ಭಾರತೀಯ ಪ್ರಜೆ ಎಂದು ಸುಪ್ರೀಂ ತೀರ್ಪು | ಖುಷಿ ಹಂಚಿಕೊಳ್ಳಲು ರಹೀಮ್ ಅಲಿಯೇ ಇಲ್ಲ
ಪರದೇಶಿಯ ಕಳಂಕ ಹಚ್ಚಿದವರು ಈಗೆಲ್ಲಿದ್ದಾರೆ? ಅವರ ಸಮಾಧಿಯಿಂದ ಎತ್ತಿಕೊಂಡು ಬರುತ್ತಾರಾ : ಪತ್ನಿ ಹಾಜಿರಾ ಪ್ರಶ್ನೆ

PC : indianexpress.com
ಸುದೀರ್ಘ 12 ವರ್ಷಗಳ ಕಾನೂನು ಹೋರಾಟದ ನಂತರ ಕಳೆದ ವಾರ, ರಹೀಮ್ ಅಲಿ ಭಾರತೀಯ ಪ್ರಜೆಯಾಗಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿತು.
ಈ ತೀರ್ಪು ಪ್ರಕಟವಾದಾಗ ರಹೀಮ್ ಅಲಿ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ? ಅವರು ಖುಷಿಯಿಂದ ಕಣ್ಣೀರಿಟ್ಟರೆ? ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರೆ? ಇಲ್ಲ ಅವರು ಹೀಗೇನೂ ಮಾಡಲಿಲ್ಲ. ಯಾಕೆ ಗೊತ್ತಾ? 12 ವರ್ಷಗಳ ದೀರ್ಘ ಕಾನೂನು ಹೋರಾಟದ ನಂತರ ತಾನು ಭಾರತೀಯ ಪ್ರಜೆ ಎಂಬ ತೀರ್ಪು ಬಂದಾಗ ಅದನ್ನು ಕೇಳಲು ರಹೀಮ್ ಅಲಿ ಜೀವಂತವೇ ಇರಲಿಲ್ಲ.
ತೀರ್ಪು ಬರುವ ಎರಡೂವರೆ ವರ್ಷ ಮುಂಚೆಯೇ ರಹೀಮ್ ಅಲಿ ತೀರಿಕೊಂಡಿದ್ದರು. ಅಸ್ಸಾಂನ ನಲ್ಬರಿ ಜಿಲ್ಲೆಯ ಕಾಶಿಂಪುರ್ ಗ್ರಾಮದ ತನ್ನ ಮನೆಯಿಂದ ಹೊರ ಹಾಕಲಾಗುವುದು ಎಂಬ ನಿರಂತರ ಭಯದಿಂದ ಬದುಕಿದ್ದ ಅವರು ಎರಡೂವರೆ ವರ್ಷಗಳ ಹಿಂದೆ ನಿಧನರಾದರು. ಸಂವಿಧಾನದ ಆತ್ಮದಲ್ಲಿ ಪ್ರತಿಪಾದಿಸಲಾದ ಮೂಲಭೂತ ನಾಗರಿಕ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಭಾರತ ಹಾಗು ಅಸ್ಸಾಂ ಸರಕಾರದ ವೈಫಲ್ಯದ ಸಂಕೇತವಾಗಿದ್ದಾರೆ ಈ ರಹೀಮ್ ಅಲಿ.
ನ್ಯಾಯಾಲಯದ ತೀರ್ಪಿನ ಬಗ್ಗೆ ತಿಳಿದ ಅಲಿ ಅವರ ಪತ್ನಿ ಹಾಜಿರಾ ಬೀಬಿ, “ಈಗ ಏನು ಪ್ರಯೋಜನ? ಅವರನ್ನು ಇನ್ನು ಇಲ್ಲಿಂದ ಹೊರಹಾಕಲಾಗುವುದು ಎಂಬ ಭಯವು ಅವರೊಂದಿಗೆ ಸತ್ತು ಹೋಯಿತು. ಇವರು ಇನ್ನೂ ಅವರನ್ನು ವಿದೇಶಿ ಎಂದು ಕರೆಯಲು ಬಯಸಿದರೆ, ಏನು ಮಾಡುತ್ತಾರೆ? ಅವರ ಸಮಾಧಿಯಿಂದ ಅವರನ್ನು ಎತ್ತಿಕೊಂಡು ಬರುತ್ತಾರಾ? ” ಎಂದು ರಹೀಮ್ ಅಲಿ ಪತ್ನಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಕೇಳಿದ್ದಾರೆ.
2012ರಲ್ಲಿ ವಿದೇಶಿಯರ ಟ್ರಿಬುನಲ್ (Foreigners Tribunal) ರಹೀಮ್ ಅಲಿ ಭಾರತೀಯ ಅಲ್ಲ ಎಂದು ಹೇಳಿತ್ತು. ನಂತರ ಅವರು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಹೈಕೋರ್ಟ್ ಅವರ ಮಾತು ಕೇಳಲಿಲ್ಲ. ಈಗ ಸುಪ್ರೀಂ ಕೋರ್ಟ್ ನೀವು ಭಾರತೀಯರು ಎಂದು ಹೇಳುವಾಗ ತುಂಬಾ ತಡವಾಗಿಬಿಟ್ಟಿದೆ. ಸಣ್ಣಪುಟ್ಟ ಅಕ್ಷರ ತಪ್ಪುಗಳ ಕಾರಣ ಒಬ್ಬನು ಭಾರತೀಯ ಪ್ರಜೆ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಈ ರೀತಿಯ ಅಕ್ಷರ ತಪ್ಪುಗಳು ಸರ್ವೇ ಸಾಮಾನ್ಯ.
ಅದರಲ್ಲೂ ವಿಶೇಷವಾಗಿ ಅಸಾಮಿ ಬಂಗಾಳಿ ಈ ರೀತಿ ಭಾಷೆಗಳಲ್ಲಿ ಉಚ್ಚಾರಣೆಯಲ್ಲಿ ಬದಲಾವಣೆ ಇರುವ ಕಾರಣದಿಂದ ಅಕ್ಷರ ತಪ್ಪಾಗಬಹುದು. ಈ ರೀತಿಯ ತಪ್ಪು ಅಧಿಕಾರಿಗಳಿಂದಲೂ ಆಗಬಹುದು. ಆ ಕಾರಣದಿಂದ ಒಬ್ಬರನ್ನು ನೀನು ಭಾರತೀಯ ಪ್ರಜೆಯಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅವರೊಬ್ಬರು ವಿದೇಶಿಯಾಗಿದ್ದರೆ ನಕಲಿ ಕಾಗದಗಳನ್ನು ಸೃಷ್ಟಿ ಮಾಡುತ್ತಿದ್ದರು. ರಹಿಮ್ ಅಲಿಯವರಂತೆ ಇರುವ ಕಾಗದಗಳನ್ನು ಮುಗ್ಧತೆಯೊಂದಿಗೆ ಬಂದು ಕೊಡುತ್ತಿರಲಿಲ್ಲ. ಆದ್ದರಿಂದ ಇದು ಅವರ ಮುಗ್ದತೆ ಆಗಿದೆ. ಹೀಗೆ ಹೇಳುತ್ತಾ ರಹಿಮ್ ಅಲಿ ಅವರ ಪೌರತ್ವ ಮರುಸ್ಥಾಪಿಸಿದೆ ಸುಪ್ರೀಂ ಕೋರ್ಟ್.
ಆದರೆ ಈಗ ಆ ಪೌರತ್ವವು ಸಮಾಧಿಯಲ್ಲಿರುವವರಿಗೆ ಯಾವ ಪ್ರಯೋಜನಕ್ಕೆ ಬರಲಿದೆ? ಈ ಒಂದು ಪ್ರಕರಣದ ವಿವರ ಕೇಳಿಯೇ ನೀವು ಭಾವುಕರಾಗಿರಬಹುದು. ಇಂತಹದ್ದು ಹಲವಾರು ಪ್ರಕರಣಗಳಿರಬಹುದು ಎಂದು ಹೇಳಿದರೆ ಹೇಗಾಗಬಹುದು? ನಮ್ಮ ದೇಶದಲ್ಲಿರುವಂತಹ ಪೌರತ್ವ ಸಾಬೀತುಪಡಿಸುವ ಚಕ್ರವ್ಯೂಹದಲ್ಲಿ ಸಿಲುಕಿ ಎಷ್ಟು ಅಭಿಮನ್ಯುಗಳು ಮರಣ ಹೊಂದಿದ್ದಾರೋ…
ರಹೀಮ್ ಅಲಿ ಪ್ರಕರಣ ಸರಕಾರಗಳಿಗೆ ಹೊಣೆಗಾರಿಕೆಯ ಕರೆಯಾಗಿದೆ. ದುರ್ಬಲರ, ಅಶಕ್ತರ ಮೇಲೆ ಅವರ ಮುಗ್ಧತೆಯನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಹೊರಿಸುವ ಈ ಕಠೋರವಾದ ಪ್ರಕ್ರಿಯೆ ನಿಲ್ಲಬೇಕು. ಅಸ್ಸಾಂ ಸರ್ಕಾರದ ಅಂಕಿಅಂಶಗಳು ಆಘಾತಕಾರಿ ಚಿತ್ರಣವನ್ನು ತೋರಿಸುತ್ತೆ. ಫೆಬ್ರವರಿಯಲ್ಲಿ ರಾಜ್ಯ ಅಸೆಂಬ್ಲಿಯಲ್ಲಿ ಸಲ್ಲಿಸಿದ ಮಾಹಿತಿ ಪ್ರಕಾರ, ರಾಜ್ಯದ 100 ವಿದೇಶಿಯರ ಟ್ರಿಬ್ಯುನಲ್ ಗಳು ಕಳೆದ ವರ್ಷದ ಕೊನೆಯಲ್ಲಿ 3,37,186 ಪ್ರಕರಣಗಳನ್ನು ವಿಚಾರಣೆ ನಡೆಸಿ 1,59,353 ಜನರನ್ನು ವಿದೇಶಿಯರೆಂದು ಘೋಷಿಸಿತ್ತು.
94,149 ಪ್ರಕರಣಗಳು ಬಾಕಿ ಉಳಿದಿವೆ. ಈ 1,59,353 ಜನರಲ್ಲಿ ಎಷ್ಟು ಜನರಿಂದ ರಹೀಮ್ ಅಲಿಯಂತೆ ಅನ್ಯಾಯವಾಗಿ ಅವರ ಪೌರತ್ವವನ್ನು ಕಸಿದುಕೊಳ್ಳಲಾಗಿರಬಹುದು? ಅಲಿಯವರಂತೆ, ಅದೆಷ್ಟೋ ವರ್ಷಗಳ ನಂತರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಅಸ್ಸಾಂ ಪೊಲೀಸ್ ಮತ್ತು ಟ್ರಿಬ್ಯುನಲ್ ನ ಆದೇಶ ತಪ್ಪಾಗಿತ್ತು ಎಂದು ಹೇಳಿದರೆ ಇವರು ಅನುಭವಿಸಿದ ಆಘಾತ, ಅವಮಾನ, ಕಳೆದ ಸಮಯ, ಖರ್ಚು ಮಾಡಿದ ಹಣವನ್ನು ಸರ್ಕಾರವು ಅವರಿಗೆ ಪರಿಹಾರವಾಗಿ ನೀಡುತ್ತದೆಯೇ?
ರಹೀಮ್ ಅಲಿ ಎಂಬ ಭಾರತೀಯ ನಾಗರೀಕ ವಿದೇಶಿ ಎಂಬ ಕಳಂಕವನ್ನು ಹೊತ್ತುಕೊಂಡು ಈ ಲೋಕದಿಂದ ನಿರ್ಗಮಿಸಿದರು. ಜೀವಮಾನವಿಡೀ ಕಳೆದ ಮಣ್ಣಿನಲ್ಲೇ "ನೀನು ಇಲ್ಲಿನವನಲ್ಲ, ನೀನು ಪರದೇಶಿ" ಎಂದು ಹಣೆಪಟ್ಟಿ ಹಚ್ಚಿ ಆ ಅಮಾಯಕನನ್ನು ಅವಮಾನಿಸಲಾಯಿತು. ಅದೇ ಅವಮಾನ ಹಾಗು ಕಳಂಕ ಹೊತ್ತುಕೊಂಡೇ ಅವರು ಪ್ರಾಣ ಬಿಟ್ಟರು.
ಎಲ್ಲರಿಗೂ ಸಮಾನತೆ ಮತ್ತು ಗೌರವವನ್ನು ಖಾತರಿ ಪಡಿಸುವ ಶ್ರೇಷ್ಠ ಸಂವಿಧಾನ ಜಾರಿಯಲ್ಲಿರುವ ದೇಶದಲ್ಲಿ ಈ ರೀತಿಯ ಪ್ರಕರಣಗಳು ಬಹಳ ದೊಡ್ಡ ದ್ರೋಹ. ರಹೀಮ್ ಅಲಿ ಅವರ ಪತ್ನಿ ಹಾಜಿರ ಬೇಗಂ ಅವರ ಪ್ರಶ್ನೆಗೆ ಉತ್ತರಿಸುವವರು ಯಾರು? ಈಗ ಎಲ್ಲ ಮುಗಿದ ಮೇಲೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಯೋಜನ ಏನು ಎಂಬುದು ಮುಖ್ಯ ಪ್ರಶ್ನೆ.







