ಮುಂದಿನ ತಲೆಮಾರಿನ ಹಾರುವ ಕಾರನ್ನು ಅನಾವರಣಗೊಳಿಸಿದ ಟೆಸ್ಲಾ

ಟೆಸ್ಲಾ ತನ್ನ ಮುಂದಿನ ತಲೆಮಾರಿನ ರೋಡ್ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಮರುವಿನ್ಯಾಸಗೊಳಿಸಲಾದ ಆವೃತ್ತಿಯನ್ನು ಪರಿಚಯಿಸಿದೆ. ಮೂಲಮಾದರಿಯನ್ನು ಮೊದಲ ಬಾರಿಗೆ ಪ್ರಸ್ತುತಪಡಿಸಿದ ಸುಮಾರು ಒಂಬತ್ತು ವರ್ಷಗಳ ಬಳಿಕ ಪರಿಚಯಿಸಿರುವ ಈ ಕಾರಿನಲ್ಲಿ ಅಂತರ್ನಿರ್ಮಿತ ಥ್ರಸ್ಟರ್ಗಳು ಮತ್ತು ಹಾರುವ ಕಾರಿನಂತಹ ಕುಶಲತೆಗಳಿವೆ. ಎರಡು ಆಸನಗಳ ಈ ವಾಹನದ ಉತ್ಪಾದನೆಯು 2028ರಲ್ಲಿ ಪ್ರಾರಂಭವಾಗಲಿದೆ ಎಂದು ಕಂಪೆನಿ ಹೇಳಿದೆ.
ಗುರುವಾರ ಟೆಕ್ಸಾಸ್ ನ ಮೆಕ್ಗ್ರಗರ್ನಲ್ಲಿರುವ ಸ್ಪೇಸ್ಎಕ್ಸ್ ಪರೀಕ್ಷಾ ಸ್ಥಳದಲ್ಲಿ ನಡೆದ ಪ್ರದರ್ಶನದಲ್ಲಿ ವಾಹನವು ಸಕ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ರ್ಯಾಂಪ್ ನಲ್ಲಿ ತಲೆಕೆಳಗಾಗಿ ಚಾಲನೆ ಮಾಡುವುದು, ಗಾಳಿಯಲ್ಲಿ ಮಧ್ಯಕ್ಕೆ ತಿರುಗುವುದು ಮತ್ತು ಅಂತರ್ನಿರ್ಮಿತ ಥ್ರಸ್ಟರ್ಗಳ ಸಹಾಯದಿಂದ ಇಳಿಯುವುದನ್ನು ತೋರಿಸಲಾಗಿದೆ. ರೋಡ್ಸ್ಟರ್ ಅನ್ನು ಎಲಾನ್ ಮಸ್ಕ್ ಅವರ ರಾಕೆಟ್ ಕಂಪೆನಿ ಸ್ಪೇಸ್ಎಕ್ಸ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಈ ವೈಶಿಷ್ಟ್ಯಗಳ ಕಾನೂನುಬದ್ಧತೆ ಮತ್ತು ಪ್ರಾಯೋಗಿಕ ಬಳಕೆ ಸ್ಪಷ್ಟವಾಗಿಲ್ಲ. ರೋಡ್ಸ್ಟರ್ ಒಂದು ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿ ಗಂಟೆಗೆ ಶೂನ್ಯದಿಂದ 60 ಮೈಲುಗಳ ವೇಗವನ್ನು ತಲುಪಬಹುದು. ಗಂಟೆಗೆ 230 ಮೈಲುಗಳಿಗಿಂತ (ಸುಮಾರು 370 ಕಿ.ಮೀ.) ಹೆಚ್ಚಿನ ವೇಗವನ್ನು ಸಾಧಿಸಬಹುದು ಎಂದು ಮಸ್ಕ್ ಹೇಳಿದ್ದಾರೆ.
ಟೆಸ್ಲಾ ರೋಡ್ಸ್ಟರ್ನ ಮೂಲ ಮಾದರಿಯನ್ನು 2017ರಲ್ಲಿ ಅನಾವರಣಗೊಳಿಸಿತ್ತು. 2020ರಲ್ಲಿ ವಿತರಣೆ ಆರಂಭಿಸುವುದಾಗಿ ಭರವಸೆ ನೀಡಿತ್ತು. ಇದೀಗ ಉತ್ಪಾದನೆಯ ಸಮಯವನ್ನು 2028ಕ್ಕೆ ಮುಂದೂಡಲಾಗಿದೆ. ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸಿದ್ಧವಾಗಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು.
ನಾಲ್ಕು ಆಸನಗಳ ರೋಡ್ಸ್ಟರ್ ಒಂದೇ ಚಾರ್ಜ್ನಲ್ಲಿ 620 ಮೈಲುಗಳ (ಸುಮಾರು 1,000 ಕಿ.ಮೀ.) ವ್ಯಾಪ್ತಿಯನ್ನು ಒದಗಿಸುತ್ತದೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು.






