ತೀಸ್ತಾ ಸೆಟಲ್ವಾಡ್ : ಹರಿಯುತ್ತಲೇ ಇರುವ ಪ್ರತಿರೋಧದ ನದಿ
ಮೋದಿ ಸರಕಾರವನ್ನು ಕಟಕಟೆಗೆ ತಂದ ದಿಟ್ಟೆ ತೀಸ್ತಾ

“ಕಳೆದ 10 ತಿಂಗಳಿಂದ ಜಾಮೀನಿನ ಮೇಲಿರುವ ತೀಸ್ತಾ ಸೆಟಲ್ವಾಡ್ ಅವರನ್ನು ತಕ್ಷಣ ಕಸ್ಟಡಿಗೆ ತೆಗೆದುಕೊಳ್ಳುವ ತುರ್ತು ಏನು? ಕೆಲ ದಿನಗಳ ಮಧ್ಯಂತರ ರಕ್ಷಣೆ ನೀಡಿದರೆ ಆಕಾಶವೇನು ಕಳಚಿ ಬೀಳುತ್ತದೆಯೇ ?” ಹೀಗೆ ಗುಜರಾತ್ ಹೈಕೋರ್ಟ್ ಅನ್ನು ಮೊನ್ನೆ ಪ್ರಶ್ನಿಸಿದ್ದು ಸುಪ್ರೀಂ ಕೋರ್ಟ್.
ಶನಿವಾರ ತಡರಾತ್ರಿಯ ವಿಶೇಷ ವಿಚಾರಣೆಯಲ್ಲಿ ತೀಸ್ತಾ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ತೀಸ್ತಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತಕ್ಷಣ ಶರಣಾಗುವಂತೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಒಂದು ವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ, ಮೇಲ್ಮನವಿ ಸಲ್ಲಿಸುವುದಕ್ಕೇ ಅವಕಾಶ ನೀಡಿರದ ಹೈಕೋರ್ಟ್ ಕ್ರಮಕ್ಕೆ ಆಶ್ಚರ್ಯ ವ್ಯಕ್ತಪಡಿಸಿತು. ಮಾತ್ರವಲ್ಲ, ಸಾಮಾನ್ಯ ಅಪರಾಧಿಗಳಿಗೂ ಮಧ್ಯಂತರ ರಕ್ಷಣೆ ನೀಡಲಾಗುತ್ತದೆ ಎಂದು ಹೇಳಿತು.
2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ತಕ್ಷಣವೇ ಶರಣಾಗುವಂತೆ ತೀಸ್ತಾಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಕೋರಿದರೂ ಅದನ್ನೂ ತಿರಸ್ಕರಿಸಿತ್ತು.
ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತೀಸ್ತಾ ಸೆಟಲ್ವಾಡ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಎಸ್ ಓಕಾ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ, ಶರಣಾಗುವ ಆದೇಶ ನೀಡುವ ಮೊದಲು ಗುಜರಾತ್ ಹೈಕೋರ್ಟ್ ಸೆಟಲ್ವಾಡ್ ಅವರಿಗೆ ಸ್ವಲ್ಪ ಸಮಯ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿತು. ಜಾಮೀನು ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ವರ್ಗಾಯಿಸಿತ್ತು. ತ್ರಿಸದಸ್ಯ ಪೀಠ ಗುಜರಾತ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ಹೇಳಿರುವಂತೆಯೆ, ತೀಸ್ತಾ ಅವರನ್ನು ತಕ್ಷಣ ಕಸ್ಟಡಿಗೆ ತೆಗೆದುಕೊಳ್ಳಲು ತೋರಲಾದ ತುರ್ತು ನಿಜಕ್ಕೂ ಅಚ್ಚರಿ ತರುವಂಥದ್ದು. ಮೇಲ್ಮನವಿಗೆ ಹೈಕೋರ್ಟ್ ಅವಕಾಶ ನಿರಾಕರಿಸಿತು ಎಂಬುದು ಇನ್ನೂ ವಿಚಿತ್ರವಾಗಿದೆ.
ಈ ದೇಶದಲ್ಲಿ ಕಾನೂನು ಯಾವುದೋ ಹಂತದಲ್ಲಿ ಇನ್ನಾವುದೋ ಸೂತ್ರದ ಗೊಂಬೆಯಾಗುತ್ತಿದೆ ಎಂಬ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದ ಆದೇಶ ಅದು. ಆದರೆ ಸುಪ್ರೀಂ ಕೋರ್ಟ್ ನ ತುರ್ತು ಮಧ್ಯಪ್ರವೇಶ, ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ಭರವಸೆ ಉಳಿಯುವಂತೆ ಮಾಡಿದೆ.
ಅತ್ಯಂತ ಕ್ಷುಲ್ಲಕ ಆರೋಪಗಳನ್ನು ಹೊರಿಸಿ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಗಲಭೆ ಪ್ರಕರಣದಲ್ಲಿ ಬಲಿಪಶು ಮಾಡಲು ಯತ್ನಿಸುತ್ತಿರುವುದು ಇಡೀ ದೇಶಕ್ಕೇ ಗೊತ್ತಿರುವ ವಿಚಾರ.
ಏನಿದು ಪ್ರಕರಣ ?
ಫೆಬ್ರವರಿ 27, 2002ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ 59 ಮಂದಿ ಸಜೀವ ದಹನವಾಗಿದ್ದರು. ಮಾರನೇ ದಿನ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಭಯಾನಕ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿ 68 ಜನರ ಹತ್ಯೆ ಆಗಿತ್ತು. ಬಳಿಕ ರಾಜ್ಯಾದ್ಯಂತ ಉಂಟಾದ ಗಲಭೆಗಳಲ್ಲಿ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇಡೀ ಹತ್ಯಾಕಾಂಡ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹೆಸರು ಕೇಳಿಬಂದಿತ್ತು.
ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಸೇರಿದಂತೆ 63 ಮಂದಿಗೆ ಎಸ್ ಐ ಟಿ ಕಳೆದ ವರ್ಷ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಹತ್ಯಾಕಾಂಡದಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಮತ್ತು ತೀಸ್ತಾ ಸೆಟಲ್ವಾಡ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಆದರೆ ಸುಪ್ರೀಂ ಕೋರ್ಟ್ ನಲ್ಲಿ ಆಗಿದ್ದೇ ಬೇರೆ. ಎಸ್ಐಟಿ ವರದಿ ವಿರುದ್ಧದ ಅವರ ಅರ್ಜಿ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಕಳೆದ 16 ವರ್ಷಗಳಿಂದ ಈ ಪ್ರಕರಣದ ಕುದಿ ಆರದಂತೆ ಗುಪ್ತ ಉದ್ದೇಶದಿಂದ ನೋಡಿಕೊಂಡು ಬಂದವರಲ್ಲಿ ಸೆಟಲ್ವಾಡ್ ಕೂಡ ಒಬ್ಬರು ಎಂದು ಆರೋಪಿಸಿತ್ತು. ಇಂತಹವರು ವಿಚಾರಣೆ ಎದುರಿಸಲೇಬೇಕು ಎಂದಿತ್ತು. ಆ ಒಂದು ವಾಕ್ಯದಿಂದಾಗಿ ಕೋರ್ಟ್ ಗೆ ದೂರು ಸಲ್ಲಿಸಿದವರನ್ನೇ ಕೊನೆಗೆ ಆರೋಪಿ ಮಾಡಲಾಯಿತು.
ಈ ವಿವಾದಾತ್ಮಕ ತೀರ್ಪಿನ ಆಧಾರದಲ್ಲೇ ಜೂನ್ 25ರಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ತೀಸ್ತಾ ಅವರನ್ನು ಮುಂಬೈ ನಿವಾಸದಲ್ಲಿ ಬಂಧಿಸಿತು. ಫೋರ್ಜರಿ ಮತ್ತು ಸುಳ್ಳು ಸಾಕ್ಷ್ಯಕ್ಕೆ ಸಂಬಂಧಿಸಿದ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ಗಲಭೆಗೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತಿತರರ ವಿರುದ್ಧ ನಕಲಿ ಸಾಕ್ಷ್ಯ ಸೃಷ್ಟಿಸಿದ, ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿದ ಹಾಗೂ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪವನ್ನು ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅಲ್ಲದೆ ಮತ್ತೋರ್ವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಮೇಲೆ ಹೊರಿಸಲಾಗಿದೆ.
ಹಾಗೆ ಅವರನ್ನು ಜೈಲಿಗೆ ತಳ್ಳುವುದಕ್ಕೆ ಕಾರಣವಾದ ಅಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನಗಳನ್ನು ಭಯಾನಕ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಮದನ್ ಬಿ. ಲೋಕುರ್ ಹೇಳಿದ್ದನ್ನು ದಿ ವೈರ್ ತನ್ನ ವರದಿಯೊಂದರಲ್ಲಿ ಉಲ್ಲೇಖಿಸಿದೆ. " ಸುಪ್ರೀಂ ಕೋರ್ಟ್ ಆ ವಾಕ್ಯ ಹೇಳುವ ಅಗತ್ಯವೇ ಇರಲಿಲ್ಲ. ಹೇಳಿದ್ದರೂ ಆಮೇಲೆ ಸ್ಪಷ್ಟೀಕರಣ ನೀಡಿ ತೀಸ್ತಾ ಅವರನ್ನು ಬಂಧಿಸುವುದು ನಮ್ಮ ಉದ್ದೇಶವಲ್ಲ ಎಂದು ನ್ಯಾಯಾಧೀಶರು ಹೇಳಬೇಕು. ಇಲ್ಲದಿದ್ದರೆ ಈ ದೇಶವನ್ನು ದೇವರೇ ಕಾಪಾಡಬೇಕು " ಎಂದು ಹೇಳಿದ್ದರು ನ್ಯಾ. ಮದನ್ ಲೋಕುರ್.
ತೀಸ್ತಾ ಸುಮಾರು 70 ದಿನಗಳನ್ನು ಜೈಲಿನಲ್ಲಿ ಕಳೆದರು. ಕಡೆಗೆ ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.
ಯಾರು ಈ ತೀಸ್ತಾ ಸೆಟಲ್ವಾಡ್ ?
ಮುಂಬೈ ಮೂಲದ ಪತ್ರಕರ್ತೆ ಮತ್ತು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ. ಅವರ ತಂದೆ ಅತುಲ್ ಸೆಟಲ್ವಾಡ್ ಹಿರಿಯ ನ್ಯಾಯವಾದಿ. ಅಜ್ಜ ಎಂ.ಸಿ ಸೆಟಲ್ವಾಡ್ ಭಾರತದ ಮೊದಲ ಅಟಾರ್ನಿ ಜನರಲ್ ಆಗಿ, 13 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದವರು.
2002ರ ಗುಜರಾತ್ ಗಲಭೆ ಸಂತ್ರಸ್ತರ ಕಾರಣಕ್ಕಾಗಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಅವರು ದೇಶಾದ್ಯಂತ ಈಗ ಹೆಚ್ಚು ಪರಿಚಿತರಾಗಿದ್ದಾರೆ. ಆದರೆ ಅವರು ಅದಕ್ಕಿಂತಲೂ ಮೊದಲೇ 1992 ರ ಮುಂಬೈ ಗಲಭೆ ಬಳಿಕದಿಂದಲೇ ಕೋಮುವಾದ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಅದಕ್ಕೂ ಮೊದಲು 1984 ರ ಭೀವಂಡಿ ಕೋಮು ಗಲಭೆಯ ಬಗ್ಗೆ ವರದಿ ಮಾಡಿದ್ದ ಅವರು ಕೋಮು ಹಿಂಸಾಚಾರದ ಭೀಕರತೆಯನ್ನು ಸಮೀಪದಿಂದ ನೋಡಿದ್ದರು.
2002ರ ಗಲಭೆಗಳ ನಂತರ ಸಂತ್ರಸ್ತರನ್ನು ಬೆಂಬಲಿಸಲು ರಚಿಸಲಾದ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ ತೀಸ್ತಾ. 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.
ಪತ್ರಕರ್ತೆಯಾಗಿ ವೃತ್ತಿಜೀವನ ಪ್ರಾರಂಭಿಸುವ ಮೊದಲು ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಕರ್ತೆಯಾಗಿ ಅವರು ಒಂದು ದಶಕದ ಕಾಲ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ, ಬ್ಯುಸಿನೆಸ್ ಇಂಡಿಯಾ ನಿಯತಕಾಲಿಕ ಮತ್ತಿತರ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ.
ಪತ್ರಿಕೋದ್ಯಮದಲ್ಲಿ ಸುಮಾರು ಒಂದು ದಶಕವನ್ನು ಕಳೆದರೂ, ತೀಸ್ತಾ ಹೆಚ್ಚು ಹೆಸರಾಗಿರುವುದು ಕೋಮುವಾದದ ವಿರುದ್ಧ ಮತ್ತು ನಾಗರಿಕ ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಮೂಲಕ.
1992 ರ ಭೀಕರ ಮುಂಬೈ ಗಲಭೆಯ ಬಳಿಕ ಅವರು ಹಾಗು ಅವರ ಪತಿ ಜಾವೇದ್ ಆನಂದ್ ತಮ್ಮ ಉದ್ಯೋಗಗಳನ್ನು ಬಿಟ್ಟು 1993ರಲ್ಲಿ Communalism Combat ಎಂಬ ನಿಯತಕಾಲಿಕ ಪ್ರಾರಂಭಿಸಿದರು. ಆಮೇಲೆ ಎರಡು ದಶಕಗಳ ಕಾಲ ಈ ನಿಯತಕಾಲಿಕ ಹಾಗು ಹೋರಾಟಗಳ ಮೂಲಕ ಕೋಮುವಾದದ ವಿರುದ್ಧ ಹೋರಾಡಲು ತಮ್ಮನ್ನು ಸಮರ್ಪಿಸಿಕೊಂಡರು.
ತೀಸ್ತಾ, 2002ರ ಹಿಂಸಾಚಾರದ ಸಂತ್ರಸ್ತರಿಗಾಗಿ ಕೆಲಸ ಮಾಡುವುದರ ಹೊರತಾಗಿ, ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅವುಗಳಲ್ಲಿ, ಅಲ್ಪಸಂಖ್ಯಾತರ ವಿರುದ್ಧದ ಪಕ್ಷಪಾತ ಮತ್ತು ಪೂರ್ವಗ್ರಹಗಳನ್ನು ಶಾಲಾ ಪಠ್ಯಪುಸ್ತಕಗಳಿಂದ ತೆಗೆದು ಮರುರಚಿಸುವ ಉದ್ದೇಶದ "ಖೋಜ್ " ಯೋಜನೆಯೂ ಒಂದು. ಅವರು ಮಹಿಳೆಯರು, ದಲಿತರು ಮತ್ತು ಮುಸ್ಲಿಮರ ಹಕ್ಕುಗಳಿಗಾಗಿ ನಿರಂತರ ದನಿಯೆತ್ತುತ್ತ ಬಂದಿದ್ದಾರೆ.
ಯಾವಾಗ ಅವರು 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಸರಕಾರ ಹಾಗು ಸಿಎಂ ನರೇಂದ್ರ ಮೋದಿ ಅವರ ಪಾತ್ರವೂ ಇದೆ ಎಂದು ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಪ್ರಾರಂಭಿಸಿದರೋ ಆಗ ಪ್ರಭುತ್ವ ಅವರನ್ನು ಶತ್ರುವೆಂಬಂತೆ ನೋಡಿತು. 2004 ರಲ್ಲಿ ಅವರ ಹೋರಾಟದ ಫಲವಾಗಿ ಬೆಸ್ಟ್ ಬೇಕರಿ ಹತ್ಯಾಕಾಂಡ ಪ್ರಕರಣದ ತನಿಖೆ ಮಹಾರಾಷ್ಟ್ರಕ್ಕೆ ವರ್ಗಾವಣೆಯಾಯಿತು. ಇನ್ನೊಂದು ಪ್ರಕರಣದಲ್ಲಿ 21 ಮಂದಿಯ ಖುಲಾಸೆಯನ್ನು ರದ್ದುಗೊಳಿಸಿ ಮರುತನಿಖೆಗೆ ಆದೇಶವಾಯಿತು. ವಿಶ್ವ ಸಂಸ್ಥೆಯ ಅಂತರ್ ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಮುಂದೆಯೂ ತೀಸ್ತಾ ಗುಜರಾತ್ ಸರಕಾರದ ವಿರುದ್ಧ ಸಾಕ್ಷ್ಯ ಹೇಳಿದ್ದರು.
2015 ರಲ್ಲಿ ಔಟ್ ಲುಕ್ ಮ್ಯಾಗಝಿನ್ ನಲ್ಲಿ ಬರೆದ ಲೇಖನದಲ್ಲಿ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಅವರು ತೀಸ್ತಾ ಗುಜರಾತ್ ಹತ್ಯಾಕಾಂಡದ ಬಗ್ಗೆ ನಡೆಸಿದ ಅಪ್ರತಿಮ ಕಾನೂನು ಹೋರಾಟದದಿಂದ ಒಬ್ಬ ಸಚಿವೆಯೂ ಸೇರಿ 119 ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಈಗ ಅವರನ್ನು ಸಂತ್ರಸ್ತರಿಗೆ ಸಹಾಯ ಮಾಡದಂತೆ ತಡೆಯುವ ಷಡ್ಯಂತ್ರ ರೂಪಿಸಲಾಗಿದೆ. ಅವರನ್ನು ಬಂಧಿಸಿ ತನಿಖೆ ಮಾಡಲು ತೋರುತ್ತಿರುವ ಆತುರ ಸೇಡಿನ ಲಕ್ಷಣಗಳನ್ನೇ ತೋರಿಸುತ್ತಿದೆ ಎಂದಿದ್ದರು. ಕ್ರಮೇಣ ತೀಸ್ತಾ ಅವರು ಸಲ್ಲಿಸಿದ್ದ ಎಲ್ಲ ಮನವಿಗಳು ಕೆಳಹಂತದಿಂದ ಸುಪ್ರೀಂ ಕೋರ್ಟ್ ವರೆಗೆ ಎಲ್ಲೆಡೆ ವಜಾಗೊಂಡವು.
ಆಗಲೇ ಅವರನ್ನು ಸಿಲುಕಿಸುವ ಕೆಲಸವೂ ಶುರುವಾಯಿತು. 2002ರ ಗುಜರಾತ್ ಹತ್ಯಾಕಾಂಡದ ಸುತ್ತ ದೊಡ್ಡ ಪಿತೂರಿ ರಚಿಸಿ, ಮೋದಿ ಮತ್ತಿತರರನ್ನು ಗಲಭೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಅವರ ಹೊರಿಸಲಾಯಿತು. ಈ ಉದ್ದೇಶದ ಭಾಗವಾಗಿ ಅವರು ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಂದ 30 ಲಕ್ಷ ಪಡೆದಿದ್ದಾರೆ ಎಂದೂ ಪ್ರಾಸಿಕ್ಯೂಷನ್ ಆರೋಪಿಸಿದೆ.
ಆದರೆ, ಇತರರಿಗೆ ನ್ಯಾಯ ಒದಗಿಸುವುದಕ್ಕೋಸ್ಕರ ತನ್ನ ವೈಯಕ್ತಿಕ ನೆಮ್ಮದಿಯ ಬದುಕನ್ನೇ ಒತ್ತೆಯಿಟ್ಟು ದಶಕಗಳಿಂದ ಹೋರಾಡುತ್ತಿರುವ ಅವರಿಗೆ ಯಾರಿಂದಲೋ ಹಣ ಪಡೆಯುವ ಅಗತ್ಯ ಖಂಡಿತ ಇಲ್ಲ ಎಂಬುದು ತೀಸ್ತಾ ಅವರ ಪರವಾಗಿರುವವರ ವಾದ.
ಮೋದಿಯ ಕಟು ಟೀಕಾಕಾರರಾದ ತೀಸ್ತಾ, 2002ರ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಹಂಬಲದಿಂದ ನಡೆಸಿದ ಹೋರಾಟ, ಅದೇ ಹತ್ಯಾಕಾಂಡ ಪ್ರಕರಣದಲ್ಲಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರಕ್ಕೆ ಒಂದು ನೆಪವಾಗಿ ಸಿಕ್ಕಿತ್ತು. ಮೊನ್ನೆ ಅವರಿಗೆ ಜಾಮೀನು ತಿರಸ್ಕರಿಸುವಾಗಲೂ " ದೇಶದ ಪ್ರಧಾನಿಯನ್ನೇ ಪ್ರಶ್ನಿಸುತ್ತಾರೆ " ಎಂದು ಗುಜರಾತ್ ಹೈಕೋರ್ಟ್ ಹೇಳಿದ್ದು ಇದೇ ಧಾಟಿಯಲ್ಲಿ.
ಆದರೆ ದೇಶದಾದ್ಯಂತ ಮತ್ತು ಜಗತ್ತಿನಾದ್ಯಂತ ತೀಸ್ತಾ ಪರವಾದ ದನಿಗಳು ಅವತ್ತಿನಿಂದ ಇವತ್ತಿಗೂ ಇವೆ.
ಆಕೆಯ ಬಂಧನವನ್ನು ವಿರೋಧಿಸಿ ದೇಶದ ಹಲವೆಡೆ ಮಾತ್ರವಲ್ಲದೆ, ಅವರ ಬಿಡುಗಡೆಗೆ ಒತ್ತಾಯಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು.
ಅಸ್ಸಾಂ ನಲ್ಲೂ ಎನ್ ಆರ್ ಸಿ ಯಿಂದ ಅನ್ಯಾಯಕ್ಕೊಳಗಾದ ಸಾವಿರಾರು ಸಂತ್ರಸ್ತರಿಗೆ ತೀಸ್ತಾ ತಮ್ಮ ಸಂಸ್ಥೆಯ ಮೂಲಕ ನೆರವಿನ ಹಸ್ತ ಚಾಚಿದ್ದಾರೆ. ಪತ್ರಕರ್ತೆಯಾಗಿ, ಹೋರಾಟಗಾರ್ತಿಯಾಗಿ ತೀಸ್ತಾ ಅವರ ಛಲ, ಜಾತ್ಯತೀತ ತತ್ವಕ್ಕೆ ಅವರ ಅಚಲ ಬದ್ಧತೆ, ನಿಷ್ಠೆ ಹಾಗು ಅಪ್ರತಿಮ ಹೋರಾಟಕ್ಕೆ ಹತ್ತು ಹಲವು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಸ್ಲೊವೇನಿಯಾದಲ್ಲಿ ನಡೆದ 55ನೇ ಅಂತರರಾಷ್ಟ್ರೀಯ ಶಾಂತಿ ಬರಹಗಾರರ ಸಮಿತಿ ಸಭೆಯಲ್ಲಿ ಸೆಟಲ್ವಾಡ್ ಅವರಿಗಾಗಿ ಖಾಲಿ ಕುರ್ಚಿಯನ್ನು ಮೀಸಲಿಟ್ಟು ಅವರನ್ನು ಗೌರವಿಸಲಾಗಿತ್ತು.
ತೀಸ್ತಾ ಎಂಬುದು ಹಿಮಾಲಯ ಪ್ರದೇಶದಲ್ಲಿ ಹರಿಯುವ 400 ಕಿಮೀ ಗಳಿಗೂ ಹೆಚ್ಚು ಉದ್ದದ ನದಿಯೊಂದರ ಹೆಸರು. ತಮ್ಮ ಆತ್ಮಕತೆಗೆ ಸಂವಿಧಾನದ ಕಾಲಾಳು ಎಂದೇ ಹೆಸರಿಟ್ಟಿರುವ ತೀಸ್ತಾ ಸೆಟಲ್ವಾಡ್ ಕೂಡ ಯಾವುದೇ ಷಡ್ಯಂತ್ರ, ಸೇಡಿನ ಕ್ರಮಗಳು ಎದುರಾದರೂ ನಿಲ್ಲದೆ ತನ್ನ ಹೋರಾಟ ಮುಂದುವರಿಸುತ್ತಾ ಸದಾ ಹರಿಯುತ್ತಲೇ ಇರುವ ಪ್ರತಿರೋಧದ ನದಿ.







