ಬರೋಡಾದ ಆಲದ ಮರದ ಕೆಳಗೆ ಹುಟ್ಟಿದ ‘ಅಂಬೇಡ್ಕರ್’ ಎಂಬ ಮಹಾ ಸಂಕಲ್ಪ
► ಬದುಕಿಗೆ ತಿರುವು ನೀಡಿದ ಆ ಕರಾಳ ಸಂಜೆ ► ಅಸ್ಪೃಶ್ಯತೆಯ ಅವಮಾನದಿಂದ ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಹೋರಾಟದವರೆಗೆ ಅಂಬೇಡ್ಕರ್ ಅವರ ಪಯಣ ►ಆ ದಿನಗಳು…

1917ರ ಸೆಪ್ಟೆಂಬರ್ 23ರ ಮುಸ್ಸಂಜೆ. ಗುಜರಾತಿನ ಬರೋಡಾ ನಗರದ ಕಮತಿ ಬಾಗ್ ಸಾರ್ವಜನಿಕ ಉದ್ಯಾನವನದ ಮೂಲೆಯಲ್ಲಿದ್ದ ದೊಡ್ಡ ಆಲದ ಮರದ ಕೆಳಗೆ ಇಪ್ಪತ್ತಾರು ವರ್ಷದ ಒಬ್ಬ ಯುವಕ ಬಂದು ಕುಳಿತಿದ್ದ. ಆತನ ಎದೆಯಲ್ಲಿ ರೋದನವಿತ್ತು, ಕಣ್ಣುಗಳಲ್ಲಿ ಬೆಂಕಿಯಿತ್ತು, ಕೈಯಲ್ಲೊಂದು ಪುಟ್ಟ ಬ್ಯಾಗಿತ್ತು.
ಆ ಯುವಕ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ; ಜಗತ್ತಿನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ಮುಗಿಸಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಗ್ರೇಸ್ ಇನ್ ನಲ್ಲಿ ಕಾನೂನು ಮತ್ತು ಅರ್ಥಶಾಸ್ತ್ರದ ಆಳವಾದ ಜ್ಞಾನವನ್ನು ಸಂಪಾದಿಸಿ ತಾಯ್ನಾಡಿಗೆ ಮರಳಿದ್ದ ಮಹಾನ್ ಪ್ರತಿಭಾವಂತ ಯುವ ವಿದ್ವಾಂಸ ಭೀಮರಾವ್ ರಾಮ್ಜಿ ಅಂಬೇಡ್ಕರ್.
ಅಮೆರಿಕ ಮತ್ತು ಬ್ರಿಟನ್ನ ಮುಕ್ತ ವಾತಾವರಣದಲ್ಲಿ ಬುದ್ಧಿಜೀವಿಯಾಗಿ ಗೌರವಿಸಲ್ಪಟ್ಟಿದ್ದ ಅದೇ ವಿದ್ವಾಂಸನಿಗೆ ತನ್ನ ಸ್ವಂತ ನೆಲದಲ್ಲಿ ಉಳಿದುಕೊಳ್ಳಲು ಒಂದು ಪುಟ್ಟ ಕೋಣೆ ಸಿಗಲಿಲ್ಲ. ಕುಡಿಯಲು ಒಂದು ಬೊಗಸೆ ನೀರು ಸಿಗಲಿಲ್ಲ. ಜನ್ಮದ ಆಧಾರದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆಯೆಂಬ ಶತಮಾನಗಳ ಕರಾಳ ಪದ್ಧತಿಯು ಆತನ ಜ್ಞಾನ, ಪಾಂಡಿತ್ಯ ಮತ್ತು ಕಠಿಣ ಪರಿಶ್ರಮವನ್ನೆಲ್ಲಾ ಕೇವಲ ಒಂದು ಕ್ಷಣದಲ್ಲಿ ಕಸದಬುಟ್ಟಿಗೆಸೆದಿತ್ತು.
ಆ ಆಲದ ಮರದ ನೆರಳಿನಲ್ಲಿ ಕುಳಿತು ಅಂಬೇಡ್ಕರ್ ಕಣ್ಣೀರಿಟ್ಟರು. ಆದರೆ ಆ ಕಣ್ಣೀರು ಕೇವಲ ದೌರ್ಬಲ್ಯದ ಅಳು ಆಗಿರಲಿಲ್ಲ; ಅದು ಭಾರತದ ಸಾಮಾಜಿಕ ಚರಿತ್ರೆಯನ್ನು ಬುಡಮೇಲು ಮಾಡುವ ಮಹಾ ಸಂಕಲ್ಪದ ಉದಯವಾಗಿತ್ತು. ಇತಿಹಾಸವು ಆ ದಿನವನ್ನು ‘ಸಂಕಲ್ಪ ದಿವಸ’ವೆಂದು ದಾಖಲಿಸಿತು.
ಈ ಘಟನೆಯ ಮೂಲವನ್ನು ಅರಿಯಲು 1913ರ ಕಾಲಘಟ್ಟಕ್ಕೆ ಮರಳಬೇಕು.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಡವೆ ಗ್ರಾಮದ ಮಹಾರ್ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ ಭೀಮರಾವ್, ಬಾಲ್ಯದಿಂದಲೇ ಅಸ್ಪೃಶ್ಯತೆಯ ಅವಮಾನಗಳನ್ನು ಉಂಡು ಬೆಳೆದವರು. ಸತಾರಾದ ಶಾಲೆಯಲ್ಲಿ ನೆಲದ ಮೇಲೆ ಪ್ರತ್ಯೇಕ ಚಾಪೆ ಹಾಕಿ ಕುಳಿತುಕೊಳ್ಳಬೇಕಿತ್ತು; ಶಾಲೆಯ ಪ್ಯೂನ್ ಮೇಲಿನಿಂದ ನೀರು ಸುರಿದರೆ ಮಾತ್ರ ಆ ನೀರನ್ನು ಕುಡಿಯುವ ಹಕ್ಕಿತ್ತು.
ಆದರೆ ಅಂಬೇಡ್ಕರ್ ಅವರ ಅದ್ಭುತ ಜ್ಞಾನದಾಹವನ್ನು ಗುರುತಿಸಿದ ಬರೋಡಾ ಸಂಸ್ಥಾನದ ಪ್ರಗತಿಪರ ದೊರೆ ಮಹಾರಾಜ ಮೂರನೇ ಸಯ್ಯಾಜಿರಾವ್ ಗಾಯಕ್ವಾಡ್, ಅವರಿಗೆ ಉನ್ನತ ಶಿಕ್ಷಣಕ್ಕಾಗಿ ತಿಂಗಳಿಗೆ ಹನ್ನೊಂದೂವರೆ ಪೌಂಡ್ ಗಳ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿದರು. ಈ ನೆರವಿನ ಷರತ್ತಿನ ಪ್ರಕಾರ, ಶಿಕ್ಷಣ ಮುಗಿದ ನಂತರ ಅಂಬೇಡ್ಕರ್ ಬರೋಡಾ ಸಂಸ್ಥಾನಕ್ಕೆ ಮರಳಿ ಹತ್ತು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಬೇಕಿತ್ತು.
1913ರಲ್ಲಿ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ ಅಂಬೇಡ್ಕರ್, ಜಾನ್ ಡ್ಯೂಯಿಯಂತಹ ಜಗದ್ವಿಖ್ಯಾತ ತತ್ವಜ್ಞಾನಿಗಳ ಮಾರ್ಗದರ್ಶನದಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆಯ ನೈಜ ಅರ್ಥವನ್ನು ಕರಗತ ಮಾಡಿಕೊಂಡರು.
1916ರಲ್ಲಿ ಬ್ರಿಟನ್ ಗೆ ತೆರಳಿ ಗ್ರೇಸ್ ಇನ್ ನಲ್ಲಿ ಬ್ಯಾರಿಸ್ಟರ್ ತರಬೇತಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಎಂ.ಎಸ್ಸಿ ಪದವಿ ಆರಂಭಿಸಿದರು. ಆದರೆ ಮೊದಲ ಮಹಾಯುದ್ಧದ ಬಿಕ್ಕಟ್ಟು ಮತ್ತು ಸಂಸ್ಥಾನದ ವಿದ್ಯಾರ್ಥಿವೇತನದ ಅವಧಿ ಮುಗಿದ ಕಾರಣ, ಅವರು ತಮ್ಮ ಸಂಶೋಧನೆಯನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ಮರಳಬೇಕಾಯಿತು. ಷರತ್ತಿನಂತೆ ರಾಜನ ಋಣ ತೀರಿಸಲು ಬರೋಡಾ ಸರ್ಕಾರದ ಸೇವೆಯನ್ನು ಒಪ್ಪಿಕೊಳ್ಳಲು ಅವರು ನಿರ್ಧರಿಸಿದರು.
1917ರ ಆಗಸ್ಟ್ ತಿಂಗಳಲ್ಲಿ ಅಂಬೇಡ್ಕರ್ ಮುಂಬೈನಿಂದ ಬರೋಡಾ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು. ಅವರೊಬ್ಬ ಸಾಮಾನ್ಯ ಉದ್ಯೋಗಿಯಾಗಿರಲಿಲ್ಲ; ಸೈನ್ಯ ಕಾರ್ಯದರ್ಶಿ ಹುದ್ದೆಯ ತರಬೇತಿದಾರರನ್ನಾಗಿ ಅಂದ್ರೆ Military Secretary on probation ಆಗಿ ನೇಮಿಸಿದ್ದರು.
ಸಂಸ್ಥಾನದ ಉನ್ನತ ಅಧಿಕಾರಿಯಾಗಿ ಆಗಮಿಸಿದ ಅವರನ್ನು ಸ್ವಾಗತಿಸಲು ಸಂಸ್ಥಾನದ ಯಾವೊಬ್ಬ ಅಧಿಕಾರಿಯೂ ಬರಲಿಲ್ಲ. ಬದಲಿಗೆ ರೈಲ್ವೆ ನಿಲ್ದಾಣದಿಂದ ನಗರದೊಳಗೆ ಕಾಲಿಟ್ಟ ಕ್ಷಣದಿಂದಲೇ ಅವರ ಜಾತಿ ಅವರನ್ನು ಬೆನ್ನಟ್ಟಿತು. ಬರೋಡಾದ ಯಾವುದೇ ಹಿಂದೂ ಹೋಟೆಲ್ ಅಥವಾ ಧರ್ಮಶಾಲೆಗಳು ಒಬ್ಬ ಅಸ್ಪೃಶ್ಯನಿಗೆ ಆಶ್ರಯ ನೀಡಲು ನಿರಾಕರಿಸಿದವು.
ಯಾವುದೇ ಜಾತಿಯ ಹಣೆಪಟ್ಟಿ ಇಲ್ಲದೆ ಉಳಿದುಕೊಳ್ಳಲು ಸಾಧ್ಯವೇ ಎಂದು ಹುಡುಕಾಡಿದಾಗ, ನಗರದ ಒಂದು ಮೂಲೆಯಲ್ಲಿದ್ದ ಪಾರ್ಸಿ ಧರ್ಮಶಾಲೆಯೊಂದು ಕಣ್ಣಿಗೆ ಬಿತ್ತು.
ಅಲ್ಲಿ ಪಾರ್ಸಿ ಸಮುದಾಯದ ಜನರಿಗೆ ಮಾತ್ರ ವಸತಿಗೆ ಅವಕಾಶವಿತ್ತು. ಅಸಹಾಯಕರಾದ ಅಂಬೇಡ್ಕರ್, ತಲೆಯ ಮೇಲೆ ಸೂರು ಪಡೆಯಲು ಅನಿವಾರ್ಯವಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಪಾರ್ಸಿ ವೇಷಧಾರಿಯಾಗಿ ಅಲ್ಲಿಗೆ ಹೋಗಿ ದಿನಕ್ಕೆ ಒಂದು ರೂಪಾಯಿ ಬಾಡಿಗೆ ನೀಡಿ ಮೇಲಿನ ಮಹಡಿಯ ಕತ್ತಲೆಯ ಕೋಣೆಯೊಂದರಲ್ಲಿ ಉಳಿದುಕೊಂಡರು.
ಆದರೆ ಅಧಿಕಾರಿಯಾಗಿ ಕಚೇರಿಗೆ ಕಾಲಿಟ್ಟಾಗ ಅಂಬೇಡ್ಕರ್ ಎದುರಿಸಿದ ಅವಮಾನಗಳು ನಾಗರಿಕ ಸಮಾಜವೇ ತಲೆತಗ್ಗಿಸುವಂತಿದ್ದವು.
ಸೈನ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿದ್ದರೂ, ಕಚೇರಿಯ ಪ್ಯೂನ್ ಗಳು ಮತ್ತು ಗುಮಾಸ್ತರು ಅವರೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದರು. ಅಂಬೇಡ್ಕರ್ ನಡೆಯುವ ಹಾದಿಯಲ್ಲಿ ಹಾಸಲಾಗಿದ್ದ ರತ್ನಗಂಬಳಿಗಳನ್ನು ಪ್ಯೂನ್ ಗಳು ಎತ್ತಿ ಮಡಚಿ ಇಡುತ್ತಿದ್ದರು; ಅಸ್ಪೃಶ್ಯನ ಸ್ಪರ್ಶದಿಂದ ನೆಲದ ಹಾಸು ಮಲಿನವಾಗಬಾರದೆಂಬುದು ಅವರ ಕ್ರೂರ ಮೌಢ್ಯವಾಗಿತ್ತು.
ಕಚೇರಿಯ ಮೇಜಿನ ಮೇಲೆ ಫೈಲುಗಳನ್ನು ಕೈಯಿಂದ ಕೈಗೆ ಕೊಡುವ ಬದಲು, ಮುಖದ ಮೇಲೆ ಸಿಡಿದು ಬೀಳುವಂತೆ ದೂರದಿಂದ ಎಸೆಯುತ್ತಿದ್ದರು. ಕಚೇರಿಯಲ್ಲಿದ್ದ ನೀರು ಕುಡಿಯುವ ಮಡಕೆಯನ್ನು ಮುಟ್ಟಲು ಅವರಿಗೆ ಅನುಮತಿಯಿರಲಿಲ್ಲ. ಇಡೀ ದಿನ ಬಾಯಾರಿಕೆಯಿಂದ ನರಳಿದರೂ ಕಚೇರಿಯ ಯಾರೊಬ್ಬರೂ ಅವರಿಗೆ ಒಂದು ಲೋಟ ನೀರು ಕೊಡುತ್ತಿರಲಿಲ್ಲ.
ಶಿಕ್ಷಣ ಮನುಷ್ಯನ ಮನಸ್ಸನ್ನು ವಿಶಾಲಗೊಳಿಸುತ್ತದೆ ಎಂಬ ಸಾಮಾನ್ಯ ನಂಬಿಕೆಯನ್ನು ಭಾರತೀಯ ಜಾತೀಯತೆಯು ಸುಳ್ಳು ಮಾಡಿತ್ತು; ಅಕ್ಷರ ಕಲಿಯದ ಪ್ಯೂನ್ ಕೂಡ ಉನ್ನತ ವಿದ್ಯಾಭ್ಯಾಸ ಮುಗಿಸಿದ್ದ ಅಧಿಕಾರಿಯನ್ನು ಜಾತಿಯ ನೆಪದಲ್ಲಿ ಅಪಮಾನಿಸುತ್ತಿದ್ದ. ಈ ತೀವ್ರ ಅವಮಾನಗಳ ನಡುವೆಯೂ ಅಂಬೇಡ್ಕರ್ ತಮ್ಮ ಕರ್ತವ್ಯವನ್ನು ಮುಂದುವರಿಸಲು ಯತ್ನಿಸಿದರು. ಆದರೆ ಅವರ ಅಜ್ಞಾತ ವಾಸ ಹೆಚ್ಚು ದಿನ ಮುಂದುವರಿಯಲಿಲ್ಲ.
1917ರ ಸೆಪ್ಟೆಂಬರ್ 23ರ ಮುಂಜಾನೆ, ಪಾರ್ಸಿ ಧರ್ಮಶಾಲೆಯಲ್ಲಿದ್ದ ರಹಸ್ಯ ಬಹಿರಂಗವಾಯಿತು. ಮುಂಜಾನೆ ಅವರು ಎಚ್ಚರಗೊಳ್ಳುವಷ್ಟರಲ್ಲಿ, ಧರ್ಮಶಾಲೆಯ ಕೆಳಗೆ ಭಾರಿ ಗದ್ದಲ ಕೇಳಿಸಿತು. ಕೈಗಳಲ್ಲಿ ದೊಣ್ಣೆ, ಲಾಠಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡಿದ್ದ ಇಪ್ಪತ್ತಕ್ಕೂ ಹೆಚ್ಚು ಪಾರ್ಸಿ ಯುವಕರ ಗುಂಪು ಮೆಟ್ಟಿಲುಗಳನ್ನೇರಿ ಮೇಲಕ್ಕೆ ನುಗ್ಗಿಬಂದಿತ್ತು.
ಬಾಗಿಲು ತಳ್ಳಿ ಒಳನುಗ್ಗಿದ ಆ ಗುಂಪು, "ನೀನು ಅಸ್ಪೃಶ್ಯನಾಗಿ ನಮ್ಮ ಪವಿತ್ರ ಧರ್ಮಶಾಲೆಯನ್ನು ಅಪವಿತ್ರಗೊಳಿಸಿದ್ದೀಯಾ, ನಿನ್ನ ಕೃತ್ಯ ನಮ್ಮ ಧರ್ಮಕ್ಕೆ ಮಾಡಿದ ದ್ರೋಹ" ಎಂದು ಅರಚಿತು. ಆ ಕ್ಷಣದಲ್ಲೇ ಆ ಕೋಣೆಯನ್ನು ಖಾಲಿ ಮಾಡದಿದ್ದರೆ ಆತನನ್ನು ಕಡಿದು ಹಾಕುವುದಾಗಿ ಬೆದರಿಕೆ ಹಾಕಿದರು.
ಅಂಬೇಡ್ಕರ್ ಕೈಮುಗಿದು, ಸಂಜೆಯವರೆಗೆ ಸಮಯ ಕೊಡಿ, ಬೇರೆ ವ್ಯವಸ್ಥೆ ಮಾಡಿಕೊಂಡು ಹೊರಡುತ್ತೇನೆ ಎಂದು ಕೇಳಿಕೊಂಡರು. ಆ ಗುಂಪು ಸಂಜೆಯೊಳಗೆ ಜಾಗ ಖಾಲಿ ಮಾಡಬೇಕೆಂದು ಅಂತಿಮ ಗಡುವು ವಿಧಿಸಿ ನಿರ್ಗಮಿಸಿತು.
ಆ ದಿನ ಇಡೀ ಬರೋಡಾ ನಗರದಲ್ಲಿ ಅಂಬೇಡ್ಕರ್ ಅಲೆದಾಡಿದರು. ತಮ್ಮ ಜೊತೆ ಓದಿದ್ದ ಹಳೆಯ ಸ್ನೇಹಿತರು, ಸಹಪಾಠಿಗಳು ಮತ್ತು ಉನ್ನತ ಹುದ್ದೆಯಲ್ಲಿದ್ದ ಪರಿಚಿತ ಅಧಿಕಾರಿಗಳ ಮನೆಗಳ ಬಾಗಿಲು ತಟ್ಟಿದರು. ಆದರೆ ಒಬ್ಬ ಮಹಾರ್ ಯುವಕನಿಗೆ ತಮ್ಮ ಮನೆಯ ಹೊರಗಿನ ಜಗುಲಿಯ ಮೇಲೂ ಕುಳಿತುಕೊಳ್ಳಲು ಬಿಡಲು ಯಾರೊಬ್ಬರೂ ಸಿದ್ಧರಿರಲಿಲ್ಲ. ಅವರ ಆಪ್ತ ಸ್ನೇಹಿತರಾಗಿದ್ದ ಹಿಂದೂ ಮತ್ತು ಕ್ರಿಶ್ಚಿಯನ್ ಮಿತ್ರರೂ ಕೂಡ ಜಾತಿಯ ಬಹಿಷ್ಕಾರಕ್ಕೆ ಹೆದರಿ ಮುಖ ತಿರುಗಿಸಿದರು.
ಬೇರೆ ದಾರಿಯಿಲ್ಲದೆ ಅಂಬೇಡ್ಕರ್ ಸೀದಾ ಮಹಾರಾಜ ಸಯ್ಯಾಜಿರಾವ್ ಅವರ ಅರಮನೆಗೆ ಹೋದರು. ಮಹಾರಾಜರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ಮಹಾರಾಜರು ಸಂಸ್ಥಾನದ ದಿವಾನರಾಗಿದ್ದ ಮನುಭಾಯಿ ಅವರಿಗೆ ಈ ವಿಷಯವನ್ನು ಪರಿಹರಿಸಲು ಸೂಚಿಸಿದರು.
ಆದರೆ ದಿವಾನ ಮನುಭಾಯಿ ತಲೆಯಾಡಿಸಿ, "ಇದು ಸಮಾಜದ ಆಳದಲ್ಲಿರುವ ನಂಬಿಕೆ, ನಾವು ಕಡ್ಡಾಯವಾಗಿ ಯಾರಿಗೂ ನಿಮ್ಮನ್ನು ಇಟ್ಟುಕೊಳ್ಳಲು ಆದೇಶ ನೀಡಲಾಗದು, ನಮ್ಮ ಕೈಯಲ್ಲಿ ಏನೂ ಇಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಒಬ್ಬ ರಾಜನ ಆಶ್ರಯದಲ್ಲಿದ್ದರೂ, ಸಂಸ್ಥಾನದ ಸೈನ್ಯ ಕಾರ್ಯದರ್ಶಿಯಾಗಿದ್ದರೂ, ಅಸ್ಪೃಶ್ಯನಿಗೆ ಆ ಊರಿನಲ್ಲಿ ಉಳಿದುಕೊಳ್ಳಲು ಒಂದು ಕೋಣೆ ಸಿಗಲಿಲ್ಲ.
ಸಂಜೆ ಐದು ಗಂಟೆಯಾಯಿತು. ಪಾರ್ಸಿ ಧರ್ಮಶಾಲೆಗೆ ಮರಳಿ ತನ್ನಲ್ಲಿದ್ದ ಪುಸ್ತಕಗಳು ಮತ್ತು ಬಟ್ಟೆಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡ ಅಂಬೇಡ್ಕರ್ ಅಲ್ಲಿಂದ ಬೀದಿಗೆ ಬಿದ್ದರು. ಕೈಯಲ್ಲೊಂದು ಬ್ಯಾಗ್ ಹಿಡಿದು ಕಮತಿ ಭಾಗ್ ಅಂದ್ರೆ ಇಂದಿನ ಸಯ್ಯಾಜಿ ಭಾಗ್ ಉದ್ಯಾನವನದೊಳಗೆ ಬಂದರು. ಕತ್ತಲು ಇಡೀ ನಗರವನ್ನು ಆವರಿಸುತ್ತಿತ್ತು.
ಉದ್ಯಾನವನದ ಒಂದು ಮೂಲೆಯಲ್ಲಿದ್ದ ವಿಶಾಲವಾದ ಆಲದ ಮರದ ಕೆಳಗೆ ಬಂದು ನಿಂತರು. ಆ ಮರದ ಕಟ್ಟೆಯ ಮೇಲೆ ಕುಳಿತ ಅಂಬೇಡ್ಕರ್ ಅವರ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯಿತು. ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ವತ್ ಸಭೆಗಳು, ಲಂಡನ್ನ ಲೈಬ್ರರಿಗಳು, ಅಲ್ಲಿನ ಜನರು ನೀಡಿದ ಮರ್ಯಾದೆ - ಇವೆಲ್ಲವೂ ಈ ದೇಶದ ಜಾತೀಯತೆಯ ಕೊಳಕು ವಾಸ್ತವದ ಮುಂದೆ ಧೂಳೀಪಟವಾಗಿದ್ದವು.
ಜಗತ್ತಿನ ಯಾವುದೇ ದೇಶದಲ್ಲಿ ಮನುಷ್ಯನ ಯೋಗ್ಯತೆಯನ್ನು ಆತನ ಜ್ಞಾನ ಮತ್ತು ಗುಣದಿಂದ ಅಳೆಯಲಾಗುತ್ತದೆ; ಆದರೆ ಈ ದೇಶದಲ್ಲಿ ಮನುಷ್ಯನನ್ನು ಆತ ಹುಟ್ಟಿದ ಜಾತಿಯಿಂದ ಮಾತ್ರ ನಿರ್ಧರಿಸಲಾಗುತ್ತದೆ ಎಂಬ ಕ್ರೂರ ಸತ್ಯ ಅವರ ಎದೆಗೆ ಬಡಿದಿತ್ತು. ಆ ಆಲದ ಮರದ ಕೆಳಗೆ ಕುಳಿತ ಕ್ಷಣಗಳು ಅಂಬೇಡ್ಕರ್ ಅವರ ಬದುಕಿನ ಮಹಾ ತಿರುವಾಗಿತ್ತು.
ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯಾದ ‘ವೇಟಿಂಗ್ ಫಾರ್ ಎ ವೀಸಾ’ ಕೃತಿಯಲ್ಲಿ ಆ ಸಂಜೆಯ ಆಘಾತವನ್ನು ಅತ್ಯಂತ ನೋವಿನಿಂದ ದಾಖಲಿಸಿದ್ದಾರೆ.
ಆ ಕತ್ತಲೆಯಲ್ಲಿ ಆಲದ ಮರದ ಕೆಳಗೆ ಕುಳಿತಾಗ ಅವರ ಮುಂದೆ ಎರಡು ದಾರಿಗಳಿದ್ದವು: ಒಂದು, ಈ ಅವಮಾನಗಳಿಗೆ ಬೆದರಿ ಲಂಡನ್ ಗೆ ಅಥವಾ ಅಮೆರಿಕಕ್ಕೆ ಮರಳಿ ಹೋಗಿ ಅಲ್ಲಿ ಆರಾಮದಾಯಕವಾಗಿ ಪ್ರಾಧ್ಯಾಪಕರಾಗಿ ಅಥವಾ ವಕೀಲರಾಗಿ ಆರಾಮ ಬದುಕು ನಡೆಸುವುದು; ಎರಡು, ತನ್ನಂತೆ ಕೋಟ್ಯಂತರ ಜನರನ್ನು ಶತಮಾನಗಳಿಂದ ಅಸ್ಪೃಶ್ಯತೆಯ ನರಕದಲ್ಲಿ ಜೀವಂತ ಹೆಣಗಳನ್ನಾಗಿಟ್ಟಿರುವ ಈ ಕ್ರೂರ ವ್ಯವಸ್ಥೆಯ ವಿರುದ್ಧ ಯುದ್ಧ ಸಾರುವುದು.
ಅಂಬೇಡ್ಕರ್ ಆ ಎರಡನೆಯ ಕಠಿಣ ಹಾದಿಯನ್ನೇ ಆರಿಸಿಕೊಂಡರು. ಆ ಆಲದ ಮರದ ಬುಡದಲ್ಲೇ ನಿಂತು ಅವರು ಆ ಐತಿಹಾಸಿಕ ಸಂಕಲ್ಪವನ್ನು ಮಾಡಿದರು: "ನಾನು ಶಿಕ್ಷಣವನ್ನು ಕೇವಲ ನನ್ನ ಹೊಟ್ಟೆಪಾಡಿಗಾಗಿ ಅಥವಾ ವೈಯಕ್ತಿಕ ಸುಖಕ್ಕಾಗಿ ಬಳಸುವುದಿಲ್ಲ. ನನ್ನ ಜೀವವಿರುವವರೆಗೂ ಈ ದೇಶದ ಅಸ್ಪೃಶ್ಯರ, ದಲಿತರ, ಶೋಷಿತರ ಮತ್ತು ಮಹಿಳೆಯರ ಮುಕ್ತಿಗಾಗಿ ಹೋರಾಡುತ್ತೇನೆ. ಈ ಅಮಾನವೀಯ ಜಾತಿ ವ್ಯವಸ್ಥೆಯ ಬೇರುಗಳನ್ನು ಕಿತ್ತೊಗೆಯುವವರೆಗೂ ನಾನು ವಿಶ್ರಮಿಸುವುದಿಲ್ಲ."
ಅಂದು ಆ ಆಲದ ಮರದ ಸಾಕ್ಷಿಯಾಗಿ ಹುಟ್ಟಿದ ಸಂಕಲ್ಪವು ಕೇವಲ ಒಬ್ಬ ಯುವಕನ ಶಪಥವಾಗಿರಲಿಲ್ಲ; ಅದು ನಡುಗುತ್ತಿದ್ದ ಕೋಟ್ಯಂತರ ಮೂಕ ಜನರಿಗೆ ಧ್ವನಿಯಾಗುವ ಬೃಹತ್ ಸಾಮಾಜಿಕ ಕ್ರಾಂತಿಯ ಮೊದಲ ಕಿಡಿಯಾಗಿತ್ತು.
ಆ ಸಂಕಲ್ಪವನ್ನು ಹೊತ್ತು ಅಂಬೇಡ್ಕರ್ ಅಂದೇ ರಾತ್ರಿ ಬರೋಡಾ ರೈಲ್ವೆ ನಿಲ್ದಾಣಕ್ಕೆ ನಡೆದು, ಮುಂಬೈಗೆ ಹೋಗುವ ರೈಲನ್ನು ಹತ್ತಿದರು. ಬರೋಡಾದ ಆಡಳಿತ ವ್ಯವಸ್ಥೆ ಮತ್ತು ಜಾತಿ ಸಮಾಜವು ಒಬ್ಬ ವಿದ್ವಾಂಸನನ್ನು ಅಸ್ಪೃಶ್ಯನೆಂದು ಹೊರಹಾಕಿ ಗೆಲುವಿನ ನಗೆ ಬೀರಿರಬಹುದು; ಆದರೆ ಆ ರಾತ್ರಿ ಮುಂಬೈಗೆ ಹೊರಟ ರೈಲಿನಲ್ಲಿ ಕುಳಿತಿದ್ದ ವ್ಯಕ್ತಿ ಕೇವಲ ಒಬ್ಬ ನೌಕರನಾಗಿರಲಿಲ್ಲ, ಬದಲಿಗೆ ಭಾರತದ ಸಾಮಾಜಿಕ ಚರಿತ್ರೆಯನ್ನು ತಿದ್ದಿ ಬರೆಯಲು ಹೊರಟ ಕ್ರಾಂತಿಕಾರಿಯಾಗಿದ್ದರು.
ಮುಂಬೈಗೆ ಮರಳಿದ ನಂತರ ಅಂಬೇಡ್ಕರ್ ಬದುಕಿನ ಪ್ರತಿ ಕ್ಷಣವೂ ಆ ಸಂಕಲ್ಪದ ಸಾಕಾರಕ್ಕಾಗಿ ಮುಡಿಪಾಯಿತು. ಸಿಡೆನ್ಹ್ಯಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಲೇ, ಅವರು 1920ರಲ್ಲಿ ‘ಮೂಕನಾಯಕ’ ಪತ್ರಿಕೆಯನ್ನು ಆರಂಭಿಸಿದರು. ಮಾತಿಲ್ಲದ ಸಮುದಾಯಕ್ಕೆ ಮಾತು ಕೊಡುವ ಪ್ರಯತ್ನವದು. ನಂತರ ಕೊಲ್ಹಾಪುರದ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ ಬೆಂಬಲದೊಂದಿಗೆ ಮಾಂಗಾಂವ್ ನಲ್ಲಿ ದಲಿತರ ಐತಿಹಾಸಿಕ ಸಮ್ಮೇಳನ ನಡೆಸಿ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದರು.
1924ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿ, "ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ" ಎಂಬ ವಿಶ್ವವಿಖ್ಯಾತ ಕರೆಯನ್ನು ನೀಡಿದರು. 1917ರ ಆಲದ ಮರದ ಕೆಳಗೆ ಬಿದ್ದ ಕಣ್ಣೀರಿನ ಹನಿಗಳು ಹತ್ತು ವರ್ಷಗಳ ನಂತರ, ಅಂದರೆ 1927ರ ಮಾರ್ಚ್ 20ರಂದು ಮಹಾಡ್ ನ ಚೌದಾರ್ ಕೆರೆಯ ನೀರಿನ ಹಕ್ಕಿನ ಹೋರಾಟವಾಗಿ ಪ್ರತ್ಯಕ್ಷವಾದವು.
ಪ್ರಾಣಿಗಳು ಕುಡಿಯುವ ನೀರನ್ನು ಮುಟ್ಟಲೂ ಅಸ್ಪೃಶ್ಯರಿಗೆ ಹಕ್ಕಿರದಿದ್ದ ಕಾಲದಲ್ಲಿ, ಸಾವಿರಾರು ಜನರೊಂದಿಗೆ ಸಾಗಿ ಆ ಕೆರೆಯ ನೀರನ್ನು ಮುಟ್ಟಿ ಕುಡಿಯುವ ಮೂಲಕ ಮಾನವ ಹಕ್ಕುಗಳ ಮೊದಲ ಮಹಾ ಚಳವಳಿಯನ್ನು ಅಂಬೇಡ್ಕರ್ ಮುನ್ನಡೆಸಿದರು. ಬರೋಡಾದ ಆಲದ ಮರದ ಸಂಕಲ್ಪವು 1927ರ ಡಿಸೆಂಬರ್ 25ರಂದು ಮನುಸ್ಮೃತಿಯ ದಹನಕ್ಕೆ ಪ್ರೇರಣೆಯಾಯಿತು.
ಅಸ್ಪೃಶ್ಯತೆಗೆ ಶಾಸ್ತ್ರೀಯ ಮತ್ತು ಧಾರ್ಮಿಕ ಮಾನ್ಯತೆ ನೀಡಿದ್ದ ಗ್ರಂಥವನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಮೂಲಕ, ತಾವು ಇನ್ನು ಮುಂದೆ ಯಾವುದೇ ಅಸಮಾನತೆಯ ಸಂಹಿತೆಗಳನ್ನು ಒಪ್ಪುವುದಿಲ್ಲವೆಂದು ಜಗತ್ತಿಗೆ ಸಾರಿದರು. 1930ರಲ್ಲಿ ನಾಸಿಕ್ ನ ಕಾಳಾರಾಮ್ ದೇವಾಲಯ ಪ್ರವೇಶ ಸತ್ಯಾಗ್ರಹ, 1932ರಲ್ಲಿ ದಲಿತರ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮಹಾತ್ಮ ಗಾಂಧಿಯವರೊಂದಿಗೆ ನಡೆದ ಐತಿಹಾಸಿಕ ಪೂನಾ ಒಪ್ಪಂದ, 1936ರಲ್ಲಿ ಜಾತಿ ವಿನಾಶದ ಮೂಲ ಸಿದ್ಧಾಂತವನ್ನು ಪ್ರತಿಪಾದಿಸಿದ ‘ಅನಿಹಿಲೇಶನ್ ಆಫ್ ಕಾಸ್ಟ್’ ಕೃತಿಯ ರಚನೆ — ಈ ಎಲ್ಲಾ ಮಹಾನ್ ಮೈಲಿಗಲ್ಲುಗಳ ಹಿಂದೆ ಬರೋಡಾದ ಆ ಕರಾಳ ಸಂಜೆಯ ಸಂಕಲ್ಪವೇ ಸದಾ ಉರಿಯುತ್ತಿದ್ದ ಜ್ವಾಲೆಯಾಗಿತ್ತು.
1947ರಲ್ಲಿ ಭಾರತ ಸ್ವತಂತ್ರವಾದಾಗ, ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ಮತ್ತು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನವು, ಅಂದು ಬರೋಡಾದಲ್ಲಿ ತಮಗಾದ ಪ್ರತಿಯೊಂದು ಅವಮಾನಕ್ಕೂ ನೀಡಿದ ಸಾಂವಿಧಾನಿಕ ಉತ್ತರವಾಗಿತ್ತು.
ಯಾವ ಜಾತಿ ವ್ಯವಸ್ಥೆಯು ಅವರನ್ನು ಮನುಷ್ಯನೆಂದು ಪರಿಗಣಿಸಲು ನಿರಾಕರಿಸಿತೋ, ಅದೇ ಸಂವಿಧಾನದ 17ನೇ ವಿಧಿಯ ಮೂಲಕ ಅಂಬೇಡ್ಕರ್ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿದರು. 14, 15, 16 ಮತ್ತು 21ನೇ ವಿಧಿಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದರು.
ಭಾರತದ ಪ್ರತಿಯೊಬ್ಬ ಶೋಷಿತನಿಗೂ ಆಡಳಿತಾಧಿಕಾರಿಯಾಗುವ ಮೀಸಲಾತಿಯ ಹಕ್ಕನ್ನು ಸಂವಿಧಾನದಲ್ಲಿ ಕೆತ್ತಿದರು. 1917ರ ಸೆಪ್ಟೆಂಬರ್ 23ರಂದು ಬರೋಡಾದ ಕಮತಿ ಭಾಗ್ ನ ಆಲದ ಮರದ ಕೆಳಗೆ ಅಂಬೇಡ್ಕರ್ ಒಬ್ಬಂಟಿಯಾಗಿ ಕುಳಿತಿದ್ದರು. ಅವರ ಜೇಬಿನಲ್ಲಿ ಹಣವಿರಲಿಲ್ಲ, ತಲೆಯ ಮೇಲೆ ಸೂರಿರಲಿಲ್ಲ. ಆದರೆ ಆ ದಿನ ಅವರ ಅಂತರಂಗದಲ್ಲಿ ಹೊತ್ತಿದ ಸಂಕಲ್ಪವು ಇಡೀ ದೇಶದ ಶತಮಾನಗಳ ಶ್ರೇಣೀಕೃತ ಅಡಿಪಾಯವನ್ನೇ ಅಲುಗಾಡಿಸಿತು.
ನೋವನ್ನು ದ್ವೇಷವಾಗಿ ಪರಿವರ್ತಿಸದೆ, ಅದನ್ನು ಜ್ಞಾನ, ಕಾನೂನು ಮತ್ತು ಹೋರಾಟದ ಶಕ್ತಿಯನ್ನಾಗಿ ಪರಿವರ್ತಿಸಿದ ಅಂಬೇಡ್ಕರ್ ಅವರ ಆ ಸಂಕಲ್ಪ, ಭಾರತೀಯ ಪ್ರಜಾಪ್ರಭುತ್ವದ ಉಸಿರಾಗಿ ಇಂದಿಗೂ ಜೀವಂತವಾಗಿದೆ. ಆ ಆಲದ ಮರ ಕೇವಲ ಒಂದು ಮರವಾಗಿ ಉಳಿಯಲಿಲ್ಲ; ಅದು ಸಮಾನತೆ ಮತ್ತು ಸ್ವಾಭಿಮಾನದ ಜಾಗತಿಕ ಸಂಕೇತವಾಗಿ ಇತಿಹಾಸದಲ್ಲಿ ಅಜರಾಮರವಾಯಿತು.






