TCS ನೇಮಕಾತಿ ಅಚ್ಚರಿ; ಭಾರತದ ಅತಿದೊಡ್ಡ ಐಟಿ ಕಂಪನಿ ಮತ್ತೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿರುವುದೇಕೆ?

N Chandrasekaran | Photo Credit : indiatoday.in
ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಟಿಸಿಎಸ್ 9,279 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಂಡಿದ್ದು, ಅದರ ಒಟ್ಟು ಸಿಬ್ಬಂದಿ ಸಂಖ್ಯೆ 5,93,798 ಕ್ಕೆ ತಲುಪಿದೆ.
ಭಾರತದ ಐಟಿ ಉದ್ಯಮದಲ್ಲಿ ಅತಿಗೊಡ್ಡ ಹೆಸರಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಒಂದು ವರ್ಷಕ್ಕೂ ಕಡಿಮೆ ಅವಧಿಯ ಹಿಂದೆ ಉದ್ಯೋಗಿಗಳ ತೀವ್ರ ಕಡಿತ ಮಾಡಿ ಸುದ್ದಿಗೊಳಗಾಗಿತ್ತು. ಕೃತಕಬುದ್ಧಿಮತ್ತೆ (AI), ನಿಧಾನಗತಿಯ ಜಾಗತಿಕ ಬೇಡಿಕೆ ಮತ್ತು ವೆಚ್ಚದ ಒತ್ತಡಗಳು ಭಾರತದ ಅತಿದೊಡ್ಡ ಖಾಸಗಿ ಉದ್ಯೋಗದಾತರಲ್ಲಿ ಒಬ್ಬರನ್ನು ಉದ್ಯೋಗ ಕಡಿತಗೊಳಿಸುವಂತೆ ಒತ್ತಡ ಹೇರಿದೆ ಎಂದು ಕಳವಳವೂ ವ್ಯಕ್ತವಾಗಿತ್ತು. ಮೂರು ತ್ರೈಮಾಸಿಕಗಳ ನಂತರ ವಿಭಿನ್ನ ಚಿತ್ರಣ ಕಾಣುತ್ತಿದೆ. ವಿತ್ತೀಯ ವರ್ಷ 2026-27ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಟಿಸಿಎಸ್ 9,279 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಂಡಿದ್ದು, ಅದರ ಒಟ್ಟು ಸಿಬ್ಬಂದಿ ಸಂಖ್ಯೆ 5,93,798 ಕ್ಕೆ ತಲುಪಿದೆ.
ಈ ನೇಮಕಾತಿಯು ಮೂರು ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಕಂಪನಿಯ ಅತಿದೊಡ್ಡ ತ್ರೈಮಾಸಿಕ ನಿವ್ವಳ ಸೇರ್ಪಡೆಯಾಗಿದೆ. ಭಾರತದ ಐಟಿ ನೇಮಕಾತಿ ಉತ್ಕರ್ಷವು ಕೊನೆಗೊಂಡಿದೆ ಎನ್ನುವ ಚರ್ಚೆಯ ತಿಂಗಳುಗಳ ನಂತರ ಈ ಸೇರ್ಪಡೆ ನಡೆದಿದೆ. ಹಾಗಿದ್ದರೆ ಏನು ಬದಲಾಗಿದೆ?
ಉದ್ಯೋಗ ಕಡಿತದ ಆರಂಭ ಯಾವಾಗ?
2025ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್ 19,755 ಉದ್ಯೋಗಿಗಳನ್ನು ಕಡಿತಗೊಳಿಸಿದಾಗ ಸತತ ವಜಾದ ವರ್ಷಗಳು ಆರಂಭವಾಗಿದ್ದವು. ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಕಂಪನಿ ಮತ್ತೆ 11,151 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಹೀಗೆ ಟಿಸಿಎಸ್ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಸುದ್ದಿ ಪ್ರಚಾರವಾಯಿತು. ಜಾಗತಿಕ ಕ್ಲೈಂಟ್ಗಳು ತಂತ್ರಜ್ಞಾನ ವೆಚ್ಚ ನಿಧಾನಗೊಳಿಸಿರುವುದು ಮತ್ತು AI ಸಾಫ್ಟ್ವೇರ್ ಸೇವೆಗಳನ್ನು ಮರುರೂಪಿಸಲು ಪ್ರಾರಂಭಿಸಿರುವುದು ವಜಾಗೆ ಕಾರಣವಾಗಿತ್ತು. ಹೀಗೆ ಭಾರತದ ಐಟಿ ವಲಯವು ದೀರ್ಘಕಾಲೀನ ಉದ್ಯೋಗ ಕಡಿತದ ಅವಧಿಯನ್ನು ಪ್ರವೇಶಿಸುತ್ತಿದೆ ಎಂಬ ಕಳವಳ ಮೂಡಿತ್ತು.
ಚೇತರಿಕೆ ರಾತ್ರೋರಾತ್ರಿ ಸಂಭವಿಸಿಲ್ಲ
ಇದೀಗ ಮತ್ತೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಸತತ ಎರಡು ತ್ರೈಮಾಸಿಕಗಳ ಉದ್ಯೋಗ ಕಡಿತದ ನಂತರ ಟಿಸಿಎಸ್ 2026ರ ಮಾರ್ಚ್ನ ತ್ರೈಮಾಸಿಕದಲ್ಲಿ 2,356 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಂಡಿದೆ. ಎಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ 9,279 ಉದ್ಯೋಗಿಗಳನ್ನು ಸೇರಿಸಿಕೊಂಡಾಗ ಆವೇಗ ಹೆಚ್ಚಾಯಿತು. ಇತ್ತೀಚೆಗಿನ ತ್ರೈಮಾಸಿಕದಲ್ಲಿ ಕಂಪನಿ ಸುಮಾರು 14,000 ಕ್ಯಾಂಪಸ್ ನೇಮಕಾತಿಗಳನ್ನು ಸೇರಿಸಿಕೊಂಡಿದೆ.
ವ್ಯವಹಾರವು ಎಂದಿಗೂ ನಿಂತಿರಲಿಲ್ಲ
ಟಿಸಿಎಸ್ನ ಇತ್ತೀಚಿಗಿನ ನೇಮಕಾತಿಯನ್ನು ಅರ್ಥಮಾಡಿಕೊಳ್ಳುವುದು ಸರಳ. ಕಂಪನಿಯು ಕ್ರೂಢೀಕೃತ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 5ರಷ್ಟು ಹೆಚ್ಚಳವನ್ನು ಕಂಡಿದೆ, ಆದಾಯವು 72,275 ಕೋಟಿ ರೂ.ಗೆ ತಲುಪಿದೆ. ಅಂದರೆ, ಆದಾಯವು ಶೇ 0.4ರಷ್ಟು ಹೆಚ್ಚಾಗಿದೆ. ಆದರೆ ವಹಿವಾಟಿನ ಲಾಭಗಳು ಶೇ 24ರಷ್ಟರಲ್ಲಿ ಸ್ಥಿರವಾಗಿದೆ. ಕಂಪನಿಯ ಆರ್ಡರ್ ಬುಕ್ 9.5 ಶತಕೋಟಿ ಡಾಲರ್ಗಳಷ್ಟು ಉಳಿದಿದೆ. ಜೊತೆಗೆ 800 ದಶಲಕ್ಷ ಡಾಲರ್ನ ಎಸ್ಕೆಎಫ್ ಜೊತೆಗಿನ AI-ನೇತೃತ್ವದ ಪರಿವರ್ತನೆಯ ಒಪ್ಪಂದವೂ ಸೇರಿದೆ. ಸರ್ವಿಸ್ನೌ ಜೊತೆಗಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಯುರೋಪ್ ಮೂಲದ ಫಾರ್ಚೂನ್ ಗ್ಲೋಬಲ್ 50 ಕಂಪನಿಯೊಂದಿಗೆ ಮತ್ತೊಂದು ಬಹು-ಮಿಲಿಯನ್ ಡಾಲರ್ ತೊಡಗಿಸಿಕೊಳ್ಳುವಿಕೆ ಒಳಗೊಂಡಿದೆ.
ಟಿಸಿಎಸ್ ನೇಮಕಾತಿಯಲ್ಲಿ AI ಪ್ರಭಾವ
ಟಿಸಿಎಸ್ನ ನೇಮಕಾತಿ ಕತೆ ವಿರೋಧಾಭಾಸವಾಗಿ ಕಾಣಲು ಬಹುಶಃ AI ದೊಡ್ಡ ಕಾರಣವಾಗಿದೆ. ಐಟಿ ಉದ್ಯಮದಲ್ಲಿ AI ತಕ್ಷಣವೇ ಉದ್ಯೋಗಗಳನ್ನು ಬದಲಿಸುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಬದಲಾಗಿ ಟಿಸಿಎಸ್ ಮತ್ತೆ ನೇಮಕ ಮಾಡಿಕೊಳ್ಳುತ್ತಿದೆ. ಆದರೆ ನೇಮಕಾತಿ ಮೇಲೆ AI ಪ್ರಭಾವ ಹೆಚ್ಚಾಗಿದೆ. ಗ್ರಾಹಕರು ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ ಮತ್ತು ಡಿಜಿಟಲ್ ಎಂಜಿನಿಯರಿಂಗ್ನಲ್ಲಿ AI ಪರಿಣತರನ್ನು ಬಯಸುತ್ತಿದ್ದಾರೆ. ಹೀಗಾಗಿ ಟಿಸಿಎಸ್ ಆ ಕ್ಷೇತ್ರಗಳಲ್ಲಿ AI ಆದಾಯ ಹುಡುಕಲು ನಿರ್ಧರಿಸಿದೆ. ಹೊಸ ಯುಗದ ತಂತ್ರಜ್ಞಾನ ಕೌಶಲ್ಯ ಹೊಂದಿರುವ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಹಾಗಿದ್ದರೆ ಟಿಸಿಎಸ್ ಮತ್ತೆ ನೇಮಕ ಮಾಡಿಕೊಳ್ಳುತ್ತಿದೆಯೆ?
ಹೌದು. ಆದರೆ ವಿಭಿನ್ನ ಕಾರ್ಯತಂತ್ರದೊಂದಿಗೆ ನೇಮಿಸಿಕೊಳ್ಳುತ್ತಿದೆ. ಹಾಗೆಂದು ಕೋವಿಡ್ ನಂತರ ಕಂಡುಬಂದ ಸಾಮೂಹಿಕ ನೇಮಕಾತಿ ನೋಡಲು ಸಾಧ್ಯವಿಲ್ಲ. ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಮರು ನಿಯೋಜಿಸುವುದು ಮತ್ತು ಮರುಕೌಶಲ್ಯ ಮಾಡುವುದನ್ನು ಮುಂದುವರಿಸಲಾಗುತ್ತಿದೆ.
ಕೃಪೆ: India Today






