ಗ್ರಾಮೀಣ ಗ್ರಂಥಾಲಯಗಳ ಯಶೋಗಾಥೆ

ಸಾರ್ವಜನಿಕ ಗ್ರಂಥಾಲಯಗಳು ಜನ ಸಾಮಾನ್ಯರ ವಿಶ್ವವಿದ್ಯಾನಿಲಯಗಳೆಂದು ಜನಜನಿತ. ಕರ್ನಾಟಕ ರಾಜ್ಯದಲ್ಲಿ ೧೯೬೫ರಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿದ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯ ಪರಿಣಾಮದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಜಿಲ್ಲೆ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪಿಸಲು ಅನುವಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ೬,೮೯೦ ವಿವಿಧ ಮಾದರಿಯ ಸಾರ್ವಜನಿಕ ಗ್ರಂಥಾಲಯಗಳಿವೆ. ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ಈ ಮಟ್ಟದ ಸಾರ್ವಜನಿಕ ಗ್ರಂಥಾಲಯಗಳನ್ನು ಹೊಂದಿರುವ ಹೆಗ್ಗಳಿಕೆ ನಮ್ಮ ರಾಜ್ಯಕ್ಕಿದೆ. ರಾಜ್ಯದ ನೂತನ ಸರಕಾರ ಮಂಡಿಸಿದ ಬಜೆಟ್ನಲ್ಲಿ ಸರಿಸುಮಾರು ಹತ್ತು ಕೋಟಿಗಳಷ್ಟು ಅನುದಾನವನ್ನು ಪುಸ್ತಕಗಳ ಖರೀದಿಗೆ ಮೀಸಲಿರಿಸಿರುವುದು ಗಮನಾರ್ಹವಾಗಿದೆ. ಅಲ್ಲದೆ ಮುಖ್ಯಮಂತ್ರಿಗಳು ಸಭೆ-ಸಮಾರಂಭಗಳಲ್ಲಿ ಹಾರ-ತುರಾಯಿಗಳ ಬದಲಾಗಿ ಪುಸ್ತಕಗಳನ್ನು ಸ್ವೀಕರಿಸುತ್ತಿರುವುದು ತುಂಬಾ ಸ್ವಾಗತಾರ್ಹ ಬೆಳವಣಿಗೆ.
ಇದೇ ಹೊತ್ತಿನಲ್ಲಿ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಉನ್ನತೀಕರಿಸುತ್ತಿರುವ ಮತ್ತು ಸಮುದಾಯ ಮಾಹಿತಿ ಕೇಂದ್ರಗಳಾಗಿ ಪರಿವರ್ತಿಸುತ್ತಿರುವುದು ಹೊಸ ಗ್ರಂಥಾಲಯ ಕ್ರಾಂತಿಯನ್ನು ರಾಜ್ಯದಲ್ಲಿ ಸೃಷ್ಟಿಸುತ್ತಿದೆ. ೨೦೧೯ರಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ೫,೬೦೦ಕ್ಕೂ ಹೆಚ್ಚು ಗಾಮೀಣ ಭಾಗದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಯಿತು. ಈ ಬೆಳವಣಿಗೆ ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿ ಗ್ರಾಮೀಣ ಭಾಗದ ಜನರ ಸಮುದಾಯ ಪ್ರಮುಖ ಮಾಹಿತಿ ಕೇಂದ್ರಗಳಾಗಿ ಬದಲಾಗುತ್ತಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತನ್ನ ಸುರ್ಪದಿಗೆ ಬಂದ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಹೊಸ ಕಟ್ಟಡಗಳನ್ನು ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವುಗಳ ಮೂಲ ಚಹರೆಯನ್ನು ಬದಲಾಯಿಸುತ್ತಿವೆ. ಪುಸ್ತಕಗಳ ಜೊತೆಗೆ ಆಧುನಿಕ ತಂತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಿಕೊಂಡು ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯನ್ನು ಒದಗಿಸುತ್ತಿವೆ. ಇಂದು ೨,೬೦೦ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗ್ರಂಥಾಲಯಗಳು ಡಿಜಿಟಲ್ ಗ್ರಂಥಾಲಯ ಸೇವೆಗಳನ್ನು ಒದಗಿಸುತ್ತಿವೆ. ದಿನದ ನಾಲ್ಕು ಗಂಟೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಈಗ ದಿನದ ಎಂಟು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ. ಕೋವಿಡ್-೧೯ ಕಾಲದಲ್ಲಿ ಈ ಗ್ರಂಥಾಲಯಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳು ತಮ್ಮ ನಿರಂತರ ಕಲಿಕೆಯನ್ನು ಮುಂದುವರಿಸಲು ಸಾಕಷ್ಟು ಅವಕಾಶ ಮಾಡಿಕೊಡಲಾಗಿತ್ತು. ‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಗ್ರಂಥಾಲಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡಲಾಯಿತು. ಈ ಅವಧಿಯಲ್ಲಿ ಗ್ರಾಮೀಣ ಭಾಗದ ಹತ್ತು ಲಕ್ಷದಷ್ಟು ಮಕ್ಕಳು ಗ್ರಂಥಾಲಯದ ಸದಸ್ಯತ್ವವನ್ನು ಪಡೆದರು ಎಂಬುದು ಗಮನಾರ್ಹ.
‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಬೇಕಾದ ಹೊಸ ಕಟ್ಟಡ, ಪುಸ್ತಕಗಳು, ಅಗತ್ಯ ಪೀಠೋಪಕರಣಗಳು, ಕಂಪ್ಯೂಟರ್, ಓದುವ ಕೊಠಡಿ, ಗ್ರಂಥಾಲಯದ ಗೋಡೆಗಳನ್ನು ಆಕರ್ಷಕ ಚಿತ್ರಗಳಿಂದ ಸಿಂಗರಿಸುವ ಕೆಲಸಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳು ಮತ್ತು ಹಿರಿಯರನ್ನು ಗ್ರಂಥಾಲಯಗಳಿಗೆ ಆಕರ್ಷಿಸಲಾಯಿತು. ‘ಪುಸ್ತಕ ಜೋಳಿಗೆ’ ಕಾರ್ಯಕ್ರಮದ ಮೂಲಕ ಸರಕಾರೇತರ ಸಂಸ್ಥೆಗಳಿಂದ ಲಕ್ಷಾಂತರ ಪುಸ್ತಕಗಳನ್ನು ದೇಣಿಗೆ ಮೂಲಕ ಪಡೆದು ಅವುಗಳನ್ನು ಗ್ರಂಥಾಲಯಗಳಿಗೆ ವಿತರಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಅಜೀಂ ಪ್ರೇಮ್ ಜೀ ಸಂಸ್ಥೆ, ಪ್ರಥಮ್, ಅಧ್ಯಯನ ಸಂಸ್ಥೆ, ಶಿಕ್ಷಣ ಫೌಂಡೇಶನ್ ಸೇರಿದಂತೆ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಹೊಸ ರೂಪ ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಗ್ರಾಮದ ಹಿರಿಯರಿಗೆ ತಮ್ಮ ಶಾಲೆ, ಕಾಲೇಜು ಮತ್ತು ಕೆಲಸದ ಅವಧಿ ಮುಗಿದ ನಂತರ ಪತ್ರಿಕೆಗಳನ್ನು ಓದಲು, ಕಂಪ್ಯೂಟರ್ ಕಲಿಕೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ಕೃಷಿ ಸಂಬಂಧಿಸಿದ ಹಾಗೂ ಸಮಕಾಲೀನ ಸಂಗತಿಗಳಿಗೆ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಭೇಟಿ ನೀಡುತ್ತಿರುವುದು ಹೆಚ್ಚುತ್ತಿದೆ. ಓದುಗರನ್ನು ಆಕರ್ಷಿಸಲು ಗ್ರಂಥಾಲಯಗಳ ಸುತ್ತ ಉದ್ಯಾನವನಗಳನ್ನು ಮಾಡಲಾಗಿದೆ, ಹಿರಿಯರಿಗೆ ಬೆಂಚ್ ವ್ಯವಸ್ಥೆ ಮತ್ತು ಬಯಲು ಗ್ರಂಥಾಲಯಗಳನ್ನು ರೂಪಿಸಲಾಗಿದೆ.
ಡೆಲ್ ತಂತ್ರಜ್ಞಾನ ಸಂಸ್ಥೆಯ ಸಹಕಾರದೊಂದಿಗೆ ಶಿಕ್ಷಣ ಫೌಂಡೇಶನ್ ಜೊತೆಗೂಡಿ ಪಂಚಾಯತ್ ರಾಜ್ ಇಲಾಖೆ ಸುಮಾರು ೧,೩೦೦ ಗಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ‘ಗ್ರಾಮ ಡಿಜಿ ವಿಕಸನ’ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಗ್ರಂಥಾಲಯಗಳಿಗೆ ಸ್ಮಾರ್ಟ್ ಟಿವಿ, ೪ ಅಂಡ್ರಾಯ್ಡ್ ಮೊಬೈಲ್ ಫೋನ್, ಕ್ರೊಮ್ ಬುಕ್ ಎನ್ನುವ ಮಿನಿ ಲ್ಯಾಪ್ಟಾಪ್ ಮತ್ತು ವೈ-ಫೈ ಸೌಲಭ್ಯಗಳನ್ನು ಒದಗಿಸಿ ಗ್ರಾಮೀಣ ಯುವಕರ ಜ್ಞಾನ ಮತ್ತು ತಂತ್ರಜ್ಞಾನ ಕೌಶಲವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದ್ದು, ಇದರ ಜೊತೆಗೆ ರೈತರಿಗೆ ಅಗತ್ಯವಿರುವ ಮಾಹಿತಿ, ಇಂಗ್ಲೀಷ್ ಭಾಷೆ ಕಲಿಕೆ ಮತ್ತು ಇತರ ಮಾಹಿತಿಯನ್ನು ಪಡೆಯಲು ‘ಗ್ರಾಮ ಡಿಜಿ ವಿಕಸನ’ ಯೋಜನೆ ಸಹಾಯಕವಾಗಿದೆ. ಇದಲ್ಲದೆ ಇನ್ನೂ ಅನೇಕ ಯೋಜನೆಗಳನ್ನು ಗ್ರಂಥಾಲಯದತ್ತ ಗ್ರಾಮೀಣ ಭಾಗದ ಓದುಗರನ್ನು ಸೆಳೆಯಲು ಕ್ರಮವಹಿಸಲಾಗಿದೆ.
ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ‘ಅರಿವು ಕೇಂದ್ರ’ಗಳೆಂದು ಮರುನಾಮಕರಣ ಮಾಡಿ ಸ್ಥಳೀಯ ಪ್ರಮುಖ ಸಮುದಾಯ ಜ್ಞಾನ ಕೇಂದ್ರಗಳಾಗಿ ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ, ಪಂಚಾಯತ್ ಕ್ರಿಯಾಯೋಜನೆ, ಬಜೆಟ್ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಸೇರಿದಂತೆ ಇತರ ಮಾಹಿತಿಗಳು ಈ ಕೇಂದ್ರಗಳಲ್ಲಿ ಸಿಗುವಂತೆ ಇವುಗಳನ್ನು ಅಭಿವೃದ್ಧಿಪಡಿಸುವತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಜ್ಜೆ ಇಟ್ಟಿರುವುದು ಮಹತ್ಕಾರ್ಯವಾಗಿದೆ. ದೇಶಕ್ಕೆ ಮಾದರಿಯಾಗಬಹುದಾದ ಗ್ರಾಮ ಪಂಚಾಯತ್ ಗ್ರಂಥಾಲಯಗಳ ಹೊಸ ರೂಪಕ್ಕೆ ಮತ್ತಷ್ಟು ಅನುದಾನ ನೀಡುವುದರ ಮೂಲಕ ಸರಕಾರ ಅವುಗಳ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡಬೇಕಾಗಿದೆ.
ಅದರೆ ಇತ್ತೀಚೆಗೆ ಕೇಂದ್ರ ಸರಕಾರ ಗ್ರಂಥಾಲಯಗಳನ್ನು ರಾಜ್ಯಗಳ ಪಟ್ಟಿಯಿಂದ ಕೇಂದ್ರದ ಸಮವರ್ತಿ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಮತ್ತು ಈ ಸಂಬಂಧ ಶೀಘ್ರದಲ್ಲೇ ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಇದು ತೀರಾ ಕಳವಳಕಾರಿಯಾಗಿದೆ. ದಕ್ಷಿಣದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗ್ರಂಥಾಲಯ ಚಳುವಳಿಗೆ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ಅಲ್ಲಿನ ಪ್ರಮುಖ ಅರಿವು ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಂಥಾಲಯಗಳು ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟರೆ ಸೈದ್ಧಾಂತಿಕ ರಾಜಕೀಯ ಸಂಘರ್ಷಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಜೊತೆಗೆ ಗ್ರಂಥಾಲಯಗಳ ಬೆಳವಣಿಗೆ ತೀರ ಕುಂಠಿತವಾಗುತ್ತದೆ. ಗ್ರಂಥಾಲಯಗಳ ನಿಯಂತ್ರಣವನ್ನು ರಾಜ್ಯಗಳ ಪಟ್ಟಿಯಿಂದ ಕೇಂದ್ರದ ಪಟ್ಟಿಗೆ ಸೇರಿಸುವ ಇಂತಹ ಪ್ರಯತ್ನಗಳನ್ನು ಬಲವಾಗಿ ವಿರೋಧಿಸಬೇಕಾಗಿದೆ. ಇಂತಹ ಕೇಂದ್ರೀಕೃತ ಮಸೂದೆಗಳನ್ನು ಜಾರಿಗೆ ತರದೆ ಸಾರ್ವಜನಿಕ ಗ್ರಂಥಾಲಯಗಳ ಬೆಳವಣಿಗೆಯಲ್ಲಿ ತೀರ ಹಿಂದುಳಿದಿರುವ ಉತ್ತರದ ರಾಜ್ಯಗಳಲ್ಲಿ ಸಾಕಷ್ಟು ಹೊಸ ಗ್ರಂಥಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಅಲ್ಲಿನ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕಿದೆ.







