Ayodhya ರಾಮಮಂದಿರದ ಕಾಣಿಕೆ ಹಣ ಕಳ್ಳತನ ಆರೋಪದ ಬಗ್ಗೆ SIT ತನಿಖೆ: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿರುವ ಹಣಗಳನ್ನು ಹೇಗೆ ಎಣಿಸಲಾಗುತ್ತದೆ?

ರಾಮ ಮಂದಿರ | Photo Credit : PTI
ಅಯೋಧ್ಯೆಯ ರಾಮಮಂದಿರದ ಕಾಣಿಕೆ ಹಣ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕೇಂದ್ರಬಿಂದುವಾಗಿರುವುದು 'ಯಾತ್ರಿಕರ ಸೌಲಭ್ಯ ಕೇಂದ್ರ' (Pilgrim Facilitation Centre) ಎಂಬ ಕಟ್ಟಡ. ಮುಖ್ಯ ದೇವಸ್ಥಾನದಿಂದ ಕೇವಲ 200 ಮೀಟರ್ ದೂರದಲ್ಲಿರುವ ಮತ್ತು ಮಂದಿರದ ವಾಸ್ತುಶಿಲ್ಪದ ಶೈಲಿಯನ್ನೇ ಹೋಲುವ ಈ ಕಟ್ಟಡದ ನೆಲಮಾಳಿಗೆಯಲ್ಲಿ ಹಣ ಎಣಿಕೆ ಮಾಡುವ ಕೋಣೆಯಿದೆ. ದೇವಸ್ಥಾನದ ಆವರಣದಾದ್ಯಂತ ಇರಿಸಲಾಗಿರುವ ಸುಮಾರು 35 ಕಾಣಿಕೆ ಡಬ್ಬಿಗಳಿಂದ ಸಂಗ್ರಹವಾಗುವ ಹಣವನ್ನು ಇದೇ ಕೋಣೆಗೆ ತಂದು ಎಣಿಕೆ ಮಾಡಲಾಗುತ್ತದೆ.
ದೇವಸ್ಥಾನಕ್ಕೆ ಪ್ರತಿದಿನ ಸುಮಾರು ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಿರುವುದರಿಂದ, ಕಾಣಿಕೆ ಎಣಿಕೆಯನ್ನು ಎರಡು ಶಿಫ್ಟ್ಗಳಲ್ಲಿ ಮಾಡಲಾಗುತ್ತದೆ. ಅಂದರೆ, ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ. ಪ್ರತಿ ಶಿಫ್ಟ್ನಲ್ಲಿ ತಲಾ 20ರಂತೆ ನಗದು ಎಣಿಕೆದಾರರು ಕೆಲಸ ಮಾಡುತ್ತಾರೆ.
ಪ್ರತಿದಿನದ ಕಾಣಿಕೆ ಮೊತ್ತವು ಅಂದಾಜು 8 ಲಕ್ಷ ರೂ.ವಿನಿಂದ 13 ಲಕ್ಷ ರೂ.ವರೆಗೆ ಇರುತ್ತದೆ. ಆದರೆ, ಎಣಿಕೆ ಕೋಣೆಯಲ್ಲಿ ನಿಯೋಜನೆಗೊಂಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಉದ್ಯೋಗಿಯೊಬ್ಬರು, "ಕೆಲವು ದಿನಗಳಲ್ಲಿ ಈ ಮೊತ್ತ 50 ಲಕ್ಷ ರೂ.ವಿನಿಂದ 60 ಲಕ್ಷ ರೂ.ವರೆಗೂ ತಲುಪುತ್ತದೆ" ಎಂದು ಹೇಳಿರುವುದಾಗಿ ʼThe Indian Express' ವರದಿ ಮಾಡಿದೆ.
ಭಕ್ತರು ಕಾಣಿಕೆಯಾಗಿ ನೀಡಿದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ವಸ್ತುಗಳನ್ನು ಇಡಲಾಗಿದೆ ಹಾಗೂ ದೇವಸ್ಥಾನದ ಸಂಗ್ರಹದಿಂದ ಹಣವನ್ನು ಕದಿಯಲಾಗಿದೆ ಎಂಬ ಆರೋಪಗಳ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚಿಸಿರುವ ಮೂವರು ಸದಸ್ಯರ ವಿಶೇಷ ತನಿಖಾ ತಂಡವು (SIT) ಈ ಉದ್ಯೋಗಿಯನ್ನೂ ವಿಚಾರಣೆಗೆ ಒಳಪಡಿಸಿದೆ.
ಮಂದಿರಕ್ಕೆ ಅತ್ಯಂತ ಹತ್ತಿರದಲ್ಲಿರುವ 'ಗ್ರೀನ್ ಹೌಸ್'ನಲ್ಲಿ ಬೀಡುಬಿಟ್ಟಿರುವ SIT ತಂಡವು ದಾಖಲೆಗಳು, ಕಾಣಿಕೆ ಎಣಿಕೆ ಪ್ರಕ್ರಿಯೆ, ಬುಕ್ಕೀಪಿಂಗ್ ಹಾಗೂ ನಿಧಿ ಜಮಾ ಮಾಡುವ ವಿಧಾನಗಳನ್ನು ಪರಿಶೀಲಿಸುತ್ತಿದೆ. ಇದರೊಂದಿಗೆ, ಕಾಣಿಕೆ ನಿರ್ವಹಣೆ ಮತ್ತು ಖಾತೆಗಳನ್ನು ನೋಡಿಕೊಳ್ಳುವ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸುತ್ತಿದೆ.
ಮೂಲಗಳ ಪ್ರಕಾರ, SITಯ ಪ್ರಾಥಮಿಕ ವರದಿಯು ಇನ್ನೊಂದು ಅಥವಾ ಎರಡು ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿದ್ದು, ಅಂತಿಮ ವರದಿಯು ಮುಂದಿನ ವಾರ ಸಲ್ಲಿಕೆಯಾಗಲಿದೆ. ಈವರೆಗೆ ಪೊಲೀಸರಿಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ.
ಈ ವಿವಾದದ ನಡುವೆಯೇ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶುಕ್ರವಾರ ಮಧ್ಯಾಹ್ನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ವೀರಾಂಗನಾ ಝಲ್ಕಾರಿ ಬಾಯಿ ಅವರ ಭವ್ಯ ಮೂರ್ತಿಯ ಅನಾವರಣ ಹಾಗೂ ವಿವಿಧ ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
►ಕಾಣಿಕೆ ಎಣಿಕೆ ಪ್ರಕ್ರಿಯೆ
ಈ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಮುಖ ಸದಸ್ಯರಾದ ಅನಿಲ್ ಮಿಶ್ರಾ ಇದ್ದಾರೆ. ಇವರು ಕಾಣಿಕೆ ಸಂಗ್ರಹಣೆ, ಎಣಿಕೆ ಹಾಗೂ ನಿಧಿಯ ಬಳಕೆಯವರೆಗಿನ ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದ್ದಾರೆ. ಕಾಣಿಕೆ ಎಣಿಕೆ ಮಾಡುವ ಹಾಲ್ಗೆ ಹೊಂದಿಕೊಂಡಿರುವ ಕಚೇರಿಯಿಂದಲೇ ಇವರು ಕಾರ್ಯನಿರ್ವಹಿಸುತ್ತಾರೆ.
ಎಣಿಕೆ ಪ್ರಕ್ರಿಯೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುವ ಅಧಿಕಾರಿಯೇ ಸುಭಾಷ್ ಶ್ರೀವಾಸ್ತವ. ಇವರು ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದು, ಮಿಶ್ರಾ ಅವರ ಕೈಕೆಳಗೆ ಕೆಲಸ ಮಾಡುತ್ತಾರೆ. ಪ್ರತಿ ಶಿಫ್ಟ್ ಗೆ ಬೇರೆಬೇರೆ ಇನ್ ಚಾರ್ಜ್ ಗಳಿದ್ದು, ಇವರು ಶ್ರೀವಾಸ್ತವ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಂತಿಮವಾಗಿ, ಪ್ರತಿ ನಾಲ್ಕರಿಂದ ಐದು ಜನ ಎಣಿಕೆದಾರರಿಗೆ ಒಬ್ಬ ಮೇಲ್ವಿಚಾರಕರಿರುತ್ತಾರೆ.
ಈ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಉದ್ಯೋಗಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಿಬ್ಬಂದಿಯಾಗಿದ್ದಾರೆ. ಇವರನ್ನು ಬ್ಯಾಂಕ್ ನಿಂದ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದ್ದು, ಹೆಚ್ಚಾಗಿ ಟ್ರಸ್ಟ್ ಅಧಿಕಾರಿಗಳೇ ಇವರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಕೆಲವರು ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯ RSS ಮುಖಂಡರೊಂದಿಗೆ ಸಂಪರ್ಕ ಹೊಂದಿರುವವರಾಗಿದ್ದಾರೆ.
ಕಾಣಿಕೆ ಡಬ್ಬಿಗಳು ತುಂಬಿದ ತಕ್ಷಣವೇ ಅವುಗಳನ್ನು ಖಾಲಿ ಮಾಡಲಾಗುತ್ತದೆ. ಈ ಕೆಲಸ ಮಾಡುವಾಗ ಟ್ರಸ್ಟ್ ಸಿಬ್ಬಂದಿ ಮತ್ತು SBI ಉದ್ಯೋಗಿ ಸೇರಿದಂತೆ ಕನಿಷ್ಠ ನಾಲ್ವರು ಉಪಸ್ಥಿತರಿರಬೇಕು. ಕಾಣಿಕೆ ಹಣವನ್ನು ಕಬ್ಬಿಣದ ಪೆಟ್ಟಿಗೆಗಳಿಗೆ ವರ್ಗಾಯಿಸಿ, ಬೀಗ ಹಾಕಿ, ನೂಕುವ ಗಾಡಿಗಳಲ್ಲಿ ಎಣಿಕೆ ಕೋಣೆಗೆ ಕೊಂಡೊಯ್ಯಲಾಗುತ್ತದೆ. ಈ ಇಡೀ ಚಲನವಲನವನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲಿನಲ್ಲಿ ಇಡಲಾಗುತ್ತದೆ.
ಎಣಿಕೆ ಕೇಂದ್ರದಲ್ಲಿ ಬ್ಯಾಂಕ್ ನೋಟುಗಳು, ನಾಣ್ಯಗಳು ಹಾಗೂ ಭಕ್ತರು ಅರ್ಪಿಸಿದ ಚಿನ್ನಾಭರಣಗಳಂತಹ ಇತರ ವಸ್ತುಗಳನ್ನು ಪ್ರತ್ಯೇಕಿಸಲಾಗುತ್ತದೆ. ನಂತರ ಅವುಗಳನ್ನು ಹಾಲ್ ನಾದ್ಯಂತ ಇರುವ ವಿವಿಧ ಕೌಂಟರ್ ಗಳಲ್ಲಿ ಕುಳಿತಿರುವ ಎಣಿಕೆದಾರರಿಗೆ ಹಂಚಲಾಗುತ್ತದೆ. ಸಿಬ್ಬಂದಿ ಕೇವಲ ಶೌಚಾಲಯ ಮತ್ತು ಆಹಾರದ ವಿರಾಮಕ್ಕಾಗಿ ಮಾತ್ರ ಎಣಿಕೆ ಕೋಣೆಯಿಂದ ಹೊರಗೆ ಹೋಗಬಹುದು. ಇದಕ್ಕಾಗಿ ಹಾಲ್ನ ಹೊರಗಡೆಯೇ ವ್ಯವಸ್ಥೆ ಮಾಡಲಾಗಿರುತ್ತದೆ. ತಮ್ಮ ಶಿಫ್ಟ್ ಮುಗಿಯುವವರೆಗೆ ಯಾರೂ ಕಟ್ಟಡದಿಂದ ಹೊರಗೆ ಹೋಗುವಂತಿಲ್ಲ.
ಎಣಿಕೆ ಪೂರ್ಣಗೊಂಡ ನಂತರ, ನಗದು ಹಣವನ್ನು ಮತ್ತೊಮ್ಮೆ ಬ್ಯಾಂಕ್ ಕಂಟೈನರ್ ಅಥವಾ ಪೆಟ್ಟಿಗೆಗಳಲ್ಲಿ ತುಂಬಿಸಿ, ಮೇಲ್ವಿಚಾರಣೆಯಲ್ಲಿ ಸೀಲ್ ಮಾಡಲಾಗುತ್ತದೆ. ಬಳಿಕ ಪ್ರತಿ ಮುಂಜಾನೆ SBI ಶಾಖೆಗೆ ಸಾಗಿಸಲಾಗುತ್ತದೆ. ಬ್ಯಾಂಕ್ ತನ್ನದೇ ಆದ ಪರಿಶೀಲನೆ ಪೂರ್ಣಗೊಳಿಸಿದ ನಂತರ, ಈ ನಗದನ್ನು ಟ್ರಸ್ಟ್ನ ನಿಗದಿತ ಕಾಣಿಕೆ ಖಾತೆಗೆ ಜಮಾ ಮಾಡಲಾಗುತ್ತದೆ. ಜಮೆಯಾದ ಮೊತ್ತದ ಬಗ್ಗೆ SBI ಟ್ರಸ್ಟ್ಗೆ ಮಾಹಿತಿ ನೀಡುವುದಲ್ಲದೆ, ಖಾತೆಯ ದಾಖಲೆಗಳನ್ನು ನವೀಕರಿಸುತ್ತದೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಖಾತೆಗೆ ಚೆಕ್ಬುಕ್ ಸೌಲಭ್ಯ ಇರುವುದಿಲ್ಲ. ಯಾವುದೇ ವೆಚ್ಚಗಳು, ಬಿಲ್ ಗಳು ಅಥವಾ ವ್ಯಾಪಾರಿಗಳು, ಗುತ್ತಿಗೆದಾರರು ಹಾಗೂ ಸೇವಾ ಪೂರೈಕೆದಾರರಿಗೆ ಪಾವತಿ ಮಾಡಬೇಕಿದ್ದರೂ, ಹಣವನ್ನು ಡಿಜಿಟಲ್ ರೂಪದಲ್ಲಿ ನೇರವಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಲಾಗುತ್ತದೆ.
ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ಮಂದಿರ ನಿರ್ಮಾಣಕ್ಕಾಗಿ ನಡೆಸಲಾದ ಧನಸಂಗ್ರಹ ಅಭಿಯಾನವು ಸಂಪೂರ್ಣವಾಗಿ ಪ್ರತ್ಯೇಕ ಪ್ರಕ್ರಿಯೆಯಾಗಿತ್ತು. ಆ ಸಮಯದಲ್ಲಿ ಸಂಗ್ರಹವಾದ ಸುಮಾರು 3,500 ಕೋಟಿ ರೂಪಾಯಿಯನ್ನು ಪ್ರತ್ಯೇಕವಾಗಿ ಜಮಾ ಮಾಡಿ ಲೆಕ್ಕ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಎಣಿಕೆ ಕೇಂದ್ರದ ಸಿಬ್ಬಂದಿ ಮಾತ್ರವಲ್ಲದೆ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭದ್ರತಾ ಸಿಬ್ಬಂದಿ, ಅಡುಗೆಯವರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಸಾವಿರಾರು ಜನರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದೆ. ಈ ಸಿಬ್ಬಂದಿಗಳಲ್ಲಿ ಸುಮಾರು 40 ಜನ ನಿವೃತ್ತ ಸೇನಾ ಸಿಬ್ಬಂದಿಯೂ ಸೇರಿದ್ದಾರೆ.
►ಸಂಘ ಪರಿವಾರದ ಆತಂಕ
ಈ ಗಂಭೀರ ಆರೋಪಗಳು ಸಂಸ್ಥೆಯ ಘನತೆಗೆ ಧಕ್ಕೆ ತರುತ್ತಿರುವುದರ ಬಗ್ಗೆ RSS ವಲಯದಲ್ಲಿ ಆತಂಕ ಮೂಡಿದೆ ಎಂದು ಮೂಲಗಳು ಒಪ್ಪಿಕೊಂಡಿವೆ. VHP ಉಪಾಧ್ಯಕ್ಷ ಹಾಗೂ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು RSSನ ಮಾಜಿ ಪ್ರಾಂತ ಪ್ರಚಾರಕ ಗೋಪಾಲ್ ರಾವ್ ಅವರ ಪಾತ್ರದ ಮೇಲೆ ಈಗ ಸಂಶಯದ ನೆರಳು ಬಿದ್ದಿದೆ. ಟ್ರಸ್ಟ್ ನ ಭೂ ವ್ಯವಹಾರಗಳಿಗೆ ಸಂಬಂಧಿಸಿದ ವಿವಾದಗಳ ನಂತರ ಗೋಪಾಲ್ ರಾವ್ ಅವರನ್ನು ಇಲ್ಲಿಗೆ ಕರೆತರಲಾಗಿತ್ತು. ಅವರು ದರ್ಶನ ವ್ಯವಸ್ಥೆಯಂತಹ ದೈನಂದಿನ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದಾರೆ.
ಹಣಕಾಸಿನ ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಅನಿಲ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಅವರಿಗೂ RSS ಸಂಪರ್ಕವಿದೆ. (ಮಿಶ್ರಾ ಅವರು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಜವಾಬ್ದಾರಿಯನ್ನೂ ಹೊಂದಿದ್ದಾರೆ.) ಹೋಮಿಯೋಪತಿ ವೈದ್ಯರಾಗಿರುವ ಮಿಶ್ರಾ ಅವರು ಹಲವು ವರ್ಷಗಳಿಂದ ಅವಧ್ ಪ್ರಾಂತ್ಯದ RSS ಪ್ರಾಂತ ಕಾರ್ಯವಾಹರಾಗಿದ್ದರೆ, ಶ್ರೀವಾಸ್ತವ ಅವರು ಅಯೋಧ್ಯೆಯ ಆಚಾರ್ಯ ನಗರ ಪ್ರದೇಶದ ಹಿರಿಯ RSS ಸಂಘಚಾಲಕರಾಗಿದ್ದಾರೆ.
ಮಂದಿರದ ದೈನಂದಿನ ಚಟುವಟಿಕೆಗಳ ಒಟ್ಟಾರೆ ಉಸ್ತುವಾರಿ ಹೊತ್ತಿರುವ ರಾಯ್ ಅವರು ದೇವಸ್ಥಾನಕ್ಕೆ ಸಂಬಂಧಿಸಿದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಬಹುತೇಕ ಎಲ್ಲಾ ನೇಮಕಾತಿಗಳಲ್ಲಿ ಇವರ ನಿರ್ಧಾರವೇ ಪ್ರಮುಖವಾಗಿರುತ್ತದೆ. RSSನ ಸಹ-ಸರ್ಕಾರ್ಯವಾಹ ಕೃಷ್ಣ ಗೋಪಾಲ್ ಮತ್ತು ಮಾಜಿ ಸರ್ಕಾರ್ಯವಾಹ ಭೈಯ್ಯಾಜಿ ಜೋಶಿ ಅವರಂತಹ ಇತರ RSS ನಾಯಕರು ಇಲ್ಲಿಗೆ ಭೇಟಿ ನೀಡಿ ಸಮನ್ವಯ ನಡೆಸುತ್ತಾರಾದರೂ, ಅವರ ಪಾತ್ರ ಹೆಚ್ಚಾಗಿ ಸಲಹೆ ನೀಡುವ ಮಟ್ಟಕ್ಕೆ ಸೀಮಿತವಾಗಿದೆ.
ಸ್ಥಳೀಯ RSS ಪದಾಧಿಕಾರಿಯೊಬ್ಬರು ಮಾತನಾಡಿ, ಯಾರದ್ದೋ ಸಂಬಂಧಿಕರು ಎಂಬ ಕಾರಣಕ್ಕೆ ಹಲವು ಉದ್ಯೋಗಿಗಳನ್ನು ಸೂಕ್ತ ಪರಿಶೀಲನೆ ನಡೆಸದೇ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಇದೇ ಮೂಲ ಕಾರಣ ಎಂದು ಹೇಳಿದ್ದಾರೆ.
ಸಂಘ ಪರಿವಾರದ ಮೂಲವೊಂದು, "ಚಂಪತ್ ಜಿ ಅವರು ಟ್ರಸ್ಟ್ನ ವ್ಯವಹಾರಗಳನ್ನು RSS ಕಚೇರಿಯ ರೀತಿಯಲ್ಲಿಯೇ ನಿರ್ವಹಿಸುತ್ತಾರೆ. ಆದರೆ ಇಲ್ಲಿ ಅದು ಪ್ರಯೋಜನಕ್ಕೆ ಬರುತ್ತಿಲ್ಲ" ಎಂದು ಹೇಳಿದೆ.
'The Indian Expressʼ ಪತ್ರಿಕೆಯು ರಾಯ್, ಮಿಶ್ರಾ ಮತ್ತು ಶ್ರೀವಾಸ್ತವ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ, ಅವರು ಲಭ್ಯವಾಗಲಿಲ್ಲ ಅಥವಾ ಮಾತನಾಡಲು ನಿರಾಕರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಾವ್, ಈಗಾಗಲೇ SIT ತನಿಖೆ ನಡೆಸುತ್ತಿರುವುದರಿಂದ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅದರ ವರದಿಗಾಗಿ ಕಾಯೋಣ ಎಂದು ಹೇಳಿದ್ದಾರೆ.
ನಿರ್ಮೋಹಿ ಅಖಾಡದ ಮತ್ತೊಬ್ಬ ಟ್ರಸ್ಟಿ ದಿನೇಂದ್ರ ದಾಸ್ ಮಾತನಾಡಿ, ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ನನಗಿದೆ. ಈ ಹಂತದಲ್ಲಿ ನಾನು ಇದಕ್ಕಿಂತ ಹೆಚ್ಚು ಏನನ್ನೂ ಹೇಳಲಾರೆ ಎಂದು ತಿಳಿಸಿದ್ದಾರೆ.
ಟ್ರಸ್ಟ್ ಕಚೇರಿಯಲ್ಲಿ ಕೆಲಸ ಮಾಡುವ ಮೂಲವೊಂದರ ಪ್ರಕಾರ, ಈ ವಿವಾದ ಸ್ಫೋಟಗೊಳ್ಳುವ ಕೆಲವು ವಾರಗಳ ಮುನ್ನ ಬಜರಂಗದಳದ ಸಂಸ್ಥಾಪಕ ವಿನಯ್ ಕಟಿಯಾರ್ ಅವರಂತಹ ಹಿರಿಯ ಸಂಘ ಪರಿವಾರದ ನಾಯಕರೊಂದಿಗೆ ಚಂಪತ್ ರಾಯ್ ಅವರು ತೀವ್ರ ವಾಗ್ವಾದ ನಡೆಸಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಟ್ರಸ್ಟ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಕಟಿಯಾರ್, "ಇಂತಹ ಜನರಿಗೆ ಟ್ರಸ್ಟ್ನಲ್ಲಿ ಸ್ಥಾನವಿಲ್ಲ. ಅವರನ್ನು ತಕ್ಷಣವೇ ತೆಗೆದುಹಾಕಬೇಕು. ಅವರೆಲ್ಲರೂ ಕಳ್ಳರು (ಸಬ್ ಕೆ ಸಬ್ ಚೋರ್ ಹೈ)" ಎಂದು ಕಿಡಿಕಾರಿದ್ದಾರೆ.
1980ರ ದಶಕದಿಂದಲೂ ರಾಮಮಂದಿರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರಮಟ್ಟದ ಪ್ರಚಾರಕರೊಬ್ಬರು, ಈ ಆರೋಪಗಳು ಸಂಘದ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ. ಮಂದಿರ ಚಳವಳಿಯ ಪ್ರಮುಖ ರೂವಾರಿಗಳಾಗಿದ್ದ ಅಶೋಕ್ ಸಿಂಘಾಲ್ ಜಿ ಮತ್ತು ಮೊರೋಪಂತ್ ಪಿಂಗಳೆ ಜಿ ಅವರು ನಿರ್ಮಾಣವಾಗುವ ಮಂದಿರವನ್ನು ಟ್ರಸ್ಟ್ ನಿರ್ವಹಿಸುವುದನ್ನು ಎಂದಿಗೂ ಬಯಸಿರಲಿಲ್ಲ. ಅವರು ಬದುಕಿದ್ದರೆ ಖಂಡಿತವಾಗಿಯೂ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಬಿಜೆಪಿಯೇ ಮುಂಚೂಣಿಯಲ್ಲಿ ನಿಂತು ಸಾಕಾರಗೊಳಿಸಿದ ಈ ಯೋಜನೆಯಲ್ಲಿನ ಭ್ರಷ್ಟಾಚಾರದ ವಿಷಯವು ಆದಿತ್ಯನಾಥ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಮಗೆ ಸಿಕ್ಕ ದೊಡ್ಡ ಅಸ್ತ್ರ ಎಂದು ವಿರೋಧ ಪಕ್ಷಗಳು ಭಾವಿಸಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಮಮಂದಿರದ ನಿಧಿ ದುರುಪಯೋಗದ ಆರೋಪಗಳನ್ನು ಅತ್ಯಂತ ನಾಚಿಕೆಗೇಡು ಎಂದು ಕರೆದಿದ್ದಾರೆ. ಈ ವಿಷಯದಲ್ಲಿ "ಸರ್ಕಾರದ ಮೌನ" ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಅಯೋಧ್ಯೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರಾಯ್, ಬಿಜೆಪಿ ವಿರುದ್ಧ ನಂಬಿಕೆಯನ್ನು ಮಾರಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. "ಧರ್ಮದ ಹೆಸರಿನಲ್ಲಿ ಬಂದವರು ಅದನ್ನೇ ವ್ಯಾಪಾರ ಮಾಡಿದ್ದಾರೆ. ಇಲ್ಲಿ ವ್ಯವಸ್ಥಿತ ದರೋಡೆ ನಡೆದಿದೆ" ಎಂದು ಹೇಳಿರುವ ಅವರು, ಈ ಲೋಪದೋಷದ ಹೊಣೆಗಾರಿಕೆ ಉನ್ನತ ಮಟ್ಟದ ನಾಯಕರವರೆಗೂ ಹೋಗುತ್ತದೆ ಎಂದು ತಿಳಿಸಿದ್ದಾರೆ.
►ಇತರ ದೇವಸ್ಥಾನಗಳ ಉದಾಹರಣೆಗಳು
ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟಿಯೊಬ್ಬರು ಮಾತನಾಡಿ, ಅಯೋಧ್ಯೆಯಲ್ಲಿ ಕೇಳಿಬರುತ್ತಿರುವ ಮಾದರಿಯ ಯಾವುದೇ ಘಟನೆ ತಮಗೆ ನೆನಪಿಲ್ಲ ಎಂದು ಹೇಳಿದ್ದಾರೆ. "ನಮ್ಮಲ್ಲಿ ಸುಮಾರು 50 ಕಾಣಿಕೆ ಡಬ್ಬಿಗಳಿವೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಇವುಗಳನ್ನು ತೆರೆಯಲಾಗುತ್ತದೆ. ದೇವಸ್ಥಾನದ ಆವರಣದಲ್ಲಿಯೇ ಇಬ್ಬರು ಸರ್ಕಾರಿ ಪ್ರತಿನಿಧಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ (ಪ್ರಸ್ತುತ HDFC ಬ್ಯಾಂಕ್) ಸಮ್ಮುಖದಲ್ಲಿ ಯಾವುದೇ ಸಂಭಾವನೆ ಪಡೆಯದ ಮಹಿಳಾ ಭಕ್ತರು ಹಣವನ್ನು ಎಣಿಸುತ್ತಾರೆ. ಎಲ್ಲವೂ ಅತ್ಯಂತ ಪಾರದರ್ಶಕವಾಗಿ, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಬಹಿರಂಗವಾಗಿ ನಡೆಯುತ್ತದೆ" ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮತ್ತೊಂದು ಪ್ರಮುಖ ದೇವಸ್ಥಾನವಾದ ವಿಂಧ್ಯಾವಾಸಿನಿ (ವಿಂಧ್ಯಾಚಲ) ಮಂದಿರದಲ್ಲಿ, ಶಿಫ್ಟ್ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ಪಂಡಾಗಳು (ಪೂಜಾರಿಗಳು) ಕಾಣಿಕೆಯನ್ನು ಸಂಗ್ರಹಿಸುತ್ತಾರೆ. ಕಾಣಿಕೆ ಡಬ್ಬಿಗಳಲ್ಲಿನ ಹಣವನ್ನು ನಂತರ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಗುತ್ತದೆ. ವಿಂಧ್ಯಾಚಲದ ಪಂಡಾಗಳ ಮುಖಂಡರೊಬ್ಬರು ಮಾತನಾಡಿ, "ನನ್ನ ನೆನಪಿನಲ್ಲಿ ಕಾಣಿಕೆ ಎಣಿಕೆಗೆ ಸಂಬಂಧಿಸಿದಂತೆ ನಡೆದ ಏಕೈಕ ವಿವಾದವೆಂದರೆ ಜನವರಿ 2016ರದ್ದು. ಆಗ ಹಣವನ್ನು ಕದಿಯುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದ. ಆತನ ವಿರುದ್ಧ ತಕ್ಷಣವೇ FIR ದಾಖಲಿಸಲಾಗಿತ್ತು" ಎಂದು ತಿಳಿಸಿದ್ದಾರೆ.
ಕೃಪೆ: IndianExpress.com






