ಕಾರ್ಪೋರೇಟ್ ವೃತ್ತಿ ತೊರೆದ ಸ್ವಿಸ್ ಮಹಿಳೆ; ಭಾರತದಲ್ಲಿ ಸಮುದಾಯ ಅಭಿವೃದ್ಧಿಯ ಯಶೋಗಾಥೆ

Photo Credit : indianexpress.com
ಸಾಂಡ್ರಾ ಲಾವಿ ಅವರಿಗೆ 15 ವರ್ಷಗಳಿಂದ ಭಾರತದಲ್ಲಿ ಸಮುದಾಯ ಅಭಿವೃದ್ಧಿಯ ಯಶಸ್ವೀ ಪ್ರಯಾಣದಲ್ಲಿ ನೆರವಾಗಿರುವುದು ನಿಸ್ವಾರ್ಥ ಸೇವೆ ಮತ್ತು ಕರ್ತವ್ಯಕ್ಕೆ ಒತ್ತು ನೀಡುವ ಸಿದ್ಧಾಂತ.
ಸಾಂಡ್ರಾ ಲಾವಿ ಗೊಜ್ಕೋವಿಕ್ 15 ವರ್ಷಗಳ ಹಿಂದೆ ಭಾರತಕ್ಕೆ ಬಂದಾಗ ಅವರ ಬಳಿ ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ವಂಚಕರಿಂದ ಮೋಸ ಹೋಗಿ ಹಣ ಕಳೆದುಕೊಂಡು ದ್ವಿತೀಯ ದರ್ಜೆಯ ಹೋಟೆಲ್ ನಲ್ಲಿ ಕಾಲ ಕಳೆಯಬೇಕಾಗಿ ಬಂದಿತ್ತು. ಆದರೆ ಯಶಸ್ವೀ ಕಾರ್ಪೋರೇಟ್ ವೃತ್ತಿಜೀವನ, ಆರ್ಥಿಕ ಭದ್ರತೆ ಮತ್ತು ಸ್ವಿಟ್ಜರ್ಲೆಂಡ್ ನ ಜೀವನ ಸೌಕರ್ಯಗಳನ್ನು ಬಿಟ್ಟು ಬಂದಿದ್ದರು. ಅವರ ಬಳಿ ಇದ್ದುದು ತಮ್ಮ ಜೀವನದಲ್ಲಿ ಇಲ್ಲದ ಉದ್ದೇಶವನ್ನು ಕಂಡುಕೊಳ್ಳುವ ಬಯಕೆ ಮಾತ್ರ.
ಉದ್ದೇಶ ಕಂಡುಕೊಳ್ಳುವ ಪ್ರಯಾಣವು ಅವರನ್ನು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶವೊಂದಕ್ಕೆ ಕರೆದೊಯ್ಯಿತು. ಅಲ್ಲಿ ಅವರು ಸ್ಥಾಪಿಸಲು ಸಹಾಯ ಮಾಡಿದ ಉಚಿತ ಪ್ರಾಥಮಿಕ ಶಾಲೆಯು ಇದೀಗ ಹಳ್ಳಿಗಳಲ್ಲಿ ಬದಲಾವಣೆಯ ಗಾಳಿ ಬೀಸಲು ಕಾರಣವಾಗಿದೆ. ಈ ಶಾಲೆಯು ಒಂದು ಕಾಲದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ಒದಗಿಸುವುದಲ್ಲದೆ, ಬಾಲ್ಯವಿವಾಹ, ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ಹಿಂಸೆಯ ವಿರುದ್ಧ ಮಾತನಾಡಲು ಅವರನ್ನು ಪ್ರೋತ್ಸಾಹಿಸಿದೆ. ವಿದ್ಯಾರ್ಥಿಗಳೇ ತಮ್ಮ ಸ್ವಂತ ಸಮುದಾಯಗಳ ಬದಲಾವಣೆಯ ಕೇಂದ್ರವಾಗಿದ್ದಾರೆ.
ಇತ್ತೀಚೆಗೆ ಲಾವಿ ತಮ್ಮ ಜೀವನದ ತುಣುಕುಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಪೋರೇಟ್ ಬೋರ್ಡ್ರೂಮ್ ನಿಂದ ಗ್ರಾಮೀಣ ತರಗತಿಗಳಿಗೆ ತಮ್ಮ ಜೀವನ ಹೇಗೆ ತಿರುಗಿತು ಎಂಬುದನ್ನು ಅವರು ತೋರಿಸಿದ್ದಾರೆ. ಹಳ್ಳಿಗೆ ಬರುವ ಆಯ್ಕೆ, ಗ್ರಾಮಸ್ಥರ ವಿಶ್ವಾಸ ಪಡೆಯುವುದು ಮತ್ತು ಭಾರತೀಯ ಹಳ್ಳಿಗಳಲ್ಲಿ ಅರ್ಥಪೂರ್ಣ ಬದಲಾವಣೆ ತರುವುದು ಸುಲಭವಾಗಿರಲಿಲ್ಲ.
ಜಗತ್ತಿನ ಶ್ರೀಮಂತ ನಗರಗಳಲ್ಲಿ ಒಂದಾದ ಜ್ಯೂರಿಕ್ನಲ್ಲಿ ಬೆಳೆದ ಸಾಂಡ್ರಾ ಲಾವಿ ಅವರ ಬಾಲ್ಯ ಸಂತುಷ್ಟ ಮತ್ತು ಸುಭದ್ರವಾಗಿತ್ತು. ಅವಕಾಶಗಳಿಗೆ ಕೊರತೆಯಿಲ್ಲದಂತೆ ಬದುಕಿದರು. ಆದರೆ ಅವರು ಜಗತ್ತನ್ನು ನೋಡುವ ಅವಕಾಶವನ್ನೂ ಹೆತ್ತವರು ನೀಡಿದರು. ಪ್ರಯಾಣಿಸುವ ಅವಕಾಶ ದೊರೆಯಿತು. ಸಣ್ಣ ವಯಸ್ಸಿನಲ್ಲಿಯೇ ತಮಗಿಂತ ಭಿನ್ನವಾದ ವಾಸ್ತವಗಳು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ನೋಡುವ ಅವಕಾಶ ಸಿಕ್ಕಿತ್ತು.
ಈ ಪ್ರಯಾಣಗಳ ನೆನಪು ಗಾಢವಾಗಿ ಉಳಿದಿದೆ. ಬರಿಗಾಲಿನ ನಿರಾಶ್ರಿತ ಹುಡುಗಿಯನ್ನು ಕಂಡು ತನ್ನ ಬೂಟುಗಳನ್ನು ಆಕೆಗೆ ನೀಡಿ ಬರಿಗಾಲಿನಲ್ಲಿ ಮನೆಗೆ ನಡೆದು ಬಂದಿರುವ ನೆನಪು ಇನ್ನೂ ಇದೆ. ಆಗಲೇ ಕರುಣೆ ಮತ್ತು ಹಂಚಿಕೊಳ್ಳುವ ಬಗ್ಗೆ ನಿಜವಾದ ಅರ್ಥ ಅವರಿಗೆ ಅರಿವಾಗಿತ್ತು.
ಭಾರತಕ್ಕೆ ಬರುವ ಮೊದಲು ಸಾಂಡ್ರಾ ಲಾವಿ ಕಾರ್ಪೋರೇಟ್ ಜಗತ್ತಿನಲ್ಲಿ ದೊಡ್ಡ ಹೆಸರಾಗಿದ್ದರು. ಮೊದಲಿಗೆ ಸ್ವಿಟ್ಜರ್ಲೆಂಡ್ನಲ್ಲಿ ಮತ್ತು ನಂತರ ದುಬೈನಲ್ಲಿ ಕೆಲಸ ಮಾಡಿದ್ದರು. ವೃತ್ತಿಪರ ಯಶಸ್ಸು, ಹಣಕಾಸಿನ ಸ್ಥಿರತೆ ಮತ್ತು ಜಗತ್ತನ್ನು ಸುತ್ತುವ ಸ್ವಾತಂತ್ರ್ಯ ಎಲ್ಲವೂ ಅವರ ಬಳಿ ಇತ್ತು. ಆದರೆ ಪ್ರತಿ ಪ್ರವಾಸವೂ ಅವರಲ್ಲಿ ಉತ್ತರವಿಲ್ಲದ ಪ್ರಶ್ನೆಗಳನ್ನು ಮೂಡಿಸುತ್ತಿತ್ತು. ಹೆಚ್ಚು ಪ್ರಯಾಣ ಮಾಡಿದಷ್ಟು ಜಗತ್ತಿನ ಅಸಮಾನತೆಗಳತ್ತ ಹೆಚ್ಚು ಪ್ರಶ್ನೆಗಳು ಎದ್ದವು. ಇತರರ ಬಳಿ ಅತಿ ಕಡಿಮೆ ಸಂಪನ್ಮೂಲ ಇರುವಾಗ ತನ್ನ ಬಳಿ ಏಕೆ ಹೆಚ್ಚಿದೆ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಪ್ರಶ್ನೆ ಅವರ ಜೀವನವನ್ನು ಬದಲಿಸುವವರೆಗೂ ಹಾಗೆಯೇ ಇತ್ತು.
“ವೃತ್ತಿಪರ ಯಶಸ್ಸು ನನಗೆ ಸಂತುಷ್ಟ ಜೀವನ ನೀಡಿತ್ತು. ಆದರೆ ಉದ್ದೇಶವಲ್ಲ. ನನ್ನನ್ನು ಮೀರಿದ ಕೊಡುಗೆಯನ್ನು ನನ್ನ ಜೀವನ ನೀಡಬೇಕು ಎಂದು ನಾನು ಬಯಸಿದ್ದೆ” ಎಂದು ಅವರು ಅಭಿಪ್ರಾಯಪಡುತ್ತಾರೆ.
ಹೀಗೆ ವೃತ್ತಿಯನ್ನು ತೊರೆದ ಅವರು ಎರಡು ಶರ್ಟ್ ಗಳು ಮತ್ತು ಎರಡು ಪ್ಯಾಂಟ್ ಗಳನ್ನು ಬ್ಯಾಗಿಗೆ ತುಂಬಿಕೊಂಡು ಒನ್ ವೇ ಟಿಕೆಟ್ ಮಾಡಿಕೊಂಡು ಭಾರತಕ್ಕೆ ಬಂದಿಳಿದಿದ್ದರು. ಆಗಲೇ ಅವರಿಗೆ ಮೊದಲ ಬಾರಿಗೆ ಬಂಧನಗಳಿಂದ ಬಿಡಿಸಿಕೊಂಡು ಸ್ವತಂತ್ರವಾದ ಅನುಭವವಾಗಿತ್ತು. “ಅತಿ ಕಡಿಮೆ ಇದ್ದರೂ ಹೆಚ್ಚು ಶ್ರೀಮಂತಿಕೆ ಇರುವ ಅನುಭವವಾಯಿತು” ಎನ್ನುತ್ತಾರೆ.
ಭಾರತಕ್ಕೆ ಬಂದಿಳಿದ ಆರಂಭದ ದಿನಗಳು ಅನಿಶ್ಚಿತತೆಯಲ್ಲಿ ಕಳೆಯಿತು. ವಿಮಾನ ನಿಲ್ದಾಣದಲ್ಲಿ ವಂಚಕರ ಬಲೆಗೆ ಬಿದ್ದಿರುವಂತಹ ಆಘಾತಗಳನ್ನು ಎದುರಿಸಿದರೂ ಅನಿಶ್ಚಿತತೆಯ ನಡುವೆಯೂ ಜನರ ಔದಾರ್ಯವನ್ನೂ ಕಂಡರು. “ನಾನು ಏನು ಮಾಡಿದೆ ಎಂದು ಆಶ್ಚರ್ಯಪಟ್ಟ ಕ್ಷಣಗಳೂ ಇದ್ದವು” ಎಂದು ಅವರು ಹೇಳುತ್ತಾರೆ.
“ಆದರೆ ಸಂಪೂರ್ಣ ಅಪರಿಚಿತರು ಮನೆಗೆ ಆಹ್ವಾನಿಸಿದರು. ಊಟಗಳನ್ನು ಹಂಚಿಕೊಂಡರು. ಕುಟುಂಬದಂತೆ ನಡೆಸಿಕೊಂಡರು. ಕಾಲಾನಂತರದಲ್ಲಿ ಭಾರತ ನನಗೆ ಭೇಟಿ ನೀಡುವ ದೇಶ ಎಂಬ ಭಾವನೆ ಮಾಯವಾಗಿ, ಮನೆಯಾಯಿತು. ಸನಾತನ ಧರ್ಮದ ಸಿದ್ಧಾಂತಗಳಿಂದ ಆಳವಾಗಿ ಪ್ರಭಾವಿತಳಾದೆ. ನಿಸ್ವಾರ್ಥ ಸೇವೆ ಮತ್ತು ಕರ್ತವ್ಯಕ್ಕೆ ಒತ್ತು ನೀಡುವುದರಿಂದ ನನ್ನ ಜೀವನದ ತಿಳುವಳಿಕೆಗೆ ಹೊಸ ರೂಪ ಬಂತು” ಎಂದು ಅವರು ಅಭಿಪ್ರಾಯಪಡುತ್ತಾರೆ.
ಇಂದಿಗೂ ಅದು ನನ್ನ ಜೀವನವನ್ನು ರೂಪಿಸುತ್ತಲೇ ಇದೆ. ಲಾವಿ ಆರಂಭದಲ್ಲಿ ತಮ್ಮ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡುವ ಉದ್ದೇಶ ಹೊಂದಿದ್ದರು. ಅನೇಕ ಎನ್ಜಿಒಗಳೊಂದಿಗೆ ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಎಲ್ಲೆಡೆ ಅಗತ್ಯವಿರುವ ಜನರಿದ್ದರು. ಎಲ್ಲಿಂದ ಪ್ರಾರಂಭಿಸಬೇಕು ಎನ್ನುವ ಪ್ರಶ್ನೆ ಇತ್ತು.
ಅಂಗವಿಕಲ ಮಕ್ಕಳ ಬಟ್ಟೆ ಒಗೆದರು. ತಳಮಟ್ಟದ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಿಂಗಳುಗಳನ್ನು ಕಳೆದರು. ಆರಂಭದಲ್ಲಿ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಆರ್ಥಿಕವಾಗಿ ಬೆಂಬಲಿಸುವ ಉದ್ದೇಶವಿತ್ತು. ಆದರೆ ಹಣಕಾಸು ದುರುಪಯೋಗ ಮತ್ತು ಸಮುದಾಯಗಳ ನಿಜ ಅಗತ್ಯಗಳನ್ನು ಪರಿಹರಿಸದ ಯೋಜನೆಗಳನ್ನು ಕಂಡ ಬಳಿಕ ಅವರ ನಿರ್ಧಾರ ಬದಲಾಯಿತು. “ಶಾಶ್ವತ ಪರಿಣಾಮ ಸೃಷ್ಟಿಸಬೇಕೆಂದರೆ ಪಾರದರ್ಶಕ, ಸುಸ್ಥಿರ ಮತ್ತು ಸಮುದಾಯ-ನೇತೃತ್ವದ ಏನನ್ನಾದರೂ ನಿರ್ಮಿಸಬೇಕು ಎಂದು ಅವರಿಗೆ ಮನವರಿಕೆಯಾಯಿತು.”
ನಿರ್ಧಾರದ ನಂತರ ಸ್ಥಳೀಯರನ್ನು ಗ್ರಾಮೀಣ ಪ್ರದೇಶಗಳು, ಹಳ್ಳಿಗಳಿಗೆ ಕೊಂಡೊಯ್ಯುವಂತೆ ಹೇಳುತ್ತಿದ್ದರು. ಬಡತನದ ಮೂಲ ಹಳ್ಳಿಗಳಲ್ಲಿದೆ ಎಂಬುದು ಅವರಿಗೆ ತಿಳಿದಿತ್ತು. ಜನರು ಹಳ್ಳಿಗಳಲ್ಲಿ ಸೌಲಭ್ಯವಿಲ್ಲದೆ ನಗರಕ್ಕೆ ಬಂದು ಕೊಳೆಗೇರಿಗಳಲ್ಲಿ ಬದುಕುತ್ತಿರುವುದನ್ನು ಕಂಡುಕೊಂಡಿದ್ದರು. ಸುಸ್ಥಿರ ಬದಲಾವಣೆ ತರಬೇಕೆಂದರೆ ಜೀವನ ಆರಂಭವಾಗುವಲ್ಲೇ ಹೂಡಿಕೆ ಮಾಡಬೇಕು ಎಂದು ಬಯಸಿದರು.
ಅವರ ಹುಡುಕಾಟ ಅಂತಿಮವಾಗಿ ಎರಡೂವರೆ ಗಂಟೆಗಳ ರೈಲು ಪ್ರಯಾಣ ಮತ್ತು ನಂತರ ಒಂದು ಗಂಟೆಯ ದೋಣಿ ಪ್ರಯಾಣದ ಬಳಿಕ ಸಿಗುವ ದ್ವೀಪಕ್ಕೆ ಒಯ್ಯಿತು. ಅಲ್ಲಿ ಕೆಲವು ದಿನಗಳನ್ನು ಕಳೆದರು. ಸಿದ್ಧ ಪರಿಹಾರದ ಬದಲು ಪ್ರಶ್ನೆಗಳೊಂದಿಗೆ ಬಂದರು. ಹೀಗೆ 15 ವರ್ಷಗಳ ಹಿಂದೆ ಸ್ಥಾಪಿಸಿದ ಶಾಲೆಗೆ ಅಡಿಪಾಯ ಬಿತ್ತು.
ವಿದೇಶಿ ಮಹಿಳೆಯನ್ನು ಹಳ್ಳಿಯ ಸಮುದಾಯವು ಬೇಗನೇ ಸ್ವೀಕರಿಸಲಿಲ್ಲ. ಮನವೊಲಿಸಲು ಬಹಳ ಪ್ರಯತ್ನಿಸಿದರು. ಹೆತ್ತವರ ಜೊತೆಗೆ ಕೆಲಸ ಮಾಡಿ ಕುಟುಂಬದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದ ಮಕ್ಕಳನ್ನು ಶಾಲೆಗೆ ಬರುವಂತೆ ಒತ್ತಾಯಿಸುವುದು ಸರಳವಾಗಿರಲಿಲ್ಲ. ಆದರೆ ಸ್ಥಳೀಯ ತಂಡದ ಸಹಾಯದಿಂದ ಮನೆಮನೆಗೆ ಹೋಗಿ ಪೋಷಕರಿಗೆ ಶಿಕ್ಷಣದ ಮೌಲ್ಯದ ಬಗ್ಗೆ ಮಾತನಾಡುತ್ತಾ ತಿಂಗಳುಗಳನ್ನೇ ಕಳೆದರು. ಮಕ್ಕಳು ದಾಖಲಾದ ಮೇಲೂ ನಿಯಮಿತವಾಗಿ ಹಾಜರಾಗಬೇಕೆಂದರೆ ಬೆಳಿಗ್ಗೆ ಮನೆಗಳಿಗೆ ಭೇಟಿ ನೀಡಿ ಪೋಷಕರನ್ನು ಮನವೊಲಿಸಬೇಕಿತ್ತು. ಆದರೆ ನಿಧಾನವಾಗಿ ಎಲ್ಲವೂ ಬದಲಾಯಿತು. ಶಾಲೆ ತಾತ್ಕಾಲಿಕ ಯೋಜನೆಯಲ್ಲ ಎನ್ನುವುದು ಪೋಷಕರಿಗೆ ಅರಿವಾಯಿತು. ಅವರ ಮಕ್ಕಳು ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಉತ್ತಮ ಆರೈಕೆ ಪಡೆದರು. ಹೀಗಾಗಿ ಸಮುದಾಯ ಅವರನ್ನು ಸ್ವೀಕರಿಸಿತು. “ನಂಬಿಕೆ ಆಶ್ವಾಸನೆಗಳಿಂದ ಬರುವುದಿಲ್ಲ. ನಿರಂತರ ಪ್ರಯತ್ನದಿಂದ ಬೆಳೆಯುತ್ತದೆ” ಎನ್ನುತ್ತಾರೆ ಸಾಂಡ್ರಾ.
“ಸ್ವಿಟ್ಜರ್ಲೆಂಡ್ ನಲ್ಲಿ ಶಿಸ್ತು ಮತ್ತು ಸಂಘಟನೆ ಕಲಿತರೆ ಭಾರತ ನನ್ನನ್ನು ವ್ಯಕ್ತಿಯಾಗಿ ಬದಲಿಸಿತು” ಎನ್ನುತ್ತಾರೆ. “5 ಗಂಟೆಗೆ ಆರಂಭವಾಗುವ ದಿನದಲ್ಲಿ ಎಲ್ಲವೂ ತಕ್ಷಣ ಆಗುವುದಿಲ್ಲ. ಇಲ್ಲಿ ನಿಧಾನಗತಿಯ ಜೀವನ ಸಾಗುತ್ತದೆ. ನಡುವೆ ಚಹಾ ವಿರಾಮಗಳು, ಊಟಗಳು ಮತ್ತು ನಿಧಾನ ಆರಂಭದಲ್ಲಿ ಹತಾಶೆ ತಂದಿತ್ತು. ಹಿನ್ನಡೆಗಳು ಅಗಾಧವಾಗಿ ಅನಿಸಿದ ಸಂದರ್ಭಗಳೂ ಇದ್ದವು. ಈ ಕೆಲಸಕ್ಕೆ ಸರಿಯಾದ ವ್ಯಕ್ತಿಯೇ ಎಂದು ಸ್ವತಃ ಕೇಳಿಕೊಂಡಿದ್ದೆ. ಆದರೆ ಇದೀಗ ಹಿಂತಿರುಗಿ ನೋಡಿದಾಗ ಆ ದಿನಗಳು ಅತ್ಯುತ್ತಮ ಪಾಠಗಳಾಗಿವೆ” ಎನ್ನುತ್ತಾರೆ ಸಾಂಡ್ರಾ.
“ಭಾರತ ನನಗೆ ತಾಳ್ಮೆ, ದೃಢತೆ, ಸ್ವೀಕಾರ ಮತ್ತು ಎಲ್ಲವನ್ನೂ ನಿಯಂತ್ರಿಸುವ ಅಗತ್ಯವನ್ನು ಬಿಟ್ಟುಬಿಡುವ ಸಾಮರ್ಥ್ಯವನ್ನು ಕಲಿಸಿತು. ಅರ್ಥಪೂರ್ಣ ಬದಲಾವಣೆಗೆ ಸಮಯ ಬೇಕಾಗುತ್ತದೆ. ನಂಬಿಕೆ, ಸಂಬಂಧ ಅಥವಾ ಸಮುದಾಯ ಅಭಿವೃದ್ಧಿಯಲ್ಲಿ ಆತುರತೆ ಇರಬಾರದು” ಎನ್ನುತ್ತಾರೆ.
15 ವರ್ಷಗಳ ನಂತರ ಅವರ ಶಾಲೆಯು ಶೈಕ್ಷಣಿಕ ಪ್ರಭಾವವನ್ನು ಮೀರಿ ಬೆಳೆದಿದೆ. ಮಕ್ಕಳಲ್ಲಿ ಮಾತ್ರವಲ್ಲ, ಸಮುದಾಯದಲ್ಲಿಯೂ ಬದಲಾವಣೆ ತಂದಿದೆ. ಬಾಲ್ಯವಿವಾಹ, ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ಹಿಂಸೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧ್ಯಾಪಕರ ಮೇಲೆ ಅವಲಂಬಿಸುವ ಬದಲು ವಿದ್ಯಾರ್ಥಿಗಳೇ ಶಿಕ್ಷಕರಾಗುತ್ತಿದ್ದಾರೆ. ತಮ್ಮದೇ ಸಮುದಾಯಕ್ಕೆ ತಿಳಿ ಹೇಳುತ್ತಿದ್ದಾರೆ.
“ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ವಯಸ್ಸಿಗೆ ಸೂಕ್ತವಾದ ರೀತಿಯಲ್ಲಿ ಶಿಕ್ಷಣ ನೀಡುತ್ತೇವೆ ಮತ್ತು ಮುಕ್ತ ಚರ್ಚೆಯನ್ನು ಪ್ರೋತ್ಸಾಹಿಸುತ್ತೇವೆ” ಎನ್ನುತ್ತಾರೆ.
ಹೀಗಾಗಿ ಫಲಿತಾಂಶವು ನಿರೀಕ್ಷೆಗಳನ್ನು ಮೀರಿದೆ. 100ಕ್ಕೂ ಹೆಚ್ಚು ಯುವ ನಾಯಕರಿಗೆ ತರಬೇತಿ ನೀಡಲಾಗಿದೆ. ಕಾರ್ಯಾಗಾರಗಳು, ಜಾಗೃತಿ ಅಭಿಯಾನಗಳ ಮೂಲಕ 30 ಹಳ್ಳಿಗಳಲ್ಲಿ 2,000 ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರನ್ನು ಯೋಜನೆ ತಲುಪಿದೆ.






