ಅಪರೂಪದ ಕಪ್ಪು-ಕತ್ತಿನ ಕೊಕ್ಕರೆಗಳ ರಕ್ಷಣೆಗಾಗಿ ಲಡಾಖ್ನಲ್ಲಿ ಸುಮಾರು 2,950 ಶ್ವಾನಗಳ ಸಂತಾನಹರಣ!

Photo credit: Kishor Rithe/BNHS
ಜಾಗತಿಕವಾಗಿ ಬಹಳ ಅಳಿವಿನಂಚಿನಲ್ಲಿರುವ ಪಕ್ಷಿಯೆಂದು ದಾಖಲಿಸಲಾಗಿರುವ ಕಪ್ಪು-ಕತ್ತಿನ ಕೊಕ್ಕರೆ ಲಡಾಖ್ನ ರಾಜ್ಯ ಪಕ್ಷಿಯೂ ಆಗಿದೆ.
ಲಡಾಖ್ನಲ್ಲಿ ಕಪ್ಪು-ಕತ್ತಿನ ಕೊಕ್ಕರೆಗಳನ್ನು (Black-necked Cranes) ಉಳಿಸುವ ಮತ್ತು ವನ್ಯಜೀವಿ ಪ್ರವಾಸೋದ್ಯಮ ಆಧಾರಿತ ಜೀವನೋಪಾಯವನ್ನು ಹೆಚ್ಚಿಸುವ ಉದ್ದೇಶದಿಂದ 2,950ಕ್ಕೂ ಹೆಚ್ಚು ಬೀದಿ ನಾಯಿಗಳ ಸಂತಾನಹರಣ ನಡೆಸಲಾಗಿದೆ. ಬಾಂಬೆ ನ್ಯಾಚುರಲ್ ಹಿಸ್ಟ್ರಿ ಸೊಸೈಟಿ (BNHS) ನೇತೃತ್ವದಲ್ಲಿ ಭಾರತೀಯ ಸೇನೆ, ಪಶುಸಂಗೋಪನಾ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆಗಳ ಸಹಯೋಗದಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೀದಿ ನಾಯಿಗಳು ಕಪ್ಪು-ಕತ್ತಿನ ಕೊಕ್ಕರೆಯ ಮರಿಗಳನ್ನು ಕೊಲ್ಲುವುದನ್ನು 2022ರಲ್ಲಿ ಗಮನಿಸಲಾಗಿತ್ತು. ಲಡಾಖ್ನ ಆಲ್ಫೈನ್ ಜೌಗುಪ್ರದೇಶಗಳಲ್ಲಿ ಕಪ್ಪು-ಕತ್ತಿನ ಕೊಕ್ಕರೆಗಳು ಗೂಡುಕಟ್ಟಲು ಒಂದೇ ಸ್ಥಳದಲ್ಲಿ ನೆಲೆಗೊಳ್ಳುವುದನ್ನು ನಾಯಿಗಳು ತಡೆಯುತ್ತಿವೆ ಎನ್ನುವುದನ್ನು ವನ್ಯಜೀವಿ ತಜ್ಞರು ಗಮನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಜಾಗತಿಕವಾಗಿ ಬಹಳ ಅಳಿವಿನಂಚಿನಲ್ಲಿರುವ ಪಕ್ಷಿಯೆಂದು ದಾಖಲಿಸಲಾಗಿರುವ ಕಪ್ಪು-ಕತ್ತಿನ ಕೊಕ್ಕರೆ ಲಡಾಖ್ನ ರಾಜ್ಯ ಪಕ್ಷಿಯೂ ಆಗಿದೆ. ಹೀಗಾಗಿ ಸಾಂಸ್ಕೃತಿಕ ಸಂಕೇತವೂ ಆಗಿದೆ. ಭಾರತದಲ್ಲಿ ಇದೀಗ ಕೆಲವೇ ನೂರು ಪಕ್ಷಿಗಳು ಬದುಕುಳಿದಿವೆ. ಆದರೆ ಅಂದಾಜು ವಿಶ್ವ ಪಕ್ಷಿ ಸಂಖ್ಯೆ 11,000–12,000 ದಷ್ಟು ಇರಬಹುದು. ಅವುಗಳಲ್ಲಿ ಬಹುತೇಕ ಪಕ್ಷಿಗಳು ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ದೇಶಗಳಾದ್ಯಂತ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಕಂಡುಬರುತ್ತವೆ.
BNHS ಅಧಿಕಾರಿಗಳ ಪ್ರಕಾರ 20-25 ಸಂತಾನೋತ್ಪತ್ತಿ ಜೋಡಿಗಳು ಸೇರಿದಂತೆ ವಾರ್ಷಿಕವಾಗಿ 110–130 ಪಕ್ಷಿಗಳನ್ನು ದಾಖಲಿಸಲಾಗುತ್ತದೆ. ಮುಖ್ಯ ಸಂತಾನೋತ್ಪತ್ತಿ ತಾಣಗಳಲ್ಲಿ ಚಾಂಗ್ಥಾಂಗ್ ಕೋಲ್ಡ್ ಡೆಸರ್ಟ್ ವನ್ಯಜೀವಿ ಅಭಯಾರಣ್ಯ, ಹ್ಯಾನ್ಲೆ, ತ್ಸೊ ಕಾರ್, ನ್ಯೋಮಾದ ಜೌಗು ಪ್ರದೇಶಗಳು ಮತ್ತು ಸುರು ಕಣಿವೆಯಲ್ಲಿ ವಿಸ್ತೃತ ಪಕ್ಷಿಗಳನ್ನು ಹೊಂದಿರುವ ಹತ್ತಿರದ ಹುದಿಲುಗಳು (marshes) ಸೇರಿವೆ. 2026 ಜೂನ್ನ ಆರಂಭದಲ್ಲಿ ನಡೆಸಲಾದ ವಾರ್ಷಿಕ ಪಕ್ಷಿಗಳ ಸಂಖ್ಯೆಯ ಮೇಲ್ವಿಚಾರಣೆಯ ಸಂದರ್ಭದಲ್ಲಿ ಲಡಾಖ್ನ ಜೌಗು ಪ್ರದೇಶಗಳಲ್ಲಿ ಒಟ್ಟು 19 ಜೋಡಿ ಕಪ್ಪು ಕತ್ತಿನ ಕೊಕ್ಕರೆಗಳನ್ನು ಗುರುತಿಸಲಾಗಿವೆ.
ಆದರೆ ಲಡಾಖ್ನಲ್ಲಿ ಕೆಲಸ ಮಾಡುತ್ತಿರುವ BNHS ವಿಜ್ಞಾನಿ ಡಾ ಮುಹಮ್ಮದ್ ರಜಾ ಅವರ ಪ್ರಕಾರ, ವಾಸ್ತವದಲ್ಲಿ ಇನ್ನಷ್ಟು ಪಕ್ಷಿಗಳು ಸಂತಾನೋತ್ಪತ್ತಿ ಮಾಡುತ್ತಿರಬಹುದು. “ಲಾಜಿಸ್ಟಿಕಲ್ ಸವಾಲುಗಳು ಮತ್ತು ಪ್ರದೇಶಗಳಿಗೆ ಹೆಚ್ಚು ಪ್ರವೇಶಿಸಲು ಸಾಧ್ಯವಾಗದೆ ಇರುವುದರಿಂದ ನಿಖರವಾದ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. BNHS ಲಡಾಖ್ನಲ್ಲಿ ಕಪ್ಪು-ಕತ್ತಿನ ಕೊಕ್ಕರೆಗಳ ನಿಖರವಾದ ಸಂತಾನೋತ್ಪತ್ತಿ ಸಂಖ್ಯೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಜೌಗುಪ್ರದೇಶದ ಸುತ್ತಮುತ್ತ ಮಾನವ ಓಡಾಟ ಹೆಚ್ಚಾಗಿರುವುದು, ಮೂಲಸೌಕರ್ಯಗಳ ವಿಸ್ತರಣೆಯಿಂದ ಮತ್ತು ಹವಾಮಾನ ಬದಲಾವಣೆಗಳಿಂದ ಕಪ್ಪು-ಕತ್ತಿನ ಕೊಕ್ಕರೆಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿದೆ. ಬೀದಿನಾಯಿಗಳಿಂದ ಗೂಡುಕಟ್ಟುವ ಪಕ್ಷಿಗಳಿಗೆ ಉಂಟಾಗುವ ಅಡಚಣೆಯನ್ನು ಪರಿಹರಿಸಲು ಈಗಿನ ಕ್ರಮ ಕೈಗೊಳ್ಳಲಾಗಿದೆ.
ಬೀದಿ ನಾಯಿಗಳ ಪ್ರಮಾಣ ಕಡಿಮೆ ಮಾಡಲು ಭಾರತೀಯ ಸೇನೆಯ ಔಟ್ಪೋಸ್ಟ್ಗಳ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮತ್ತು ವಿಲೇವಾರಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಜೌಗು ಪ್ರದೇಶಗಳಲ್ಲಿ ಬೀದಿ ನಾಯಿಗಳ ಬೆದರಿಕೆಗಳನ್ನು ಕಡಿಮೆ ಮಾಡಲು ದೀರ್ಘಕಾಲೀನ ಮತ್ತು ಸುಸ್ಥಿರ ವಿಧಾನವನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದು BNHS ಹೇಳಿದೆ.
ಮಾತ್ರವಲ್ಲದೆ, ಜಾಗೃತಿ ಮೂಡಿಸುವ ಪ್ರಯತ್ನವಾಗಿ 1,000 ಸಶಸ್ತ್ರ ಪಡೆಯ ಸಿಬ್ಬಂದಿಗೆ ಜೀವವೈವಿಧ್ಯ ಸಂರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಯಲ್ಲಿ ತರಬೇತಿ ನೀಡಲಾಗಿದೆ.
ಕೃಪೆ: thehindu.com






