ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಬಗ್ಗೆ ಇರುವ ಮೌಢ್ಯ; ವೈದ್ಯರ ಸಲಹೆಗಳೇನು?

ಸಾಂದರ್ಭಿಕ ಚಿತ್ರ | Photo Credit : magnific.com
ಗರ್ಭಿಣಿಯರಿಗೆ ವಿವಿಧ ರೀತಿಯ ಸ್ಕ್ಯಾನಿಂಗ್ಗೆ ಒಳಗಾಗುವುದು ಸುರಕ್ಷಿತವೇ ಎನ್ನುವ ಬಗ್ಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ವರ ಪ್ರಸಾದ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿಯರಿಗೆ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದಾಗ ಅನೇಕ ಅನುಮಾನಗಳು ಇರುವುದು ಸಹಜ. ಕೆಲವೊಮ್ಮೆ ಯಾವ ಸ್ಕ್ಯಾನ್ ಯಾಕೆ ಮಾಡುತ್ತಾರೆ ಎನ್ನುವ ಅರಿವಿಲ್ಲದೆ ಮಗುವಿನ ಆರೋಗ್ಯದ ಬಗ್ಗೆ ಕಳವಳವೂ ಮೂಡುತ್ತದೆ. ಇನ್ನು ಕೆಲವೊಮ್ಮೆ ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಎಕ್ಸ್-ರೇಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಸಾಮಾನ್ಯ ಸ್ಕ್ಯಾನಿಂಗ್ ಮತ್ತು ಎಕ್ಸ್-ರೇಗಳಿಗೆ ಇರುವ ವ್ಯತ್ಯಾಸವೇನು? ಗರ್ಭಿಣಿ ಮಹಿಳೆಯರು ಹೀಗೆ ವಿವಿಧ ರೀತಿಯ ಸ್ಕ್ಯಾನಿಂಗ್ಗೆ ಒಳಗಾಗುವುದು ಸುರಕ್ಷಿತವೇ? ಈ ಬಗ್ಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ವರ ಪ್ರಸಾದ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಸುರಕ್ಷಿತವೇ?
ವಿಭಿನ್ನ ರೀತಿಯ ಸ್ಕ್ಯಾನಿಂಗ್ ಗಳು ಇರುತ್ತವೆ. ಆದರೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸುರಕ್ಷಿತ. ಗರ್ಭಿಣಿಯರು ಅನಾರೋಗ್ಯಕ್ಕೆ ಒಳಗಾದರೆ ಸಾಮಾನ್ಯ ಸ್ಕ್ಯಾನ್ ಮಾಡಬೇಕು ಎಂದಾದಲ್ಲಿ ದೇಹದ ಇತರ ಭಾಗಗಳಿಗೆ ಇತರ ಸ್ಕ್ಯಾನ್ಗಳನ್ನು ಮಾಡಬಹುದು.
ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಮಾಡಲೇಬೇಕೆ?
ಅದು ಸಂಬಂಧಿತ ವೈದ್ಯರನ್ನು ಅವಲಂಬಿಸಿರುತ್ತದೆ. ಯಾರೂ ಅನಗತ್ಯವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲು ಹೇಳುವುದಿಲ್ಲ. ಪ್ರೊಟೀನ್, ಬೆಳವಣಿಗೆ ಮತ್ತು ಅವಲೋಕನ ಎಲ್ಲವನ್ನೂ ಅನುಸರಿಸಿ 3ರಿಂದ 4 ಬಾರಿ ಸೂಚಿಸಬಹುದು. ಮೊದಲಿಗೆ ಗರ್ಭವನ್ನು ದೃಢಪಡಿಸಲು, ನಂತರ NT ಸ್ಕ್ಯಾನ್ (Nuchal Translucency) ಮಾಡುತ್ತಾರೆ. ನಂತರ ಅನಾಮಲಿ ಸ್ಕ್ಯಾನ್ (anomaly scan) ಮತ್ತು ಕೊನೆಗೆ ಬೆಳವಣಿಗೆ ಕುರಿತು ತಿಳಿದುಕೊಳ್ಳಲು ಸ್ಕ್ಯಾನ್ ಮಾಡುತ್ತಾರೆ. ಬಳಿಕ ಪ್ರಸವಕ್ಕೆ ಮೊದಲು ಪರಿಸ್ಥಿತಿಯನ್ನು ವಿಶ್ಲೇಷಿಸಲು ಸ್ಕ್ಯಾನ್ ಮಾಡಬಹುದು. ಇವು ನಮಗೆ ಅಗತ್ಯವಿರುವ ಮೂಲಭೂತ ಸ್ಕ್ಯಾನಿಂಗ್ಗಳು. ಉಳಿದ ಸ್ಕ್ಯಾನ್ ಗಳನ್ನು ವೈದ್ಯರು ತಮ್ಮ ಸಂಶಯಕ್ಕೆ ಅನುಗುಣವಾಗಿ ಸೂಚಿಸಬಹುದು. ಆದರೆ ಈ ಸ್ಕ್ಯಾನ್ ಗಳನ್ನು ಸೂಚಿಸುವಾಗ ಆತಂಕಪಡುವ ಅಗತ್ಯವಿಲ್ಲ.
ನಾನು ಆರೋಗ್ಯವಾಗಿದ್ದರೆ ಪರೀಕ್ಷೆ ನಡೆಸಿಕೊಳ್ಳುವ ಅಗತ್ಯವಿಲ್ಲ ಎನ್ನುವವರ ಬಗ್ಗೆ?
ಸ್ತ್ರೀರೋಗ ತಜ್ಞರು ಇದಕ್ಕೆ ಉತ್ತಮ ಉತ್ತರ ನೀಡಬಲ್ಲರು. ಎಷ್ಟೇ ಆರೋಗ್ಯವಾಗಿದ್ದರೂ ಕಾಲಕಾಲಕ್ಕೆ ವೈದ್ಯರನ್ನು ಕಾಣಬೇಕಾಗುತ್ತದೆ. ವೈದ್ಯರು ಗರ್ಭಿಣಿಯರ ಮೇಲೆ ನಿಗಾ ಇಡುವುದು ಅಗತ್ಯವಾಗಿರುತ್ತದೆ. ಅವರ ತೂಕ, ರಕ್ತದೊತ್ತಡ ಮೊದಲಾದವುಗಳನ್ನು ನಿಯಮಿತವಾಗಿ ಪರಿಶೀಲಿಸಲೇಬೇಕು. ಕನಿಷ್ಠ ಮಟ್ಟದ ಪ್ರಸವ-ಪೂರ್ವ ತಪಾಸಣೆ (antenatal check-up) ಮಾಡಲೇಬೇಕಾಗುತ್ತದೆ.
ಗರ್ಭ ಧರಿಸುವುದು ಆರೋಗ್ಯಕರ. ಅದೇನೂ ರೋಗವಲ್ಲ. ಹಾಗಿದ್ದರೂ ಅವರೂ ಮತ್ತೊಂದು ಜೀವವನ್ನು ಹೊತ್ತುಕೊಂಡಿರುತ್ತಾರೆ. ಹೀಗಾಗಿ ಆರೋಗ್ಯವಂತರಾಗಿದ್ದರೂ ವೈದ್ಯರನ್ನು ಕಾಣಲೇಬೇಕು. ಮೇಲ್ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಎಷ್ಟು ಬೆಳವಣಿಗೆಯಾಗಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಈ ವಿಚಾರದಲ್ಲಿ ಸಂಬಂಧಿತ ವೈದ್ಯರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ.
ನಮ್ಮ ಹಿರಿಯರ ಕಾಲದಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಮನೆಯಲ್ಲೇ ಹೆರಿಗೆಯಾಗುತ್ತಿತ್ತು. ಆದರೆ ಈಗ ವಿಜ್ಞಾನ ಇಷ್ಟೊಂದು ಅತ್ಯಾಧುನಿಕವಾಗಿ ಬೆಳೆದಿರುವಾಗ ಅದರ ಲಾಭವನ್ನು ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅನಾರೋಗ್ಯ ಹೊಂದಿದ್ದರೆ ಮಾತ್ರ ಹೋಗಬೇಕು ಎಂದಲ್ಲ. ಗರ್ಭಿಣಿಯಾಗಿದ್ದರೆ ಕಾಲಕಾಲಕ್ಕೆ ವೈದ್ಯರನ್ನು ಕಾಣಲೇಬೇಕು.
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಲ್ಲಿ ಏನನ್ನು ಪರೀಕ್ಷಿಸಲಾಗುತ್ತದೆ?
ಮೊದಲ ಬಾರಿಗೆ ಗರ್ಭಿಣಿಯಾಗಿರುವುದನ್ನು ದೃಢೀಕರಿಸಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಗರ್ಭ ಸಾಮಾನ್ಯ ಸ್ಥಿತಿಯಲ್ಲಿದೆಯೇ ಅಥವಾ ಅಸಹಜವಾಗಿದೆಯೇ ಎಂದು ತಿಳಿದುಕೊಳ್ಳಲು ನಂತರ ಮತ್ತೊಂದು ಸ್ಕ್ಯಾನಿಂಗ್ ಇರುತ್ತದೆ. ಗರ್ಭಾಶಯದ ಒಳಗಿದ್ದರೆ ಸಹಜವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಗರ್ಭಾಶಯದ ಆರೋಗ್ಯ ಪರೀಕ್ಷೆಗೆ ಈ ಎರಡನೇ ಸ್ಕ್ಯಾನಿಂಗ್ ನಡೆಯುತ್ತದೆ. ಇವುಗಳು ಪ್ರಾಥಮಿಕ ಸ್ಕ್ಯಾನಿಂಗ್ ಆಗಿರುತ್ತವೆ.
ಭವಿಷ್ಯದ ಸ್ಕ್ಯಾನಿಂಗ್ ಗಳು ಗರ್ಭದ ಆರೋಗ್ಯವನ್ನು ತಿಳಿದುಕೊಳ್ಳಲು ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ಅನಾಮಲಿ ಸ್ಕ್ಯಾನ್ ಗಳು ನಡೆಯುತ್ತವೆ. 20ರಿಂದ 25 ವಾರಗಳಲ್ಲಿ ಇವುಗಳನ್ನು ಮಾಡಬಹುದು. ಈ ಹಂತದಲ್ಲಿ ಕೆಲವು ಅಸಹಜತೆಗಳನ್ನು ಕಾಣಬಹುದು. ನಂತರದ ಸ್ಕ್ಯಾನಿಂಗ್ಗಳನ್ನು ಬೆಳವಣಿಗೆಗಾಗಿ ಮಾಡಲಾಗುತ್ತದೆ. ಮಗುವಿನ ದೈಹಿಕ ಪರೀಕ್ಷೆ, ಎಷ್ಟು ಫ್ಲೂಯಿಡ್ ಇದೆ, ಹೃದಯದ ತಪಾಸಣೆ (cardiac evaluation) ಮತ್ತು ಮಗುವಿನ ತೂಕ ಪರೀಕ್ಷೆಗೂ ಮಾಡಬಹುದು. 7ನೇ ಅಥವಾ 8ನೇ ತಿಂಗಳುಗಳಲ್ಲಿ ಇವುಗಳನ್ನು ಸೂಚಿಸಬಹುದು. ಈ ಎಲ್ಲಾ ಹಂತಗಳಲ್ಲೂ ಸೂಚಿಸಿದ ವೈದ್ಯರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ.
ಮಹಿಳೆಗೆ ತಾವು ಗರ್ಭಿಣಿ ಎಂಬ ವಿಷಯ ತಿಳಿಯದೆ ಎಕ್ಸ್-ರೇಗೆ ಒಡ್ಡಿಕೊಂಡರೆ ಏನಾಗುತ್ತದೆ?
ಎಕ್ಸ್-ರೇ ಅಥವಾ ಇತರ ರೀತಿಯ ಸ್ಕ್ಯಾನ್ ಗೆ ಮಹಿಳೆಯರನ್ನು ಒಳಪಡಿಸುವಾಗ ತಂತ್ರಜ್ಞರ ಕಡೆಯಿಂದ LMP (Last Menstrual Period) ಕೇಳುವುದು ಕಡ್ಡಾಯವಾಗಿದೆ. ಅಂತಹ ಸ್ಕ್ಯಾನಿಂಗ್ ಗೆ ಮೊದಲು ಗರ್ಭ ಧರಿಸಿರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಮಹಿಳೆ ತಾವು ಗರ್ಭ ಧರಿಸಿಲ್ಲ ಎಂದು ಹೇಳಿದ್ದರೂ, 10 ದಿನಗಳಿಗೆ ಮುಂಚಿತವಾಗಿ ಕೊನೆಯ ಋತುಸ್ರಾವದ ದಿನ ಇತ್ತೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. 10 ದಿನಗಳಿಗೆ ಮೊದಲು ಕೊನೆಯ ಋತುಸ್ರಾವದ ದಿನ ಇದ್ದಲ್ಲಿ ಮೂತ್ರದ ಮೂಲಕ ಗರ್ಭಧಾರಣೆಯ ಪರೀಕ್ಷೆ ಮಾಡಲು ತಿಳಿಸಲಾಗುತ್ತದೆ. ಪ್ರತಿಯೊಬ್ಬ ತಂತ್ರಜ್ಞರಿಗೂ ಅದರ ಅರಿವು ಇರುತ್ತದೆ. ಅದನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.
ಗರ್ಭಿಣಿಯರು ಎಕ್ಸ್-ರೇ ಮಾಡಿಸಿಕೊಳ್ಳುವಾಗ ಯಾವುದರ ಬಗ್ಗೆ ಗಮನಹರಿಸಬೇಕಾಗುತ್ತದೆ?
ಗರ್ಭಧರಿಸಿರುವ ಬಗ್ಗೆ ಗೊತ್ತಿಲ್ಲದೇ ಇರುವಾಗ ಮತ್ತು ಮಿಶ್ರರೂಪದ ಋತುಚಕ್ರವಿದ್ದಲ್ಲಿ, ಎಕ್ಸ್-ರೇ ಅಗತ್ಯವಿದ್ದರೆ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಮಗುವಿನ ಆರೋಗ್ಯದ ಕಾರಣದಿಂದ ಮಹಿಳೆಯ ಆರೋಗ್ಯವೂ ಮುಖ್ಯವಾಗುತ್ತದೆ. ಹೀಗಾಗಿ ಗರ್ಭಿಣಿಯ ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದರೆ ಎಕ್ಸ್-ರೇ ತೆಗೆದುಕೊಳ್ಳಲೇಬೇಕಾಗುತ್ತದೆ. ಎಕ್ಸ್-ರೇ ವಿಭಿನ್ನ ಕಾರಣಗಳಿಗೆ ತೆಗೆಯಲಾಗುತ್ತದೆ. ಹೊಟ್ಟೆಯ ಎಕ್ಸ್-ರೇ ಮತ್ತು ಬೆನ್ನುಮೂಳೆಯ ಎಕ್ಸ್-ರೇ ಭಿನ್ನವಾಗಿರುತ್ತದೆ. ತಂತ್ರಜ್ಞರು ಮಗುವನ್ನು ರಕ್ಷಿಸುವ ಮೂಲಕ ಎಕ್ಸ್-ರೇ ಹೇಗೆ ತೆಗೆಯುವುದು ಎನ್ನುವುದರ ಬಗ್ಗೆ ಗಮನಹರಿಸಿರುತ್ತಾರೆ. ತಾಂತ್ರಿಕವಾಗಿ ಈ ಬಗ್ಗೆ ಗಮನಹರಿಸಲಾಗಿರುತ್ತದೆ.
ಕೆಲವೊಮ್ಮೆ ಜನರು ವೈದ್ಯರು ಸ್ಕ್ಯಾನಿಂಗ್ ಹೇಳಿದಾಗ ಹಣಕ್ಕಾಗಿ ಹೇಳುತ್ತಾರೆ ಎಂದು ತಪ್ಪು ಭಾವಿಸುವುದು ಇದೆ. ಆದರೆ ವೈದ್ಯರು ಸೂಕ್ತ ಕಾರಣಗಳಿಲ್ಲದೆ ಅಂತಹ ಪರೀಕ್ಷೆಗಳನ್ನು ಸೂಚಿಸುವುದಿಲ್ಲ.
ತಾಯಿಗೆ ಹೊಟ್ಟೆನೋವೇನಾದರೂ ಇದ್ದರೆ ಮತ್ತು ಅಲ್ಟ್ರಾಸೌಂಡ್ ಗಿಂತ ಮೀರಿ ಏನಾದರೂ ರೇಡಿಯೇಶನ್ ಪರೀಕ್ಷೆ ಬೇಕಾಗಿದ್ದಲ್ಲಿ, ಮಗುವಿಗೆ ಎಷ್ಟು ತಿಂಗಳಾಗಿದೆ ಎಂದು ಗಮನಿಸಿ, ಸ್ಥಿತಿಯನ್ನು ನೋಡಿ ಹೇಗೆ ಮಗುವನ್ನು ರಕ್ಷಿಸಿ ತಪಾಸಣೆ ಮಾಡಬಹುದು ಎನ್ನುವುದನ್ನು ಗಮನಿಸುತ್ತಾರೆ.
MRI/ಸಿಟಿ ಸ್ಕ್ಯಾನ್ ಮತ್ತು ಎಕ್ಸ್-ರೇಗಳು ಯಾವಾಗಲೂ ಸುರಕ್ಷಿತವಲ್ಲ ಎನ್ನುವುದು ನಿಜವೆ?
ಅಗತ್ಯವಿರುವಾಗ ಎಕ್ಸ್-ರೇ ಮಾಡಿಸಿಕೊಳ್ಳಬೇಕಾಗುತ್ತದೆ. ಯಾವುದೂ ಸಂಪೂರ್ಣ ಸುರಕ್ಷಿತವಲ್ಲ. ಆದರೆ ಅದೇ ಸಮಯದಲ್ಲಿ ಭಯ ಬೀಳಬಾರದು. ಪ್ರತಿಯೊಂದನ್ನೂ ಅಗತ್ಯವನ್ನು ಗಮನಿಸಿ ಮಾಡಲಾಗುತ್ತದೆ. ಆದರೆ ಸ್ಕ್ಯಾನಿಂಗ್ ಅಥವಾ ಎಕ್ಸ್-ರೇ ಮಾಡುವ ನಿರ್ಧಾರವನ್ನು ಸಂಬಂಧಿತ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕಾಗುತ್ತದೆ.
ನ್ಯೂರಾಲಜಿಸ್ಟ್ ಮೆದುಳಿನ ಎಕ್ಸ್-ರೇ ಅಗತ್ಯವೆಂದು ಹೇಳಿದರೆ, ವೈದ್ಯರು ಮತ್ತು ರೇಡಿಯಾಲಜಿಸ್ಟ್ ಅದನ್ನು ನಿರ್ಧರಿಸಿ ನಡೆಸುತ್ತಾರೆ. ಎಷ್ಟು ಕಡಿಮೆ ರೇಡಿಯೇಶನ್ ಸಾಧ್ಯವಿದೆಯೋ ಅಷ್ಟು ಕಡಿಮೆ ರೇಡಿಯೇಶನ್ ಹಾಯಿಸಿ ತಪಾಸಣೆ ನಡೆಸಬೇಕು ಎನ್ನುವುದು ತಂತ್ರಜ್ಞರ ಗುರಿಯಾಗಿರುತ್ತದೆ. ವೈಜ್ಞಾನಿಕವಾಗಿ ತಾಯಿ ಮತ್ತು ಮಗು ಇಬ್ಬರಿಗೂ ಸುರಕ್ಷಿತವಾಗಿರುವಂತೆ ಕೆಲಸ ಮಾಡುವುದು ಮುಖ್ಯವಾಗುತ್ತದೆ. ಯಾವಾಗಲೂ ಸುರಕ್ಷತೆ ಮುಖ್ಯವಾಗಿರುತ್ತದೆ.
ಹೀಗಾಗಿ ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ. ವೈದ್ಯರು ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ನಿರ್ಧರಿಸಬಲ್ಲರು ಎಂಬ ನಂಬಿಕೆ ಇಟ್ಟರೆ ಸಾಕು.






