ಸಾವಿನ ದವಡೆಯಲ್ಲಿ ಜೀವಿಸುತ್ತಿರುವ ಕೊರಗರು

ಕೊರಗರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು 1994ರಲ್ಲಿ ಡಾ. ಮುಹಮ್ಮದ್ ಪೀರ್ ಎಂಬ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞರನ್ನು ನೇಮಿಸಲಾಯಿತು. ಅವರು ಸುದೀರ್ಘ ಅಧ್ಯಯನ ಮಾಡಿ 1994ರಲ್ಲೇ ವರದಿ ಸಲ್ಲಿಸಿ ಕೊರಗರ ಉಳಿವು ಮತ್ತು ಅಭಿವೃದ್ಧಿಗೋಸ್ಕರ ಅನೇಕ ಶಿಫಾರಸುಗಳನ್ನು ಮಾಡಿದರು. ಆದರೆ ಅವರ ವರದಿಯನ್ನು ಈವರೆಗಿನ ಯಾವುದೇ ಸರಕಾರಗಳು ತೆರೆದು ಕೂಡ ನೋಡಲಿಲ್ಲ! ಡಾ. ಪೀರ್ ಅವರು ತಮ್ಮ ವರದಿ ಅನುಷ್ಠಾನಗೊಳ್ಳುವುದನ್ನು ನೋಡದೆಯೇ ನಿಧನರಾದರು.
ಕೊರಗ ಸಮುದಾಯ ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಸ್ಪಶ್ಯ ಸಮುದಾಯ. ನನಗೆ ತಿಳಿದಂತೆ ಎಸ್.ಟಿ.ಯಲ್ಲಿರುವ ಏಕೈಕ ಅಸ್ಪಶ್ಯರು ಕೊರಗರು.
ಸುಮಾರು ಮೂವತ್ತು ಮೂವತೈದು ವರ್ಷಗಳ ಹಿಂದೆ ‘ಲಂಕೇಶ್ ಪತ್ರಿಕೆ’ಗೆ ವರದಿ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುತ್ತಾಡಿದಾಗ ಕೊರಗ ಸಮುದಾಯದ ಮೊದಲ ಪರಿಚಯವಾಗಿತ್ತು. ‘ಕೊರಗ ತನಿಯ: ದನ ಕಾಯೋ ದೇವರು’ ಎಂಬ ಶೀರ್ಷಿಕೆಯಲ್ಲಿ ಕೊರಗರ ಪಾಡ್ದನದ ಕುರಿತು ಬರೆದ ನೆನಪು. ಈಚೀಚೆಗಂತೂ ಕೊರಗರ ಜಾನಪದ ದೈವ ಕೊರಗಜ್ಜ, ಶಿಷ್ಟ ಸಮುದಾಯಗಳಲ್ಲಿ ಶಿರಡಿ ಸಾಯಿ ಬಾಬರಷ್ಟೇ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಆದರೆ ಕೊರಗರ ಸ್ಥಿತಿಯಂತೂ ದಿನದಿಂದ ದಿನಕ್ಕೆ ಅತ್ಯಂತ ದುಸ್ತರವಾಗುತ್ತಿದೆ!
ನಮ್ಮ ‘ಅಲೆಮಾರಿ ಬುಡಕಟ್ಟು ಮಹಾಸಭಾ’ದ ಸಭೆಗಳಲ್ಲಿ ಕೊರಗರ ಸುಂದರ್, ಮುತ್ತಾಡಿ, ಕೊಗ್ಗ ರಮೇಶ್, ಸಬಿತಾ ಕೊರಗ ಮುಂತಾದವರೊಂದಿಗೆ ಚರ್ಚಿಸುವಾಗ ಕೊರಗರ ಯಾತನೆಯ ಬದುಕಿನ ಅನಾವರಣವಾಯಿತು.
ಕೊರಗರ ಬದುಕುಗಳನ್ನು ಹತ್ತಿರದಿಂದ ನೋಡುವ ಕುತೂಹಲದಿಂದ ಮಂಗಳೂರ ಕಡೆ ಹೊರಟೆವು. ಅಲ್ಲಿಂದ ಉಡುಪಿ ಹೊರವಲಯದ ಅಲಯೂರು ಪದವು ಎಂಬ ಗ್ರಾಮವನ್ನು ತಲುಪಿದಾಗ ನಮ್ಮ ಕಡೆ ಕನಿಷ್ಠ ಗಮನವನ್ನೂ ಕೊಡದೆ ತನ್ನಷ್ಟಕ್ಕೆ ತಾನು ಬುಟ್ಟಿ ಹೆಣೆಯುತ್ತಿದ್ದ ಅಜ್ಜನನ್ನು ನೋಡಿ ಆಶ್ಚರ್ಯವಾಯಿತು! ತಮ್ಮ ಗ್ರಾಮಕ್ಕೆ ಬಂದ ಹೊಸಬರ ಕಡೆ ಕನಿಷ್ಠ ಕುತೂಹಲಕ್ಕಾದರೂ ಕಣೆತ್ತಿಯೂ ನೋಡದ ಆ ಮನುಷ್ಯನ ನಿರ್ಲಕ್ಷ್ಯ ಬಗ್ಗೆ ಕೇಳಿದಾಗ ‘‘ನಮಗೆ ಮನುಷ್ಯರ ಬಗ್ಗೆಯೇ ನಂಬಿಕೆ ಹೊರಟುಹೋಗಿದೆ ಸರ್’’ ಎಂದ ಮುತ್ತಾಡಿ ‘‘ನಮಗೆ ಅನ್ನ ಕೊಡಿ ಎಂದರೆ ಕಾಲಿ ತಟ್ಟೆ ಕೊಡುವ, ನೀರು ಕೊಡಿ ಅಂದರೆ ಕಾಲಿ ಚೊಂಬು ಕೊಡುವ, ಕಾಡಿಗೆ ಹೋಗಿ ಬಿದಿರು ತರಲು ಬಿಡದ ಸರಕಾರ ನಮಗೆ ಕತ್ತಿ ಕೊಡುತ್ತದೆ! ಇದರಿಂದ ನಾವೇನು ಮಾಡಬೇಕು..? ನಿಮ್ಮನ್ನು ಸರಕಾರಿ ಅಧಿಕಾರಿ ಎಂದು ತಿಳಿದೋ ಏನೋ ಆ ಅಜ್ಜ ಇತ್ತ ಗಮನ ಹರಿಸದೆ ನಿರ್ಲಿಪ್ತನಾಗಿ ಬುಟ್ಟಿ ಹೆಣೆಯುತ್ತಿದ್ದಾನೆ’’ ಎಂದ. ಈ ಗ್ರಾಮದಲ್ಲಿ 59 ಗುಡಿಸಲಿವೆ. ತಾವು ಹೆಣೆದಿರುವ ಚಾಪೆಯೇ ಗೋಡೆ, ಹುಲ್ಲಿನ ಚಾವಣಿಯೇ ಸೂರು. ಇಲ್ಲಿ ನೆಲೆಸಿರುವ ಕೊರಗರಲ್ಲಿ ಬಹುಪಾಲು ಜನ ಮಣಿಪಾಲ ಆಸ್ಪತ್ರೆ ಮತ್ತಿತರ ಕಡೆ ಜಾಡಮಾಲಿಗಳಾಗಿ ಕಕ್ಕಸ್ಸು ಬಾಚುವ ಕೆಲಸ ಮಾಡುತ್ತಿದ್ದಾರೆ.
ಮೂಲತಹ ಕೊರಗರಿಗೆ ಜಾಡಮಾಲಿ ಕೆಲಸ ಗೊತ್ತಿರಲಿಲ್ಲ. ಕಾಡಲ್ಲಿ ವಾಸಿಸುತ್ತಾ ಬಿದಿರು ತಂದು ಅದರಲ್ಲಿ ಚಾಪೆ, ಬುಟ್ಟಿ ಹೆಣೆಯುತ್ತಿದ್ದವರು ಕೊರಗರು. ಚಾಪೆಯ ಮೇಲೆ ಕಾಡ ಹೂ-ಎಲೆಗಳ ಬಣ್ಣದಿಂದ ಚಿತ್ತಚಿತ್ತಾರವಾದ ಚಿತ್ರಕಲೆಯನ್ನು ಮೂಡಿಸುತ್ತಿದ್ದವರು. ಬಿದಿರಿನಿಂದ ಕೊಳಲು, ಕಡೈ, ಕರಂಡೆಯಂತಹ ವಾದ್ಯಗಳನ್ನು ರೂಪಿಸಿ ಅವುಗಳ ಮೇಲೂ ಬಣ್ಣದ ಚಿತ್ತಾರಗಳನ್ನು ಅರಳಿಸಿ, ಸುಶ್ರಾವ್ಯವಾಗಿ ನುಡಿಸುತ್ತಿದ್ದವರು. ಮಗು ಮಲಗುವ ತೊಟ್ಟಿಲು, ಗಾಂತಿರ, ಪೊಲಿಕೆದ ಕುರ್ವೆಗಳನ್ನು ಮಾಡಿ, ಅವುಗಳಿಂದ ಬಂದ ಹಣದಿಂದ ಉತ್ತಮ ಜೀವನ ನಡೆಸುತ್ತಿದ್ದರು. ಕಾಡಿಗೆ ಹೋಗಿ ಬಿಳಿಲು, ಬಿಂಗು ತರಲು ಸರಕಾರ ಇವರನ್ನು ನಿಯಂತ್ರಿಸಿದ ಕಾರಣ ಬೇರೆ ದಾರಿ ಕಾಣದೆ ಜಾಡಮಾಲಿ ವೃತ್ತಿಯನ್ನು ಅವಲಂಬಿಸಿ ದ್ದಾರೆ. ‘‘ನಮ್ಮನ್ನು ಕಾಡಿಗೆ ಹೋಗಲು ತಡೆದಾಗ ಅಸಹಾಯಕರಾದ ನಾವು ನಾಡಿಗೆ ಬಂದು ಸುತ್ತಾ ನೋಡಿದೆವು ನಮ್ಮ ಕಣ್ಣಿಗೆ ಕಂಡದ್ದು ಕಸ, ಕಕ್ಕಸು.. ನಮಗೆ ಅನ್ನಕ್ಕೆ ದಿಕ್ಕಿಲ್ಲದೆ ನಾವು ಸುಲಭವಾಗಿ ಸಿಕ್ಕ ಈ ವೃತ್ತಿಯನ್ನೇ ಹೊಟ್ಟೆಪಾಡಿಗಾಗಿ ಮಾಡಿಕೊಂಡಿದ್ದೇವೆ..’’ ಎನ್ನುತ್ತಾರೆ.
ಕಾರ್ಕಡ, ಸಾಲಿಗ್ರಾಮದ ಬಳಿ ಕೊರಗ ಕೇರಿ ಬಳಿಯೇ ಶಾಲೆಯೂ ಇದೆ. ಮಕ್ಕಳು ರಾತ್ರಿ ಹೊತ್ತು ಹಾವು, ಚೇಳುಗಳಿಗೆ ಹೆದರಿ ತಮ್ಮ ತಡಿಕೆಗಳ ಗುಡಿಸಲುಗಳಲ್ಲಿ ಮಲಗಲಾರದೆ ಶಾಲೆಗೆ ಹೋಗಿ ಮಲಗುತ್ತಾರೆ. ಹಗಲಂತೂ ಈ ಮಕ್ಕಳು ಶಾಲೆ ಕಡೆ ಮುಖ ಹಾಕಲ್ಲ! ಶಾಲೆಯಿರುವುದೇ ರಾತ್ರಿ ಮಲಗಲಿಕ್ಕೆ ಎಂದು ಈ ಮಕ್ಕಳು ನಂಬಿದಂತಿದೆ.
ನಿಸರ್ಗ ಮತ್ತು ಕಾಡನ್ನೇ ನಂಬಿದ್ದ ಕೊರಗರು ನೇರವಾಗಿ ನಿಸರ್ಗವನ್ನು ಅದೆಷ್ಟು ಒಳಗೊಳ್ಳುತ್ತಾರೆ ಎನ್ನಲಿಕ್ಕೆ ಅವರು ನಿಸರ್ಗದಲ್ಲಿರುವ ಇರುವೆ, ಹುಳು ಹುಪ್ಪಟೆಗಳಿಗೂ ಗೌರವಿಸಿ ಅವುಗಳ ಹೆಸರನ್ನು ತಮಗೆ ಇಟ್ಟುಕೊಳ್ಳುತ್ತಾರೆ! ಉದಾಹರಣೆಗೆ ಮಣ್ಕ್(ಮಿಣುಕು ಹುಳ), ಚೆನಿಲಾ(ಅಳಿಲು), ತಬ್ರ(ಕೆಂಪಿರುವೆ), ಜೀಂಕ್ರ(ಮೀನು), ಪೊಡುಂಕರ(ಹಲಸಿನ ಸಿಪ್ಪೆ), ಮುತ್ತಾಡಿ(ಮರದ ಕೆಳಗೆ ಹುಟ್ಟಿದವನು) ಹೀಗೆ ಅನೇಕ ನಿಸರ್ಗದ ಆಕರ್ಷಕ ಹೆಸರುಗಳಿವೆ.
ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ, ಮಲದ ಗುಂಡಿಗೆ ಮಲ ಬಾಚಲು ಒಬ್ಬ ಕೊರಗ ವ್ಯಕ್ತಿಯನ್ನು ಇಳಿಸಲಾಯಿತು, ಈತ ಆಯತಪ್ಪಿ ಮಲದಗುಂಡಿಗೆ ಬಿದ್ದು ಮಲದ ಆಳದಲ್ಲಿ ಮುಳುಗಿಹೋದ! ಇವನನ್ನು ಎತ್ತಲು ಮತ್ತೊಬ್ಬ ಹುಡುಕ ಹೊರಟರು ಅಷ್ಟರಲ್ಲಿ ನಾಲ್ಕಾರು ಗಂಟೆ ಸಮಯ ಕಳೆದುಹೋಗಿತ್ತು. ಮತ್ತೊಬ್ಬ ಕೊರಗ ವ್ಯಕ್ತಿಗೆ ಹಗ್ಗ ಕಟ್ಟಿ ಮಲದಲ್ಲಿ ಮುಳುಗಿದ್ದ ಹೆಣವನ್ನು ಮೇಲಕ್ಕೆ ಎಳೆಸಿದರು!
ಕೊರಗರನ್ನು ತೀವ್ರವಾಗಿ ಕಾಡಿದ್ದು ‘ಅಜಲು ಪದ್ದತಿ’! ಸಹಜವಾಗಿ ಉಳ್ಳವರ ಮನೆಯ ದನದ ಕೊಟ್ಟಿಗೆಯಲ್ಲಿ ಜೀವಿಸುತ್ತಿದ್ದ ಕೊರಗರಿಗೆ ಇದು ಅತ್ಯಂತ ದಾರುಣ ಪದ್ಧತಿ. ದೊಡ್ಡ ಜಾತಿಯ ಉಳ್ಳವರ ಮನೆಯಲ್ಲಿ ಯಾರಿಗಾದರೂ ರೋಗರುಜಿನ ಬಂದರೆ ಅಂತಹ ರೋಗಿಷ್ಟರ ಕೂದಲು ಮತ್ತು ಉಗುರನ್ನು ಕತ್ತರಿಸಿ ಅದನ್ನು ಅನ್ನದಲ್ಲಿ ಬೆರೆಸಿ ಕೊರಗರಿಗೆ ತಿನ್ನಲು ನೀಡುತ್ತಿದ್ದರು. ಕೊರಗರು ಆ ಅನ್ನ ತಿಂದರೆ ಅವರಿಗಿದ್ದ ರೋಗ ಇವರಿಗೆ ವರ್ಗವಾಗಿ ದೊಡ್ಡ ಜಾತಿಯ ಮನೆಯವರ ರೋಗ ವಾಸಿಯಾಗುತ್ತದೆ ಎಂಬ ಅಮಾನುಷ ನಂಬಿಕೆ ಅದು. ಇದನ್ನು ಈಗ ನಿಷೇಧಿಸಲಾಗಿದೆ, ಆದರೆ ಸ್ಥಳೀಯರು ಹೇಳುವ ಪ್ರಕಾರ ಈ ಅಜಲು ಪದ್ಧತಿ ಈಗಲೂ ಗುಪ್ತವಾಗಿ ಜಾರಿಯಲ್ಲಿದೆಯಂತೆ.
ಇನ್ನೊಂದು ಕ್ರೌರ್ಯ ಅಂದರೆ ಕಂಬಳಕ್ಕಾಗಿ ಸಾಕಿರುವ ಬೆಲೆಬಾಳುವ ಕೋಣಗಳನ್ನು ಕೆಸರಗದ್ದೆಗಳಲ್ಲಿ ಓಡಿಸುವ ಮುಂಚೆ ಕೊರಗರನ್ನು ಓಡಿಸುತ್ತಾರಂತೆ. ಕೆಸರಲ್ಲಿ ಹುದುಗಿರುವ ಮುಳ್ಳು, ಗಾಜಿನಚೂರುಗಳಿದ್ದರೆ ಅವು ಕೊರಗರಿಗೆ ಚುಚ್ಚಿಕೊಳ್ಳಲಿ, ನಂತರ ಅವನ್ನು ಆರಿಸಿ ಹೊರಗೆಸೆಯಬಹುದು. ಅಕಸ್ಮಾತ್ ತಮ್ಮ ಲಕ್ಷಾಂತರ ರೂ. ಬೆಲೆಬಾಳುವ ಕೋಣಗಳ ಕಾಲುಗಳಿಗೆ ಸಿಕ್ಕಿಕೊಂಡರೆ ಏನು ಗತಿ?
ಮೇಲ್ಜಾತಿಯ ಮನೆಗಳಲ್ಲಿ ಏನೇ ಹಬ್ಬ ಹರಿದಿನವಾದರೂ ಕೊರಗರು ಗಾವುದ ದೂರ ನಿಂತು ಡೋಲು, ಮದ್ದಳೆ ಬಾರಿಸಬೇಕು ನಂತರ ದೊಡ್ಡವರು ತಿಂದು ಬಿಟ್ಟ ಎಂಜಲೆಲೆಯನ್ನು ತಂದು ಕೊರಗರು ತಿನ್ನಬೇಕು. ಎಂಜಲನ್ನವೂ ಮಿಕ್ಕರೆ ಅದನ್ನು ಒಣಗಿಸಿ ನಾಳೆಗಿಟ್ಟುಕೊಳ್ಳಬೇಕು. ನನಗೆ ಸಿಕ್ಕ ಕೊರಗರೊಬ್ಬರ ಅನುಭವದಂತೆ, ಯಾರೋ ಅಜ್ಜ ತಿಂದುಬಿಟ್ಟ ಎಂಜಲೆಲೆಯಲ್ಲಿ ಬಿಟ್ಟ ಅನ್ನ ತಿನ್ನುವಾಗ ಆ ಅನ್ನದಲ್ಲೊಂದು ಹಲ್ಲು ಸಿಕ್ಕಿ ಅದು ಇವನ ಬಾಯಿಗೆ ಬಂದಿತ್ತಂತೆ!
ಹೀಗೆ ಅಜಲು ಪದ್ಧತಿ, ಕೀಳು ಕೆಲಸ ಮಾಡುವ ಕೊರಗರ ಮಕ್ಕಳು ಶಾಲೆಗೆ ಹೋದರೆ ಅಲ್ಲೂ ಅಸ್ಪಶ್ಯತೆ, ತಾರತಮ್ಯಗಳು ನಡೆಯುತ್ತವೆ. ಈ ಕಾರಣಕ್ಕೆ ಕೊರಗರ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಇಂತಹ ಕೀಳರಿಮೆಗಳನ್ನು ಸತತವಾಗಿ ಅನುಭವಿಸುತ್ತಾ ಬಂದಿರುವ ಕೊರಗರು ಒಂದು ರೀತಿಯ ಮಾನಸಿಕ ಖಿನ್ನತೆಗೂ ಒಳಗಾಗಿದ್ದಾರೆ. ಈ ಎಲ್ಲಾ ಕಾರಣಗಳಿಗೆ ಕೊರಗರು ಕುಡಿತಕ್ಕೆ ಮೊರೆಹೋಗಿದ್ದಾರೆ. ಕುಡಿತ, ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ವಾಸಿಯಾಗದ ರೋಗಗಳು, ಮಾನಸಿಕ ಖಿನ್ನತೆಗಳ ಕಾರಣಕ್ಕೆ ಕೊರಗರಲ್ಲಿ ಸಾವುಗಳು ಅತಿಹೆಚ್ಚಾಗಿ ಹುಟ್ಟುಗಳು ಕಡಿಮೆಯಾಗಿವೆ. ಒಂದು ಅಂತ್ಯಕ್ರಿಯೆಗೆ ಹೋಗಿ ಮನೆಗೆ ಬರುವರಷ್ಟರಲ್ಲಿ ಮತ್ತೊಂದು ಸಾವಿನ ಸುದ್ದಿ ಬಂದಿರುತ್ತದೆ!
ಕರ್ನಾಟಕದಲ್ಲಿ ಎರಡು ಸಮುದಾಯಗಳು ಮಾತ್ರ ಆದಿಮ ಬುಡಕಟ್ಟುಗಳಾಗಿವೆ, ಅವು ಕೊರಗರು ಮತ್ತು ಜೇನುಕುರುಬರು. 1956 ರಿಂದ 1986ರವರೆಗೂ ಕೊರಗ ಸಮುದಾಯ ಪರಿಶಿಷ್ಟ ಪಂಗಡದಲ್ಲಿತ್ತು. 1986ರಲ್ಲಿ ಕೇಂದ್ರ ಸರಕಾರ ಕೊರಗರನ್ನು ‘ಆದಿಮ ಮೂಲನಿವಾಸಿ ಬುಡಕಟ್ಟು’ ಅಂದರೆ PVTG ಎಂದು ಕರೆಯುತ್ತದೆ. ಇದರ ಅರ್ಥ primitive vulnerable tribal group ಎಂದು. ಮಾನವ ಸೂಚ್ಯಂಕದ ಪ್ರಕಾರ ಶೇ. 80ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳದೆ ಶಾಲೆ ತೊರೆಯುತ್ತಾರೆ. ಶೇ. 90 ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ನರಳುತ್ತಾರೆ. ಕೊರಗ ಸಮುದಾಯದ ಸರಾಸರಿ ಜೀವಿತಾವಧಿ ಕೇವಲ 40 ವರ್ಷ ವಯಸ್ಸಷ್ಟೆ.
ಕೊರಗರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು 1994ರಲ್ಲಿ ಡಾ. ಮುಹಮ್ಮದ್ ಪೀರ್ ಎಂಬ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞರನ್ನು ನೇಮಿಸಲಾಯಿತು. ಅವರು ಸುದೀರ್ಘ ಅಧ್ಯಯನ ಮಾಡಿ 1994ರಲ್ಲೇ ವರದಿ ಸಲ್ಲಿಸಿ ಕೊರಗರ ಉಳಿವು ಮತ್ತು ಅಭಿವೃದ್ಧಿಗೋಸ್ಕರ ಅನೇಕ ಶಿಫಾರಸುಗಳನ್ನು ಮಾಡಿದರು. ಆದರೆ ಅವರ ವರದಿಯನ್ನು ಈವರೆಗಿನ ಯಾವುದೇ ಸರಕಾರಗಳು ತೆರೆದು ಕೂಡ ನೋಡಲಿಲ್ಲ! ಡಾ. ಪೀರ್ ಅವರು ತಮ್ಮ ವರದಿ ಅನುಷ್ಠಾನಗೊಳ್ಳುವುದನ್ನು ನೋಡದೆಯೇ ನಿಧನರಾದರು.
ಒಂದು ಸಸ್ಯ ಪ್ರಭೇದ ಅಥವಾ ಒಂದು ಪ್ರಾಣಿ, ಪಕ್ಷಿ ಪ್ರಭೇದ ನಶಿಸಿ ಹೋದರೆ ಬೊಬ್ಬೆ ಇಡುವವರು ಇಲ್ಲೊಂದು ಮನುಷ್ಯ ಪ್ರಭೇದವೇ ನಶಿಸಿಹೋದರೂ ಪಂಚೇಂದ್ರಿಯಗಳನ್ನು ಕಳಕೊಂಡವರಂತೆ ಮೌನವಾಗಿದ್ದಾರೆ.







