ಫುಟ್ಬಾಲ್ ಜಗತ್ತಿನ ವಾಣಿಜ್ಯ ಲೆಕ್ಕಾಚಾರ: ವಿಶ್ವಕಪ್ನಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?

Photo: X/@FIFAWorldCup
ಈ ಬಾರಿಯ ಫುಟ್ಬಾಲ್ ವಿಶ್ವಕಪ್ ಟೂರ್ನಿಯು ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಆಯೋಜನೆಯಾಗಿದೆ. ಹೆಚ್ಚಿನ ದೇಶಗಳ ಭಾಗವಹಿಸುವಿಕೆ ಹಾಗೂ ಪಂದ್ಯಗಳ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಹಣ ಗಳಿಸುವ ಅವಕಾಶಗಳೂ ಸೃಷ್ಟಿಯಾಗಿವೆ. ಮೈದಾನದಲ್ಲಿ ಜಗತ್ತಿನ ಖ್ಯಾತ ಫುಟ್ಬಾಲ್ ತಾರೆಗಳು ಹೊಸ ಇತಿಹಾಸ ಬರೆಯುತ್ತಿದ್ದರೆ, ಮೈದಾನದ ಹೊರಗೆ ಬಿಲಿಯನ್ ಗಟ್ಟಲೆ ಡಾಲರ್ ಹಣ ಹರಿದುಬರುತ್ತಿದೆ.
ಆದರೆ, ಈ ಟೂರ್ನಿಯಿಂದ ಎಲ್ಲರಿಗೂ ಬಂಪರ್ ಲಾಭವೇನೂ ಆಗುತ್ತಿಲ್ಲ. ಕೆಲವರು ಭಾರೀ ಲಾಭ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ನಷ್ಟ ಅನುಭವಿಸುತ್ತಿದ್ದಾರೆ.
► ಲಾಭದ ಹಾದಿಯಲ್ಲಿ FIFA
ವಿಶ್ವ ಫುಟ್ಬಾಲ್ ನಿಯಂತ್ರಣ ಮಂಡಳಿಯಾದ 'ಫಿಫಾ' ಈ ವಿಶ್ವಕಪ್ನಿಂದ ಸಿಕ್ಕಾಪಟ್ಟೆ ಹಣಗಳಿಸುತ್ತಿದೆ. 2022ರ ಖತರ್ ವಿಶ್ವಕಪ್ನಿಂದ ಫಿಫಾ ದಾಖಲೆಯ 7.6 ಬಿಲಿಯನ್ ಡಾಲರ್ (ಅಂದಾಜು ರೂ. 73,129 ಕೋಟಿ) ಆದಾಯ ಗಳಿಸಿತ್ತು. 2026ರಲ್ಲಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಆಯೋಜಿಸುತ್ತಿರುವ 48 ತಂಡಗಳ ಬೃಹತ್ ಟೂರ್ನಿಯಿಂದ ಈ ದಾಖಲೆಯೂ ಮುರಿಯುವ ನಿರೀಕ್ಷೆಯಿದೆ.
ಡೋಯ್ಚ ಬ್ಯಾಂಕ್ ರಿಸರ್ಚ್ನ ಹಿರಿಯ ತಜ್ಞರಾದ ಮಾರಿಯನ್ ಲ್ಯಾಬೋರ್ ಅವರ ಪ್ರಕಾರ, ಯಾವುದೇ ಸಂಶಯವಿಲ್ಲದೆ 'ಫಿಫಾ' ಈ ಟೂರ್ನಿಯ ಪ್ರಮುಖ ಲಾಭದಾಯಕ ಸಂಸ್ಥೆಯಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಅದರ ಒಟ್ಟು ಆದಾಯವು ಸುಮಾರು 13 ಬಿಲಿಯನ್ ಡಾಲರ್ (ಸುಮಾರು 1.25 ಲಕ್ಷ ಕೋಟಿ ರೂ.) ತಲುಪುವ ನಿರೀಕ್ಷೆಯಿದೆ.
ಪ್ರಸಾರ ಹಕ್ಕುಗಳು, ಪರವಾನಗಿ ಮತ್ತು ಆತಿಥ್ಯ ಹಕ್ಕುಗಳು, ಪ್ರಾಯೋಜಕತ್ವದ ಒಪ್ಪಂದಗಳು ಹಾಗೂ ಟಿಕೆಟ್ ಮಾರಾಟದಿಂದ ಫಿಫಾ ಆದಾಯ ಗಳಿಸುತ್ತದೆ.
"ಟಿಕೆಟ್ಗಳ ಮರುಮಾರಾಟಕ್ಕಾಗಿಯೇ ಫಿಫಾ ತನ್ನದೇ ಆದ ಅಧಿಕೃತ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಇಲ್ಲಿ ಟಿಕೆಟ್ ಖರೀದಿಸುವವರು ಮತ್ತು ಮಾರಾಟ ಮಾಡುವವರು ಇಬ್ಬರಿಂದಲೂ ಶೇಕಡಾ 15 ರಷ್ಟು ಶುಲ್ಕವನ್ನು ವಸೂಲಿ ಮಾಡುತ್ತಿದೆ" ಎಂದು ಲ್ಯಾಬೋರ್ ವಿವರಿಸುತ್ತಾರೆ.
ಮುಂಬರುವ ಟೂರ್ನಿಗಳಲ್ಲೂ ಇದು ಮುಂದುವರಿಯುವ ಸಾಧ್ಯತೆಯಿದೆ. ಫಿಫಾ ಈ ಕೂಟವನ್ನು 64 ತಂಡಗಳಿಗೆ ವಿಸ್ತರಿಸಲು ಯೋಚಿಸುತ್ತಿದ್ದು, ಇದರಲ್ಲಿ ಚೀನಾ ಮತ್ತು ಭಾರತದಂತಹ ದೇಶಗಳು ಸೇರಿಕೊಳ್ಳಬಹುದು. ಇದರಿಂದ ವೀಕ್ಷಕರ ಸಂಖ್ಯೆ ಕೋಟ್ಯಂತರ ಹೆಚ್ಚಾಗಲಿದೆ.
►ಅಭಿಮಾನಿಗಳ ಜೇಬಿಗೆ ಹೊರೆ
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಜೀವಮಾನದ ಕನಸು ನನಸಾಗಿರಬಹುದು, ಆದರೆ ಆರ್ಥಿಕ ದೃಷ್ಟಿಯಿಂದ ಈ ಟೂರ್ನಿ ಅವರಿಗೆ ಭಾರೀ ಹೊರೆಯಾಗಿದೆ.
ಟಿಕೆಟ್ಗಳಿಗಾಗಿ ಭಾರೀ ಪ್ರಮಾಣದ ಹಣವನ್ನು ವ್ಯಯಿಸಬೇಕಾಗಿ ಬಂದಿರುವುದು ಮತ್ತು ಬೇಡಿಕೆ ಹೆಚ್ಚಾದಾಗ ದರ ಏರಿಸುವ ಫಿಫಾದ 'ಡೈನಾಮಿಕ್ ಪ್ರೈಸಿಂಗ್' ನೀತಿಯ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ಅಮೆರಿಕ ಮತ್ತು ಪರಾಗ್ವೆ ನಡುವಿನ ಆರಂಭಿಕ ಪಂದ್ಯದ ಟಿಕೆಟ್ ದರ 1,000 ಡಾಲರ್ ಇರಬಹುದು ಎಂಬ ಪ್ರಶ್ನೆಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ, "ನಾನಂತೂ ಇಷ್ಟೊಂದು ಹಣ ಕೊಡುವುದಿಲ್ಲ" ಎಂದು ಒಪ್ಪಿಕೊಂಡಿದ್ದರು.
ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದ ಅಧಿಕೃತ ಟಿಕೆಟ್ ದರವನ್ನು 32,970 ಡಾಲರ್ ಎಂದು ನಿಗದಿಪಡಿಸಲಾಗಿತ್ತು. ಆದರೆ, ಮರುಮಾರಾಟದ ಕೆಲವು ಟಿಕೆಟ್ಗಳ ಬೆಲೆ 2 ಮಿಲಿಯನ್ ಡಾಲರ್ಗಿಂತಲೂ ಅಧಿಕವಾಗಿತ್ತು.
ಫಿಫಾ ಅಧ್ಯಕ್ಷ ಇನ್ಫಾಂಟಿನೋ ಅವರು ಟಿಕೆಟ್ ದರವನ್ನು ಸಮರ್ಥಿಸಿಕೊಂಡಿದ್ದು, ಇವು ಅಮೆರಿಕದ ಇತರ ಕ್ರೀಡಾಕೂಟಗಳ ದರಕ್ಕೆ ಸಮನಾಗಿವೆ ಎಂದು ವಾದಿಸಿದ್ದಾರೆ.
ಕೇವಲ ಟಿಕೆಟ್ ಮಾತ್ರವಲ್ಲದೆ, ವಿಮಾನ ಪ್ರಯಾಣ, ಊಟ ಮತ್ತು ವಸತಿ ವೆಚ್ಚಗಳೂ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕಿವೆ.
ಇದಕ್ಕೊಂದು ಪ್ರಮುಖ ಉದಾಹರಣೆಯೆಂದರೆ, ನ್ಯೂಜೆರ್ಸಿ ಟ್ರಾನ್ಸಿಟ್ ರೈಲು ಟಿಕೆಟ್ ದರ ಏರಿಕೆಯ ಸುದ್ದಿ. ಮೆಟ್ಲೈಫ್ ಸ್ಟೇಡಿಯಂಗೆ ಕೇವಲ 30 ನಿಮಿಷಗಳ ರೈಲು ಪ್ರಯಾಣದ ಸಾಮಾನ್ಯ ದರ (ಹೋಗಿ ಬರಲು) 12.90 ಡಾಲರ್ ಇತ್ತು. ಆದರೆ ಟೂರ್ನಿಯ ಸಂದರ್ಭದಲ್ಲಿ ಇದನ್ನು 150 ಡಾಲರ್ಗೆ ಏರಿಸಲಾಗಿತ್ತು. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ದರವನ್ನು ಕಡಿತಗೊಳಿಸಲಾಯಿತಾದರೂ, ಸಾಮಾನ್ಯ ದರಕ್ಕಿಂತ ಹೆಚ್ಚಿನ ಹಣವನ್ನೇ ಪಡೆಯಲಾಯಿತು.
►ದುಡ್ಡು ಬಾಚಿದ ಪ್ರಸಾರಕರು ಮತ್ತು ಪ್ರಾಯೋಜಕರು
ಟೂರ್ನಿಯ ಪ್ರಸಾರ ಹಕ್ಕುಗಳನ್ನು ಪಡೆಯಲು ವಾಹಿನಿಗಳು ಭಾರೀ ಪ್ರಮಾಣದ ಹಣವನ್ನು ವ್ಯಯಿಸಬೇಕಾಗಿ ಬಂದಿದೆಯಾದರೂ, ದಾಖಲೆ ಮಟ್ಟದ ವೀಕ್ಷಕರ ಸಂಖ್ಯೆ ಮತ್ತು ಪ್ರಾಯೋಜಕರ ಆಸಕ್ತಿಯಿಂದಾಗಿ ಜಾಹೀರಾತುಗಳ ಮೂಲಕ ಇವು ಭಾರೀ ಲಾಭ ಗಳಿಸುತ್ತಿವೆ.
ಈ ಬಾರಿಯ ವಿಶ್ವಕಪ್ನಲ್ಲಿ ಫಿಫಾ ಆಟಗಾರರಿಗೆ ನೀರು ಕುಡಿಯಲು 'ಹೈಡ್ರೇಶನ್ ಬ್ರೇಕ್' (ವಿರಾಮ) ನಿಯಮವನ್ನು ಜಾರಿಗೆ ತಂದಿದೆ. ಇದು ಕೇವಲ ಕ್ರೀಡಾ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವೇ ಹೊರತು ಇದರಿಂದ ಮಂಡಳಿಗೆ ಯಾವುದೇ ಹೆಚ್ಚುವರಿ ಆದಾಯವಿಲ್ಲ ಎಂದು ಅಧ್ಯಕ್ಷ ಇನ್ಫಾಂಟಿನೋ ಹೇಳಿದ್ದಾರೆ.
ಆಟಗಾರರು ನೀರು ಕುಡಿಯಲು ನೀಡುವ ಈ 90 ಸೆಕೆಂಡುಗಳ ಸಮಯವು ಪ್ರಸಾರಕರು ಮತ್ತು ಪ್ರಾಯೋಜಕರಿಗೆ ತಮ್ಮ ಬ್ರ್ಯಾಂಡ್ಗಳನ್ನು ಪ್ರದರ್ಶಿಸಲು ಹೊಸ ವಾಣಿಜ್ಯ ಅವಕಾಶವನ್ನು ಒದಗಿಸಿದೆ. ಅದರಲ್ಲೂ ವಿಶೇಷವಾಗಿ, ಜಾಹೀರಾತುಗಳ ನಡುವೆಯೇ ಕ್ರೀಡೆಗಳನ್ನು ನೋಡಿ ರೂಢಿಯಾಗಿರುವ ಅಮೆರಿಕದ ಕ್ರೀಡಾ ಪ್ರೇಮಿಗಳಿಗೆ ಇದು ಹೊಸದೇನಲ್ಲ.
ಅಮೆರಿಕದ ಪ್ರಸಾರ ಹಕ್ಕುಗಳಿಗಾಗಿ ಸುಮಾರು 485 ಮಿಲಿಯನ್ ಡಾಲರ್ ಪಾವತಿಸಿದೆ ಎನ್ನಲಾದ 'ಫಾಕ್ಸ್ ಸ್ಪೋರ್ಟ್ಸ್', ಈ ಹೈಡ್ರೇಶನ್ ವಿರಾಮಗಳನ್ನು ಒಂದು ನಿರ್ದಿಷ್ಟ ಬ್ರ್ಯಾಂಡ್ನ ಪ್ರಾಯೋಜಕತ್ವದೊಂದಿಗೆ ಪ್ರಸಾರ ಮಾಡಲು ಆರಂಭಿಸಿದೆ.
ತಜ್ಞರ ಪ್ರಕಾರ, ಫಾಕ್ಸ್ ವಾಹಿನಿಯಲ್ಲಿ ವಿಶ್ವಕಪ್ನ 30 ಸೆಕೆಂಡುಗಳ ಸರಾಸರಿ ಜಾಹೀರಾತು ದರ 2,00,000 ದಿಂದ 3,00,000 ಡಾಲರ್ ವರೆಗಿದೆ. ಅಮೆರಿಕ ತಂಡದ ಪಂದ್ಯಗಳು ಹಾಗೂ ಟೂರ್ನಿಯ ಅಂತಿಮ ಹಂತದ ಪಂದ್ಯಗಳ ಅವಧಿಯಲ್ಲಿ ಇದು 7,50,000 ಡಾಲರ್ ವರೆಗೂ ತಲುಪಿತ್ತು.
ಇದರರ್ಥ, ಕೇವಲ ಹೈಡ್ರೇಶನ್ ವಿರಾಮದ ಜಾಹೀರಾತುಗಳಿಂದಲೇ ಅಮೆರಿಕ ಒಂದರಲ್ಲೇ 250 ಮಿಲಿಯನ್ ಡಾಲರ್ ಆದಾಯ ಹರಿದುಬರಬಹುದು. ಹೀಗಾಗಿ ಈ ನಿಯಮವು ಮುಂದೆಯೂ ಮುಂದುವರಿಯಲಿದೆ ಎಂಬ ಚರ್ಚೆಗಳು ಆರಂಭವಾಗಿವೆ.
"ಹೈಡ್ರೇಶನ್ ವಿರಾಮಗಳು ಸಂಪೂರ್ಣವಾಗಿ ಜಾಹೀರಾತು ಗಳಿಕೆಯ ಮೂಲಗಳಾಗಿವೆ. ಇವು ಮುಂದಿನ ದಿನಗಳಲ್ಲಿ ನಿಂತುಹೋದರೆ ನನಗೆ ಆಶ್ಚರ್ಯವಾಗುತ್ತದೆ. ಇನ್ನು ಮುಂದೆ ಟೂರ್ನಿಯ ವಿಸ್ತೃತ ರೂಪವೇ ಮುಂದುವರಿಯಲಿದೆ, ಏಕೆಂದರೆ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವುದೇ ಫಿಫಾದ ಹೊಸ ಬಿಸಿನೆಸ್ ಮಾಡೆಲ್ ಆಗಿದೆ" ಎಂದು ಡೋಯ್ಚ ಬ್ಯಾಂಕ್ ರಿಸರ್ಚ್ನ ಲ್ಯಾಬೋರ್ ಅಭಿಪ್ರಾಯಪಡುತ್ತಾರೆ.
ಬ್ರಿಟನ್ನಲ್ಲಿ ಬಿಬಿಸಿ ಮತ್ತು ಐಟಿವಿ ವಾಹಿನಿಗಳಲ್ಲಿ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳು ಈ ಹೈಡ್ರೇಶನ್ ವಿರಾಮದ ಜಾಹೀರಾತುಗಳಿಂದ ಬಚಾವಾಗಿದ್ದಾರೆ. ಏಕೆಂದರೆ ಬಿಬಿಸಿ ಯಾವುದೇ ಜಾಹೀರಾತುಗಳನ್ನು ಬಳಸುವುದಿಲ್ಲ ಮತ್ತು ಐಟಿವಿ ವಾಹಿನಿಯು 60 ನಿಮಿಷಗಳ ಅವಧಿಯಲ್ಲಿ ಇಷ್ಟೇ ಜಾಹೀರಾತು ನೀಡಬೇಕು ಎಂಬ ನಿಯಂತ್ರಕ ಸಂಸ್ಥೆಯ ಕಟ್ಟುನಿಟ್ಟಿನ ನಿಯಮಗಳಿಗೆ ಬದ್ಧವಾಗಿದೆ.
ವಿಶ್ವಕಪ್ನ ಅಧಿಕೃತ ಪ್ರಾಯೋಜಕರು ಈ ಕ್ರೀಡಾಕೂಟದೊಂದಿಗೆ ತಮ್ಮ ಬ್ರ್ಯಾಂಡ್ ಅನ್ನು ಜೋಡಿಸಿಕೊಳ್ಳಲು ಭಾರೀ ಪ್ರಮಾಣದ ಹಣವನ್ನು ಪಾವತಿಸುತ್ತಾರೆ. ಅಡಿಡಾಸ್ ಮತ್ತು ಕೋಕಾ-ಕೋಲಾದಂತಹ ಬ್ರ್ಯಾಂಡ್ಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವುದರಿಂದ ಇವು ಆರ್ಥಿಕವಾಗಿ ಲಾಭ ಪಡೆಯುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜರ್ಮನಿಯ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆದ ಅಡಿಡಾಸ್, ತನ್ನ ಪ್ರಮುಖ ಪ್ರತಿಸ್ಪರ್ಧಿ ನೈಕಿ ಸಂಸ್ಥೆಯೊಂದಿಗೆ ತೀವ್ರ ಪೈಪೋಟಿಗೆ ಇಳಿದಿದೆ. ಲ್ಯಾಮಿನ್ ಯಮಲ್, ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಲಿಯೋನೆಲ್ ಮೆಸ್ಸಿ ಅವರನ್ನೊಳಗೊಂಡ "ಬ್ಯಾಕ್ಯಾರ್ಡ್ ಲೆಜೆಂಡ್ಸ್" ಜಾಹೀರಾತಿಗಾಗಿ ಈ ಸಂಸ್ಥೆ ಸುಮಾರು 50 ಮಿಲಿಯನ್ ಪೌಂಡ್ ಖರ್ಚು ಮಾಡಿದೆ.
ಅಧಿಕೃತ ಪ್ರಾಯೋಜಕತ್ವ ಪಡೆಯದ ಕೆಲವು ಬ್ರ್ಯಾಂಡ್ಗಳ ಜಾಹೀರಾತುಗಳನ್ನು ಅಭಿಮಾನಿಗಳಿಂದ ದೂರವಿಡಲು ಫಿಫಾ ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಸ್ಯಾನ್ ಫ್ರಾನ್ಸಿಸ್ಕೋದ ಲೆವಿಸ್ ಸ್ಟೇಡಿಯಂನ ಹೊರಗಿರುವ 'ಲೆವಿಸ್' ಲೋಗೋವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಆದರೂ, ಇಂತಹ ಕ್ರಮಗಳಿಂದ ಈ ಬ್ರ್ಯಾಂಡ್ಗಳಿಗೆ ಪರೋಕ್ಷವಾಗಿ ಪ್ರಚಾರ ಸಿಗುತ್ತಿರುವುದು ವಿಶೇಷ.
►ಲಾಭ ಗಳಿಸಿದ ಡೇವಿಡ್ ಬೆಕ್ಹ್ಯಾಮ್
ಅಡಿಡಾಸ್ ಸಂಸ್ಥೆಯ ಪ್ರಮುಖ ಜಾಹೀರಾತು ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಸರ್ ಡೇವಿಡ್ ಬೆಕ್ಹ್ಯಾಮ್ ಅವರ ಕೃತಕ ಬುದ್ಧಿಮತ್ತೆ (AI) ಆವೃತ್ತಿಯನ್ನು ಒಳಗೊಂಡಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬೆಕ್ಹ್ಯಾಮ್ ಅವರಿಗೆ ಈ ಜಾಹೀರಾತಿನ ಚಿತ್ರೀಕರಣದಲ್ಲಿ ಖುದ್ದಾಗಿ ಭಾಗವಹಿಸಲು ಸಮಯವಿರಲಿಲ್ಲ ಎನ್ನಬಹುದು.
ಬ್ರಿಟನ್ನ ಮೊದಲ ಬಿಲಿಯನೇರ್ ಕ್ರೀಡಾಪಟು ಎನಿಸಿಕೊಂಡಿರುವ ಇವರು, 'ಹೋಮ್ ಡಿಪೋ'ದಿಂದ ಹಿಡಿದು 'ಬ್ಯಾಂಕ್ ಆಫ್ ಅಮೆರಿಕ'ದವರೆಗೆ ಸಾಲು ಸಾಲು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರು ಮೂಲತಃ ಯಾವ ಬ್ರ್ಯಾಂಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳುವುದೇ ಕಷ್ಟವಾಗುತ್ತದೆ.
ಫುಟ್ಬಾಲ್ ಆಟಕ್ಕೆ ವಿದಾಯ ಹೇಳಿ ದಶಕಕ್ಕೂ ಹೆಚ್ಚು ಸಮಯ ಕಳೆದಿದ್ದರೂ, ಬೆಕ್ಹ್ಯಾಮ್ ಇಂದಿಗೂ ಅಮೆರಿಕನ್ ಫುಟ್ಬಾಲ್ನ ಪ್ರಮುಖ ಮುಖವಾಗಿದ್ದಾರೆ. ಇವರ ಜಂಟಿ ಮಾಲಕತ್ವದ ಅಮೆರಿಕದ 'ಇಂಟರ್ ಮಿಯಾಮಿ' ಕ್ಲಬ್, ಮೇಜರ್ ಲೀಗ್ ಸಾಕರ್ನಲ್ಲೇ ಅತ್ಯಂತ ಶ್ರೀಮಂತ ಕ್ಲಬ್ ಆಗಿ ಹೊರಹೊಮ್ಮಿದ್ದು, ಇದರ ಮೌಲ್ಯ 1.45 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಮೈದಾನದಲ್ಲಿ ಅವರು ವಿಶ್ವಕಪ್ ಗೆಲ್ಲಲು ಸಾಧ್ಯವಾಗದಿರಬಹುದು, ಆದರೆ ಮೈದಾನದ ಹೊರಗಿನ ವಾಣಿಜ್ಯ ಜಗತ್ತಿನಲ್ಲಿ ಅವರು ದೊಡ್ಡ ಗೆಲುವು ಸಾಧಿಸಿದ್ದಾರೆ.
ಆತಿಥ್ಯ ವಹಿಸಿದ ನಗರಗಳಿಗೆ ನಷ್ಟ:
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದ ಒಟ್ಟು 16 ನಗರಗಳು ಪ್ರವಾಸಿಗರು ಮತ್ತು ಅಭಿಮಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಿವೆ. ಇದರಿಂದ ಸ್ಥಳೀಯ ಹೋಟೆಲ್ ಹಾಗೂ ಇತರ ವ್ಯವಹಾರಗಳಿಗೆ ಭಾರೀ ಉತ್ತೇಜನ ಸಿಗುತ್ತಿದೆ.
ಉದಾಹರಣೆಗೆ, ಸ್ಕಾಟ್ಲೆಂಡ್ನ ಅಭಿಮಾನಿಗಳು ಬೋಸ್ಟನ್ ನಗರದ ಜನರ ಮನಗೆದ್ದಿದ್ದಾರೆ. ಆದರೂ, ದೀರ್ಘಕಾಲದ ಆರ್ಥಿಕ ಲಾಭಗಳ ದೃಷ್ಟಿಯಿಂದ ಇಂತಹ ಕ್ರೀಡಾಕೂಟಗಳು ಆತಿಥ್ಯ ವಹಿಸುವ ನಗರಗಳಿಗೆ ಯಾವುದೇ ದೊಡ್ಡ ಪ್ರಯೋಜನ ನೀಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಟೂರ್ನಿಯಿಂದ ಜಾಗತಿಕ ಆರ್ಥಿಕತೆಗೆ ಸುಮಾರು 41 ಬಿಲಿಯನ್ ಡಾಲರ್ ಹಾಗೂ ಅಮೆರಿಕದ ಆರ್ಥಿಕತೆಗೆ ಮಾತ್ರ 17 ಬಿಲಿಯನ್ ಡಾಲರ್ ಕೊಡುಗೆ ಸಿಗಲಿದೆ ಮತ್ತು ಆತಿಥ್ಯ ರಂಗದಲ್ಲಿ ಸುಮಾರು 1,85,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಫಿಫಾ ಅಂದಾಜಿಸಿತ್ತು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ವಿಭಾಗದ ಸಂಶೋಧಕ ಹಾಗೂ 'ಆಕ್ಸ್ಫರ್ಡ್ ಗ್ಲೋಬಲ್ ಪ್ರಾಜೆಕ್ಟ್ಸ್' ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಬುಡ್ಜಿಯರ್ ಪ್ರಕಾರ, ಇಷ್ಟು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವುದರಿಂದ ನಿರೀಕ್ಷಿತ ದೀರ್ಘಕಾಲದ ಆರ್ಥಿಕ ಲಾಭಗಳು ವಾಸ್ತವದಲ್ಲಿ ಸಿಗುವುದಿಲ್ಲ.
ವಿಶ್ವಕಪ್ನ ಗೊಂದಲ ಮತ್ತು ಗದ್ದಲದಿಂದ ದೂರವಿರಲು ಬಯಸುವ ಸಾಮಾನ್ಯ ಪ್ರವಾಸಿಗರು ಇಂತಹ ನಗರಗಳಿಗೆ ಬರುವುದನ್ನು ನಿಲ್ಲಿಸುತ್ತಾರೆ. ಹೀಗಾಗಿ ಸಾಮಾನ್ಯವಾಗಿ ಆತಿಥ್ಯ ವಹಿಸುವ ನಗರಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯುತ್ತದೆ ಎಂದು ಅವರು ಹೇಳುತ್ತಾರೆ.
ಟೂರ್ನಿಯ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಬಹುದಾದರೂ, ಅವು ಕೇವಲ ಕಡಿಮೆ ವೇತನದ ತಾತ್ಕಾಲಿಕ ಉದ್ಯೋಗಗಳಾಗಿರುತ್ತವೆ. "ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ ಹೊರತು ಶಾಶ್ವತ ಸಂಪತ್ತನ್ನಲ್ಲ," ಎಂಬುದು ಅವರ ವಾದ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಟೂರ್ನಿ ಆರಂಭಕ್ಕೂ ಮುನ್ನ ಮೇ ತಿಂಗಳಲ್ಲಿ ಅಮೆರಿಕದ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಉದ್ಯೋಗ ನೇಮಕಾತಿ ಹೆಚ್ಚಾಗಿತ್ತು. ಆದರೆ ಈ ಭರಾಟೆ ತೀರಾ ಅಲ್ಪಾವಧಿಯದ್ದಾಗಿತ್ತು.
2012ರ ಲಂಡನ್ ಒಲಿಂಪಿಕ್ಸ್ ನೆನಪಿಸುವ ಬುಡ್ಜಿಯರ್, ಕ್ರೀಡಾಕೂಟದ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿ ಕಾರ್ಯಗಳು ಹಾಗೂ ವಸತಿ ಯೋಜನೆಗಳು ನಡೆದರೆ ಮಾತ್ರ ಅದು ನಿಜವಾದ ಆರ್ಥಿಕ ಲಾಭ ತರುತ್ತದೆ ಎನ್ನುತ್ತಾರೆ.
►ನಷ್ಟ ಅನುಭವಿಸಿದ ಹೋಟೆಲ್ಗಳು
ಹೋಟೆಲ್ ಕೊಠಡಿಗಳಿಗೆ ಇರಬಹುದು ಎಂದು ಅಂದಾಜಿಸಲಾಗಿದ್ದ ಬೇಡಿಕೆ ಈ ಬಾರಿ ಸೃಷ್ಟಿಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆತಿಥ್ಯ ವಹಿಸಿದ ನಗರಗಳಲ್ಲಿ ಹೋಟೆಲ್ ಬುಕ್ಕಿಂಗ್ ಪ್ರಮಾಣ ಕಡಿಮೆಯಾಗಿದೆ ಎಂದು ಉದ್ಯಮದ ಸಂಘಟನೆಗಳು ವರದಿ ಮಾಡಿವೆ.
ಕೆನಡಾದ ವ್ಯಾಂಕೋವರ್ ನಗರವು ಏಳು ಪಂದ್ಯಗಳ ಆತಿಥ್ಯ ವಹಿಸಿದ್ದರೂ ಸಹ, ಜೂನ್ ಮತ್ತು ಜುಲೈ ತಿಂಗಳ ಬುಕ್ಕಿಂಗ್ ಪ್ರಮಾಣ ಹಿಂದಿನ ವರ್ಷಗಳಿಗಿಂತ ಸಾಕಷ್ಟು ಹಿಂದೆ ಬಿದ್ದಿದೆ ಎಂದು ಬ್ರಿಟಿಷ್ ಕೊಲಂಬಿಯಾ ಹೋಟೆಲ್ ಅಸೋಸಿಯೇಷನ್ ಹೇಳಿದೆ. ಅಂತಿಮ ಬುಕ್ಕಿಂಗ್ ಅಂಕಿ-ಅಂಶಗಳು ಇನ್ನು ದೃಢಪಡಬೇಕಿದೆ.
ವಿಶ್ವಕಪ್ನಂತಹ ಟೂರ್ನಿಗಳು ಸತತ 40 ದಿನಗಳ ಕಾಲ ಹೋಟೆಲ್ಗಳು ಸಂಪೂರ್ಣ ಭರ್ತಿಯಾಗುವಂತೆ ಮಾಡುವುದಿಲ್ಲ. ಬದಲಿಗೆ ಕೇವಲ ಪಂದ್ಯಗಳು ನಡೆಯುವ ನಿರ್ದಿಷ್ಟ ದಿನಗಳಂದು ಮಾತ್ರ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಈ ಸಂಸ್ಥೆ ತಿಳಿಸಿದೆ.
ಅಮೆರಿಕದ ಹೋಟೆಲ್ ಮಾಲೀಕರಿಗೂ ಸಹ ಟೂರ್ನಿ ಆರಂಭಕ್ಕೂ ಮುನ್ನ ಇದ್ದ ನಿರೀಕ್ಷೆಗಳು ಸುಳ್ಳಾಗಿವೆ.
ಅಮೆರಿಕನ್ ಹೋಟೆಲ್ ಆಂಡ್ ಲಾಡ್ಜಿಂಗ್ ಅಸೋಸಿಯೇಷನ್ (AHLA), ಫಿಫಾ ತನ್ನ ಸ್ವಂತ ಬಳಕೆಗಾಗಿ ಅತಿ ಹೆಚ್ಚು ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವ ಮೂಲಕ ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಫಿಫಾ ನಿರಾಕರಿಸಿದೆ.
1998ರಲ್ಲಿ ಫ್ರಾನ್ಸ್ನಲ್ಲಿ ನಡೆದ ವಿಶ್ವಕಪ್ನಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು ಮತ್ತು ನಿರೀಕ್ಷಿತ ಬೇಡಿಕೆ ಕಂಡುಬಂದಿರಲಿಲ್ಲ ಎಂದು ಡೋಯ್ಚ ಬ್ಯಾಂಕ್ ರಿಸರ್ಚ್ನ ಲ್ಯಾಬೋರ್ ನೆನಪಿಸುತ್ತಾರೆ.
"ಎಪ್ರಿಲ್ ವೇಳೆಗೆ ಅಮೆರಿಕದ ಶೇಕಡಾ 80 ರಷ್ಟು ಹೋಟೆಲ್ ಉದ್ಯಮಿಗಳು ತಮ್ಮ ಆರಂಭಿಕ ಅಂದಾಜಿಗಿಂತ ಕಡಿಮೆ ಬುಕ್ಕಿಂಗ್ ಆಗಿರುವುದಾಗಿ ಹೇಳಿದ್ದಾರೆ. ನ್ಯೂಯಾರ್ಕ್ನ ಮೂರನೇ ಎರಡರಷ್ಟು ಮತ್ತು ಸಿಯಾಟಲ್ನ ಸುಮಾರು ಶೇಕಡಾ 80 ರಷ್ಟು ಹೋಟೆಲ್ ಮಾಲೀಕರು ನಿರೀಕ್ಷಿತ ಬೇಡಿಕೆ ಬಂದಿಲ್ಲ ಎಂದು ವರದಿ ಮಾಡಿದ್ದಾರೆ. ಅವರಲ್ಲಿ ಹಲವರು ಈ ಟೂರ್ನಿಯಿಂದ ಯಾವುದೇ ವಿಶೇಷ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ" ಎಂದು ಅವರು ವಿವರಿಸುತ್ತಾರೆ.
►ಬೆಟ್ಟಿಂಗ್ ಕಂಪನಿಗಳಿಗೆ ಲಾಭ
ಬೆಟ್ಟಿಂಗ್ ಉದ್ಯಮದಲ್ಲಿ ಹಿತಾಸಕ್ತಿ ಹೊಂದಿರುವ ಹಣಕಾಸು ಸೇವಾ ಸಂಸ್ಥೆ 'ಮ್ಯಾಕ್ವಾರಿ' ಪ್ರಕಾರ, 2026ರ ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಬೆಟ್ಟಿಂಗ್ ಕ್ರೀಡಾಕೂಟವಾಗಿ ಹೊರಹೊಮ್ಮುವ ಹಾದಿಯಲ್ಲಿದೆ. ಈ ಟೂರ್ನಿಯಲ್ಲಿ ಅಂದಾಜು 50 ಬಿಲಿಯನ್ ಡಾಲರ್ ಮೊತ್ತದ ಬೆಟ್ಟಿಂಗ್ ನಡೆಯಲಿದ್ದು, ಪ್ರತಿ ಪಂದ್ಯಕ್ಕೆ ಸುಮಾರು 500 ಮಿಲಿಯನ್ ಡಾಲರ್ ಪಣಕ್ಕಿಡಲಾಗುತ್ತಿದೆ.
ಟೂರ್ನಿಯಲ್ಲಿ ತಂಡಗಳ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸಂಸ್ಥೆ ಹೇಳಿದೆ. 2022ರಲ್ಲಿ 64 ಪಂದ್ಯಗಳು ನಡೆದಿದ್ದವು, ಆದರೆ ಈ ಬಾರಿ ಪಂದ್ಯಗಳ ಸಂಖ್ಯೆ 100ರ ಗಡಿ ದಾಟಲಿದೆ.
ಪ್ಯಾಡಿ ಪವರ್, ಬೆಟ್ಫೇರ್ ಮತ್ತು ಸ್ಕೈ ಬೆಟ್ ಸಂಸ್ಥೆಗಳ ಮಾಲೀಕತ್ವ ಹೊಂದಿರುವ 'ಫ್ಲಟ್ಟರ್ ಎಂಟರ್ಟೈನ್ಮೆಂಟ್', ಅಮೆರಿಕ ಮತ್ತು ಬ್ರೆಝಿಲ್ನಲ್ಲಿ ಕಂಡುಬಂದಿರುವ ವಾಣಿಜ್ಯ ಬೆಳವಣಿಗೆಯಿಂದಾಗಿ ಈ ಬಾರಿ ಬೆಟ್ಟಿಂಗ್ ಮೊತ್ತವು ಕಳೆದ ಟೂರ್ನಿಗಿಂತ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಿದೆ.
ಮ್ಯಾಕ್ವಾರಿ ಸಂಸ್ಥೆಯ ವಿಶ್ಲೇಷಕ ಚಾಡ್ ಬೇನನ್ ಅವರ ಪ್ರಕಾರ, ಸಾಂಪ್ರದಾಯಿಕವಾಗಿ ಪಂದ್ಯ ಆರಂಭಕ್ಕೂ ಮುನ್ನ ಕಟ್ಟುತ್ತಿದ್ದ ಬೆಟ್ಟಿಂಗ್ ವಿಧಾನದ ಜಾಗವನ್ನು ಈಗ 'ಇನ್-ಪ್ಲೇ ಬೆಟ್ಟಿಂಗ್' (ಪಂದ್ಯ ನಡೆಯುತ್ತಿರುವಾಗಲೇ ಕಟ್ಟುವ ಬೆಟ್ಟಿಂಗ್) ಆಕ್ರಮಿಸಿಕೊಂಡಿದೆ.
"ಹಿಂದೆಲ್ಲಾ ಪಂದ್ಯ ಆರಂಭಕ್ಕೂ ಮುನ್ನವೇ ಬೆಟ್ಟಿಂಗ್ ಕಟ್ಟಿ, ನಂತರ ಸುಮ್ಮನೆ ಕುಳಿತು ಪಂದ್ಯ ವೀಕ್ಷಿಸಬೇಕಾಗಿತ್ತು. ಆದರೆ ಈಗ ಮೈದಾನದಲ್ಲಿ ನಡೆಯುವ ಆಟಕ್ಕೆ ತಕ್ಕಂತೆ ತಕ್ಷಣ ಪ್ರತಿಕ್ರಿಯಿಸುತ್ತಾ, ತಮ್ಮ ಅನಿಸಿಕೆಗಳನ್ನು ಬದಲಾಯಿಸುತ್ತಾ ಬೆಟ್ಟಿಂಗ್ ಕಟ್ಟಬಹುದು" ಎಂದು ಅವರು ವಿವರಿಸುತ್ತಾರೆ.
ಅಮೆರಿಕದಲ್ಲಿ ಕ್ರೀಡಾ ಬೆಟ್ಟಿಂಗ್ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಹೊಸ ಉದ್ಯಮವಾಗಿದೆ. 2018ರವರೆಗೆ ಲಾಸ್ ವೇಗಾಸ್ ಇರುವ ನೆವಾಡಾ ರಾಜ್ಯದಲ್ಲಿ ಮಾತ್ರ ಕ್ರೀಡಾ ಬೆಟ್ಟಿಂಗ್ ಕಾನೂನುಬದ್ಧವಾಗಿತ್ತು. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ದೇಶದ ಹಲವು ರಾಜ್ಯಗಳು ಇದನ್ನು ಕಾನೂನುಬದ್ಧಗೊಳಿಸಲು ದಾರಿ ಸುಲಭವಾಯಿತು.
ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಸೇರಿದಂತೆ ಅಮೆರಿಕದ ಕೆಲವು ರಾಜ್ಯಗಳಲ್ಲಿ ಕ್ರೀಡಾ ಬೆಟ್ಟಿಂಗ್ ಇಂದಿಗೂ ಕಾನೂನುಬಾಹಿರವಾಗಿದೆ. ಇಂತಹ ಪ್ರದೇಶಗಳಲ್ಲಿ 'ಪ್ರೆಡಿಕ್ಷನ್ ಮಾರ್ಕೆಟ್ಸ್' ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಯುವಕರಲ್ಲಿ ಹೆಚ್ಚು ಕ್ರೇಜ್ ಹೊಂದಿರುವ ಬಿಲಿಯನ್ ಡಾಲರ್ ಮೌಲ್ಯದ ಈ ಉದ್ಯಮವು ತಂತ್ರಜ್ಞಾನದ ನೆರವಿನಿಂದ ವೇಗವಾಗಿ ಬೆಳೆಯುತ್ತಿದೆ. ಇವುಗಳನ್ನು ಅಧಿಕೃತವಾಗಿ ಬೆಟ್ಟಿಂಗ್ ಎಂದು ವರ್ಗೀಕರಿಸಲಾಗಿಲ್ಲ. ಹೀಗಾಗಿ ಅಭಿಮಾನಿಗಳು ತಾವು ಯಾವುದೇ ರಾಜ್ಯದಲ್ಲಿದ್ದರೂ ಇವುಗಳ ಮೂಲಕ ಪಂದ್ಯಗಳ ಫಲಿತಾಂಶದ ಮೇಲೆ ಹಣ ಪಣಕ್ಕಿಡುತ್ತಿದ್ದಾರೆ.
ಕೃಪೆ: bbc.com






