ಟೆಕ್ಸ್‌ಟೈಲ್ ಪಾರ್ಕ್ಸ್ ಯೋಜನೆ: ಇನ್ನೂ ಅನುದಾನ ಒದಗಿಸದ ಕೇಂದ್ರ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ನೆಲ ಗುಜರಾತ್ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಯೋಜನೆಯಡಿಯಲ್ಲಿ ಉದ್ದೇಶಿತ ಟೆಕ್ಸ್‌ಟೈಲ್ ಪಾರ್ಕ್ಸ್ ನಿರ್ಮಾಣ ಯೋಜನೆಗೆ ಒಟ್ಟು ಹೂಡಿಕೆ ಪೈಕಿ ಇನ್ನು 68,400 ಕೋಟಿ ರೂ. ಅನುದಾನವನ್ನು ಕೇಂದ್ರವು ಒದಗಿಸಿಲ್ಲ.
ಲೋಕಸಭೆಯಲ್ಲಿ ಈ ಕುರಿತು ಸಂಸದ ಜಿ.ಲಕ್ಷ್ಮೀನಾರಾಯಣ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು ಒದಗಿಸಿರುವ ಉತ್ತರದಲ್ಲಿ ಈ ಮಾಹಿತಿಯಿದೆ.
ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ಪಿಎಂ ಮಿತ್ರ ಯೋಜನೆಯಡಿ ಟೆಕ್ಸ್‌ಟೈಲ್ ಪಾರ್ಕ್ಸ್ ಯೋಜನೆಗೆ 1,700 ಕೋಟಿ ರೂ. ಗುಜರಾತ್‌ನ ನವಸಾರಿಯಲ್ಲಿ 13,084 ಕೋಟಿ ರೂ. ಹೂಡಿಕೆ ಆಗಬೇಕಿತ್ತು. ಆದರೆ 2026ರ ಜುಲೈ 21ರ ಅಂತ್ಯಕ್ಕೆ ಕಲಬುರಗಿ ಮತ್ತು ನವಸಾರಿಗೆ ಬಿಡಿಗಾಸು ನೀಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಜವಳಿ ಪಾರ್ಕ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಲಬುರಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ಸ್ ನಿರ್ಮಾಣಕ್ಕೆ ಒಟ್ಟು ಹೂಡಿಕೆಯಾದ 1,700 ಕೋಟಿ ರೂ.ನಲ್ಲಿ ಬಿಡಿಗಾಸೂ ನೀಡಿಲ್ಲ ಎಂದು ಕೇಂದ್ರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಜವಳಿ ಉದ್ಯಮದ ಸಂಪೂರ್ಣ ಮೌಲ್ಯ ಸರಪಳಿಗೆ ಸಮಗ್ರ, ಬೃಹತ್ ಪ್ರಮಾಣದ ಹಾಗೂ ಆಧುನಿಕ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ, 2021-22 ರಿಂದ 2027-28ರ ಅವಧಿಗೆ 4,445 ಕೋಟಿ ರೂ. ವೆಚ್ಚದೊಂದಿಗೆ 7 ಪ್ರಧಾನಮಂತ್ರಿ ಮೆಗಾ ಸಮಗ್ರ ಜವಳಿ ಪ್ರದೇಶ ಮತ್ತು ಉಡುಪು ಉದ್ಯಾನಗಳನ್ನು ಗ್ರೀನ್‌ಫೀಲ್ಡ್/ಬ್ರೌನ್‌ಫೀಲ್ಡ್ ಪ್ರದೇಶಗಳಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿತ್ತು.
ಈ ಯೋಜನೆಗಾಗಿ ಸರಕಾರವು ಕರ್ನಾಟಕದ ಕಲಬುರಗಿ ಸೇರಿ 7 ಸ್ಥಳಗಳನ್ನು ಅಂತಿಮಗೊಳಿಸಿತ್ತು. ತಮಿಳುನಾಡಿನ ವಿರುಧುನಗರ, ತೆಲಂಗಾಣದ ವರಂಗಲ್, ಗುಜರಾತ್‌ನ ನವಸಾರಿ, ಮಧ್ಯಪ್ರದೇಶದ ಧಾರ್, ಉತ್ತರ ಪ್ರದೇಶದ ಲಖನೌ, ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿಎಂ ಮಿತ್ರ ಯೋಜನೆಯಡಿ ಟೆಕ್ಸ್‌ಟೈಲ್ ಪಾರ್ಕ್ಸ್ ನಿರ್ಮಾಣಕ್ಕೆ ಸ್ಥಳ ಗುರುತಿಸಿತ್ತು.
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಇಂತಹ ಮೆಗಾ ಜವಳಿ ಉದ್ಯಾನಗಳನ್ನು ಪರಿಚಯಿಸಿತ್ತು. ಪ್ರತಿಯೊಂದು ಉದ್ಯಾನವು ಸುಮಾರು 1,000 ಎಕರೆ ವಿವಾದರಹಿತ ಭೂಮಿಯಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸರಕಾರವು ಹೇಳಿದೆ.
ಇದರ ಪ್ರಕಾರ ತಮಿಳುನಾಡಿನ ವಿರುಧುನಗರದಲ್ಲಿ 6,600 ಕೋಟಿ ರೂ. ಹೂಡಿಕೆ ಮಾಡಬೇಕಿತ್ತು. 2026ರ ಜುಲೈ 21ರ ಅಂತ್ಯಕ್ಕೆ ಕೇವಲ 50 ಕೋಟಿ ಹೂಡಿಕೆ ಮಾಡಿದೆ. ತೆಲಂಗಾಣದ ವರಂಗಲ್‌ನಲ್ಲಿ 8,800 ಕೋಟಿ ರೂ. ಹೂಡಿಕೆ ಪೈಕಿ 30 ಕೋಟಿ ರೂ., ಕರ್ನಾಟಕದ ಕಲಬುರಗಿಯಲ್ಲಿ 1,700 ಕೋಟಿ ರೂ. ಹೂಡಿಕೆ ಪೈಕಿ ಬಿಡಿಗಾಸನ್ನು ನೀಡಿಲ್ಲ. ಗುಜರಾತ್‌ನ ನವಸಾರಿಯಲ್ಲಿ 13,084 ಕೋಟಿ ರೂ. ಹೂಡಿಕೆ ಪೈಕಿ ನಯಾಪೈಸೆಯನ್ನೂ ನೀಡಿಲ್ಲ. ಮಹಾರಾಷ್ಟ್ರದ ಅಮರಾವತಿಯಲ್ಲಿ 12,925 ಕೋಟಿ ರೂ. ಹೂಡಿಕೆ ಪೈಕಿ 60 ಕೋಟಿ ರೂ. ಮಾತ್ರ ಒದಗಿಸಿದೆ.
ಮಧ್ಯಪ್ರದೇಶದ ಧಾರ್‌ನಲ್ಲಿ 20,126 ಕೋಟಿ ರೂ. ಪೈಕಿ ಕೇವಲ 50 ಕೋಟಿ ರೂ. ಮಾತ್ರ ಒದಗಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿ 5,355 ಕೋಟಿ ರೂ. ಹೂಡಿಕೆ ಪೈಕಿ ಒಂದೇ ಒಂದು ಪೈಸೆಯನ್ನೂ ನೀಡಿಲ್ಲ ಎಂಬುದು ಉತ್ತರದಿಂದ ತಿಳಿದು ಬಂದಿದೆ.
ಇದಲ್ಲದೆ, ಹೂಡಿಕೆಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಜವಳಿ ಕ್ಷೇತ್ರದ ರಫ್ತನ್ನು ಉತ್ತೇಜಿಸಲು ಯೋಜಿಸಿತ್ತು. ದೇಶದಾದ್ಯಂತ ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿದ ಜವಳಿ ಉದ್ಯಾನಗಳನ್ನು ಸ್ಥಾಪಿಸಲು ಸಮಗ್ರ ಜವಳಿ ಉದ್ಯಾನ ಯೋಜನೆ (Scheme for Integrated Textile Parks- SITP) ಯನ್ನು ಸಚಿವಾಲಯ ಜಾರಿಗೊಳಿಸಿತ್ತು.
ಈ ಯೋಜನೆಯು 2020-21ರ ಮಾರ್ಚ್ 31ರವರೆಗೆ ಜಾರಿಯಲ್ಲಿತ್ತು. ನಂತರ, ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಇದನ್ನು ಜವಳಿ ಕ್ಲಸ್ಟರ್ ಅಭಿವೃದ್ಧಿ ಯೋಜನೆ (Textile Cluster Development Scheme-TCDS) ಅಡಿಯಲ್ಲಿ ವಿಲೀನಗೊಳಿಸಲಾಗಿದೆ. ಈ ಯೋಜನೆಯಡಿ ಒಟ್ಟು 50 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ 33 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದರಲ್ಲಿ ಕರ್ನಾಟಕದ ದೊಡ್ಡಬಳ್ಳಾಪುರವೂ ಒಂದಾಗಿದೆ.
ಜವಳಿ ಕ್ಷೇತ್ರವು ಹೆಚ್ಚು ಕಾರ್ಮಿಕರನ್ನು ಅವಲಂಬಿಸಿರುವ ಕ್ಷೇತ್ರವಾಗಿರುವುದರಿಂದ, 2026-27ರ ಕೇಂದ್ರ ಬಜೆಟ್‌ನಲ್ಲಿ ಸರಕಾರ ಸಮಗ್ರ ಕಾರ್ಯಕ್ರಮವೊಂದನ್ನು ಘೋಷಿಸಿದೆ. ಇದರಲ್ಲಿ ರಾಷ್ಟ್ರೀಯ ನೈಸರ್ಗಿಕ ನಾರು (National Fibre Scheme) ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ (Textile Expansion and Employment Scheme), ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮ ಟೆಕ್ಸ್-ಇಕೊ (Tex-Eco) ಉಪಕ್ರಮ, ಸಮರ್ಥ್ 2.0 (Samarth 2.0) ಸೇರಿವೆ. ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಜವಳಿ ಕ್ಲಸ್ಟರ್‌ಗಳನ್ನು ಆಧುನೀಕರಿಸುವ ಉದ್ದೇಶದಿಂದ ಯಂತ್ರೋಪಕರಣಗಳಿಗೆ ಬಂಡವಾಳ ನೆರವು, ತಂತ್ರಜ್ಞಾನ ಉನ್ನತೀಕರಣ, ಸಾಮಾನ್ಯ ಪರೀಕ್ಷಾ (Testing) ಮತ್ತು ಪ್ರಮಾಣೀಕರಣ (Certification) ಕೇಂದ್ರಗಳಿಗೆ ಸಹಾಯ ಒದಗಿಸಲು ಯೋಜಿಸಿದೆ ಎಂದು ಕೇಂದ್ರ ಸಚಿವರು ವಿವರ ಒದಗಿಸಿರುವುದು ತಿಳಿದು ಬಂದಿದೆ.
ಈ ಯೋಜನೆಯ ಮಾರ್ಗಸೂಚಿಗಳು (Guidelines) ಪ್ರಕಟವಾದ ನಂತರ ಹೊಸ ಪ್ರಸ್ತಾವಗಳನ್ನು ಪರಿಶೀಲಿಸಿ ಅನುಮೋದಿಸಲಾಗುವುದು. ಇದಲ್ಲದೆ, ಭಾರತ ಸರಕಾರವು ಭಾರತ ಔದ್ಯೋಗಿಕ ವಿಕಾಸ ಯೋಜನೆ (BHAVYA-Bharat Audyogik Vikas Yojana) ಯನ್ನು ಅನುಮೋದಿಸಿದೆ. ಇದು 33,660 ಕೋಟಿ ರೂ. ವೆಚ್ಚದ ಕೇಂದ್ರ ವಲಯ ಯೋಜನೆಯಾಗಿದೆ. 2026-27 ರಿಂದ 2031-32ರವರೆಗೆ 6 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 100 ‘ಪ್ಲಗ್ ಅಂಡ್ ಪ್ಲೇ’ ಕೈಗಾರಿಕಾ ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ಈ ಯೋಜನೆಯ ಉದ್ದೇಶವು ಹೂಡಿಕೆಗೆ ಸಿದ್ಧವಾಗಿರುವ (Investment-ready), ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ. ಹೂಡಿಕೆದಾರರು ಸುಲಭವಾಗಿ ಹೂಡಿಕೆ ಮಾಡಲು ಅನುಕೂಲ ಕಲ್ಪಿಸುವುದು ಹಾಗೂ ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದು ವಿವರಿಸಿದ್ದಾರೆ.
ಕಲಬುರಗಿಯ ಸ್ಥಿತಿಗತಿ ಏನಿದೆ?
ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಜವಳಿ ಪಾರ್ಕ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಚೆಗಷ್ಟೇ ಹೇಳಿಕೆ ನೀಡಿದ್ದರು. ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಪಿಎಂ ಮಿತ್ರ (PM MITRA) ಮೆಗಾ ಜವಳಿ ಪಾರ್ಕ್ಸ್ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕೈಗಾರಿಕಾ ಯೋಜನೆಯಾಗಿದೆ. ಈ ಪಾರ್ಕ್‌ನ ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆಯನ್ನು ಸರಕಾರವು ಈಗಾಗಲೇ ಅಂತಿಮಗೊಳಿಸಿದೆ.
ಕಲಬುರಗಿಯ ನಂದಿಸಿನ್ನೂರು, ಕಿರಣಗಿ ಮತ್ತು ಫಿರೋಝಾಬಾದ್ ಗ್ರಾಮಗಳ ಬಳಿ 1,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತಕ್ಕೆ 320 ಕೋಟಿ ರೂ. ಸೇರಿದಂತೆ, ಯೋಜನೆಯ ಒಟ್ಟು ಮೊತ್ತವು ಸುಮಾರು 1,700 ಕೋಟಿ ರೂ.ಗಳಾಗಿವೆ. ಈ ಟೆಕ್ಸ್‌ಟೈಲ್ ಪಾರ್ಕ್ಸ್ ಅತ್ಯಾಧುನಿಕ ರಸ್ತೆಗಳು, ವಿದ್ಯುತ್, ನೀರು ಸರಬರಾಜು ಮತ್ತು ‘ಪ್ಲಗ್ ಆ್ಯಂಡ್ ಪ್ಲೇ’ (Plug and Play) ಮಾದರಿಯ ಕೈಗಾರಿಕಾ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಕೇಂದ್ರ ಸರಕಾರದಿಂದ 500 ಕೋಟಿ ರೂ. ಧನಸಹಾಯ ಲಭ್ಯವಿದೆ. ಯೋಜನೆಯಿಂದಾಗಿ ಸಾವಿರಾರು ಸ್ಥಳೀಯ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿತ್ತು.






