ತಲೆಗೆ ಕ್ಯಾಮರಾ ಕಟ್ಟಿ ಕೆಲಸ ಮಾಡುವ ಜವಳಿ ಕಾರ್ಮಿಕರು; ಕಾರ್ಖಾನೆ ಕೆಲಸವನ್ನೂ ನಿರ್ವಹಿಸಲಿದೆಯೇ AI?

screengrab : X
ಕೆಲಸಗಾರರು ಜವಳಿ ಕಾರ್ಖಾನೆಗಳಲ್ಲಿ ಉದ್ದನೆಯ ಸಾಲುಗಳಲ್ಲಿ ಕುಳಿತು ತಲೆ ಮೇಲೆ ಸಣ್ಣ ಕ್ಯಾಮರಾಗಳನ್ನು ಜೋಡಿಸಿ ಬಟ್ಟೆ ಹೊಲಿಯುವಂತಹ ವೀಡಿಯೋಗಳು, ಕೆಲಸಗಳನ್ನು AI ಕಸಿಯುವ ಆತಂಕವನ್ನು ಸೃಷ್ಟಿಸಿದೆ.
ಕಾರ್ಖಾನೆಯ ಕೆಲಸಗಾರರು ತಲೆಗೆ ಕ್ಯಾಮರಾಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿರುವ ಕೆಲವು ವೀಡಿಯೋಗಳು ಇದೀಗ ಭವಿಷ್ಯದ ಉದ್ಯೋಗಗಳಿಗೆ ಸಂಬಂಧಿಸಿದ ವೈರಲ್ ಚರ್ಚೆಗಳಿಗೆ ಕಾರಣವಾಗಿವೆ. ಆರಂಭದಲ್ಲಿ ವೀಡಿಯೋಗಳು ಕೆಲಸಗಾರರು ಮಾಡುತ್ತಿರುವ ಕೆಲಸವನ್ನು ತೋರಿಸುವಂತೆ ಸಾಮಾನ್ಯವಾಗಿ ಚಿತ್ರೀಕರಿಸಿರುವುದು ಕಂಡು ಬಂದಿದೆ. ಆದರೆ ಸೂಕ್ಷ್ಮವಾಗಿ ನೋಡಿದರೆ, ಕೆಲಸಗಾರರು ಜವಳಿ ಕಾರ್ಖಾನೆಗಳಲ್ಲಿ ಉದ್ದನೆಯ ಸಾಲುಗಳಲ್ಲಿ ಕುಳಿತು ತಲೆ ಮೇಲೆ ಸಣ್ಣ ಕ್ಯಾಮರಾಗಳನ್ನು ಜೋಡಿಸಿ ಬಟ್ಟೆಯನ್ನು ಹೊಲಿಯುವುದು ಮತ್ತು ನಿರ್ವಹಿಸುವುದರ ಮೇಲೆ ವೀಡಿಯೋಗಳನ್ನು ಕೇಂದ್ರೀಕರಿಸಲಾಗಿದೆ.
ತಲೆಗೆ ಕ್ಯಾಮರಾ ಕಟ್ಟಿಕೊಳ್ಳಬೇಕಾದ ಅಗತ್ಯವನ್ನು ಪ್ರಶ್ನಿಸಿದಾಗ, ಸಂಪೂರ್ಣ ದೃಶ್ಯ ವಿಭಿನ್ನವಾಗಿ ಕಾಣುತ್ತದೆ. ಇವು ಪ್ರಯೋಗಾಲಯದ ಸೆಟಪ್ ಗಳಲ್ಲ; ಬದಲಾಗಿ ನಿಜವಾದ ಕಾರ್ಖಾನೆಯ ಕೆಲಸವಾಗಿದೆ. ಅದೇ ಕಾರಣದಿಂದ ಈ ವೀಡಿಯೋಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಕಾರ್ಖಾನೆಗಳು ಅಂತಹ ಹೊಲಿಗೆಯ ಸೂಕ್ಷ್ಮ ವಿವರಗಳನ್ನು ವೀಡಿಯೋಗಳಲ್ಲಿ ದಾಖಲಿಸಿಕೊಳ್ಳುವ ಅಗತ್ಯ ಏಕೆ ಬಂತು? ಮೊದಲನೆಯದಾಗಿ, ನಿತ್ಯದ ಸಾಮಾನ್ಯ ಜವಳಿ ಕೆಲಸಗಳನ್ನು ವೀಡಿಯೋ ಮಾಡಬೇಕಾದ ಅಗತ್ಯವೇನು?
ಹೌದು, ಈ ವೀಡಿಯೋಗಳನ್ನು AI ವ್ಯವಸ್ಥೆಗಳನ್ನು ತರಬೇತಿ ನೀಡಲು ಬಳಸಲಾಗುತ್ತಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ತಲೆಮೇಲಿರುವ ಕ್ಯಾಮರಾಗಳು ಕೆಲಸಗಾರರ ಕೆಲಸವನ್ನು ನಿಖರವಾಗಿ ಸೆರೆಹಿಡಿಯುವುದರಿಂದ, ಯಂತ್ರಗಳು ಸುಲಭವಾಗಿ ಕೆಲಸ ಕಲಿಯಬಹುದು. ಕೈ ಚಲನೆಗಳು, ಸಮನ್ವಯ ಮತ್ತು ಕಾರ್ಯ ನಿರ್ವಹಣೆ ಸೇರಿದಂತೆ ಯಂತ್ರಗಳು ಕಲಿಯಲು ಸಮೃದ್ಧ ಡೇಟಾಸೆಟ್ ಸಿಗುತ್ತದೆ. ದುಬಾರಿ ಮೋಶನ್ ಕ್ಯಾಪ್ಚರ್ ವ್ಯವಸ್ಥೆಗಳನ್ನು ಅವಲಂಬಿಸುವ ಬದಲು, ಕಂಪನಿಗಳು ಈ ವೀಡಿಯೋಗಳ ಮೂಲಕ ಮಾನವ ದೃಷ್ಟಿಯ ಕೋನವನ್ನು ಬಳಸಿಕೊಂಡು ರೋಬೋಟ್ಗಳಿಗೆ ಕೆಲಸ ಕಲಿಸಿ, ನಕಲಿಸುವ ಮೂಲಕ ಸಂಪೂರ್ಣ ಆಟೋಮೇಶನ್ಗೆ ಸಿದ್ಧತೆ ನಡೆಸುತ್ತಿವೆ.
ಇಂದು ಕೆಲಸವನ್ನು ನಿಖರವಾಗಿ ಡಿಜಿಟಲ್ ರೂಪದಲ್ಲಿ ದಾಖಲಿಸುವುದೇ ಉದ್ದೇಶ ಎಂದು ಕಾರ್ಖಾನೆಗಳು ಹೇಳಿಕೊಂಡರೂ, ಭವಿಷ್ಯದಲ್ಲಿ ಯಾಂತ್ರೀಕರಣಕ್ಕೆ ಇದು ತರಬೇತಿ ದತ್ತಾಂಶವಾಗಬಹುದು. ಆನ್ ಲೈನ್ ನಲ್ಲಿ ಅನೇಕ ಬಳಕೆದಾರರು ಬೊಟ್ಟು ಮಾಡಿ ತೋರಿಸಿರುವ ಪ್ರಕಾರ, ಕಾರ್ಮಿಕರಿಗೆ ಈ ದತ್ತಾಂಶವನ್ನು ಏಕೆ ಬಳಸಲಾಗುತ್ತಿದೆ ಎಂಬ ಸಂಪೂರ್ಣ ವಿವರಗಳಿಲ್ಲ. ಕಾರ್ಯಸ್ಥಳದಲ್ಲಿ ಕ್ಯಾಮರಾ ಬಳಸುವುದು ಸಮಸ್ಯೆಯಲ್ಲ; ಆದರೆ ಈ ಕ್ಯಾಮರಾಗಳು ಸೆರೆಹಿಡಿದಿರುವ ದಾಖಲೆಗಳು ಭವಿಷ್ಯದಲ್ಲಿ ಹೇಗೆ ಬಳಸಲ್ಪಡುತ್ತವೆ ಎಂಬುದು ಮುಖ್ಯವಾಗುತ್ತದೆ. ಯಂತ್ರಗಳು ವೇಗವಾಗಿ ಕಲಿತಲ್ಲಿ, ಅದೇ ಉದ್ಯೋಗವನ್ನು ಸ್ವತಃ ನಿರ್ವಹಿಸಬಹುದೇ?
ಅದೇ ಸಂದರ್ಭದಲ್ಲಿ, ಈ ಕುರಿತ ಆನ್ಲೈನ್ ಚರ್ಚೆಗೆ ಮತ್ತೊಂದು ಆಯಾಮವೂ ಇದೆ. ಕೆಲವು ಮಂದಿಯ ಪ್ರಕಾರ, ಇದು ತಂತ್ರಜ್ಞಾನ ಬದಲಾವಣೆಯ ಮತ್ತೊಂದು ಹಂತ. ಉದ್ಯಮಗಳು ವರ್ಷಗಳಿಂದ ಯಂತ್ರಗಳನ್ನು ಬಳಸಿಕೊಂಡು ಮಾನವ ಚಾಲಿತ ಕೆಲಸಗಳನ್ನು ಕ್ರಮೇಣ ಸ್ವೀಕರಿಸುತ್ತಿರುವುದು ಹೊಸದಲ್ಲ. ಇಂತಹ ಬದಲಾವಣೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ; ಬದಲಾಗಿ ಕಾರ್ಮಿಕರು ಹೊಸ ಕೌಶಲ್ಯಗಳನ್ನು ಕಲಿತು ಹೊಂದಿಸಿಕೊಳ್ಳಬೇಕಾಗಿದೆ. ತಂತ್ರಜ್ಞಾನವನ್ನು ವಿರೋಧಿಸುವ ಬದಲು, ತಂತ್ರಜ್ಞಾನದೊಂದಿಗೆ ಕೆಲಸ ಮಾಡುವುದನ್ನು ಕಲಿಯಬೇಕು.
ಆದರೆ ಇಲ್ಲಿ ನೈತಿಕವಾಗಿ ಕಾರ್ಖಾನೆಗಳು ಸರಿಯಾಗಿ ವರ್ತಿಸುತ್ತಿವೆಯೇ ಎನ್ನುವ ಪ್ರಶ್ನೆ ಏಳುತ್ತದೆ. ಕಾರ್ಮಿಕರಿಗೆ ತಮ್ಮ ಕೆಲಸವನ್ನು ಏಕೆ ದಾಖಲಿಸಲಾಗುತ್ತಿದೆ ಎಂಬ ವಿವರ ನೀಡಲಾಗಿದೆಯೇ? ಯಂತ್ರಗಳಿಗೆ ಕೆಲಸ ಕಲಿಸಲು ಅವರು ವಿರೋಧಿಸುವ ಹಕ್ಕು ಹೊಂದಿರುವರೇ? ಅವರ ಕೆಲಸವನ್ನು ಬಳಸಿ ಭವಿಷ್ಯದ ತಂತ್ರಜ್ಞಾನವನ್ನು ರೂಪಿಸಿದರೆ, ಅವರಿಗೆ ಪರಿಹಾರ ನೀಡಲಾಗುತ್ತದೆಯೇ? ಇವು ಸಣ್ಣಪುಟ್ಟ ಕಾಳಜಿಗಳಲ್ಲ. ವಿಶೇಷವಾಗಿ ಜವಳಿ ಉದ್ಯಮದಂತಹ ಕ್ಷೇತ್ರಗಳಲ್ಲಿ ಕಾರ್ಮಿಕರ ಹಕ್ಕುಗಳಿಗೆ ಕಡಿಮೆ ಅವಕಾಶಗಳಿರುವ ಸಂದರ್ಭದಲ್ಲಿ, ಯಾಂತ್ರೀಕರಣದ ಲಾಭವನ್ನು ಅವರಿಗೆ ಹಂಚಿಕೊಳ್ಳಬೇಕಾಗಿದೆ.
ಟೀಕಾಕಾರರ ಪ್ರಕಾರ, ಇಲ್ಲಿ ವಿಷಯ ತಂತ್ರಜ್ಞಾನಕ್ಕೆ ಮಾತ್ರ ಸಂಬಂಧಿಸಿಲ್ಲ; ಪಾರದರ್ಶಕತೆ ಮುಖ್ಯವಾಗಿದೆ. ಕಾರ್ಮಿಕರು ತಮಗೆ ತಿಳಿಯದೇ, ತಮ್ಮ ಕೆಲಸವನ್ನು ಕಸಿದುಕೊಳ್ಳಬಹುದಾದ ವ್ಯವಸ್ಥೆಗೆ ಕೊಡುಗೆ ನೀಡುತ್ತಿದ್ದಾರೆ. ಕೆಲಸ ಮಾಡುವುದನ್ನು ನಿರಾಕರಿಸುವ ಆಯ್ಕೆಯೂ ಅವರ ಬಳಿ ಇಲ್ಲ, ಏಕೆಂದರೆ ಅವರ ಜೀವನೋಪಾಯ ಅದನ್ನೇ ಆಧರಿಸಿದೆ.
Amazon ಈಗಾಗಲೇ ತಮ್ಮ ಕಾರ್ಯಾಚರಣೆಗಳಲ್ಲಿ ರೋಬೋಟ್ ಗಳನ್ನು ಬಳಸುತ್ತಿದೆ. ತನ್ನ ಆಪರೇಷನ್ ವಿಭಾಗದಲ್ಲಿ ಶೇ. 75ರಷ್ಟು ಕೆಲಸವನ್ನು ಯಂತ್ರಗಳಿಗೆ ವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಾಗತಿಕವಾಗಿ ಯಾಂತ್ರೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಜವಳಿ ಉದ್ಯಮದಲ್ಲಿ ಕ್ಯಾಮರಾಗಳು ಕೆಲಸದ ವಿವರಗಳನ್ನು ವೀಡಿಯೋ ಮಾಡುವ ಪ್ರವೃತ್ತಿ ಇನ್ನಷ್ಟು ಪ್ರಸ್ತುತವಾಗುತ್ತದೆ.
ಅಮೆಜಾನ್ನಂತಹ ಕಂಪನಿಗಳು ಹಲವು ವರ್ಷಗಳಿಂದ ತಮ್ಮದೇ ರೋಬೋಟ್ ವ್ಯವಸ್ಥೆಯನ್ನು ತಮ್ಮ ಕಾರ್ಖಾನೆಗಳಲ್ಲಿ ಅಭಿವೃದ್ಧಿಪಡಿಸಿವೆ. 2025 ಅಕ್ಟೋಬರ್ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ತನ್ನ ಆಪರೇಷನ್ ನೆಟ್ವರ್ಕ್ದಲ್ಲಿ ಒಂದು ಕೋಟಿ ರೋಬೋಟ್ಗಳನ್ನು ನಿಯೋಜಿಸಲಾಗಿದೆ. ಈ ಯಂತ್ರಗಳು ವಸ್ತುಗಳನ್ನು ವಿಂಗಡಿಸುವುದು, ಪ್ಯಾಕ್ ಮಾಡುವುದು ಮತ್ತು ಸಾಗಾಟಕ್ಕೆ ಸಿದ್ಧಗೊಳಿಸುವುದನ್ನು ಮಾಡುತ್ತವೆ. ಹೀಗಾಗಿ ಮಾನವ ಕೆಲಸದ ಅಗತ್ಯ ಕಡಿಮೆಯಾಗಿದೆ.
ಆದರೆ, ಅಮೆಜಾನ್ ಈ ವ್ಯವಸ್ಥೆಗಳು ಕೆಲಸಗಾರರ ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳುತ್ತದೆ. ಈ ವಿವರಣೆಯ ಹೊರತಾಗಿಯೂ, ಕೆಲಸಗಾರರ ಪ್ರಮಾಣ ಕಡಿಮೆಯಾಗಿರುವುದು ಗಮನಾರ್ಹವಾಗಿದೆ. ಪದೇಪದೇ ಮಾಡುವ ಒಂದೇ ರೀತಿಯ ಕೆಲಸಗಳನ್ನು ಯಂತ್ರಗಳು ನಿರ್ವಹಿಸಿದಾಗ, ಸಹಜವಾಗಿ ಮಾನವ ಕೈಗಳ ಅಗತ್ಯವೂ ಕಡಿಮೆಯಾಗುತ್ತದೆ.






