ಕೋಚ್ನಲ್ಲಿರುವುದೇ 52 ಸೀಟು, ಆದರೆ ಪ್ರಯಾಣಿಕರಿಗೆ ಸಿಕ್ಕಿದ್ದು 54ನೇ ಬರ್ತ್; ರೈಲ್ವೆ ಇಲಾಖೆಯ ಎಡವಟ್ಟಿಗೆ ಕಾರಣವೇನು?

Photo Credit : X
ಭಾರತದಲ್ಲಿ ರೈಲ್ವೆ ಟಿಕೆಟ್ ಖಚಿತಪಡಿಸುವುದೇ ಕಷ್ಟ. ಆದರೆ ಖಚಿತವಾದ ರೈಲ್ವೆ ಬರ್ತ್ ಅಸ್ತಿತ್ವದಲ್ಲಿ ಇಲ್ಲದೆ ಹೋದರೆ? ವಾರಣಾಸಿಯಿಂದ ಗೋರಖ್ಪುರಕ್ಕೆ ರಾತ್ರಿ ರೈಲಿನಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದ ಪ್ರಯಾಣಿಕರಾದ ಇಶಾನ್ ಬಾಜ್ಪಾಯಿ ಅವರಿಗೆ ಅಂತಹ ಒಂದು ಸಮಸ್ಯೆ ಎದುರಾಗಿದೆ. AC 2-ಟೈರ್ ಕೋಚ್ನಲ್ಲಿ ಅವರಿಗೆ 54ನೇ ಸಂಖ್ಯೆಯ ಬರ್ತ್ ಅನ್ನು ಹಂಚಿಕೆ ಮಾಡಲಾಗಿತ್ತು. ರೈಲು ಹತ್ತಿದ ನಂತರ ಆ ಕೋಚ್ನಲ್ಲಿ ಕೇವಲ 52 ಬರ್ತ್ಗಳು ಮಾತ್ರ ಇರುವುದು ಅವರಿಗೆ ತಿಳಿಯಿತು. ಇದಕ್ಕೆ ಸಾಫ್ಟ್ವೇರ್ ದೋಷ ಕಾರಣ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಗೊಂದಲಕ್ಕೆ ಕಾರಣವೇನಿರಬಹುದು?
ಇಶಾನ್ ಬಾಜಪಾಯಿ ಅವರು ರೈಲ್ವೆ ಸಹಾಯವಾಣಿ ಸಂಖ್ಯೆ 139ರ ಮೂಲಕ ದೂರು ದಾಖಲಿಸಿ ‘ಎಕ್ಸ್’ ವೇದಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಭಾರತೀಯ ರೈಲ್ವೆ ಪ್ರತಿಕ್ರಿಯಿಸಿದೆ. ವಾರಣಾಸಿ ಸಿಟಿ-ನೇಪಾಲ್ಗಂಜ್ ರೋಡ್ ಎಕ್ಸ್ಪ್ರೆಸ್ ಅನ್ನು ನಿರ್ವಹಿಸುವ ನಾರ್ತ್ ಈಸ್ಟರ್ನ್ ರೈಲ್ವೆಯ ವಾರಣಾಸಿ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು (Sr DCM), “ಈ ವ್ಯತ್ಯಾಸವು ಸಾಫ್ಟ್ವೇರ್ ದೋಷದಿಂದ ಉಂಟಾಗಿದೆ ಮತ್ತು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ಹೇಳಿರುವುದಾಗಿ ‘ಇಂಡಿಯಾ ಟುಡೆ’ ವರದಿ ಮಾಡಿದೆ. “ಸಾಫ್ಟ್ವೇರ್ ದೋಷದೊಂದಿಗೆ ಈ ಅನನಕೂಲ ಉಂಟಾಗಿದೆ. ಅದನ್ನು ಸರಿಪಡಿಸಲಾಗುತ್ತಿದೆ. ಇಬ್ಬರು ಪ್ರಯಾಣಿಕರಿಗೂ ಅದೇ ಕೋಚ್ನಲ್ಲಿ ಪರ್ಯಾಯ ಬರ್ತ್ಗಳನ್ನು ಒದಗಿಸಲಾಗಿದೆ.” ಎಂದು ತಿಳಿಸಿದ್ದಾರೆ.
ಈ ದೋಷದಿಂದಾಗಿ ಬಾಜ್ಪಾಯಿ ಒಬ್ಬರೇ ಬಾಧಿತರಾಗಿರಲಿಲ್ಲ. ಅವರಿಗೂ ಮತ್ತು ಇನ್ನೊಬ್ಬ ಪ್ರಯಾಣಿಕರಿಗೂ ಅದೇ ಕೋಚ್ನಲ್ಲಿ ಪರ್ಯಾಯ ಬರ್ತ್ಗಳನ್ನು ಒದಗಿಸಲಾಯಿತು. ಆದರೆ ರೈಲ್ವೆಯ ಕಂಪ್ಯೂರೀಕೃತ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆಯು ಅಸ್ತಿತ್ವದಲ್ಲಿ ಇಲ್ಲದ ಬರ್ತ್ ಅನ್ನು ಹೇಗೆ ಹಂಚಿಕೆ ಮಾಡಲು ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇಬ್ಬರು ಪ್ರಯಾಣಿಕರಿಗೆ ಅಸ್ತಿತ್ವದಲ್ಲೇ ಇಲ್ಲದ ರೈಲು ಬರ್ತ್ಗಳು ಹಂಚಿಕೆಯಾಗಿವೆ. ಬಾಜಪಾಯಿ ಅವರು ಹಂಚಿಕೊಂಡ ಟಿಕೆಟ್ನ ಸ್ಕ್ರೀನ್ಶಾಟ್ನಲ್ಲಿ ಅವರ ಕಾಯ್ದಿರಿಸುವಿಕೆಯ ಸ್ಥಿತಿ 'CNF/A1/54/SU' ಎಂದು ತೋರಿಸಿದೆ. ಇದರರ್ಥ ‘ವಾರಣಾಸಿ ಸಿಟಿ-ನೇಪಾಲ್ಗಂಜ್ ರೋಡ್ ಎಕ್ಸ್ಪ್ರೆಸ್’ ರೈಲಿನ A1 ಕೋಚ್ನಲ್ಲಿ 54ನೇ ಸಂಖ್ಯೆಯ ಸೈಡ್ ಅಪ್ಪರ್ ಬರ್ತ್ ಅವರಿಗೆ ಖಚಿತಗೊಂಡಿತ್ತು. ಆದರೆ ನವೆಂಬರ್ 22ರಂದು ರಾತ್ರಿ 10:45ಕ್ಕೆ ರೈಲು ಹತ್ತಿದಾಗ ಬರ್ತ್ ಅಸ್ತಿತ್ವದಲ್ಲೇ ಇಲ್ಲದಿರುವುದು ಅವರಿಗೆ ತಿಳಿದು ಬಂದು ದೂರು ದಾಖಲಿಸಿ ಸಾಮಾಜಿಕ ಜಾಲತಾಣದಲ್ಲೂ ಬರೆದಿದ್ದಾರೆ.
ಭಾರತೀಯ ರೈಲ್ವೆಯ ಅಧಿಕೃತ ಕುಂದುಕೊರತೆ ನಿವಾರಣಾ ವೇದಿಕೆಯಾದ ರೈಲ್ವೆ ಸೇವಾ ಬಾಜಪಾಯಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿ ಈ ವಿಷಯವನ್ನು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದೆ.
ಒಂದೇ ವರ್ಗಕ್ಕೆ ಸೇರಿದ ರೈಲು ಕೋಚ್ಗಳಲ್ಲಿನ ವಿಭಿನ್ನ ವಿನ್ಯಾಸಗಳು ಇದಕ್ಕೆ ಕಾರಣವಾಗಿರಬಹುದು. ಒಂದೇ ಪ್ರಯಾಣ ವರ್ಗಕ್ಕೆ ಸೇರಿದ ಎಲ್ಲಾ ರೈಲು ಕೋಚ್ಗಳಲ್ಲಿ ಒಂದೇ ಸಂಖ್ಯೆಯ ಬರ್ತ್ಗಳು ಇರುವುದಿಲ್ಲ. ಅವುಗಳ ವಿನ್ಯಾಸ ಮತ್ತು ರಚನೆಯನ್ನು ಅವಲಂಬಿಸಿ ಅವುಗಳ ಸಾಮರ್ಥ್ಯವು ಬದಲಾಗುತ್ತದೆ.
ಉದಾಹರಣೆಗೆ ಸಾಂಪ್ರದಾಯಿಕ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) AC ಟು ಟೈರ್ ಕೋಚ್ಗಳು ಅಂದರೆ ಹಳೆಯ ನೀಲಿ ಅಥವಾ ಬಿಸ್ಕತ್ತು ಬಣ್ಣದ ಕೋಚ್ಗಳು- ಸಾಮಾನ್ಯವಾಗಿ 46 ಬರ್ತ್ಗಳನ್ನು ಹೊಂದಿರುತ್ತವೆ. ಇನ್ನು ಹೊಸ ಮಾದರಿಯ ‘ಲಿಂಕೆ ಹಾಫ್ಮನ್ ಬುಷ್' (LHB) ಕೋಚ್ಗಳು-ಸಾಮಾನ್ಯವಾಗಿ ಕೆಂಪು ಮತ್ತು ಬೂದು ಬಣ್ಣದ ವಿನ್ಯಾಸವನ್ನು ಹೊಂದಿರುತ್ತವೆ– ಹೆಚ್ಚು ಬರ್ತ್ಗಳನ್ನು ಹೊಂದಿರುತ್ತವೆ.
ಕುತೂಹಲಕಾರಿ ಸಂಗತಿಯೆಂದರೆ ಭಾರತೀಯ ರೈಲ್ವೆಯ ಅಧಿಕೃತ ದಾಖಲೆಗಳಲ್ಲಿ LHB AC ಟು-ಟೈರ್ ಕೋಚ್ಗಳ ಬರ್ತ್ ಸಾಮರ್ಥ್ಯವನ್ನು 52 ಮತ್ತು 54 ಹೀಗೆ ಎರಡನ್ನೂ ನಮೂದಿಸಲಾಗಿದೆ. ‘ರಿಸರ್ಚ್ ಡಿಸೈನ್ಸ್ ಆಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ವೆಬ್ಸೈಟ್ನಲ್ಲಿ ಲಭ್ಯವಿರುವ ಜೂನ್ 2022ರ ಪರಿಷ್ಕೃತ 'LHB ನಿರ್ವಹಣಾ ಕೈಪಿಡಿ'ಯ (LHB Maintenance Manual) ಪ್ರಕಾರ, LWACCW ಮತ್ತು LWGACCW ಕೋಡ್ಗಳನ್ನು ಹೊಂದಿರುವ LHB AC ಟು-ಟೈರ್ (ಎರಡು ಹಂತದ) ಕೋಚ್ಗಳಲ್ಲಿ ತಲಾ 52 ಬರ್ತ್ಗಳಿವೆ.
ಆದರೆ ಇಶಾನ್ ಪ್ರಯಾಣಿಸುತ್ತಿದ್ದ ರೈಲು ಯಾವ ರೈಲ್ವೆ ವಲಯಕ್ಕೆ ಸೇರಿದ್ದೋ, ಅದೇ ‘ನಾರ್ತ್ ಈಸ್ಟರ್ನ್ ರೈಲ್ವೆ’ಯ 2020ರ ತಾಂತ್ರಿಕ ಪರಿಶೀಲನಾ ದಾಖಲೆಗಳಲ್ಲಿ LHB AC ಟು-ಟೈರ್ ಕೋಚ್ನ ಬರ್ತ್ ಸಾಮರ್ಥ್ಯವನ್ನು 54 ಎಂದು ನಮೂದಿಸಲಾಗಿದೆ. ಹೀಗಾಗಿ 52-ಬರ್ತ್ಗಳ 2AC ಬೋಗಿಯು ಯಾವುದೇ ಅಸಹಜ ಸಂಗತಿಯಲ್ಲ ಅಥವಾ ದೋಷವಲ್ಲ. 2AC LHB ಬೋಗಿಗಳಲ್ಲಿ 52 ಹಾಗೂ 54 ಬರ್ತ್ಗಳೆರಡೂ ವಿನ್ಯಾಸಗಳು ಒಟ್ಟಿಗೆ ಇವೆ. 52 ಬರ್ತ್ಗಳನ್ನು ಹೊಂದಿರುವ ಹೊಸ LHB AC ಟು-ಟೈರ್ ಬೋಗಿಗಳಲ್ಲಿ, ಹೆಚ್ಚುವರಿ ಎರಡು ಪ್ರಯಾಣಿಕರ ಬರ್ತ್ಗಳಿಗೆ ಮೀಸಲಾಗಿದ್ದ ಜಾಗವನ್ನು ಪ್ರಯಾಣಿಕರಿಗಾಗಿ ನೀಡುವ ಬೆಡ್ಶೀಟ್ಗಳು, ಕಂಬಳಿಗಳು ಮತ್ತು ದಿಂಬುಗಳನ್ನು ಸಂಗ್ರಹಿಸಿಡುವ ಕೋಣೆಯಾಗಿ ಮರುಬಳಕೆ ಮಾಡಲಾಗಿದೆ.
ಭಾರತೀಯ ರೈಲ್ವೆಯ ಗಣಕೀಕೃತ ಪ್ರಯಾಣಿಕರ ಮುಂಗಡ ಕಾಯ್ದಿರಿಸುವಿಕೆಯ ವ್ಯವಸ್ಥೆಯು, ತನ್ನ ದತ್ತಾಂಶ ಸಂಗ್ರಹದಲ್ಲಿ ದಾಖಲಾಗಿರುವ ಕೋಚ್ ವಿನ್ಯಾಸ ಮತ್ತು ಬರ್ತ್ಗಳ ಸಂಖ್ಯೆಯ ಆಧಾರದ ಮೇಲೆ ಬರ್ತ್ಗಳನ್ನು ಹಂಚಿಕೆ ಮಾಡುತ್ತವೆ. ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು, ಡಿಜಿಟಲ್ ದಾಖಲೆಯಲ್ಲಿರುವ ಬರ್ತ್ಗಳ ಸಂಖ್ಯೆಯು ರೈಲಿಗೆ ಜೋಡಿಸಲಾದ ಕೋಚ್ಗಳಲ್ಲಿರುವ ನೈಜ ಬರ್ತ್ಗಳ ಸಂಖ್ಯೆಗೆ ಹೊಂದಿಕೆಯಾಗಬೇಕು.
ಆದರೆ ಸಮಸ್ಯೆಯನ್ನು ಇಶಾನ್ ಮಾತ್ರ ಎದುರಿಸಿಲ್ಲ. ಇಂತಹ ಸಮಸ್ಯೆ ಹಿಂದೆಯೂ ವರದಿಯಾಗಿದೆ. ಇದಕ್ಕೆ ಮೊದಲು ಪುಣೆಯ ಹಡಪ್ಸರ್ನಿಂದ ಉತ್ತರ ಪ್ರದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರಿಗೆ, ಕೇವಲ 78 ಬರ್ತ್ಗಳನ್ನು ಹೊಂದಿದ್ದ ಸ್ಲೀಪರ್ ಕೋಚ್ನಲ್ಲಿ 79ನೇ ಸಂಖ್ಯೆಯ ಬರ್ತ್ ಅನ್ನು ಹಂಚಿಕೆ ಮಾಡಲಾಗಿತ್ತು.






