The Light and The Lotus: 127 ವರ್ಷಗಳ ನಂತರ ಭಾರತಕ್ಕೆ ಮರಳಿದ ಬುದ್ಧನ ಪಿಪ್ರಾಹವಾ ಅವಶೇಷ!

Photo Credit : @MinOfCultureGoI
ಇತ್ತೀಚೆಗೆ ಭಾರತಕ್ಕೆ ಮರಳಿದ ಪಿಪ್ರಾಹವಾ ಮತ್ತು ರತ್ನಗಳ ಅವಶೇಷಗಳ ಪ್ರದರ್ಶನ The Light and The Lotus: Relics of the Awakened One ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜನವರಿ 03) ಉದ್ಘಾಟಿಸಿದ್ದಾರೆ. 1898ರಲ್ಲಿ ಭಾರತ-ನೇಪಾಳ ಗಡಿಯ ಸಮೀಪವಿರುವ ಉತ್ತರ ಪ್ರದೇಶದ ಪಿಪ್ರಾಹವಾದಲ್ಲಿ ಪ್ರಾಚೀನ ಬೌದ್ಧ ಸ್ತೂಪದ ಉತ್ಖನನ ಸಮಯದಲ್ಲಿ ಈ ಅವಶೇಷಗಳನ್ನು ಹೊರತೆಗೆಯಲಾಗಿತ್ತು. 2025ರ ಆರಂಭದಲ್ಲಿ ಪಿಪ್ರಾಹವಾ ಅವಶೇಷಗಳನ್ನು ಹರಾಜಿಗಿಡಲಾಗಿತ್ತು. ಅದನ್ನು ಭಾರತ ಸರಕಾರ ಮರಳಿ ತಂದಿತ್ತು. ಭಾರತದ ಜಾಗತಿಕ ತೊಡಗಿಸಿಕೊಳ್ಳುವಿಕೆಯು ಅದರ ನಾಗರಿಕತೆ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೆಚ್ಚಾಗಿ ಆಧರಿಸಿದೆ. ಸುಮಾರು 642 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಪಿಪ್ರಾಹವಾ ಅವಶೇಷಗಳ ಮರಳುವಿಕೆ ಒಂದು ಹೆಗ್ಗುರುತು ಸಾಧನೆಯಾಗಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ವಾಪಸ್ ತಂದಿರುವ ಪಿಪ್ರಾಹವಾ ಅವಶೇಷಗಳ ಪ್ರದರ್ಶನವು ಜನವರಿ 4ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು ಇದು ಒಂದೆರಡು ತಿಂಗಳುಗಳ ಕಾಲ ನಡೆಯಲಿದೆ.
ಪ್ರದರ್ಶನದಲ್ಲಿ ಏನಿರುತ್ತದೆ?
ಹೊಸದಿಲ್ಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ನಡೆಯುವ The Light and The Lotus: Relics of the Awakened One ಎಂಬ ಶೀರ್ಷಿಕೆಯ ಪ್ರದರ್ಶನವು ಶಿಲ್ಪಗಳು, ಹಸ್ತಪ್ರತಿಗಳು, ಥಂಗ್ಕಾಗಳು ಮತ್ತು ಧಾರ್ಮಿಕ ವಸ್ತುಗಳು ಸೇರಿದಂತೆ ಕ್ರಿ.ಪೂ.6ನೇ ಶತಮಾನದಿಂದ ಇಂದಿನವರೆಗೆ ವ್ಯಾಪಿಸಿರುವ 80ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡಿದೆ. ಇದರಲ್ಲಿ 1898ರ ಕಪಿಲವಸ್ತು ಉತ್ಖನನದ ಅವಶೇಷಗಳು, 1972ರ ಉತ್ಖನನದ ನಿಧಿಗಳು, ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿದ್ದ ಅವಶೇಷಗಳು, ಆಭರಣ ಸಂಪತ್ತುಗಳು, ಪೆಪ್ಪೆ ಕುಟುಂಬ ಸಂಗ್ರಹದಿಂದ ಇತ್ತೀಚೆಗೆ ವಾಪಸ್ ಕಳುಹಿಸಿದ ಅವಶೇಷಗಳು, ರತ್ನದ ಅವಶೇಷಗಳು ಇರಲಿವೆ ಎಂದು ಸಚಿವಾಲಯ ಹೇಳಿದೆ.
ಏನಿದು ಪಿಪ್ರಾಹವಾ ರತ್ನ?
ಅವಶೇಷಗಳಲ್ಲಿ 349 ರತ್ನಗಳ ಸಂಗ್ರಹವೂ ಸೇರಿದೆ. ಇವುಗಳನ್ನು 1898ರಲ್ಲಿ ಇಂಗ್ಲೆಂಡಿನ ಎಸ್ಟೇಟ್ ಮ್ಯಾನೇಜರ್ ವಿಲಿಯಂ ಕ್ಲಾಕ್ಸ್ಟನ್ ಪೆಪ್ಪೆ ಅವರು ಭಾರತ- ನೇಪಾಳದ ಗಡಿಯ ಬಳಿ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಪಿಪ್ರಾಹವಾ ಎಂಬ ಹಳ್ಳಿಯಲ್ಲಿರುವ ಬೌದ್ಧ ಸ್ತೂಪದಲ್ಲಿ ಉತ್ಖನನ ವೇಳೆ ಅವಶೇಷಗಳನ್ನು ಹೊರತಗೆದಿದ್ದರು. ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ನ ರಾಯಲ್ ಏಷಿಯಾಟಿಕ್ ಸೊಸೈಟಿಯ ವೆಬ್ಸೈಟ್ ಪ್ರಕಾರ ಪೆಪ್ಪೆ 1852ರಲ್ಲಿ ಭಾರತದಲ್ಲಿ ಜನಿಸಿದರು. ಅವರ ತಂದೆ ಉತ್ತರ ಭಾರತದಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿದ್ದರು.1897ರಲ್ಲಿ ಪೆಪ್ಪೆ ಪಿಪ್ರಾಹವಾ ಗ್ರಾಮದ ಬಳಿ ಒಂದು ದಿಬ್ಬದ ಉತ್ಖನನ ಮಾಡಲು ಪ್ರಾರಂಭಿಸಿದರು.1898ರಲ್ಲಿಯೂ ಉತ್ಖನನ ಮುಂದುವರೆಯಿತು. 18 ಅಡಿ ಅಗೆದಾಗ ಅವರಿಗೆ ದೊಡ್ಡ ಕಲ್ಲಿನ ಚಪ್ಪಡಿ ಸಿಕ್ಕಿತು. ಅದರಡಿಯಲ್ಲಿ ಏಳು ಇಂಚುಗಳಿಗಿಂತ ಹೆಚ್ಚು ಎತ್ತರವಿಲ್ಲದ ಐದು ಪಾತ್ರೆಗಳಿದ್ದವು. ಅದರಲ್ಲಿ ಬೆಳ್ಳಿ ಮತ್ತು ಚಿನ್ನದ ನಕ್ಷತ್ರಗಳ ಗುರುತಿತ್ತು. ಬೌದ್ಧ ಚಿಹ್ನೆಗಳನ್ನು ಕೆತ್ತಿದ ಚಿನ್ನದ ಎಲೆಯ ಡಿಸ್ಕ್ಗಳು, ಅನೇಕ ಗಾತ್ರದ ಹಲವಾರು ಮುತ್ತುಗಳು, ಮಣಿಗಳು, ರತ್ನಗಳು, ನೀಲಮಣಿ, ಹವಳ ಮತ್ತು ಸ್ಫಟಿಕಗಳಿದ್ದವು. ಪಾತ್ರೆಗಳ ಒಳಗೆ ಮೂಳೆ ಮತ್ತು ಬೂದಿಯ ಸಣ್ಣ ತುಂಡುಗಳು ಸಹ ಕಂಡುಬಂದಿವೆ ಎಂದು ವೆಬ್ಸೈಟ್ ಹೇಳಿದೆ.
ಪೆಪ್ಪೆ ಪತ್ತೆ ಹಚ್ಚಿದ್ದ ಈ ಅವಶೇಷಗಳನ್ನು 1878ರಲ್ಲಿ ಭಾರತೀಯ ನಿಧಿ ಕಾಯ್ದೆಯಡಿಯಲ್ಲಿ ಬ್ರಿಟಿಷ್ ಸರಕಾರ ತಮ್ಮದಾಗಿಸಿಕೊಂಡಿತ್ತು. ಸುಮಾರು 1,800 ಮುತ್ತುಗಳು, ಮಾಣಿಕ್ಯ, ನೀಲಮಣಿಗಳು ( ಇಂದ್ರ ನೀಲಮಣಿ) ಮತ್ತ ಚಿನ್ನದ ಹಾಳೆಗಳನ್ನು ಒಳಗೊಂಡಿರುವವ ಅಮೂಲ್ಯ ಲೋಹಗಳು ಕೋಲ್ಕತ್ತಾದಲ್ಲಿರುವ ಭಾರತೀಯ ವಸ್ತುಸಂಗ್ರಹಾಲಯಕ್ಕೆ ಹೋಗಿದ್ದವು. ಆದಾಗ್ಯೂ, ಮುಖ್ಯ ಸಂಗ್ರಹದ ನಕಲುಗಳನ್ನು ಒಳಗೊಂಡಂತೆ ಪತ್ತೆಯಾದ ವಸ್ತುಗಳ ಐದನೇ ಒಂದು ಭಾಗವನ್ನು ಪೆಪ್ಪೆ ತಮ್ಮಲ್ಲೇ ಇರಿಸಿಕೊಂಡಿದ್ದರು.
ಈ ರತ್ನಗಳನ್ನು ಪೆಪ್ಪೆ ಕುಟುಂಬ ತಲೆಮಾರುಗಳಿಂದ ತಮ್ಮಲ್ಲೇ ಇರಿಸಿಕೊಂಡು ಬಂದಿದ್ದು 2013ರಲ್ಲಿ ಕ್ರಿಸ್ ಪೆಪ್ಪೆ ಇದನ್ನು ಹರಾಜಿಗೆ ಇಟ್ಟಿದ್ದರು. ಕಳೆದ ಮೇ ತಿಂಗಳಲ್ಲಿ ಸೋಥೆಬಿಸ್ ಹಾಂಗ್ ಕಾಂಗ್ ನಲ್ಲಿ ರತ್ನಗಳನ್ನು ಹರಾಜಿಗಿಡಲಾಗಿತ್ತು. ಇದರ ಮಾರಾಟ ಬೆಲೆ $100 ಮಿಲಿಯನ್ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿತ್ತು. ಭಗವಾನ್ ಬುದ್ಧನದ್ದು ಎಂದು ನಂಬಲಾದ ಮೂಳೆಯ ತುಣುಕುಗಳು, ಬೂದಿ ಕೂಡ ಈ ಸಂಗ್ರಹದ ಭಾಗವಾಗಿದೆ. ವೈಸ್ರಾಯ್ ಎಲ್ಜಿನ್ ಇವುಗಳನ್ನು ಸಿಯಾಮೀಸ್ ರಾಜ ರಾಮ ವಿ ಅವರಿಗೆ ಇದನ್ನು ದಾನ ಮಾಡಿದ್ದರು.
ಭಾರತ ಈ ಅವಶೇಷಗಳನ್ನು ತಮ್ಮದಾಗಿಸಿಕೊಂಡಿದ್ದು ಹೇಗೆ?
ಹರಾಜು ಘೋಷಿಸಿದ ನಂತರ, ಸಂಸ್ಕೃತಿ ಸಚಿವಾಲಯವು ಮೇ 5, 2025ರಂದು ಸೋಥೆಬಿಸ್ ಮತ್ತು ಪೆಪ್ಪೆ ಕುಟುಂಬಕ್ಕೆ ಕಾನೂನು ನೋಟಿಸ್ ಕಳಿಸಿ, ಹರಾಜನ್ನು "ತಕ್ಷಣ ನಿಲ್ಲಿಸಬೇಕು" ಮತ್ತು ಅವಶೇಷಗಳನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಿತ್ತು.
ಈ ಸಂಗ್ರಹವು ಮೂಳೆ ತುಣುಕುಗಳು, ಸೋಪ್ಸ್ಟೋನ್ ಮತ್ತು ಸ್ಫಟಿಕದ ಪೆಟ್ಟಿಗೆಗಳು, ಮರಳುಗಲ್ಲಿನ ಪಾತ್ರೆ, ಚಿನ್ನದ ಆಭರಣಗಳು ಮತ್ತು ರತ್ನದ ಕಲ್ಲುಗಳನ್ನು ಒಳಗೊಂಡಿದೆ. ಇವುಗಳನ್ನು ಪ್ರಾಚೀನ ಕಪಿಲವಸ್ತು ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಪಿಪ್ರಾಹವಾ ಸ್ತೂಪದಿಂದ ಉತ್ಖನನ ಮಾಡಲಾಗಿದೆ. ಇದು ಕ್ರಿ.ಪೂ 5ನೇ-6ನೇ ಶತಮಾನಗಳ ಶಾಕ್ಯ ಗಣರಾಜ್ಯದ ರಾಜಧಾನಿಯಾಗಿತ್ತು, ಅಲ್ಲಿ ರಾಜಕುಮಾರ ಸಿದ್ಧಾರ್ಥ ಸತ್ಯವನ್ನು ಹುಡುಕಲು ಮನೆಯಿಂದ ಹೊರಡುವ ಮೊದಲು ವಾಸಿಸುತ್ತಿದ್ದ. ಭಾರತ ಮತ್ತು ಜಾಗತಿಕ ಬೌದ್ಧ ಸಮುದಾಯದ ಅಳಿಸಲಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ಅವುಗಳ ಮಾರಾಟವು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳನ್ನು ಹಾಗೂ ವಿಶ್ವಸಂಸ್ಥೆಯ ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ ಎಂದು ಭಾರತ ಕಳುಹಿಸಿದ ನೋಟಿಸ್ ನಲ್ಲಿ ಹೇಳಲಾಗಿತ್ತು
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಾಂಗ್ ಕಾಂಗ್ನ ಕಾನ್ಸುಲೇಟ್ ಜನರಲ್ ಅವರಲ್ಲಿ ಹರಾಜನ್ನು ತಕ್ಷಣವೇ ನಿಲ್ಲಿಸುವಂತೆ ವಿನಂತಿಸಿತು.
ಹರಾಜನ್ನು ಸ್ಥಗಿತಗೊಳಿಸಿದಾಗ, ಪಿಪ್ರಾಹವಾ ರತ್ನಗಳ ಮೇಲಿನ ಭಾರತದ ಕಾನೂನುಬದ್ಧ ಹಕ್ಕುಗಳು ಹಿನ್ನಡೆ ಅನುಭವಿಸಬೇಕಾಗಿ ಬಂತು. ಏಕೆಂದರೆ ಪೆಪ್ಪೆ ಬ್ರಿಟಿಷ್ ಸರ್ಕಾರದಿಂದ ಅವರಿಗೆ ನೀಡಲಾದ ಭೂಮಿಯಲ್ಲಿ ಅವಶೇಷಗಳನ್ನು ಅಗೆದಿದ್ದರು. ಈ ಭೂಮಿ 127 ವರ್ಷಗಳ ಕಾಲದಿಂದ ಅವರ ಕುಟುಂಬಕ್ಕೆ ಸೇರಿದ್ದಾಗಿತ್ತು. ಇದಲ್ಲದೆ ಭಾರತದ Antiquities and Art Treasures Act, 1972 ಜಾರಿಗೆ ಬರುವ ಮೊದಲೇ ರತ್ನಗಳನ್ನು ಭಾರತದಿಂದ ಹೊರಗೆ ಕೊಂಡೊಯ್ಯಲಾಗಿತ್ತು. ಇದರ ಹೊರತಾಗಿಯೂ ಸಂಸ್ಕೃತಿ ಸಚಿವಾಲಯವು ಹರಾಜಿನ ಅಕ್ರಮವನ್ನು ಎತ್ತಿ ತೋರಿಸಲು ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕೇಳಿಕೊಂಡಿತು.
ಭಾರತೀಯ ಕೈಗಾರಿಕೋದ್ಯಮಿ ಪಿರೋಜ್ಶಾ ಗೋದ್ರೇಜ್ ಕೂಡ 349 ರತ್ನಗಳ ಸಂಪೂರ್ಣ ಸಂಗ್ರಹವನ್ನು ಬಹಿರಂಗಪಡಿಸದ ಮೊತ್ತಕ್ಕೆ ಖರೀದಿಸುವ ಪಾತ್ರವನ್ನು ವಹಿಸಿದರು. ಗೋದ್ರೇಜ್ ಸಂಗ್ರಹದ "ದೊಡ್ಡ ಭಾಗವನ್ನು" ಐದು ವರ್ಷಗಳ ಅವಧಿಗೆ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಸಾಲವಾಗಿ ನೀಡಲು ಮತ್ತು ಅದು ಭಾರತಕ್ಕೆ ಬಂದ ನಂತರ ಮೂರು ತಿಂಗಳ ಕಾಲ ಸಂಪೂರ್ಣ ಸಂಗ್ರಹವನ್ನು ಪ್ರದರ್ಶಿಸಲು ಒಪ್ಪಿಕೊಂಡಿದ್ದಾರೆ. ಇದು ಅಸಾಂಪ್ರದಾಯಿಕ ಕ್ರಮವಾಗಿದ್ದರೂ, ಇದು ಸರಕಾರವನ್ನು ಪ್ರಾಚೀನ ವಸ್ತುಗಳಿಗೆ ವಾಣಿಜ್ಯ ವಹಿವಾಟು ನಡೆಸುವುದರಿಂದ ರಕ್ಷಿಸಿತು.







