ಸೂರ್ಯ ಸೇನ್ ಎಂಬ ಕ್ರಾಂತಿಯ ಧ್ರುವ ತಾರೆ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಈ ದೇಶ ಕಂಡ ಪರಮ ಶ್ರೇಷ್ಠ ಕ್ರಾಂತಿಕಾರಿಗಳಲ್ಲಿ ಸೂರ್ಯ ಸೇನ್ ಅಗ್ರಣಿ. ಸೂರ್ಯ ಸೇನ್ ಮಾರ್ಚ್ 22, 1894ರಂದು ಚಿತ್ತಗಾಂಗ್‌ನ ನವೊಪಾರದಲ್ಲಿ ಜನಿಸಿದರು. ಅವರ ತಂದೆ ರಾಮನಿರಂಜನ್ ಸೇನ್ ಶಿಕ್ಷಕರಾಗಿದ್ದರು. ಸೂರ್ಯ ಸೇನ್ 1916ರಲ್ಲಿ ಬಿ.ಎ. ಓದುತ್ತಿದ್ದಾಗ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಸಕ್ತಿ ಹುಟ್ಟಿ ಕ್ರಾಂತಿಕಾರಿಗಳ ತೊಟ್ಟಿಲಾಗಿದ್ದ ಅನುಶೀಲನ್ ಸಮಿತಿಯನ್ನು ಸೇರಿದರು. ತಮ್ಮ ಓದು ಮುಗಿಸಿ 1918ರಲ್ಲಿ ಮತ್ತೆ ಊರಿಗೆ ಮರಳಿದ ಸೂರ್ಯಸೇನ್, ಶಾಲೆಯೊಂದರಲ್ಲಿ ಗಣಿತದ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು.
ಅಸಹಕಾರ ಚಳವಳಿಯಲ್ಲಿ ಸೂರ್ಯಸೇನ್ ಸಕ್ರಿಯವಾಗಿ ಭಾಗವಹಿಸಿದ್ದರು. ಅಸಹಕಾರ ಸತ್ಯಾಗ್ರಹ ಏಕಾಏಕಿ ಸ್ಥಗಿತವಾದಾಗ ಭ್ರಮನಿರಸನಗೊಂಡವರಲ್ಲಿ ಸೂರ್ಯ ಸೇನ್ ಕೂಡಾ ಒಬ್ಬರು. ಅಪ್ರತಿಮ ಸಂಘಟಕರಾಗಿದ್ದ ಸೂರ್ಯ ಸೇನ್ ಅನಂತ್ ಸಿಂಗ್, ಅಂಬಿಕಾ ಚಕ್ರವರ್ತಿ ಸಹಿತ ನೂರಾರು ಕ್ರಾಂತಿಕಾರಿಗಳ ಗುರು. ತಮ್ಮ ಕ್ರಾಂತಿಕಾರಿ ಚಟುವಟಿಕೆಗಳ ಕಾರಣಕ್ಕೆ ಬಂಧಿತರಾದ ಅವರು 1926-28ರ ಅವಧಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಸೂರ್ಯ ಸೇನ್ ಜುಗಾಂತರ್ ಮತ್ತು ಅನುಶೀಲನ್ ಸಮಿತಿ ಎರಡನ್ನೂ ಒಂದು ಮಾಡಲು ಶ್ರಮಿಸಿದರು. ವ್ಯಾಯಾಮ ಶಾಲೆಯನ್ನು ಸ್ಥಾಪಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಹೊಸದಾಗಿ ಸೇರಿದ್ದ ಯುವಕರ ದೈಹಿಕ, ಮಾನಸಿಕ ಸ್ಥಿತಿಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನು ಯೋಜಿಸಿದರು. ಇದೇ ವೇಳೆಗೆ ಬ್ರಿಟಿಷ್ ಒಡೆತನದ ಚಹಾ ತೋಟವೊಂದರಲ್ಲಿ ಕಾರ್ಮಿಕರು ಮುಷ್ಕರ ಹೂಡಿದರು. ಈ ಮುಷ್ಕರವನ್ನು ಬ್ರಿಟಿಷರು ಗುಂಡಿನ ದಾಳಿಗಳ ಮೂಲಕ ಹತ್ತಿಕ್ಕಿದರು. ಇದರ ವಿರುದ್ಧ ಅಸ್ಸಾಂ- ಬೆಂಗಾಲ್ ರೈಲು ಮುಷ್ಕರವೂ ಆರಂಭವಾಯಿತು. ಆಗ ತಮ್ಮ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ ಸೂರ್ಯ ಸೇನ್ ಪೂರ್ಣಾವಧಿ ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಹಿಂಸಾತ್ಮಕ ಹೋರಾಟದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರೆ ಜನ ಸಾಮಾನ್ಯರಿಗೆ ಬ್ರಿಟಿಷರ ಕುರಿತಾದ ಭಯವೂ ತೊಲಗುತ್ತದೆ, ಅವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸಂಘಟಿತರಾಗುತ್ತಾರೆ, ಈ ಪ್ರಕ್ರಿಯೆಗೆ ತಮ್ಮ ಬಲಿದಾನ ಅನಿವಾರ್ಯ ಎಂಬುದು ಸೂರ್ಯ ಸೇನ್ ಅವರ ನಿಲುವಾಗಿತ್ತು. 1929ರಲ್ಲಿ ನಡೆದ ಚಿತ್ತಗಾಂಗ್ ಜಿಲ್ಲಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಸುಭಾಸ್ ಬೋಸ್ ವಹಿಸಿದ್ದರೆ, ಸೂರ್ಯ ಸೇನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಇದಾದ ಬಳಿಕ ಅವರು ಇಂಡಿಯನ್ ರಿಪಬ್ಲಿಕನ್ ಆರ್ಮಿ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಯ ಸದಸ್ಯರು ತಮ್ಮ ಚಟುವಟಿಕೆಗಳನ್ನು ‘ಸಾವಿನ ಕಾರ್ಯಕ್ರಮಗಳು’ ಎಂದೇ ಕರೆದಿದ್ದರು.
ಇದರ ಅಂಗವಾಗಿ ಬ್ರಿಟಿಷ್ ಪೊಲೀಸ್ ಶಸ್ತ್ರಾಸ್ತ್ರಗಳನ್ನು ದೋಚುವುದು, ಸೈನ್ಯದ ಶಸ್ತ್ರಾಸ್ತ್ರ ಕೋಠಿಯನ್ನು ಲೂಟಿ ಮಾಡುವುದು, ದೂರವಾಣಿ ಮತ್ತು ಟೆಲಿಗ್ರಾಫ್ ಕಟ್ಟಡಗಳನ್ನು ವಶಕ್ಕೆ ಪಡೆಯುವುದು, ರೈಲ್ವೆ ಸಂಪರ್ಕಗಳನ್ನು ನಾಶ ಮಾಡುವುದು, ಯುರೋಪಿಯನ್ ಕ್ಲಬ್ ಮೇಲೆ ದಾಳಿ-ಇವು ಸ್ಥೂಲ ಕಾರ್ಯಕ್ರಮಗಳಾಗಿದ್ದವು.
ಇದರ ಮುಖ್ಯ ಚಟುವಟಿಕೆಯಾಗಿ ಎಪ್ರಿಲ್ 18, 1930ರಂದು ಚಿತ್ತಗಾಂಗ್‌ನ ಶಸ್ತ್ರಾಸ್ತ್ರ ಕೋಠಿಗೆ ಈ ಕ್ರಾಂತಿಕಾರಿಗಳ ತಂಡ ದಾಳಿ ಮಾಡಿತು. ಈ ಐತಿಹಾಸಿಕ ದಾಳಿಯಲ್ಲಿ 80ಕ್ಕೂ ಮಿಕ್ಕಿ ಬ್ರಿಟಿಷ್ ಸೈನಿಕರು ಸತ್ತರೆ, 12 ಕ್ರಾಂತಿಕಾರಿಗಳು ಹುತಾತ್ಮರಾದರು. ಈ ದಾಳಿಯ ಬಳಿಕ ಕ್ರಾಂತಿಕಾರಿಗಳು ರಾಷ್ಟ್ರಧ್ವಜವನ್ನು ಈ ಕೋಠಿಯಲ್ಲಿ ಹಾರಿಸಿ ಹೊರಟು ಹೋದರು. ಬ್ರಿಟಿಷ್ ಸರಕಾರ ಈ ಒಂದು ಘಟನೆಯಿಂದ ತತ್ತರಿಸಿ ಹೋಯಿತು. ಸುಮಾರಾಗಿ ದೇಶದ ಉಳಿದ ಭಾಗಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ನಿಶ್ಯೇಷವಾಗಿ ಹೋಗುತ್ತಿದ್ದ ಸಮಯದಲ್ಲಿ ಈ ಕ್ರಾಂತಿಕಾರಿ ದಾಳಿ ದೇಶವನ್ನೇ ಎದ್ದು ಕೂರುವಂತೆ ಮಾಡಿತು.
ಈ ದಾಳಿಯ ಬಳಿಕ ಭೂಗತರಾದ ಸೂರ್ಯ ಸೇನ್, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಮ್ಮ ಅಡಗು ತಾಣವನ್ನು ಬದಲಿಸುತ್ತಾ ಹೋದರು. ಈ ಅವಧಿಯಲ್ಲಿ ಕೃಷಿ ಕಾರ್ಮಿಕ, ರೈತ, ಅರ್ಚಕ ಹೀಗೆ ಹಲವು ವೃತ್ತಿಗಳನ್ನು ಮಾಡುತ್ತಾ ದಿನ ಕಳೆದರು. ಒಮ್ಮೆಯಂತೂ ಶ್ರದ್ಧಾವಂತ ಮುಸ್ಲಿಮನ ತರಹವೂ ಇದ್ದರಂತೆ. ಆದರೆ ಫೆಬ್ರವರಿ 1933ರಂದು ಬ್ರಿಟಿಷರು ಅವರ ಅಡಗು ತಾಣವನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿದರು. ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಹತ್ತು ಸಾವಿರ ಟಾಕಾಗಳ ಬಹುಮಾನವನ್ನು ಬ್ರಿಟಿಷ್ ಸರಕಾರ ಘೋಷಿಸಿತ್ತು. ಇದೇ ಆಮಿಷಕ್ಕೆ ಮಣಿದ ಸೂರ್ಯ ಸೇನ್ ಅವರ ಬಂಧು ನೇತ್ರ ಸೇನ್ ಎಂಬಾತ ಸೂರ್ಯ ಸೇನ್ ಅವರ ಅಡಗು ತಾಣದ ಬಗ್ಗೆ ಮಾಹಿತಿ ಕೊಟ್ಟಿದ್ದ.
ಆಗಸ್ಟ್ 14, 1933ರಂದು ಸೂರ್ಯ ಸೇನ್ ಅವರನ್ನು ಅವರ ಸಂಗಾತಿ ತಾರಕೇಶ್ವರ್ ದಸ್ತಿದಾರ್ ಜೊತೆಗೆ ಚಿತ್ತಗಾಂಗ್‌ನಲ್ಲಿ ಗಲ್ಲಿಗೇರಿಸಲಾಯಿತು.
ಗಲ್ಲಿಗೇರಿಸುವ ಮೊದಲು ಅಲ್ಲಿನ ಜೈಲು ಸಿಬ್ಬಂದಿ ಸೂರ್ಯ ಸೇನ್ ಅವರ ಹಲ್ಲುಗಳನ್ನು ಜಜ್ಜಿ ಉದುರಿಸಿ, ಉಗುರುಗಳನ್ನು ಕಿತ್ತು ಹಾಕಿ ಗಂಟು ಗಂಟು ಪುಡಿ ಮಾಡಿದ್ದರು. ಸಾಯುವ ವೇಳೆಗೆ ವಂದೇ ಮಾತರಂ ಕೂಡಾ ಹೇಳಲು ಸಾಧ್ಯವಾಗಬಾರದು ಎಂಬ ನಿರ್ಧಾರ ಬ್ರಿಟಿಷರದ್ದಾಗಿತ್ತು. ಸಾಯುವ ಮೊದಲು ಸೂರ್ಯ ಸೇನ್ ಅವರು ಕಳಿಸಿದ ಸಂದೇಶ ಹೀಗಿತ್ತು.
‘‘ಸಾವು ಕದ ಬಡಿಯುತ್ತಿದೆ. ಈ ಅಪೂರ್ವ ಕ್ಷಣದಲ್ಲಿ ನಿಮಗಾಗಿ ನಾನು ಏನು ಬಿಟ್ಟು ಹೋಗಬಹುದು? ಒಂದೇ ಒಂದು ಕನಸು, ಆ ಸುವರ್ಣ ಸ್ವಪ್ನ, ಅದೇ ಸ್ವತಂತ್ರ ಭಾರತದ ಕನಸು. ಎಪ್ರಿಲ್ 18, 1930ರ ದಿನವನ್ನು ಮರೆಯದಿರಿ. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಪೂರ್ವ ಭಾರತದ ರಾಷ್ಟ್ರಪ್ರೇಮಿಗಳ ಹೆಸರನ್ನು ನಿಮ್ಮ ಎದೆಯಲ್ಲಿ ನೆತ್ತರಿನಿಂದ ಬರೆದುಕೊಳ್ಳಿ’’
ಇಂಥಾ ಧೀರೋದಾತ್ತ ನಾಯಕನನ್ನು ಹಣದ ಆಮಿಷಕ್ಕೆ ಹಿಡಿದುಕೊಟ್ಟ ನೇತ್ರ ಸೇನ್ ಎಂಬ ದ್ರೋಹಿಗೆ ಸರಕಾರದ ಬಹುಮಾನ ಸಂದಾಯವಾಗುವ ಮೊದಲೇ, ಸೂರ್ಯ ಸೇನ್ ಅವರ ಅನುಯಾಯಿ ಕ್ರಾಂತಿಕಾರಿಯೊಬ್ಬ ಆತನ ಮನೆಗೆ ನುಗ್ಗಿ ಈ ದ್ರೋಹಿಯ ಮಡದಿಯೆದುರೇ ಖಡ್ಗದಿಂದ ಅಕ್ಷರಶಃ ಆತನ ರುಂಡ ಕತ್ತರಿಸಿ ಸಾಯಿಸಿದ್ದ. ಆತನ ಮಡದಿ ಈ ಹೋರಾಟದ ಬಗ್ಗೆ ಅದೆಷ್ಟು ಅನುಕಂಪ ಹೊಂದಿದ್ದಳೆಂದರೆ ತನ್ನ ದೇಶದ್ರೋಹಿ ಗಂಡನ ಹತ್ಯೆ ಮಾಡಿದ ಕ್ರಾಂತಿಕಾರಿಯ ಹೆಸರನ್ನು ಆಕೆ ಪೊಲೀಸರಿಗೆ ತಿಳಿಸಲೇ ಇಲ್ಲ.
ಈ ಅನಾಮಿಕ ತಾಯಿಯನ್ನೂ ನಾವು ಈ ಗಳಿಗೆ ನೆನೆಯಬೇಕು.
***
ಭಗತ್ ಸಿಂಗ್, ಸೂರ್ಯ ಸೇನ್, ಅಷ್ಫಾಕುಲ್ಲಾರಿಂದ ಹಿಡಿದು ಸುಭಾಸ್ ಬೋಸ್ ವರೆಗೆ ಈ ಎಲ್ಲಾ ನಾಯಕರೂ ಹುತಾತ್ಮರಾಗುವ ಬಗ್ಗೆ ತಾತ್ವಿಕ ಸ್ಪಷ್ಟತೆ ಹೊಂದಿದ್ದರು. ಇಂಥಾ ಬಲಿದಾನಗಳೇ ಸಾಮಾನ್ಯ ಭಾರತೀಯನನ್ನು ಬಡಿದೆಬ್ಬಿಸುತ್ತದೆ; ಆದ್ದರಿಂದ ತಮ್ಮ ಪ್ರಜ್ಞಾಪೂರ್ವಕ ಬಲಿದಾನ ಮುಖ್ಯ ಎಂದು ಭಾವಿಸಿದ್ದರು.
ಇನ್ನೊಂದು ಅಂಶವೆಂದರೆ ಈ ಎಲ್ಲಾ ಕ್ರಾಂತಿಕಾರಿ ನಾಯಕರು ತಮ್ಮ ಸಂಗಾತಿಗಳು /ಅನುಯಾಯಿಗಳಲ್ಲಿ ಎಷ್ಟು ತೀವ್ರ ರಾಜಕೀಯ ಪ್ರಜ್ಞೆಯನ್ನು ಬೆಳೆಸಿದ್ದರೆಂದರೆ ಇವರ ಒಬ್ಬನೇ ಒಬ್ಬ ಅನುಯಾಯಿ ಕೋಮು ಧ್ರುವೀಕರಣ, ಧರ್ಮ ರಾಜಕೀಯದ ಸಂಘಟನೆಗಳನ್ನು ಎಡಗಾಲಿನ ಕಿರು ಬೆರಳಲ್ಲೂ ಮುಟ್ಟಲಿಲ್ಲ. ಸಾಯದೇ ಶಿಕ್ಷೆ ಅನುಭವಿಸಿದವರೂ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಕಾಪಿಟ್ಟುಕೊಂಡು ನಿರಂತರವಾಗಿ ಹೋರಾಟ ಮುಂದುವರಿಸಿದರು.
ಈ ಹಾದಿಯನ್ನೊಪ್ಪದ ಗಾಂಧಿಯಂಥವರ ಹೋರಾಟದ ಬಗ್ಗೆ ಅಪಾರ ಗೌರವ ಉಳಿಸಿಕೊಂಡೇ ತಮ್ಮ ಹಾದಿಯಲ್ಲಿ ಮುಂದುವರಿದರು.
ಈ ಕ್ರಾಂತಿ ನಕ್ಷತ್ರಗಳೆದುರು ಆರೆಸ್ಸೆಸ್ ವೈಭವೀಕರಿಸುವ ಸಾವರ್ಕರ್ ಮಂಕಾಗಿ ಕಾಣಿಸುತ್ತಾರೆ.
ಎರಡು ಕಾರಣಗಳಿಗೆ.
1. ಸಾವರ್ಕರ್ ಮುಂಚೂಣಿ ಹೋರಾಟದಲ್ಲಿ ಭಾಗವಹಿಸದೆ ತೆರೆಮರೆಯಲ್ಲಿ ಕುಮ್ಮಕ್ಕು ಕೊಟ್ಟ ಕಾರಣಕ್ಕೆ ಜೈಲು ಶಿಕ್ಷೆ ಅನುಭವಿಸಿದರು.
2. ಬಿಡುಗಡೆಗೆ ಮೊರೆ ಇಟ್ಟು ಬರೆದ ದಯಾ ಪತ್ರಕ್ಕನುಗುಣವಾಗಿ ಮುಂದೆಂದೂ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ.
ಅದಕ್ಕಿಂತ ಘೋರವೆಂದರೆ ಈ ಎಲ್ಲಾ ಧೀಮಂತರು ಸೈದ್ಧಾಂತಿಕವಾಗಿ ಹೊಂದಿದ್ದ ಸಮಾನತೆ, ಭ್ರಾತೃತ್ವದ ಕಾಣ್ಕೆಗೆ ಸಂಪೂರ್ಣ ವಿರುದ್ಧವಾಗಿ ಕೋಮು, ವಿಭಜಕ ಸಿದ್ಧಾಂತವನ್ನು ಪ್ರಸರಿಸುತ್ತಾ ಹೋದರು. ಸಾವರ್ಕರ್ ಅವರ ಅಭೀಪ್ಸೆಯ ಕೂಸಾಗಿದ್ದ ಆರೆಸ್ಸೆಸ್ ಅಕ್ಷರಶಃ ಈ ಸಿದ್ಧಾಂತವನ್ನು ಮುಂದೊತ್ತಿ ಬ್ರಿಟಿಷರಿಗೆ ಅನುಕೂಲ ಮಾಡಿಕೊಡುತ್ತಾ ಹೋಯಿತು. ಈ ಕ್ರಾಂತಿಕಾರಿಗಳ ಸೈದ್ಧಾಂತಿಕ ಬುನಾದಿಯನ್ನು ಗೋಳ್ವಾಲ್ಕರ್ ದೇಶದ ಮೊದಲ ಶತ್ರು ಎಂದು ಕರೆದರು!! ಬ್ರಿಟಿಷರೂ ಈ ನಿಲುವು ತಳೆದಿರಲಿಲ್ಲ!!
ಇಂದು ಸುಭಾಸ್ ಬೋಸ್ ಬಗ್ಗೆ ಮೊಸಳೆ ಕಣ್ಣೀರಿಡುತ್ತಾ ಗಾಂಧಿ-ನೆಹರೂ ಅವರಿಗೆ ಮೋಸ ಮಾಡಿದರು ಎಂದು ಅಪಪ್ರಚಾರ ಮಾಡುತ್ತಾ ಸಾಗುವ ಆರೆಸ್ಸೆಸ್ ಮತ್ತು ಅದರ ಅನುಯಾಯಿಗಳು ಗಮನಿಸಬೇಕಾದ ಅಂಶವೆಂದರೆ ಸ್ವತಃ ನೇತಾಜಿಯವರು ಸ್ಥಾಪಿಸಿದ ಪಕ್ಷ ಫಾರ್ವರ್ಡ್ ಬ್ಲಾಕ್ ಸಮಾಜವಾದಿ ಸಿದ್ಧಾಂತಕ್ಕೆ ಬದ್ಧವಾಗಿತ್ತು. ಬಂಗಾಲದ ಎಡಪಕ್ಷಗಳ ಮೈತ್ರಿಯ ಭಾಗವಾಗಿತ್ತು. ಒಬ್ಬನೇ ಒಬ್ಬ ಐ.ಎನ್.ಎ. ಕ್ರಾಂತಿಕಾರಿ ಸಾವರ್ಕರ್, ಆರೆಸ್ಸೆಸ್ ಅಥವಾ ಹಿಂದೂ ಮಹಾಸಭಾಕ್ಕೆ ಒಲಿಯಲಿಲ್ಲ. ಸುಭಾಸ್ ಅವರ ಮಹಿಳಾ ರೆಜಿಮೆಂಟ್‌ನ ಮುಖ್ಯಸ್ಥೆಯಾಗಿದ್ದ ಲಕ್ಷ್ಮಿ ಸೆಹಗಲ್ ಬಗ್ಗೆ ಉಘೇ ಎಂದ ಆರೆಸ್ಸೆಸ್, ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಇದೇ ವಾಜಪೇಯಿ ನೇತೃತ್ವದ ಭಾಜಪ ಅವರನ್ನು ಸೋಲಿಸಿತ್ತು ಎಂಬುದನ್ನು ನಾವು ನೆನಪಿಸಬೇಕಿದೆ.







