೂಲಾತಿ ಕಂಡಿಕೆಗಳಲ್ಲಿ 1,676 ಕೋಟಿ ರೂ. ಬಾಕಿ ಇತ್ತು.
2024-25ರಲ್ಲಿ 1,069 ಆಕ್ಷೇಪಣೆ ಕಂಡಿಕೆಗಳು ಸೇರ್ಪಡೆಯಾಗಿದ್ದವು. ಸೇರ್ಪಡೆಯಾಗಿದ್ದ ಕಂಡಿಕೆಗಳು 2,790 ಕೋಟಿ ರೂ. ಒಳಗೊಂಡಿತ್ತು. ಇದೇ ಸಾಲಿನಲ್ಲಿ 538 ವಸೂಲಾತಿ ಕಂಡಿಕೆಗಳಿದ್ದವು ಇದು 285.92 ಕೋಟಿ ರೂ. ಒಳಗೊಂಡಿತ್ತು. 2024-25ನೇ ಸಾಲಿನಲ್ಲಿ ತೀರುವಳಿಗೆ ಸಂಬಂಧಿಸಿ 224 ಆಕ್ಷೇಪಣೆ ಕಂಡಿಕೆಗಳಿದ್ದವು. ಇದು 393.22 ಕೋಟಿ ರೂ. ಒಳಗೊಂಡಿತ್ತು. ಇದೇ ಸಾಲಿನಲ್ಲಿ 161 ವಸೂಲಾತಿ ಕಂಡಿಕೆಗಳಲ್ಲಿ 14.07 ಕೋಟಿ ರೂ. ಇತ್ತು.
ಒಟ್ಟಾರೆ 2025ರ ಮಾರ್ಚ್ 31 ರ ಅಂತ್ಯಕ್ಕೆ 27,919 ಆಕ್ಷೇಪಣೆ ಕಂಡಿಕೆಗಳಲ್ಲಿ 14,874 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆಯಲ್ಲಿರಿಸಿತ್ತು. 17,286 ವಸೂಲಾತಿ ಕಂಡಿಕೆಗಳಲ್ಲಿ 1,947.89 ಕೋಟಿ ರೂ. ಬಾಕಿ ಇತ್ತು ಎಂದು ವರದಿಯು ವಿವರಿಸಿರುವುದು ಗೊತ್ತಾಗಿದೆ.
ಬಾಗಲಕೋಟೆ ವಿಶ್ವವಿದ್ಯಾನಿಲಯದಲ್ಲಿ 2 ಲಕ್ಷ ವಸೂಲಾಗಬೇಕಿತ್ತು. ಆದರೆ ವಸೂಲಾಗಿಲ್ಲ. ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 22.14 ಲಕ್ಷ ರೂ. ವಸೂಲಾಗಬೇಕಿತ್ತು. ಈ ಪೈಕಿ 18.78 ಲಕ್ಷ ರೂ. ವಸೂಲಾಗಿದೆ, ವಸೂಲಾತಿಗೆ 3.36 ಲಕ್ಷ ರೂ. ಬಾಕಿ ಇದೆ. ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ 32.95 ಲಕ್ಷ ರೂ. ಒಟ್ಟು ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ 13.49 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ 19.46 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.
ಕನ್ನಡ ವಿಶ್ವವಿದ್ಯಾನಿಲಯದಲ್ಲಿ 30.89 ಲಕ್ಷ ರೂ. ಒಟ್ಟು ವಸೂಲಾತಿ ಬೇಡಿಕೆ ಪೈಕಿ 12.54 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ 18.35 ಲಕ್ಷ ರೂ. ಬಾಕಿ ಇದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 52.75 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ ನಯಾಪೈಸೆಯೂ ವಸೂಲಾಗಿಲ್ಲ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 39.50 ಲಕ್ಷ ರೂ. ವಸೂಲಿಗೆ ಬೇಡಿಕೆ ಇತ್ತು. ಈ ಪೈಕಿ 27.82 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ 11.68 ಲಕ್ಷ ರೂ. ಬಾಕಿ ಇದೆ. ಹುಬ್ಬಳ್ಳಿಯಲ್ಲಿರುವ ಕಾನೂನು ವಿಶ್ವವಿದ್ಯಾನಿಲಯದಲ್ಲಿ 3.32 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ ನಯಾ ಪೈಸೆಯೂ ವಸೂಲಾಗಿಲ್ಲ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ 47.12 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ 29.83 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ ಇನ್ನೂ 17.29 ಲಕ್ಷ ರೂ. ಬಾಕಿ ಇದೆ. ಪಶು ವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಒಟ್ಟಾರೆ 29.26 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತಾದರೂ ಈ ಪೈಕಿ 14.85 ಲಕ್ಷ ರೂ. ವಸೂಲಾಗಿದೆ. 14.41 ಲಕ್ಷ ವಸೂಲಾತಿಗೆ ಬಾಕಿ ಇದೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯವು 52.20 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ 19.43 ಲಕ್ಷ ರೂ. ವಸೂಲಾಗಿದೆ. ವಸೂಲಾತಿಗೆ 32.77 ಲಕ್ಷ ರೂ. ಬಾಕಿ ಇದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1.11 ಕೋಟಿ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ ಬಿಡಿಗಾಸನ್ನೂ ವಸೂಲು ಮಾಡಿಲ್ಲ. ರಾಯಚೂರು ವಿಶ್ವವಿದ್ಯಾನಿಲಯದಲ್ಲಿಯೂ ಸಹ 25.95 ಲಕ್ಷ ರೂ. ವಸೂಲಾತಿಗೆ ಬೇಡಿಕೆ ಇತ್ತಾದರೂ ಈ ಮೊತ್ತದಲ್ಲಿ ನಯಾಪೈಸೆಯನ್ನೂ ವಸೂಲು ಮಾಡಿಲ್ಲ. 10.66 ಲಕ್ಷ ರೂ. ವಸೂಲು ಮಾಡಬೇಕಿದ್ದ ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯವು 5.41 ಲಕ್ಷ ರೂ. ವಸೂಲು ಮಾಡಿ ವಸೂಲಾತಿಗೆ 5.25 ಲಕ್ಷ ರೂ. ಬಾಕಿ ಇರಿಸಿಕೊಂಡಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 1.38 ಕೋಟಿ ರೂ. ವಸೂಲಿಗೆ ಬಾಕಿ ಇರಿಸಿಕೊಂಡಿತ್ತು. ಈ ಪೈಕಿ 1.11 ಕೋಟಿ ರೂ. ವಸೂಲಿ ಮಾಡಿದೆ. ವಸೂಲಿಗೆ 27.35 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯವು 12.26 ಲಕ್ಷ ರೂ. ವಸೂಲು ಮಾಡಬೇಕಿತ್ತಾದರೂ ಬಿಡಿಗಾಸನ್ನೂ ವಸೂಲು ಮಾಡಿಲ್ಲ. ಒಟ್ಟಾರೆ 30 ವಿಶ್ವವಿದ್ಯಾನಿಲಯಗಳಲ್ಲಿ 10.38 ಕೋಟಿ ರೂ. ವಸೂಲಾತಿಗೆ ಬೇಡಿಕೆ ಇತ್ತು. ಈ ಪೈಕಿ 5.23 ಕೋಟಿ ರೂ. ವಸೂಲಾತಿ ಮಾಡಿ ಇನ್ನೂ 5.14 ಕೋಟಿ ವಸೂಲಿಗೆ ಬಾಕಿ ಇರಿಸಿಕೊಂಡಿರುವುದು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವಾರ್ಷಿಕ ಆಡಳಿತ ವರದಿಯಿಂದ ತಿಳಿದು ಬಂದಿದೆ.






