ಹತ್ತು ನಿಮಿಷಗಳ AI ಬಳಕೆ ಮನುಷ್ಯನ ಆಲೋಚನಾ ಕೌಶಲ್ಯದ ಮೇಲೆ ಪರಿಣಾಮ ಬೀರಲಿದೆ!

ಸಾಂದರ್ಭಿಕ ಚಿತ್ರ | Photo Credit : magnific
AI ಅನ್ನು ಕಡಿಮೆ ಬಳಸುವುದರಿಂದ ಬಳಕೆದಾರರ ಯೋಚಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನ ಹೇಳಿದೆ.
ಕೃತಕ ಬುದ್ಧಿಮತ್ತೆ (AI) ಅನೇಕ ವಿಷಯಗಳನ್ನು ಸರಳಗೊಳಿಸುತ್ತಿದೆ. ಒಂದು ರೆಕಾರ್ಡಿಂಗ್ ಲಿಪ್ಯಂತರ ಮಾಡಬೇಕೆಂದರೆ ಬಹಳ ದಿನಗಳು ಕಾಯಬೇಕಾಗಿಲ್ಲ. ಐಡಿಯಾಗಳು ಖಾಳಿಯಾಗಿದ್ದರೆ AI ನೆರವು ಕೇಳಬಹುದು. ChatGPT, ಕ್ಲೌಡ್ ಮತ್ತು ಜೆಮಿನಿ ನಮ್ಮ ಮನೆಗೆ ಬಂದುಬಿಟ್ಟಿವೆ. ಈ AI ಪರಿಕರಗಳ ಸ್ಫೋಟದ ನಡುವೆ ಹೊಸ ಸಂಶೋಧನೆಯೊಂದು ಮಾನವ ಮನಸ್ಸಿನ ಮೇಲೆ AI ಹೇಗೆ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆ ಎಚ್ಚರಿಸಿದೆ.
ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು 10 ನಿಮಿಷಗಳ AI ಬಳಕೆಯು ನಮ್ಮ ಆಲೋಚನಾ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ವಿವರಿಸಿದ್ದಾರೆ. AI ಅನ್ನು ಕಡಿಮೆ ಬಳಸುವುದರಿಂದ ಬಳಕೆದಾರರ ಯೋಚಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನ ಹೇಳಿದೆ.
ಹಾಗೆಂದು AI ಅನ್ನು ಶಿಕ್ಷಣ ಮತ್ತು ಕಾರ್ಯಸ್ಥಳಗಳಲ್ಲಿ ನಿಷೇಧಿಸಬೇಕು ಎಂದಲ್ಲ. ಜನರು AI ಸಹಾಯ ಪಡೆಯಬಹುದಾದರೂ, ಅದು ಯಾವ ರೀತಿಯ ಸಹಾಯ ನೀಡುತ್ತದೆ ಮತ್ತು ಯಾವಾಗ ನೀಡುತ್ತದೆ ಎನ್ನುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಅಧ್ಯಯನಕಾರರಲ್ಲಿ ಒಬ್ಬರಾದ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಮೈಕಲ್ ಬಕ್ಕರ್ ಹೇಳಿದ್ದಾರೆ.
ಸಂಶೋಧಕರ ತಂಡವು ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಆನ್ಲೈನ್ ಪೋರ್ಟಲ್ ಮೂಲಕ ಸರಳ ಗಣಿತ ಮತ್ತು ಓದುವ ಗ್ರಹಿಕೆ ಒಳಗೊಂಡಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕೇಳಿಕೊಂಡಿದೆ. ಆ ಕೆಲಸಕ್ಕಾಗಿ ಅವರಿಗೆ ವೇತನವನ್ನೂ ನೀಡಲಾಗಿದೆ. ಸಂಶೋಧಕರು ಮೂರು ಪರೀಕ್ಷೆಗಳನ್ನು ನಡೆಸಿದ್ದಾರೆ. ಪ್ರತಿಯೊಂದರಲ್ಲಿ ನೂರಾರು ಜನ ಭಾಗವಹಿಸಿದ್ದರು. ಅಧ್ಯಯನ ತಂಡವು ಭಾಗವಹಿಸಿದವರಲ್ಲಿ ಕೆಲವರಿಗೆ AI ಅಸಿಸ್ಟಂಟ್ ಬಳಸಿ ಸಮಸ್ಯೆ ಪರಿಹರಿಸುವ ಅವಕಾಶ ನೀಡಿದೆ. ಮತ್ತು AI ಅನ್ನು ಹಠಾತ್ ಆಗಿ ಹಿಂಪಡೆದಾಗ ಅವರ ಉತ್ತರಗಳಲ್ಲಿ ದೋಷ ಕಂಡುಬಂತು. ಸಮಸ್ಯೆ ಪರಿಹರಿಸಲು ತಡಬಡಾಯಿಸಿದ್ದಾರೆ. ಹೀಗಾಗಿ AI ಉತ್ಪಾದಕತೆಯನ್ನು ಹೆಚ್ಚಿಸಬಹುದಾದರೂ ಅದನ್ನು ಬಳಸುವ ಜನರ ಸಾಮರ್ಥ್ಯ ಕಡಿಮೆಯಾಗಲಿದೆ ಎಂದು ಅಧ್ಯಯನ ಹೇಳಿದೆ.
ಈ ಸಂಶೋಧನೆಯ ವಿವರಗಳು arXiv ನಲ್ಲಿ ಪ್ರಕಟವಾಗಿದೆ. “AI ನೆರವು ಪಡೆಯುವುದರಿಂದ ಸ್ವತಂತ್ರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ” ಎಂಬ ಶೀರ್ಷಿಕೆಯಡಿ ಸಂಶೋಧನಾ ವರದಿ ಪ್ರಕಟವಾಗಿದೆ. ಹತ್ತೇ ನಿಮಿಷಗಳ ಅಲ್ಪ ಸಮಯದ AI ಅಸಿಸ್ಟಂಟ್ ಬಳಕೆಯಿಂದಲೂ ಬಳಕೆದಾರರ ಕಾರ್ಯಕ್ಷಮತೆ ಕಡಿಮೆಯಾಗಿರುವುದು ಸಾಬೀತಾಗಿದೆ. AI ಅಸಿಸ್ಟಂಟ್ ಬಳಸದವರನ್ನು ಹೋಲಿಸಿದರೆ AI ಅಸಿಸ್ಟಂಟ್ ಬಳಸಿದವರು ಸರಳ ಸಮಸ್ಯೆಗಳನ್ನು ಸ್ವಂತವಾಗಿ ಪರಿಹರಿಸಲು ತಡಬಡಾಯಿಸಿದ್ದಾರೆ. ಆದರೆ ಸುಳಿವುಗಳು ಅಥವಾ ಸ್ಪಷ್ಟೀಕರಣಕ್ಕಾಗಿ AI ಬಳಕೆ ಮಾಡುವಾಗ ಗಮನಾರ್ಹ ದೌರ್ಬಲ್ಯ ಪತ್ತೆಯಾಗಿರಲಿಲ್ಲ.
AI ಹೇಗೆ ನಿಧಾನವಾಗಿ ಬಳಕೆದಾರರ ಕಾರ್ಯಕ್ಷಮತೆಯನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ವಿವರಿಸಿದೆ. AI ಸಾಮರ್ಥ್ಯವನ್ನು ಬೆಳೆಸಲು ಹೆಚ್ಚಾಗುತ್ತಿರುವ ವೆಚ್ಚವು ಅಂತಿಮವಾಗಿ ಮಾನವನ ಅಧಿಕಾರ ಕಳೆದುಕೊಳ್ಳುವಿಕೆಯ ಗಣನೀಯ ಅಪಾಯ ಉಂಟುಮಾಡಲಿದೆ ಎಂದು ಅಧ್ಯಯನ ಎಚ್ಚರಿಸಿದೆ. AI ಉತ್ಪಾದಕತೆ ಏರಿಸುವ ಜೊತೆಗೆ ಬಳಕೆದಾರರ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಗಮನ ಕೇಂದ್ರೀಕರಿಸಬೇಕು ಎಂದು ಅಧ್ಯಯನ ಒತ್ತಾಯಿಸಿದೆ. ಅಂತಿಮವಾಗಿ ಇದು ಅರಿವಿನ ಪ್ರಶ್ನೆ ಎಂದು ಬಕ್ಕರ್ ಹೇಳಿದ್ದಾರೆ.
ಪ್ರಸ್ತುತ ನಡೆದ ಸಂಶೋಧನೆಯ ಫಲಿತಾಂಶ ಕಳವಳಕಾರಿಯಾಗಿದೆ ಎಂದು ಅಧ್ಯಯನಕಾರರು ಭಾವಿಸಿದ್ದಾರೆ. “ದೀರ್ಘಕಾಲೀನ ಮಾನವ AI ಸಂವಹನದ ಬಗ್ಗೆ ವಿಶಾಲವಾದ ಕಾಳಜಿಗಳನ್ನು ನಿಯಂತ್ರಿತ ಪ್ರಾಯೋಗಿಕ ನೆಲೆಯಲ್ಲಿ ಅಧ್ಯಯನ ಮಾಡಲು ಬಯಸಿದ್ದೇವೆ” ಎಂದು ಬಕ್ಕರ್ ಹೇಳಿದ್ದಾರೆ.






