ದೀಪಿಂದರ್ ಗೋಯಲ್ ಅವರ ‘Temple’ ಸಾಧನದ ಬಗ್ಗೆ ಆರೋಗ್ಯ ತಜ್ಞರ ಕಳವಳ ಏಕೆ?

Photo Credit : x
ಝೊಮ್ಯಾಟೊ ಸಹ-ಸಂಸ್ಥಾಪಕ ದೀಪಿಂದರ್ ಗೋಯಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ‘ದಿಲಿವರ್ಡಾಕ್’ (TheLiverDoc) ಎಂದೇ ಹೆಸರುವಾಸಿಯಾಗಿರುವ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಗೋಯಲ್ ಅವರ ಮುಂಬರುವ 85,000 ರೂ. ಬೆಲೆಯ ‘ಟೆಂಪಲ್’ (Temple) ಎಂಬ ಹೊಸ ಆರೋಗ್ಯ ಸಾಧನವೇ ಈ ವಿವಾದಕ್ಕೆ ಕಾರಣ.
ಎಕ್ಸ್ ಜಾಲತಾಣದಲ್ಲಿ ಆರಂಭವಾದ ಈ ವಾಕ್ಸಮರ ತೀವ್ರಗೊಂಡಿದ್ದು, ತಾವು ಈ ಸಾಧನವನ್ನು ಏಕೆ ಅಭಿವೃದ್ಧಿಪಡಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲು ಗೋಯಲ್ ಸಿದ್ಧರಾಗಿದ್ದಾರೆ.
ಸಾಧನದ ಮೇಲಿನ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಗೋಯಲ್, "ಟೆಂಪಲ್ ಒಂದು ವೇಳೆ ವಂಚನೆಯಾಗಿದ್ದು, ನಾವು ಹೇಳಿದ್ದು ಸುಳ್ಳಾಗಿದ್ದರೆ, ಅದನ್ನು ಬಳಸಿದ ಕೆಲವೇ ದಿನಗಳಲ್ಲಿ ಜನರಿಗೆ ಸತ್ಯ ಗೊತ್ತಾಗುತ್ತಿತ್ತು" ಎಂದು ಬರೆದುಕೊಂಡಿದ್ದರು.
ವೈದ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, "ನಾವು ನಮ್ಮ ತಂತ್ರಜ್ಞಾನವನ್ನು ನಂಬುತ್ತೇವೆ. ಜನರು ಹಣ ನೀಡಿ ಬಳಸುವಷ್ಟು ಇದು ಉಪಯುಕ್ತವಾಗಿದೆ. ನಿಮ್ಮ ಕಳವಳಗಳಿಗೆ ಇದು ಉತ್ತರ ನೀಡಿದೆ ಎಂದು ಭಾವಿಸುತ್ತೇವೆ. ಇಲ್ಲದಿದ್ದರೆ ಟೀಕಿಸುತ್ತಾ ಇರಿ" ಎಂದು ಸವಾಲು ಹಾಕಿದ್ದರು.
ಆರೋಗ್ಯ ತಜ್ಞರು ಈ ಸಾಧನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ವೈದ್ಯರು ‘ಟೆಂಪಲ್’ ಸಾಧನವನ್ನು ಆಡಂಬರ ಪ್ರದರ್ಶಿಸುವ ಕೋಟ್ಯಧಿಪತಿಗಳ "ದುಬಾರಿ ಆಟಿಕೆ" ಎಂದು ಕರೆದಿದ್ದರು.
►‘ಟೆಂಪಲ್’ ಸಾಧನದ ಕುರಿತು ವೈದ್ಯರ ಕಳವಳಗಳೇನು?
ದೀಪಿಂದರ್ ಗೋಯಲ್ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರಲ್ಲಿ, "ಮುಂದಿನ ಅಪ್ಡೇಟ್ಗಾಗಿ ಕಾಯಿರಿ. ತಮ್ಮನ್ನು ತಾವು ಶ್ರೇಷ್ಠರೆಂದು ಭಾವಿಸುವ ಭಾರತೀಯ ವೈದ್ಯರು ಇದನ್ನು ನೋಡದಿದ್ದರೂ ಪರವಾಗಿಲ್ಲ" ಎಂದು ವೈದ್ಯರನ್ನು ಕಾಲೆಳೆದಿದ್ದರು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ‘ದಿಲಿವರ್ಡಾಕ್’ ಎಂದೇ ಖ್ಯಾತರಾದ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್, ಗೋಯಲ್ ಅವರ ವಿವರಣೆಯನ್ನು "ಅರ್ಥವಿಲ್ಲದ ಮಾತು" ಎಂದು ಕರೆದಿದ್ದಾರೆ. "ಈ ಸಾಧನಕ್ಕೆ ಸಂಬಂಧಿಸಿದಂತೆ ಗೋಯಲ್ ಯಾವುದೇ ನೈಜ ಸಾಕ್ಷ್ಯ ಅಥವಾ ಪುರಾವೆ ನೀಡಿಲ್ಲ" ಎಂದು ಫಿಲಿಪ್ಸ್ ಬರೆದುಕೊಂಡಿದ್ದಾರೆ.
"ನಮ್ಮ ವಿಜ್ಞಾನ, ನಿಮ್ಮ ವಿಜ್ಞಾನ ಎಂದು ಪ್ರತ್ಯೇಕವಾಗಿ ಏನೂ ಇರುವುದಿಲ್ಲ. ತಪ್ಪು ವಿಜ್ಞಾನ, ಅರೆಬರೆ ವಿಜ್ಞಾನ ಹಾಗೂ ವಿಜ್ಞಾನದ ಹೆಸರಿನಲ್ಲಿ ನಡೆಯುವ ವಂಚನೆ ಎನ್ನುವುದಿರುತ್ತದೆ. ಟೆಂಪಲ್ ತಂಡ ಇವೆಲ್ಲವನ್ನೂ ಅಳವಡಿಸಿಕೊಂಡಿದೆ" ಎಂದು ಫಿಲಿಪ್ಸ್ ಆರೋಪಿಸಿದ್ದಾರೆ.
"‘ಟೆಂಪಲ್’ ಒಂದು ವಂಚನೆಯ ಸಾಧನ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. 'ನಾವು ನಿಮಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ' ಅಥವಾ 'ನಾವು ಪ್ರಯೋಗ ಮಾಡುತ್ತಿದ್ದೇವೆ' ಎಂಬ ನೆಪದಲ್ಲಿ ಈ ತಂಡ ಎಷ್ಟು ದಿನ ಜನರನ್ನು ವಂಚಿಸುತ್ತದೆ?" ಎಂದು ಫಿಲಿಪ್ಸ್ ಪ್ರಶ್ನಿಸಿದ್ದಾರೆ.
ಸಾಧನದ ಸಂಸ್ಥಾಪಕರು ಎಕ್ಸ್ ನಲ್ಲಿ ತಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ಫಿಲಿಪ್ಸ್ ತಿಳಿಸಿದ್ದಾರೆ. ಅಲ್ಲದೆ, ಈ ಸಾಧನವನ್ನು "ದೇಸಿ ತೆರಾನೋಸ್" (desi Theranos) ಎಂದು ಕರೆದಿದ್ದಾರೆ.
ರಕ್ತ ಪರೀಕ್ಷೆಯ ಸಾಧನದ ಬಗ್ಗೆ ಸುಳ್ಳು ಹಕ್ಕುಗಳನ್ನು ಪ್ರತಿಪಾದಿಸಿ ವಿವಾದಕ್ಕೀಡಾಗಿದ್ದ 'ತೆರಾನೋಸ್' ಸಂಸ್ಥೆ ಬಳಿಕ ಮುಚ್ಚಿಹೋಗಿತ್ತು. ಆ ಸಂಸ್ಥೆಯ ಸಂಸ್ಥಾಪಕಿ ಎಲಿಜಬೆತ್ ಹೋಮ್ಸ್ಗೆ 11 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗೋಯಲ್ ಅವರನ್ನು "ಆತ್ಮನಿರ್ಭರ ಭಾರತದ ಎಲಿಜಬೆತ್ ಹೋಮ್ಸ್" ಎಂದು ಫಿಲಿಪ್ಸ್ ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬ ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಝುಬಿನ್ ಶರ್ಮಾ, "ನಾವು ಯಾವುದಕ್ಕೂ ವಿರುದ್ಧವಾಗಿಲ್ಲ! ಈ ಸಾಧನವು ದೇಹದ ಏನನ್ನು ಅಳೆಯುತ್ತದೆ ಎಂಬುದನ್ನಷ್ಟೇ ನಮಗೆ ತಿಳಿಸಿ?" ಎಂದು ಸರಣಿ ಪೋಸ್ಟ್ ಗಳಲ್ಲಿ ಪ್ರಶ್ನಿಸಿದ್ದಾರೆ.
"ಯಾವುದೇ ಕ್ಲಿನಿಕಲ್ ಸಂಶೋಧನೆ ಅಥವಾ ವೈದ್ಯಕೀಯ ಪರಿಶೀಲನೆ ಇಲ್ಲದೆ ಟೆಂಪಲ್ ಸಾಧನವನ್ನು ಮಾರುಕಟ್ಟೆಗೆ ತರುತ್ತಿರುವುದಕ್ಕೆ ಧನ್ಯವಾದಗಳು. ಸಾಧನದ ಮೇಲೆ ಖರ್ಚು ಮಾಡಿದ ಹಣವನ್ನು ಭಾರತ ಎದುರಿಸುತ್ತಿರುವ ನೈಜ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಸುಲಭವಾಗಿ ಬಳಸಬಹುದಿತ್ತು" ಎಂದು ಡಾ. ಶರ್ಮಾ ವ್ಯಂಗ್ಯವಾಡಿದ್ದಾರೆ.
►ದುಬಾರಿ ಆಟಿಕೆ
ಮಿದುಳಿನ ರಕ್ತಸಂಚಾರವನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂಬ ಟೆಂಪಲ್ ಸಾಧನದ ಪ್ರತಿಪಾದನೆಯನ್ನು ವೈದ್ಯರು ತಳ್ಳಿಹಾಕಿರುವುದು ಇದೇ ಮೊದಲೇನಲ್ಲ.
ದೆಹಲಿ ಏಮ್ಸ್ (AIIMS)ನಲ್ಲಿ ತರಬೇತಿ ಪಡೆದ ರೇಡಿಯಾಲಜಿಸ್ಟ್ ಡಾ. ಸುವ್ರಂಕರ್ ದತ್ತಾ, ಗೋಯಲ್ ಧರಿಸಿದ್ದ ಸಾಧನವನ್ನು ವೈಜ್ಞಾನಿಕ ಆಧಾರವಿಲ್ಲದ್ದು ಎಂದು ತಿರಸ್ಕರಿಸಿದ್ದಾರೆ. ಇದನ್ನು ಕೋಟ್ಯಧಿಪತಿಗಳ "ದುಬಾರಿ ಆಟಿಕೆ" ಎಂದು ಕರೆದಿದ್ದಾರೆ.
"ಹೃದಯ ಸಂಬಂಧಿ ಕಾಯಿಲೆಗಳನ್ನು ಮುನ್ಸೂಚಿಸುವ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಯಾಗಿ ನಾನು ಸ್ಪಷ್ಟಪಡಿಸುವುದೇನೆಂದರೆ, ಈ ಸಾಧನಕ್ಕೆ ಪ್ರಸ್ತುತ ಯಾವುದೇ ವೈಜ್ಞಾನಿಕ ಆಧಾರವಿಲ್ಲ" ಎಂದು ಡಾ. ದತ್ತಾ ಬರೆದುಕೊಂಡಿದ್ದಾರೆ.
ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಇಂತಹ ಸಾಧನಗಳ ಮೇಲೆ ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯರ್ಥ ಮಾಡಬೇಡಿ ಎಂದು ಅವರು ಜನರಿಗೆ ಸಲಹೆ ನೀಡಿದ್ದಾರೆ.
ಮುಂಬೈನ ಜೈನೋವಾ ಶಲ್ಬಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ವಿಶ್ವನಾಥನ್ ಅಯ್ಯರ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಾಧನವನ್ನು ಹಣೆಯ ಪಕ್ಕದಲ್ಲಿ ಧರಿಸುವ ವಿಧಾನವೇ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ ಅಲ್ಲಿರುವ ಸೆನ್ಸಾರ್ಗಳು ಕೇವಲ ಚರ್ಮದ ಮೇಲ್ಮೈಯಲ್ಲಿನ ಸಂಕೇತಗಳನ್ನು ಮಾತ್ರ ಗ್ರಹಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಇಂತಹ ಸಾಧನಗಳು ಚರ್ಮದ ಮೇಲ್ಮೈಯಲ್ಲಿನ ಸಂಕೇತಗಳನ್ನು ಗ್ರಹಿಸಲು ಸೀಮಿತವಾಗಿವೆಯೇ ಹೊರತು, ಎಂಆರ್ಐ (MRI) ಯಂತೆ ನೇರವಾಗಿ ಮಿದುಳಿನ ರಕ್ತಸಂಚಾರವನ್ನು ಅಳೆಯಲು ಸಾಧ್ಯವಿಲ್ಲ. ಎಂಆರ್ಐ ಸ್ಕ್ಯಾನ್ ಗಳು ಆಸ್ಪತ್ರೆಗಳಲ್ಲಿ ನಡೆಸುವ ಜಟಿಲ ಪರೀಕ್ಷೆಗಳಾಗಿದ್ದು, ಧರಿಸಬಹುದಾದ ಸಣ್ಣ ಗ್ಯಾಜೆಟ್ ಗಳು ಇವುಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ" ಎಂದು ಡಾ. ಅಯ್ಯರ್ ಸ್ಪಷ್ಟಪಡಿಸಿದ್ದಾರೆ.
ಸೆನ್ಸಾರ್ಗಳು ನಾಡಿಮಿಡಿತ ಅಥವಾ ಚರ್ಮದ ಬದಲಾವಣೆಗಳನ್ನು ಪರೋಕ್ಷವಾಗಿ ದಾಖಲಿಸಬಹುದಾದರೂ, ಅವುಗಳನ್ನು ಮಿದುಳಿನ ನೈಜ ರಕ್ತಸಂಚಾರ ಅಥವಾ ಚಟುವಟಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸೂಕ್ತ ಕ್ಲಿನಿಕಲ್ ಸಾಕ್ಷ್ಯಗಳು ಲಭ್ಯವಾಗುವವರೆಗೆ ‘ಟೆಂಪಲ್’ ಅನ್ನು ವೈದ್ಯಕೀಯ ಸಾಧನವಾಗಿ ನೋಡದೆ, ಕೇವಲ ಫಿಟ್ನೆಸ್ ಪ್ರಯೋಗವಾಗಿ ಮಾತ್ರ ಪರಿಗಣಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
►‘ಇದು ವೈದ್ಯಕೀಯ ಸಾಧನವಲ್ಲ’: ಗೋಯಲ್ ಸ್ಪಷ್ಟನೆ
ತಮ್ಮ ಪೋಸ್ಟ್ ನಲ್ಲಿ ವಿವರಣೆ ನೀಡಿದ್ದ ಗೋಯಲ್, "ಟೆಂಪಲ್ ಒಂದು ವೈದ್ಯಕೀಯ ಸಾಧನವಲ್ಲ. ಇದು ಕೇವಲ ಫಿಟ್ನೆಸ್ ಹಾಗೂ ವೆಲ್ನೆಸ್ ಟ್ರ್ಯಾಕರ್. ಭವಿಷ್ಯದಲ್ಲಿ ನಮ್ಮ ಪರೀಕ್ಷೆಗಳಿಗೆ ವೈದ್ಯಕೀಯ ಮಾನ್ಯತೆ ದೊರೆತರೆ ಅದನ್ನು ತಿಳಿಸುತ್ತೇವೆ" ಎಂದು ಹೇಳಿದ್ದಾರೆ.
ಆದರೆ, ಈ ಹಿಂದೆ ಮಾತನಾಡಿದ್ದಾಗ "ಟೆಂಪಲ್ ಸಾಧನವು ಎದೆಗೆ ಧರಿಸುವ ಇಸಿಜಿ ಪಟ್ಟಿಗಳಿಗಿಂತಲೂ ನಿಖರವಾಗಿ ಹೃದಯ ಬಡಿತವನ್ನು ಟ್ರ್ಯಾಕ್ ಮಾಡುತ್ತದೆ" ಎಂದು ಅವರು ವಾದಿಸಿದ್ದರು.
ಈ ಸಾಧನವನ್ನು ಜಗತ್ತಿನ ಮೊದಲ "ಸುತ್ತಮುತ್ತಲಿನ ಶಬ್ದಕ್ಕೆ ಕಿವಿಗೊಡದ" ವಾಯ್ಸ್ ಎಐ ಸಾಧನ ಎಂದು ಗೋಯಲ್ ಬಣ್ಣಿಸಿದ್ದಾರೆ. ಧರಿಸಿದವರು ಮಾತನಾಡುವಾಗ ಉಂಟಾಗುವ ಸೂಕ್ಷ್ಮ ಕಂಪನಗಳನ್ನು ಗ್ರಹಿಸಿ, ಅವುಗಳನ್ನು ಪಠ್ಯವಾಗಿ ಪರಿವರ್ತಿಸುವ ಮೋಷನ್ ಸೆನ್ಸಾರ್ಗಳನ್ನು ಇದು ಹೊಂದಿದೆ.
ಮೈಕ್ರೊಫೋನ್, ಕ್ಯಾಮೆರಾ ಅಥವಾ ಸ್ಕ್ರೀನ್ ಇಲ್ಲದೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಡಬಲ್ ಟ್ಯಾಪ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದು.
ಧ್ವನಿಯನ್ನು ದಾಖಲಿಸುವುದರ ಜೊತೆಗೆ, ದೈನಂದಿನ ಆಹಾರ, ವ್ಯಾಯಾಮ ಹಾಗೂ ತಲೆನೋವು, ತಲೆಸುತ್ತಿನಂತಹ ಆರೋಗ್ಯ ಸಮಸ್ಯೆಗಳನ್ನು ದಾಖಲಿಸಲು ಇದು ನೆರವಾಗುತ್ತದೆ ಎಂದು ಗೋಯಲ್ ತಿಳಿಸಿದ್ದಾರೆ.
►ಏನಿದು ‘ಟೆಂಪಲ್’ ಸಾಧನ?
ಟೆಂಪಲ್ ಎನ್ನುವುದು ಲೋಹದ ಬಣ್ಣದ ಕ್ಲಿಪ್ ಮಾದರಿಯ ಸಾಧನವಾಗಿದ್ದು, ಮಿದುಳಿನ ರಕ್ತಸಂಚಾರವನ್ನು ನೇರವಾಗಿ ಅಳೆಯುತ್ತದೆ ಎಂದು ಹೇಳಲಾಗಿದೆ. ಸಣ್ಣ ಎಂಆರ್ಐನಂತೆ ಕಾರ್ಯನಿರ್ವಹಿಸುವ ಈ ಸಾಧನವು ಮಿದುಳಿನ ರಕ್ತಸಂಚಾರದ ವೇಗವನ್ನು ಲೆಕ್ಕಹಾಕುತ್ತದೆ ಎಂಬುದು ಅದರ ಕುರಿತ ಪ್ರತಿಪಾದನೆ.
ಸಾಮಾನ್ಯವಾಗಿ ವಯಸ್ಸಾದಂತೆ ಮಿದುಳಿನ ರಕ್ತಸಂಚಾರದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಇದು ಮಿದುಳಿನ ಜೀವಕೋಶಗಳ ಉಳಿವಿಗೆ ಅತ್ಯಗತ್ಯ.
ಪ್ರಸ್ತುತ ‘ಟೆಂಪಲ್’ ಝೊಮ್ಯಾಟೊ ಸಂಸ್ಥೆಯ ಉತ್ಪನ್ನವಲ್ಲ ಹಾಗೂ ಸಾರ್ವಜನಿಕ ಅಥವಾ ವಾಣಿಜ್ಯ ಬಳಕೆಗೆ ಲಭ್ಯವಿಲ್ಲ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಉದ್ಯಮಿ ದೀಪಿಂದರ್ ಗೋಯಲ್ ಸುಳಿವು ನೀಡಿದ್ದಾರೆ.
ಸೌಜನ್ಯ: firstpost.com






