Jadavpur University | ಕಾವಿ ಪಡೆಯ ಹಿಂಸಾಚಾರ: BJP ಶಾಸಕಿಯ ‘ತಾಂಡವ’ ಕರೆಯ ಬೆನ್ನಲ್ಲೇ 12 ಗಂಟೆಗಳ ಕಾಲ ಕ್ಯಾಂಪಸ್ ರಣರಂಗವಾಗಿದ್ದು ಹೇಗೆ ?

Photo: Anwesha Banerjee / thewire
ಗೇಟ್ ನಂಬರ್ 4ರ ಮೇಲೆ ಕೇಸರಿ ಧ್ವಜ ಹಿಡಿದುಕೊಂಡು ಹತ್ತಿದ ವ್ಯಕ್ತಿಗಳು ಜಾದವ್ಪುರ ವಿಶ್ವವಿದ್ಯಾಲಯದ ಕಮಲದ ಚಿಹ್ನೆಯನ್ನೇ ಮೆಟ್ಟಿಲಾಗಿ ಬಳಸಿಕೊಂಡಾಗ, ಗುರುವಾರ (ಆಗಸ್ಟ್ 20) ನಡೆದ ಈ ಪ್ರತಿಭಟನೆಯು ಶಾಂತಿಯುತ ವಿದ್ಯಾರ್ಥಿ ಹೋರಾಟ ಎನ್ನುವ ಕಲ್ಪನೆ ಸಂಪೂರ್ಣವಾಗಿ ಇಲ್ಲವಾಯಿತು.
ನಂದಲಾಲ್ ಬೋಸ್ ವಿನ್ಯಾಸಗೊಳಿಸಿದ ಈ ಲಾಂಛನವು ಅರಳಿದ ಕಮಲದಿಂದ ಆವೃತವಾದ ಮೂರು ಜ್ವಾಲೆಗಳನ್ನು ಹೊಂದಿದೆ. ಇದು ವಿಶ್ವವಿದ್ಯಾಲಯದ ಸಂಕೇತವಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಗೇಟ್ ನ ಮೇಲಿತ್ತು. ಆರೆಸ್ಸೆಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲಿಗರು ಕೇಸರಿ ಧ್ವಜ ಹಿಡಿದು ಗೇಟ್ ಏರಿ, ಬೋಸ್ ಅವರ ಕಲಾಕೃತಿಯ ಮೇಲೆಯೇ ಕಾಲಿಟ್ಟು ಮೇಲೇರಿದರು. ಅಷ್ಟೇ ಅಲ್ಲದೆ, ಅದರ ಒಂದು ಭಾಗವನ್ನು ಮುರಿದರು.
ಈ ಮೂರು ಜ್ವಾಲೆಗಳು ಸರ್ವಾಂಗೀಣ ಅಭಿವೃದ್ಧಿ, ಭಾವನೆ ಮತ್ತು ಕಲ್ಪನೆ ಹಾಗೂ ಆಧ್ಯಾತ್ಮಿಕ ಜೀವನವನ್ನು ಪ್ರತಿನಿಧಿಸುತ್ತವೆ. ಕಮಲದ ದಳಗಳು ಕಲೆಗಳನ್ನು ಸೂಚಿಸುತ್ತವೆ. ಬೋಸ್ ಅವರು ಬೆಂಗಾಲ್ ಸ್ಕೂಲ್ ಆಫ್ ಆರ್ಟ್ ಚಳವಳಿಯ ಪ್ರಮುಖ ನಾಯಕರಾಗಿದ್ದರು ಹಾಗೂ ಶಾಂತಿನಿಕೇತನದ ಕಲಾ ಭವನದ ಮಾಜಿ ಪ್ರಾಂಶುಪಾಲರಾಗಿದ್ದರು. ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ‘ಜ್ಞಾನದ ಮೂಲಕ ವಿಕಾಸ’ ಎಂಬ ಧ್ಯೇಯವನ್ನು ಅಳವಡಿಸಿಕೊಳ್ಳಲಾಯಿತು. ಈ ಸಂದೇಶವನ್ನು ಬಿಂಬಿಸಲು ಅವರು ಈ ಲಾಂಛನವನ್ನು ವಿನ್ಯಾಸಗೊಳಿಸಿದ್ದರು.
ಇತರರನ್ನು ದೇಶವಿರೋಧಿಗಳು ಎಂದು ಕರೆಯುವ ವ್ಯಕ್ತಿಗಳು ತಮ್ಮ ಶೂಗಳಿಂದ ಈ ಲಾಂಛನವನ್ನು ಮುರಿದುಹಾಕಿದರು.
ಕಮಲ ರಾಜಕೀಯದ ಕಾರ್ಯಕರ್ತರಿಂದ ಕಮಲದ ಚಿಹ್ನೆಗೂ ರಕ್ಷಣೆ ಸಿಗಲಿಲ್ಲ ಎನ್ನುವುದು ಈ ಘಟನೆಯ ವ್ಯಂಗ್ಯ.
ಇಡೀ ರಾತ್ರಿ ನಡೆದ ಬೆಂಕಿ ಹಚ್ಚಿದ್ದು, ಹಲ್ಲೆ ಮತ್ತು ಬೆದರಿಕೆ ಘಟನೆಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಗಲಿ ಅಥವಾ ಪೊಲೀಸರಾಗಲಿ ಇನ್ನೂ ಸಂಪೂರ್ಣ ವಿವರಣೆ ನೀಡಿಲ್ಲ. ಇದರ ನಡುವೆಯೇ, ಪೊಲೀಸರ ಸಮ್ಮುಖದಲ್ಲೇ ಬಿಸಿಲಿನಲ್ಲಿ ಈ ಧ್ವಂಸ ಕೃತ್ಯ ನಡೆದಿದೆ.
► ಪೊಲೀಸರ ಕಣ್ಣೆದುರೇ 12 ಗಂಟೆಗಳ ಕಾಲ ‘ತಾಂಡವ’
ಗುರುವಾರ ಬೆಳಿಗ್ಗೆ ಗಲಾಟೆ ನಡೆಯುವ ಸಾಧ್ಯತೆಯಿದ್ದಿದ್ದರಿಂದ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಆದರೆ, ಆ ಪಡೆ ಹೆಚ್ಚಾಗಿ ಪ್ರೇಕ್ಷಕರಂತೆ ವೀಕ್ಷಿಸುವುದರಲ್ಲೇ ಕಾಲ ಕಳೆಯಿತು.
ಮಧ್ಯಾಹ್ನ ಸುಮಾರು 2.30ರ ವೇಳೆಗೆ ಗೋಲ್ಪಾರ್ಕ್ ಪ್ರದೇಶದಿಂದ ಹೊರಟ ABVP ಬೆಂಬಲಿಗರ ಮೆರವಣಿಗೆ ಸಾಲು ಸಾಲು ಬ್ಯಾರಿಕೇಡ್ ಗಳನ್ನು ಮುರಿದು ಕೊನೆಗೆ ವಿಶ್ವವಿದ್ಯಾಲಯದ ಗೇಟ್ 4 ತಲುಪಿತು.
ಅರ್ಧ ಕಿಲೋಮೀಟರ್ ದೂರದ 8B ಬಸ್ ನಿಲ್ದಾಣದ ಕ್ರಾಸ್ ಬಳಿ, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ಸಂಘಟನೆಗಳ ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.
SFI ನಾಯಕಿ ದೀಪ್ಸಿತಾ ಧಾರ್, “ಇಲ್ಲಿ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿಗಳಿಲ್ಲದಿದ್ದರೂ, ನನ್ನ ಮೇಲೆ ದೈಹಿಕ ದೌರ್ಜನ್ಯ ಎಸಗಲಾಗುತ್ತಿದೆ” ಎಂದು ಆರೋಪಿಸಿದರು.
ABVP ಮೆರವಣಿಗೆಯನ್ನು ಜಾದವ್ಪುರ ಪೊಲೀಸ್ ಠಾಣೆ ಬಳಿ ಸ್ವಲ್ಪ ಹೊತ್ತು ತಡೆಯಲಾಯಿತು. ಆದರೆ ಅವರೇ ಗಾರ್ಡ್ ರೈಲ್ ಗಳು ಮತ್ತು ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಗೇಟ್ 4ರ ಕಡೆಗೆ ಸಾಗಿದರು. ಗೇಟ್ ಮೇಲೆ ಹತ್ತುವುದು ಮತ್ತು ಅದನ್ನು ಉರುಳಿಸುವುದು ಸೇರಿದಂತೆ ಗೇಟ್ ದಾಟಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಈ ಹಂತದಲ್ಲೇ ವಿಶ್ವವಿದ್ಯಾಲಯದ ಲಾಂಛನ ಮುರಿದು ಬಿತ್ತು.
ಪೊಲೀಸರು ಸುಮ್ಮನೆ ನೋಡುತ್ತಿದ್ದಾಗ ಕಾಂಪೌಂಡ್ ಗೋಡೆಯ ಒಳಗಿನಿಂದ ವಿದ್ಯಾರ್ಥಿಗಳ ಮೇಲೆ ಕಲ್ಲುಗಳು, ಮೊಟ್ಟೆಗಳು, ಇಟ್ಟಿಗೆಗಳು, ಶೂಗಳು ಮತ್ತು ಕೊಳಕು ನೀರಿನ ಬಾಟಲಿಗಳನ್ನು ತೂರಲಾಯಿತು ಎಂದು ಕ್ಯಾಂಪಸ್ ನಲ್ಲಿದ್ದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇಂದಿಗೂ ಎಡಪಂಥೀಯರ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಈ ವಿಶ್ವವಿದ್ಯಾಲಯದ ವಿರುದ್ಧ ಆಡಳಿತಾರೂಢ BJP ಬೆಂಬಲಿಗರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾಗ ಪೊಲೀಸರು ಪಕ್ಕಕ್ಕೆ ಸರಿದು ನಿಂತಿದ್ದರು.
ABVP ಪಡೆ ಕ್ಯಾಂಪಸ್ ನತ್ತ ಮುನ್ನುಗ್ಗುತ್ತಿದೆ ಎಂದು ತಿಳಿದ ಎಡಪಂಥೀಯ ಬೆಂಬಲಿಗರು, ಪೊಲೀಸರೇ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ. ನಂತರ ಅವರೂ ಸಹ ಬ್ಯಾರಿಕೇಡ್ ಗಳನ್ನು ಮುರಿದು ಗೇಟ್ 4ರತ್ತ ಹೆಜ್ಜೆ ಹಾಕಿದರು. ಇದರಿಂದ SFI ಮತ್ತು ABVP ಬೆಂಬಲಿಗರ ನಡುವೆ ವಾಗ್ವಾದ ತೀವ್ರಗೊಂಡಿತು.
ABVPಗೆ ಪೊಲೀಸರ ಮೇಲೆಯೂ ಅಸಮಾಧಾನವಿತ್ತು. ಇದು ಅವರ ಪ್ರತಿಭಟನೆಯ ಹಿಂದಿದ್ದ ನಿರೀಕ್ಷೆಯನ್ನು ತೋರಿಸಿಕೊಟ್ಟಿತು.
ಆ ಗುಂಪಿನಲ್ಲಿದ್ದ ಮಹಿಳೆಯೊಬ್ಬರು, “ಈಗ ರಾಜ್ಯದಲ್ಲಿ ನಮ್ಮ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೂ ಪೊಲೀಸರು ನಮ್ಮನ್ನೇ ತಡೆಯುತ್ತಿದ್ದಾರೆ! ಇದು ಹೇಗೆ ಸಾಧ್ಯ?” ಎಂದು ಕಿರುಚಾಡಿದರು.
ಮತ್ತೊಬ್ಬ ಬೆಂಬಲಿಗ, ಪೊಲೀಸರು “ನಕ್ಸಲರ” ಪರವಾಗಿದ್ದಾರೆ ಎಂದು ಆರೋಪಿಸಿದರು.
► ಹಿಂದಿನ ರಾತ್ರಿ BJP ಶಾಸಕಿ ನೀಡಿದ್ದ ಹೇಳಿಕೆ
ಈ ಘಟನೆಗಳು ಯಾವುದೇ ಮುನ್ಸೂಚನೆಯಿಲ್ಲದೆ ನಡೆದಿರಲಿಲ್ಲ.
ಬುಧವಾರ ರಾತ್ರಿ, ಜಾದವ್ಪುರದ BJP ಶಾಸಕಿ ಸರ್ಬೋರಿ ಮುಖರ್ಜಿ ಬಲಪಂಥೀಯ ಬೆಂಬಲಿಗರೊಂದಿಗೆ ವಿಶ್ವವಿದ್ಯಾಲಯದ ಹೊರಗೆ ನಿಂತು, ಸುಜನ್ ಚಕ್ರವರ್ತಿ ಮತ್ತು ಸೃಜನ್ ಭಟ್ಟಾಚಾರ್ಯ ಸೇರಿದಂತೆ ಎಡಪಂಥೀಯ ನಾಯಕರಿಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.
“ಇಡೀ ರಾತ್ರಿ ಇಲ್ಲಿ ಬೃಹತ್ ಮಟ್ಟದ ಗಲಾಟೆ ನಡೆಯಲಿದೆ” ಎಂದು ಅವರು ಬಹಿರಂಗವಾಗಿ ಘೋಷಿಸಿದ್ದರು.
ಕೆಲವೇ ಗಂಟೆಗಳಲ್ಲಿ, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ‘ಹೊರಗಿನವರು’ ಎಂದು ಹೇಳಿದ್ದ ವ್ಯಕ್ತಿಗಳು ಕ್ಯಾಂಪಸ್ ಪ್ರವೇಶಿಸಿದರು. ‘the wire’ ಶುಕ್ರವಾರ ಶಾಸಕಿ ಮುಖರ್ಜಿ ಅವರನ್ನು ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಲು ಯತ್ನಿಸಿತು. ಆದರೆ ತಡಸಂಜೆಯವರೆಗೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಈ ವರದಿ ಪ್ರಕಟವಾಗುವವರೆಗೂ, ಆಡಳಿತಾರೂಢ ಪಕ್ಷವಾಗಲಿ ಅಥವಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಗಲಿ ಶಾಸಕಿಯಿಂದ ಯಾವುದೇ ಬಹಿರಂಗ ವಿವರಣೆಯನ್ನು ಕೇಳಿರಲಿಲ್ಲ.
► ವಿದ್ಯಾರ್ಥಿಗಳ ನಡುವಿನ ಸಣ್ಣ ಗಲಾಟೆಯೇ ದೊಡ್ಡದಾಗಿದ್ದು
ಜಾದವ್ಪುರದ ಸಕ್ರಿಯ ವಿದ್ಯಾರ್ಥಿ ಸಂಘಟನೆಯಾದ ‘ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸ್ಟೂಡೆಂಟ್ಸ್ ಯೂನಿಯನ್’ (FETSU), ಬುಧವಾರ ಸಂಜೆ ವಿಶ್ವವಿದ್ಯಾಲಯದ ಗೇಟ್ 1 ಮತ್ತು 2ರ ಬಳಿಯ ಆಡಳಿತ ಮಂಡಳಿ ಕಟ್ಟಡವಾದ ‘ಅರವಿಂದ ಭವನ’ದಲ್ಲಿ ಸಭೆ ಕರೆದಿತ್ತು. ಮತ್ತೊಂದು ಎಡಪಂಥೀಯ ಸಂಘಟನೆಯಾದ ‘ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್’ (DSF) ಮತ್ತು ABVP ಬೆಂಬಲಿಗರೂ ಇದರಲ್ಲಿ ಭಾಗವಹಿಸಿದ್ದರು.
ಸಂಘಟನೆಯ ಅಧಿಕೃತ ಇಮೇಲ್, ಸೋಷಿಯಲ್ ಮೀಡಿಯಾ ಖಾತೆಗಳು ಮತ್ತು ಬ್ಯಾಂಕ್ ಖಾತೆಯನ್ನು ಯಾರು ನಿರ್ವಹಿಸಬೇಕು ಎಂಬ ಸಣ್ಣ ನಿಯಮಾವಳಿಯ ವಿಚಾರದಲ್ಲಿ ಈ ಗಲಾಟೆ ಪ್ರಾರಂಭವಾಗಿತ್ತು.
ABVP ಬೆಂಬಲಿಗರು DSF ಬೆಂಬಲಿಗರನ್ನು “ನಕ್ಸಲೀಯರು” ಮತ್ತು “ದೇಶವಿರೋಧಿಗಳು” ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ABVP ಬೆಂಬಲಿಗನೊಬ್ಬ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಬಿದಿರಿನ ಕೋಲಿನಿಂದ ಹಲ್ಲೆ ನಡೆಸಿದನು ಎಂದು ಆರೋಪಿಸಲಾಗಿದೆ. ಅಲ್ಲದೆ, BJP ಮತ್ತು ಇತರ ಬಲಪಂಥೀಯ ಗುಂಪುಗಳಿಗೆ ಸೇರಿದ ದೊಡ್ಡ ಸಂಖ್ಯೆಯ ಜನರು ಹೊರಗೆ ಜಮಾಯಿಸಿ ಎಡಪಂಥೀಯ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಎರಡೂ ಕಡೆಯ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನವರನ್ನು ಬಿಡುಗಡೆ ಮಾಡಲಾಯಿತು.
ಬುಧವಾರ ರಾತ್ರಿ ABVP ಜಾದವ್ಪುರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿತು. ಕೇಸರಿ ಪಡೆಯ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎದುರಾಳಿ ಗುಂಪಿನ ಕನಿಷ್ಠ 11 ವಿದ್ಯಾರ್ಥಿಗಳ ವಿರುದ್ಧ ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ’ಯಡಿ ದೂರು ದಾಖಲಿಸಿದನು.
ABVPಯನ್ನು ವಿರೋಧಿಸಿದ ವಿದ್ಯಾರ್ಥಿಗಳು, ತಮ್ಮ ಕಡೆಯ ಸದಸ್ಯರೂ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ದೂರು ನೀಡಲು ತಮಗೆ ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಇಡೀ ರಾತ್ರಿ ಗಲಾಟೆ (ತಾಂಡವ್) ಮುಂದುವರಿಯಲಿದೆ ಎಂಬ ಮುಖರ್ಜಿ ಅವರ ಬೆದರಿಕೆಯ ನಂತರ, BJP ಬೆಂಬಲಿಗರು ಮತ್ತು ಇತರ ಹೊರಗಿನವರ ದೊಡ್ಡ ಗುಂಪು ವಿಶ್ವವಿದ್ಯಾಲಯದ ಗೇಟ್ ಮುರಿದು ಕ್ಯಾಂಪಸ್ ಪ್ರವೇಶಿಸಿತು.
‘the wire’ ಜೊತೆ ಮಾತನಾಡಿದ ವಿದ್ಯಾರ್ಥಿಗಳು, ಗುರುವಾರ ಮುಂಜಾನೆ 1.15ರ ಸುಮಾರಿಗೆ ಕ್ಯಾಂಪಸ್ ನಲ್ಲಿ ಬೆಂಕಿ ಹಚ್ಚಲಾಯಿತು ಎಂದು ಆರೋಪಿಸಿದ್ದಾರೆ. ಅರ್ಧ ಗಂಟೆಯೊಳಗೆ CCTV ಕಂಟ್ರೋಲ್ ರೂಂ ಮೇಲೆ ದಾಳಿ ನಡೆಸಿ, ದೃಶ್ಯಾವಳಿಗಳನ್ನು ಧ್ವಂಸಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆ ‘ರೆವಲ್ಯೂಷನರಿ ಸ್ಟೂಡೆಂಟ್ಸ್ ಫ್ರಂಟ್’ (RSF) ನಾಯಕ ಇಂದ್ರಾನುಜ್ ರೇ ಫೇಸ್ ಬುಕ್ ನಲ್ಲಿ, “ಗೇಟ್ 4ರ ಸುತ್ತಮುತ್ತ 400 ಜನರ ಗುಂಪು ಮತ್ತು 8B ಬಸ್ ಟರ್ಮಿನಸ್ ಸುತ್ತಲೂ ಸುಮಾರು 800 ಜನರ ಗುಂಪು ಎಲ್ಲ ನಿರ್ಗಮನ ದಾರಿಗಳನ್ನು ತಡೆದು ನಿಂತಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ಹರಿದಾಡಿವೆ. ಅವುಗಳಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಿಂತ ಸಾಕಷ್ಟು ವಯಸ್ಸಾದಂತೆ ಕಾಣುವ ವ್ಯಕ್ತಿಗಳು ಎಡಪಂಥೀಯ ಧ್ವಜಗಳನ್ನು ಕೆಳಗೆ ಎಳೆಯುವುದು, ಪೋಸ್ಟರ್ ಗಳನ್ನು ಹರಿಯುವುದು ಹಾಗೂ ಬ್ಯಾನರ್ ಮತ್ತು ಫ್ಲೆಕ್ಸ್ಗಳಿಗೆ ಬೆಂಕಿ ಹಚ್ಚುವುದು ಕಂಡುಬಂದಿದೆ. ಆದರೆ ‘the wire’ ಈ ವಿಡಿಯೊಗಳನ್ನು ಸ್ವತಂತ್ರವಾಗಿ ದೃಢೀಕರಿಸಿಲ್ಲ. ಅರವಿಂದ ಭವನದ ಹೊರಗೆ ವಸ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾಗ ಆ ವ್ಯಕ್ತಿಗಳು “ಹ್ಯಾಪಿ ದೀಪಾವಳಿ” ಎಂದು ಹೇಳುತ್ತಿರುವುದು ಕೇಳಿಸಿದೆ. ಒಳಗೆ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳು ಬೊಬ್ಬೆ ಹೊಡೆಯುತ್ತಿರುವುದು ವಿಡಿಯೊಗಳಲ್ಲಿದೆ.
ಈ ಹಿಂಸಾಚಾರವು ನಂತರ ಜಾದವ್ಪುರ ಪೊಲೀಸ್ ಠಾಣೆಗೆ ಹತ್ತಿರವಿರುವ ಜಾದವ್ಪುರ ವಿಶ್ವವಿದ್ಯಾಲಯದ ಮುಖ್ಯ ಹಾಸ್ಟೆಲ್ಗೂ ಹರಡಿತು. ಭಯಭೀತರಾದ ವಿದ್ಯಾರ್ಥಿಗಳು ನೆರವಿಗಾಗಿ ಬೇಡಿಕೊಳ್ಳುತ್ತಿದ್ದರೂ, ಬಲಪಂಥೀಯ ಗೂಂಡಾಗಳು ಹಾಸ್ಟೆಲ್ ನ ಮುಖ್ಯ ಗೇಟ್ ಅನ್ನು ಬಲವಂತವಾಗಿ ತೆರೆಯಲು ಯತ್ನಿಸುತ್ತಿರುವುದು ವಿಡಿಯೊವೊಂದರಲ್ಲಿ ದಾಖಲಾಗಿದೆ. ಇನ್ನೊಂದು ಬದಿಯಲ್ಲಿ ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರೂ ಅವರು ಮಧ್ಯಪ್ರವೇಶಿಸಲಿಲ್ಲ. ಅಂತಿಮವಾಗಿ ವಿದ್ಯಾರ್ಥಿಗಳೇ ತಮ್ಮ ರಕ್ಷಣೆಗೆ ನಿಂತು, ಆ ಗುಂಪು ಹಾಸ್ಟೆಲ್ ಪ್ರವೇಶಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
ಆ ಸಮಯದಲ್ಲಿ ಕ್ಯಾಂಪಸ್ನಲ್ಲಿದ್ದ ವಿದ್ಯಾರ್ಥಿಯೊಬ್ಬರು ‘the wire’ ಜತೆ ಮಾತನಾಡಿ, “ಆಡಳಿತಾರೂಢ ಪಕ್ಷದ ಬೆಂಬಲವಿರುವ ಹೊರಗಿನವರು ನಮ್ಮ ಮೇಲೆ ದಾಳಿ ನಡೆಸಿ, ಕ್ಯಾಂಪಸ್ ಧ್ವಂಸಗೊಳಿಸಿದರು. ಬೈಕ್ ಗಳಲ್ಲಿ ಬಂದ 60 ಗೂಂಡಾಗಳು ಇಡೀ ಕ್ಯಾಂಪಸ್ ಗೆ ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸರು ರಾತ್ರಿ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾದರು” ಎಂದು ತಿಳಿಸಿದರು.
ಮತ್ತೊಬ್ಬ ವಿದ್ಯಾರ್ಥಿ, ಉಪಕುಲಪತಿಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ವಿದ್ಯಾರ್ಥಿಗಳು ಅಸಹಾಯಕರಾಗಿದ್ದರು ಮತ್ತು ತುರ್ತು ಪೊಲೀಸ್ ಸಹಾಯವಾಣಿ ‘100’ಕ್ಕೆ ಕರೆ ಮಾಡಿ ದೂರು ನೀಡಿದರೂ ಪೊಲೀಸರು ಏನೂ ಮಾಡಲಿಲ್ಲ ಎಂದು ಆರೋಪಿಸಿದರು.
ಆದರೆ ಅಪಾಯದ ನೈಜ ಚಿತ್ರಣ ಸಿಕ್ಕಿದ್ದು ಅರವಿಂದ ಭವನದ ಭದ್ರತಾ ಸಿಬ್ಬಂದಿಯಿಂದ. “ರಾತ್ರಿ ನಾನು 30ರಿಂದ 35 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅರವಿಂದ ಭವನದೊಳಗೆ ಕೂಡಿಹಾಕಿ, ಎಲ್ಲ ಪ್ರವೇಶ ಮತ್ತು ನಿರ್ಗಮನ ಗೇಟ್ ಗಳನ್ನು ಲಾಕ್ ಮಾಡಿದೆ. ಇಲ್ಲದಿದ್ದರೆ ಅವರನ್ನು ಕೊಂದುಹಾಕುತ್ತಿದ್ದರು” ಎಂದು ಅವರು ‘the wire’ಗೆ ತಿಳಿಸಿದರು.
ಗೇಟ್ ತೆರೆಯುವಂತೆ ಹೊರಗಿನವರು ಒತ್ತಾಯಿಸಿದರೂ ತಾವು ನಿರಾಕರಿಸಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಕೊನೆಗೆ ಪೊಲೀಸರು ಬಂದ ನಂತರ, ಎರಡು–ಮೂರು ಗಂಟೆಗಳ ಬಳಿಕವೇ ಅವರು ಗೇಟ್ ತೆರೆದರು.
► ಆರೋಪ ತಳ್ಳಿದ ABVP; ಅಂತರ ಕಾಯ್ದುಕೊಳ್ಳಲು ಯತ್ನಿಸಿ ವಿಫಲವಾದ BJP
ABVP ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಹಿಂಸಾಚಾರಕ್ಕೆ ಎಡಪಂಥೀಯ ವಿದ್ಯಾರ್ಥಿಗಳು ಮತ್ತು ಸಂಘಟನೆಗಳೇ ಕಾರಣ ಎಂದು ಪ್ರತ್ಯಾರೋಪ ಮಾಡಿದೆ. ಜಾದವ್ಪುರ ವಿಶ್ವವಿದ್ಯಾಲಯದ ಘಟಕದ ಅಧ್ಯಕ್ಷ ನಿಖಿಲ್ ದಾಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ದೀಪ್ತಿಮನ್ ಕರ್ ಸೇರಿದಂತೆ ತಮ್ಮ ಸದಸ್ಯರ ಮೇಲೆ ದಾಳಿ ನಡೆದಿದೆ ಎಂದು ಅದು ದೂರಿದೆ.
ಅಲ್ಲದೆ, ‘ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸ್ಟೂಡೆಂಟ್ಸ್ ಯೂನಿಯನ್’ (FETSU)ಗೆ ಯಾವುದೇ ಕಾನೂನು ಮಾನ್ಯತೆಯಿಲ್ಲ. ಈ ವಿಷಯವನ್ನು ಎತ್ತಿದ್ದಕ್ಕಷ್ಟೇ ತಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ABVP ಆರೋಪಿಸಿದೆ.
ನಂತರ, ತಮ್ಮನ್ನು ಮತ್ತು ದೀಪ್ತಿಮನ್ ಕರ್ ಅವರನ್ನು ಬೆಳಗಿನ ಜಾವ 3 ಗಂಟೆಯ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ದಾಸ್ ಸ್ವತಃ ತಿಳಿಸಿದರು. ಗುರುವಾರ ಮಧ್ಯಾಹ್ನ ದಾಸ್ ಅವರು ಕ್ಯಾಂಪಸ್ ನಲ್ಲಿ ಓಡಾಡುತ್ತಾ, ಪತ್ರಿಕಾಗೋಷ್ಠಿ ನಡೆಸುತ್ತಾ ಮತ್ತು ಫೋನ್ ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿತು.
ABVPಯ ಕೇಂದ್ರ ಕಾರ್ಯಕಾರಿ ಸಮಿತಿಯ ಶುಭ್ರಬ್ರತ ಅಧಿಕಾರಿ ಗುರುವಾರ ಮಾತನಾಡಿ, “ನಾವು ಏನೇ ಆದರೂ ಜಾದವ್ಪುರ ಪ್ರವೇಶಿಸುತ್ತೇವೆ! ಈ ವಿಷಯದಲ್ಲಿ ABVPಗೆ BJPಯೊಂದಿಗೆ ಯಾವುದೇ ಸಾಂಸ್ಥಿಕ ಸಂಪರ್ಕವಿಲ್ಲ. ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಇರುವ ಮಾನಸಿಕ ನಕ್ಸಲರ ಮೇಲೆ ಪ್ರಜಾಸತ್ತಾತ್ಮಕವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಯಲಿದೆ” ಎಂದರು.
BJP ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ತಮ್ಮ ಪಕ್ಷಕ್ಕೂ ಮತ್ತು ಕೇಸರಿ ಧ್ವಜ ಹಿಡಿದು ಮೆರವಣಿಗೆ ನಡೆಸಿದ ವ್ಯಕ್ತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಂತರ ಕಾಯ್ದುಕೊಳ್ಳಲು ಯತ್ನಿಸಿದರು.
“ABVP ಒಂದು ಸ್ವತಂತ್ರ ರಾಷ್ಟ್ರವಾದಿ ಸಂಘಟನೆ. BJPಗೆ ಅವರೊಂದಿಗೆ ಯಾವುದೇ ಲಿಂಕ್ ಇಲ್ಲ. BJPಗೆ ಯಾವುದೇ ವಿದ್ಯಾರ್ಥಿ ಘಟಕವಿಲ್ಲ. ನಮ್ಮ ಪಕ್ಷ ಎಂದಿಗೂ ಕ್ಯಾಂಪಸ್ಗಳ ಒಳಗೆ ಕಾರ್ಯಾಚರಣೆ ನಡೆಸಿಲ್ಲ” ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಆದರೆ ಅವರ ನಂತರದ ವಿವರಣೆಯು ಈ ನಿರಾಕರಣೆಯನ್ನು ಸುಳ್ಳಾಗಿಸಿತು.
ಹಿಂಸಾಚಾರವು ರಸ್ತೆಗೆ ಹರಡಿದಾಗ ಸ್ಥಳದಲ್ಲಿ BJP ಶಾಸಕಿ ಸರ್ಬೋರಿ ಮುಖರ್ಜಿ ಉಪಸ್ಥಿತರಿದ್ದರು ಎಂಬುದನ್ನು ಶಮಿಕ್ ಭಟ್ಟಾಚಾರ್ಯ ಒಪ್ಪಿಕೊಂಡರು.
“ಸ್ಥಳೀಯ ಶಾಸಕಿಯಾಗಿ ಅವರು ಅಲ್ಲಿ ಉಪಸ್ಥಿತರಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು” ಎಂದು ಅವರು ಸಮರ್ಥಿಸಿಕೊಂಡರು.
ಇದರ ಜತೆಗೆ BJP ಬೆಂಬಲಿಗರು ಯಾವುದೇ ಧ್ವಜಗಳನ್ನು ಸುಟ್ಟಿಲ್ಲ ಎಂದು ಭಟ್ಟಾಚಾರ್ಯ ಖಡಾಖಂಡಿತವಾಗಿ ನಿರಾಕರಿಸಿದ್ದು, “ಅದು ನಮ್ಮ ಸಂಸ್ಕೃತಿಯಲ್ಲ” ಎಂದಿದ್ದಾರೆ.
► ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದ ಪೊಲೀಸರ ವಿವರಣೆ
ಹೆಸರು ಹೇಳಲಿಚ್ಛಿಸದ ಕೊಲ್ಕತ್ತಾ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಈ 12 ಗಂಟೆಗಳ ಘಟನಾವಳಿಗೆ ವಿಭಿನ್ನ ವಿವರಣೆ ನೀಡಿದ್ದಾರೆ.
“ಜಾದವ್ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ (OC) ಉಪಕುಲಪತಿಗಳು ಮತ್ತು ಇತರ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಂತರ ಡಯಲ್ 100 ಮೂಲಕ ಕ್ಯಾಂಪಸ್ ಒಳಗಿನ ಗಲಾಟೆಯ ಬಗ್ಗೆ ದೂರು ಬಂದಿತು. ಪ್ರೊ-ವೈಸ್ ಚಾನ್ಸಲರ್ ಕೂಡ ಜಾದವ್ಪುರ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಕ್ಯಾಂಪಸ್ ಒಳಗೆ ಪೊಲೀಸ್ ನೆರವು ಕೋರಿದರು” ಎಂದು ಅವರು ತಿಳಿಸಿದ್ದಾರೆ.
“ಪೊಲೀಸ್ ತಂಡವು ಕ್ಯಾಂಪಸ್ ಪ್ರವೇಶಿಸಿ ಹೊರಗಿನವರನ್ನು ಹೊರಗೆ ಕಳುಹಿಸಿತು. ಅಷ್ಟರಲ್ಲಿ ಅರವಿಂದ ಭವನದ ಹೊರಗೆ ಕೆಲವು ಪೋಸ್ಟರ್ ಹಾಗೂ ಫ್ಲೆಕ್ಸ್ ಹರಿದು ಬೆಂಕಿ ಹಚ್ಚಿರುವುದು ಕಂಡುಬಂದಿತು. ಭವನದೊಳಗೆ ಸುಮಾರು 50ರಿಂದ 60 ಸದಸ್ಯರಿದ್ದು, ಅಲ್ಲಿ ಸಭೆ ಇನ್ನೂ ನಡೆಯುತ್ತಿತ್ತು. ಹೊರಬರಲು ಸೂಚಿಸಿದಾಗ ಅವರು ಹೊರಗೆ ಬರಲು ನಿರಾಕರಿಸಿದರು” ಎಂದು ಕೊಲ್ಕತ್ತಾ ಪೊಲೀಸರ ಹಿರಿಯ ಅಧಿಕಾರಿ ಹೇಳಿದ್ದಾರೆ.
ಪೊಲೀಸರ ಈ ವಿವರಣೆಯು ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನೇ ಹುಟ್ಟುಹಾಕುತ್ತದೆ.
ಸುರಕ್ಷಿತ ಎನ್ನಲಾದ ಕ್ಯಾಂಪಸ್ಗೆ ಹೊರಗಿನವರು ಪ್ರವೇಶಿಸಲು ಹೇಗೆ ಸಾಧ್ಯವಾಯಿತು? ಗೂಂಡಾಗಳಿಂದ ರಕ್ಷಿಸಲು ವಿದ್ಯಾರ್ಥಿಗಳನ್ನು ಕಟ್ಟಡದೊಳಗೆ ಕೂಡಿಹಾಕಬೇಕಾಗಿ ಬಂದಿದ್ದು ಏಕೆ? ಅಥವಾ ಧ್ವಜಗಳನ್ನು ಸುಟ್ಟು ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸಗೊಳಿಸಿದವರನ್ನು ತಕ್ಷಣವೇ ಬಂಧಿಸದೇ ಇದ್ದದ್ದು ಏಕೆ? ಎಂಬ ಪ್ರಶ್ನೆಗಳಿಗೆ ಪೊಲೀಸರ ಬಳಿ ಉತ್ತರವಿಲ್ಲ.
ಬೃಹತ್ ಪ್ರಮಾಣದ ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯಪಡೆ ನಿಯೋಜನೆಗೊಂಡಿದ್ದರೂ, ಮರುದಿನ ಮಧ್ಯಾಹ್ನ ABVP ಸಾಲು ಸಾಲು ಬ್ಯಾರಿಕೇಡ್ ಗಳನ್ನು ಮುರಿದು ಗೇಟ್ 4ರ ವರೆಗೆ ತಲುಪಲು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೂ ಯಾವುದೇ ವಿವರಣೆಯಿಲ್ಲ.
8B ಕ್ರಾಸ್ ಬಳಿ ಎಡಪಂಥೀಯರ ಬೃಹತ್ ಮೆರವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾದ ಪೊಲೀಸರು, ABVP ವಿಶ್ವವಿದ್ಯಾಲಯದ ಗೇಟ್ ತಲುಪಿ ದಾಳಿ ಮಾಡುವುದನ್ನು ತಡೆಯುವಲ್ಲಿ ವಿಫಲರಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇದು ಪೊಲೀಸರ ಉದ್ದೇಶಪೂರ್ವಕ ನಿರ್ಲಕ್ಷ್ಯವೋ ಅಥವಾ ವೈಫಲ್ಯವೋ ಏನೇ ಇರಲಿ, ಫಲಿತಾಂಶ ಮಾತ್ರ ಒಂದೇ ಆಗಿತ್ತು. ಕಾವಿ ಪಡೆ ಕ್ಯಾಂಪಸ್ ತಲುಪಿ ಬ್ಯಾರಿಕೇಡ್ ಗಳು ಇತರರಿಗೆ ಅನ್ವಯಿಸುವಂತೆ ತಮಗೆ ಅನ್ವಯಿಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟವು.
► ಹಿಂಸಾಚಾರ ಖಂಡಿಸಿದ ಶಿಕ್ಷಕರು, ವಿಶ್ವವಿದ್ಯಾಲಯದ ಪ್ರತಿಕ್ರಿಯೆ
ಮಾಧ್ಯಮಗಳೊಂದಿಗೆ ಮಾತನಾಡಿದ ಜಾದವ್ಪುರ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ (JUTA) ಅಧ್ಯಕ್ಷ ಪಾರ್ಥ ಪ್ರತೀಮ್ ರೇ, “ರಾತ್ರಿ 1:00 ಗಂಟೆಗೆ ಹೊರಗಿನವರು ಪ್ರವೇಶಿಸಿ ಸೃಷ್ಟಿಸಿದ ದಾಂಧಲೆಯನ್ನು ಖಂಡಿಸಲು ನಮ್ಮ ಬಳಿ ಪದಗಳೇ ಇಲ್ಲ. ಜೊತೆಗೆ, ಇದಕ್ಕೆ ರಾಜಕೀಯ ಪ್ರಚೋದನೆಯನ್ನು ಏಕೆ ಸೇರಿಸಲಾಗುತ್ತಿದೆ ಎಂದು ನಾವು ಪ್ರಶ್ನಿಸುತ್ತೇವೆ” ಎಂದರು.
CCTV ದೃಶ್ಯಾವಳಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ‘ಜಾದವ್ಪುರ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ’ ಆಗ್ರಹಿಸಿದೆ. ಬುಧವಾರ ರಾತ್ರಿ ಗೇಟ್ 4ರ ಬೀಗವನ್ನು ಯಾರು ಮುರಿದರು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗುರುವಾರ ಮಧ್ಯಾಹ್ನ ಧರಣಿ ಆರಂಭಿಸಿದ್ದು, ಉಪಕುಲಪತಿ ಚಿರಂಜೀಬ್ ಭಟ್ಟಾಚಾರ್ಯ ಅವರು ಕ್ಯಾಂಪಸ್ಗೆ ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ಟಾಚಾರ್ಯ, “ವಿಶ್ವವಿದ್ಯಾಲಯವು ದೇಶದಿಂದ ಹೊರಗಿಲ್ಲ. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ, 2023 ಕ್ಯಾಂಪಸ್ ಒಳಗೂ ಅನ್ವಯಿಸುತ್ತದೆ. ಅಗತ್ಯವಿರುವ ಸೂಕ್ತ ಕ್ರಮಗಳನ್ನು ನಾನು ಕೈಗೊಳ್ಳುತ್ತೇನೆ” ಎಂದರು.
ಗುರುವಾರ ತಡರಾತ್ರಿ ಉಪಕುಲಪತಿಗಳು ವಿಶ್ವವಿದ್ಯಾಲಯದ ಸದಸ್ಯರಿಗೆ ಇಮೇಲ್ ಕಳುಹಿಸಿ, ಆಗಸ್ಟ್ 21ರ ಬೆಳಿಗ್ಗೆಯೊಳಗೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದರು.
“ಆಗಸ್ಟ್ 19ರ ರಾತ್ರಿ (ಹಾಗೂ ಆಗಸ್ಟ್ 20ರಂದು) ನಡೆದ ಕ್ಯಾಂಪಸ್ನ ಸರ್ಕಾರಿ ಆಸ್ತಿಪಾಸ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಜಾದವ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದೆ. ಅಕ್ರಮವಾಗಿ ಕ್ಯಾಂಪಸ್ ಪ್ರವೇಶಿಸಿದ ಹೊರಗಿನ ಅಪರಾಧಿಗಳನ್ನು ಗುರುತಿಸಲು ಆಗಸ್ಟ್ 19ರ ರಾತ್ರಿಯ CCTV ದೃಶ್ಯಾವಳಿಗಳನ್ನು ಸಂರಕ್ಷಿಸಿ ತನಿಖಾ ಸಮಿತಿಗೆ ಹಸ್ತಾಂತರಿಸಲಾಗುವುದು. ಜಾದವ್ಪುರ ವಿಶ್ವವಿದ್ಯಾಲಯದ ಕಡೆಯಿಂದಾಗಿರುವ ಭದ್ರತಾ ಲೋಪಗಳ ಕುರಿತೂ ಈ ಸಮಿತಿ ತನಿಖೆ ನಡೆಸಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
ಶಾಂತಿ ಕಾಪಾಡುವಂತೆ, ಸಂಯಮದಿಂದಿರುವಂತೆ ಮತ್ತು ವದಂತಿಗಳು ಅಥವಾ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದಂತೆ ಉಪಕುಲಪತಿಗಳು ವಿಶ್ವವಿದ್ಯಾಲಯದ ಪ್ರತಿಯೊಬ್ಬರಲ್ಲೂ ಮನವಿ ಮಾಡಿದರು. ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ಸಿಬ್ಬಂದಿ ಭಯವಿಲ್ಲದೆ ಕೆಲಸ ಮಾಡುವ ಶೈಕ್ಷಣಿಕ ವಾತಾವರಣವನ್ನು ಮರುಸ್ಥಾಪಿಸುವುದೇ ತಕ್ಷಣದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
RSF ನಾಯಕ ರೇ ಫೇಸ್ಬುಕ್ ಪೋಸ್ಟ್ನಲ್ಲಿ, “ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತೀವ್ರ ಪ್ರತಿಭಟನೆಯ ನಂತರ, ಉಪಕುಲಪತಿಗಳು ABVP–RSS ಬೆಂಬಲಿತರ ದಾಂಧಲೆಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳಿಗೆ ಸಮ್ಮತಿಸಿದ್ದಾರೆ” ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಗೇಟ್ ಗಳಲ್ಲಿ “ಗುರುತಿನ ಚೀಟಿ ಇಲ್ಲದೆ ಪ್ರವೇಶ ನಿಷೇಧಿಸಲಾಗಿದೆ” ಎಂಬ ಸೂಚನಾ ಫಲಕ ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಿದ್ದೂ, ಹೊರಗಿನವರು ದೊಡ್ಡ ಸಂಖ್ಯೆಯಲ್ಲಿ ಪ್ರವೇಶಿಸಿ, ಕ್ಯಾಂಪಸ್ನಲ್ಲಿ ಓಡಾಡಿ, ಪೋಸ್ಟರ್ಗಳನ್ನು ಹರಿದು ಬೆಂಕಿ ಹಚ್ಚಿದ್ದಾರೆ.
ಘಟನೆ ನಡೆದ ಒಂದು ದಿನದ ನಂತರವೂ ಅಲ್ಲಿ ಯಾವುದೇ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಇರಲಿಲ್ಲ.
ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು, ‘the wire’ ವರದಿಗಾರರು ಯಾವುದೇ ತಡೆಯಿಲ್ಲದೆ ಗೇಟ್ 2ರ ಮೂಲಕ ಪ್ರವೇಶಿಸಿ, ಕ್ಯಾಂಪಸ್ನಲ್ಲಿ ಓಡಾಡಿ, ಫೋಟೊಗಳನ್ನು ತೆಗೆದುಕೊಂಡು ಜನರನ್ನು ಮಾತನಾಡಿಸಿದರು. ಯಾವೊಬ್ಬ ಭದ್ರತಾ ಸಿಬ್ಬಂದಿಯೂ ಗುರುತಿನ ಚೀಟಿ ಕೇಳಲಿಲ್ಲ. ಯಾರು ಬೇಕಾದರೂ ಪರಿಶೀಲನೆಯಿಲ್ಲದೆ ಕ್ಯಾಂಪಸ್ ಪ್ರವೇಶಿಸುತ್ತಿರುವುದರಿಂದ ತಮಗೆ ಇಂದಿಗೂ ಭಯವಿದೆ ಎಂದು ಕ್ಯಾಂಪಸ್ನಲ್ಲಿದ್ದ ವಿದ್ಯಾರ್ಥಿಗಳು ಹೇಳಿದ್ದಾರೆ.
► ಮರುಜೀವ ಪಡೆದ ಹಳೆಯ ಆರೋಪ
ಹಲವು ವಿವಾದಗಳಿಗೆ ಕಾರಣವಾಗಿರುವ ABVPಯ ನಿಖಿಲ್ ದಾಸ್ ಅವರ ಪಾತ್ರವು ಸಾರ್ವಜನಿಕರ ಗಮನವನ್ನು ಮತ್ತೆ ಸೆಳೆದಿದೆ.
2014ರಲ್ಲಿ ವಿಶ್ವವಿದ್ಯಾಲಯದ ‘ಸಂಸ್ಕೃತಿ’ ಉತ್ಸವದ ಸಮಯದಲ್ಲಿ ಜೂನಿಯರ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದಾಸ್ ಮೇಲಿತ್ತು. ಅವರು ಆಗ ಸಿವಿಲ್ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಆ ಘಟನೆಯ ನಂತರ ಅವರನ್ನು ಬಂಧಿಸಲಾಯಿತು ಮತ್ತು ಅವರು ಕೆಲವು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು.
ಈ ಘಟನೆ ಹಾಗೂ ದೂರಿನ ಕುರಿತು ಆಡಳಿತ ಮಂಡಳಿ ಆರಂಭದಲ್ಲಿ ತಳೆದ ನಿಲುವು, ನಂತರ “ಹೋಕ್ ಕೊಲೊರೊಬ್” ಚಳವಳಿಯಾಗಿ ರೂಪಾಂತರಗೊಂಡ ಪ್ರತಿಭಟನೆಗೆ ಕಾರಣವಾಯಿತು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಮತ್ತು ಅಂದಿನ ಉಪಕುಲಪತಿ ಅಭಿಜಿತ್ ಚಕ್ರವರ್ತಿ ಅವರ ರಾಜೀನಾಮೆಗೆ ಆಗ್ರಹಿಸಿ ಈ ಚಳವಳಿ ನಡೆದಿತ್ತು.
ಆ ಪ್ರಕರಣ ಮುಂದೆ ಸಾಗಲಿಲ್ಲ. ದಾಸ್ ಕೂಡ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
“ಆಗ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ನ್ಯಾಯಾಲಯದಿಂದ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಹಳೆಯ ಘಟನೆಯನ್ನು ಮತ್ತೆ ಎಳೆದು ತರುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಅವರು ಗುರುವಾರ ಫೇಸ್ಬುಕ್ ವೀಡಿಯೊವೊಂದರಲ್ಲಿ ಹೇಳಿದ್ದಾರೆ.
ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ವಿಶ್ವವಿದ್ಯಾಲಯದ ABVP ಘಟಕದ ಅಧ್ಯಕ್ಷರಾಗಿದ್ದು ಹೇಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸಿದ್ದಾರೆ. ‘the wire’ ಕೇಳಿದ ಪ್ರಶ್ನೆಗಳಿಗೆ ದಾಸ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
► ‘The Wire’ ವರದಿಗಾರ್ತಿಗೆ ಬೆದರಿಕೆ
ಗುರುವಾರ ‘the wire’ ವರದಿಗಾರ್ತಿಯೊಂದಿಗೆ ABVP ಬೆಂಬಲಿಗರು ನಡೆದುಕೊಂಡ ರೀತಿ, ಅವರ ರಾಜಕೀಯ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿತ್ತು.
ವಿಶ್ವವಿದ್ಯಾಲಯದತ್ತ ಮೆರವಣಿಗೆ ಹೊರಡಲು ಸಜ್ಜಾಗುತ್ತಿದ್ದಾಗ ABVP ಬೆಂಬಲಿಗರು “ವೀರ ಸಾವರ್ಕರ್ ಜಿಂದಾಬಾದ್”, “ಭಾರತ್ ಮಾತಾ ಕೀ ಜೈ”, “ನಕ್ಸಲರಿಗೆ ಇಲ್ಲಿ ಜಾಗವಿಲ್ಲ” ಮತ್ತು “SFI ಬೆಂಬಲಿಗರ ಚರ್ಮ ಸುಲಿಯುತ್ತೇವೆ” ಎಂಬ ಅರ್ಥ ನೀಡುವ ಘೋಷಣೆಗಳನ್ನು ಕೂಗಿದರು.
ವರದಿಗಾರ್ತಿಯು ದಾಸ್ ಮೇಲಿನ ಆರೋಪದ ಬಗ್ಗೆ ಪ್ರಶ್ನಿಸಿದಾಗ, ABVP ಬೆಂಬಲಿಗರು ಮೊದಲು ಪ್ರಶ್ನೆ ಕೇಳದಂತೆ ತಡೆಯಲು ಯತ್ನಿಸಿದರು. ನಂತರ ಗುಂಪಿನಲ್ಲಿದ್ದ ಇಬ್ಬರು ವ್ಯಕ್ತಿಗಳು, ಬೆದರಿಸುವ ಉದ್ದೇಶದಿಂದ, “ನಿನ್ನ ಹೆಸರೇನು ಡಿಯರ್? ರಾತ್ರಿ ಸಿಗೋಣವೇ?” ಎಂದು ಹೇಳಿದರು.
ಜಾದವ್ಪುರ ಪೊಲೀಸ್ ಠಾಣೆಯ ಹೊರಗೂ ಈ ಬೆದರಿಕೆ ಮುಂದುವರಿಯಿತು. ಪೊಲೀಸರ ಸಿದ್ಧತೆಗಳ ಫೋಟೊ ತೆಗೆದುಕೊಳ್ಳುವಾಗ, ವರದಿಗಾರ್ತಿ ಅಧಿಕಾರಿಗಳ ಜತೆ ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಫೋಟೊ ತೆಗೆದರು. ಕೆಲವೇ ಸೆಕೆಂಡುಗಳಲ್ಲಿ, ಇದನ್ನು ನೋಡಿದ ಮೂರನೇ ವ್ಯಕ್ತಿಯೊಬ್ಬ ಆಕ್ರಮಣಕಾರಿಯಾಗಿ ಬಂದು, ಏನು ಫೋಟೊ ತೆಗೆದಿದ್ದೀಯಾ ಎಂದು ಪ್ರಶ್ನಿಸಿ ಗಲಾಟೆ ಮಾಡಿದನು.
ಘಟನೆಯಲ್ಲಿ ಪೊಲೀಸರ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಕೊಲ್ಕತ್ತಾ ಪೊಲೀಸ್ ಕಮಿಷನರ್ ಅಜಯ್ ನಂದ್ ಮತ್ತು ದಕ್ಷಿಣ ಉಪನಗರ ವಿಭಾಗದ ಉಪ ಪೊಲೀಸ್ ಕಮಿಷನರ್ ಉಮೇಶ್ ಜಿ. ಖಂಡ್ಬಾಹಾಲೆ ವರದಿ ಪ್ರಕಟವಾಗುವವರೆಗೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಗುರುವಾರದ ದಾಳಿಯು ಜಾದವ್ಪುರ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಲು ಸಂಘ ಪರಿವಾರ ನಡೆಸಿದ ಮೊದಲ ಯತ್ನವೇನಲ್ಲ. ಕನಿಷ್ಠ 2016ರಿಂದಲೂ ABVP ವಿಶ್ವವಿದ್ಯಾಲಯದ ಗೇಟ್ಗಳತ್ತ ನಿರಂತರವಾಗಿ ಮೆರವಣಿಗೆ ನಡೆಸುವುದು, ಕ್ಯಾಂಪಸ್ಗೆ ರಾಜಕೀಯ ವ್ಯಕ್ತಿಗಳನ್ನು ಕರೆತರುವುದು, ಹೊರಗಿನವರನ್ನು ಸಂಘಟಿಸುವುದು ಮತ್ತು ಸಂಸ್ಥೆಯೊಳಗೆ ಕಾಲಿಡಲು ಪ್ರಯತ್ನಿಸುತ್ತಲೇ ಬಂದಿದೆ.
ಪ್ರತಿಯೊಂದು ಸಂಘರ್ಷದ ಜತೆಗೂ ನಿರಂತರವಾದ ಪ್ರಚಾರ ಕಾರ್ಯವೂ ನಡೆದಿದೆ. ಜಾದವ್ಪುರ ವಿಶ್ವವಿದ್ಯಾಲಯವನ್ನು “ದೇಶವಿರೋಧಿಗಳ ಅಡ್ಡ”, “ಪ್ರತ್ಯೇಕತಾವಾದಿಗಳು ಮತ್ತು ಕಮ್ಯುನಿಸ್ಟರ ಕೇಂದ್ರ” ಎಂದು ಕರೆಯಲಾಗಿದ್ದು, “ಬಾಲಾಕೋಟ್ ಮಾದರಿಯ ಸರ್ಜಿಕಲ್ ಸ್ಟ್ರೈಕ್” ನಡೆಸಲು ಸೂಕ್ತವಾದ ಜಾಗ ಎಂದೂ ಬಿಂಬಿಸಲಾಗಿದೆ.
2019ರ ಸೆಪ್ಟೆಂಬರ್ ನಲ್ಲಿ ABVP ಬೆಂಬಲಿಗರು ಕ್ಯಾಂಪಸ್ ಗೆ ನುಗ್ಗಿ, ಆರ್ಟ್ಸ್ ವಿದ್ಯಾರ್ಥಿಗಳ ಒಕ್ಕೂಟದ ಕೊಠಡಿಯನ್ನು ಧ್ವಂಸಗೊಳಿಸಿ, ಸೈಕಲ್ ಗಳು ಮತ್ತು ರಸ್ತೆಬದಿಯ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. 2023ರಲ್ಲಿ ರ್ಯಾಗಿಂಗ್ ಗೆ ಬಲಿಯಾದ ಯುವ ವಿದ್ಯಾರ್ಥಿಯೊಬ್ಬನ ಸಾವನ್ನೂ ಸಹ “ದೇಶವಿರೋಧಿ ಶಕ್ತಿಗಳನ್ನು” ಹೊರಹಾಕಬೇಕು ಎಂದು BJP ನಾಯಕರು ಆಗ್ರಹಿಸಲು ಬಳಸಿಕೊಂಡಿದ್ದರು.
ಸೌಜನ್ಯ: thewire.in






