ಹದಿನೈದನೇ ವಿಧಾನಸಭೆ ಅವಧಿ: 224 ಶಾಸಕರಿಗೆ 16.32 ಕೋಟಿ ರೂ. ರೈಲ್ವೆ, ವಿಮಾನ ಭತ್ಯೆ

ಬೆಂಗಳೂರು : ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು 16.32 ಕೋ.ರೂ.ಯಷ್ಟು ಮೊತ್ತವನ್ನು ರೈಲ್ವೆ/ವಿಮಾನ ಭತ್ತೆ ಹೆಸರಿನಲ್ಲಿ ಪಡೆದಿದ್ದಾರೆ. ಮತ್ತೊಂದು ವಿಶೇಷವೆಂದರೆ ಬೃಹತ್ ಬೆಂಗಳೂರು ನಗರದಲ್ಲಿರುವ ಶಾಸಕರು ಸಹ 1.63 ಕೋ.ರೂ.ಯಷ್ಟು ಮೊತ್ತವನ್ನು ರೈಲ್ವೆ/ವಿಮಾನ ಭತ್ತೆ ಪಡೆದಿರುವುದು ಇದೀಗ ಬಹಿರಂಗವಾಗಿದೆ.
ರಸ್ತೆ ಪ್ರಯಾಣಕ್ಕೆ ಪ್ರತೀ ಕಿ.ಮೀ.ಗೆ 40 ರೂ.ನಂತೆ ಹಾಗೂ ರೈಲ್ವೆ ಟಿಕೆಟ್ ಮತ್ತು ವಿಮಾನಯಾನ ಬಿಲ್ ದರ ಜೊತೆಗೆ ಶೇ.25ರಷ್ಟು ಮೊತ್ತವನ್ನು ಕರ್ನಾಟಕ ವಿಧಾನಸಭೆಯು ಮರು ಪಾವತಿಸಲಿದೆ. ಪ್ರತೀ ಆರ್ಥಿಕ ವರ್ಷದಲ್ಲಿ ಸದಸ್ಯರು ಭಾರತದಲ್ಲಿ ವಿಮಾನ ಅಥವಾ ರೈಲ್ವೆ ಮೂಲಕ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಯಾಣಗಳಲ್ಲಿ ಒಬ್ಬರೇ ಅಥವಾ ಸಹಚರರೊಂದಿಗೆ ಪ್ರಯಾಣಿಸುವ ಉದ್ದೇಶಕ್ಕಾಗಿ ಎಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ 3,50,000 ರೂ.ಗಳನ್ನು ಎರಡು ಸಮಾನ ಕಂತುಗಳಲ್ಲಿ ಪಡೆಯಲು ಹಕ್ಕು ಹೊಂದಿದ್ದಾರೆ.
ಅದರಂತೆ ರಾಜ್ಯದ 224 ಶಾಸಕರು ಕಳೆದ 15ನೇ ವಿಧಾನಸಭೆ ಅವಧಿಯಲ್ಲಿ ಒಟ್ಟಾರೆ 16,32,21,676 ರೂ.ವನ್ನು ರೈಲ್ವೆ/ವಿಮಾನ ಭತ್ತೆಯಾಗಿ ಪಡೆದಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ the-file.inಗೆ ದಾಖಲೆಗಳು ಲಭ್ಯವಾಗಿವೆ. ರಾಜ್ಯದ ಬಹುತೇಕ ಶಾಸಕರಿಗೆ ಪ್ರಯಾಣ ಭತ್ತೆ ಎಂದು ಪ್ರತ್ಯೇಕವಾಗಿ ನೀಡುವ ಜೊತೆಯಲ್ಲಿಯೇ ರೈಲ್ವೇ/ವಿಮಾನ ಭತ್ತೆಯನ್ನೂ ನೀಡಲಾಗುತ್ತದೆ.
ವಿಧಾನಸಭೆಯ ಲೆಕ್ಕಪತ್ರ ಶಾಖೆಯು ಶಾಸಕರಿಗೆ ಮರು ಪಾವತಿಸಿರುವ ಮೊತ್ತದ ಮಾಹಿತಿಯನ್ನಷ್ಟೇ ಹಂಚಿಕೊಂಡಿದೆ. ಆದರೆ ಇದರಲ್ಲಿ ರೈಲ್ವೆ ಪ್ರಯಾಣ, ವಿಮಾನ ಪ್ರಯಾಣ ಎಂದು ಪ್ರತ್ಯೇಕಿಸಿಲ್ಲ. ವಿಶೇಷವೆಂದರೇ ಬೆಂಗಳೂರು ನಗರ ಶಾಸಕರೂ ಸಹ ರೈಲ್ವೇ/ವಿಮಾನ ಭತ್ತೆ ಪಡೆದಿದ್ದಾರೆ.
ಬೆಂಗಳೂರಿನ ಶಾಸಕರ ಪಟ್ಟಿ: ಬೆಂಗಳೂರು ನಗರದ ಝಮೀರ್ ಅಹ್ಮದ್ 5,90,000 ರೂ., ಮುನಿರತ್ನ 54,144 ರೂ., ಸೌಮ್ಯಾರೆಡ್ಡಿ 9,50,060 ರೂ., ಅಖಂಡ ಶ್ರೀನಿವಾಸ ಮೂರ್ತಿ 9,64,802 ರೂ., ಆರ್. ಅಶೋಕ್ 2,76, 986 ರೂ., ಬಿ.ಎ. ಬಸವರಾಜ 2,55,449 ರೂ., ದಿನೇಶ್ ಗುಂಡೂರಾವ್ 9,90,000 ರೂ., ಡಾ.ಅಶ್ವತ್ಥ ನಾರಾಯಣ ಸಿ.ಎನ್ . 2,76, 986 ರೂ., ಗೋಪಾಲಯ್ಯ ಕೆ . 2,64, 428 ರೂ., ಕೆ.ಜೆ. ಜಾರ್ಜ್ 7,27,674 ರೂ., ಹಾರೀಸ್ ಎನ್.ಎ. 8,78,755 ರೂ., ಕೃಷ್ಣಪ್ಪ ಎಂ.(ವಿಜಯನಗರ) 9,64,802 ರೂ., ಕೃಷ್ಣಪ್ಪ ಎಂ. (ಬೆಂಗಳೂರು ದಕ್ಷಿಣ ) 9,20,000 ರೂ., ಕೃಷ್ಣಬೈರೇಗೌಡ 7,27,674 ರೂ., ಮಂಜುನಾಥ್ ಆರ್ . 9,64,802 ರೂ., ಶರತ್ ಬಚ್ಚೇಗೌಡ 6,52,244 ರೂ., ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. 7,56,007 ರೂ., ರಘು ಎಸ್. 9,90,000 ರೂ., ರಾಮಲಿಂಗಾರೆಡ್ಡಿ 9,64,802 ರೂ., ರವಿ ಸುಬ್ರಮಣ್ಯ ಎಲ್.ಎ. 9,90,000 ರೂ., ರೋಷನ್ ಬೇಗ್ 2,39,230 ರೂ., ಸತೀಶ್ ರೆಡ್ಡಿ ಎಂ. 5,40,300 ರೂ., ಸುರೇಶ್ ಬಿ.ಎಸ್. 8,53,557 ರೂ., ಸುರೇಶ್ ಕುಮಾರ್ ಎಸ್. 2,76,986 ರೂ., ಉದಯ್ ಬಿ. ಗರುಡಾಚಾರ್ 9,64,802 ರೂ., ವಿಶ್ವನಾಥ್ ಎಸ್.ಆರ್. 2,82,446 ರೂ. ರೈಲ್ವೆ/ವಿಮಾನ ಭತ್ತೆ ಪಡೆದಿರುವುದು ಗೊತ್ತಾಗಿದೆ.






