ಹಾರ್ಮುಝ್ ಜಲಸಂಧಿಯಲ್ಲಿನ ಸುಂಕದ ಹಿಂದಿನ ಲೆಕ್ಕಾಚಾರ: ಇರಾನ್ ಗೆ ಸಾರಿಗೆ ಶುಲ್ಕ ಪಾವತಿಸುವುದು ದಿಗ್ಬಂಧನಕ್ಕಿಂತ ಅಗ್ಗವೇ?

Photo Credit : aljazeera.com
ಇರಾನ್ ಯುದ್ಧ ಪ್ರಾರಂಭವಾಗಿ ಹನ್ನೊಂದು ವಾರಗಳು ಕಳೆದಿದ್ದರೂ, ಹಾರ್ಮುಝ್ ಜಲಸಂಧಿಯು ನೌಕಾ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇದು ಗಲ್ಫ್ ಪ್ರದೇಶವನ್ನು ಮೀರಿ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಿದೆ. ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಈ ಕಿರಿದಾದ, ಆಯಕಟ್ಟಿನ ಜಲಮಾರ್ಗದ ಮೇಲೆ ತನ್ನ ಹಿಡಿತವನ್ನು ಮುಂದುವರಿಸಿದೆ. ಮತ್ತೊಂದೆಡೆ, ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾಸೇನೆ ವಿಧಿಸಿರುವ ದಿಗ್ಬಂಧನವು ಈ ಮಾರ್ಗವನ್ನು ಪುನಃ ತೆರೆಯುವಲ್ಲಿ ವಿಫಲವಾಗಿದೆ.
ಯುದ್ಧ ಪ್ರಾರಂಭವಾಗುವ ಮೊದಲು, ಪ್ರತಿದಿನ 120 ರಿಂದ 140 ಹಡಗುಗಳು ಈ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದವು. ಅವುಗಳಲ್ಲಿ ಅರ್ಧದಷ್ಟು ತೈಲ ಟ್ಯಾಂಕರ್ ಗಳಾಗಿದ್ದು, ಒಟ್ಟಾರೆಯಾಗಿ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲವನ್ನು ಸಾಗಿಸುತ್ತಿದ್ದವು. ಆದರೆ ಈಗ, ಇರಾನ್ ನ ಐಆರ್ಜಿಸಿ ಜೊತೆಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡ ಮಾಲೀಕರ ಕೆಲವು ಹಡಗುಗಳಿಗೆ ಮಾತ್ರ ಹಾದುಹೋಗಲು ಅನುಮತಿ ನೀಡಲಾಗುತ್ತಿದೆ.
ಪರ್ಸಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ (PGSA) ಎಂಬ ಹೊಸ ಸಂಸ್ಥೆಯನ್ನು ರಚಿಸುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ಬುಧವಾರದಂದು ಇರಾನ್ ತಾನು 24 ಗಂಟೆಗಳಲ್ಲಿ 26 ಹಡಗುಗಳ ಸಂಚಾರವನ್ನು ಹಾರ್ಮುಝ್ ಜಲಸಂಧಿಯ ಮೂಲಕ ಸಂಯೋಜಿಸಿದ್ದೇನೆ ಎಂದು ಹೇಳಿಕೊಂಡಿದೆ. ಈ ಹೊಸ ಸಂಸ್ಥೆಯು ಜಲಸಂಧಿಯ ಕಾರ್ಯಾಚರಣೆಗಳ ಬಗ್ಗೆ ನೈಜ-ಸಮಯದ ನವೀಕರಣಗಳನ್ನು ಒದಗಿಸಲಿದೆ.
ಎಪ್ರಿಲ್ ನಲ್ಲಿ ಯುಎಸ್ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದಾಗಿನಿಂದ, ಇರಾನ್ ಈ ಪ್ರಮುಖ ಜಲಸಂಧಿಯನ್ನು ದಾಟುವ ಹಡಗುಗಳಿಂದ ಸಾರಿಗೆ ಶುಲ್ಕವನ್ನು ವಸೂಲಿ ಮಾಡಲು ಔಪಚಾರಿಕ ವ್ಯವಸ್ಥೆಯನ್ನು ರೂಪಿಸಲು ಕೆಲಸ ಮಾಡುತ್ತಿದೆ. ಶಾಂತಿಕಾಲದಲ್ಲಿ ವಿಶ್ವದ ಶೇಕಡಾ 20 ರಷ್ಟು ತೈಲ ಮತ್ತು LNG ಈ ಕಿರಿದಾದ ಮಾರ್ಗದ ಮೂಲಕವೇ ರಫ್ತಾಗುತ್ತದೆ.
ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಈಗಾಗಲೇ ಪ್ರತಿ ಹಡಗಿನ ಸಂಚಾರಕ್ಕೆ 2 ಮಿಲಿಯನ್ ಡಾಲರ್ ಗಳಷ್ಟು ಭಾರಿ ಶುಲ್ಕವನ್ನು ವಿಧಿಸುತ್ತಿದೆ ಎಂದು ವರದಿಯಾಗಿದೆ. ಇರಾನ್ ಅನ್ನು ವಿರೋಧಿಸುವ ದೇಶಗಳು ಇದು ಕಾನೂನುಬಾಹಿರ ಎಂದು ಹೇಳುತ್ತಿದ್ದರೂ, ಜಲಸಂಧಿ ಮುಚ್ಚಿರುವುದರಿಂದ ಪ್ರತಿದಿನ ಉಂಟಾಗುತ್ತಿರುವ ಒಟ್ಟಾರೆ ನಷ್ಟಕ್ಕೆ ಹೋಲಿಸಿದರೆ ಈ ಶುಲ್ಕ ಪಾವತಿಸುವುದು ಇನ್ನೂ ಅಗ್ಗವಾಗಿರಬಹುದು.
ಹಾಗಾದರೆ, ಸಮುದ್ರದ ಮಧ್ಯದಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಇರಾನ್ ಗೆ ಹಣ ಪಾವತಿಸುವುದು ಅಗ್ಗವೇ? ಹಾರ್ಮುಝ್ ಜಲಸಂಧಿಗೆ ಸುಂಕ ವಿಧಿಸುವ ಹಿಂದಿನ ಲೆಕ್ಕಾಚಾರವನ್ನು ವಿಶ್ಲೇಷಿಸಿ ಅಲ್ ಜಜೀರಾ ಪ್ರಕಟಿಸಿದ ವರದಿ ಇಲ್ಲಿದೆ.
ಹಾರ್ಮುಝ್ ಜಲಸಂಧಿ ಬಂದ್ ಆಗಿರುವುದರಿಂದ ಆಗುತ್ತಿರುವ ನಷ್ಟ ಎಷ್ಟು?
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಇರಾನ್ ಈ ಜಲಮಾರ್ಗವನ್ನು ಮುಚ್ಚಿತು. ಈ ಘಟನೆಗೂ ಮುನ್ನ, ಗಲ್ಫ್ ರಾಷ್ಟ್ರಗಳು ರಫ್ತು ಮಾಡುತ್ತಿದ್ದ ಜಾಗತಿಕ ತೈಲ ಮತ್ತು LNGಯ ಒಟ್ಟು ಪ್ರಮಾಣದಲ್ಲಿ ಸುಮಾರು ಐದನೇ ಒಂದು ಭಾಗ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಗಲ್ಫ್ ಉತ್ಪಾದಕರನ್ನು ಮುಕ್ತ ಸಾಗರಕ್ಕೆ ಸಂಪರ್ಕಿಸುವ ಏಕೈಕ ಜಲಮಾರ್ಗ ಇದಾಗಿದ್ದು, ತಮ್ಮ ರಫ್ತುಗಳನ್ನು ಸಾಗಿಸಲು ಅವರಿಗೆ ಬೇರೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ.
ಶಾಂತಿಕಾಲದಲ್ಲಿ ಪ್ರತಿದಿನ ಸುಮಾರು 20.3 ಮಿಲಿಯನ್ ಬ್ಯಾರೆಲ್ ತೈಲವು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುತ್ತಿತ್ತು. ಇದು ಜಾಗತಿಕ ಸಮುದ್ರ ತೈಲ ವ್ಯಾಪಾರದ ಸುಮಾರು ಶೇಕಡಾ 27 ರಷ್ಟಾಗಿದೆ. ಈ ಕಚ್ಚಾ ತೈಲದ ಸಿಂಹಪಾಲು ಏಷ್ಯಾದ ಮಾರುಕಟ್ಟೆಗಳಿಗೇ ಹೋಗುತ್ತಿತ್ತು.
ಜಾಗತಿಕ LNG ವ್ಯಾಪಾರಕ್ಕೂ ಇದರಿಂದ ಇಷ್ಟೇ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.
ಯುದ್ಧ ಪ್ರಾರಂಭವಾಗುವ ಹಿಂದಿನ ದಿನ, ಜಾಗತಿಕ ತೈಲ ಬೆಲೆಗಳ ಮಾನದಂಡವಾಗಿರುವ 'ಬ್ರೆಂಟ್ ಕಚ್ಚಾ ತೈಲ' ಪ್ರತಿ ಬ್ಯಾರೆಲ್ಗೆ 72.48 ಡಾಲರ್ ದರದಲ್ಲಿ ವಹಿವಾಟು ಮುಗಿಸಿತ್ತು. ಆದರೆ, ಮಾರ್ಚ್ 4 ರಂದು ಇರಾನ್ ಈ ಜಲಮಾರ್ಗವನ್ನು ಮುಚ್ಚಿ, ಅಲ್ಲಿಂದ ಸಾಗಲು ಯತ್ನಿಸುವ ಹಡಗುಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ನಂತರ ನೌಕಾ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತು. ಇದರಿಂದಾಗಿ ಜಲಸಂಧಿಯ ಎರಡೂ ಬದಿಗಳಲ್ಲಿ ಸುಮಾರು 2,000 ಹಡಗುಗಳು ಸಿಲುಕಿಕೊಂಡವು.
ನಷ್ಟವಾಗುತ್ತಿರುವ ತೈಲ ಆದಾಯದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಇದು ಪ್ರತಿದಿನ ಬರೋಬ್ಬರಿ 114.8 ಬಿಲಿಯನ್ ಡಾಲರ್ (ಸರಿಸುಮಾರು ರೂ. 9.5 ಲಕ್ಷ ಕೋಟಿಗೂ ಹೆಚ್ಚು) ನಷ್ಟಕ್ಕೆ ಕಾರಣವಾಗುತ್ತಿದೆ. ಇದರೊಂದಿಗೆ, ಪ್ರತಿದಿನ ಸುಮಾರು 10 ಬಿಲಿಯನ್ ಘನ ಅಡಿಯಷ್ಟು LNG ಕೂಡ ಈ ಜಲಸಂಧಿಯ ಮೂಲಕ ಹಾದುಹೋಗುತ್ತಿತ್ತು. ಇದರ ಮೌಲ್ಯ 7.8 ಬಿಲಿಯನ್ ಡಾಲರ್ ಆಗಿದೆ.
ದಿಗ್ಬಂಧನದ ನಂತರ, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿರುವ ಹಡಗುಗಳ ಸಂಖ್ಯೆ ಶಾಂತಿಕಾಲದ ಸಂಚಾರದ ಶೇಕಡಾ 4ಕ್ಕಿಂತಲೂ ಕಡಿಮೆಯಾಗಿದೆ. ಹಡಗುಗಳು ತಮ್ಮ ಟ್ರ್ಯಾಕಿಂಗ್ ಸಾಧನಗಳನ್ನು ಕಾನೂನುಬಾಹಿರವಾಗಿ ಆಫ್ ಮಾಡಿ ಸಂಚರಿಸುವ ಶಾಡೋ ಫ್ಲೀಟ್ಗಳ ಓಡಾಟವನ್ನು ಈ ಲೆಕ್ಕ ಒಳಗೊಂಡಿಲ್ಲ.
"ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ, ಜಲಮಾರ್ಗವನ್ನು ಹೀಗೆಯೇ ಮುಚ್ಚಿಡುವುದಕ್ಕಿಂತ ಇರಾನ್ ಜೊತೆಗೆ ಮಾತುಕತೆಯ ಮೂಲಕ ಸಾರಿಗೆ ಒಪ್ಪಂದ ಮಾಡಿಕೊಳ್ಳುವುದು ಈಗ ಹೆಚ್ಚು ಸೂಕ್ತವಾಗಿ ಕಾಣುತ್ತದೆ" ಎಂದು ಜರ್ಮನಿಯ ಮಾರ್ಬರ್ಗ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಮೊಹಮ್ಮದ್ ರೇಜಾ ಫರ್ಜಾನೆಗನ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಭೌಗೋಳಿಕ ಪರಿಸ್ಥಿತಿಯು ಇರಾನ್ ಗೆ ಗಮನಾರ್ಹ ಶಕ್ತಿಯನ್ನು ನೀಡಿದೆ. ಇತ್ತೀಚಿನ ಬಿಕ್ಕಟ್ಟು ಟೆಹರಾನ್ ಪ್ರಾಯೋಗಿಕವಾಗಿ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಹೇಗೆ ಬಳಸಿಕೊಳ್ಳಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.
ತನ್ನ ಆಯಕಟ್ಟಿನ ಸ್ಥಾನವನ್ನು ಗುರುತಿಸುವ ರಾಜಕೀಯ ಅಥವಾ ಆರ್ಥಿಕ ಒಪ್ಪಂದವಿಲ್ಲದೆ ಇರಾನ್ ಈ ಅವಕಾಶವನ್ನು ಕೈಬಿಡುವುದು ಅಸಂಭವ ಎಂದು ಫರ್ಜಾನೆಗನ್ ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿಯನ್ನು ಬಂದ್ ಮಾಡಿರುವುದರ ಆರ್ಥಿಕ ಪರಿಣಾಮವು ಕೇವಲ ಹಡಗುಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿಲ್ಲ. ತೈಲ, ಅನಿಲ, ರಸಗೊಬ್ಬರಗಳು ಮತ್ತು ಒಟ್ಟಾರೆ ಸಮುದ್ರ ಸಂಚಾರದ ಹರಿವಿನಲ್ಲಿ ಉಂಟಾಗಿರುವ ಅಡ್ಡಿಯು ದಿನೇದಿನೇ ಹೆಚ್ಚುತ್ತಿರುವ ಜೀವನ ವೆಚ್ಚದಿಂದ ಜನರನ್ನು ಸಂಕಷ್ಟಕ್ಕೆ ದೂಡಿದೆ.
►ಹಾಗಾದರೆ, ಇರಾನ್ ಗೆ ಸುಂಕ ಪಾವತಿಸುವುದು ಅಗ್ಗವೇ?
ಸಾವಿರಾರು ನಾವಿಕರೊಂದಿಗೆ ಗಲ್ಫ್ನಲ್ಲಿ ಸಿಲುಕಿಕೊಂಡಿರುವ ನೂರಾರು ಹಡಗುಗಳಿಗೆ, ಒಂದೇ ಕಡೆ ಲಂಗರು ಹಾಕಿ ನಿಲ್ಲುವ ವೆಚ್ಚ ತೀರಾ ದುಬಾರಿಯಾಗಿದೆ. ಇದರಲ್ಲಿ ಸಿಬ್ಬಂದಿ ವೇತನ, ಸಾಲದ ಮರುಪಾವತಿ, ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳ ಜೊತೆಗೆ ಯುದ್ಧದ ಅಪಾಯದಿಂದಾಗಿ ಗಗನಕ್ಕೇರಿರುವ ವಿಮಾ ಕಂತುಗಳು ಸೇರಿವೆ.
ಮತ್ತೊಂದೆಡೆ, ಜಲಸಂಧಿ ದಾಟಲು ಅನುಮತಿ ನೀಡಲು ಇರಾನ್ ಪ್ರತಿ ಹಡಗಿಗೆ 2 ಮಿಲಿಯನ್ ಡಾಲರ್ ಗಳವರೆಗೆ ಶುಲ್ಕ ವಿಧಿಸುತ್ತಿದೆ ಎಂದು ವರದಿಯಾಗಿದೆ. ಕೇವಲ ಹಣಕಾಸಿನ ವೆಚ್ಚದ ದೃಷ್ಟಿಯಿಂದ ನೋಡುವುದಾದರೆ, ಅನೇಕ ಕಂಪೆನಿಗಳಿಗೆ ಈ ಸುಂಕ ಪಾವತಿಸುವುದೇ ಲಾಭದಾಯಕವಾಗಿ ಕಾಣಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.
"ಇರಾನ್ ಗೆ ಹಣ ಪಾವತಿಸುವುದು ನಿರಂತರ ದಿಗ್ಬಂಧನದಲ್ಲಿ ಸಿಲುಕುವುದಕ್ಕಿಂತ ಅಗ್ಗವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ಒಂದು ಕಡೆ ಸುಮ್ಮನೆ ನಿಲ್ಲುವ ತೈಲ ಟ್ಯಾಂಕರ್ ಹಣವನ್ನು ನೀರಿನಂತೆ ಪೋಲು ಮಾಡುತ್ತದೆ" ಎಂದು ಇರಾನಿಯನ್-ಅಮೆರಿಕನ್ ಅರ್ಥಶಾಸ್ತ್ರಜ್ಞ ನಾಡರ್ ಹಬೀಬಿ ಹೇಳಿದ್ದಾರೆ.
ಆದರೆ, ಇದರೊಂದಿಗೆ ಪರಿಗಣಿಸಬೇಕಾದ ಇನ್ನು ಕೆಲವು ಪ್ರಮುಖ ಅಂಶಗಳಿವೆ. ಇದು ಆರ್ಥಿಕ ದೃಷ್ಟಿಕೋನದಿಂದ ಸರಿಯಾಗಿ ಕಂಡರೂ, ರಾಜಕೀಯವಾಗಿ ಇದು ಅಷ್ಟು ಸುಲಭವಲ್ಲ. ಏಕೆಂದರೆ ಈ ಹಡಗು ಕಂಪೆನಿಗಳು ಅಮೆರಿಕದ ನಿರ್ಬಂಧಗಳ ಒತ್ತಡದಲ್ಲಿವೆ. ಇರಾನ್ ಜೊತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ಅವುಗಳಿಗೆ ನಿರ್ದೇಶನವಿರುತ್ತದೆ. ಹೀಗಿರುವಾಗ ಇದು ಕೇವಲ ಆರ್ಥಿಕ ಲಾಭ-ನಷ್ಟದ ವಿಶ್ಲೇಷಣೆಯಲ್ಲ. ಇಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹಬೀಬಿ ಹೇಳಿದ್ದಾರೆ.
ಫೆಬ್ರುವರಿಯಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಅದರ ಸ್ವರೂಪವೇ ಬದಲಾಗಿದೆ ಎಂದು 'ಚಾಥಮ್ ಹೌಸ್' ಚಿಂತಕರ ಚಾವಡಿಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಕಾರ್ಯಕ್ರಮದ ಅಸೋಸಿಯೇಟ್ ಫೆಲೊ ಅನಿಸೆ ತಬ್ರಿಝಿ ಹೇಳಿದ್ದಾರೆ. ನೇರ ಯುದ್ಧದಿಂದ ಇದು ಈಗ ಆರ್ಥಿಕ ಯುದ್ಧವಾಗಿ ಬದಲಾಗಿದೆ. ಇಲ್ಲಿ ಎದುರಾಳಿ ಪಕ್ಷವನ್ನು ಮಂಡಿಯೂರಿಸಲು ಉಭಯ ದೇಶಗಳು ಪರಸ್ಪರ ಆರ್ಥಿಕ ಒತ್ತಡ ಹೇರಲು ಪ್ರಯತ್ನಿಸುತ್ತಿವೆ.
ಪ್ರಸ್ತುತ ಹಾರ್ಮುಝ್ ಜಲಸಂಧಿ ಬಂದ್ ಆಗಿರುವುದರ ಆರ್ಥಿಕ ಲಾಭವು ಇರಾನ್ ಪರವಾಗಿರುವಂತೆ ಕಂಡರೂ, ಕೇವಲ ಆರ್ಥಿಕತೆಯೊಂದೇ ಈ ಪರಿಸ್ಥಿತಿಯ ಲೆಕ್ಕಾಚಾರವನ್ನು ಬದಲಾಯಿಸಲು ಅಥವಾ ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಪ್ರೇರಕ ಶಕ್ತಿಯಾಗುವುದಿಲ್ಲ. ಈ ಜಾಗತಿಕ ಇಂಧನ ಪೂರೈಕೆ ಬಿಕ್ಕಟ್ಟಿಗೆ ಮುಕ್ತಿ ಸಿಗಬೇಕಾದರೆ, ಇರಾನ್ ಮತ್ತು ಅಮೆರಿಕ ದೇಶಗಳು "ಆರ್ಥಿಕ ಅಂಶಗಳ ಜೊತೆಗೆ ಇತರ ರಾಜಕೀಯ ಲೆಕ್ಕಾಚಾರಗಳನ್ನು ಒಳಗೊಂಡ ಒಂದು ರಾಜತಾಂತ್ರಿಕ ಒಪ್ಪಂದಕ್ಕೆ ಬರುವುದು ಅನಿವಾರ್ಯ" ಎಂದು ತಬ್ರಿಝಿ ಒತ್ತಿಹೇಳಿದ್ದಾರೆ.
►ಹಡಗು ಸಂಚಾರದ ಮೇಲಿನ ಸುಂಕಗಳ ಬಗ್ಗೆ ಅಂತರರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?
ಹಾರ್ಮುಜ್ನಂತಹ ನೈಸರ್ಗಿಕ ಜಲಸಂಧಿಗಳೂ ಸೇರಿದಂತೆ ಆಯಕಟ್ಟಿನ ಜಲಮಾರ್ಗಗಳ ಮೂಲಕ ಮುಕ್ತವಾಗಿ ಸಂಚರಿಸುವ ಹಕ್ಕನ್ನು ಅಂತರರಾಷ್ಟ್ರೀಯ ಕಾನೂನು ರಕ್ಷಿಸುತ್ತದೆ. ಹಾರ್ಮುಝ್ ಜಲಸಂಧಿಯಂತೆ ಇಡೀ ಜಲಮಾರ್ಗವು ಸಂಪೂರ್ಣವಾಗಿ ಒಂದು ದೇಶದ ಪ್ರಾದೇಶಿಕ ಜಲಪ್ರದೇಶಕ್ಕೆ ಒಳಪಟ್ಟಿದ್ದರೂ ಸಹ, ಹಡಗುಗಳ ಸಂಚಾರಕ್ಕೆ ಸುಂಕ ವಿಧಿಸದಂತೆ ಅದು ದೇಶಗಳನ್ನು ನಿರ್ಬಂಧಿಸುತ್ತದೆ.
ಆದರೆ, ಭದ್ರತಾ ನಿಯಂತ್ರಣಗಳು, ತಪಾಸಣೆಗಳು ಮತ್ತು ವಿಮಾ ವ್ಯವಸ್ಥೆಗಳಂತಹ ಸೇವೆಗಳಿಗೆ ಶುಲ್ಕವನ್ನು ವಿಧಿಸಬಹುದಾಗಿದೆ. ಹೀಗೆ ವಿಧಿಸಬಹುದಾದ ಶುಲ್ಕಗಳು, ಆ ಜಲಮಾರ್ಗವು ಮಾನವ ನಿರ್ಮಿತವೇ ಅಥವಾ ನೈಸರ್ಗಿಕವೇ ಎಂಬುದರ ಮೇಲೆಯೂ ಭಾಗಶಃ ಅವಲಂಬಿತವಾಗಿರುತ್ತದೆ.
ಜಾಗತಿಕ ಸಮುದ್ರ ಸಂಚಾರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಮೂರು ವಿಭಿನ್ನ ಉದಾಹರಣೆಗಳಿವೆ:
►ಪನಾಮ ಕಾಲುವೆ: ಇದು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳನ್ನು ಸಂಪರ್ಕಿಸುವ ಒಂದು ಮಾನವ ನಿರ್ಮಿತ ಜಲಮಾರ್ಗವಾಗಿದೆ. ಇಲ್ಲಿ ಹಡಗುಗಳು ಎತ್ತರವಾದ ಪ್ರದೇಶದಲ್ಲಿ ಸಾಗಲು ಅವುಗಳನ್ನು ಮೇಲಕ್ಕೆತ್ತಲು ಮತ್ತು ಕೆಳಗಿಳಿಸಲು ವಿಶಿಷ್ಟವಾದ 'ಲಾಕ್ ಸಿಸ್ಟಮ್' ಅನ್ನು ಬಳಸಲಾಗುತ್ತದೆ. ಪನಾಮ ದೇಶವೇ ಈ ಕಾಲುವೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವುದರಿಂದ, ಅದು ಹಡಗಿನ ಗಾತ್ರ, ಸರಕು ಸಾಮರ್ಥ್ಯ ಮತ್ತು ಬುಕಿಂಗ್ ಆದ್ಯತೆಯ ಆಧಾರದ ಮೇಲೆ ಸಾರಿಗೆ ಶುಲ್ಕವನ್ನು ವಿಧಿಸಬಹುದು. ಈ ಶುಲ್ಕಗಳು ಪ್ರತಿ ಸಂಚಾರಕ್ಕೆ ಕೆಲವು ಲಕ್ಷ ಡಾಲರ್ ಗಳಿಂದ ಹಿಡಿದು, ಕೆಲವು ವಿಶೇಷ ಸ್ಲಾಟ್ಗಳಿಗೆ ಲಕ್ಷಾಂತರ ಡಾಲರ್ ಗಳವರೆಗೆ ಮಾರಾಟವಾಗುತ್ತವೆ.
►ಸುಯೆಜ್ ಕಾಲುವೆ: ಇದು ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಜೋಡಿಸುವ ಮತ್ತೊಂದು ಕೃತಕ ಕಾಲುವೆಯಾಗಿದೆ. ಈ ಕಿರಿದಾದ ಜಲಮಾರ್ಗದ ಮೂಲಸೌಕರ್ಯಗಳ ಬಳಕೆ, ನಿರ್ವಹಣೆ ಮತ್ತು ಸಂಚಾರ ನಿರ್ವಹಣಾ ಸೇವೆಗಳಿಗಾಗಿ ಈಜಿಪ್ಟ್ ದೇಶವು ಸಾರಿಗೆ ಶುಲ್ಕವನ್ನು ವಿಧಿಸುತ್ತದೆ. ಇಲ್ಲಿ ಕಂಟೇನರ್ ಹಡಗುಗಳು ಮತ್ತು ತೈಲ ಟ್ಯಾಂಕರ್ ಗಳು ಪ್ರತಿ ಪ್ರಯಾಣಕ್ಕೆ ಕೆಲವು ಲಕ್ಷ ಡಾಲರ್ ಗಳಿಂದ ಹಿಡಿದು 10 ಲಕ್ಷ ಡಾಲರ್ ಗೂ ಹೆಚ್ಚು ಹಣವನ್ನು ಪಾವತಿಸುತ್ತವೆ.
►ತುರ್ಕಿಯೆಯ ಬೋಸ್ಫರಸ್ ಜಲಸಂಧಿ ಮತ್ತು ದಾರ್ದನೆಲ್ಲೆಸ್: ಇವು ಮಾನವ ನಿರ್ಮಿತ ಕಾಲುವೆಗಳಲ್ಲ, ಬದಲಿಗೆ ನೈಸರ್ಗಿಕ ಜಲಸಂಧಿಗಳಾಗಿರುವುದರಿಂದ ಇವುಗಳ ನಿಯಮವೇ ಬೇರೆಯಾಗಿದೆ. ತುರ್ಕಿಯೆ ದೇಶವು ಲೈಟ್ಹೌಸ್ ಕಾರ್ಯಾಚರಣೆಗಳು, ರಕ್ಷಣಾ ಸನ್ನದ್ಧತೆ, ವೈದ್ಯಕೀಯ ಬೆಂಬಲ ಮತ್ತು ಸಂಚಾರ ನಿರ್ವಹಣೆಯಂತಹ ನೌಕಾಯಾನ ಸಂಬಂಧಿತ ಸೇವೆಗಳಿಗೆ ಮಾತ್ರ ಶುಲ್ಕವನ್ನು ವಿಧಿಸುತ್ತದೆ. ಜೊತೆಗೆ ಹಡಗುಗಳ ವೇಳಾಪಟ್ಟಿ ಮತ್ತು ನೌಕಾಯಾನವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
ಅರ್ಥಶಾಸ್ತ್ರಜ್ಞ ಫರ್ಜಾನೆಗನ್ ಅವರ ಪ್ರಕಾರ, ಇರಾನ್ ಕೂಡ ತುರ್ಕಿಯೆಯಂತೆ ನೈಸರ್ಗಿಕ ಜಲಸಂಧಿಗಳ ಮೂಲಕ ಸುರಕ್ಷಿತ ಸಂಚಾರವನ್ನು ಕಾಯ್ದುಕೊಳ್ಳುವುದು, ಪರಿಸರ ಅಪಾಯಗಳನ್ನು ಕಡಿಮೆ ಮಾಡುವುದು ಹಾಗೂ ಜಾಗತಿಕ ಇಂಧನ, ಆಹಾರ ಮತ್ತು ತಂತ್ರಜ್ಞಾನ ಪೂರೈಕೆ ಸರಪಳಿಗಳಿಗೆ ಪೂರಕವಾಗಿ ನಂಬಿಕಸ್ಥ ಜಲಮಾರ್ಗವನ್ನು ಒದಗಿಸುವ ಸಲುವಾಗಿ ಸೇವೆ-ಆಧಾರಿತ ಕೊಡುಗೆಗಳು ಅಥವಾ ಸಾರಿಗೆ ಶುಲ್ಕಕ್ಕಾಗಿ ಮಾತುಕತೆಯ ಮೂಲಕ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದನ್ನು ಸಮರ್ಥಿಸಿಕೊಳ್ಳಬಹುದು.
ಆದರೆ, ತುರ್ಕಿಯೆ ಮತ್ತು ಇರಾನ್ ದೇಶಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹಬೀಬಿ ಹೇಳಿದ್ದಾರೆ.
ತುರ್ಕಿಯೆ ಬಗ್ಗೆ ಹೇಳುವುದಾದರೆ, ಅಲ್ಲಿನ ಹಡಗು ಸಂಚಾರವು ಸಂಪೂರ್ಣವಾಗಿ ತುರ್ಕಿಯೆಯ ಪ್ರಾದೇಶಿಕ ಜಲಪ್ರದೇಶದ ಮೂಲಕವೇ ಹಾದುಹೋಗುತ್ತದೆ. ಹೀಗಾಗಿ ಆ ಜಲಮಾರ್ಗವು ಕೇವಲ ಒಂದೇ ಒಂದು ದೇಶಕ್ಕೆ ಸೇರಿದ್ದಾಗಿದೆ. ಆದರೆ, ಹಾರ್ಮುಝ್ ಜಲಸಂಧಿಯು ಇರಾನ್ ಮತ್ತು ಒಮಾನ್ ದೇಶಗಳ ಪ್ರಾದೇಶಿಕ ಜಲಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಅದರ ಹೊರಭಾಗಗಳು ಯುನೈಟೆಡ್ ಅರಬ್ ಎಮಿರೇಟ್ಸ್ ವರೆಗೂ ವ್ಯಾಪಿಸಿವೆ.
"ಈ ರೀತಿಯ ವ್ಯವಸ್ಥೆಯು ಹಿಂದೆಂದೂ ಕಂಡರಿಯದದ್ದಾಗಿದೆ. ಗಲ್ಫ್ ಸಹಕಾರ ಮಂಡಳಿಯ ದೇಶಗಳು ಮತ್ತು ಇರಾನ್ ನಡುವೆ ಸಂಪೂರ್ಣ ಸಮನ್ವಯತೆ ಇಲ್ಲದಿದ್ದರೆ ಹಾಗೂ ಚೀನಾ ಮತ್ತು ಅಮೆರಿಕದಂತಹ ಪ್ರಮುಖ ಅಂತರರಾಷ್ಟ್ರೀಯ ಶಕ್ತಿಗಳ ಅನುಮೋದನೆ ಸಿಗದ ಹೊರತು ಇಂತಹ ಫಲಿತಾಂಶ ಸಾಧ್ಯವಿಲ್ಲ" ಎಂದು ಹಬೀಬಿ ಹೇಳಿದ್ದಾರೆ.
►ಹಾರ್ಮುಝ್ ಜಲಸಂಧಿಯ ವಿಷಯದಲ್ಲಿ ಪ್ರಾದೇಶಿಕ ಸಹಕಾರ ಸಾಧ್ಯವೇ?
ಇರಾನ್ ಹೊಸದಾಗಿ ರಚಿಸಿರುವ ಪಿಜಿಎಸ್ಎ, ಹಾರ್ಮುಜ್ನ ಹೊಸ ನಕ್ಷೆಯೊಂದನ್ನು ಪ್ರಕಟಿಸಿದೆ. ಇದು ಜಲಸಂಧಿಯ ಪೂರ್ವ ಪ್ರವೇಶದ್ವಾರದಲ್ಲಿ ಇರಾನ್ ನ ಕುಹ್-ಎ ಮುಬಾರಕ್ನಿಂದ ಯುಎಇಯ ಫುಜೈರಾದ ದಕ್ಷಿಣದವರೆಗೆ ಮತ್ತು ಪಶ್ಚಿಮ ಪ್ರವೇಶದ್ವಾರದಲ್ಲಿ ಕೇಶ್ಮ್ ದ್ವೀಪದ ತುದಿಯಿಂದ ಉಮ್ ಅಲ್-ಕುವೈನ್ ವರೆಗೆ ವ್ಯಾಪಿಸಿದೆ.
ಇರಾನ್ ಯುದ್ಧವು ಗಲ್ಫ್ ಪ್ರದೇಶಕ್ಕೂ ಹೇಗೆ ಹರಡಿಕೊಂಡಿದೆ ಎಂಬುದನ್ನು ಗಮನಿಸಿದರೆ, ಅದರಲ್ಲೂ ವಿಶೇಷವಾಗಿ ಯುಎಇ ದೇಶವು ಇರಾನ್ ನ ದಾಳಿಗಳ ತೀವ್ರ ಹೊಡೆತವನ್ನು ಅನುಭವಿಸಿರುವುದನ್ನು ನೋಡಿದರೆ, "ಹಾರ್ಮುಝ್ ಜಲಸಂಧಿಯ ಮೂಲಕ ಸ್ಥಿರವಾದ ಹಡಗು ಸಂಚಾರವನ್ನು ಕಾಯ್ದುಕೊಳ್ಳಲು ಇರಾನ್ ಜೊತೆಗಿನ ಪ್ರಾದೇಶಿಕ ಸಹಕಾರವೇ ಅತ್ಯಂತ ವಾಸ್ತವಿಕ ಮಾರ್ಗವಾಗಿದೆ" ಎಂದು ಅರ್ಥಶಾಸ್ತ್ರಜ್ಞ ಫರ್ಜಾನೆಗನ್ ಹೇಳಿದ್ದಾರೆ.
ಯುಎಇ, ಒಮಾನ್, ಖತರ್ ಮತ್ತು ಇರಾನ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ಏಕೆಂದರೆ ಅವರ ಆರ್ಥಿಕತೆಗೆ ಅದರ ಅಗತ್ಯವಿದೆ. ಒಂದು ಪ್ರಾಯೋಗಿಕ ವ್ಯವಸ್ಥೆಯು ಜಂಟಿ ಕಡಲ ಪ್ರಾಧಿಕಾರ, ಹಂಚಿಕೆಯ ಮೇಲ್ವಿಚಾರಣೆ, ತುರ್ತು ಪರಿಸ್ಥಿತಿಗಳ ಸಮನ್ವಯ, ಪರಿಸರ ಸಂರಕ್ಷಣೆ ಮತ್ತು ಸುರಕ್ಷಿತ ಸಂಚಾರವನ್ನು ಕಾಯ್ದುಕೊಳ್ಳಲು ಸೇವೆ-ಆಧಾರಿತ ಕೊಡುಗೆಗಳನ್ನು ಒಳಗೊಂಡಿರಬಹುದು.
"ಇದು ಈ ಜಲಮಾರ್ಗದ ಭದ್ರತೆಯಲ್ಲಿ ಇರಾನ್ ಗೆ ಒಂದು ಮಾನ್ಯತೆ ಪಡೆದ ಪಾತ್ರವನ್ನು ನೀಡುತ್ತದೆ. ಜೊತೆಗೆ ಪರ್ಸಿಯನ್ ಗಲ್ಫ್ ದೇಶಗಳ ಆರ್ಥಿಕತೆಗೆ ಹೆಚ್ಚಿನ ನಂಬಿಕಸ್ಥ ವಾತಾವರಣವನ್ನು ಕಲ್ಪಿಸುತ್ತದೆ. ಬಾಹ್ಯ ಮಿಲಿಟರಿ ಶಕ್ತಿಯನ್ನು ನೆಚ್ಚಿಕೊಳ್ಳುವುದಕ್ಕಿಂತ ಇಂತಹದೊಂದು ಚೌಕಟ್ಟು ಹೆಚ್ಚು ವಾಸ್ತವಿಕವಾಗಿದೆ. ಏಕೆಂದರೆ ಬಾಹ್ಯ ಮಿಲಿಟರಿ ಹಸ್ತಕ್ಷೇಪವು ಈ ದೇಶಗಳಿಗೆ ನೆಮ್ಮದಿಗಿಂತ ಹೆಚ್ಚಾಗಿ ತೊಂದರೆಯನ್ನೇ ತಂದೊಡ್ಡಿದೆ" ಎಂದು ಫರ್ಜಾನೆಗನ್ ಹೇಳಿದ್ದಾರೆ.
"ಇರಾನ್ ತನಗೆ ಸಿಗುವ ಸಾರಿಗೆ ಶುಲ್ಕವನ್ನು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲಾ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಹಂಚಿಕೊಳ್ಳದ ಹೊರತು" ಇಂತಹ ಪ್ರಾದೇಶಿಕ ವ್ಯವಸ್ಥೆ ಸಾಧ್ಯವಾಗುವುದು ಅಸಂಭವ ಎಂದು ಇರಾನಿಯನ್-ಅಮೆರಿಕನ್ ಅರ್ಥಶಾಸ್ತ್ರಜ್ಞ ನಾಡರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವು ಹಾರ್ಮುಝ್ ಜಲಸಂಧಿಗೆ ಸ್ಥಿರವಾದ ಪ್ರವೇಶವನ್ನು ನಿರೀಕ್ಷಿಸುವುದಾದರೆ, ಈ ಪ್ರಮುಖ ಜಲಮಾರ್ಗವನ್ನು ಸುರಕ್ಷಿತವಾಗಿ ಮತ್ತು ನಂಬಿಕಸ್ಥವಾಗಿಡಲು ಇರಾನ್ ಗೆ ಶುಲ್ಕ ಪಾವತಿಸುವುದನ್ನು ಅದರ ಬೆಲೆಯಾಗಿ ಒಪ್ಪಿಕೊಳ್ಳಲೇಬೇಕಾಗಬಹುದು ಎಂದು ಫರ್ಜಾನೆಗನ್ ಹೇಳಿದ್ದಾರೆ.






