2.5 ಲಕ್ಷ ರೂ. ಬೆಲೆ, ಭಾರತದಲ್ಲಿ ಜಪಾನಿನ Miyazaki ಮಾವಿನ ಕ್ರೇಝ್ ಹುಟ್ಟಿದ್ದು ಹೇಗೆ?

Photo Credit : theprint.in
ಮಾವಿನ ಹಣ್ಣುಗಳ ಋತುವಿನಲ್ಲಿ ಇನ್ನುಳಿದ ಮಾವಿನಹಣ್ಣುಗಳಿಗಿಂತ ಭಿನ್ನವಾಗಿ, ಮಿಯಾಝಾಕಿ (Miyazaki) ಹಣ್ಣು ಮಾತ್ರ ಎಲ್ಲರ ಗಮನ ಸೆಳೆಯುತ್ತದೆ. ಜಪಾನ್ ನ ಅತ್ಯಂತ ಪ್ರಸಿದ್ಧ ಹಾಗೂ ಬಹುಬೇಡಿಕೆಯ ಈ ಮಾವಿನಹಣ್ಣು ತನ್ನ ಆಕರ್ಷಕ ಕಡು ಕೆಂಪು ಬಣ್ಣದಿಂದ ದಸೇರಿ, ಸಫೇದಾ, ಕೇಸರ್, ಮಲ್ಲಿಕಾ ಮುಂತಾದ ತಳಿಗಳನ್ನು ಹಿಂದಿಕ್ಕಿದೆ. ಪ್ರತಿ ಮಾವಿನ ಸೀಸನ್ ನಲ್ಲೂ ಈ ಮಾವಿನ ಹಣ್ಣು "ಕೆಜಿಗೆ 2.5 ಲಕ್ಷ ರೂಪಾಯಿ" ಬೆಲೆಗೆ ಮಾರಾಟವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳು ಹೇಳುತ್ತಿವೆ. ಜಪಾನ್ ನಲ್ಲಿ ಹುಟ್ಟಿದ ಈ ಕ್ರೇಝ್ ಜಬಲ್ ಪುರದಲ್ಲೂ ಹರಡಿದ್ದು, ಮಾವು ಬೆಳೆಗಾರರಿಗೆ ಇದೀಗ ಒಂದು ಹೆಮ್ಮೆಯ ವಿಷಯವಾಗಿದೆ. ಇದು ಎಲ್ಲ ಮಾವಿನ ಮಾರುಕಟ್ಟೆಗಳಲ್ಲಿ ಸಿಗದಿದ್ದರೂ, ಸಾಮಾಜಿಕ ಜಾಲತಾಣಗಳ ವೈರಲ್ ರೀಲ್ಸ್ ಮತ್ತು ಸ್ಟೋರಿಗಳ ಮೂಲಕ ಬಾಯಲ್ಲಿ ನೀರೂರಿಸುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಈ ವಾರ ರೈತರೊಬ್ಬರು ಅಯೋಧ್ಯೆಯ ರಾಮ್ ಲಲ್ಲಾಗೆ "ವಿಶ್ವದ ಅತ್ಯಂತ ದುಬಾರಿ" ಮಾವಿನಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಿರುವುದು.
ಭಾರತದ ಪ್ರೀಮಿಯಂ ತಳಿಗಳಾದ ಉದಾಹರಣೆಗೆ ಆಲ್ಫಾನ್ಸೋ (ಹಾಪೂಸ್) ಕೆಜಿಗೆ 200–500 ರೂಪಾಯಿಗೆ ಮಾರಾಟವಾದರೆ, ಮಿಯಾಝಾಕಿ ಮಾತ್ರ ಅತ್ಯಂತ ಐಷಾರಾಮಿ ಮಾವಿನಹಣ್ಣಾಗಿದೆ. ಇದು ಅಪರೂಪದ ಮಾವು. ಹೀಗಿರುವಾಗ ಬ್ರ್ಯಾಂಡಿಂಗ್ ಮತ್ತು ಅದನ್ನು ಉಡುಗೊರೆ ನೀಡುವ ಸಂಸ್ಕೃತಿಯೇ ಇದಕ್ಕೆ ಇಷ್ಟೊಂದು ಬೇಡಿಕೆ ಬರಲು ಕಾರಣ. ಇಲ್ಲಿ ವ್ಯಂಗ್ಯವೆಂದರೆ, ಜಪಾನ್ ದೇಶವು ಭಾರತದ ಮಾವಿನಹಣ್ಣುಗಳನ್ನು ನಿಷೇಧಿಸಿದೆ; ಆದರೆ ಭಾರತೀಯ ಬೆಳೆಗಾರರು ಮಾತ್ರ ಜಪಾನಿನ ಈ ಗಿಡಗಳನ್ನು ಬೆಳೆಸಲು ಉತ್ಸುಕರಾಗಿದ್ದಾರೆ.
ಮಿಯಾಝಾಕಿ ಮಾವು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವ ಹೊತ್ತಲ್ಲಿ, ಈ ಮಾವು ಭಾರತಕ್ಕೆ ಬಂದಿದ್ದು ಹೇಗೆ? ಇತರ ಮಾವುಗಳ ನಡುವೆ ಇದು ರಾಜಮರ್ಯಾದೆ ಗಳಿಸುತ್ತಿರುವುದು ಹೇಗೆ? ಎಂಬುದರ ಬಗ್ಗೆ the print ವರದಿಯೊಂದನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ, ಐದು ವರ್ಷಗಳ ಹಿಂದೆ ಜಬಲ್ಪುರದ ರೈತ ಸಂಕಲ್ಪ್ ಸಿಂಗ್ ಪರಿಹಾರ್ ಅವರು 'ತೈಯೋ ನೋ ತಮಾಗೋ' ಅಥವಾ "ಸೂರ್ಯನ ಮೊಟ್ಟೆ" ಎಂದು ಕರೆಯಲಾಗುವ ಜಪಾನಿನ ಈ ಮಾವಿನ ತಳಿಯನ್ನು ಬೆಳೆದು ಸುದ್ದಿಯಾದಾಗ ಈ ಹಣ್ಣಿನ ಮೇಲಿನ ಕ್ರೇಝ್ ಆರಂಭವಾಯಿತು.
"ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಝಾಕಿ ಹಣ್ಣಿಗೆ ಸಿಗುವ ಭಾರಿ ಬೆಲೆಯಿಂದಾಗಿ ಜನರು ಇದನ್ನು ಗುರುತಿಸುತ್ತಾರೆ. ಆದರೆ ನನ್ನ ಪಾಲಿಗೆ, ಇದರ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅದರ ಬೆಲೆಯಲ್ಲ, ಬದಲಿಗೆ ಅದರ ರುಚಿ. ಇದು ಅತ್ಯಂತ ಸಿಹಿಯಾದ ಮತ್ತು ಅತ್ಯದ್ಭುತ ರುಚಿಯಿರುವ ಮಾವಿನಹಣ್ಣು. ನಿಜ ಹೇಳಬೇಕೆಂದರೆ, ಈ ಹಣ್ಣು ನೋಡಲು ಎಷ್ಟು ಆಕರ್ಷಕವಾಗಿದೆ ಎಂದರೆ ಅದರ ಸಿಪ್ಪೆಯನ್ನೂ ಸೇರಿಸಿ ತಿನ್ನಬೇಕು ಎನಿಸುತ್ತದೆ" ಅಂತಾರೆ ಪರಿಹಾರ್. ಇವರು ಜಬಲ್ಪುರ ಜಿಲ್ಲೆಯ ಚಾರ್ಗಾವನ್ ಪಟ್ಟಣದ ಸಮೀಪವಿರುವ ತಮ್ಮ 15 ಎಕರೆ ತೋಟದಲ್ಲಿ ಭಾರತೀಯ ಹಾಗೂ ವಿದೇಶಿ ತಳಿಗಳ ಹಲವು ಬಗೆಯ ಮಾವಿನಹಣ್ಣುಗಳನ್ನು ಬೆಳೆಯುತ್ತಾರೆ.
ಅವರ ತೋಟದಲ್ಲಿನ ಐದು ಮಿಯಾಝಾಕಿ ಮರಗಳು ಭರಪೂರ ಇಳುವರಿ ನೀಡುತ್ತಿದ್ದರೂ, ಅವರಿಗೆ ಎಂದಿಗೂ ಕೆಜಿಗೆ 2.5 ಲಕ್ಷ ರೂಪಾಯಿ ಸಿಕ್ಕಿಲ್ಲ. ಅವರು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಇದನ್ನು ಕೆಜಿಗೆ 15,000 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಇದು ಸಾಮಾನ್ಯ ಹಣ್ಣುಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿ.
ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬೆಲೆಯ ಬಗ್ಗೆ ದೊಡ್ಡ ಮಟ್ಟದ ವದಂತಿಗಳು ಹರಡುತ್ತಿರುವುದರಿಂದ, ದಿಲ್ಲಿಯ ಆಜಾದ್ಪುರ ಮಂಡಿಯ ಸಗಟು ವ್ಯಾಪಾರಿಗಳಿಂದ ಹಿಡಿದು ಡ್ರ್ಯಾಗನ್ ಫ್ರೂಟ್ ಅಥವಾ ಪರ್ಸಿಮನ್ ನಂತಹ ವಿದೇಶಿ ಹಣ್ಣುಗಳನ್ನು ಇಷ್ಟಪಡುವ ಗ್ರಾಹಕರವರೆಗೆ ಎಲ್ಲರೂ, "ಇದರಲ್ಲಿ ಅಷ್ಟೊಂದು ವಿಶೇಷತೆ ಏನಿದೆ?" ಎಂದು ಪ್ರಶ್ನಿಸುವಂತಾಗಿದೆ. ಹಲವು ಬೆಳೆಗಾರರು ಇದರ ರುಚಿಯನ್ನು ಕೊಂಡಾಡುತ್ತಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದರ ರುಚಿ ತಮಗೆ ಅಷ್ಟಾಗಿ ಇಷ್ಟವಾಗಲಿಲ್ಲ, ಅದರಲ್ಲೂ ಹಿಮ್ಸಾಗರ್ ಅಥವಾ ಚೌಸಾ ತಳಿಗಳಿಗೆ ಹೋಲಿಸಿದರೆ ಇದು ಅಷ್ಟೇನೂ ವಿಶೇಷವಾಗಿಲ್ಲ ಎಂದು ಕಮೆಂಟ್ ಮಾಡುವವರಿಂದ ತುಂಬಿಹೋಗಿದೆ. ಆದರೆ ಇದನ್ನು ಕೇವಲ ರುಚಿಗಾಗಿ ಖರೀದಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ಪ್ರತಿಷ್ಠೆ ಮತ್ತು ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳಲು ಕೊಳ್ಳಲಾಗುತ್ತದೆ. ಈ ಮಾವಿನಹಣ್ಣುಗಳನ್ನು ಹೆಚ್ಚಾಗಿ ಜೋಡಿಯಾಗಿ, ಫೋಮ್ ಕವರ್ ಗಳು ಮತ್ತು ಟಿಶ್ಯೂ ಪೇಪರ್ಗಳ ನಡುವೆ ಅಚ್ಚುಕಟ್ಟಾಗಿ ಜೋಡಿಸಿ ಗಿಫ್ಟ್ ಬಾಕ್ಸ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಆದರೆ, ಕೆಲವು ಬೆಳೆಗಾರರು ಈ ಮಾವಿನಹಣ್ಣು ಮತ್ತು ಇದರ ಮಾರುಕಟ್ಟೆ ಎರಡರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಾರೆ.
"ಜನರು ಸಾಮಾನ್ಯ ಹಣ್ಣುಗಳನ್ನು ಖರೀದಿಸಲು ಪರದಾಡುತ್ತಿರುವಾಗ, ಲಕ್ಷಾಂತರ ರೂಪಾಯಿ ಕೊಟ್ಟು ಮಾವಿನಹಣ್ಣನ್ನು ಯಾರು ಖರೀದಿಸುತ್ತಾರೆ?" ಎಂದು ಭಾರತೀಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಎಸ್. ಇನ್ಸ್ರಾಮ್ ಅಲಿ ಪ್ರಶ್ನಿಸಿದ್ದಾರೆ. ಈ ಮಾವಿನಹಣ್ಣು ಮಾರುಕಟ್ಟೆಯಲ್ಲಿ ನಿಮಗೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಭಾರತದ ಅನೇಕ ಬೆಳೆಗಾರರು ಕೇವಲ ಕುತೂಹಲ ಮತ್ತು ಹವ್ಯಾಸಕ್ಕಾಗಿ ಮಿಯಾಝಾಕಿ ಗಿಡಗಳನ್ನು ನೆಡುತ್ತಿದ್ದಾರೆಯೇ ಹೊರತು, ಇಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂದಲ್ಲ. ವಿಭಿನ್ನವಾದದ್ದನ್ನು ಬೆಳೆಸುವ ಹಂಬಲ ಅಷ್ಟೇ ಅವರಲ್ಲಿದೆ ಎಂದು ಹೇಳುತ್ತಾರೆ.
►ತೋಟದ ಕೋಹಿನೂರ್
ಜಬಲ್ಪುರದ ಚಾರ್ಗಾವನ್ ನಲ್ಲಿರುವ ಪರಿಹಾರ್ ಅವರ ತೋಟದಲ್ಲಿ ಜಪಾನಿನ ಮಾವಿನಹಣ್ಣುಗಳಿಗೆ ಝೆಡ್-ಪ್ಲಸ್ ಭದ್ರತೆ ಒದಗಿಸಲಾಗಿದೆ. 18 ಕಾವಲು ನಾಯಿಗಳು ಮತ್ತು 24 ಗಂಟೆಗಳ ಸಿಸಿಟಿವಿ ಕಣ್ಗಾವಲು ಇಲ್ಲಿದೆ. ಏಳು ವರ್ಷಗಳ ಹಿಂದೆ ಅವರು ಮಿಯಾಝಾಕಿ ಬೆಳೆಯಲು ಪ್ರಾರಂಭಿಸಿದಾಗ, ಈ ಹಣ್ಣಿನ ಮೌಲ್ಯದ ಬಗ್ಗೆ ಎಲ್ಲೆಡೆ ವೇಗವಾಗಿ ಸುದ್ದಿ ಹರಡಿತು.
"ಕೆಲವೊಮ್ಮೆ ಜನರು ಮಾವಿನಹಣ್ಣುಗಳನ್ನು ಕದಿಯುತ್ತಾರೆ, ಆದ್ದರಿಂದ ನಿಗಾ ಇಡಲು ಭದ್ರತೆಯ ಅಗತ್ಯವಿದೆ" ಅಂತಾರೆ ಪರಿಹಾರ್.
ಅವರು ಎರಡು ದಶಕಗಳ ಹಿಂದೆ ಸುಮಾರು 1,100 ಭಾರತೀಯ ಮಾವಿನ ಮರಗಳೊಂದಿಗೆ ಸಾಮಾನ್ಯ ವಾಣಿಜ್ಯ ತೋಟವಾಗಿ 'ಮಹಾ ಕಾಲ್ ಬಾಬಾ ಕಿ ಬಗಿಯಾ' ಹೆಸರಿನ ಈ ಫಾರ್ಮ್ ಅನ್ನು ಪ್ರಾರಂಭಿಸಿದರು.
"ನಾನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದೆ" ಎಂದು ಅವರು ಹೇಳಿದರು.
ಮಾರುಕಟ್ಟೆಗಳಲ್ಲಿ ಸರಿಯಾದ ಮಾರಾಟವಾಗದೆ ಪರದಾಡುತ್ತಿದ್ದ ಪರಿಹಾರ್, ಒಂದು ದಶಕದ ಹಿಂದೆ ತಮ್ಮ ತೋಟದ ಹೊರಗೇ ಕೌಂಟರ್ ಒಂದನ್ನು ತೆರೆದರು. ಮೊದಲ ದಿನ ಅವರು 25 ಕೆಜಿ ಮಾರಾಟ ಮಾಡಿದರು. ನಂತರ ಗ್ರಾಹಕರು ಒಬ್ಬರಿಂದೊಬ್ಬರು ತಿಳಿದು ಬರಲಾರಂಭಿಸಿದರು. ಬಳಿಕ ಅವರ ಕುಟುಂಬವು ಹೋಮ್ ಡೆಲಿವರಿ ಮತ್ತು ಜಬಲ್ಪುರ ನಗರದಲ್ಲಿ ಒಂದು ಕೌಂಟರ್ ಅನ್ನು ಪ್ರಾರಂಭಿಸಿತು. ಈ 'ನೇರ ಗ್ರಾಹಕ ಮಾರಾಟ' ಮಾದರಿಯು ಅಂತಿಮವಾಗಿ ಅವರ 'ಬ್ರ್ಯಾಂಡ್' ದಿಲ್ಲಿ ಮತ್ತು ಮುಂಬೈನ ಪ್ರೀಮಿಯಂ ಗ್ರಾಹಕರನ್ನು ತಲುಪಲು ಸಹಾಯ ಮಾಡಿತು.
ಇಂದು ಅವರ ತೋಟದಲ್ಲಿ 3,600 ಮರಗಳಿದ್ದು, 24 ಅಂತರರಾಷ್ಟ್ರೀಯ ಮತ್ತು ದೇಶೀಯ ತಳಿಗಳನ್ನು ಬೆಳೆಯಲಾಗುತ್ತಿದೆ. ಆರು ಕಡೆಯಿಂದ ಎಂಟು ಕಾರ್ಮಿಕರ ತಂಡದ ಬೆಂಬಲದೊಂದಿಗೆ, ಅವರ ತೋಟದ ಪ್ರತಿ ಮರ ಸರಾಸರಿ 100 ರಿಂದ 200 ಕೆಜಿ ಹಣ್ಣುಗಳನ್ನು ನೀಡುತ್ತದೆ. ವಾರ್ಷಿಕ ಇಳುವರಿ ಸುಮಾರು 400 ಟನ್ ಮಾವಿನಹಣ್ಣು!
ಕಳೆದ ವರ್ಷ ತೋಟದಿಂದ ತಮಗೆ ಸುಮಾರು 10 ಲಕ್ಷ ರೂಪಾಯಿ ಆದಾಯ ಬಂದಿತ್ತು. ಇದರಲ್ಲಿ ಸುಮಾರು 1.5 ಲಕ್ಷ ರೂಪಾಯಿ (ಶೇಕಡಾ 15ರಷ್ಟು) ವಿದೇಶಿ ತಳಿಗಳಿಂದ ಬಂದಿದೆ ಅಂತಾರೆ ಇವರು. ವಿಶೇಷವೆಂದರೆ ಪರಿಹಾರ್ ಅವರ ತೋಟದಲ್ಲಿರುವ ಒಟ್ಟು ಮಾವಿನ ಮರಗಳಲ್ಲಿ ಈ ವಿದೇಶಿ ತಳಿಗಳ ಪಾಲು ಕೇವಲ ಶೇಕಡಾ 5ಕ್ಕಿಂತ ಸ್ವಲ್ಪ ಹೆಚ್ಚಿದೆ.
ಜಬಲ್ಪುರದ ಸಣ್ಣ ಗುಡ್ಡಗಾಡು ಪ್ರದೇಶದಲ್ಲಿ ಹವಾಮಾನವು ವಿಚಿತ್ರವಾಗಿತ್ತು. ಒಂದು ಗಂಟೆ ಸುಡುವ ಬಿಸಿಲಿದ್ದರೆ, ಮುಂದಿನ ಗಂಟೆಯಲ್ಲೇ ಬಿರುಗಾಳಿ ಮತ್ತು ಮಳೆ ಬರುತ್ತಿತ್ತು. ಈ ವರ್ಷ ಹವಾಮಾನ ಬದಲಾವಣೆಯು ಮಾವಿನಹಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ. ನಮಗೆ ಇಳುವರಿ ಕಡಿಮೆಯಾಗಿದೆ ಎಂದು ಪರಿಹಾರ್ ಹೇಳಿದ್ದಾರೆ.
ಇವರ ತೋಟದಲ್ಲಿ ಕಣ್ಣು ಹಾಯಿಸಿದಷ್ಟೂ ಮಾವಿನಹಣ್ಣುಗಳೇ ಕಾಣಿಸುತ್ತವೆ. ಹಣ್ಣುಗಳ ಸಮೃದ್ಧಿ ಎಷ್ಟಿದೆಯೆಂದರೆ, ಕೆಲಸಗಾರರು ಆರ್ಡರ್ಗಳನ್ನು ಪ್ಯಾಕ್ ಮಾಡುವಾಗ ಮಾವಿನಹಣ್ಣುಗಳನ್ನು ಸವಿಯುತ್ತಿರುತ್ತಾರೆ. ಅವರ ಮುಂದೆ ನಿಂತಿರುವ ಪರಿಹಾರ್, ಯಾವ ತಳಿಯನ್ನು ಎಲ್ಲಿ ಇಡಬೇಕು ಎಂದು ಸೂಚನೆಗಳನ್ನು ನೀಡುತ್ತಿರುತ್ತಾರೆ.
"ದಸೇರಿ ಸೆಮಿ-ರೈಪ್ ಉಸ್ಮೇ ರಖ್ ದೋ (ದಸೇರಿಯ ಅರೆ-ಪಕ್ವ ಹಣ್ಣುಗಳನ್ನು ಅದರಲ್ಲಿ ಇಡು)" ಎಂದು ಅವರು ಟ್ರೇ ಕಡೆಗೆ ಬೆರಳು ತೋರಿಸುತ್ತಾ ಕೆಲಸದವರಿಗೆ ಹೇಳಿದರು.
ಹಸಿರು ಮತ್ತು ಹಳದಿ ಹಣ್ಣುಗಳ ಆ ರಾಶಿಯ ಮಧ್ಯೆ, ಎರಡು ಹಣ್ಣುಗಳು ತಕ್ಷಣವೇ ಗಮನ ಸೆಳೆಯುತ್ತಿದ್ದವು. ಅವು ಪ್ರತ್ಯೇಕ ಗುಲಾಬಿ ಬಣ್ಣದ ಟ್ರೇನಲ್ಲಿ ಇರಿಸಲಾಗಿದ್ದ ಎರಡು ಮಿಯಾಝಾಕಿ ಮಾವಿನಹಣ್ಣುಗಳಾಗಿದ್ದವು.
"ಇದು ಈ ಸೀಸನ್ ನ ಮೊದಲ ಮಿಯಾಝಾಕಿ. ಬಲವಾದ ಗಾಳಿಗೆ ಇದು ಕೆಳಗೆ ಬಿದ್ದಿತು. ಈ ಮಾವಿನಹಣ್ಣುಗಳನ್ನು ತಿನ್ನಲು ಅಥವಾ ಮಾರಾಟ ಮಾಡಲು ಬಳಸುತ್ತಿಲ್ಲ. ಇವುಗಳನ್ನು ಶೀಘ್ರದಲ್ಲೇ ಭೋಪಾಲ್ ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ" ಎಂದು ಪರಿಹಾರ್ ಮಾವಿನಹಣ್ಣುಗಳನ್ನು ತೋರಿಸುತ್ತಾ ಹೇಳಿದರು.
ಮಿಯಾಝಾಕಿ ಮೇಲಿನ ಕ್ರೇಝ್ ಆರಂಭವಾಗಿದ್ದು ಹೇಗೆ?
ಅದರ ಬಗ್ಗೆ ಹೀಗಂತಾರೆ ಪರಿಹಾರ್... ತೆಂಗಿನ ಸಸಿಗಳನ್ನು ಖರೀದಿಸಲು ರೈಲಿನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿಯ ಪರಿಚಯವಾಯಿತು (ಅವರ ಹೆಸರು ಈಗ ನೆನಪಿಲ್ಲ). ಆ ಅಪರಿಚಿತ ವ್ಯಕ್ತಿಯೇ ನನಗೆ ಜಪಾನ್ ನ ಈ ಐತಿಹಾಸಿಕ ತಳಿಯನ್ನು ಪರಿಚಯಿಸಿದ್ದು.
"ದುನಿಯಾ ಕಾ ಸಬ್ಸೇ ಬಡಾ ಆಮ್, ಸಬ್ಸೇ ಮೆಹಂಗಾ ಆಮ್ ಹೈ ಯೇ (ಇದು ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ದುಬಾರಿ ಮಾವಿನಹಣ್ಣು)" ಎಂದು ಅವರು ನನ್ನಲ್ಲಿ ಹೇಳಿದರು.
ಸ್ವತಃ ಮಾವಿನಹಣ್ಣಿನ ಹುಚ್ಚು ಹಚ್ಚಿಕೊಂಡಿದ್ದ ಪರಿಹಾರ್ ತಕ್ಷಣವೇ ಅದಕ್ಕೆ ಮಾರುಹೋದರು. ಅವರು ತಮ್ಮ ಪ್ರಯಾಣದ ಹಾದಿಯನ್ನು ಕೊಂಚ ಬದಲಾಯಿಸಿ (ಆ ನಿಖರವಾದ ಸ್ಥಳ ಯಾವುದು ಎಂಬುದು ಈಗ ಅವರಿಗೆ ಸರಿಯಾಗಿ ನೆನಪಿಲ್ಲ), ತಲಾ 2,500 ರೂಪಾಯಿ ನೀಡಿ ಹತ್ತು ಮಿಯಾಝಾಕಿ ಸಸಿಗಳನ್ನು ಖರೀದಿಸಿದರು. ಆರಂಭದಲ್ಲಿ ನೆಟ್ಟ ಸಸಿಗಳಲ್ಲಿ ಕೇವಲ ಮೂರು ಮಾತ್ರ ಬದುಕುಳಿದವು. ಆದರೂ ಬಂದ ಫಲಿತಾಂಶದಿಂದ ಅವರು ಖುಷಿಯಾಗಿದ್ದರು.
ಅವರು ತಮಿಳುನಾಡಿನಿಂದ ತಂದಿದ್ದ ತೆಂಗಿನ ಸಸಿಗಳು ಜಬಲ್ಪುರದ ಮಣ್ಣಿನಲ್ಲಿ ಸಂಪೂರ್ಣವಾಗಿ ಒಣಗಿಹೋದವು. ಆದರೆ ಜಪಾನಿನ ಸಸಿಗಳು ಮಾತ್ರ ಸಮೃದ್ಧವಾಗಿ ಬೆಳೆದವು. ಅಷ್ಟೇ ಅಲ್ಲದೆ, ಪರಿಹಾರ್ ಅವರ ಪ್ರಕಾರ, "ವರ್ಷದಿಂದ ವರ್ಷಕ್ಕೆ ಇವುಗಳ ಸಿಹಿ ಹೆಚ್ಚಾಗುತ್ತಾ ಹೋಯಿತು."
ಇಂದು ಅವರ ಬಳಿ ಐದು ಮಿಯಾಝಾಕಿ ಮರಗಳಿದ್ದು, ಪ್ರತಿಯೊಂದು ಮರವು ವಾರ್ಷಿಕವಾಗಿ 3–4 ಕೆಜಿ ಹಣ್ಣುಗಳನ್ನು ನೀಡುತ್ತದೆ. ಪ್ರಸ್ತುತ ಅಸಲಿ ಮಿಯಾಝಾಕಿ ಸಸಿಗಳ ಬೆಲೆ ಒಂದಕ್ಕೆ ಬರೋಬ್ಬರಿ 11,000 ರೂಪಾಯಿಗಳಷ್ಟಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಮಿಯಾಝಾಕಿ ಗಿಡಗಳಿವೆ. ಹಣ್ಣು ಸಂಪೂರ್ಣವಾಗಿ ಬಂದು ಕೈಗೆ ಸಿಗುವವರೆಗೂ ಅಸಲಿ-ನಕಲಿ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಂಬಾ ಕಷ್ಟ.
ಜಪಾನಿನ ಈ ಮಾವಿನಹಣ್ಣು ಬೇರೆಲ್ಲಾ ಹಣ್ಣುಗಳಂತೆಯೇ ಬೆಳೆಯುತ್ತದೆ. ಆದರೆ ಅದರ ಕೊನೆಯ ಹಂತದಲ್ಲಿ ಅದನ್ನು ಬಿಳಿ ಬಣ್ಣದ ನೆಟ್ (ಜಾಲರಿ) ಬಟ್ಟೆಯಿಂದ ಮುಚ್ಚಬೇಕಾಗುತ್ತದೆ. ಮಿಯಾಝಾಕಿ ಹಣ್ಣು ಸೂರ್ಯನ ಬೆಳಕಿಗೆ ತೆರೆದುಕೊಂಡಾಗ ತನ್ನ ಕಡು ಕೆಂಪು ಬಣ್ಣವನ್ನು ಪಡೆದುಕೊಳ್ಳುತ್ತದೆ. ಆದರೆ ಜಬಲ್ಪುರದ ಅತಿಯಾದ ಉಷ್ಣಾಂಶವನ್ನು ನಿಯಂತ್ರಿಸುವುದು ಇಲ್ಲಿ ಅನಿವಾರ್ಯವಾಗಿರುತ್ತದೆ ಎಂದು ಪರಿಹಾರ್ ಹೇಳಿದ್ದಾರೆ.
ಮಿಯಾಝಾಕಿ ಹಣ್ಣನ್ನು ಕತ್ತರಿಸಿ ನೋಡಿದರೆ, ಅದರ ಒಳಗಿನ ಭಾಗವು ಗಾಢ ಹಳದಿ-ಕಿತ್ತಳೆ ಬಣ್ಣದಲ್ಲಿದ್ದು, ನೋಡಲು ಥೇಟ್ ಆಲ್ಫಾನ್ಸೋ ಹಣ್ಣಿನಂತೆಯೇ ಇರುತ್ತದೆ. ಆದರೆ, ಇದು ತನ್ನ ಖ್ಯಾತಿಗೆ ತಕ್ಕ ಆ ರೇಂಜ್ನ ರುಚಿಯನ್ನು ಹೊಂದಿದೆಯೇ ಇಲ್ಲವೇ ಎಂಬುದು ಅದನ್ನು ತಿನ್ನುವವರ ನಾಲಿಗೆಗೆ ಬಿಟ್ಟಿದ್ದು. ಪರಿಹಾರ್ ಇದರ ರುಚಿಯನ್ನು ಮನಸಾರೆ ಹೊಗಳಿದರೆ, ಇತರರು ಮಾತ್ರ ಹಲವಾರು ಭಾರತೀಯ ತಳಿಗಳು ಇದಕ್ಕೆ ಸಮನಾಗಿವೆ ಅಥವಾ ಇದಕ್ಕಿಂತಲೂ ಉತ್ತಮವಾಗಿವೆ ಎಂದು ವಾದಿಸುತ್ತಾರೆ.
ಮಿಯಾಝಾಕಿ ಹಣ್ಣಿಗೆ "ಲಕ್ಷದ ಮಾವು" ಎಂಬ ಭಾರೀ ಪ್ರಚಾರ ಸಿಕ್ಕಿದ್ದರೂ, ಪರಿಹಾರ್ ಮಾತ್ರ ತಮ್ಮ ತೋಟದ ಇತರ ವಿದೇಶಿ ತಳಿಗಳಿಗಿಂತ ಇದನ್ನು ಭಿನ್ನವಾಗಿ ನೋಡುವುದಿಲ್ಲ. ಅವರ ಪಾಲಿಗೆ ಮಿಯಾಝಾಕಿ ಬೆಳೆಸುವುದು ಕೇವಲ ಕುತೂಹಲ ಮತ್ತು ಹವ್ಯಾಸದ ಭಾಗವಾಗಿತ್ತೇ ಹೊರತು ಪ್ರಚಾರಕ್ಕಾಗಿ ಅಲ್ಲ. ಅಪರೂಪದ ಮಾವಿನಹಣ್ಣುಗಳ ಮೇಲಿನ ಆಕರ್ಷಣೆಯಿಂದ ಅವರು ಅದನ್ನು ನೆಟ್ಟಿದ್ದರು. ಆದರೆ ಈ ಕೆಂಪು ಹಣ್ಣು ಎಂದಾದರೂ ಒಂದು ದಿನ ತಮ್ಮನ್ನು ಇಡೀ ದೇಶದಲ್ಲೇ ಚರ್ಚೆಯ ವಿಷಯವನ್ನಾಗಿ ಮಾಡುತ್ತದೆ ಎಂದು ಅವರು ಎಂದಿಗೂ ಊಹಿಸಿರಲಿಲ್ಲ.
ಕಳೆದ ಎರಡು ದಶಕಗಳಲ್ಲಿ ಅವರು ಈ ಹಣ್ಣಿನ ಸುತ್ತ ಒಂದು ಸಣ್ಣ ಉದ್ಯಮದ ವ್ಯವಸ್ಥೆಯನ್ನೇ ನಿರ್ಮಿಸಿದ್ದಾರೆ. ಅವರ ಪತ್ನಿ ಒಂದು ಸಾಧಾರಣ ರೆಸ್ಟೋರೆಂಟ್ ನಡೆಸುತ್ತಿದ್ದರೆ, ಹತ್ತಿರದ ಅಂಗಡಿಯೊಂದರಲ್ಲಿ ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಆಮ್ ಪಾಪಡ್ ಹಾಗೂ ಸೀಸನಲ್ ಮ್ಯಾಂಗೋ ಪಲ್ಪ್ ಸೇರಿದಂತೆ ಮಾವಿನಹಣ್ಣಿನ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕಿಡಲಾಗಿದೆ.
ವಿಶೇಷವಾಗಿ ಮಿಯಾಝಾಕಿ ಮಾವಿನಹಣ್ಣಿನ ಬಗ್ಗೆ ಮಾಧ್ಯಮಗಳಲ್ಲಿ ಬಂದ ಭರಪೂರ ವರದಿಗಳ ನಂತರ, ಈ ಫಾರ್ಮ್ ಸ್ಥಳೀಯವಾಗಿ ಒಂದು ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಬೇಸಿಗೆಯ ವಾರಾಂತ್ಯಗಳಲ್ಲಿ, ಕುಟುಂಬ ಸಮೇತರಾಗಿ ಜನರು ಇವರ ತೋಟದಲ್ಲಿ ಬೆಳೆಯುವ ಜಪಾನಿ ಮತ್ತು ಅಮೆರಿಕನ್ ತಳಿಯ ಮಾವಿನಹಣ್ಣುಗಳನ್ನು ನೋಡಲು ಬರುತ್ತಾರೆ. ಇಲ್ಲಿ ಯಾವುದೇ ಹಣ್ಣು ಸವಿಯುವ ಕಾರ್ಯಕ್ರಮಗಳಿಲ್ಲ ಮತ್ತು ತೋಟ ವೀಕ್ಷಣೆಗೆ ಪರಿಹಾರ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಾಗಿ ಅವರ ರೆಸ್ಟೋರೆಂಟ್ಗೆ ಭೇಟಿ ನೀಡುತ್ತಾರೆ ಅಥವಾ ಅವರ ಅಂಗಡಿಯಿಂದ ಪದಾರ್ಥಗಳನ್ನು ಖರೀದಿಸುತ್ತಾರೆ.
►ಸಾಮಾನ್ಯ ರುಚಿ vs ಅಬ್ಬರದ ಪ್ರಚಾರ
ಲಕ್ಷಾಂತರ ರೂಪಾಯಿಗೆ ಮಾವಿನಹಣ್ಣುಗಳು ಮಾರಾಟವಾಗುತ್ತಿರುವ ವರದಿಗಳು ವೈರಲ್ ಆದ ನಂತರ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 2024ರಲ್ಲಿ ಪರಿಹಾರ್ ಅವರ ತೋಟಕ್ಕೆ ಭೇಟಿ ನೀಡಿದ್ದರು. ಇಲಾಖೆಯ ಸಹಾಯಕ ನಿರ್ದೇಶಕಿ ನೇಹಾ ಪಟೇಲ್ ಮಾತನಾಡಿ, ಆ ಹಣ್ಣು ನಿಜಕ್ಕೂ ಮಿಯಾಝಾಕಿ ತಳಿಯದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಮ್ಮ ತಂಡಕ್ಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಪರಿಹಾರ್ ತಾವು ಕಳೆದ ಏಳು ವರ್ಷಗಳಿಂದ ಈ ತಳಿಯನ್ನು ಬೆಳೆಯುತ್ತಿರುವುದಾಗಿ ಹೇಳುತ್ತಾರಾದರೂ, ಅಧಿಕಾರಿಗಳ ತಂಡವು ತಪಾಸಣೆಯ ಸಮಯದಲ್ಲಿ ಅವರು ಕೇವಲ ಎರಡು ವರ್ಷಗಳಿಂದ ಮಾತ್ರ ಇದನ್ನು ಬೆಳೆಯುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತು.
"ರೈಲಿನಲ್ಲಿ ಪ್ರಯಾಣಿಸುವಾಗ ಯಾರೋ ಒಬ್ಬರಿಂದ ಈ ತಳಿಯನ್ನು ಪಡೆದುಕೊಂಡಿದ್ದಾಗಿ ನಮಗೆ ತಿಳಿಸಲಾಯಿತು. ಆದರೆ ಆ ಸಸಿಯ ಮೂಲ ಯಾವುದು ಎಂಬುದು ನಮಗೆ ತಿಳಿದಿಲ್ಲ. ಜಬಲ್ಪುರದಲ್ಲಿ ಮಿಯಾಝಾಕಿ ಮಾವಿನಹಣ್ಣುಗಳನ್ನು ಬೆಳೆಯುವ ಕನಿಷ್ಠ ಇನ್ನೊಂದು ತೋಟವೂ ಇದೆ ಎಂಬುದು ತಮಗೆ ಗೊತ್ತು" ಎಂದಿದ್ದಾರೆ ಪಟೇಲ್.
ಪಟೇಲ್ ಅವರ ಪ್ರಕಾರ, ಈ ಹಣ್ಣಿನ ಮೇಲಿನ ಹೆಚ್ಚಿನ ಕ್ರೇಝ್ ಗೆ ಅದರ ಸುತ್ತ ಸೃಷ್ಟಿಯಾಗಿರುವ ಪ್ರಚಾರವೇ ಕಾರಣವಾಗಿದೆ. ಅವರು ಎರಡೂ ತೋಟಗಳ ಮಾವಿನಹಣ್ಣನ್ನು ಸವಿದಿದ್ದು, ಅದರ ರುಚಿ ತೀರಾ "ಸಾಮಾನ್ಯ"ವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ಇದರ ಬಗ್ಗೆ ಒಂದು ರೀತಿಯ ಅತಿಯಾದ ಕಲ್ಪನೆಯನ್ನು ಸೃಷ್ಟಿಸಲಾಗಿದೆ" ಎಂದು ಅವರು ಹೇಳಿದರು.
ಆದರೆ, ಈ ಪ್ರಚಾರವು ಅಂತಿಮವಾಗಿ ಪರಿಹಾರ್ ಅವರಿಗೆ ಖುಷಿ ಸುದ್ದಿಯನ್ನು ಕೊಟ್ಟಿತು. ಆರಂಭದ ವರ್ಷಗಳಲ್ಲಿ ಅವರು ಮಿಯಾಝಾಕಿ ಮಾವಿನಹಣ್ಣುಗಳನ್ನು ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಉಚಿತವಾಗಿ ನೀಡುತ್ತಿದ್ದರು. ನಂತರ, ಅವರು ತಮ್ಮ ಅಂಗಡಿಯ ಕೌಂಟರ್ ನಲ್ಲಿ ಇವುಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದಾಗ, ಈ ಕಡು ಕೆಂಪು ಮಾವಿನಹಣ್ಣುಗಳನ್ನು ನೋಡಲೆಂದೇ ಜನರು ಹಿಂಡುಹಿಂಡಾಗಿ ಬರಲಾರಂಭಿಸಿದರು. ಶೀಘ್ರದಲ್ಲೇ ಶ್ರೀಮಂತ ಮಾವು ಪ್ರೇಮಿಗಳಿಗೂ ಈ ವಿಷಯ ಮುಟ್ಟಿತು.
ಇದರ ಖರೀದಿಗೆ ಸಂಬಂಧಿಸಿದಂತೆ ಮೊದಲ ಕರೆ ಬಂದಿದ್ದು 2022ರಲ್ಲಿ. ಮುಂಬೈ ಮೂಲದ 'ರಾಯ್ ಜ್ಯುವೆಲ್ಲರ್ಸ್' ಸಂಸ್ಥೆಯ ವ್ಯಕ್ತಿಯೊಬ್ಬರು ಮಿಯಾಝಾಕಿ ಮಾವಿನಹಣ್ಣುಗಳನ್ನು ಹುಡುಕುತ್ತಾ ತಮ್ಮ ತೋಟಕ್ಕೆ ಬಂದಿದ್ದರು. ಆ ಗ್ರಾಹಕರು ಇದರ ಬೆಲೆ ಎಷ್ಟು ಎಂದು ಕೇಳಿದ್ದರು.
"ಇದನ್ನು ಯಾವ ಬೆಲೆಗೆ ಮಾರಾಟ ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವರು ಎಷ್ಟು ಬೆಲೆಯನ್ನಾದರೂ ಕೊಡಲು ಸಿದ್ಧರಾಗಿದ್ದರು."
ಆ ವರ್ಷ, ಪರಿಹಾರ್ ಮೊದಲ ಬಾರಿಗೆ ಒಂದು ಕೆಜಿ ಮಿಯಾಝಾಕಿಯನ್ನು 50,000 ರೂಪಾಯಿಗೆ ಮಾರಾಟ ಮಾಡಿದರು. ಒಂದು ಕೆಜಿಯ ಪ್ಯಾಕೇಜ್ ನಲ್ಲಿ ಸಾಮಾನ್ಯವಾಗಿ ಮೂರು ದೊಡ್ಡ ಮಾವಿನಹಣ್ಣುಗಳು ಅಥವಾ ನಾಲ್ಕು ಸಣ್ಣ ಹಣ್ಣುಗಳು ಇರುತ್ತವೆ. ಕೆಲವೊಮ್ಮೆ ಕೇವಲ ಎರಡೇ ಹಣ್ಣುಗಳಿರುತ್ತವೆ. ಆದರೆ ಈ ಬೆಲೆ ಅತ್ಯಂತ ದುಬಾರಿಯಾಗಿದ್ದರೂ ಸಹ, ಮಾರುಕಟ್ಟೆಯಲ್ಲಿ ಹರಡಿರುವ 'ಲಕ್ಷಾಂತರ ರೂಪಾಯಿ' ಎಂಬ ವದಂತಿಗೆ ಇದು ಹತ್ತಿರವೂ ಇರಲಿಲ್ಲ.
►2.5 ಲಕ್ಷ ರೂ. ಬೆಲೆಯ ಹಿಂದಿರುವ ಕಟ್ಟುಕಥೆ
ಈ ಅಬ್ಬರದ ಬೆಲೆಯ ಕಟ್ಟುಕಥೆ ಆರಂಭವಾಗುವುದು ಜಪಾನ್ ನ ಮಿಯಾಝಾಕಿ ಪ್ರಾಂತ್ಯದಿಂದ. ಅಲ್ಲಿ ವಾರ್ಷಿಕವಾಗಿ 1,000 ಟನ್ಗಳಿಗಿಂತ ಹೆಚ್ಚು ಮಾವಿನಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಅಲ್ಲಿನ ರೈತರು ಈ ಹಣ್ಣುಗಳನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸುತ್ತಾರೆ. ಹವಾಮಾನ ನಿಯಂತ್ರಿತ ಗಾಜಿನ ಮನೆಗಳಲ್ಲಿ, ಪ್ರತಿ ಹಣ್ಣಿನ ಎಲ್ಲಾ ಭಾಗಗಳಿಗೂ ನೇರ ಸೂರ್ಯನ ಬೆಳಕು ಬೀಳುವಂತೆ ಮಾಡಲು, ಹಣ್ಣು ಪಕ್ವವಾಗುತ್ತಿದ್ದಂತೆ ಅದನ್ನು ಕೈಯಿಂದಲೇ ತಿರುಗಿಸಿ ಇಡಲಾಗುತ್ತದೆ. ರೈತರು ಮಾವಿನಹಣ್ಣುಗಳನ್ನು ಮರದಲ್ಲೇ ಸಂಪೂರ್ಣವಾಗಿ ಹಣ್ಣಾಗಲು ಬಿಡುತ್ತಾರೆ ಮತ್ತು ಹಣ್ಣುಗಳು ಕೆಳಗೆ ಬಿದ್ದು ಅವುಗಳಿಗೆ ಯಾವುದೇ ಹಾನಿಯಾಗದಂತೆ ತಡೆಯಲು ಮರಗಳ ಕೆಳಗೆ ನೆಟ್ಗಳನ್ನು (ಜಾಲರಿ) ಕಟ್ಟಿರುತ್ತಾರೆ.
ಈ ಅತ್ಯಂತ ಶ್ರಮದಾಯಕ ಪ್ರಕ್ರಿಯೆಯಿಂದಾಗಿ, ಅಲ್ಲಿನ ಅತ್ಯುತ್ತಮ ದರ್ಜೆಯ ಹಣ್ಣುಗಳು ಜಪಾನ್ ನಲ್ಲಿ ನಡೆಯುವ ವಿಶೇಷ ಹರಾಜಿಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ಒಂದು ಜೋಡಿ ಹಣ್ಣುಗಳು (ಅಂದರೆ ಸುಮಾರು ಒಂದು ಕೆಜಿ ತೂಕ) 4,000 ರಿಂದ 5,000 ಡಾಲರ್ಗಳವರೆಗೆ (ಅಂದಾಜು 3.3 ರಿಂದ 4.1 ಲಕ್ಷ ರೂಪಾಯಿ) ಮಾರಾಟವಾಗಬಹುದು. ಈ ಪ್ರೀಮಿಯಂ ಮಿಯಾಝಾಕಿ ಹಣ್ಣುಗಳನ್ನು ಜಪಾನ್ ನಲ್ಲಿ ಮದುವೆ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಲಾಗುತ್ತದೆ.
ಆದರೆ ಭಾರತಕ್ಕೆ ಬರುವಷ್ಟರಲ್ಲಿ, ಈ ವಿಷಯದ ಅರ್ಥವೇ ಬದಲಾಗಿಹೋಯಿತು ಅಥವಾ ಸರಳವಾಗಿ ಹೇಳಬೇಕೆಂದರೆ ಕರೆನ್ಸಿ ಪರಿವರ್ತನೆಯಲ್ಲಿ ಎಡವಟ್ಟಾಯಿತು.
ಸುದ್ದಿ ಮಾಧ್ಯಮಗಳು ಈ ತಳಿಯ ಬಗ್ಗೆ ಬರೆಯಲು ಪ್ರಾರಂಭಿಸಿದಾಗ, ಜಪಾನ್ ನ ಹರಾಜಿನಲ್ಲಿ ಪ್ರೀಮಿಯಂ ಮಿಯಾಝಾಕಿ ಹಣ್ಣುಗಳಿಗೆ ಸಿಕ್ಕ ಭಾರೀ ಬೆಲೆಯನ್ನು ನೇರವಾಗಿ ಭಾರತೀಯ ರೂಪಾಯಿಗೆ ಪರಿವರ್ತಿಸಲಾಯಿತು. ಸುಮಾರು 5,000 ಡಾಲರ್ಗೆ ಮಾರಾಟವಾದ ಒಂದು ಜೋಡಿ ಮಾವಿನಹಣ್ಣಿನ ಮೌಲ್ಯ ರೂಪಾಯಿಯಲ್ಲಿ 4 ಲಕ್ಷಕ್ಕಿಂತ ಹೆಚ್ಚಾಯಿತು. ಇದಾದ ಕೆಲವೇ ದಿನಗಳಲ್ಲಿ, "2.5 ಲಕ್ಷ ರೂಪಾಯಿ" ಬೆಲೆಯ ಮಾವಿನಹಣ್ಣುಗಳು ಭಾರತದ ತೋಟಗಳಲ್ಲೇ ಬೆಳೆಯುತ್ತಿವೆ ಎಂಬ ತಪ್ಪು ಕಲ್ಪನೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿತು.
"ಮಾಧ್ಯಮಗಳು ಸೃಷ್ಟಿಸಿರುವ ಇಂತಹ ಕಥೆಗಳಿಂದಾಗಿ ಮಿಯಾಝಾಕಿ ಪ್ರತಿ ವರ್ಷ ಪ್ರಸಿದ್ಧಿಯಾಗುತ್ತದೆ. ಆದರೆ ಭಾರತದಲ್ಲಿ ಇದು ಅಷ್ಟೊಂದು ದುಬಾರಿಯೇನಲ್ಲ," ಎನ್ನುತ್ತಾರೆ ಗುಜರಾತ್ ನ ಗಿರ್ ನಲ್ಲಿರುವ 'ಅನಿಲ್ ಫಾರ್ಮ್ಸ್' ಮಾಲೀಕ ಸುಮಿತ್ ಸಮಸುದಿನ್ ಝಾರಿಯಾ.
ತಮ್ಮ 12 ಎಕರೆಯ ವಿದೇಶಿ ತಳಿಗಳ ತೋಟದಲ್ಲಿ, ಇವರ ಕುಟುಂಬವು ಜಪಾನಿನ ಈ ತಳಿಯನ್ನು ಮುಖ್ಯವಾಗಿ ಸ್ಥಳೀಯವಾಗಿ ಇರುವ ಕೆಲವು ವಿಶೇಷ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮಾತ್ರ ಬೆಳೆಯುತ್ತದೆ.
"ಭಾರತದಲ್ಲಿ ಜಪಾನ್ ನ ಆ ಭಾರೀ ಬೆಲೆಗೆ ಮಾವಿನಹಣ್ಣನ್ನು ಯಾರು ಖರೀದಿಸುತ್ತಾರೆ? ನಮ್ಮದೇ ದೇಶದ ತಳಿಗಳು ರುಚಿಯಲ್ಲಿ ಇದಕ್ಕಿಂತ ಎಷ್ಟೋ ಉತ್ತಮವಾಗಿವೆ" ಎನ್ನುತ್ತಾರೆ ಝಾರಿಯಾ.
ಭಾರತದಲ್ಲಿ ಮಿಯಾಝಾಕಿ ಮಾವಿನಹಣ್ಣುಗಳ ಪೋಸ್ಟರ್ ಬಾಯ್ ಆಗಿರುವ ಪರಿಹಾರ್ ಕೂಡ ತಮ್ಮ ಹಣ್ಣುಗಳನ್ನು ಎಂದಿಗೂ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಿಲ್ಲ. ಆರಂಭದಲ್ಲಿದ್ದ ಅತಿಯಾದ ಕ್ರೇಝ್ ಕಡಿಮೆಯಾದ ನಂತರ, ಇದರ ಬೆಲೆಗಳು ಕುಸಿದಿವೆ. 2023ರಲ್ಲಿ ಪರಿಹಾರ್ ಒಂದು ಕೆಜಿ ಮಿಯಾಝಾಕಿಯನ್ನು 30,000 ರೂಪಾಯಿಗೆ ಮಾರಾಟ ಮಾಡಿದ್ದರು. ಈಗ ಅವರು ಇದನ್ನು ಕೆಜಿಗೆ 15,000 ರೂಪಾಯಿಯಂತೆ ಮಾರುತ್ತಿದ್ದಾರೆ.
ಹಾಗಿದ್ದರೂ, ಇದು ಬಹುತೇಕ ಭಾರತೀಯ ತಳಿಗಳಿಗಿಂತ ಅತ್ಯಂತ ದುಬಾರಿಯಾಗಿದೆ. ಸಾಮಾನ್ಯ ಮಾರುಕಟ್ಟೆಗಳಲ್ಲಿ ಇದು ಎಲ್ಲೂ ಕಾಣಸಿಗದೇ ಇರುವುದೇ ಇದರ ಪ್ರಮುಖ ಆಕರ್ಷಣೆಯಾಗಿದೆ. "ನನಗೆ ಬಾಲಿವುಡ್ನಿಂದ ಮತ್ತು ದೊಡ್ಡ ಉದ್ಯಮಿಗಳಿಂದ ಮಿಯಾಝಾಕಿ ಹಣ್ಣುಗಳಿಗಾಗಿ ಆರ್ಡರ್ಗಳು ಬರುತ್ತವೆ" ಅಂತಾರೆ ಪರಿಹಾರ್. ಅವರ ತೋಟದಲ್ಲಿರುವ ಮತ್ತೊಂದು ವಿದೇಶಿ ತಳಿಯಾದ, ಬೃಹತ್ ಗಾತ್ರದ ‘4 ಕೆಜಿ ಮಾವು’ ಕೆಜಿಗೆ 4,000 ರೂಪಾಯಿಗೆ ಮಾರಾಟವಾಗುತ್ತದೆ.
ಜಪಾನಿನ ಸರಳತೆಯ ಶೈಲಿಯನ್ನು ಅನುಕರಿಸುವ ಕೆಲವು ಗ್ರಾಹಕರು, ಸಾಂಪ್ರದಾಯಿಕ ಐಷಾರಾಮಿ ದೀಪಾವಳಿ ಗಿಫ್ಟ್ ಬಾಕ್ಸ್ಗಳ ಬದಲಾಗಿ, ಕೇವಲ ಎರಡು ಅಥವಾ ಮೂರು ಮಿಯಾಝಾಕಿ ಮಾವಿನಹಣ್ಣುಗಳನ್ನು ಒಂದು ಸುಂದರವಾದ ಬಾಕ್ಸ್ನಲ್ಲಿ ಇಟ್ಟು ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ.
"ಜಪಾನಿಯರಂತೆಯೇ ನಮ್ಮ ಜನರೂ ಇದನ್ನು ಉಡುಗೊರೆ ನೀಡಲು ಖರೀದಿಸುತ್ತಾರೆ. ಇವು ಶ್ರೀಮಂತರು ನೀಡುವ ಐಷಾರಾಮಿ ಉಡುಗೊರೆಗಳು" ಎಂದು ಪರಿಹಾರ್ ಹೇಳಿದ್ದಾರೆ.
►ಹೊರಗಿನ ಅಂದಕ್ಕೆ ಮಾರುಹೋದ ಮಾವು ಪ್ರೀತಿ
ಕಳೆದ ಕೆಲವು ವರ್ಷಗಳಲ್ಲಿ, ಕರ್ನಾಟಕದಿಂದ ಹಿಡಿದು ಬಿಹಾರ್ ಮತ್ತು ಒಡಿಶಾದವರೆಗೆ ಭಾರತದಾದ್ಯಂತ ಕೆಲವೇ ಕೆಲವು ರೈತರು ಮಿಯಾಝಾಕಿ ಬೆಳೆಯಲು ಪ್ರಾರಂಭಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ವಿಶಾಖಪಟ್ಟಣಂ ಮಾವು ಮೇಳದಲ್ಲಿ ಸ್ಥಳೀಯವಾಗಿ ಕಸಿ ಮಾಡಿದ ಮಿಯಾಝಾಕಿ ಮಾವಿನಹಣ್ಣುಗಳು ಕೆಜಿಗೆ ಕೇವಲ 999 ರೂಪಾಯಿಯಷ್ಟು ಕಡಿಮೆ ಬೆಲೆಗೆ ಮಾರಾಟವಾದರೆ, ಈ ತಿಂಗಳು ಬೆಂಗಳೂರಿನಲ್ಲಿ ನಡೆದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳದಲ್ಲಿ ಒಂದಕ್ಕೆ 2,000 ರೂಪಾಯಿ ಬೆಲೆ ಇತ್ತು.
"ರೈತರು ಇದರಲ್ಲಿ ಲಾಭವನ್ನು ಕಾಣುತ್ತಿದ್ದಾರೆ. ಅವರು ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ತೆಗೆಯಲು ಸಾಧ್ಯವಾದರೆ ಅದು ಅವರಿಗೆ ಲಾಭದಾಯಕವಾಗಲಿದೆ, ಏಕೆಂದರೆ ಈ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ" ಎಂದು ಪಟೇಲ್ ಹೇಳಿದರು.
ಇನ್ಸ್ರಾಮ್ ಅಲಿ ಅವರ ಪ್ರಕಾರ, ಭಾರತೀಯ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಹಣ್ಣಿನ ಹೊರಗಿನ ಅಂದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಭಾರತದಲ್ಲೇ ಬೆಳೆಯಲಾಗುವ 'ಹುಸ್ನಾರಾ' ಮತ್ತು 'ಟಾಮಿ ಅಟ್ಕಿನ್ಸ್' ನಂತಹ ಆಕರ್ಷಕ ಬಣ್ಣದ ತಳಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
"ಜನರು ಬಣ್ಣಬಣ್ಣದ ಮಾವಿನಹಣ್ಣುಗಳಿಗೆ ಹೆಚ್ಚು ಮಾರುಹೋಗುತ್ತಿದ್ದಾರೆ. ದಸೇರಿ ಮತ್ತು ಚೌಸಾದಂತಹ ಸಾಂಪ್ರದಾಯಿಕ ಭಾರತೀಯ ತಳಿಗಳು ರುಚಿಯಲ್ಲಿ ಅತ್ಯುತ್ತಮವಾಗಿವೆ. ಆದರೆ ಪ್ರಸ್ತುತ ಮಾರುಕಟ್ಟೆಯು ಹಣ್ಣು ನೋಡಲು ಎಷ್ಟು ಆಕರ್ಷಕವಾಗಿದೆ ಎಂಬುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ" ಅಂತಾರೆ ಅಲಿ.
ತಮ್ಮ ತೋಟದಲ್ಲಿ 100 ಮಿಯಾಝಾಕಿ ಮರಗಳನ್ನು ನೆಟ್ಟಿದ್ದು, ಇನ್ನು ಎರಡು ವರ್ಷಗಳಲ್ಲಿ ಅವು ಫಸಲು ನೀಡುವ ನಿರೀಕ್ಷೆಯಲ್ಲಿರುವ ಝಾರಿಯಾ ಅವರು, ಬೆಲೆ ಸರಿಯಾಗಿದ್ದರೆ ಉತ್ಪಾದನೆ ಮತ್ತು ಬೇಡಿಕೆ ಎರಡೂ ಉತ್ತಮ ಮಟ್ಟ ತಲುಪಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಗುಜರಾತ್ನ ಪ್ರೀಮಿಯಂ ಮಾವಾದ 'ಕೇಸರ್'ಗಿಂತ ಕೆಲವು ಸಾವಿರ ರೂಪಾಯಿ ಹೆಚ್ಚು ಬೆಲೆಗೆ ನಾವು ಮಿಯಾಝಾಕಿಯನ್ನು ಮಾರಾಟ ಮಾಡಲು ಯಶಸ್ವಿಯಾದರೆ, ಜಪಾನಿನ ಈ ಮಾವು ಭಾರತದಲ್ಲಿ ಸೂಪರ್ ಹಿಟ್ ಆಗಲಿದೆ" ಎಂದು ಅವರು ಹೇಳಿದರು.
ಹೆಚ್ಚಿನ ತೋಟಗಳಲ್ಲಿ ಮಿಯಾಝಾಕಿ ಮಾವಿನಹಣ್ಣುಗಳನ್ನು ಬೆಳೆಯಲಾರಂಭಿಸಿದಂತೆ ಅದರ ವಿಶಿಷ್ಟತೆ ಅಥವಾ ಅಪರೂಪದ ಗುಣ ಮರೆಯಾಗಬಹುದು. ಆದರೆ ಇದು ಕೆಟ್ಟ ವಿಷಯವೇನಲ್ಲ.
"ಈಗಾಗಲೇ ಹಲವು ತೋಟಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಿಯಾಝಾಕಿ ಬೆಲೆಗಳು ಕುಸಿಯಲಿವೆ. ಇದು ಎಲ್ಲರಿಗೂ ಸುಲಭವಾಗಿ ಸಿಗುವಂತಾಗುತ್ತದೆ. ಆಗ ಶ್ರೀಮಂತರ ಈ ಹಣ್ಣು ಪ್ರತಿಯೊಬ್ಬ ಭಾರತೀಯನ ಕೈಯಲ್ಲೂ ಇರಲಿದೆ" ಎಂದು ಹೇಳುತ್ತಾರೆ ಪರಿಹಾರ್.
ಸೌಜನ್ಯ:theprint.in






