ಮೆದುಳು ನಿಷ್ಕ್ರಿಯವಾಗುವುದು ಎಂದರೇನು? ಅದನ್ನು ಪ್ರಮಾಣೀಕರಿಸುವ ವಿಧಾನವನ್ನು ಸುಪ್ರೀಂ ಕೋರ್ಟ್ ಏಕೆ ಪರಿಶೀಲಿಸುತ್ತಿದೆ?

ಸಾಂದರ್ಭಿಕ ಚಿತ್ರ | Photo Credit : freepik
ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲು ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (EEG) ಮತ್ತು ಆಂಜಿಯೋಗ್ರಾಮ್ ನಂತಹ ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆಯೇ ಎಂಬ ಬಗ್ಗೆ ಏಮ್ಸ್ ವೈದ್ಯರಿಂದ ತಜ್ಞರ ಅಭಿಪ್ರಾಯವನ್ನು ಪಡೆಯುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಮೆದುಳು ನಿಷ್ಕ್ರಿಯ ಪ್ರಮಾಣೀಕರಣದಲ್ಲಿ ನಡೆದಿರುವ ದುಷ್ಕೃತ್ಯಗಳ ಕುರಿತು ಕೇರಳ ಮೂಲದ ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಎಸ್. ಗಣಪತಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ದ್ವಿಸದಸ್ಯ ಪೀಠವು, ಈ ಪರೀಕ್ಷೆಗಳ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಯ ಕುರಿತು ತನ್ನ ಅಭಿಪ್ರಾಯಗಳನ್ನು ನೀಡಲು ಸಮಿತಿಯನ್ನು ರಚಿಸುವಂತೆ ಏಮ್ಸ್ ನ ನರವಿಜ್ಞಾನ ವಿಭಾಗದ ಮುಖ್ಯಸ್ಥರನ್ನು ಕೇಳುವುದಾಗಿ ಹೇಳಿದೆ.
ಮೆದುಳು ನಿಷ್ಕ್ರಿಯವಾಗಿರದ ರೋಗಿಗಳನ್ನು ಅಂಗಾಂಗ ದಾನಕ್ಕೆ ಅನುಕೂಲವಾಗುವಂತೆ ಘೋಷಿಸಲಾಗುತ್ತಿದೆ ಎಂದು ಗಣಪತಿ ಆರೋಪಿಸಿದ್ದಾರೆ. ಮೆದುಳು ನಿಷ್ಕ್ರಿಯವಾಗಿರುವುದನ್ನು ಪ್ರಮಾಣೀಕರಿಸಲು ಪ್ರಸ್ತುತ ನಡೆಸಲಾಗುವ ಉಸಿರುಕಟ್ಟುವಿಕೆ ಪರೀಕ್ಷೆಯನ್ನು ವೀಡಿಯೋಗ್ರಾಫ್ ಮಾಡಬೇಕೆಂಬ ಕಾನೂನು ಆದೇಶವನ್ನು ಹೆಚ್ಚಾಗಿ ಪಾಲಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮೆದುಳು ನಿಷ್ಕ್ರಿಯವಾಗುವುದು ಎಂದರೇನು?
ಮೆದುಳು ನಿಷ್ಕ್ರಿಯವಾಗುವುದು ಎಂದರೆ, ಮೆದುಳಿನಿಂದ ನಿಯಂತ್ರಿಸಲ್ಪಡುವ ಉಸಿರಾಟದಂತಹ ಸ್ವಯಂಚಾಲಿತ ಕಾರ್ಯಗಳು ಸೇರಿದಂತೆ ಮೆದುಳಿನ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳುವ, ಬದಲಾಯಿಸಲಾಗದ ಸ್ಥಿತಿಯಾಗಿದೆ. ರೋಗಿಯು ವೆಂಟಿಲೇಟರ್ ಗಳಂತಹ ಜೀವಬೆಂಬಲ ವ್ಯವಸ್ಥೆಗಳ ಸಹಾಯದಿಂದ ಬದುಕುಳಿಯುತ್ತಾನೆ ಮತ್ತು ಉಸಿರಾಡುವುದನ್ನು ಮುಂದುವರಿಸುತ್ತಾನೆ.
ಹೆಚ್ಚಿನ ಸಂದರ್ಭಗಳಲ್ಲಿ ರಸ್ತೆ ಅಪಘಾತಗಳು ಅಥವಾ ಬಿದ್ದ ರಭಸದಿಂದ ಉಂಟಾಗುವ ತೀವ್ರ ಗಾಯಗಳಿಂದಾಗಿ ಮೆದುಳಿಗೆ ಆಮ್ಲಜನಕದ ಪೂರೈಕೆಯಾಗದ ಸ್ಥಿತಿಯಲ್ಲಿ ಮೆದುಳು ನಿಷ್ಕ್ರಿಯವಾಗುತ್ತದೆ. ಇಂತಹವರು ಕೋಮಾ ಸ್ಥಿತಿಯಲ್ಲಿದ್ದು, ಅವರು ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇರುವುದಿಲ್ಲ.
ಜೀವಬೆಂಬಲ ವ್ಯವಸ್ಥೆಗಳಲ್ಲಿರುವಾಗ, ಅವರು ವೈದ್ಯಕೀಯವಾಗಿ ಸತ್ತವರಾಗಿದ್ದರೂ, ಯಂತ್ರಗಳ ಸಹಾಯದಿಂದ ಅವರ ರಕ್ತಸಂಚಾರ ಮುಂದುವರಿಯುತ್ತದೆ. ಇಂಥವರು ಅಂಗಾಂಗ ದಾನ ಮಾಡಬಹುದು. ಜೀವಂತ ದಾನಿಗಳು ದಾನ ಮಾಡಲು ಸಾಧ್ಯವಾಗದ ಹೃದಯ ಮತ್ತು ಶ್ವಾಸಕೋಶದಂತಹ ಅಂಗಗಳನ್ನು ಕೂಡಾ ಇವರು ದಾನ ಮಾಡಬಹುದು.
“ರಕ್ತಪರಿಚಲನೆಯ ಸಾವಿನ ನಂತರ (ಹೃದಯ ಮತ್ತು ಉಸಿರಾಟ ನಿಂತಾಗ) ರೋಗಿಗಳಿಂದ ಅಂಗಾಂಗ ಮತ್ತು ಅಂಗಾಂಶ ದಾನ ಸಾಧ್ಯವಾಗುತ್ತಿದ್ದರೂ, ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲ್ಪಟ್ಟವರಿಂದ ದಾನ ಮಾಡುವ ಪ್ರಮಾಣಕ್ಕಿಂತ ಇದು ಕಡಿಮೆಯಾಗಿದೆ.”
ರೋಗಿಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಏಕೆ ಘೋಷಿಸಬೇಕು?
ಅಂಗಾಂಗ ದಾನಕ್ಕಾಗಿ ಮೆದುಳು ನಿಷ್ಕ್ರಿಯ ಘೋಷಣೆ ಮತ್ತು ಪ್ರಮಾಣೀಕರಣ ಅತ್ಯಗತ್ಯ. ಮೂತ್ರಪಿಂಡ, ಯಕೃತ್ತು, ಹೃದಯ ಮತ್ತು ಕಣ್ಣುಗಳಂತಹ ಅಂಗಗಳು ಹಾಗೂ ಅಂಗಾಂಶಗಳನ್ನು ಸ್ವೀಕರಿಸುವವರಿಗೆ ದಾನ ಮಾಡಲು ಇದು ನೆರವಾಗುತ್ತದೆ.
ಭಾರತವು ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದರೂ, ಹೆಚ್ಚಿನ ಕಸಿಗಳು ಜೀವಂತ ಸಂಬಂಧಿಕರಿಂದ ದಾನವಾದ ಅಂಗಗಳನ್ನು ಬಳಸಿ ನಡೆಸಲ್ಪಡುತ್ತವೆ. ಈ ವಿಧಾನವು ದಿನದಿಂದ ದಿನಕ್ಕೆ ಸುರಕ್ಷಿತವಾಗುತ್ತಿದ್ದರೂ, ಆರೋಗ್ಯವಂತ ದಾನಿಗೆ ಕೆಲವು ಅಪಾಯಗಳನ್ನು ಒಳಗೊಂಡಿದೆ. ಮೃತ ದಾನಿಗಳಿಂದ ಅಂಗಗಳನ್ನು ಬಳಸುವುದರಿಂದ ಈ ಅಪಾಯವನ್ನು ತಪ್ಪಿಸಬಹುದು.
ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಆಘಾತಕಾರಿ ಮೆದುಳಿನ ಗಾಯಗಳಿಂದ ಮತ್ತು ಇನ್ನೂ 50,000 ಜನರು ಪಾರ್ಶ್ವವಾಯುವಿನಿಂದ ಸಾವನ್ನಪ್ಪುತ್ತಾರೆ. ಮೆದುಳು ನಿಷ್ಕ್ರಿಯ ದಾನಿಗಳಾಗಿ ಅರ್ಹರಾಗಬಹುದಾದ ಈ ಎರಡೂ ವರ್ಗದ ರೋಗಿಗಳಲ್ಲಿ ಕೇವಲ 1,100 ಜನರು ಮಾತ್ರ ತಮ್ಮ ಅಂಗಗಳನ್ನು ದಾನ ಮಾಡುತ್ತಾರೆ.
ಭಾರತದಲ್ಲಿ ಮೃತ ದಾನದ ಪ್ರಮಾಣವು ಪ್ರತಿ ಮಿಲಿಯನ್ ಜನಸಂಖ್ಯೆಗೆ 0.77 ರಷ್ಟಿದೆ, ಇದು ಬಹಳ ಕಡಿಮೆ. ಇದು ಥೈಲ್ಯಾಂಡ್ (6.21), ಚೀನಾ (4.5), ಶ್ರೀಲಂಕಾ (3.38), ಮತ್ತು ಜಪಾನ್ (1.18) ದೇಶಗಳಿಗಿಂತ ಕಡಿಮೆಯಾಗಿದೆ. ಸ್ಪೇನ್ನಲ್ಲಿ ಈ ಪ್ರಮಾಣ 48 ಆಗಿದ್ದು, ಇದು ಅತ್ಯಧಿಕವಾಗಿದೆ.
ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲು ಅನುಸರಿಸುವ ಶಿಷ್ಟಾಚಾರವೇನು?
ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಮಾರ್ಗಸೂಚಿಗಳ ಪ್ರಕಾರ, ಆಸ್ಪತ್ರೆಯ ಉಸ್ತುವಾರಿ, ನರವಿಜ್ಞಾನಿ, ಶಸ್ತ್ರಚಿಕಿತ್ಸಕ ಹಾಗೂ ಚಿಕಿತ್ಸೆ ನೀಡುವ ವೈದ್ಯರು ಸೇರಿ ನಾಲ್ವರು ಸದಸ್ಯರ ಮಂಡಳಿ ರೋಗಿಯ ಮೆದುಳಿನ ಕಾರ್ಯವು 12 ಗಂಟೆಗಳ ಮಧ್ಯಂತರದಲ್ಲಿ ಕನಿಷ್ಠ ಎರಡು ಬಾರಿ ಬದಲಾಯಿಸಲಾಗದಂತೆ ನಿಂತಿದೆ ಎಂದು ದೃಢೀಕರಿಸಬೇಕು.
ಈ ಮಂಡಳಿ, ರೋಗಿಯ ಸ್ಥಿತಿಗೆ ಕಾರಣವಾದ ಅನಾರೋಗ್ಯ ಅಥವಾ ಅಪಘಾತ, ಮದ್ಯಪಾನ, ಮಾದಕ ದ್ರವ್ಯ ಬಳಕೆ, ಹೈಪೋಥರ್ಮಿಯಾ ಮತ್ತು ಚಯಾಪಚಯ ಅಸಮತೋಲನಗಳಂತಹ ಕಾರಣಗಳನ್ನು ಪರಿಶೀಲಿಸಿ ದಾಖಲಿಸಬೇಕು.
ಇದೇ ವೇಳೆ,
ಸ್ವಯಂಪ್ರೇರಿತ ಉಸಿರಾಟ ನಿಂತಿದೆಯೇ,
ಕಣ್ಣಿನ ಪಾಪೆ ಬೆಳಕಿಗೆ ಪ್ರತಿಕ್ರಿಯಿಸುತ್ತದೆಯೇ,
ತಲೆ ತಿರುಗಿಸಿದಾಗ ಕಣ್ಣುಗಳ ಚಲನೆಯನ್ನು,
ನೋವಿಗೆ ಪ್ರತಿಕ್ರಿಯೆಯನ್ನು,
ಗ್ಯಾಗ್ ರಿಫ್ಲೆಕ್ಸ್ ಇರುವುದನ್ನು ಪರಿಶೀಲಿಸಲಾಗುತ್ತದೆ.
“ಮೆದುಳು ನಿಷ್ಕ್ರಿಯ ಘೋಷಣೆಗೆ ಕಟ್ಟುನಿಟ್ಟಾದ ಪ್ರೋಟೋಕಾಲ್ ಅನುಸರಿಸಲಾಗುತ್ತದೆ. ಕೆಲವೊಮ್ಮೆ ಎರಡು ಬಾರಿ ಬದಲಿಗೆ ಮೂರು ಬಾರಿ ಪರೀಕ್ಷೆಗಳನ್ನು ಮಾಡುತ್ತೇವೆ. ಪ್ರಸ್ತುತ ಮಾರ್ಗಸೂಚಿಗಳಲ್ಲಿ EEG ಅಥವಾ ಆಂಜಿಯೋಗ್ರಾಮ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ,” ಎಂದು ಹೊಸದಿಲ್ಲಿ AIIMS ನ ನರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಂಜರಿ ತ್ರಿಪಾಠಿ ತಿಳಿಸಿದ್ದಾರೆ.
ಇಇಜಿ ಮತ್ತು ಆಂಜಿಯೋಗ್ರಾಮ್ ಎಂದರೇನು?
EEG ಪರೀಕ್ಷೆಯಲ್ಲಿ ತಲೆಗೆ ಜೋಡಿಸಲಾದ ವಿದ್ಯುದ್ವಾರಗಳ ಮೂಲಕ ಮೆದುಳಿನ ವಿದ್ಯುತ್ ಚಟುವಟಿಕೆಯನ್ನು ಪರಿಶೀಲಿಸಲಾಗುತ್ತದೆ. ಮೆದುಳು ನಿಷ್ಕ್ರಿಯಗೊಂಡ ರೋಗಿಯಲ್ಲಿ ಯಾವುದೇ ವಿದ್ಯುತ್ ಚಟುವಟಿಕೆ ಕಾಣುವುದಿಲ್ಲ.
ಆಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಕಾಂಟ್ರಾಸ್ಟ್ ಡೈ ಮತ್ತು ಎಕ್ಸ್-ರೇ ಬಳಸಿ ಮೆದುಳಿಗೆ ರಕ್ತ ಹರಿವು ಪರಿಶೀಲಿಸಲಾಗುತ್ತದೆ. ಮೆದುಳು ನಿಷ್ಕ್ರಿಯಗೊಂಡಿದ್ದರೆ ರಕ್ತಪ್ರವಾಹ ನಿಂತಿರುವುದು ಕಂಡುಬರುತ್ತದೆ.
ಈ ಪರೀಕ್ಷೆಗಳು ಮೆದುಳು ನಿಷ್ಕ್ರಿಯತೆಯನ್ನು ದೃಢಪಡಿಸಬಹುದಾದರೂ, ಅವುಗಳನ್ನು ಎಲ್ಲ ಪ್ರಕರಣಗಳಲ್ಲಿ ಬಳಸುವುದು ಸವಾಲಾಗಿದೆ. ಸಣ್ಣ ಆಸ್ಪತ್ರೆಗಳಲ್ಲಿ ಇವು ಲಭ್ಯವಿಲ್ಲ. ಇದರಿಂದ ಮೃತ ದಾನದ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಮೆದುಳು ನಿಷ್ಕ್ರಿಯ ಪ್ರಮಾಣೀಕರಣದಲ್ಲಿನ ಸವಾಲುಗಳೇನು?
ವೈದ್ಯರಲ್ಲಿ ಜ್ಞಾನದ ಕೊರತೆ ಪ್ರಮುಖ ಸವಾಲಾಗಿದೆ. ಇದರಿಂದ ಹಲವಾರು ರೋಗಿಗಳು ಅಧಿಕೃತವಾಗಿ ಘೋಷಿಸಲ್ಪಡುವುದಿಲ್ಲ ಹಾಗೂ ಅಂಗಾಂಗ ದಾನವೂ ನಡೆಯುವುದಿಲ್ಲ.
ನ್ಯೂರಾಲಜಿ ಇಂಡಿಯಾ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನರಶಸ್ತ್ರಚಿಕಿತ್ಸಕರು, ನರವಿಜ್ಞಾನಿಗಳು ಮತ್ತು ನಿರ್ಣಾಯಕ ಆರೈಕೆ ತಜ್ಞರು ಸೇರಿದಂತೆ ಅರ್ಧಕ್ಕಿಂತ ಹೆಚ್ಚು ವೈದ್ಯರು ತಮ್ಮ ಪದವಿ ಅವಧಿಯಲ್ಲಿ ಮೆದುಳು ನಿಷ್ಕ್ರಿಯ ಪ್ರಮಾಣೀಕರಣದ ತರಬೇತಿ ಪಡೆದಿಲ್ಲ.
ರೆಸಿಡೆಂಟ್ ವೈದ್ಯರ ತರಬೇತಿಯೂ ಅಸಮರ್ಪಕವಾಗಿದೆ. ಸಮೀಕ್ಷೆಯಲ್ಲಿದ್ದ ವೈದ್ಯರಲ್ಲಿ ಕೇವಲ 10% ಮಂದಿ ಮಾತ್ರ ತಮ್ಮ ರೆಸಿಡೆಂಟ್ಗಳಿಗೆ ನಿಯಮಿತ ತರಬೇತಿ ನೀಡುತ್ತಿದ್ದಾರೆ. ಮೂರನೇ ಒಂದು ಭಾಗಕ್ಕಿಂತ ಹೆಚ್ಚು ವೈದ್ಯರು ತಮ್ಮ ಸಂಸ್ಥೆಗಳಲ್ಲಿ ಸ್ಥಿರ ಪಠ್ಯಕ್ರಮವಿಲ್ಲ ಎಂದು ಹೇಳಿದ್ದಾರೆ.






