ಸುಧೀರ್ಘ ಕಾಯುವಿಕೆಗೆ ಸಿಕ್ಕ ಪ್ರತಿಫಲ; ಟೆಸ್ಟ್ನಲ್ಲಿ ಎರಡನೇ ಅವಕಾಶದಲ್ಲಿ ಶತಕ ಬಾರಿಸಿ ಮಿಂಚಿದ ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್ |Photo Credit : x \ @TheCricpixs
ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತೊಂದು ಅವಕಾಶಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದ ದೇವದತ್ ಪಡಿಕ್ಕಲ್ ಈ ಬಾರಿ ನಿರಾಶೆ ಮಾಡಲಿಲ್ಲ. ಗಾಲೆಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಶತಕ ಬಾರಿಸಿದ್ದಾರೆ.
ಗಾಲೆಯಲ್ಲಿ ದೇವದತ್ ಪಡಿಕ್ಕಲ್ ಬ್ಯಾಟಿಂಗ್ಗೆ ಇಳಿದಾಗ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಗದ ದಿನಗಳ ಅಪೂರ್ಣ ಭಾವ ಕಾಡುತ್ತಿತ್ತು. ಸಮತಟ್ಟಾದ ಮತ್ತು ಹೆಚ್ಚು ಕಠಿಣವಲ್ಲದ ಮೇಲ್ಮೈನಲ್ಲಿ ಅವರು ಕೊನೆಗೂ ಭರವಸೆಗೆ ತಕ್ಕಂತೆ ಆಟವಾಡಿದರು. ನೆಲದಲ್ಲಿ ಸ್ವಲ್ಪ ತಳ್ಳುವುದು, ತ್ವರಿತ ಸಿಂಗಲ್ ತೆಗೆದುಕೊಳ್ಳುವುದು ಮತ್ತು ಕೊನೆಗೆ ಪಿಚ್ನಿಂದ ಹಾರಿ ಶತಕದ ಸಂಭ್ರಮವನ್ನೂ ಆಚರಿಸಿದರು. ದೀರ್ಘಕಾಲದಿಂದ ಪಡಿಕ್ಕಲ್ ಈ ಕ್ಷಣಕ್ಕಾಗಿ ಕಾಯುತ್ತಿದ್ದರು: ಭಾರತ ತಂಡಕ್ಕಾಗಿ ಆಡುವುದು ಮತ್ತು ಶತಕದ ಸಂಭ್ರಮ ಅನುಭವಿಸುವುದು.
ಕರ್ನಾಟಕದ ಬ್ಯಾಟರ್ ಶತಕ ಗಳಿಸಿ ಶ್ರೀಲಂಕಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ನ ಮೊದಲ ದಿನದಂದು ಭಾರತವನ್ನು ಕಮಾಂಡಿಂಗ್ ಸ್ಥಾನಕ್ಕೆ ಕರೆದೊಯ್ದಿದ್ದಾರೆ. ಮಳೆಯಿಂದ ಪ್ರಭಾವಿತವಾದ ದಿನದಂದು ಪಂದ್ಯ ಮುಗಿದ ಸಂದರ್ಭದಲ್ಲಿ ಭಾರತ 288/2ಕ್ಕೆ ದಿನದಾಟ ಮುಗಿಸಿತು. ಪಡಿಕ್ಕಲ್ ತಮ್ಮ ಹೆಸರಿನ ಪಕ್ಕದಲ್ಲಿ ಟೆಸ್ಟ್ ಶತಕವನ್ನು ದಾಖಲಿಸಿಕೊಂಡರು. ಅವರ ಅಜೇಯ 131 ರನ್ ವೈಯಕ್ತಿಕ ಹೆಗ್ಗುರುತು ಮಾತ್ರವಲ್ಲ. ಪ್ರಸಿದ್ಧಿಯಿಂದ ದೂರವಿದ್ದು ವರ್ಷಗಳ ಕಾಲ ಹಾಕಿದ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿತ್ತು.
ಟೆಸ್ಟ್ ಕ್ಯಾಪ್ ನಂ. 314 ಪಡೆಯುವ ಹಾದಿ ಸರಳವಾಗಿರಲಿಲ್ಲ. ಪಡಿಕ್ಕಲ್ 2024ರ ಮಾರ್ಚ್ 7ರಂದು ತಮ್ಮ ಚೊಚ್ಚಲ ಪಂದ್ಯ ಆಡಿದ್ದರು. ಅದೇ ನವೆಂಬರ್ನಲ್ಲಿ ಎರಡನೇ ಟೆಸ್ಟ್ ಆಡುವ ಅವಕಾಶವೂ ಸಿಕ್ಕಿತ್ತು. ರಣಜಿ ಟ್ರೋಫಿಯಲ್ಲಿ ತಮಿಳುನಾಡಿನ ವಿರುದ್ಧ ಕರ್ನಾಟಕದ ಪರವಾಗಿ ಶತಕ ಗಳಿಸಿದ ನಂತರ ಮುಖ್ಯ ಆಯ್ಕೆಗಾರ ಅಜಿತ್ ಆಗರ್ಕರ್ ಅವರ ಕಣ್ಣಿಗೆ ಬಿದ್ದರು. ಹೀಗೆ ಅವರಿಗೆ ಟೆಸ್ಟ್ನಲ್ಲಿ ಅವಕಾಶ ದೊರೆತಿತ್ತು. ಶುಭಮನ್ ಗಿಲ್ ಅವರು 3ನೇ ಸ್ಥಾನದಲ್ಲಿ ಆಡಲು ಬಯಸಿದ ಕಾರಣ ಅವರು ನಾಲ್ಕನೇ ಸ್ಥಾನದಲ್ಲಿ ಆಡಿದ್ದರು. ನಂತರ ಪರ್ತ್ನಲ್ಲಿ ಗಿಲ್ ಲಭ್ಯವಿಲ್ಲದ ಕಾರಣ ನಂಬರ್ 3ನೇ ಸ್ಥಾನಕ್ಕೇರಿದ್ದರು. ಆದರೆ ನಂತರ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಎರಡು ವರ್ಷ ಕಾಯಬೇಕಾಯಿತು.
ಈಗಿನ ಇನ್ನಿಂಗ್ಸ್ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದರೆ ನಾವು 2021ಕ್ಕೆ ಹಿಂತಿರುಗಬೇಕು. ಪಡಿಕ್ಕಲ್ ಶ್ರೀಲಂಕಾ ವಿರುದ್ಧದ ತಮ್ಮ T20 ಚೊಚ್ಚಲ ಪಂದ್ಯವನ್ನು ಆಡಿದಾಗ ಭಾರತದ ಭರವಸೆಯ ಆಟಗಾರರಲ್ಲಿ ಒಬ್ಬರಂತೆ ಕಾಣುತ್ತಿದ್ದರು. ಆದರೆ ನಂತರ ಬಹಳ ಕಠಿಣ ಅವಧಿಯನ್ನು ಎದುರಿಸಿದರು. ಕೋವಿಡ್-19ರ ಹೊಡೆತ, ನಿರಂತರ ಹೊಟ್ಟೆಯ ಸಮಸ್ಯೆ ಎರಡು ವರ್ಷಗಳ ಕಾಲ ಅವರ ವೃತ್ತಿಜೀವನಕ್ಕೆ ಅಡ್ಡಿಯಾಯಿತು. ನಂತರ ಅವರು ತೂಕ ಇಳಿಸಿಕೊಂಡರು. ಲಯ ಕಳೆದುಕೊಂಡರು. 2022 ಮತ್ತು 2023ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆಗಿನ ಕಷ್ಟಕರ IPL ಋತುಗಳನ್ನು ಸಹಿಸಿಕೊಂಡರು. ಪ್ರತಿ ಬಾರಿ ಆಟಕ್ಕೆ ಆವೇಗ ನೀಡಿದಾಗ ಹೊಸ ಹಿನ್ನಡೆ ಎದುರಾಗುತ್ತಿತ್ತು. 2024ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಕಂಡುಕೊಂಡ ನಂತರವೂ ಸ್ಕೋರ್ಗಳು ಬರಲಿಲ್ಲ. ಎರಡು ಟೆಸ್ಟ್ ಪಂದ್ಯಗಳಲ್ಲಿ 90 ರನ್ಗಳನ್ನಷ್ಟೇ ಪೇರಿಸಿದ್ದರು. ಇದೀಗ ಮೂರನೇ ಟೆಸ್ಟ್ನಲ್ಲಿ ಗಾಲೆಯಲ್ಲಿ ಶತಕ ಬಾರಿಸಿರುವುದು ಬಹು ವರ್ಷಗಳಿಂದ ಅವರು ಕಾಯುತ್ತಿದ್ದ ಯಶಸ್ಸು ಎಂದರೆ ತಪ್ಪಲ್ಲ.
ಇದೇನು ಅವರ ಕ್ರೀಡಾ ಜೀವನದಲ್ಲಿ ಹಠಾತ್ತಾಗಿ ಕಂಡುಬಂದ ತಿರುವಲ್ಲ. ಬೆಂಗಳೂರಿನಲ್ಲಿರುವ BCCIನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಚ್ಚರಿಕೆಯಿಂದ ಪಡೆದ ತರಬೇತಿ. ಭಾರತದ ಬ್ಯಾಟಿಂಗ್ ತರಬೇತುದಾರ ಸಿತಾಂಶು ಕೋಟಕ್ ಈ ಪರಿವರ್ತನೆ ಬಗ್ಗೆ ಬಹಳ ಸಂತೋಷಪಟ್ಟಿದ್ದಾರೆ.
ದೇವದತ್ ಪಡಿಕ್ಕಲ್ ತಾಂತ್ರಿಕವಾಗಿಯೂ ತಮ್ಮ ಆಟದಲ್ಲಿ ಬದಲಾವಣೆ ತಂದುಕೊಂಡಿದ್ದರು. ಸಿತಾಂಶು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, “ಅವರು ತಮ್ಮ ಬ್ಯಾಕ್ಫುಟ್ ಆಟದ ಮೇಲೆ ಕೆಲಸ ಮಾಡಿದ್ದಾರೆ. ಪಿಚ್ನಿಂದ ಟರ್ನ್ ನಿರೀಕ್ಷಿಸುವಾಗ ಅದನ್ನು ಪ್ರಯತ್ನಿಸುತ್ತೇವೆ. ಕ್ರೀಸ್ನಿಂದ ಹೊರಗೆ ಬಂದು ಸ್ವೀಪ್ ಮಾಡುವುದನ್ನೂ ಅಭ್ಯಾಸ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಿ ಬದಲಾವಣೆ ಕಂಡುಬಂದಿದೆ.”
ಗಾಲೆಯಲ್ಲಿ ಅವರು ಹಾಕಿದ ಶ್ರಮ ಸ್ಪಷ್ಟವಾಗಿ ಕಾಣುತ್ತಿತ್ತು. ಪಡಿಕ್ಕಲ್ ಶ್ರೀಲಂಕಾದ ಸ್ಪಿನ್ನರ್ಗಳ ವಿರುದ್ಧ ಪದೇಪದೇ ಕ್ರೀಸ್ನ ಡೆಪ್ತ್ ಬಳಸಿಕೊಂಡರು ಮತ್ತು ಅವಕಾಶ ಸಿಕ್ಕಾಗ ಹೊರಗೆ ಬಂದು ಹೊಡೆದರು. ಪ್ರಭಾತ್ ಜಯಸೂರ್ಯ ಅವರ ಚೆಂಡನ್ನು ಲಾಂಗ್ ಆನ್ನಲ್ಲಿ ಸಿಕ್ಸ್ ಬಾರಿಸಿದರು. ಆದರೆ ಸ್ಪಿನ್ ವಿರುದ್ಧ ಸ್ವೀಪ್ ಅವರಿಗೆ ಮತ್ತೊಂದು ಆಯ್ಕೆ ನೀಡಿತ್ತು.
ಅವರಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿರುವುದು ನಾಯಕತ್ವ. ಜನವರಿಯಲ್ಲಿ ಕರ್ನಾಟಕದ ರಣಜಿ ತಂಡದ ನಾಯಕನ ಸ್ಥಾನಕ್ಕಾಗಿ ಪಡಿಕ್ಕಲ್ ಅವರನ್ನು ಬೆಂಬಲಿಸಿದ ಆಯ್ಕೆ ಸಮಿತಿಯ ಭಾಗವಾಗಿದ್ದರು ಭಾರತದ ಮಾಜಿ ವೇಗಿ, KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್. ಅವರ ಪ್ರಕಾರ ನಾಯಕತ್ವದ ಜವಾಬ್ದಾರಿಯು ದೇವದತ್ ಅವರ ಬ್ಯಾಟಿಂಗ್ನ ಮತ್ತೊಂದು ಭಾಗವನ್ನು ಹೊರತಂದಿದೆ.
“ದೇಶಿ ಕ್ರಿಕೆಟ್ನಲ್ಲಿ ಅವರು ಅನೇಕ ಶತಕಗಳನ್ನು ದಾಖಲಿಸಿದ್ದಾರೆ. ಅವರ ನಾಯಕತ್ವದ ಸಾಮರ್ಥ್ಯವನ್ನು ಯಾರೂ ಕಂಡಿರಲಿಲ್ಲ. ಆದರೆ ಅವರಿಗೆ ನಾಯಕತ್ವ ವಹಿಸಿದ ತಂಡದ ಭಾಗವಾಗಿದ್ದೇನೆ. ಹೀಗಾಗಿ ಸರಿಯಾದ ಯುವಕರಿಗೆ ನೇತೃತ್ವ ವಹಿಸುವ ಅವಕಾಶ ದೊರೆತರೆ ಉತ್ತಮ ಪರಿಣಾಮ ಸಿಗುತ್ತದೆ ಎನ್ನುವುದು ಸಾಬೀತಾಗಿದೆ” ಎಂದು ವೆಂಕಟೇಶ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಟೆಸ್ಟ್ ಸ್ಥಾನವೂ ಸುಲಭವಾಗಿರಲಿಲ್ಲ. ಆರಂಭದಲ್ಲಿ ತಂಡದಿಂದ ಹೊರಗಿದ್ದರು. ಆದರೆ ಸಾಯಿ ಸುದರ್ಶನ್ ಗಾಯವು ದೇವದತ್ ಅವರಿಗೆ ಅವಕಾಶದ ಬಾಗಿಲು ತೆರೆಯಿತು. ಕೊಲಂಬೊದ NCC ಗ್ರೌಂಡ್ನಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಅಜೇಯ 142 ರನ್ ಸೇರಿದಂತೆ ಶ್ರೀಲಂಕಾದಲ್ಲಿ ಭಾರತ A ತಂಡದೊಂದಿಗೆ ಪಡಿಕ್ಕಲ್ ಈಗಾಗಲೇ ತಮ್ಮ ಫಾರ್ಮ್ ಪ್ರದರ್ಶಿಸಿದ್ದರು. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ನಡುವಿನ ಆರಂಭಿಕ ಮಿಕ್ಸ್ಅಪ್ ರನೌಟ್ ಆಗಿ ಬದಲಾದಾಗ ದೇವದತ್ಗೆ ಕ್ರೀಸ್ಗೆ ಬರುವ ಅವಕಾಶ ನೀಡಿತ್ತು. ಸದ್ಯದ ಮಟ್ಟಿಗೆ ಈ ಶತಕ ತಂಡದಲ್ಲಿ ನಂಬರ್ 3ನೇ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನೂ ನೀಡಿದೆ. ಆದರೆ ಸಾಯಿ ಸುದರ್ಶನ್ ಮರಳಿದಾಗ ಆಯ್ಕೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ವಾತಂತ್ರ್ಯ ದಿನದಂದು ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಬಳಿಕ ದೇವದತ್ ಪಡಿಕ್ಕಲ್ ಚೊಚ್ಚಲ ಶತಕವನ್ನೇ ಸ್ವಾತಂತ್ರ್ಯ ದಿನದಂದು ದಾಖಲಿಸಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಕೇಸರ ನುವಂತ ಅವರ ಬೌಲಿಂಗ್ ನಲ್ಲಿ ಸಿಂಗಲ್ ಗಳಿಸಿ 134 ಎಸೆತಗಳಲ್ಲಿ ಶತಕ ಪೂರೈಸಿದರು. 24 ವರ್ಷಗಳ ಬಳಿಕ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್ ಶತಕ ಗಳಿಸಿದ ಎರಡನೇ ಭಾರತೀಯ ಎಡಗೈ ಬ್ಯಾಟರ್ ಎಂಬ ದಾಖಲೆಯನ್ನು ಪಡಿಕ್ಕಲ್ ಸಾಧಿಸಿದರು. 2002ರಲ್ಲಿ ದಿಲ್ಲಿಯಲ್ಲಿ ಸೌರವ್ ಗಂಗುಲಿ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು.






