1611ರ ಕಾಲದ ಚಿತ್ರಕಲೆಯೊಂದು ಬಹಿರಂಗಪಡಿಸಿದ ಬಾವಲಿಗಳ ನಿಗೂಢ ಆಹಾರಾಭ್ಯಾಸ

Images: Wikimedia commons
ಫ್ಲೆಮಿಶ್ ಕಲಾವಿದ ಜಾನ್ ಬ್ರೂಗೆಲ್ ಅವರ 1611ರ ಚಿತ್ರಕಲೆಯಾದ ‘ಏರ್’ ಬಾವಲಿಯೊಂದರ ವಿಚಿತ್ರ ನಡವಳಿಕೆಯನ್ನು ಸೆರೆಹಿಡಿದಿರಬಹುದು ಎಂದು ಸಂಶೋಧಕರು ಇದೀಗ ಅನುಮಾನ ವ್ಯಕ್ತಪಡಿಸಿದ್ದಾರೆ.
ಶತಮಾನಗಳಷ್ಟು ಹಳೆಯ ಚಿತ್ರಕಲೆಯು ಆಧುನಿಕ ವೈಜ್ಞಾನಿಕ ಸಂಶೋಧನೆಗೆ ಸುಳಿವು ನೀಡುತ್ತದೆ ಎಂದು ಯಾರು ಭಾವಿಸಿದ್ದರು? ಆದರೆ, 400 ವರ್ಷಗಳ ಹಿಂದೆಯೇ ಫ್ಲೆಮಿಶ್ ಕಲಾವಿದ ಜಾನ್ ಬ್ರೂಗೆಲ್ ದಿ ಎಲ್ಡರ್ ಅವರ 1611ರ ಚಿತ್ರಕಲೆಯಾದ ‘ಏರ್’ ಜೀವಿಗಳ ವಿಚಿತ್ರ ನಡವಳಿಕೆಯನ್ನು ಸೆರೆಹಿಡಿದಿರಬಹುದು ಎಂದು ಸಂಶೋಧಕರು ಇದೀಗ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುತೂಹಲಕರ ಸಂಶೋಧನೆಯನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಈ ಚಿತ್ರಕಲೆಯಲ್ಲಿರುವ ಜೀವಿಯು ಗ್ರೇಟರ್ ನಾಕ್ಟಲ್ ಬ್ಯಾಟ್ (Nyctalus lasiopterus) ಆಗಿದ್ದು, ಇದು ಯುರೋಪಿನ ಅತಿದೊಡ್ಡ ಬಾವಲಿ ಹಾಗೂ ಪಕ್ಷಿಗಳನ್ನು ಬೇಟೆಯಾಡುವ ಕೆಲವೇ ಬಾವಲಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಈ ನಡವಳಿಕೆಯನ್ನು ವಿಜ್ಞಾನಿಗಳು ನೇರವಾಗಿ ದಾಖಲಿಸಿದ್ದರು.
ಆದರೆ, ಐತಿಹಾಸಿಕ ವರ್ಣಚಿತ್ರಗಳಲ್ಲಿ ಪ್ರಾಣಿಗಳನ್ನು ಗುರುತಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪರಿಸರ ವಿಜ್ಞಾನಿ ಪೆಡ್ರೊ ರೊಮೆರೊ-ವಿಡಲ್ ಅವರು ಬ್ರೂಗೆಲ್ ಅವರ ಕಲಾಕೃತಿಯಲ್ಲಿ ಅಸಾಮಾನ್ಯ ಸಂಗತಿಯೊಂದನ್ನು ಗುರುತಿಸಿದಾಗ ಈ ಸಂಶೋಧನೆ ಆರಂಭವಾಗಿತ್ತು.
‘ಈ ಹಿಂದೆ ನಾನು ಪರಿಶೀಲಿಸಿದ ಅನೇಕ ವರ್ಣಚಿತ್ರಗಳಲ್ಲಿ ಈ ರೀತಿಯ ದೃಶ್ಯವನ್ನು ಎಂದಿಗೂ ಎದುರಿಸಿರಲಿಲ್ಲ’ ಎಂದು ಪೆಡ್ರೊ ಹೇಳಿದ್ದಾರೆ. ವರ್ಣಚಿತ್ರದ ಮೇಲಿನ ಬಲ ಮೂಲೆಯಲ್ಲಿ ಬಾವಲಿಯೊಂದು ತನ್ನ ಬಾಯಿಯಲ್ಲಿ ಸಣ್ಣ ಹಕ್ಕಿಯೊಂದನ್ನು ಹಿಡಿದಿರುವಂತೆ ಕಾಣಿಸುತ್ತದೆ. ಇದು ಒಂದು ಸಣ್ಣ ಕಲಾತ್ಮಕ ವಿವರದಂತೆ ತೋರಿದರೂ, ಬಾವಲಿಯ ಕೆಂಪು-ಕಂದು ಬಣ್ಣದ ಚರ್ಮ, ದುಂಡಗಿನ ಕಿವಿಗಳು ಮತ್ತು ಉದ್ದವಾದ ರೆಕ್ಕೆಗಳು ‘ನಾಕ್ಟಲ್’ (ದೊಡ್ಡ ಬಾವಲಿ)ಯನ್ನು ಹೋಲುತ್ತವೆ. ಅದರ ಬಾಯಲ್ಲಿರುವ ಬೇಟೆಯು ಸಾಂಗ್ಬರ್ಡ್ಗೆ ಹೋಲುತ್ತದೆ. ದೊಡ್ಡ ಬಾವಲಿಯು ಇದೇ ಜಾತಿಯ ಪಕ್ಷಿಗಳನ್ನು ಬೇಟೆಯಾಡುತ್ತದೆ.
ಚಿತ್ರದಲ್ಲಿ ಗಿಳಿಗಳು, ಹಂಸಗಳು, ಬಾವಲಿಗಳು ಮತ್ತು ಗೂಬೆಗಳವರೆಗೆ 60ಕ್ಕೂ ಹೆಚ್ಚು ಪಕ್ಷಿಗಳನ್ನು ಚಿತ್ರಿಸಲಾಗಿದೆ. ಆದರೆ, ಈ ಸಣ್ಣ ದೃಶ್ಯವು ಆಧುನಿಕ ವಿಜ್ಞಾನ ಇತ್ತೀಚೆಗೆ ದೃಢಪಡಿಸಿರುವ ಸಂಗತಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ ಎಂಬ ಕಾರಣದಿಂದಾಗಿ ವಿಶೇಷವಾಗಿದೆ.
ವರ್ಷಗಳಿಂದ ಸಂಶೋಧಕರು ಬಾವಲಿಗಳ ಹಿಕ್ಕೆಗಳಲ್ಲಿ 31 ಸಾಂಗ್ಬರ್ಡ್ ಪ್ರಭೇದಗಳ ರೆಕ್ಕೆಗಳನ್ನು ಗುರುತಿಸಿದ್ದಾರೆ. ಹೀಗಾಗಿ ಬಾವಲಿಗಳ ಅಸಹಜ ಆಹಾರಾಭ್ಯಾಸದ ಬಗ್ಗೆ ಸುಳಿವು ಸಿಕ್ಕಿತ್ತು. ಈ ಸಾಂಗ್ಬರ್ಡ್ಗಳನ್ನು ಬಾವಲಿಗಳು ರಾತ್ರಿ ವೇಳೆ ಹಾಗೂ ಎತ್ತರದ ಆಗಸದಲ್ಲಿ ಹಿಡಿಯುವುದರಿಂದ, ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ. ಅದೇ ಕಾರಣದಿಂದ ಈ ಚಿತ್ರಕಲೆ ಆಕರ್ಷಕವಾಗಿದೆ.
ವಿಜ್ಞಾನಿಗಳು ಕ್ಯಾಮೆರಾಗಳು, ಟ್ರ್ಯಾಕಿಂಗ್ ಪರಿಕರಗಳು ಅಥವಾ ಕ್ಷೇತ್ರ ಅಧ್ಯಯನಗಳನ್ನು ಹೊಂದುವ ಮೊದಲೇ ಜನರು ಈ ಬಾವಲಿಗಳು ಏನು ತಿನ್ನುತ್ತಿದ್ದವು ಎಂಬುದನ್ನು ಈಗಾಗಲೇ ಗಮನಿಸಿರಬಹುದು ಎಂಬುದನ್ನು ಈ ಚಿತ್ರಕಲೆ ಸೂಚಿಸುತ್ತದೆ. ಅಂದರೆ, ಕಲಾವಿದರೊಬ್ಬರು ಈ ವೀಕ್ಷಣೆಯನ್ನು ಇತಿಹಾಸದಲ್ಲಿ ಸದ್ದಿಲ್ಲದೆ ಚಿತ್ರಿಸಿದ್ದಾರೆ.






