ತೇವಾಂಶವಿರುವ ವಾತಾವರಣದಲ್ಲೂ ಕಣ್ಣಿನ ಶುಷ್ಕತೆಯ ಸಮಸ್ಯೆಯೆ? ವೈದ್ಯರು ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : magnific
ಕಣ್ಣುಗಳು ತೇವಾಂಶ ಕಳೆದುಕೊಂಡು ಕಿರಿಕಿರಿ ಉಂಟು ಮಾಡುವ ಸಮಸ್ಯೆ ಮುಂಗಾರು ಋತುವಿನಲ್ಲೂ ಮುಂದುವರಿಯುತ್ತಿರುವುದೇಕೆ?
ಇತ್ತೀಚೆಗಿನ ದಿನಗಳಲ್ಲಿ ಕಣ್ಣಿನ ಶುಷ್ಕತೆ (Dry eye disease) ಅಥವಾ ಒಣಗಿದ ಕಣ್ಣುಗಳ ಸಾಮಾನ್ಯ ಸಮಸ್ಯೆಯಾಗಿದೆ. ಹೆಸರೇ ಸೂಚಿಸುವಂತೆ ಇದು ಕಣ್ಣುಗಳು ತೇವಾಂಶ ಕಳೆದುಕೊಂಡು ಕಿರಿಕಿರಿ ಉಂಟು ಮಾಡುವುದು. ಶುಷ್ಕ ಹವಾಮಾನವು ಕಣ್ಣುಗಳ ಶುಷ್ಕತೆಗೆ ಕಾರಣವಾಗಬಹುದು. ಆದರೆ ಹವಾಮಾನವು ಪ್ರಧಾನವಾಗಿ ತೇವಾಂಶದಿಂದ ಕೂಡಿರುವ ಮುಂಗಾರು ಋತುವಿನಲ್ಲೂ ಈ ಸ್ಥಿತಿ ಇರುವುದೇಕೆ?
ನೇತ್ರತಜ್ಞೆ ಡಾ ನೀಲಿಮಾ ಶಾ ಹೀಗೆ ಕಣ್ಣು ಶುಷ್ಕತೆಯಾಗುವುದು ಹೇಗೆ ಮತ್ತು ಮಹಿಳೆಯರು ಹೇಗೆ ಹೆಚ್ಚಿನ ಅಪಾಯದಲ್ಲಿದ್ದಾರೆ ಎನ್ನುವ ವಿವರ ನೀಡಿದ್ದಾರೆ. ನಿಲೀಮಾ ಶಾ ಅವರ ಪ್ರಕಾರ ಮುಖ್ಯವಾಗಿ ಕಣ್ಣೀರು ಕಡಿಮೆ ಸ್ರವಿಸುವುದು, ಕಣ್ಣೀರಿನ ಪೊರೆಯ ಅಸ್ಥಿರಗೊಂಡಿರುವುದು ಅಥವಾ ಕಣ್ಣಿನ ಕಣ್ಣೀರಿನ ಪೊರೆಯು ವೇಗವಾಗಿ ಆವಿಯಾಗುವುದರಿಂದ ಕಣ್ಣಿನ ಶುಷ್ಕತೆ ಬೆಳೆಯುತ್ತದೆ. ಬಹು-ಪದರದ ರಚನೆಯಾಗಿರುವ ಕಣ್ಣೀರಿನ ಪೊರೆಯು ಕಣ್ಣುಗಳ ಮೇಲ್ಮೈಯನ್ನು ತೇವವಾಗಿಸಿ, ಸ್ಪಷ್ಟವಾಗಿರಿಸಿ ರಕ್ಷಿಸುತ್ತದೆ.
ತಜ್ಞರ ಪ್ರಕಾರ, ಕಣ್ಣೀರಿನ ಪೊರೆಯು ಜಲವಿರುವ ಅಥವಾ ನೀರಿನ ಪದರ, ಮ್ಯೂಸಿನ್ (ಗ್ಲೈಕೋಸೈಲೇಟೆಡ್ ಪ್ರೊಟೀನ್ಗಳ ಜೆಲ್ ತರಹದ ಲೇಪನ) ಪದರ ಮತ್ತು ಲಿಪಿಡ್ ಅಥವಾ ಎಣ್ಣೆಯ ಪದರವನ್ನು ಹೊಂದಿರುತ್ತದೆ. ಈ ಯಾವುದೇ ಕಾಂಪೋನೆಂಟ್ಗಳಿಗಾದ ಅಡ್ಡಿಯು ಕಣ್ಣುಗಳ ಶುಷ್ಕತೆಗೆ ಕಾರಣವಾಗುತ್ತದೆ.
ರೋಗಲಕ್ಷಣಗಳಲ್ಲಿ ಶುಷ್ಕತೆ, ಅಸ್ವಸ್ಥತೆ, ಉರಿ, ಒರಟುತನ, ಭಾರವಾಗುವುದು, ಕಣ್ಣುಗಳು ಕೆಂಪಾಗುವುದು ಇತ್ಯಾದಿ ಒಳಗೊಂಡಿದೆ. ಕಣ್ಣಿನ ಶುಷ್ಕತೆ ತಾತ್ಕಾಲಿಕವಾಗಿಯೂ ಇರಬಹುದು, ದೀರ್ಘಕಾಲೀನವಾಗಿ ಅಥವಾ ಮರುಕಳಿಸುವ ಕಾಯಿಲೆಯಾಗಿರಬಹುದು. ವಿಭಿನ್ನ ವಯೋಮಾನದವರಿಗೆ ಮತ್ತು ಲಿಂಗದವರಿಗೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಒಂದೇ ವಯಸ್ಸಿನ ಪುರುಷರಿಗಿಂತ ಮಹಿಳೆಯರಿಗೆ ಕಣ್ಣಿನ ಶುಷ್ಕತೆಯ ಸಮಸ್ಯೆ ಹೆಚ್ಚು. ವಯಸ್ಸಾದ ಮಹಿಳೆಯರಲ್ಲಿ ಕಣ್ಣಿನ ಶುಷ್ಕತೆಯ ಸಮಸ್ಯೆ ಹೆಚ್ಚಾಗಿರುತ್ತದೆ.
ಕಣ್ಣಿನ ಶುಷ್ಕತೆಗೆ ಕಾರಣವೇನು?
ಸಾಮಾನ್ಯವಾದ ಕಣ್ಣಿನ ಶುಷ್ಕತೆಗೆ ಕಾರಣವಾಗುವ ಕೆಲವು ಅಂಶಗಳು ಈ ಕೆಳಗಿನಂತಿವೆ:
* ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಟಿವಿ ನೋಡುವುದು, ವಿಡಿಯೋ ಗೇಮ್ಗಳನ್ನು ಹೆಚ್ಚು ಸಮಯ ಆಡುವುದು ಇತ್ಯಾದಿಗಳಿಂದ ಆಗಾಗ್ಗೆ ಕಣ್ಣು ಮಿಟಿಸುವಿಕೆ ಮತ್ತು ocular surface exposure ಹೆಚ್ಚಾಗಲು ಕಾರಣವಾಗುತ್ತದೆ, ಶುಷ್ಕತೆ ತರುತ್ತದೆ.
* ಕಡಿಮೆ ಆರ್ದ್ರತೆ ಅಥವಾ ಹವಾನಿಯಂತ್ರಿತ ಪರಿಸರಗಳು, ಶಾಖ ಅಥವಾ ನೇರ ಗಾಳಿಯ ಹರಿವಿಗೆ ಒಡ್ಡಿಕೊಳ್ಳುವುದು ವೇಗವಾಗಿ ಕಣ್ಣೀರಿನ ಪೊರೆ ಆವಿಯಾಗುವಿಕೆಗೆ ಕಾರಣವಾಗಬಹುದು.
* ದೀರ್ಘಕಾಲದ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯು ಕಣ್ಣು ಒಣಗುವುದನ್ನು ಹೆಚ್ಚಿಸಬಹುದು.
ಮಹಿಳೆಯರಿಗೆ ಹೆಚ್ಚು ಅಪಾಯಕಾರಿ
ಮಹಿಳೆಯರಿಗೆ ನಿರ್ದಿಷ್ಟವಾದ ಕೆಲವು ಅಂಶಗಳು ಅವರನ್ನು ಕಣ್ಣಿನ ಶುಷ್ಕತೆಯ ಕಾಯಿಲೆಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಅವುಗಳೆಂದರೆ, ಸ್ತ್ರೀ ಹಾರ್ಮೋನುಗಳಲ್ಲಿನ ಏರಿಳಿತಗಳು. ಅಂದರೆ, ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಆಂಡ್ರೋಜೆನ್ಗಳಂತಹ ನೈಸರ್ಗಿಕ ಸ್ತ್ರೀ ಹಾರ್ಮೋನುಗಳಲ್ಲಿನ ಬದಲಾವಣೆಯ ಕಣ್ಣು ರೆಪ್ಪೆಗಳಲ್ಲಿನ ಕಣ್ಣೀರಿನ ಗ್ರಂಥಿಗಳು ಮತ್ತು ಎಣ್ಣೆ ಗ್ರಂಥಿಗಳ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದು ಕಣ್ಣೀರಿನ ಸ್ರವಿಸುವಿಕೆ ಮತ್ತು ಅಸ್ಥಿರತೆ ಉಂಟು ಮಾಡುತ್ತದೆ.
ಋತುಬಂಧಪೂರ್ವ ಅವಧಿ ಮತ್ತು ಋತುಬಂಧದ ಸಮಯ ಎದುರಿಸುತ್ತಿರುವ ವಯಸ್ಸಾದ ಮಹಿಳೆಯರಲ್ಲಿ ಈ ಹಾರ್ಮೋನುಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದರಿಂದಾಗಿ ಅವರು ಒಣ ಕಣ್ಣಿನ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ಗರ್ಬಾವಸ್ಥೆಯಲ್ಲಿ ಮತ್ತು ನಿಯಮಿತ ಋತುಚಕ್ರದ ಅವಧಿಯಲ್ಲೂ ಸಹ ಸ್ತ್ರೀ ಹಾರ್ಮೋನುಗಳಲ್ಲಿ ಏರಿಳಿತಗಳು ಕಂಡುಬರುತ್ತವೆ.
ಹಾರ್ಮೋನ್ ಬದಲಿ ಚಿಕಿತ್ಸೆ ಮತ್ತು ಮೌಖಿಕ ಗರ್ಭನಿರೋಧಕ ಮಾತ್ರೆಗಳನ್ನು ಪಡೆಯುತ್ತಿರುವ ರೋಗಿಗಳು ಸಹ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಅನಿಯಂತ್ರಿತ ಥೈರಾಯ್ಡ್ ಹಾರ್ಮೋನ್ ಮಟ್ಟಗಳು ಇದ್ದಾಗ ಕಣ್ಣೀರು ಮತ್ತು ಎಣ್ಣೆ ಗ್ರಂಥಿಗಳ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿನ ಅಡಚಣೆಯಿಂದಾಗಿ ಕಣ್ಣುಗಳನ್ನು ಒಣಗಿಸುತ್ತವೆ.
ಕಣ್ಣಿನ ಸೌಂದರ್ಯವರ್ಧಕಗಳ ಬಳಕೆಯೂ ಎಣ್ಣೆ ಗ್ರಂಥಿ ತೆರೆಯುವಿಕೆಗಳ ಅಡಚಣೆಗೆ ಕಾರಣವಾಗಬಹುದು. ಕಣ್ಣಿನ ಮೇಕಪ್ ಅನ್ನು ಅಪೂರ್ಣವಾಗಿ ತೆಗೆದು ಹಾಕುವುದು ಸಮಸ್ಯೆಯನ್ನು ಹೆಚ್ಚಿಸಬಹುದು.






