ಹಕ್ಕಿಲ್ಲದ ಬದುಕು ನಡೆಸುತ್ತಿರುವ ಹಸಲರು

ಉಡುಪಿ: ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅಂಚುಗಳಲ್ಲಿ ಇಂದು ಕೂಡ ಮೌನವಾಗಿ ಬದುಕುತ್ತಿರುವ ಒಂದು ಸಮುದಾಯ ಇದೆ ಹಸಲರು/ ಹಸ್ಲರ್.
ಇವರು ಸುದ್ದಿಗಳಲ್ಲಿ ಕಾಣಿಸುವುದಿಲ್ಲ. ಇವರ ನೋವು ವಿಧಾನಸೌಧದ ಗೋಡೆಗಳಿಗೆ ತಲುಪುವುದಿಲ್ಲ. ಆದರೆ ಇವರ ಬದುಕು ಭಾರತದ ಸಂವಿಧಾನ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಮುಂದೆ ದೊಡ್ಡ ಪ್ರಶ್ನೆಯನ್ನು ಎತ್ತುತ್ತಿದೆ.
ಅರಣ್ಯವೇ ಇವರ ಬದುಕು. ಕಾಡೇ ಇವರ ತಾಯಿ. ಭೂಮಿಯೇ ಇವರ ಜೀವ. ಆದರೆ ಇಂದು ಅದೇ ಭೂಮಿಯಲ್ಲಿ ಇವರಿಗೆ ‘ಅತಿಕ್ರಮಣಕಾರ’ ಎಂಬ ಮುದ್ರೆ ಹಾಕಲಾಗುತ್ತಿದೆ.
ಒಂದೇ ಸಮುದಾಯ ಎರಡು ವರ್ಗೀಕರಣ! :
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹಸಲರು ಪರಿಶಿಷ್ಟ ಪಂಗಡ (ಎಸ್‌ಟಿ) ಎಂದು ಗುರುತಿಸಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ‘ಹಸಲ’ ಪರಿಶಿಷ್ಟ ಜಾತಿ ಎಸ್‌ಸಿ ವರ್ಗದಲ್ಲಿ ಸೇರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಹಸ್ಲರ್’ ಎಂದು ಪರಿಶಿಷ್ಟ ಜಾತಿ ಎಸ್‌ಸಿ ದಾಖಲಿಸಲಾಗಿದೆ.
ಹೆಸರು ಬದಲಾಗಿದೆ ಅಷ್ಟೇ. ಜನರು ಬದಲಾಗಿಲ್ಲ. ಇತಿಹಾಸ ಬದಲಾಗಿಲ್ಲ. ಅರಣ್ಯ ಜೀವನ ಬದಲಾಗಿಲ್ಲ. ಆದರೆ ಸರಕಾರದ ದಾಖಲೆಗಳಲ್ಲಿ ಮಾತ್ರ ಇವರ ಗುರುತು ಬದಲಾಗಿದೆ.
ಇದು ಕೇವಲ ಆಡಳಿತದ ತಪ್ಪಲ್ಲ. ಇದು ಒಂದು ಸಮುದಾಯದ ಭವಿಷ್ಯವನ್ನು ಕಿತ್ತುಕೊಳ್ಳುವ ಅನ್ಯಾಯ.
ಸಾಂವಿಧಾನಿಕ ಮತ್ತು ಕಾನೂನು ಪ್ರಶ್ನೆಗಳು :
ಭಾರತ ಸಂವಿಧಾನದ ಅನುಚ್ಛೇದ 14 ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು ನೀಡುತ್ತದೆ. ಆದರೆ ಒಂದೇ ಸಮುದಾಯವನ್ನು ಒಂದು ಜಿಲ್ಲೆಯಲ್ಲಿ ಎಸ್‌ಟಿ, ಮತ್ತೊಂದು ಜಿಲ್ಲೆಯಲ್ಲಿ ಎಸ್‌ಸಿ ಎಂದು ಗುರುತಿಸುವುದು ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ.
ಅನುಚ್ಛೇದ 15 ಜಾತಿ ಆಧಾರಿತ ಭೇದಭಾವವನ್ನು ನಿಷೇಧಿಸುತ್ತದೆ. ಆದರೆ ಆಡಳಿತದ ತಪ್ಪಾದ ವರ್ಗೀಕರಣದಿಂದ ಒಂದು ಸಮುದಾಯ ಹಕ್ಕುಗಳಿಂದ ವಂಚಿತವಾಗುವುದು ಗಂಭೀರ ಅನ್ಯಾಯವಾಗಿದೆ.
ಅನುಚ್ಛೇದ 21 ಜೀವನ ಮತ್ತು ಗೌರವಯುತ ಬದುಕಿನ ಹಕ್ಕು ನೀಡುತ್ತದೆ. ಆದರೆ ಭೂ ಹೀನತೆ, ವಾಸಸ್ಥಳದ ಕೊರತೆ, ಗುಡಿಸಲು ಧ್ವಂಸ, ಜೀವನೋಪಾಯ ನಾಶ ಇವು ಈ ಸಮುದಾಯದ ಬದುಕಿನ ಹಕ್ಕಿನ ಮೇಲಿನ ದಾಳಿ.
ಅನುಚ್ಛೇದ 46 ಸಮಾಜದ ದುರ್ಬಲ ವರ್ಗಗಳ, ವಿಶೇಷವಾಗಿ ಎಸ್‌ಸಿ/ಎಸ್‌ಟಿ ಸಮುದಾಯಗಳ ರಕ್ಷಣೆಯನ್ನು ಸರಕಾರದ ಕರ್ತವ್ಯವೆಂದು ಹೇಳುತ್ತದೆ. ಆದರೆ ಹಸಲರ ಬದುಕು ಇಂದು ನಿರ್ಲಕ್ಷ್ಯದ ಕತ್ತಲೆಯಲ್ಲಿದೆ.
ಅರಣ್ಯ ಹಕ್ಕು ಕಾಯ್ದೆ ಇದೆ. ಆದರೆ ಹಕ್ಕು ಮಾತ್ರ ಇನ್ನೂ ಕಾಗದದಲ್ಲಿ: ಅರಣ್ಯ ಹಕ್ಕು ಕಾಯ್ದೆ, 2006 ಅರಣ್ಯಾಧಾರಿತ ಸಮುದಾಯಗಳಿಗೆ ಐತಿಹಾಸಿಕ ನ್ಯಾಯ ನೀಡಲು ರೂಪುಗೊಂಡ ಕಾನೂನು.
ಈ ಕಾಯ್ದೆಯ ಉದ್ದೇಶ :
ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿಗಳಿಗೆ ಹಕ್ಕು ನೀಡುವುದು, ಐತಿಹಾಸಿಕ ಅನ್ಯಾಯ ಸರಿಪಡಿಸುವುದು, ಅರಣ್ಯ ಜೀವನಕ್ಕೆ ಮಾನ್ಯತೆ ನೀಡುವುದು.ಆದರೆ ಹಸಲ/ಹಸ್ಲರ್ ಸಮುದಾಯಕ್ಕೆ ಈ ಹಕ್ಕುಗಳು ಇನ್ನೂ ಕಾಗದದಲ್ಲೇ ಉಳಿದಿವೆ.
2008ರಿಂದ 2012ರ ವರೆಗೆ ಸಲ್ಲಿಸಿದ ಅನೇಕ ಅರಣ್ಯ ಹಕ್ಕಿನ ಮತ್ತು ಸಮುದಾಯ ಹಕ್ಕಿನ ಅರ್ಜಿಗಳು ಇನ್ನೂ ಗ್ರಾಮ, ವಿಭಾಗೀಯ ಮತ್ತು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ಪರಿಶೀಲನೆಯಾಗದೆ ಬಾಕಿಯಾಗಿ ಉಳಿದಿವೆ.
ಅರ್ಜಿಗಳು ಇತ್ಯರ್ಥವಾಗುವುದಕ್ಕೂ ಮುನ್ನ ಅವರ ಮೇಲೆ ಅರಣ್ಯ ಇಲಾಖೆಯ ಆಕ್ರಮಣಗಳು ಇಂದಿಗೂ ದಿನ ನಿತ್ಯ ಎನ್ನುವಂತೆ ನಡೆಯುತ್ತಿದೆ. ಅವರ ಗುಡಿಸಲು ಧ್ವಂಸ, ತೆಂಗು, ಅಡಿಕೆ ಮತ್ತು ಗೇರು ಬೆಳೆ ನಾಶ, ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಯತ್ನಗಳು ಕೇಳಿಬರುತ್ತಿವೆ. ಇದು ಅರಣ್ಯ ಹಕ್ಕು ಕಾಯ್ದೆಯ ಆತ್ಮಕ್ಕೇ ವಿರುದ್ಧವಾಗಿದೆ.
ಹಸಲರ ಇತಿಹಾಸ ಕೇವಲ ಬಡತನದ ಕಥೆಯಲ್ಲ. ಅದು ಸ್ಥಳಾಂತರ, ಶೋಷಣೆ ಮತ್ತು ಬದುಕು ಉಳಿಸಿಕೊಳ್ಳುವ ಹೋರಾಟದ ಇತಿಹಾಸ.
ಪಶ್ಚಿಮಘಟ್ಟದ ದಟ್ಟ ಕಾಡುಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ದ ಈ ಸಮುದಾಯ, ದಕ್ಷಿಣ ಕರಾವಳಿ ಪ್ರದೇಶಗಳಿಂದ ವಲಸೆ ಬಂದು ಶರಾವತಿ, ಚಕ್ರ ಮತ್ತು ವರಾಹಿ ನದಿತೀರಗಳಲ್ಲಿ ನೆಲೆಸಿತ್ತು.
ಆದರೆ, ಲಿಂಗನಮಕ್ಕಿ ಅಣೆಕಟ್ಟು, ವಾರಾಹಿ ಯೋಜನೆ, ಚಕ್ರ ಯೋಜನೆ, ಇವುಗಳಿಂದ ಸಾವಿರಾರು ಕುಟುಂಬಗಳು ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡವು. ಭೂ ದಾಖಲೆಗಳಿಲ್ಲದ ಕಾರಣ ಅವರಿಗೆ ಪರಿಹಾರ ಸಿಗಲಿಲ್ಲ.
ನಂತರ ಅವರು ಅಡಿಕೆ ತೋಟಗಳ ಮಾಲಕರ ಮನೆಗಳಲ್ಲಿ ಹುಟ್ಟಾಳುಗಳಾಗಿ, ಜೀತ ಪದ್ಧತಿಯಲ್ಲಿ ದುಡಿಯಬೇಕಾದ ಪರಿಸ್ಥಿತಿ ಎದುರಾಯಿತು. ‘‘ಉಳುವವನೇ ಹೊಲದೊಡೆಯ’’ ಕಾನೂನು ಬಂದಾಗಲೂ ಅವರಿಗೆ ಭೂಮಿ ಸಿಗಲಿಲ್ಲ. ಅವರು ಮತ್ತೆ ಸ್ಥಳಾಂತರಗೊಂಡರು.
ಹೀಗೆ ಪೀಳಿಗೆಯಿಂದ ಪೀಳಿಗೆ ಅಲೆದಾಡಿದ ಹಸಲರ ಬದುಕು ಇಂದು ಸಹ ಅಸ್ಥಿರತೆಯ ಅಂಚಿನಲ್ಲೇ ನಿಂತಿದೆ. ಕಾಡನ್ನು ಉಳಿಸಿದವರು ಕಾಡಿನಿಂದಲೇ ಹೊರಹಾಕಲ್ಪಡುತ್ತಿದ್ದಾರೆ.
ಹಸಲರು ಕಾಡನ್ನು ನಾಶ ಮಾಡಿದವರು ಅಲ್ಲ. ಅವರು ಕಾಡಿನ ಜೊತೆ ಬದುಕಿದವರು. ಕಾಡಿನ ಮಣ್ಣನ್ನು ತಮ್ಮ ಕೈಯಿಂದ ಉಳುಮೆ ಮಾಡಿ ಬದುಕು ಕಟ್ಟಿಕೊಂಡವರು. ಇಂದು ಕೂಡ ಅನೇಕ ಹಸಲ ಕುಟುಂಬಗಳು ಅರಣ್ಯದ ಅಂಚಿನ ಸಣ್ಣ ತುಂಡು ಭೂಮಿಗಳಲ್ಲಿ ಭತ್ತ, ಕಬ್ಬು, ಅಡಿಕೆ, ತೆಂಗು, ಗೇರು ಬೆಳೆಸುತ್ತಾ ಬದುಕು ಸಾಗಿಸುತ್ತಿದ್ದಾರೆ. ಇದು ಕೇವಲ ಕೃಷಿ ಅಲ್ಲ. ಅವರ ಬದುಕಿನ ಕೊನೆಯ ಆಶ್ರಯ.
ಆ ಭೂಮಿಯಲ್ಲೇ ಅವರ ಹಿರಿಯರ ನೆನಪುಗಳಿವೆ, ಅವರ ಹಸಿವಿನ ವಿರುದ್ಧದ ಹೋರಾಟ ಇದೆ, ಅವರ ಮಕ್ಕಳ ಭವಿಷ್ಯದ ಕನಸುಗಳಿವೆ. ಆದರೆ ದುಃಖದ ಸಂಗತಿ ಏನೆಂದರೆ ತಮ್ಮ ಕೈಯಿಂದ ಬೆಳೆದ ಮರಗಳ ಮೇಲೂ ಅವರಿಗೆ ಹಕ್ಕಿಲ್ಲ. ತಮ್ಮ ಬೆವರಿನಿಂದ ಹಸಿರುಗೊಳಿಸಿದ ಭೂಮಿಯಲ್ಲೂ ಅವರಿಗೆ ಭದ್ರತೆ ಇಲ್ಲ. ಅವರು ಬೆಳೆದ ತೆಂಗಿನ ಗಿಡಗಳನ್ನು ಕಡಿಯಲಾಗುತ್ತಿದೆ. ಗುಡಿಸಲುಗಳನ್ನು ಧ್ವಂಸ ಮಾಡಲಾಗುತ್ತಿದೆ. ದಶಕಗಳ ಕೃಷಿಯನ್ನು ‘ಅತಿಕ್ರಮಣ’ ಎಂದು ಕರೆಯಲಾಗುತ್ತಿದೆ.
ಒಂದು ಕಡೆ ದೊಡ್ಡ ಕಂಪೆನಿಗಳಿಗೆ ಸಾವಿರಾರು ಎಕರೆ ಭೂಮಿ ನೀಡಲಾಗುತ್ತದೆ. ಆದರೆ ಇನ್ನೊಂದು ಕಡೆ ತುತ್ತಿನ ಅನ್ನಕ್ಕಾಗಿ ತುಂಡು ಭೂಮಿಯಲ್ಲಿ ಕೃಷಿ ಮಾಡುವ ಹಸಲರಿಗೆ ಮಾತ್ರ ಕಾನೂನಿನ ಹೆಸರಿನಲ್ಲಿ ಭಯ ತೋರಿಸಲಾಗುತ್ತಿದೆ.
ಇದು ಕೇವಲ ಭೂಮಿಯ ಪ್ರಶ್ನೆ ಅಲ್ಲ. ಇದು ಬದುಕಿನ ಹಕ್ಕಿನ ಪ್ರಶ್ನೆ. ಇದು ಸಂವಿಧಾನದ ಆತ್ಮವನ್ನು ಪರೀಕ್ಷಿಸುವ ಪ್ರಶ್ನೆ.
ಎಸ್‌ಸಿ-ಎಸ್‌ಟಿ ಗೊಂದಲ ಒಂದು ಸಾಮಾಜಿಕ ದುರಂತ. ಈ ಗೊಂದಲ ಕೇವಲ ದಾಖಲೆ ಸಮಸ್ಯೆ ಅಲ್ಲ. ಇದು ಬದುಕಿನ ಸಂಕಷ್ಟ. ಇದರಿಂದ ಜಾತಿ ಪ್ರಮಾಣ ಪತ್ರ ಸಮಸ್ಯೆ, ಶಿಕ್ಷಣದಲ್ಲಿ ತೊಂದರೆ, ವಿದ್ಯಾರ್ಥಿವೇತನ ನಿರಾಕರಣೆ, ಸರಕಾರಿ ಉದ್ಯೋಗದಲ್ಲಿ ಹಿನ್ನಡೆ, ಅರಣ್ಯ ಹಕ್ಕು ನಿರಾಕರಣೆ, ಮದುವೆ ಸಂಬಂಧಗಳಲ್ಲಿ ಗೊಂದಲ, ಸಾಮಾಜಿಕ ಅವಮಾನ ಇವೆಲ್ಲ ಎದುರಾಗುತ್ತಿದೆ.
ಒಂದೇ ಸಮುದಾಯದ ಮಕ್ಕಳ ಭವಿಷ್ಯ ಜಿಲ್ಲೆ ಬದಲಾದರೆ ಬದಲಾಗುವುದು ಇದು ಯಾವ ನ್ಯಾಯ?: ಬುಡಕಟ್ಟು ವಿದ್ವಾಂಸರು ಹಲವೆಡೆ ಹಸಲರನ್ನು ‘ಹಸುಳೆಯರು’ ಅಂದರೆ ಮಗುವಿನಂತೆ ಮುಗ್ಧ ಮನಸ್ಸಿನ ಜನರು ಎಂದು ಉಲ್ಲೇಖಿಸಿದ್ದಾರೆ. ಅಂತಹ ಮುಗ್ಧ ಸಮುದಾಯ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ.
ಇಂದು ಹಸಲರು ಮಲೆನಾಡು ಮತ್ತು ತಪ್ಪಲು ಪ್ರದೇಶಗಳ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಅತ್ಯಂತ ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮರ ಏರುವುದು, ವಿಷಕಾರಿ ಔಷಧ ಸಿಂಪಡಣೆ ಮಾಡುವುದು. ಇವುಗಳಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ, ಅಂಗವಿಕಲರಾಗಿದ್ದಾರೆ, ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಆದರೆ ಅಸಂಘಟಿತ ಕಾರ್ಮಿಕರಾಗಿರುವ ಕಾರಣ ಜೀವ ವಿಮೆ, ಆರೋಗ್ಯ ವಿಮೆ, ಪರಿಹಾರ, ಸಮರ್ಪಕ ವೈದ್ಯಕೀಯ ನೆರವು ಇವು ಯಾವುದು ಇಲ್ಲ. ಇದು ಆಧುನಿಕ ಶೋಷಣೆಯ ಮತ್ತೊಂದು ಮುಖ.
ಅಭಿವೃದ್ಧಿ ಎಲ್ಲಿದೆ? :
ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಘೋಷಣೆ ಆಗಿದೆ. ಆದರೆ ನೆಲಮಟ್ಟದಲ್ಲಿ ರಸ್ತೆ ಇಲ್ಲ, ಕುಡಿಯುವ ನೀರು ಇಲ್ಲ, ಆರೋಗ್ಯ ಸೌಲಭ್ಯ ಇಲ್ಲ, ಶಿಕ್ಷಣ ಸೌಲಭ್ಯ ಇಲ್ಲ, ಮನೆ ಕಟ್ಟಲು ನಿವೇಶನ ಇಲ್ಲ. ಅಭಿವೃದ್ಧಿ ಕಡತಗಳಲ್ಲಿ ಮಾತ್ರ ಇದೆ. ಜನರ ಬದುಕಿನಲ್ಲಿ ಇಲ್ಲ. ಹಸಲ/ ಹಸ್ಲರ್ ಸಮುದಾಯ ಇಂದು ಎಚ್ಚರಗೊಳ್ಳುತ್ತಿದೆ. ಯುವಜನರು ಸಂಘಟಿತರಾಗುತ್ತಿದ್ದಾರೆ. ದಶಕಗಳ ನಿರ್ಲಕ್ಷ್ಯ ಈಗ ಪ್ರಶ್ನೆಯಾಗುತ್ತಿದೆ.
ಸರಕಾರ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು :
► ಹಸಲ /ಹಸ್ಲರ್ ಸಮುದಾಯದ ರಾಜ್ಯಮಟ್ಟದ ಜನಾಂಗ ಅಧ್ಯಯನ ನಡೆಸಬೇಕು.
► ಎಸ್‌ಸಿ-ಎಸ್‌ಟಿ ವರ್ಗೀಕರಣದ ಗೊಂದಲವನ್ನು ನಿವಾರಿಸಬೇಕು.
► ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು.
► ಬಾಕಿ ಇರುವ ಅರಣ್ಯ ಹಕ್ಕು ಅರ್ಜಿಗಳನ್ನು ತಕ್ಷಣ ಇತ್ಯರ್ಥಗೊಳಿಸಬೇಕು.
► ಅವರ ಅರಣ್ಯದ ನೆಲೆಗಳಿಗೆ ರಕ್ಷಣೆ ಒದಗಿಸಬೇಕು.
► ಭೂಹೀನ ಕುಟುಂಬಗಳಿಗೆ ಭೂಮಿ ಮತ್ತು ಮನೆ ಹಕ್ಕು ನೀಡಬೇಕು.
► ಹಸಲ ಯುವಜನರಿಗೆ ವಿಶೇಷ ಸರಕಾರಿ ಉದ್ಯೋಗ ಮೀಸಲು ಯೋಜನೆ ರೂಪಿಸಬೇಕು.
► ಅಡಿಕೆ ತೋಟ ಕಾರ್ಮಿಕರಿಗೆ ಜೀವ ವಿಮೆ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು.
► ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗೆ ವಿಶೇಷ ಆರೋಗ್ಯ ಯೋಜನೆ ಜಾರಿಗೊಳಿಸಬೇಕು.
► ಪ್ರತಿ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ವಸತಿ ಅನುದಾನ ನೀಡಬೇಕು.
► ಅರಣ್ಯ ಭೂಮಿ ಹಾಗೂ ಬಗರ್ ಹುಕುಂ ಭೂಮಿಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಮಂಜೂರು ಮಾಡಬೇಕು.






